ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಖ್ಯೆ– ಸುದ್ದಿ: ಕರ್ನಾಟಕದ ಕಾಡಿನ ಸ್ವರೂಪ ಬದಲು

Last Updated 5 ಜೂನ್ 2022, 19:31 IST
ಅಕ್ಷರ ಗಾತ್ರ

ದೇಶದಲ್ಲಿರುವ ಕಾಡಿನ ವಿಸ್ತೀರ್ಣ ಶೇ 0.22ರಷ್ಟು ಏರಿಕೆಯಾಗಿದೆ ಎನ್ನುತ್ತದೆ ಭಾರತದಲ್ಲಿ ಕಾಡಿನ ಸ್ಥಿತಿಗತಿ ವರದಿ–2021. ದೇಶದಲ್ಲಿ ಕಾಡಿನ ವಿಸ್ತೀರ್ಣ ಹೆಚ್ಚಾಗುವಲ್ಲಿ ಕರ್ನಾಟಕದ ಕೊಡುಗೆಯೂ ಇದೆ. ಅತಿಹೆಚ್ಚು ವಿಸ್ತೀರ್ಣದಷ್ಟು ಕಾಡು ಹೆಚ್ಚಾದ ರಾಜ್ಯಗಳಲ್ಲಿ ಕರ್ನಾಟಕವು 4ನೇ ಸ್ಥಾನದಲ್ಲಿ ಇದೆ. ಆದರೆ ಕಾಡಿನ ವಿಸ್ತೀರ್ಣ ಹೆಚ್ಚಾಗಿದ್ದರೂ, ರಾಜ್ಯದಲ್ಲಿ ಕಾಡಿನ ಸ್ವರೂಪದಲ್ಲಿ ಗಣನೀಯ ಬದಲಾವಣೆಗಳಾಗಿವೆ. ರಾಜ್ಯದಲ್ಲಿ ಕುರುಚಲು ಕಾಡಿನಲ್ಲಿನ ಪೊದೆ ಸಸ್ಯಗಳು ಮತ್ತು ಕಳೆ ಸಸ್ಯಗಳ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಇಳಿಕೆಯಾಗಿದೆ. ಅಂತೆಯೇ ರಾಜ್ಯದಲ್ಲಿ ದಟ್ಟ ಕಾಡಿನ ವಿಸ್ತೀರ್ಣ ಕಡಿಮೆಯಾಗಿದೆ. ಇದರ ಜತೆಯಲ್ಲಿ ಕಾಡಿನಲ್ಲಿರುವ ಬೃಹತ್ ಮರಗಳ ಸಂಖ್ಯೆಯೂ ಕಡಿಮೆಯಾಗಿದೆ. ಒಟ್ಟಾರೆಯಾಗಿ ಕಾಡಿನ ಇಡೀ ಸ್ವರೂಪವೇ ಬದಲಾಗಿದೆ.

ದೊಡ್ಡ ಮರಗಳ ಸಂಖ್ಯೆ ಇಳಿಕೆ
ರಾಜ್ಯದಲ್ಲಿರುವ ಕಾಡಿನಲ್ಲಿರುವ ದೊಡ್ಡ ಮರಗಳ ಸಂಖ್ಯೆಯಲ್ಲಿ ಗಣನೀಯ ಪ್ರಮಾಣದ ಇಳಿಕೆಯಾಗಿದೆ. ರಾಜ್ಯದ ಕಾಡುಗಳಲ್ಲಿ ಹೊನಕಲು/, ಕರಿಮತ್ತಿ, ಸಾಗುವಾನಿ, ಬೆಟ್ಟದಾವರಿಕೆ ಮತ್ತು ದಿಂಡುಗದ ಮರಗಳು ಹೆಚ್ಚಿನ ಸಂಖ್ಯೆಯಲ್ಲಿ ಇವೆ. ಆದರೆ, 2019ಕ್ಕೆ ಹೋಲಿಸಿದರೆ, 2021ರಲ್ಲಿ ಈ ಮರಗಳ ಸಂಖ್ಯೆಯಲ್ಲಿ ಇಳಿಕೆಯಾಗಿದೆ. ಈ ಐದೂ ಜಾತಿಯ, ಎಲ್ಲಾ ಗಾತ್ರದ ಮರಗಳ ಸಂಖ್ಯೆಯೂ ಇಳಿಕೆಯಾಗಿದೆ ಎಂಬ ವಿವರ ಈ ವರದಿಯಲ್ಲಿ ಇದೆ. ರಾಜ್ಯದ ಕಾಡಿನಲ್ಲಿ ಈ ಜಾತಿಯ ಮರಗಳೇ ಹೆಚ್ಚಿನ ಸಂಖ್ಯೆಯಲ್ಲಿ ಇರುವ ಕಾರಣ, ಈ ಮರಗಳಿಗೆ ಸಂಬಂಧಿಸಿದ ವಿವರವನ್ನು ಮಾತ್ರ ಈ ವರದಿಯಲ್ಲಿ ನೀಡಲಾಗಿದೆ.

* ಈ ಐದೂ ಜಾತಿಗೆ ಸೇರಿದ, 10–30 ಸೆಂ.ಮೀ.ನಷ್ಟು ಕಾಂಡದ ಸುತ್ತಳತೆ ಇರುವ ಮರಗಳ ಪ್ರಮಾಣದಲ್ಲಿ ಶೇ 20ರಷ್ಟು ಇಳಿಕೆಯಾಗಿದೆ

* ಈ ಐದೂ ಜಾತಿಗೆ ಸೇರಿದ, 30–60 ಸೆಂ.ಮೀ.ನಷ್ಟು ಕಾಂಡದ ಸುತ್ತಳತೆ ಇರುವ ಮರಗಳ ಪ್ರಮಾಣದಲ್ಲಿ ಶೇ 8.5ರಷ್ಟು ಇಳಿಕೆಯಾಗಿದೆ

* ಈ ಐದೂ ಜಾತಿಗೆ ಸೇರಿದ, 60 ಸೆಂ.ಮೀ.ಗಿಂತಲೂ ಹೆಚ್ಚು ಕಾಂಡದ ಸುತ್ತಳತೆ ಇರುವ ಮರಗಳ ಪ್ರಮಾಣದಲ್ಲಿ ಮಾತ್ರ ಏರಿಕೆಯಾಗಿದೆ. ಇಂತಹ ಮರಗಳ ಸಂಖ್ಯೆಯಲ್ಲಿ ಶೇ ಶೇ 8.3ರಷ್ಟು ಏರಿಕೆಯಾಗಿದೆ.

ಕಳೆ, ಪೊದೆ ಸಸ್ಯಗಳ ಪ್ರಮಾಣ ಇಳಿಕೆ
2019ಕ್ಕೆ ಹೋಲಿಸಿದರೆ, 2021ರ ವೇಳೆಗೆ ರಾಜ್ಯದ ಕಾಡಿನಲ್ಲಿರುವ ಕಳೆ ಮತ್ತು ಪೊದೆ ಜಾತಿಯ ಸಸ್ಯಗಳಿರುವ ಪ್ರದೇಶದ ವಿಸ್ತೀರ್ಣ ಭಾರಿ ಪ್ರಮಾಣದಲ್ಲಿ ಇಳಿಕೆಯಾಗಿದೆ. ರಾಜ್ಯದ ದಟ್ಟ ಕಾಡು, ತೆರೆದ ಕಾಡು ಮತ್ತು ಕುರುಚಲು ಕಾಡಿನಲ್ಲಿ ಲಂಟಾನಾ, ತೀವ್ರಗಂಧ ಕಳೆ ಸಸ್ಯಗಳು ಭಾರಿ ಪ್ರಮಾಣದಲ್ಲಿ ಇವೆ. ಬೇರೆಲ್ಲಾ ಕಳೆ ಸಸ್ಯಗಳಿಗ ಹೋಲಿಸಿದರೆ, ಈ ಕಳೆಗಳ ಪ್ರಮಾಣ ಅತಿಹೆಚ್ಚು. ಆದರೆ, ಈ ಎರಡು ವರ್ಷಗಳಲ್ಲಿ ಈ ಕಳೆ ಸಸ್ಯಗಳಿರುವ ಪ್ರದೇಶದ ವಿಸ್ತೀರ್ಣದಲ್ಲಿ ಶೇ 50ರಷ್ಟು ಇಳಿಕೆಯಾಗಿದೆ. 2019ರಲ್ಲಿ ಈ ಎರಡೂ ಕಳೆ ಸಸ್ಯಗಳು ಇರುವ ಪ್ರದೇಶದ ವಿಸ್ತೀರ್ಣವು 5,348 ಚದರ ಕಿ.ಮೀ.ನಷ್ಟು ಇತ್ತು. 2021ರಲ್ಲಿ ಈ ವಿಸ್ತೀರ್ಣವು 2,675 ಚದರ ಕಿ.ಮೀ.ಗಳಿಗೆ ಇಳಿಕೆಯಾಗಿದೆ. ಇದು ಭಾರಿ ಪ್ರಮಾಣದ ಇಳಿಕೆ. ಉಳಿದ ಕಳೆ ಸಸ್ಯಗಳಿರುವ ಪ್ರದೇಶದ ವಿಸ್ತೀರ್ಣದಲ್ಲೂ ಇಷ್ಟೇ ಪ್ರಮಾಣದ ಇಳಿಕೆಯಾಗಿದೆ. ಇವು ಇಳಿಕೆಯಾಗಲು ಏನು ಕಾರಣ ಎಂಬುದನ್ನು ಈ ವರದಿಯಲ್ಲಿ ಉಲ್ಲೇಖಿಸಿಲ್ಲ. ಜತೆಗೆ ಇಂತಹ ಭಾರಿ ಪ್ರಮಾಣದ ಬದಲಾವಣೆಯಿಂದ ಪರಿಸರದ ಮೇಲೆ ಆಗುವ ಪರಿಣಾಮದ ಬಗ್ಗೆಯೂ ಈ ವರದಿಯಲ್ಲಿ ಯಾವುದೇ ಮಾಹಿತಿ ಇಲ್ಲ.

ನೆಲೆ ಕಳೆದುಕೊಳ್ಳುತ್ತಿರುವ ಬಿದಿರು
ರಾಜ್ಯದ ಕಾಡಿನಲ್ಲಿ ಬಿದಿರು ಇರುವ ಪ್ರದೇಶದ ವಿಸ್ತೀರ್ಣ ಕಡಿಮೆಯಾಗುತ್ತಿದೆ. 2019ರಲ್ಲಿ ಕಾಡಿನಲ್ಲಿ ಇದ್ದ ಬಿದಿರಿನ ವಿಸ್ತೀರ್ಣಕ್ಕೆ ಹೋಲಿಸಿದರೆ, 2021ರಲ್ಲಿ ಶೇ 15ರಷ್ಟು ಇಳಿಕೆಯಾಗಿದೆ. ಎರಡು ವರ್ಷದಲ್ಲಿ ಇಷ್ಟು ಪ್ರಮಾಣದ ಇಳಿಕೆಯು, ಕಾಡಿನ ಸ್ವರೂಪದಲ್ಲಿ ಭಾರಿ ಬದಲಾವಣೆಗೆ ಕಾರಣವಾಗಿದೆ. 2019ರಲ್ಲಿ ದೇಶದ ಕಾಡಿನಲ್ಲಿದ್ದ ಬಿದಿರಿನ ಬೆಳೆಯ ವಿಸ್ತೀರ್ಣದಲ್ಲಿ ಕರ್ನಾಟಕದ ಪಾಲು ಶೇ 6.36ರಷ್ಟು ಇತ್ತು. 2021ರಲ್ಲಿ ದೇಶದ ಕಾಡಿನಲ್ಲಿರುವ ಬಿದಿರು ಇದ್ದ ಪ್ರದೇಶದ ವಿಸ್ತೀರ್ಣದಲ್ಲಿ ರಾಜ್ಯದ ಪಾಲು ಶೇ 5.77ಕ್ಕೆ ಕುಸಿದಿದೆ.

ಕಾಡಿನ ಪಾಡು
ದೇಶದಲ್ಲಿ ಕಾಡಿನ ಪ್ರದೇಶ ಅಲ್ಪ ಪ್ರಮಾಣ ಮಾತ್ರ ಏರಿಕೆಯಾಗಿದೆ ಎಂದು ವರದಿ ತಿಳಿಸಿದೆ. ಕೆಲವು ರಾಜ್ಯಗಳಲ್ಲಿ ಕಾಡಿನ ವಲಯ ಹಿಗ್ಗಿದ್ದರೆ, ಕೆಲವು ರಾಜ್ಯಗಳಲ್ಲಿ ಕುಗ್ಗಿದೆ. 2019–2021ರ ಅವಧಿಯಲ್ಲಿ ದಕ್ಷಿಣದ ರಾಜ್ಯಗಳಾದ ಆಂಧ್ರ ಪ್ರದೇಶ, ತೆಲಂಗಾಣ, ಕರ್ನಾಟಕದಲ್ಲಿ ಕಾಡು ಬೆಳೆದಿದೆ. ಕರ್ನಾಟಕದಲ್ಲಿ 155 ಚ.ಕಿ.ಮೀ.ನಷ್ಟು ಹೆಚ್ಚಳವಾಗಿದ್ದು, ದೇಶದ ಅರಣ್ಯ ವಿಸ್ತರಣೆಗೆ ಕೊಡುಗೆ ನೀಡಿದೆ. ಒಡಿಶಾ, ಜಾರ್ಖಂಡ್ ಕೂಡಾ ವ್ಯಾಪ್ತಿ ವಿಸ್ತರಿಸಿಕೊಂಡ ಅಗ್ರ ಐದು ರಾಜ್ಯಗಳ ಪಟ್ಟಿಯಲ್ಲಿ ಸ್ಥಾನ ಪಡೆದಿವೆ.

ಅತಿಹೆಚ್ಚಿನ ಪ್ರಮಾಣದಲ್ಲಿ ಕಾಡು ಕಳೆದುಕೊಂಡ ಐದು ರಾಜ್ಯಗಳ ಪಟ್ಟಿಯಲ್ಲಿ ಈಶಾನ್ಯ ರಾಜ್ಯಗಳೇ ಇವೆ. ಅರುಣಾಚಲ ಪ್ರದೇಶ, ಮಣಿಪುರ, ನಾಗಾಲ್ಯಾಂಡ್, ಮಿಜೋರಾಂ ಮತ್ತು ಮೇಘಾಲಯ ರಾಜ್ಯಗಳಲ್ಲಿ ಕಾಡು ಇಳಿಕೆಯಾಗಿದೆ. ಅರುಣಾಚಲ ಪ್ರದೇಶವು ಅತಿಹೆಚ್ಚು, ಅಂದರೆ 257 ಚ.ಕಿ.ಮೀ. ಅರಣ್ಯವನ್ನು ಕಳೆದುಕೊಂಡಿದೆ.

ಆಧಾರ: ಭಾರತದಲ್ಲಿನ ಕಾಡಿನ ಸ್ಥಿತಿಗತಿ ವರದಿ–2021 ಮತ್ತು 2019

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT