ಗುರುವಾರ , ಏಪ್ರಿಲ್ 2, 2020
19 °C
ಕೀಟ ನಿರ್ವಹಣೆಗೆ ಬೇಕು ಸುಸ್ಥಿರ ಮಾದರಿ | ಆರೋಗ್ಯ, ಪರಿಸರ ಸ್ನೇಹಿಯಾಗಲಿ ಎಂಬ ನಿರೀಕ್ಷೆ

Explainer| ಕೋಟ್ಯಂತರ ರೈತರಿಗೆ ನೇರ ಪರಿಣಾಮ ಬೀರುವ ಕೀಟನಾಶಕ ನಿರ್ವಹಣಾ ಮಸೂದೆ

ವಿನಾಯಕ ಭಟ್‌ Updated:

ಅಕ್ಷರ ಗಾತ್ರ : | |

ಕೀಟನಾಶಕಗಳ ನಿರ್ವಹಣಾ ಮಸೂದೆಯನ್ನು ಸಂಸತ್ತಿನಲ್ಲಿ ಮಂಡಿಸಲು ಕೇಂದ್ರ ಸಚಿವ ಸಂಪುಟ ನಿರ್ಧರಿಸಿದೆ. ಕೋಟ್ಯಂತರ ರೈತರ ಬದುಕಿನ ಮೇಲೆ ನೇರ ಪರಿಣಾಮ ಬೀರುವ ಈ ಮಸೂದೆಯ ಸಮಗ್ರ ಮಾಹಿತಿ ಇಲ್ಲಿದೆ.

ಅಪಾಯಕಾರಿ ಕೀಟನಾಶಕಗಳ ಮಿತಿ ಮೀರಿದ ಬಳಕೆಯಿಂದ ಇಂದು ತಿನ್ನುವ ಆಹಾರವೂ ವಿಷವಾಗಿ ಮಾರ್ಪಟ್ಟಿದೆ. ಕೀಟನಾಶಕಗಳ ಉತ್ಪಾದನೆಯಲ್ಲಿ ವಿಶ್ವದ ನಾಲ್ಕನೇ ಅತಿ ದೊಡ್ಡ ರಾಷ್ಟ್ರವಾಗಿರುವ ಭಾರತದಲ್ಲಿ ಮನುಷ್ಯನ ಆರೋಗ್ಯ ಹಾಗೂ ಪರಿಸರದ ಮೇಲೆ ಆಗುತ್ತಿರುವ ದುಷ್ಪರಿಣಾಮಗಳಿಗೆ ಕಡಿವಾಣ ಹಾಕಲು ಕೇಂದ್ರ ಸರ್ಕಾರವು, ‘ಕೀಟನಾಶಕಗಳ ನಿರ್ವಹಣಾ ಮಸೂದೆ (ಪಿಎಂಬಿ)–2020’ ಅನ್ನು ಸಂಸತ್ತಿನಲ್ಲಿ ಮಂಡಿಸಲು ನಿರ್ಧರಿಸಿರುವುದು ಹೊಸ ಭರವಸೆಯ ಬೆಳಕನ್ನು ಮೂಡಿಸಿದೆ.

‘ಹೆಚ್ಚು ಸುರಕ್ಷಿತ ಹಾಗೂ ಪರಿಣಾಮಕಾರಿ ಕೀಟನಾಶಕಗಳು ರೈತರಿಗೆ ಲಭಿಸಬೇಕು. ರೈತರು ತಮಗೆ ಬೇಕಾದ ಒಳ್ಳೆಯ ಕೀಟನಾಶಕ ಆಯ್ಕೆ ಮಾಡಿಕೊಳ್ಳಲು ಅನುಕೂಲವಾಗುವಂತೆ ಮಾರುಕಟ್ಟೆಯಲ್ಲಿ ಲಭ್ಯವಿರುವ ಕೀಟನಾಶಕಗಳ ಸಾಮರ್ಥ್ಯ, ದೌರ್ಬಲ್ಯ ಹಾಗೂ ಅಪಾಯಕಾರಿ ಅಂಶಗಳ ಸಂಪೂರ್ಣ ಮಾಹಿತಿ ಸಿಗುವಂತೆ ಮಾಡುವುದು ‘ಕೀಟನಾಶಕಗಳ ನಿರ್ವಹಣಾ ಮಸೂದೆ’ಯ ಮುಖ್ಯ ಉದ್ದೇಶವಾಗಿದೆ’ ಎಂದು ಕೇಂದ್ರ ಪರಿಸರ ಸಚಿವ ಪ್ರಕಾಶ್‌ ಜಾವಡೇಕರ್‌ ಸ್ಪಷ್ಟಪಡಿಸಿದ್ದಾರೆ.

ಈ ನೂತನ ಮಸೂದೆಯನ್ನು ಸಂಸತ್ತಿನಲ್ಲಿ ಮಂಡಿಸಲು ಫೆಬ್ರುವರಿ 12ರಂದು ಸಚಿವ ಸಂಪುಟದ ಒಪ್ಪಿಗೆ ಪಡೆದ ಬಳಿಕ ಸಚಿವ ಜಾವಡೇಕರ್‌ ಅವರು ಈ ಮಸೂದೆಯ ಬಗ್ಗೆ ಬೆಳಕು ಚೆಲ್ಲಿದ್ದಾರೆ. ಸದ್ಯ ಜಾರಿಯಲ್ಲಿರುವ ಕೀಟನಾಶಕ ಕಾಯ್ದೆ–1968ರ ಬದಲು ಕೀಟನಾಶಕ ನಿರ್ವಹಣಾ ಕಾಯ್ದೆಯನ್ನು ಜಾರಿಗೆ ತರಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ.

ಈ ಮಸೂದೆ ಪ್ರಕಾರ, ಕೀಟನಾಶಕವನ್ನು ಆಮದು ಮಾಡಿಕೊಳ್ಳುವ, ಉತ್ಪಾದಿಸುವ ಹಾಗೂ ರಫ್ತು ಮಾಡುವ ಮೊದಲು ಕಡ್ಡಾಯವಾಗಿ ನೋಂದಣಿ ಮಾಡಿಕೊಳ್ಳಬೇಕು. ಪರಿಹಾರ ವಿತರಣೆ, ನಿರೀಕ್ಷಿತ ಕಾರ್ಯಸಾಧನೆ, ಕ್ಷಮತೆ, ಸುರಕ್ಷತೆ, ಬಳಕೆಯ ವಿಧಾನ ಮತ್ತು ದಾಸ್ತಾನು ಸಂಗ್ರಹಿಸಲು ಇರುವ ಮೂಲಸೌಲಭ್ಯಗಳ ವಿವರಗಳನ್ನೂ ಸಂಬಂಧಪಟ್ಟ ಪ್ರಾಧಿಕಾರಕ್ಕೆ ಸಲ್ಲಿಸಬೇಕಾಗುತ್ತದೆ.

‘ಕಡಿಮೆ ಗುಣಮಟ್ಟ ಅಥವಾ ನಕಲಿ ಕೀಟನಾಶಕ ಬಳಕೆಯಿಂದ ಬೆಳೆ ಹಾನಿಯಾದರೆ ಪರಿಹಾರ ನೀಡಲು ಅವಕಾಶ ಕಲ್ಪಿಸಲಿದೆ. ಇದಕ್ಕಾಗಿ ಉತ್ಪಾದಕರು ಹಾಗೂ ಮಾರಾಟಗಾರರಿಂದ ಸಂಗ್ರಹಿಸಿದ ದಂಡ ಹಾಗೂ ಸರ್ಕಾರದ ಅನುದಾನ ಒಳಗೊಂಡ ಕೇಂದ್ರ ನಿಧಿಯನ್ನು ಸ್ಥಾಪಿಸಲಾಗುತ್ತದೆ. ಕೀಟನಾಶಕಗಳ ಬಗೆಗಿನ ಎಲ್ಲಾ ಮಾಹಿತಿಯು ಎಲ್ಲಾ ಭಾಷೆಗಳಲ್ಲಿ ಸಾರ್ವಜನಿಕ ಪೋರ್ಟಲ್‌ನಲ್ಲಿ ಲಭ್ಯವಿರಲಿದೆ. ಇದರಿಂದಾಗಿ ರೈತರು ತಮಗೆ ಸೂಕ್ತ ಎನಿಸುವ ಕೀಟನಾಶಕಗಳನ್ನು ಆಯ್ಕೆ ಮಾಡಿಕೊಳ್ಳಬಹುದಾಗಿದೆ’ ಎಂಬುದು ಸಚಿವರ ವಾದ.

12 ವರ್ಷಗಳಿಂದ ಪಿಎಂಬಿ ಚರ್ಚೆ

ಭಾರತದಲ್ಲಿ 1968ರಲ್ಲಿ ಕೀಟನಾಶಕ ಕಾಯ್ದೆಯನ್ನು ಜಾರಿಗೆ ತರಲಾಯಿತು. 1971ರಲ್ಲಿ ಕೀಟನಾಶಕ ನಿಯಮಾವಳಿಗಳನ್ನು ರೂಪಿಸಲಾಯಿತು. ಕೀಟನಾಶಕ ಬಳಕೆ ಮೇಲೆ ನಿಗಾ ವಹಿಸಲು ಐದು ದಶಕಗಳ ಬಳಿಕ ಹೊಸ ಕಾಯ್ದೆ ತರುವುದಕ್ಕೆ ಇದೀಗ ಕಾಲ ಕೂಡಿ ಬಂದಿದೆ.

ಕೀಟನಾಶಕಗಳಲ್ಲಿರುವ ಅಪಾಯಕಾರಿ ರಾಸಾಯನಿಕಗಳು ಮನುಷ್ಯ ಹಾಗೂ ಪ್ರಾಣಿಗಳ ಆರೋಗ್ಯಗಳ ದುಷ್ಪರಿಣಾಮ ಬೀರುತ್ತಿವೆ. ಜೊತೆಗೆ ಜೀವ ವೈವಿಧ್ಯದಲ್ಲಿ ಏರುಪೇರಾಗಲೂ ಇವು ಪ್ರಮುಖ ಕಾರಣವಾಗುತ್ತಿವೆ. ಹೀಗಾಗಿ 2008ರಿಂದ ಕೀಟನಾಶಕ ನಿರ್ವಹಣಾ ಮಸೂದೆ ಬಗ್ಗೆ ಚರ್ಚೆ ಆರಂಭಗೊಂಡಿತು. ಸಾರ್ವಜನಿಕರಿಂದ ಅಭಿಪ್ರಾಯ ಸಂಗ್ರಹಿಸಲು ಕೇಂದ್ರ ಸರ್ಕಾರದ ಕೃಷಿ ಮತ್ತು ರೈತ ಕಲ್ಯಾಣ ಇಲಾಖೆಯು ‘ಕೀಟನಾಶಕ ನಿರ್ವಹಣಾ ಮಸೂದೆ (ಪಿ.ಎಂ.ಬಿ)–2017’ರ ಕರಡುಪತ್ರಿಯನ್ನು 2018ರ ಫೆಬ್ರುವರಿ 19ರಂದು ಬಿಡುಗಡೆ ಮಾಡಿತ್ತು. ಈ ನಡುವೆ ಕೇಂದ್ರ ಸರ್ಕಾರವು ನೂತನ ಮಸೂದೆಯನ್ನು ಸಿದ್ಧಪಡಿಸಿದ್ದು, ಹಳೆಯ ಮಸೂದೆಯನ್ನು ಹಿಂದಕ್ಕೆ ಪಡೆದಿದೆ.

₹ 20 ಸಾವಿರ ಕೋಟಿ ವಾರ್ಷಿಕ ವಹಿವಾಟು

ವಿಶ್ವದಲ್ಲಿಯೇ ಕೀಟನಾಶಕ ಉತ್ಪಾದನೆಯಲ್ಲಿ ಭಾರತವು ನಾಲ್ಕನೇ ಅತಿ ದೊಡ್ಡ ರಾಷ್ಟ್ರವಾಗಿದೆ. ಮಾರುಕಟ್ಟೆ ಸಂಶೋಧನಾ ವರದಿಯ ಅಂಕಿ–ಸಂಖ್ಯೆ ಪ್ರಕಾರ 2018ರಲ್ಲಿ ಸುಮಾರು ₹ 20 ಸಾವಿರ ಕೋಟಿ ಮೌಲ್ಯದಷ್ಟು ಕೀಟನಾಶಕಗಳ ವಾರ್ಷಿಕ ವಹಿವಾಟು ನಡೆದಿದೆ. ಅದರಲ್ಲಿ ಮೂರು ಕಂಪನಿಗಳ ಪಾಲು ಶೇ 57ರಷ್ಟಿದೆ. 2024ರ ವೇಳೆಗೆ ಕೀಟನಾಶಕಗಳ ವಹಿವಾಟು ₹ 31,600 ಕೋಟಿಗೆ ಏರಿಕೆಯಾಗುವ ನಿರೀಕ್ಷೆ ಇದೆ. 2019ರಿಂದ 2024ರ ಅವಧಿಯಲ್ಲಿ ವಾರ್ಷಿಕ ಶೇ 8.1 ವಹಿವಾಟು ಹೆಚ್ಚಲಿದೆ ಎಂದು ಅಂದಾಜಿಸಲಾಗಿದೆ.

2019ರ ಅಕ್ಟೋಬರ್‌ ವೇಳೆಗೆ ಭಾರತದಲ್ಲಿ 292 ಕೀಟನಾಶಕಗಳು ಅಧಿಕೃತವಾಗಿ ನೋಂದಣಿಯಾಗಿವೆ. ಇವುಗಳ ಪೈಕಿ 104 ಕೀಟನಾಶಕಗಳನ್ನು ಆರೋಗ್ಯಕ್ಕೆ ಹಾನಿಕಾರಕ ಎಂಬ ಕಾರಣಕ್ಕೆ ಎರಡು–ಮೂರು ದೇಶಗಳಲ್ಲಿ ನಿಷೇಧಿಸಲಾಗಿದ್ದರೂ, ಭಾರತದಲ್ಲಿ ಮಾತ್ರ ಅವ್ಯಾಹತವಾಗಿ ಇವುಗಳ ಮಾರಾಟ ಮಾಡಲಾಗುತ್ತಿದೆ.

ದೇಶದಲ್ಲಿ ಕೀಟನಾಶಕ, ಶಿಲೀಂಧ್ರನಾಶಕ ಹಾಗೂ ಕಳೆನಾಶಕಗಳು ಬಳಕೆಯಾಗುತ್ತಿವೆ. ಇವುಗಳ ಪೈಕಿ ಕೀಟನಾಶಕಗಳದ್ದೇ ಸಿಂಹ ಪಾಲು. ದೇಶದಲ್ಲಿ ಬಳಕೆಯಾಗುತ್ತಿರುವ ಕೀಟನಾಶಕಗಳ ಪೈಕಿ, ಎಂಟು ರಾಜ್ಯಗಳಲ್ಲಿಯೇ ಶೇ 70ರಷ್ಟು ಕೀಟನಾಶಕ ಬಳಸಲಾಗುತ್ತಿದೆ. ಭತ್ತಕ್ಕೆ (ಶೇ 26ರಿಂದ ಶೇ 28) ಅತಿ ಹೆಚ್ಚು ಕೀಟನಾಶಕ ಸಿಂಪಡಿಸಲಾಗುತ್ತಿದೆ. ನಂತರದ ಸ್ಥಾನದಲ್ಲಿ ಹತ್ತಿ (ಶೇ 18ರಿಂದ ಶೇ 20) ನಿಲ್ಲುತ್ತದೆ.

2009ರ ನಂತರ ಪ್ರತಿ ಹೆಕ್ಟೇರ್‌ಗೆ ಕೀಟನಾಶಕ ಬಳಕೆ ಪ್ರಮಾಣ ಗಣನೀಯವಾಗಿ ಏರಿಕೆ ಕಂಡಿದೆ. ಕೂಲಿ ಬೆಲೆ ಹೆಚ್ಚುತ್ತಿರುವುದರಿಂದ ಕೃಷಿ ಕಾರ್ಮಿಕರಿಂದ ಕಳೆ ತೆಗೆಸುವ ಬದಲು ಕಳೆನಾಶಕಗಳನ್ನು ಹೆಚ್ಚು ಹೆಚ್ಚು ಬಳಸುತ್ತಿರುವುದೇ ಒಟ್ಟಾರೆ ಕೀಟನಾಶಕಗಳ ಬಳಕೆ ಪ್ರಮಾಣ ಏರಿಕೆಗೆ ಕಾರಣವಾಗಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

ಕೀಟನಾಶಕ ಬಳಕೆಯಲ್ಲಿ ಮಹಾರಾಷ್ಟ್ರ ಮೊದಲ ಸ್ಥಾನದಲ್ಲಿದೆ. ನಂತರದ ಸ್ಥಾನಗಳಲ್ಲಿ ಕ್ರಮವಾಗಿ ಉತ್ತರ ಪ್ರದೇಶ, ಪಂಜಾಬ್‌ ಹಾಗೂ ಹರಿಯಾಣ ರಾಜ್ಯಗಳಿವೆ. 2016–17ನೇ ಸಾಲಿನ ಸಮೀಕ್ಷೆ ಪ್ರಕಾರ, ಪ್ರತಿ ಹೆಕ್ಟೇರ್‌ಗೆ ಕೀಟನಾಶಕ ಬಳಕೆ ಪ್ರಮಾಣದಲ್ಲಿ ಪಂಜಾಬ್‌ (0.74 ಕೆ.ಜಿ.) ಮೊದಲ ಸ್ಥಾನದಲ್ಲಿದೆ. ನಂತರದ ಸ್ಥಾನ ಕ್ರಮವಾಗಿ ಹರಿಯಾಣ (0.62 ಕೆ.ಜಿ) ಹಾಗೂ ಮಹಾರಾಷ್ಟ್ರ (0.57 ಕೆ.ಜಿ.) ರಾಜ್ಯಗಳದ್ದಾಗಿದೆ.

ಬಳಕೆಗೆ ಬೀಳಲಿ ಕಡಿವಾಣ

ಭಾರತದಲ್ಲಿ ಇಂದು ಕೃಷಿಯು ರಸಗೊಬ್ಬರ ಹಾಗೂ ಕೀಟನಾಶಕಗಳ ಮೇಲೆ ಬಹಳಷ್ಟು ಅವಲಂಬಿಸಿಕೊಂಡಿದೆ. ಇವುಗಳ ಮಿತಿ ಮೀರಿದ ಬಳಕೆಯಿಂದಾಗಿ ಮನುಷ್ಯ ಹಾಗೂ ಪ್ರಾಣಿಗಳ ಆರೋಗ್ಯ, ಜೀವವೈವಿಧ್ಯ ಹಾಗೂ ಪರಿಸರದ ಮೇಲೆ ದೊಡ್ಡ ಮಟ್ಟದಲ್ಲಿ ದುಷ್ಪರಿಣಾಮವಾಗುತ್ತಿದೆ. ಕೀಟನಾಶಕಗಳ ಬಗ್ಗೆ ಅತಿಯಾಗಿ ಪ್ರಚಾರ ಮಾಡುತ್ತಿರುವುದರಿಂದ ಭಾರತವು ಸುಸ್ಥಿರ ಹಾಗೂ ಪರಿಸರ ಸ್ನೇಹಿ ಕೃಷಿಯಿಂದ ಬಹಳ ದೂರ ಸಾಗುತ್ತಿದೆ. ಹೀಗಾಗಿ ಇಂತಹ ಸಮಸ್ಯೆಗಳಿಗೆ ನೂತನ ಮಸೂದೆಯು ಪರಿಹಾರ ಕಲ್ಪಿಸಲಿ ಎಂಬ ನಿರೀಕ್ಷೆಗಳನ್ನು ಇಟ್ಟುಕೊಳ್ಳಲಾಗಿದೆ. ಇದು ಕೀಟನಾಶಕಗಳ ಬಳಕೆ ಪ್ರಮಾಣವನ್ನು ಕಡಿಮೆಗೊಳಿಸಲಿ ಎಂಬ ಆಶಯವೂ ವ್ಯಕ್ತವಾಗುತ್ತಿದೆ.

ಪಂಜಾಬ್‌, ಕೇರಳದಂತಹ ಕೆಲ ರಾಜ್ಯಗಳಲ್ಲಿ ಅಪಾಯಕಾರಿಯಾಗಿರುವ ಗ್ಲೈಫೋಸೇಟ್‌ ಅಂಶವಿರುವ ಕಳೆನಾಶಕವನ್ನು ತಮ್ಮ ರಾಜ್ಯದಲ್ಲಿ ನಿಷೇಧಿಸಲು ಬಯಸಿದ್ದರೂ ಇದು ಇನ್ನೂ ಸಾಧ್ಯವಾಗಿಲ್ಲ. ಸ್ಥಳೀಯ ಕೃಷಿ–ಪರಿಸರದ ಬಗ್ಗೆ ಹೆಚ್ಚು ತಿಳಿದಿರುವ ರಾಜ್ಯ ಸರ್ಕಾರಗಳಿಗೆ ಕೀಟನಾಶಕ ನೋಂದಣಿ ಸಮಿತಿಯಲ್ಲಿ ಹೆಚ್ಚಿನ ಪ್ರಾತಿನಿಧ್ಯವನ್ನೂ ನೀಡಬೇಕಾಗಿದೆ. ಕೀಟನಾಶಕಗಳ ಬಳಕೆಗೆ ಪರವಾನಗಿ ನೀಡುವ ಅಧಿಕಾರವನ್ನು ರಾಜ್ಯ ಸರ್ಕಾರಗಳಿಗೆ ನೀಡದಿದ್ದರೂ ಸ್ಥಳೀಯ ಪರಿಸರಕ್ಕೆ ಹೊಂದಿಕೊಳ್ಳದ ಕೀಟನಾಶಕಗಳನ್ನು ತಿರಸ್ಕರಿಸುವ ಅಧಿಕಾರವನ್ನಾದರೂ ನೀಡಬೇಕು ಎಂಬ ವಾದಗಳೂ ಕೇಳಿಬರುತ್ತಿವೆ.

ವಹಿವಾಟಿಗೆ ತಕ್ಕಂತೆ ದಂಡದ ಪ್ರಮಾಣ ಹೆಚ್ಚಲಿ

ಕೋಟ್ಯಂತರ ರೂಪಾಯಿ ವಹಿವಾಟು ನಡೆಸುವ ಕೀಟನಾಶಕಗಳ ಕಂಪನಿಗಳಿಗೆ ಸರ್ಕಾರ ವಿಧಿಸುತ್ತಿರುವ ₹ 1 ಲಕ್ಷದಿಂದ ₹ 5 ಲಕ್ಷದ ಜುಜುಬಿ ದಂಡ ಯಾವ ಲೆಕ್ಕಕ್ಕೂ ಇಲ್ಲ. ಇದು ಆ ಕಂಪನಿಯ ವಹಿವಟಿನ ಮೇಲೆ ಯಾವುದೇ ಪರಿಣಾಮವನ್ನೂ ಬೀರುವುದಿಲ್ಲ. ದಂಡದ ಮೊತ್ತವನ್ನು ₹ 10 ಲಕ್ಷದಿಂದ ₹ 50 ಲಕ್ಷಕ್ಕೆ ಏರಿಸಿದರೂ ಹೆಚ್ಚಿನ ಪರಿಣಾಮವೇನೂ ಬೀರಲಿಕ್ಕಿಲ್ಲ. ಅದರ ಬದಲು ಕೀಟನಾಶಕದ ಕಂಪನಿಯ ವಾರ್ಷಿಕ ವಹಿವಾಟು ಲೆಕ್ಕ ಹಾಕಿ ಅದರ ಆಧಾರದಲ್ಲಿ ಭಾರಿ ಪ್ರಮಾಣದ ದಂಡ ವಿಧಿಸುವಂತಹ ವ್ಯವಸ್ಥೆ ಬರಬೇಕು ಎಂದು ಕೂಗು ಮಾರ್ದನಿಸುತ್ತಿದೆ.

ಔಷಧಗಳ ಬಗ್ಗೆ ಮಾಧ್ಯಮಗಳಲ್ಲಿ ಪ್ರಚಾರ ಮಾಡುವುದಕ್ಕೆ ಹೇಗೆ ನಿರ್ಬಂಧ ಹೇರಲಾಗಿದೆಯೋ ಅದೇ ಮಾದರಿಯಲ್ಲಿ ಕೀಟನಾಶಕಗಳ ಜಾಹೀರಾತು ನೀಡುವುದಕ್ಕೆ ಹಾಗೂ ನೇರವಾಗಿ ರೈತರಿಗೆ ಮಾರಾಟ ಮಾಡುವುದನ್ನು ಪ್ರತಿಬಂಧಿಸಬೇಕು. ಈ ನಿಟ್ಟಿನಲ್ಲಿ ನೀತಿ ಸಂಹಿತೆ ರೂಪಿಸಿ, ಕಂಪನಿಗಳು ಅವುಗಳನ್ನು ಪಾಲಿಸುವಂತಾಗಬೇಕು ಎಂದು ಸುಸ್ಥಿರ ಕೃಷಿಕರು ಸಲಹೆ ನೀಡುತ್ತಾರೆ.

ಅಪಾಯಕಾರಿ ಕೀಟನಾಶಕ ನಿಷೇಧಿಸಲಿ

ಭಾರತದಲ್ಲಿ ಕೀಟನಾಶಕಗಳಿಂದಾಗಿ ಸಾವನ್ನಪ್ಪುತ್ತಿರುವುದು ಸಹಜ ಎಂಬ ಸ್ಥಿತಿ ನಿರ್ಮಾಣಗೊಂಡಿದೆ. ನ್ಯಾಷನಲ್‌ ಕ್ರೈಮ್ಸ್‌ ರೆಕಾರ್ಡ್ಸ್‌ ಬ್ಯುರೊದ ದಾಖಲೆಗಳ ಪ್ರಕಾರ 2014ರಲ್ಲಿ 7,365 ಜನ ಆಕಸ್ಮಿಕವಾಗಿ ಕೀಟನಾಶಕಗಳ ಸೇವನೆ ಮಾಡಿರುವ ಪ್ರಕರಣಗಳು ವರದಿಯಾಗಿದ್ದು, ಇವುಗಳ ಪೈಕಿ 5,915 ಜನ ಮೃತಪಟ್ಟಿದ್ದಾರೆ. 2015ರಲ್ಲಿ 7,672 ಪ್ರಕರಣಗಳಲ್ಲಿ 7,060 ಜನ ಪ್ರಾಣ ಕಳೆದುಕೊಂಡಿದ್ದಾರೆ. ಹೀಗಾಗಿ ರೈತರು ಕೀಟನಾಶಕಗಳನ್ನು ನ್ಯಾಯೋಚಿತವಾಗಿ ಬಳಸಬೇಕಾಗಿದೆ.

ವಿಶ್ವ ಆರೋಗ್ಯ ಸಂಸ್ಥೆಯು ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವ ನಿಷೇಧಿತ ಕೀಟನಾಶಕಗಳನ್ನು ಅತ್ಯಂತ ವಿಷಕಾರಿ (Class–Ia) ಹಾಗೂ ಹೆಚ್ಚು ವಿಷಕಾರಿ (Class–Ib) ಎಂದು ವಿಂಗಡಿಸಿದೆ. ಹೀಗಾಗಿ ನೂತನ ಮಸೂದೆಯಲ್ಲಿ ಕ್ಲಾಸ್‌–1 ಮಾದರಿಯ ಕೀಟನಾಶಕಗಳ ಮಾರಾಟ ಹಾಗೂ ಬಳಕೆಯನ್ನು ಸಂಪೂರ್ಣವಾಗಿ ನಿಷೇಧಿಸಬೇಕು ಎಂಬ ಒತ್ತಾಯ ಪರಿಸರವಾದಿಗಳಿಂದ ಕೇಳಿಬರುತ್ತಿವೆ.

2018ರ ಆಗಸ್ಟ್‌ ಪೂರ್ವದಲ್ಲಿ ಭಾರತದಲ್ಲಿ 18 ‘ಕ್ರಾಸ್‌–1’ ಮಾದರಿಯ ಕೀಟನಾಶಕಗಳಿಗೆ ಅವಕಾಶ ಕಲ್ಪಿಸಲಾಗಿತ್ತು. ಹಲವು ರಾಷ್ಟ್ರಗಳಲ್ಲಿ ಇವುಗಳನ್ನು ನಿಷೇಧಿಸಲಾಗಿತ್ತು. ಅನುಪಮ್‌ ವರ್ಮಾ ಸಮಿತಿಯ ಶಿಫಾರಸು ಆಧರಿಸಿ ಮೂರು ವರ್ಷಗಳ ಬಳಿಕ ಕೇಂದ್ರ ಸರ್ಕಾರದ ಕೃಷಿ ಮತ್ತು ರೈತ ಕಲ್ಯಾಣ ಸಚಿವಾಲಯವು 18 ಅಪಾಯಕಾರಿ ಕೀಟನಾಶಕಗಳನ್ನು ನಿಷೇಧಿಸಿತ್ತು. ಹೊಸ ಮಸೂದೆಯು ಮನುಷ್ಯನ ಆರೋಗ್ಯ ಹಾಗೂ ಪರಿಸರಕ್ಕೆ ಹಾನಿಯಾಗುವಂತಹ ಅಪಾಯಕಾರಿ ಕೀಟನಾಶಕಗಳನ್ನು ನಿಷೇಧಿಸುವತ್ತ ದಿಟ್ಟ ಕ್ರಮ ಕೈಗೊಳ್ಳಬೇಕಾಗಿದೆ.

ಇಂದು ಕೀಟನಾಶಕಗಳಿಗೆ ಪರ್ಯಾಯವಾಗಿ ಕೀಟ ನಿರ್ವಹಣೆಗೆ ಕೃಷಿ–ಪರಿಸರ ಸ್ನೇಹಿಯಾದ ಹಲವು ಮಾದರಿಗಳು ಯಶಸ್ಸಿಯಾಗಿವೆ. ಅಂಥ ಸುಸ್ಥಿರ ಮಾದರಿಗಳನ್ನು ಹೆಚ್ಚು ಪ್ರಚಾರಗೊಳಿಸುವ ಮೂಲಕ ದೇಶದ ಬೆನ್ನೆಲುಬು ಎನಿಸಿಕೊಳ್ಳುತ್ತಿರುವ ಅನ್ನದಾತನ ಬದುಕನ್ನು ಸಡೃಢಗೊಳಿಸುವತ್ತ ಹೆಜ್ಜೆ ಇಡಬೇಕಾಗಿದೆ.

ಭಾರತದಲ್ಲಿ ರಾಸಾಯನಿಕ ಕೀಟನಾಶಕ ಬಳಕೆ ಪ್ರಮಾಣ (ಟನ್‌ಗಳಲ್ಲಿ)

ವರ್ಷ; 2014–15 (56,121), 2015–16 (58,221), 2016–17 (52,755), 2017–18 (62,183), 2018–19 (53,453)

ರಾಜ್ಯವಾರು ಕೀಟನಾಶಕ ಬಳಕೆ ಪ್ರಮಾಣ
ಒಟ್ಟು ಬಳಕೆ (ಟನ್‌ಗಳಲ್ಲಿ)

ರಾಜ್ಯ 2003–04 2008–09 2015–16 2016–17
ಪ್ರತಿ ಹೆಕ್ಟೇರ್‌ಗೆ (ಕೆ.ಜಿ) ಬಳಕೆ
ಕರ್ನಾಟಕ 1692 1675 1434 0.10
ಪಂಜಾಬ್‌ 6780 5760 5743 0.74
ಹರಿಯಾಣ 4730 4288 ಮಾಹಿತಿ ಇಲ್ಲ 0.62
ಮಹಾರಾಷ್ಟ್ರ 3385 2400 11665 0.57
ಕೇರಳ 326 273 1123 0.41
ಉತ್ತರ ಪ್ರದೇಶ 6710 8968 10457 0.39
ತಮಿಳುನಾಡು 1434 2317 2096 0.33
ಪಶ್ಚಿಮ ಬಂಗಾಳ  3900 4100 3712 0.27
ಛತ್ತೀಸಗಡ 332 270 1625 0.26
ಆಂಧ್ರಪ್ರದೇಶ 2034 1381 2713 0.24
ಒಡಿಶಾ 682 1156 723 0.15
ಗುಜರಾತ್‌ 4000 2650 1980 0.13
ಬಿಹಾರ 860 915 831 0.11
ರಾಜಸ್ಥಾನ 2303 3333 2475 0.05
ಮಧ್ಯಪ್ರದೇಶ 62 663 732 0.03
ದೇಶದ ಒಟ್ಟು ಬಳಕೆ 41020 43860 54121 0.29

* ಅಂಕಿಅಂಶದ ಮಾಹಿತಿ: ರಾಸಾಯನಿಕ ಮತ್ತು ರಸಗೊಬ್ಬರ ಸಚಿವಾಲಯ; ಐಸಿಎಆರ್‌–ಎನ್‌ಐಎಪಿ

(ಲೇಖನಕ್ಕೆ ಮಾಹಿತಿ: ವೆಬ್‌ಸೈಟ್‌ಗಳು)

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು