ಗುರುವಾರ , ಏಪ್ರಿಲ್ 2, 2020
19 °C
ಅಧ್ಯಕ್ಷರ ಭೇಟಿ: ಅಮೆರಿಕ ಚುನಾವಣೆಯ ಹಿನ್ನೆಲೆ ಭಾರತಕ್ಕೆ ದೊಡ್ಡ ಲಾಭ ಆಗುವ ಸಾಧ್ಯತೆ ಕಡಿಮೆ

Explainer | ನಮಸ್ತೆ ಟ್ರಂಪ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

prajavani

ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಭೇಟಿಯು ಭಾರತ– ಅಮೆರಿಕ ಸಂಬಂಧದಲ್ಲಿ ಹೊಸ ಶಕೆಯನ್ನು ಆರಂಭಿಸಲಿದೆ ಎಂದು ಬಣ್ಣಿಸಲಾಗುತ್ತಿದೆ. ಟ್ರಂಪ್‌ ಭೇಟಿಯ ಸಂದರ್ಭದಲ್ಲಿ ಕೆಲವು ವ್ಯಾಪಾರ ಒಪ್ಪಂದಗಳು ನಡೆಯಲಿವೆ ಎಂಬ ‘ವಿಶ್ವಾಸ’ವನ್ನು ಎರಡೂ ರಾಷ್ಟ್ರಗಳ ಮಾಧ್ಯಮಗಳು ವ್ಯಕ್ತಪಡಿಸಿದ್ದರೂ, ನಾಯಕರ ಇತ್ತೀಚಿನ ಹೇಳಿಕೆಗಳು ಈ ವಿಶ್ವಾಸವನ್ನು ಪುಷ್ಟೀಕರಿಸುತ್ತಿಲ್ಲ. ಅಮೆರಿಕದಿಂದ ದಿನಕ್ಕೊಂದರಂತೆ ಬರುತ್ತಿರುವ ಹೇಳಿಕೆಗಳು, ಈ ಭೇಟಿಯ ಹಿಂದಿನ ಉದ್ದೇಶ ಅಮೆರಿಕದ ಚುನಾವಣೆಗೆ ಸೀಮಿತವಾಗಬಹುದೇ ಎಂಬ ಸಂದೇಹ ಮೂಡುವಂತೆ ಮಾಡಿವೆ.

ಸ್ವಾತಂತ್ರ್ಯಾನಂತರದಲ್ಲಿ ಭಾರತವು ರಷ್ಯಾದ ಕಡೆಗೆ ವಾಲಿ ನಿಂತಿದ್ದೇ ಹೆಚ್ಚು. ಕೇಂದ್ರದಲ್ಲಿ ಅಟಲ್‌ಬಿಹಾರಿ ವಾಜಪೇಯಿ ನೇತೃತ್ವದ ಸರ್ಕಾರ ರಚನೆಯಾದಾಗ ಭಾರತವು ಅಮೆರಿಕದ ಕಡೆಗೆ ದೃಷ್ಟಿ ಹರಿಸಲು ಆರಂಭಿಸಿತು. ಆದರೂ ಉಭಯ ರಾಷ್ಟ್ರಗಳ ಮಧ್ಯೆ ನಿರೀಕ್ಷಿತ ಮಟ್ಟದಲ್ಲಿ ವಿಶ್ವಾಸ ವೃದ್ಧಿಯಾಗಲಿಲ್ಲ. 2014ರಲ್ಲಿ ನರೇಂದ್ರ ಮೋದಿ ಅವರು ಪ್ರಧಾನಿಯಾದ ಬಳಿಕ ‘ಮೇಕ್‌ ಇನ್‌ ಇಂಡಿಯಾ’ ಘೋಷಣೆ ಮಾಡಿದರು. ಅತ್ತ ಅಮೆರಿಕದಲ್ಲಿ ಅಧ್ಯಕ್ಷ ಸ್ಥಾನಕ್ಕೇರಿದ ಟ್ರಂಪ್‌, ‘ಅಮೆರಿಕ ಮೊದಲು’ ಎಂಬ ಘೋಷಣೆ ಕೂಗಿದರು. ಈ ನೀತಿಗಳು ಉಭಯ ರಾಷ್ಟ್ರಗಳ ನಡುವಿನ ವಾಣಿಜ್ಯ ಸಂಬಂಧವನ್ನು ಇನ್ನಷ್ಟು ಹದಗೆಡಿಸಿದವು.

ಟ್ರಂಪ್‌ ಭೇಟಿಯು ಎರಡು ರಾಷ್ಟ್ರಗಳನ್ನು ಇನ್ನಷ್ಟು ಹತ್ತಿರಕ್ಕೆ ತರಬಹುದೆಂದು ನಿರೀಕ್ಷಿಸಲಾಗಿತ್ತು. ಆದರೆ, ಭಾರತ ಭೇಟಿಗೆ ಇನ್ನೆರಡು ದಿನಗಳಷ್ಟೇ ಉಳಿದಿರುವಾಗ ಟ್ರಂಪ್‌ ಅವರು, ‘ವ್ಯಾಪಾರ ವಿಚಾರದಲ್ಲಿ ಭಾರತವು ನಮಗೆ ಭಾರಿ ಹೊಡೆತ ನೀಡುತ್ತಿದೆ. ಜಗತ್ತಿನ ಯಾವ ರಾಷ್ಟ್ರವೂ ವಿಧಿಸದಷ್ಟು ದುಬಾರಿ ಸುಂಕವನ್ನು ಅವರು ನಮ್ಮ ಉತ್ಪನ್ನಗಳ ಮೇಲೆ ವಿಧಿಸುತ್ತಿದ್ದಾರೆ’ ಎಂದಿದ್ದಾರೆ. 2018ರಲ್ಲಿ ಭಾರತ– ಅಮೆರಿಕ ವ್ಯಾಪಾರವು ₹1.45 ಲಕ್ಷ ಕೋಟಿಗೆ ತಲುಪಿತ್ತು. ಅಮೆರಿಕವು ₹2,500 ಕೋಟಿ ವ್ಯಾಪಾರ ಕೊರತೆಯನ್ನು ಅನುಭವಿಸಿತ್ತು. ಈ ಕಾರಣಕ್ಕೇ ‘ಭಾರತದ ಜತೆಗೆ ಒಪ್ಪಂದಕ್ಕೆ ಇನ್ನಷ್ಟು ಕಾಲ ಕಾಯಬೇಕಾದೀತು’ ಎಂದು ಟ್ರಂಪ್‌ ಹೇಳಿದ್ದಾರೆ ಎಂದು ವಿಶ್ಲೇಷಿಸಲಾಗಿದೆ. 

‘ದ್ವಿಪಕ್ಷೀಯ ಸಂಬಂಧ ವೃದ್ಧಿಗೆ ಸಂಬಂಧಿಸಿದ ವಿಚಾರಗಳು ತುಂಬ ಸೂಕ್ಷ್ಮವಾದವು ಮತ್ತು ಲಕ್ಷಾಂತರ ಜನರ ಬದುಕಿನ ಮೇಲೆ ಪ್ರಭಾವ ಬೀರುವಂಥವು. ಆದ್ದರಿಂದ ನಾವು ಧಾವಂತದಲ್ಲಿ ಯಾವುದೇ ಒಪ್ಪಂದ ಮಾಡಿಕೊಳ್ಳಲು ಇಚ್ಛಿಸುವುದಿಲ್ಲ’ ಎಂದು ಭಾರತವೂ ಹೇಳಿದೆ.

ಸಿಎಎ ವಿರುದ್ಧ ಭಾರತದಲ್ಲಿ ನಡೆಯುತ್ತಿರುವ ಹೋರಾಟಗಳನ್ನು ಉಲ್ಲೇಖಿಸಿದ ಟ್ರಂಪ್‌, ಮೋದಿ ಜತೆಗಿನ ಮಾತುಕತೆ ಹಾಗೂ ಸಾರ್ವಜನಿಕ ಸಭೆಯಲ್ಲಿ ‘ಧಾರ್ಮಿಕ ಸ್ವಾತಂತ್ರ್ಯ’ದ ವಿಚಾರವನ್ನು ಪ್ರಸ್ತಾಪಿಸುವುದಾಗಿ ಹೇಳಿದ್ದಾರೆ. ಅವರು ಈ ರೀತಿ ಮಾತನಾಡಿದರೆ, ಭಾರತ ಸರ್ಕಾರಕ್ಕೆ ಅದು ಇಷ್ಟವಾಗಲಿಕ್ಕಿಲ್ಲ.

ಹತ್ತಿರ ತಂದ ‘ಚೀನಾ’

ಏಷ್ಯಾದ ರಾಷ್ಟ್ರಗಳ ಮೇಲೆ ತನ್ನ ಪ್ರಭಾವವನ್ನು ಹೆಚ್ಚಿಸಲು ಅಮೆರಿಕವು ದಶಕಗಳಿಂದ ಯೋಜನೆಗಳನ್ನು ರೂಪಿಸುತ್ತಿದೆ. ಆದರೆ, ಇಲ್ಲಿ ಚೀನಾದ ಪ್ರಭಾವ ಹೆಚ್ಚುತ್ತಿರುವುದು ಅಮೆರಿಕಕ್ಕೆ ನುಂಗಲಾರದ ತುತ್ತಾಗಿದೆ. ‘ಅಮೆರಿಕಕ್ಕೆ ಪ್ರತಿಸ್ಪರ್ಧಿ ರಾಷ್ಟ್ರವಾಗಿ ಚೀನಾ ರೂಪುಗೊಳ್ಳುತ್ತಿರುವುದು ಟ್ರಂಪ್‌ ಆಡಳಿತದ ಚಿಂತೆಗೆ ಕಾರಣವಾಗಿದೆ. ಆ ಕಾರಣಕ್ಕೆ ಭಾರತಕ್ಕೆ ಅಮೆರಿಕ ಹೆಚ್ಚಿನ ಪ್ರಾಶಸ್ತ್ಯ ನೀಡುತ್ತಿದೆ’ ಎಂದು ವಿಶ್ಲೇಷಿಸಲಾಗುತ್ತಿದೆ.

ಭಾರತದ ರಷ್ಯಾ ನೀತಿಯಲ್ಲಿ ಈಚಿನ ದಶಕಗಳಲ್ಲಿ ಆಗಿರುವ ಬದಲಾವಣೆಯು ಅಮೆರಿಕದ ಉದ್ದೇಶ ಈಡೇರಿಕೆಗೆ ಪೂರಕವಾಗಿ ಕೆಲಸ ಮಾಡುತ್ತಿದೆ. ಭಾರತದ ಬಗ್ಗೆ ಅಮೆರಿಕಕ್ಕೆ ಅಸಮಾಧಾನಗಳು ಇದ್ದರೂ, ಪ್ರಜಾಪ್ರಭುತ್ವ ರಾಷ್ಟ್ರವಾದ ಭಾರತದ ಏಳಿಗೆಯು ಸರ್ವಾಧಿಕಾರಿ ರಾಷ್ಟ್ರವಾದ ಚೀನಾದ ಅಭಿವೃದ್ಧಿಯಷ್ಟು ಅಪಾಯಕಾರಿ ಅಲ್ಲ ಎಂಬ ವಿಚಾರವು ಭಾರತದತ್ತ ಸ್ನೇಹ ಹಸ್ತ ಚಾಚುವಂತೆ ಮಾಡಿದೆ.

ಚೀನಾದ ವಿಸ್ತರಣಾ ವಾದವು ಭಾರತಕ್ಕೂ ಆತಂಕದ ವಿಚಾರ. ಮಧ್ಯಏಷ್ಯಾದ ರಾಷ್ಟ್ರಗಳ ಜತೆ ಸತತವಾಗಿ ಸಂಪರ್ಕ ಸಾಧಿಸಿ ಚೀನಾದ ವಿಸ್ತರಣಾ ವಾದವನ್ನು ನಿಯಂತ್ರಿಸುವ ಯೋಜನೆಯನ್ನು ಭಾರತ ಮತ್ತು ಅಮೆರಿಕ ಕಾರ್ಯಗತಗೊಳಿಸಿವೆ.

ರಷ್ಯಾವನ್ನೂ ನಿಯಂತ್ರಿಸಬೇಕು ಎಂದು ಅಮೆರಿಕ ಬಯಸಿದೆ. ಆದರೆ ರಷ್ಯಾದ ಜತೆಗಿನ ಸಂಬಂಧವನ್ನು ಕೆಡಿಸಿಕೊಳ್ಳಲು ಭಾರತಕ್ಕೆ ಇಷ್ಟವಿಲ್ಲ. ಅದಕ್ಕಾಗಿ ಎಚ್ಚರಿಕೆಯ ನೀತಿಯನ್ನು ಭಾರತದ ರೂಪಿಸಿದೆ. ಇದನ್ನು ಅಮೆರಿಕವೂ ಒಪ್ಪಿಕೊಂಡಿದೆ. ಒಂದರ್ಥದಲ್ಲಿ ಚೀನಾವನ್ನು ನಿಯಂತ್ರಿಸಬೇಕೆಂಬ ಅಮೆರಿಕದ ಬಯಕೆಯು ಭಾರತಕ್ಕೆ ಲಾಭದಾಯಕವಾಗಿ ಪರಿಣಮಿಸುತ್ತಿದೆ.

‘ಹೌಡಿ ಮೋದಿ’ ಮತ್ತು ‘ನಮಸ್ತೆ ಟ್ರಂಪ್’

ಕಳೆದ ಸೆಪ್ಟೆಂಬರ್ 28ರಂದು ಅಮೆರಿಕದ ಹ್ಯೂಸ್ಟನ್‌ದಲ್ಲಿ ನಡೆದ ‘ಹೌಡಿ ಮೋದಿ’ ಕಾರ್ಯಕ್ರಮಕ್ಕೂ, ಈಗ ಅಹಮದಾಬಾದ್‌ನಲ್ಲಿ ಆಯೋಜನೆಗೊಂಡಿರುವ ‘ನಮಸ್ತೆ ಟ್ರಂಪ್’ ಕಾರ್ಯಕ್ರಮಕ್ಕೂ ಹೋಲಿಕೆ ಮಾಡಲಾಗುತ್ತಿದೆ. ಅಂದು ಪ್ರಧಾನಿ ನರೇಂದ್ರ ಮೋದಿ ಅವರನ್ನು ಟೆಕ್ಸಾಸ್‌ ಭಾಷೆಯಲ್ಲಿ ‘ಹೇಗಿದ್ದೀರಿ ಮೋದಿ?’ (ಹೌಡಿ ಮೋದಿ) ಎಂದು ಕರೆಯಲಾಗಿತ್ತು. ಟ್ರಂಪ್ ಆ ಕಾರ್ಯಕ್ರಮದ ಆಕರ್ಷಣೆಯಾಗಿದ್ದರು. ಇಬ್ಬರೂ ನಾಯಕರು ವಿಜಯದ ಸಂಕೇತ ತೋರಿಸುತ್ತಾ 50 ಸಾವಿರ ಜನರು ಸೇರಿದ್ದ ಸ್ಟೇಡಿಯಂನಲ್ಲಿ ಕೈಹಿಡಿದು ಓಡಾಡಿದ್ದರು. ಈಗ ಮೊಟೆರಾ ಕ್ರೀಡಾಂಗಣದ ಲಕ್ಷ ಜನರ ಎದುರು ಮೋದಿ–ಟ್ರಂಪ್ ಮತ್ತೆ ಜೊತೆಯಾಗುತ್ತಿದ್ದಾರೆ. ಈ ಕಾರ್ಯಕ್ರಮಕ್ಕೆ ‘ನಮಸ್ತೆ ಟ್ರಂಪ್’ ಎಂದು ಹೆಸರಿಡಲಾಗಿದೆ. ಮುಂಬರುವ ಅಮೆರಿಕ ಅಧ್ಯಕ್ಷೀಯ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡೇ ಹೌಡಿ ಮೋದಿ ಮತ್ತು ನಮಸ್ತೆ ಟ್ರಂಪ್ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದು ವಿಶ್ಲೇಷಿಸಲಾಗುತ್ತಿದೆ. ಟ್ರಂಪ್ ಅವರು ಎರಡನೇ ಬಾರಿ ಆಯ್ಕೆಯಾಗಲು ಅಮೆರಿಕದಲ್ಲಿರುವ ಭಾರತ ಮೂಲದ ಮತದಾರರು ಅವರ ಪರ ಮತ ಹಾಕುವುದು ಅಗತ್ಯ. ಅವರನ್ನು ಸೆಳೆಯುವುದಕ್ಕಾಗಿಯೇ ಭಾರತದಲ್ಲಿ ಬೃಹತ್ ಸಾರ್ವಜನಿಕ ಸಭೆ ಆಯೋಜಿಸಲಾಗಿದೆ ಎನ್ನಲಾಗುತ್ತಿದೆ.

ಒಂದಿಷ್ಟು ವಾದ–ವಿವಾದ

* ಟ್ರಂಪ್ ಪತ್ನಿ ಮಲೇನಿಯಾ ಅವರು ದೆಹಲಿಯ ಶಾಲೆಯೊಂದಕ್ಕೆ ಭೇಟಿ ನೀಡುವ ಕಾರ್ಯಕ್ರಮಕ್ಕೆ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಹಾಗೂ ಶಿಕ್ಷಣ ಸಚಿವ ಮನೀಶ್ ಸಿಸೋಡಿಯಾ ಅವರಿಗೆ ಆಹ್ವಾನ ನೀಡಿಲ್ಲ ಎಂದು ಎಎಪಿ ಆರೋಪಿಸಿದೆ

* ಅಹಮದಾಬಾದ್‌ನಲ್ಲಿ ಟ್ರಂಪ್ ಅವರು ಸಂಚರಿಸುವ ಮಾರ್ಗದಲ್ಲಿರುವ ಕೊಳೆಗೇರಿಗಳಿಗೆ ಅಡ್ಡಲಾಗಿ ಬೃಹತ್ ಗೋಡೆ ನಿರ್ಮಿಸಿ, ಅಂದಗೊಳಿಸಲಾಗಿದೆ. ಈ ನಡೆ ಕೊಳೆಗೇರಿ ನಿವಾಸಿಗಳಲ್ಲಿ ಸಿಟ್ಟು ತರಿಸಿದೆ

* ರಾಷ್ಟ್ರಪತಿ ಭವನದಲ್ಲಿ ಆಯೋಜನೆಯಾಗಿರುವ ಅಧಿಕೃತ ಔತಣಕೂಟಕ್ಕೆ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಅವರಿಗೆ ಆಹ್ವಾನ ನೀಡಿಲ್ಲ ಎಂದು ಪಕ್ಷ ಆರೋಪಿಸಿದೆ. ಟ್ರಂಪ್ ಜತೆ ಪ್ರತಿಪಕ್ಷಗಳ ನಿಯೋಗದ ಭೇಟಿ ಕಾರ್ಯಕ್ರಮವೂ ಇಲ್ಲ

* ‘ಅಹಮದಾಬಾದ್‌ ವಿಮಾನ ನಿಲ್ದಾಣದಿಂದ ಮೊಟೆರಾ ಸ್ಟೇಡಿಯಂವರೆಗಿನ ಮಾರ್ಗದಲ್ಲಿ 50ರಿಂದ 70 ಲಕ್ಷ ಜನರು ಸೇರಲಿದ್ದಾರೆ ಎಂದು ಮೋದಿ ನನಗೆ ಹೇಳಿದ್ದರು’ ಎಂದು ಟ್ರಂಪ್ ಆರಂಭದಲ್ಲಿ ಹೇಳಿದ್ದರು. ಇತ್ತೀಚೆಗೆ ಅವರು ಈ ಸಂಖ್ಯೆಯನ್ನು 1 ಕೋಟಿಗೆ ಏರಿಸಿದ್ದರು. ಮುಖ್ಯ ಕಾರ್ಯಕ್ರಮ ನಡೆಯುವ ಮೊಟೆರಾ ಕ್ರೀಡಾಂಗಣದ ಸಾಮರ್ಥ್ಯ 1.10 ಲಕ್ಷ ಜನ ಮಾತ್ರ

* ‘ನಮಸ್ತೆ ಟ್ರಂಪ್’ ಕಾರ್ಯಕ್ರಮವನ್ನು ಪರಿಚಿತವಲ್ಲದ ‘ಡೊನಾಲ್ಡ್ ಟ್ರಂಪ್ ನಾಗರಿಕ ಅಭಿನಂದನ ಸಮಿತಿ’ ಆಯೋಜಿಸಿದೆ. ಸಮಿತಿ ಮೂಲಕ ಸುಮಾರು ₹100 ಕೋಟಿ ಖರ್ಚು ಮಾಡಲು ಹೊರಟಿರುವ ಸರ್ಕಾರದ ನಿರ್ಧಾರವನ್ನು ಕಾಂಗ್ರೆಸ್ ಪ್ರಶ್ನಿಸಿದೆ

ಅಮೆರಿಕದ ಆಕ್ಷೇಪವೇನು

* ಭಾರತವು ಸಂರಕ್ಷಣಾ ನೀತಿ ಅನುಸರಿಸುತ್ತಿದೆ, ಭಾರತದ ಆಮದು ಸುಂಕವು ವಿಪರೀತವಾಗಿದೆ.

* ಅಮೆರಿಕದಿಂದ ಆಮದಾಗುವ ಕೆಲವು ವಸ್ತುಗಳ ಮೇಲಿನ ಸುಂಕವನ್ನು ಭಾರತ ಇತ್ತೀಚೆಗಷ್ಟೇ ಹೆಚ್ಚಿಸಿತ್ತು. ಶೂ, ಮಕ್ಕಳ ತ್ರಿಚಕ್ರ ಸೈಕಲ್‌, ಪೀಠೋ‍ಪಕರಣಗಳ ಮೇಲಿನ ಆಮದು ಸುಂಕವನ್ನು ಕಳೆದ ಬಜೆಟ್‌ನಲ್ಲಿ ಹೆಚ್ಚಿಸಿದ್ದು ಅಮೆರಿಕಕ್ಕೆ ಅಸಮಾಧಾನ ತಂದಿದೆ

* ಭಾರತದ ಬಳಕೆದಾರರನ್ನು ಕುರಿತ ದತ್ತಾಂಶಗಳನ್ನು ಭಾರತದಲ್ಲೇ ಸಂಗ್ರಹಿಸಿಡಬೇಕು ಎಂಬ ಭಾರತದ ನೀತಿಯಿಂದಾಗಿ ಇ–ಕಾಮರ್ಸ್‌ ಕ್ಷೇತ್ರದ ಅಮೆಜಾನ್‌, ವಾಲ್‌ಮಾರ್ಟ್‌ನಂಥ ದಿಗ್ಗಜ ಸಂಸ್ಥೆಗಳಿಗೆ ತೊಂದರೆಯಾಗಿದೆ

ಅಮೆರಿಕದ ತಿರುಗೇಟು

* ಸುಂಕ ಹೆಚ್ಚಿಸಿದ ಭಾರತದ ಕ್ರಮಕ್ಕೆ ಅಮೆರಿಕವೂ ಪ್ರತೀಕಾರದ ಕ್ರಮ ಕೈಗೊಂಡಿದೆ. ಭಾರತ ಮತ್ತು ಇತರ ರಾಷ್ಟ್ರಗಳಿಂದ ಅಮೆರಿಕವು ಆಮದು ಮಾಡಿಕೊಳ್ಳುತ್ತಿದ್ದ ಉಕ್ಕು ಹಾಗೂ ಅಲ್ಯುಮಿನಿಯಂ ಉತ್ಪನ್ನಗಳ ಮೇಲೆ ಸುಂಕ ಹೇರಿತು. ಭಾರತವು ವಿಶ್ವದ ಮೂರನೇ ಅತಿ ದೊಡ್ಡ ಉಕ್ಕು ತಯಾರಿಕಾ ರಾಷ್ಟ್ರವಾಗಿದೆ. ಅಮೆರಿಕದ ತೀರ್ಮಾನದಿಂದ ಭಾರತದ ಉಕ್ಕು ರಫ್ತು ಪ್ರಮಾಣ ಶೇ 46ರಷ್ಟು ಕುಸಿದಿತ್ತು.

* ಆದ್ಯತಾ ಕಾರ್ಯಕ್ರಮಗಳಡಿ ಭಾರತಕ್ಕೆ ನೀಡಿದ್ದ ಸುಮಾರು ₹ 600 ಕೋಟಿ ಮೌಲ್ಯದ ಉತ್ಪನ್ನಗಳನ್ನು ಸುಂಕರಹಿತವಾಗಿ ರಫ್ತು ಮಾಡುವ ಹಳೆಯ ವ್ಯವಸ್ಥೆಯನ್ನು ಅಮೆರಿಕವು ಕಳೆದ ವರ್ಷ ರದ್ದು ಮಾಡಿತ್ತು

ನಿರೀಕ್ಷೆ ಏನು?

* ಚೀನಾದ ಮೇಲಿನ ಅಪನಂಬಿಕೆಯ ಕಾರಣಕ್ಕೆ ಅಮೆರಿಕವು ಭಾರತದ ಜತೆ ರಕ್ಷಣೆ ಮತ್ತು ಇತರ ಕ್ಷೇತ್ರಗಳಿಗೆ ಸಂಬಂಧಿಸಿದ ಕೆಲವು ಒಪ್ಪಂದಗಳನ್ನು ಮಾಡಬಹುದು. ಆರು ಪರಮಾಣು ರಿಯಾಕ್ಟರ್‌ಗಳ ಪೂರೈಕೆ ಒಪ್ಪಂದವೂ ಆಗಬಹುದು.

* ದೊಡ್ಡ ವಾಣಿಜ್ಯ ಒಪ್ಪಂದಗಳನ್ನು ಮಾಡುವ ಬದಲು, ಕೆಲವು ಸಣ್ಣಪುಟ್ಟ ಒಪ್ಪಂದಗಳನ್ನು ಮಾಡಿಕೊಳ್ಳಬಹುದು

* ಹಾರ್ಲೆ ಡೇವಿಡ್ಸನ್‌ನಂಥ ವಿಲಾಸಿ ಬೈಕ್‌ಗಳು ಮತ್ತು ಕೆಲವು ಕೃಷಿ ಉತ್ಪನ್ನಗಳ ರಫ್ತಿನ ಮೇಲೆ ವಿಧಿಸಿರುವ ಸುಂಕವನ್ನು ಭಾರತವು ಕಡಿಮೆ ಮಾಡಬಹುದು

6 ಬಾರಿ ಮೋದಿ–ಟ್ರಂಪ್ ಭೇಟಿ

ಪ್ರಧಾನಿ ನರೇಂದ್ರ ಮೋದಿ ಹಾಗೂ ಡೊನಾಲ್ಡ್ ಟ್ರಂಪ್ ಅವರು ಈವರೆಗೆ ಆರು ಬಾರಿ ಭೇಟಿಯಾಗಿದ್ದಾರೆ. ಈ ಬಾರಿಯ ಟ್ರಂಪ್–ಮೋದಿ ಭೇಟಿ ಏಳನೆಯದ್ದಾಗಿದ್ದು, ಅಮೆರಿಕ ಅಧ್ಯಕ್ಷೀಯ ಚುನಾವಣೆಗೂ ಮುನ್ನ ಮಹತ್ವದ ಬೆಳವಣಿಗೆ ಎನಿಸಿದೆ. 

* 2017 ಜೂನ್: ವಾಷಿಂಗ್ಟನ್‌ನಲ್ಲಿ ದ್ವಿಪಕ್ಷೀಯ ಮಾತುಕತೆ

* 2017 ನವೆಂಬರ್: ಮನಿಲಾದಲ್ಲಿ ಆಸಿಯಾನ್‌ ಮತ್ತು ಪೂರ್ವ ಏಷ್ಯಾ ಸಮಾವೇಶ

* 2018 ನವೆಂಬರ್: ಬ್ಯೂನಸ್‌ ಐರಿಸ್‌ನಲ್ಲಿ ನಡೆದ ಜಿ–20 ಶೃಂಗಸಭೆ

* 2019 ಜೂನ್: ಒಸಾಕಾದಲ್ಲಿ ನಡೆದ ಜಿ–20 ಶೃಂಗಸಭೆ

* 2019 ಆಗಸ್ಟ್: ಫ್ರಾನ್ಸ್‌ನಲ್ಲಿ ಜಿ–7 ಶೃಂಗಸಭೆ

* 2019 ಸೆಪ್ಟೆಂಬರ್: ಹ್ಯೂಸ್ಟನ್ ಮತ್ತು ನ್ಯೂಯಾರ್ಕ್‌

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು