ಮಂಗಳವಾರ, ಆಗಸ್ಟ್ 3, 2021
27 °C

Explainer: ಏನಿದು ಝಿಕಾ ವೈರಸ್ ಸೋಂಕು, ಲಕ್ಷಣಗಳೇನು, ಹರಡದಂತೆ ತಡೆಯುವುದು ಹೇಗೆ?

ಡೆಕ್ಕನ್ ಹೆರಾಲ್ಡ್ Updated:

ಅಕ್ಷರ ಗಾತ್ರ : | |

ಕೋವಿಡ್‌ನಿಂದ ತತ್ತರಿಸಿರುವ ಕೇರಳದಲ್ಲೀಗ ಝಿಕಾ ವೈರಸ್ ಸೋಂಕು ಜನರ ನಿದ್ದೆಗೆಡಿಸಿದೆ. ತಿರುವನಂತಪುರದ 24 ವರ್ಷದ ಗರ್ಭಿಣಿಯಲ್ಲಿ ಇತ್ತೀಚೆಗೆ ಝಿಕಾ ವೈರಸ್ ಸೋಂಕು ಪತ್ತೆಯಾಗಿದ್ದು, ಒಟ್ಟು 14 ಪ್ರಕರಣಗಳು ಈವರೆಗೆ ವರದಿಯಾಗಿವೆ.

ಸೋಂಕು ಹರಡುವಿಕೆ ನಿಯಂತ್ರಣಕ್ಕೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಜಿಲ್ಲಾಡಳಿತಕ್ಕೆ ಸೂಚನೆ ನೀಡಲಾಗಿದೆ. ಆದರೂ ಸೊಳ್ಳೆಗಳಿಂದ ಹರಡುವ ಈ ಸೋಂಕು ದೇಶದ ಇತರ ಕಡೆಗಳಿಗೆ ಹರಡಿದೆಯೇ ಎಂಬ ಆತಂಕ ಹೆಚ್ಚಾಗಿದೆ.

ಓದಿ: ಕೇರಳದಲ್ಲಿ ಮೊದಲ ಝಿಕಾ ವೈರಸ್ ಪ್ರಕರಣ ಪತ್ತೆ

ಝಿಕಾ ವೈರಸ್ ಸೋಂಕು ಹೇಗೆ ಹರಡುತ್ತದೆ, ಲಕ್ಷಣಗಳೇನು, ಚಿಕಿತ್ಸೆ ಲಭ್ಯವಿದೆಯೇ, ಸೋಂಕಿತರಲ್ಲಿ ಕಾಣಿಸಿಕೊಳ್ಳುವ ಅಡ್ಡಪರಿಣಾಮಗಳೇನು, ಹರಡದಂತೆ ತಡೆಯುವುದು ಹೇಗೆ? ಇತ್ಯಾದಿ ಮಾಹಿತಿಗಳನ್ನು ಇಲ್ಲಿ ನೀಡಲಾಗಿದೆ.

ಝಿಕಾ ವೈರಸ್ ಹೇಗೆ ಹರಡುತ್ತದೆ?

ಝಿಕಾ ವೈರಸ್ ಈಡಿಸ್‌ ಪ್ರಭೇದದ ಸೊಳ್ಳೆಗಳಿಂದ, ಮುಖ್ಯವಾಗಿ ಈಡಿಸ್‌ ಈಜಿಪ್ಟಿ ಸೊಳ್ಳೆಗಳಿಂದ ಹರಡುತ್ತದೆ. ಈಡಿಸ್ ಸೊಳ್ಳೆಗಳು ಡೆಂಗ್ಯೂ, ಚಿಕೂನ್‌ಗುನ್ಯಾ ಮತ್ತು ಹಳದಿ ಜ್ವರವನ್ನೂ ಹರಡುತ್ತವೆ. ಈ ಸೊಳ್ಳೆಗಳು ಹಗಲು ಹೊತ್ತಿನಲ್ಲಿ ಕಚ್ಚುತ್ತವೆ. ಹೆಚ್ಚಾಗಿ ಮುಂಜಾನೆ, ಸಂಜೆಯ ವೇಳೆ ಕಚ್ಚುತ್ತವೆ.

ಸೊಳ್ಳೆಗಳ ಹೊರತಾಗಿ, ಸೋಂಕಿತ ವ್ಯಕ್ತಿಯಿಂದಲೂ ರೋಗ ಹರಡುವ ಸಾಧ್ಯತೆ ಇದೆ. ಗರ್ಭಿಣಿಯಿಂದ ಭ್ರೂಣದಲ್ಲಿರುವ ಶಿಶುವಿಗೆ, ಲೈಂಗಿಕ ಸಂಪರ್ಕದಿಂದ, ರಕ್ತದ ಮೂಲಕ ಹಾಗೂ ಅಂಗ ಕಸಿಯ ಮೂಲಕವೂ ಈ ಸೋಂಕು ಹರಡಬಲ್ಲದು.

ಝಿಕಾ ವೈರಸ್ ಸೋಂಕಿನ ಲಕ್ಷಣಗಳೇನು?

ಸೋಂಕಿನ ಲಕ್ಷಣಗಳು ಸೌಮ್ಯವಾಗಿದ್ದರೂ ಕೆಲವೊಮ್ಮೆ ಉಲ್ಬಣಿಸುವ ಸಾಧ್ಯತೆ ಇದೆ. ಇಂಥ ಪರಿಸ್ಥಿತಿಯಲ್ಲಿ ತಕ್ಷಣವೇ ಆಸ್ಪತ್ರೆಗೆ ದಾಖಲಾಗುವಂತೆ ಸಲಹೆ ನೀಡಲಾಗಿದೆ. ಸಾಮಾನ್ಯವಾಗಿ ಈ ಸೋಂಕಿನ ಲಕ್ಷಣಗಳು ಹೀಗಿವೆ;

* ಜ್ವರ
* ದದ್ದು
* ಸ್ನಾಯು ಮತ್ತು ಸಂಧು ನೋವು
* ದೇಹಾಲಸ್ಯ ಮತ್ತು ತಲೆನೋವು
* ಹೆಚ್ಚಿನ ಸೋಂಕಿತರಲ್ಲಿ ತೀವ್ರವಾದ ಲಕ್ಷಣಗಳು ಕಾಣಿಸಿಕೊಳ್ಳದೇ ಇರುವ ಸಾಧ್ಯತೆಯೂ ಇದೆ.

ಚಿಕಿತ್ಸೆಯೇನು?

ವಿಶ್ವ ಆರೋಗ್ಯ ಸಂಸ್ಥೆಯ (ಡಬ್ಲ್ಯುಎಚ್‌ಒ) ಪ್ರಕಾರ, ಝಿಕಾ ವೈರಸ್ ಸೋಂಕಿಗೆ ಚಿಕಿತ್ಸೆ ಅಥವಾ ಲಸಿಕೆ ಇಲ್ಲ. ತ್ವರಿತವಾಗಿ ಚೇತರಿಸಿಕೊಳ್ಳಲು ಜ್ವರ ಮತ್ತು ನೋವು ನಿವಾರಕ ಔಷಧ ತೆಗೆದುಕೊಳ್ಳುವುದರೊಂದಿಗೆ ಹೆಚ್ಚಿನ ಪ್ರಮಾಣದಲ್ಲಿ ದ್ರವಾಹಾರ ಸೇವನೆಗೆ ಸಲಹೆ ನೀಡಿದೆ.

ಝಿಕಾ ವೈರಸ್ ಸೋಂಕಿತರಲ್ಲಿ ಕಂಡುಬರುವ ಅಡ್ಡಪರಿಣಾಮಗಳೇನು?

ಗರ್ಭಿಣಿಯರಿಗೆ ಸೋಂಕು ತಗುಲಿದರೆ ಮುಂದೆ ಜನಿಸುವ ಶಿಶುವಿಗೆ ತಲೆಯ ಹಾಗೂ ಮಿದುಳಿನ ಬೆಳವಣಿಗೆ ಸರಿಯಾಗಿ ಆಗದಿರುವ ಸಾಧ್ಯತೆ ಇದೆ. ಗರ್ಭಾವಸ್ಥೆಯಲ್ಲಿ ಹಲವು ತೊಡಕುಗಳಿಗೂ ಈ ಸೋಂಕು ಕಾರಣವಾಗುವ ಸಾಧ್ಯತೆ ಇದೆ.

ಓದಿ: ಕೇರಳದಲ್ಲಿ 14ಕ್ಕೆ ಏರಿದ ಝಿಕಾ ವೈರಸ್ ಸೋಂಕಿತರ ಸಂಖ್ಯೆ

ಝಿಕಾ ವೈರಸ್ ಸೋಂಕು ವಯಸ್ಕರಲ್ಲಿ ಗುಯಿಲಿನ್-ಬ್ಯಾರೆ ಸಿಂಡ್ರೋಮ್ ಎಂಬ ಅಪರೂಪದ ನರ ಸಂಬಂಧಿತ ಕಾಯಿಲೆಗೆ ಕಾರಣವಾಗಬಹುದು.

ಸೋಂಕು ಹರಡದಂತೆ ತಡೆಯುವುದು ಹೇಗೆ?

ಕೀಟನಾಶಕಗಳನ್ನು ಸಿಂಪಡಿಸುವುದು, ಸೊಳ್ಳೆ ನಿವಾರಕಗಳ ಸಿಂಪಡಣೆ ಮತ್ತಿತರ ಕ್ರಮಗಳನ್ನು ಸರ್ಕಾರ ಈಗಾಗಲೇ ಕೈಗೊಳ್ಳುತ್ತಿದೆ. ಸೊಳ್ಳೆಗಳು ಹೆಚ್ಚದಂತೆ, ಕಡಿತಕ್ಕೊಳಗಾಗದಂತೆ ಎಚ್ಚರಿಕೆ ವಹಿಸುವ ಮೂಲಕ ಜನರು ತಮ್ಮ ಮನೆಗಳಲ್ಲಿಯೂ ಮುನ್ನೆಚ್ಚರಿಕೆ ವಹಿಸಬೇಕು. ಬೆಳಿಗ್ಗೆ ಮತ್ತು ಸಂಜೆ ವೇಳೆ ಆದಷ್ಟು ಸೊಳ್ಳೆ ಕಡಿತಕ್ಕೊಳಗಾಗದಂತೆ ಜಾಗರೂಕರಾಗಿರಬೇಕು.

ಗರ್ಭಿಣಿಯರು ಮತ್ತು ಚಿಕ್ಕ ಮಕ್ಕಳು ಹೆಚ್ಚು ಜಾಗರೂಕರಾಗಿರಬೇಕು. ಇವರು ಮಲಗುವ ಸಂದರ್ಭ ಸೊಳ್ಳೆ ಪರದೆಗಳನ್ನು ಬಳಸುವುದು ಸೂಕ್ತ.

ಝಿಕಾ ವೈರಸ್ ಲೈಂಗಿಕ ಸಂಪರ್ಕದ ಮೂಲಕವೂ ಹರಡುವುದರಿಂದ, ಸೋಂಕು ಪ್ರಕರಣಗಳು ಹೆಚ್ಚುತ್ತಿರುವಂಥ ಸಂದರ್ಭಗಳಲ್ಲಿ ಗರ್ಭಧಾರಣೆ ಸಾಧ್ಯತೆಗಳನ್ನು ಕಡಿಮೆ ಮಾಡುವಂತೆಯೂ ಡಬ್ಲ್ಯುಎಚ್‌ಒ ಸಲಹೆ ನೀಡಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು