ಮಂಗಳವಾರ, ಜೂನ್ 22, 2021
22 °C

ಆಳ–ಅಗಲ | 30ನೇ ದಿನಕ್ಕೆ ರೈತರ ಪ್ರತಿಭಟನೆ: ದಣಿವರಿಯದ ಪ್ರತಿರೋಧ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಪಂಜಾಬ್, ಹರಿಯಾಣ ಮತ್ತು ಇತರ ರಾಜ್ಯಗಳ ಸಾವಿರಾರು ರೈತರು ದೆಹಲಿ ಚಲೋ ಯಾತ್ರೆ ಆರಂಭಿಸಿ ಇಂದಿಗೆ (ಡಿ. 25) ಒಂದು ತಿಂಗಳಾಯಿತು. ದೆಹಲಿ ಚಲೋ ನಡೆಸಬೇಕಿದ್ದ ಅವರನ್ನು ಸರ್ಕಾರವು ರಾಜಧಾನಿಯ ಒಳಗೇ ಬಿಟ್ಟುಕೊಡಲಿಲ್ಲ. ಅವರು ದೆಹಲಿಯ ಗಡಿಗಳ ಹೊರಗೆ, ಥರಗುಟ್ಟುವ ಚಳಿಯಲ್ಲಿ ಬೀಡುಬಿಟ್ಟಿದ್ದಾರೆ. ಕೇಂದ್ರ ಸರ್ಕಾರವು ‘ಕೃಷಿ ಕ್ಷೇತ್ರದ ಸುಧಾರಣೆ’ಗಾಗಿ ಜಾರಿಗೆ ತಂದ ಮೂರು ಕಾಯ್ದೆಗಳನ್ನು ರದ್ದುಪಡಿಸಬೇಕು ಎಂಬುದು ರೈತರ ಆಗ್ರಹ. ರೈತರು ‘ಉಡದ ಪಟ್ಟು’ ಹಿಡಿದಿದ್ದಾರೆ ಎಂಬುದು ಅವರ ಪ್ರತಿಭಟನೆ ಆರಂಭ ಆದಾಗಲೇ ಗೊತ್ತಾಗಿತ್ತು. ವೃದ್ಧರು, ಮಹಿಳೆಯರೆನ್ನದೆ ಸಾವಿರಾರು ರೈತರು ಟ್ರ್ಯಾಕ್ಟರ್‌ಗಳನ್ನು ಏರಿಕೊಂಡು ಬಂದಿದ್ದಾರೆ. ಈ ರೈತರ ಗುಂಪು ಎರಡು ತಿಂಗಳಿಗೆ ಆಗುವಷ್ಟು ಅಗತ್ಯ ಸಾಮಗ್ರಿಗಳನ್ನು ಹೊತ್ತುಕೊಂಡೇ ಬಂದಿತ್ತು. ಸರ್ಕಾರ ತಮ್ಮ ಬೇಡಿಕೆಗಳಿಗೆ ಬೇಗನೆ ಸ್ಪಂದಿಸುವುದಿಲ್ಲ ಎಂಬುದರ ಅರಿವೂ ರೈತರಿಗೆ ಇದ್ದಂತಿತ್ತು. 

ರಾಜಧಾನಿ ದೆಹಲಿಗೆ ರೈತರ ಪ್ರತಿಭಟನೆ ಹೊಸದೇನೂ ಅಲ್ಲ. ಆದರೆ, ಇಷ್ಟೊಂದು ದೀರ್ಘವಾದ, ಸುಸಂಘಟಿತವಾದ ಪ್ರತಿಭಟನೆ ಇದೇ ಮೊದಲು. ಹಿಂದೆಲ್ಲ ಒಂದೆರಡು ದಿನಗಳಿಗೆ ಪ್ರತಿಭಟನೆ ಮುಗಿದು ಹೋಗುತ್ತಿತ್ತು. ರೈತ ನಾಯಕ ಮಹೇಂದ್ರ ಸಿಂಗ್‌ ಟಿಕಾಯತ್‌ ಅವರು 1988ರಲ್ಲಿ ಬೋಟ್‌ ಕ್ಲಬ್‌ನಲ್ಲಿ ನಡೆಸಿದ್ದ ಚಾರಿತ್ರಿಕ ಪ್ರತಿಭಟನೆಗಿಂತಲೂ ಈ ಬಾರಿಯ ಪ್ರತಿಭಟನೆಯಲ್ಲಿ ಹೆಚ್ಚು ಜನರು ಸೇರಿಕೊಂಡಿದ್ದಾರೆ ಎಂದು ರೈತ ನಾಯಕರು ಹೇಳುತ್ತಿದ್ದಾರೆ.

ಸಿಂಘು, ಟಿಕ್ರಿ, ಗಾಜಿಪುರ... ಹೀಗೆ ದೆಹಲಿ ಪ್ರವೇಶಿಸುವ ಗಡಿಗಳು ಬಂದ್‌ ಆಗಿವೆ. ಸಾವಿರಾರು ಜನರು ಪ್ರತಿಭಟನೆ ನಡೆಸುತ್ತಿದ್ದರೂ ಸಂಘರ್ಷದ, ಹಿಂಸೆಯ ಒಂದೇ ಒಂದು ಕೃತ್ಯವನ್ನು ರೈತರು ಎಸಗಿಲ್ಲ. ಪ್ರತಿಭಟನೆ ಎಷ್ಟು ಶಾಂತಿಯುತವಾಗಿದೆಯೋ, ಪ್ರತಿಭಟನಕಾರರ ನಿಲುವು ಅಷ್ಟೇ ದೃಢವಾಗಿಯೂ ಇದೆ. ಹರಿಯಾಣದ ಅಂಬಾಲಾ ಜಿಲ್ಲೆಯ ಕುಲ್ವಂತ್‌ ಸಿಂಗ್‌ ಎಂಬ 72 ವರ್ಷದ ರೈತನ ಮಾತು ಇದನ್ನು ಧ್ವನಿಸುತ್ತದೆ: ‘ನಾನು ಇಲ್ಲಿಗೆ ಬರುವಾಗ ಒಂದು ಹೂವಿನ ಹಾರ ಖರೀದಿಸಿದ್ದೆ. ವಿಜಯಶಾಲಿಯಾಗಿ ಬಂದರೆ ಆ ಹಾರವನ್ನು ನನ್ನ ಕೊರಳಿಗೆ ಹಾಕಿ, ಪ್ರತಿಭಟನೆಯಲ್ಲಿ ಸತ್ತು ಹೋದರೆ ಅದನ್ನು ನನ್ನ ಮೃತದೇಹಕ್ಕೆ ಹಾಕಿ ಎಂದು ಕುಟುಂಬದವರಿಗೆ ಹೇಳಿದ್ದೇನೆ’.  

ಎಷ್ಟೇ ಸಮಯ ಕಳೆಯಲಿ, ತಮ್ಮ ಬೇಡಿಕೆಯನ್ನು ಈಡೇರಿಸಿಕೊಂಡೇ ಹಿಂದಿರುಗಬೇಕು ಎಂಬ ತೀರ್ಮಾನ ಪ್ರತಿಯೊಬ್ಬ ಪ್ರತಿಭಟನಕಾರನಲ್ಲಿಯೂ ಕಾಣಿಸುತ್ತಿದೆ. ಹೆದ್ದಾರಿಗಳನ್ನು ತೆರವು ಮಾಡಿ, ದೆಹಲಿಯ ಹೊರವಲಯದಲ್ಲಿ ಇರುವ ಬುರಾಡಿ ಮೈದಾನದಲ್ಲಿ ಪ್ರತಿಭಟನೆ ನಡೆಸಿ ಎಂದು ಕೇಂದ್ರ ಗೃಹ ಸಚಿವಾಲಯವು ರೈತರಿಗೆ ಸೂಚಿಸಿತ್ತು. ಇದು ಮಾತುಕತೆಗೆ ಸರ್ಕಾರ ಒಡ್ಡಿದ ಷರತ್ತೂ ಆಗಿತ್ತು. ಆದರೆ, ‘ಬಯಲು ಬಂದೀಖಾನೆ’ಗೆ ಹೋಗಲು ರೈತರು ಒಪ್ಪಲಿಲ್ಲ. ಕೇಂದ್ರದ ಸಚಿವರು ರೈತರ ಜೊತೆಗೆ ಅಕ್ಟೋಬರ್‌ನಿಂದಲೇ ಹಲವು ಬಾರಿ ಮಾತುಕತೆ ನಡೆಸಿದ್ದಾರೆ. ಡಿ.9ರಂದು ಆರನೇ ಸುತ್ತಿನ ಮಾತುಕತೆ ಆಗಿತ್ತು. ಈ ಯಾವುದೂ ರೈತರ ಮನವೊಲಿಸುವಲ್ಲಿ ಯಶ ಕಂಡಿಲ್ಲ. ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರೇ ರೈತರ ಸಂಘಟನೆಗಳ ಪ್ರತಿನಿಧಿಗಳ ಜತೆಗೆ ಅನೌಪಚಾರಿಕ ಮಾತುಕತೆ ನಡೆಸಿದ್ದರು. ಅದೂ ಫಲ ನೀಡಲಿಲ್ಲ. 

ಮೂರೂ ಕಾಯ್ದೆಗಳಿಗೆ ತಿದ್ದುಪಡಿ ತರುವ, ಕನಿಷ್ಠ ಬೆಂಬಲ ಬೆಲೆಯ ಖಾತರಿ ಕೊಡುವ ‘ಕೊಡುಗೆ’ಯನ್ನು ಸರ್ಕಾರ ಮುಂದಿಟ್ಟಿದೆ. ಈ ಮೂಲಕ ತನ್ನ ನಿಲುವನ್ನು ಮೃದುಗೊಳಿಸಿದೆ. ಆದರೆ, ರೈತರ ನಿಲುವಿನಲ್ಲಿ ಯಾವ ಬದಲಾವಣೆಯೂ ಆಗಿಲ್ಲ. ಇನ್ನೆಷ್ಟು ದಿನ ಮುಂದುವರಿದರೂ ಹೋರಾಟಕ್ಕೆ ಸಿದ್ಧ ಮತ್ತು ಸಜ್ಜಾಗಿಯೇ ಬಂದಿದ್ದೇವೆ ಎಂಬ ಸಂದೇಶವನ್ನು ರೈತರು ಮತ್ತೆ ಮತ್ತೆ ನೀಡುತ್ತಿದ್ದಾರೆ.

ಪ್ರತಿಭಟನೆಯಲ್ಲಿ ಸ್ತ್ರೀಶಕ್ತಿ
ದೊಡ್ಡ ಸಂಖ್ಯೆಯಲ್ಲಿ ಮಹಿಳೆಯರ ಉಪಸ್ಥಿತಿ ಈ ಬಾರಿಯ ಪ್ರತಿಭಟನೆಯಲ್ಲಿ ಎದ್ದು ಕಂಡ ಅಂಶ. ಕಾಯ್ದೆಗಳ ವಿರುದ್ಧದ ಆಕ್ರೋಶದ ಜತೆಗೆ, ತಮ್ಮ ಅಸ್ತಿತ್ವವನ್ನು ಸಾರುವುದು ಕೂಡ ಈ ಮಹಿಳೆಯರ ಉದ್ದೇಶ ಎಂಬುದನ್ನು ಅವರ ಮಾತು ಸ್ಪಷ್ಟಪಡಿಸುತ್ತದೆ.

‘ಕೃಷಿ ಕೆಲಸದಲ್ಲಿ ಗಂಡಸರಿಗಿಂತ ಹೆಚ್ಚು ತೊಡಗಿಸಿಕೊಳ್ಳುವವರು ಮಹಿಳೆಯರು. ಆದರೆ, ನಮ್ಮ ಕೆಲಸವನ್ನು ಸಮಾನ ಎಂದು ಪರಿಗಣಿಸುವುದೇ ಇಲ್ಲ. ಇದೊಂದು ದೊಡ್ಡ ಪ್ರತಿಭಟನೆ. ಮಹಿಳೆಯರೂ ರೈತರೆಂದು ಜನರು ತಿಳಿಯಲಿ ಎಂಬ ಕಾರಣಕ್ಕೆ ಪ್ರತಿಭಟನೆಯಲ್ಲಿ ಸೇರಿಕೊಂಡಿದ್ದೇನೆ’ ಎಂದು ಹರಿಯಾಣದ ಸುನಿತಾ ರಾಣಿ ಹೇಳುತ್ತಾರೆ. 

‘ಮನೆ ಮತ್ತು ಊರುಗಳಲ್ಲಿ ನಮ್ಮ ಸಹೋದರಿಯರು ಸದ್ದಿಲ್ಲದೆ ಕೆಲಸ ಮಾಡುತ್ತಿರುವುದರಿಂದಲೇ ಪ್ರತಿಭಟನೆಯು ಈ ಹಂತದಲ್ಲಿ ನಡೆಯುತ್ತಿದೆ’ ಎನ್ನುತ್ತಾರೆ ಸುರಿಂದರ್ ಸಿಂಗ್‌. ಪಂಜಾಬ್‌ನ ಟೋಲ್‌ ಕೇಂದ್ರಗಳು ಮತ್ತು ರಿಲಯನ್ಸ್‌ ಮಳಿಗೆಗಳ ಮುಂದೆ ಸ್ಥಳೀಯವಾಗಿ ಸಣ್ಣಮಟ್ಟದ ಪ್ರತಿಭಟನೆಗಳನ್ನು ಮಹಿಳೆಯರೇ ಆಯೋಜಿಸುತ್ತಿದ್ದಾರೆ. 

ಮಹಿಳೆಯರಿಗೆ ಇರುವ ಹೊಣೆಗಾರಿಕೆಗಳು ಹಲವು. ಹಾಗಿದ್ದರೂ ದೆಹಲಿಯ ಪ್ರತಿಭಟನೆಯಲ್ಲಿ ಮಹಿಳೆಯರ ಸಂಖ್ಯೆ ಹೆಚ್ಚುತ್ತಿರುವುದಲ್ಲದೆ ಕಡಿಮೆ ಆಗಿಲ್ಲ. ಕೃಷಿ, ಜಾನುವಾರು, ಮನೆ, ಮಕ್ಕಳು ಎಲ್ಲವನ್ನೂ ಅವರೇ ನೋಡಿಕೊಳ್ಳಬೇಕು. ಹೀಗಾಗಿಯೇ, ಬೆಳ್ಳಂಬೆಳಗ್ಗೆ ಪಂಜಾಬ್‌ನಿಂದ ಹೊರಟು, ದೆಹಲಿಗೆ ಬರುತ್ತಾರೆ. ಸಂಜೆಯ ಹೊತ್ತು ಮರಳುತ್ತಾರೆ. ಇನ್ನೂ ಕೆಲವರು ಆವರ್ತನೆಯ ವ್ಯವಸ್ಥೆ ಮಾಡಿಕೊಂಡಿದ್ದಾರೆ. ಒಂದು ತಂಡವು ಐದು ಅಥವಾ ಹತ್ತು ದಿನ ಪ್ರತಿಭಟನೆಯಲ್ಲಿ ಭಾಗಿಯಾಗುತ್ತದೆ. ನಂತರ ಊರಿಗೆ ಮರಳುತ್ತದೆ. ಇನ್ನೊಂದು ತಂಡವು ಅವರ ಜಾಗವನ್ನು ಸೇರಿಕೊಳ್ಳುತ್ತದೆ. 

ಟಿಕ್ರಿ ಗಡಿಯಲ್ಲಿಯೇ ಅತಿ ಹೆಚ್ಚು ಮಹಿಳೆಯರಿದ್ದಾರೆ. ಇಲ್ಲಿ 20 ಸಾವಿರದಿಂದ 25 ಸಾವಿರ ಮಹಿಳೆಯರು ಇದ್ದಾರೆ ಎಂದು ಅಂದಾಜಿಸಲಾಗಿದೆ. ಮೊದಲ ದಿನದಿಂದಲೇ ಇಲ್ಲಿ ಇರುವವರೂ ಇದ್ದಾರೆ.

ವ್ಯವಸ್ಥಿತ ಪ್ರತಿಭಟನೆ
ದೇಶದ 450ಕ್ಕೂ ಹೆಚ್ಚು ರೈತ ಸಂಘಟನೆಗಳು ಒಟ್ಟಿಗೆ ಸೇರಿ ‘ದೆಹಲಿ ಚಲೋ’ ಪ್ರತಿಭಟನಾ ಮೆರವಣಿಗೆಯನ್ನು ಆಯೋಜಿಸಿದ್ದವು. ಈ ಮೆರವಣಿಗೆಯನ್ನು ದೆಹಲಿ ಗಡಿಯಲ್ಲಿ ತಡೆದು ನಿಲ್ಲಿಸಿದ ನಂತರ ಹೋರಾಟದ ಸ್ವರೂಪ ಬದಲಾಗಿದೆ. ದೇಶದ ಇನ್ನಷ್ಟು ರೈತ ಸಂಘಟನೆಗಳು ಈ ಹೋರಾಟಕ್ಕೆ ಬೆಂಬಲ ಸೂಚಿಸಿವೆ. ಎಲ್ಲಾ ಸಂಘಟನೆಗಳು ಸೇರಿ ಈಗ, ‘ಕಿಸಾನ್ ಏಕತಾ ಮೋರ್ಚಾ’ ಎಂಬ ಒಕ್ಕೂಟವನ್ನು ರಚಿಸಿಕೊಂಡಿವೆ. ಈ ಒಕ್ಕೂಟದ ಅಡಿಯಲ್ಲಿ ಪ್ರತಿಭಟನೆ ಮುಂದುವರಿದಿದೆ. ಹರಿಯಾಣ-ದೆಹಲಿ, ದೆಹಲಿ-ಉತ್ತರಪ್ರದೇಶದ ನಡುವಣ ಐದು ಪ್ರಮುಖ ಗಡಿಗಳಲ್ಲಿ 2 ಲಕ್ಷಕ್ಕೂ ಹೆಚ್ಚು ರೈತರು ಬೀಡುಬಿಟ್ಟಿದ್ದಾರೆ.

ಇಷ್ಟು ದೊಡ್ಡ ಸಂಖ್ಯೆಯಲ್ಲಿ ರೈತರು ಪ್ರತಿಭಟನೆ ನಡೆಸುತ್ತಿದ್ದರೂ, 30 ದಿನಗಳಲ್ಲಿ ಈವರೆಗೆ ಯಾವುದೇ ಅಹಿತಕರ ಘಟನೆಯಾಗಲೀ, ಸಂಘರ್ಷವಾಗಲೀ ನಡೆದುದರ ಬಗ್ಗೆ ವರದಿಯಾಗಿಲ್ಲ. ‘ಯಾವುದೇ ಕಾರಣಕ್ಕೂ ಹಿಂಸಾಚಾರಕ್ಕೆ ಅವಕಾಶ ಮಾಡಿಕೊಡಬಾರದು ಎಂದು ಪಣತೊಟ್ಟಿದ್ದೇವೆ’ ಎಂದು ಕಿಸಾನ್ ಏಕತಾ ಮೋರ್ಚಾದ ನಾಯಕರು ಹೇಳಿದ್ದಾರೆ. ಈ ಶಪಥವನ್ನು ಪ್ರತಿಭಟನಾನಿರತ ರೈತರು ಕಟ್ಟುನಿಟ್ಟಾಗಿ ಪಾಲಿಸುತ್ತಿದ್ದಾರೆ. ಪ್ರತಿಭಟನೆ ವೇಳೆಯಲ್ಲಿ ಚಳಿ, ಹೃದಯಾಘಾತ ಮತ್ತು ಬೆಂಕಿ ಅವಘಡದಿಂದ 20ಕ್ಕೂ ಹೆಚ್ಚು ರೈತರು ಮೃತಪಟ್ಟಿದ್ದಾರೆ. ಆದರೆ ಈ ಯಾವ ಸಂದರ್ಭದಲ್ಲೂ ಘರ್ಷಣೆ ನಡೆಯದಂತೆ ರೈತರು ಎಚ್ಚರವಹಿಸಿದ್ದಾರೆ.

ಹರಿದು ಬಂದ ನೆರವು
ಹೆದ್ದಾರಿಗಳ ಟೋಲ್‌ಘಟಕಗಳ ಬಳಿ, ಸರ್ವಿಸ್‌ ರಸ್ತೆಗಳಲ್ಲಿ ರೈತರು ಬೀಡುಬಿಟ್ಟಿದ್ದಾರೆ. ದೆಹಲಿಯಲ್ಲಿ ಈಗ 3 ಡಿಗ್ರಿ ಸೆಲ್ಸಿಯಸ್‌ನಷ್ಟು ಕನಿಷ್ಠ ಉಷ್ಣಾಂಶ ದಾಖಲಾಗಿದೆ. ಇಂತಹ ವಾತಾವರಣದಲ್ಲಿ ಪ್ರತಿಭಟನೆ ನಡೆಸುತ್ತಿರುವ ರೈತರಿಗೆ ಹಲವೆಡೆಯಿಂದ ನೆರವು ಹರಿದುಬರುತ್ತಿದೆ.

ದೀರ್ಘಕಾಲದ ಪ್ರತಿಭಟನೆಗೆ ಅಗತ್ಯವಿರುವ ವಸ್ತುಗಳನ್ನು, ದವಸ-ಧಾನ್ಯಗಳನ್ನು ರೈತರು ತಮ್ಮ ಜತೆ ತಂದಿದ್ದಾರೆ. ಆದರೆ, ಪ್ರತಿಭಟನೆಗೆ ಬಂದು ಕೂಡುತ್ತಿರುವ ರೈತರ ಸಂಖ್ಯೆ ದಿನೇದಿನೇ ಏರಿಕೆಯಾಗುತ್ತಿದೆ. ಪ್ರತಿಭಟನೆಯಲ್ಲಿ ಭಾಗವಹಿಸುತ್ತಿರುವವರಲ್ಲಿ ಕೆಲವು ರೈತರಷ್ಟೇ ಟ್ರ್ಯಾಕ್ಟರ್‌ನ ಟ್ರೇಲರ್‌ಗಳಲ್ಲಿ ಮಲಗಲು ವ್ಯವಸ್ಥೆ ಮಾಡಿಕೊಮಡಿದ್ದಾರೆ. ಉಳಿದವರು ನೆಲದ ಮೇಲೆಯೇ ಮಲಗುತ್ತಿದ್ದಾರೆ. ಮೈಕೊರೆಯುವ ಚಳಿಯಲ್ಲಿ ಹೊರಗೆ ಮಲಗಿ ಹಲವು ರೈತರು ಮೃತಪಟ್ಟಿದ್ದಾರೆ. ಇದನ್ನು ತಪ್ಪಿಸಲು ಕೆಲವು ಸಂಘಟನೆಗಳು ರೈತರಿಗೆ ಟೆಂಟ್‌ಗಳನ್ನು ನೀಡಿವೆ. ಸಾರ್ವಜನಿಕರು ರೈತರಿಗೆ ಸ್ವೆಟರ್‌ ಮತ್ತು ಹೊದಿಕೆಗಳನ್ನು ನೀಡಿದ್ದಾರೆ.

ಸಾವಿರಾರು ರೈತರಿಗೆ ಊಟದ ವ್ಯವಸ್ಥೆ ಮಾಡುವುದು ಕಷ್ಟಕರ. ಆದರೆ ರೈತ ಸಂಘಟನೆಗಳು, ಎನ್‌ಜಿಒಗಳು, ದೆಹಲಿ ಗುರುದ್ವಾರ ಸಮಿತಿ, ರಾಜಕೀಯ ಪಕ್ಷಗಳು ಇದರಲ್ಲಿ ರೈತರಿಗೆ ನೆರವಾಗುತ್ತಿವೆ. ಗುರುದ್ವಾರ ಸಮಿತಿಯು ಚಪಾತಿ ಮಾಡುವ ಯಂತ್ರಗಳನ್ನು ಪ್ರತಿಭಟನೆಯ ಸ್ಥಳಗಳಲ್ಲಿ ಅಳವಡಿಸಿದೆ. ಗಂಟೆಯೊಂದರಲ್ಲಿ 2,000 ಚಪಾತಿಗಳನ್ನು ತಯಾರಿಸುವ ಯಂತ್ರಗಳ ಮೂಲಕ ರೈತರಿಗೆ ಊಟದ ವ್ಯವಸ್ಥೆ ಮಾಡಲಾಗಿದೆ. ರಾಜಕೀಯ ಪಕ್ಷಗಳನ್ನು ಪ್ರತಿಭಟನೆಯಿಂದ ರೈತರು ದೂರವಿಟ್ಟಿದ್ದಾರೆ. ಆದರೆ ಕಾಂಗ್ರೆಸ್‌ ಮತ್ತು ಎಎಪಿ ಕಾರ್ಯಕತರು ಐದೂ ಗಡಿಗಲಲ್ಲಿ ಬೀಡುಬಿಟ್ಟು, ಅಡುಗೆ ತಯಾರಿಸಲು ನೆರವಾಗುತ್ತಿದ್ದಾರೆ. ಎರಡೂ ಪಕ್ಷಗಳ ಕಾರ್ಯಕರ್ತರು ಪ್ರತಿದಿನ ಲಕ್ಷಕ್ಕೂ ಹೆಚ್ಚು ಚಪಾತಿಗಳನ್ನು ತಯಾರಿಸಿಕೊಡುತ್ತಿದ್ದಾರೆ.

ರೈತರ ಆರೋಗ್ಯ ತಪಾಸಣೆಗೆ ಕಾಂಗ್ರೆಸ್‌, ಎಎಪಿ ಮತ್ತು ಕೆಲವು ಎನ್‌ಜಿಒಗಳು ಉಚಿತ ಚಿಕಿತ್ಸಾ ಶಿಬಿರಗಳನ್ನು ನಡೆಸುತ್ತಿವೆ. ರೈತರಿಗೆ ಉಚಿತವಾಗಿ ಔಷಧಗಳನ್ನು ನೀಡಲಾಗುತ್ತಿದೆ.

ಸಾಮಾಜಿಕ ಜಾಲತಾಣಗಳಲ್ಲೂ ಹೋರಾಟ
ರೈತರ ಹೋರಾಟವು ಪ್ರತಿಭಟನೆ, ರಸ್ತೆತಡೆಗಳ ಜತೆಗೆ ಸಾಮಾಜಿಕ ಜಾಲತಾಣಕ್ಕೂ ಕಾಲಿಟ್ಟಿದೆ. ಫೇಸ್‌ಬುಕ್‌, ಟ್ವಿಟರ್‌, ಇನ್‌ಸ್ಟಾಗ್ರಾಂ, ಯೂಟ್ಯೂಬ್‌ನಲ್ಲಿ 'ಕಿಸಾನ್ ಏಕತಾ ಮೋರ್ಚಾ' ಹೆಸರಿನಲ್ಲಿ ಖಾತೆ ತೆರೆಯಲಾಗಿದೆ. ಈ ಖಾತೆಗಳನ್ನು ಲಕ್ಷಾಂತರ ಮಂದಿ ಅನುಸರಿಸುತ್ತಿದ್ದಾರೆ, ಚಂದಾದಾರರಾಗಿದ್ದಾರೆ.

ರೈತ ನಾಯಕರು, ರೈತರಿಗೆ ಹೋರಾಟದ ಬಗ್ಗೆ ಸೂಚನೆಗಳನ್ನು ನೀಡಲು, ಕಾಯ್ದೆಗಳ ಬಗ್ಗೆ ಅರಿವು ಮೂಡಿಸಲು ಈ ಖಾತೆಗಳನ್ನು ಬಳಸುತ್ತಿದ್ದಾರೆ. ಈ ಖಾತೆಗಳನ್ನು ತೆರೆದು ಒಂದೆರಡು ದಿನಗಳಲ್ಲೇ ಲಕ್ಷಾಂತರ ಜನರು ಅನುಯಾಯಿಗಳಾಗಿದ್ದರು. ಇನ್‌ಸ್ಟಾಗ್ರಾಂ ಮತ್ತು ಫೇಸ್‌ಬುಕ್‌ ಖಾತೆಗಳನ್ನು ಒಂದು ದಿನದಮಟ್ಟಿಗೆ ಬ್ಲಾಕ್‌ ಮಾಡಲಾಗಿತ್ತು. ಭಾರಿ ಆಕ್ರೋಶ ವ್ಯಕ್ತವಾದ ಕಾರಣ, ಖಾತೆಗಳನ್ನು ಮತ್ತೆ ಸಕ್ರಿಯಗೊಳಿಸಲಾಯಿತು.

ಕಿಸಾನ್‌ ಏಕತಾ ಮೋರ್ಚಾ ಯುಟ್ಯೂಬ್‌ ಚಾನಲ್‌ನಲ್ಲಿ ರೈತ ನಾಯಕರು ವೆಬಿನಾರ್‌ಗಳನ್ನು ಆಯೋಜಿಸುತ್ತಿದ್ದಾರೆ. ಪ್ರತಿಭಟನೆಯ ವಿಡಿಯೊಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಗುರುವಾರ ಸಂಜೆ ವೇಳೆಗೆ ಈ ಎಲ್ಲಾ ಖಾತೆಗಳಲ್ಲಿ ವಿಡಿಯೊ ಮತ್ತು ಪೋಸ್ಟ್‌ಗಳನ್ನು ವೀಕ್ಷಿಸಿದವರ ಸಂಖ್ಯೆ 2 ಕೋಟಿಯನ್ನು ದಾಟಿದೆ. ಈ ಮೂಲಕ ಸಾಮಾಜಿಕ ಜಾಲತಾಣಗಳಲ್ಲೂ ರೈತರ ಪ್ರತಿಭಟನೆ ಸಕ್ರಿಯವಾಗಿದೆ.

11.60 ಲಕ್ಷ: ಯುಟ್ಯೂಬ್‌ ಚಾನಲ್‌ನ ಚಂದಾದಾರರು
2.6 ಲಕ್ಷ: ಫೇಸ್‌ಬುಕ್‌ ಅನುಯಾಯಿಗಳು
1.06 ಲಕ್ಷ: ಟ್ವಿಟರ್ ಅನುಯಾಯಿಗಳು

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು