ಗುರುವಾರ , ನವೆಂಬರ್ 26, 2020
22 °C

ಆಳ-ಅಗಲ: ಅಮೆರಿಕ ಅಧ್ಯಕ್ಷ ಗಾದಿಗೆ ಆಯ್ಕೆ ಹೇಗೆ?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಜನರಿಂದ ಅತಿ ಹೆಚ್ಚು (ಜನಪ್ರಿಯ) ಮತಗಳನ್ನು ಪಡೆದ ಅಭ್ಯರ್ಥಿ ಚುನಾವಣೆಯಲ್ಲಿ ಸೋಲಲು ಸಾಧ್ಯವೇ? ಅಮೆರಿಕದ ಚುನಾವಣೆಯಲ್ಲಿ ಇದು ಸಾಧ್ಯವಿದೆ. ಅದಕ್ಕೆ ಕಾರಣ ಅಲ್ಲಿ ಅಧ್ಯಕ್ಷರನ್ನು ನೇರವಾಗಿ ಜನರು ಆಯ್ಕೆ ಮಾಡುವುದಿಲ್ಲ. ಬದಲಿಗೆ ‘ಎಲೆಕ್ಟೋರಲ್‌ ಕಾಲೇಜ್‌’ (ಚುನಾಯಕರ ಕೂಟ) ಎಂದು ಕರೆಯಿಸಿಕೊಳ್ಳುವ, ಮತದಾರರ ಪ್ರತಿನಿಧಿಗಳು ಮಾಡುತ್ತಾರೆ. ಇಲ್ಲಿ ಪರೋಕ್ಷ ಮತದಾನ ನಡೆಯುತ್ತದೆ.

ವಾಸ್ತವದಲ್ಲಿ ಅಲ್ಲಿನ ಜನರು ಅಭ್ಯರ್ಥಿಗಳಾದ ಟ್ರಂಪ್‌ ಅಥವಾ ಬೈಡನ್‌ಗೆ ನೇರವಾಗಿ ಮತ ಹಾಕುವುದಿಲ್ಲ. ಬದಲಿಗೆ, ಅವರು ಅಧ್ಯಕ್ಷೀಯ ಚುನಾವಣೆಯಲ್ಲಿ ತಮ್ಮ ಪರವಾಗಿ ಮತ ಚಲಾಯಿಸುವ ಅಥವಾ ತಮ್ಮ ರಾಜ್ಯವನ್ನು ಪ್ರತಿನಿಧಿಸುವ ವ್ಯಕ್ತಿಯನ್ನು ಆಯ್ಕೆ ಮಾಡುತ್ತಾರೆ. ಇಂಥ ವ್ಯಕ್ತಿಯು ‘ನಾನು ಇಂಥವರಿಗೇ ಮತ ನೀಡುತ್ತೇನೆ’ ಎಂದು ವಾಗ್ದಾನ ಮಾಡಿರುತ್ತಾರೆ (ಅದನ್ನು ಮೀರಿದ ಉದಾಹರಣೆ ಇದೆ). ಹೀಗೆ ಆಯ್ಕೆಯಾದ ಪ್ರತಿನಿಧಿಗಳ ಗುಂಪೇ ‘ಎಲೆಕ್ಟೋರಲ್‌ ಕಾಲೇಜ್’ ಅಥವಾ ಚುನಾಯಕರ ಕೂಟ. ಇಲ್ಲಿ ‘ಕಾಲೇಜ್‌’ ಎಂದರೆ ಉದ್ದೇಶಿತ ಅಧಿಕಾರವನ್ನು ಹೊಂದಿರುವ ಜನರ ಗುಂಪು ಎಂದಷ್ಟೇ ಅರ್ಥ.

ಪ್ರತಿ ರಾಜ್ಯದಲ್ಲೂ ನಿರ್ದಿಷ್ಟ ಸಂಖ್ಯೆಯ ಮತದಾರ ಪ್ರತಿನಿಧಿಗಳು (ಎಲೆಕ್ಟರ್‌) ಇರುತ್ತಾರೆ. ರಾಜ್ಯದ ಜನಸಂಖ್ಯೆಯ ಆಧಾರದಲ್ಲಿ ಈ ಸಂಖ್ಯೆ ನಿರ್ಧಾರವಾಗುತ್ತದೆ. ಅಮೆರಿಕದಲ್ಲಿ ಒಟ್ಟಾರೆ 538 ಎಲೆಕ್ಟರಲ್‌ಗಳಿದ್ದು. ಅಧ್ಯಕ್ಷರಾಗಿ ಆಯ್ಕೆಯಾಗಲು 270 ಅಥವಾ ಅದಕ್ಕೂ ಹೆಚ್ಚು ಮತಗಳನ್ನು ಪಡೆಯುವುದು ಅಗತ್ಯ.

ಸಾಮಾನ್ಯ ಮತದಾರರು ಯಾವ ಅಭ್ಯರ್ಥಿಗೆ ಹೆಚ್ಚಿನ ಮತ ನೀಡಿದ್ದಾರೋ ಅದೇ ಅಭ್ಯರ್ಥಿಯ ಪರವಾಗಿ ಚುನಾಯಕರ ಕೂಟದ ಎಲ್ಲಾ ಮತಗಳನ್ನು ವರ್ಗಾವಣೆ ಮಾಡುವುದು ಹೆಚ್ಚಿನ ರಾಜ್ಯಗಳು ಅನುಸರಿಸಿಕೊಂಡು ಬಂದಿರುವ ವ್ಯವಸ್ಥೆ. ಉದಾಹರಣೆಗೆ; ಟೆಕ್ಸಾಸ್‌‌ನಲ್ಲಿ ಒಟ್ಟಾರೆ 38 ಎಲೆಕ್ಟೋರಲ್‌ ಮತಗಳಿವೆ. ಇಲ್ಲಿ ಸಾಮಾನ್ಯ ಮತದಾರರಲ್ಲಿ ಶೇ 50.1ರಷ್ಟು ಅಥವಾ ಅದಕ್ಕೂ ಹೆಚ್ಚು ಮಂದಿ ರಿಪಬ್ಲಿಕನ್‌ ಪಕ್ಷದವರಿಗೆ ಮತ ನೀಡಿದ್ದರೆ, ರಾಜ್ಯದ ಎಲ್ಲಾ 38 ಎಲೆಕ್ಟರ್‌ಗಳು ರಿಪಬ್ಲಿಕ್‌ ಪಕ್ಷಕ್ಕೆ ಮತ ಚಲಾಯಿಸುತ್ತಾರೆ. ಒಕ್ಲಹಾಮಾದಲ್ಲಿ ಟ್ರಂಪ್‌ ಅವರಿಗೆ ಹೆಚ್ಚಿನ ಮತಗಳು ಬಂದವೆಂದರೆ ಆ ರಾಜ್ಯದ ಅಷ್ಟೂ ಎಲೆಕ್ಟೋರಲ್‌ ಮತಗಳು ರಿಪಬ್ಲಿಕನ್‌ ಪಕ್ಷಕ್ಕೆ ಬಂದಂತೆ ಎಂದು ಭಾವಿಸಬಹುದು. ಆದ್ದರಿಂದ ಯಾರಿಗೆ ಎಷ್ಟು ಮತಗಳು ಬಂದಿವೆ, ಎಷ್ಟು ಅಂತರದಿಂದ ಗೆದ್ದಿದ್ದಾರೆ ಎಂಬುದು ಗೌಣ.

ಆದರೆ ಮೈನ್‌ ಹಾಗೂ ನೆಬ್ರಾಸ್ಕ ರಾಜ್ಯಗಳು ಇದಕ್ಕೆ ಭಿನ್ನವಾದ ವ್ಯವಸ್ಥೆಯನ್ನು ಅನುಸರಿಸುತ್ತವೆ. ಇಲ್ಲಿ ಪ್ರತಿ ಅಭ್ಯರ್ಥಿ ಪಡೆದ ಸರಾಸರಿ ಮತಗಳಿಗೆ ಅನುಗುಣವಾಗಿ ಎಲೆಕ್ಟೋರಲ್‌ ಮತಗಳನ್ನೂ ವಿಭಜಿಸಲಾಗುತ್ತದೆ.

ಹಿಂದಿನ ಐದು ಅಧ್ಯಕ್ಷೀಯ ಚುನಾವಣೆಗಳನ್ನು ಗಮನಿಸಿದರೆ, ಎರಡು ಚುನಾವಣೆಗಳಲ್ಲಿ ಹೆಚ್ಚಿನ ಮತಗಳನ್ನು ಪಡೆದ ಅಭ್ಯರ್ಥಿಗಳಿಗೆ ಎಲೆಕ್ಟೋರಲ್‌ ಮತಗಳ ಕೊರತೆಯಿಂದಾಗಿ ಅಧ್ಯಕ್ಷ ಗಾದಿಗೇರಲು ಸಾಧ್ಯವಾಗಿರಲಿಲ್ಲ ಎಂಬುದು ಕಂಡುಬರುತ್ತದೆ.

2016ರಲ್ಲಿ ಡೊನಾಲ್ಡ್‌ ಟ್ರಂಪ್‌ ಅವರಿಗಿಂತಲೂ ಅವರ ಪ್ರತಿಸ್ಪರ್ಧಿ ಹಿಲರಿ ಕ್ಲಿಂಟನ್‌ ಅವರು ಸುಮಾರು 30 ಲಕ್ಷದಷ್ಟು ಹೆಚ್ಚು ಮತಗಳನ್ನು ಪಡೆದಿದ್ದರು. ಆದರೆ, ಟ್ರಂಪ್‌‍ ಪರವಾಗಿದ್ದ ಚುನಾಯಕರಲ್ಲಿ ಹೆಚ್ಚಿನವರು ಗೆದ್ದ ಕಾರಣ ಅವರು ಅಧ್ಯಕ್ಷರಾದರು. 2000ನೇ ಸಾಲಿನಲ್ಲಿ ಜಾರ್ಜ್‌ ಡಬ್ಲ್ಯು. ಬುಷ್‌ ಅವರು 271 ಎಲೆಕ್ಟೋರಲ್‌ ಮತಗಳನ್ನು ಪಡೆದಿದ್ದರು. ಇವರ ಪ್ರತಿಸ್ಪರ್ಧಿ ಅಲ್‌ ಗೋರ್‌ ಅವರು ಬುಷ್‌ ಅವರಿಗಿಂತ ಸುಮಾರು ಐದು ಲಕ್ಷದಷ್ಟು ಹೆಚ್ಚಿನ ಮತಗಳನ್ನು ಪಡೆದಿದ್ದರೂ ಅಧ್ಯಕ್ಷರಾಗಲು ಸಾಧ್ಯವಾಗಲಿಲ್ಲ.

ಅಧ್ಯಕ್ಷರ ಆಯ್ಕೆ

ಚುನಾವಣೆಯ ಒಂದು ತಿಂಗಳ ಬಳಿಕ, ಡಿಸೆಂಬರ್‌ ತಿಂಗಳ ಎರಡನೇ ಬುಧವಾರದ ನಂತರದ ಮೊದಲ ಸೋಮವಾರದಂದು ಜನಪ್ರತಿನಿಧಿ ಸಭೆಯ ಸದಸ್ಯರು ತಮ್ಮತಮ್ಮ ರಾಜ್ಯಗಳಲ್ಲಿ ಸಭೆ ಸೇರಿ ಅಧ್ಯಕ್ಷೀಯ ಅಭ್ಯರ್ಥಿಗೆ ಮತ ಚಲಾವಣೆ ಮಾಡುತ್ತಾರೆ. ನೇರವಾಗಿ ಮತ್ತು ಅಧಿಕೃತವಾಗಿ ಅಧ್ಯಕ್ಷರ ಆಯ್ಕೆ ನಡೆಯುವುದು ಇಲ್ಲೇ.

ಯಾಕೆ ಈ ವ್ಯವಸ್ಥೆ?

1787ರ ಸುಮಾರಿಗೆ ಅಮೆರಿಕದ ಸಂವಿಧಾನ ರಚನಾ ಪ್ರಕ್ರಿಯೆ ಆರಂಭವಾಗಿತ್ತು. ಸಂಪರ್ಕ ಸಾಧನಗಳು, ಪ್ರಚಾರ ವ್ಯವಸ್ಥೆ ಇಲ್ಲದ ಅಂದಿನ ಕಾಲದಲ್ಲಿ ಇಂಥ ಬೃಹತ್‌ ರಾಷ್ಟ್ರದಲ್ಲಿ ಸಾರ್ವತ್ರಿಕ ಚುನಾವಣೆ ನಡೆಸುವುದು ಅಸಾಧ್ಯವೇ ಆಗಿತ್ತು. ಆದರೆ, ರಾಷ್ಟ್ರದ ರಾಜಧಾನಿಯಲ್ಲಿ ಕುಳಿತವರೇ ಅಧ್ಯಕ್ಷರನ್ನು ಆಯ್ಕೆ ಮಾಡುವುದನ್ನು ನಾಗರಿಕರು ಬಯಸಿರಲಿಲ್ಲ. ಆ ಕಾರಣಕ್ಕಾಗಿಯೇ ಜನರನ್ನು ಪ್ರತಿನಿಧಿಸುವಂಥ ಎಲೆಕ್ಟೋರಲ್‌ ಕಾಲೇಜ್‌ನ ರಚನೆಗೆ ಸಂವಿಧಾನ ರಚನಾಕಾರರು ಮುಂದಾದರು.

ಅಂದಿನ ಕಾಲದಲ್ಲಿ ಸಣ್ಣ ರಾಜ್ಯಗಳು ಈ ವ್ಯವಸ್ಥೆಗೆ ಹೆಚ್ಚಿನ ಆಸಕ್ತಿ ವ್ಯಕ್ತಪಡಿಸಿದ್ದವು. ಇಲ್ಲಿ ತಮ್ಮ ಧ್ವನಿಗೂ ಬೆಲೆ ಲಭಿಸುತ್ತದೆ ಎಂಬುದು ಅವರ ವಾದವಾಗಿತ್ತು. ರಾಜ್ಯದ ಜನಸಂಖ್ಯೆಯ ಆಧಾರದಲ್ಲಿ ಎಲೆಕ್ಟೋರಲ್‌ ಮತಗಳು ನಿರ್ಧಾರವಾಗುವುದರಿಂದ ಅಮೆರಿಕದ ಅಧ್ಯಕ್ಷರನ್ನು ಆಯ್ಕೆ ಮಾಡುವಲ್ಲಿ ದಕ್ಷಿಣದ ರಾಜ್ಯಗಳ ಪ್ರಭಾವ ಹೆಚ್ಚಾಗಿ ಕಾಣಿಸುತ್ತಿದೆ. ಜನರೇ ನೇರವಾಗಿ ಮತಚಲಾಯಿಸುವ ವ್ಯವಸ್ಥೆ ಇದ್ದಿದ್ದರೆ ಈ ರಾಜ್ಯಗಳಿಗೆ ಇಷ್ಟೊಂದು ಮಹತ್ವ ಲಭಿಸುತ್ತಿರಲಿಲ್ಲ.

8 ರಾಜ್ಯಗಳು ನಿರ್ಣಾಯಕ

ಅಮೆರಿಕ ಚುನಾವಣೆಯಲ್ಲಿ ಅಧಿಕಾರ ಹಿಡಿಯುವ ಪಕ್ಷವನ್ನು ನಿರ್ಧರಿಸುವುದು ಅಲ್ಲಿನ 8 ರಾಜ್ಯಗಳು ಎಂದು ವಿಶ್ಲೇಷಕರು ಹೇಳುತ್ತಾರೆ. ಇಲ್ಲಿ ಹೆಚ್ಚು ಮತಗಳನ್ನು ಪಡೆಯುವವರೇ ಶ್ವೇತಭವನ ಪ್ರವೇಶಿಸುತ್ತಾರೆ ಎಂಬುದು ಕಳೆದ ಐದಾರು ಚುನಾವಣೆಗಳಲ್ಲಿ ಸಾಬೀತಾಗಿದೆ. ಹೀಗಾಗಿ ಈ ರಾಜ್ಯಗಳನ್ನು ‘ಬ್ಯಾಟಲ್‌ಗ್ರೌಂಡ್’ ಅಥವಾ ‘ಸ್ವಿಂಗ್ ಸ್ಟೇಟ್ಸ್’ ಎಂದೇ ಗುರುತಿಸಲಾಗುತ್ತದೆ.

ಅರಿಜೋನಾ, ಫ್ಲಾರಿಡಾ, ಜಾರ್ಜಿಯಾ, ಮಿಷಿಗನ್, ಮಿನ್ನೆಸೋಟಾ, ಉತ್ತರ ಕರೊಲಿನಾ, ಪೆನ್ಸಿಲ್ವೇನಿಯಾ ಮತ್ತು ವಿನ್‌ಕಾನ್ಸಿನ್ – ರಾಜ್ಯಗಳೇ ನಿರ್ಣಾಯಕ ಎನಿಸಿವೆ. ಅದರಲ್ಲೂ, ಅತಿಹೆಚ್ಚು ಮತಗಳನ್ನು ಹೊಂದಿರುವ ಕ್ಯಾಲಿಫೋರ್ನಿಯಾ, ಟೆಕ್ಸಾಸ್‌, ಫ್ಲಾರಿಡಾ ರಾಜ್ಯಗಳಲ್ಲಿ ಗೆಲುವು ಎರಡೂ ಪಕ್ಷಗಳಿಗೆ ಅನಿವಾರ್ಯ.

ಅಮೆರಿಕದ ದಕ್ಷಿಣ ಭಾಗದ ರಾಜ್ಯಗಳಲ್ಲಿ ಡೆಮಾಕ್ರಟಿಕ್, ಉತ್ತರ ಭಾಗದ ರಾಜ್ಯಗಳಲ್ಲಿ ರಿಪಬ್ಲಿಕನ್ ಪಕ್ಷಗಳು ಪ್ರಭುತ್ವ ಸಾಧಿಸಿವೆ. ಉಳಿದ 8–10 ರಾಜ್ಯಗಳೇ ಬ್ಯಾಟಲ್‌ಗ್ರೌಂಡ್ ಎನಿಸಿದ್ದು, ಅಧ್ಯಕ್ಷರು ಯಾರಾಗಬೇಕು ಎಂದು ಇಲ್ಲಿನ ಎಲೆಕ್ಟೋರಲ್‌ಗಳು ನಿರ್ಧರಿಸುತ್ತಾರೆ. 

ಈ ರಾಜ್ಯಗಳು ಅಧಿಕ ಸಂಖ್ಯೆಯ ಎಲೆಕ್ಟೋರಲ್‌ಗಳನ್ನು ಹೊಂದಿದ್ದು, ನಿರ್ಣಾಯಕ ಎನಿಸಿವೆ. ಆಯಾ ರಾಜ್ಯಗಳ ಜನಸಂಖ್ಯೆಯ ಆಧಾರದ ಮೇಲೆ ಎಲೆಕ್ಟೋರಲ್‌ಗಳ ಸಂಖ್ಯೆಯನ್ನು ನಿರ್ಧರಿಸಲಾಗಿದೆ. ಹೆಚ್ಚು ಮತದಾರರಿರುವ ರಾಜ್ಯಕ್ಕೆ ಹೆಚ್ಚು ಹಂಚಿಕೆ. ಕ್ಯಾಲಿಫೋರ್ನಿಯಾ 55, ಟೆಕ್ಸಾಸ್ 38, ಫ್ಲಾರಿಡಾ 29, ಅಲಾಸ್ಕಾಗೆ 3 ಎಲೆಕ್ಟೋರಲ್‌ ಹಂಚಿಕೆಯಾಗಿವೆ.

ಪ್ರತೀ ಚುನಾವಣೆಯಲ್ಲಿ ಈ ಎಂಟು ರಾಜ್ಯಗಳಲ್ಲಿ ಜಾಹೀರಾತು ಹಾಗೂ ಚುನಾವಣಾ ಪ್ರಚಾರಕ್ಕೆಂದು ಲಕ್ಷಾಂತರ ಡಾಲರ್‌ಗಳಷ್ಟು ಹಣವನ್ನು ಸುರಿಯಲಾಗುತ್ತದೆ. ಎರಡೂ ಪಕ್ಷಗಳು ಎಲ್ಲಿ ತಪ್ಪಿದರೂ ಈ ರಾಜ್ಯಗಳನ್ನು ಮಾತ್ರ ಕಡೆಗಣಿಸುವುದಿಲ್ಲ. ವಿಶೇಷವೆಂದರೆ, ಇಲ್ಲಿನ ಅಭ್ಯರ್ಥಿಗಳು ಯಾರು ಎಂಬುದರ ಮೇಲೆ ಫಲಿತಾಂಶ ನಿರ್ಧಾರವಾಗುತ್ತದೆಯೇ ವಿನಃ ಅಧ್ಯಕ್ಷ ಹುದ್ದೆಗೆ ಯಾರು ಸ್ಪರ್ಧಿಸಿದ್ದಾರೆ ಎಂಬುದರ ಮೇಲೆ ಅಲ್ಲ. ಎರಡೂ ಪಕ್ಷಗಳಿಗೆ ಗೆಲುವಿನ ಸಾಧ್ಯತೆ ಇರುತ್ತದೆ. ಯಾರೇ ಇಲ್ಲಿ ಗೆದ್ದರೂ, ಗೆಲುವಿನ ಅಂತರ ಶೇ 5ಕ್ಕಿಂತ ಕಡಿಮೆ ಇರುತ್ತದೆ ಎಂಬುದು ವಿಶ್ಲೇಷಕರ ಮಾತು.

ಬದಲಾಗದ ಚುನಾವಣಾ ಕ್ಯಾಲೆಂಡರ್‌

ಅಮೆರಿಕದ ಅಧ್ಯಕ್ಷರ ಅಧಿಕಾರಾವಧಿ ನಾಲ್ಕು ವರ್ಷ. ಪ್ರತಿ ನಾಲ್ಕನೇ ವರ್ಷದ ನವೆಂಬರ್‌ನಲ್ಲಿ ಚುನಾವಣೆ ನಡೆಯುತ್ತದೆ. ನಂತರದ ಜನವರಿಯಲ್ಲಿ ನೂತನ ಅಧ್ಯಕ್ಷರು ಅಧಿಕಾರ ಸ್ವೀಕರಿಸುತ್ತಾರೆ. ಆದರೆ ಚುನಾವಣೆಗೆ ಇನ್ನೂ ಒಂದು ವರ್ಷ ಬಾಕಿ ಇರುವಾಗಲೇ ಚುನಾವಣಾ ಪ್ರಕ್ರಿಯೆ ಆರಂಭವಾಗುತ್ತದೆ. ಸುಮಾರು 130 ವರ್ಷಗಳಿಂದ ಇದೇ ವೇಳಾಪಟ್ಟಿಯನ್ನು ಪಾಲಿಸಿಕೊಂಡು ಬರಲಾಗುತ್ತಿದೆ.

* ಚುನಾವಣೆಗೆ ಇನ್ನೂ ಒಂದು ವರ್ಷ ಇರುವಂತೆಯೇ ಎರಡೂ ಪಕ್ಷದವರು ಅಧ್ಯಕ್ಷೀಯ ಅಭ್ಯರ್ಥಿಯಾಗಲು ಉಮೇದುವಾರಿಕೆಯನ್ನು ಘೋಷಿಸುತ್ತಾರೆ

* ಜನವರಿಯಿಂದ ಜೂನ್‌: ಪಕ್ಷಗಳು ತಮ್ಮ ಅಭ್ಯರ್ಥಿಗಳನ್ನು ಆಯ್ಕೆ ಮಾಡುವ ಸಲುವಾಗಿ ಎಲ್ಲಾ ರಾಜ್ಯಗಳಲ್ಲೂ ಚರ್ಚೆ, ಸಂವಾದ ನಡೆಸುತ್ತವೆ

* ಸೆಪ್ಟೆಂಬರ್ ಎರಡನೇ ವಾರದವರೆಗೂ ಪ್ರಾಥಮಿಕ ಮತದಾನ

* ಎಲ್ಲಾ ರಾಜ್ಯಗಳಲ್ಲಿ ನಡೆದ ಪ್ರಾಥಮಿಕ ಮತದಾನದಲ್ಲಿ ಹೆಚ್ಚು ಮತಗಳಿಸಿದ ವ್ಯಕ್ತಿ ಪಕ್ಷದ ಅಭ್ಯರ್ಥಿಯಾಗಿ ಆಯ್ಕೆಯಾಗುತ್ತಾರೆ

* ಆಯ್ಕೆಯಾದ ಅಭ್ಯರ್ಥಿ ತಮ್ಮ ಪಕ್ಷದ ಮತ್ತೊಬ್ಬರನ್ನು ಉಪಾಧ್ಯಕ್ಷ ಹುದ್ದೆಗೆ ಅಭ್ಯರ್ಥಿಯಾಗಿ ಆಯ್ಕೆ ಮಾಡುತ್ತಾರೆ

* ಸೆಪ್ಟೆಂಬರ್‌ ಮತ್ತು ನವೆಂಬರ್‌: ಎರಡೂ ಪಕ್ಷಗಳ ಅಭ್ಯರ್ಥಿಗಳು ಮುಖಾಮುಖಿಯಾಗಿ ಟಿ.ವಿ ಚರ್ಚೆಗಳನ್ನು ನಡೆಸುತ್ತಾರೆ

* ನವೆಂಬರ್‌ನ ಮೊದಲ ಸೋಮವಾರದ ನಂತರದ ಮೊದಲ ಮಂಗಳವಾರ ಮತದಾನ

* ಡಿಸೆಂಬರ್‌ನಲ್ಲಿ ಎಲೆಕ್ಟೋರಲ್‌ಗಳಿಂದ ಮತ ಚಲಾವಣೆ

* ಜನವರಿ ಮೊದಲ ವಾರದಲ್ಲಿ ಎಲೆಕ್ಟೋರಲ್‌ ಮತಗಳ ಎಣಿಕೆ

* ಜನವರಿ 20ರಂದು ನೂತನ ಅಧ್ಯಕ್ಷರ ಅಧಿಕಾರ ಸ್ವೀಕಾರ. ಜನವರಿ 20 ಭಾನುವಾರವಾಗಿದ್ದರೆ 21ರಂದು ಅಧಿಕಾರ ಸ್ವೀಕಾರ

ಎರಡು ಪಕ್ಷಗಳು ಜನಪ್ರಿಯ

ಅಮೆರಿಕದಲ್ಲಿ ದ್ವಿಪಕ್ಷ ಪದ್ಧತಿಯೇನೂ ಇಲ್ಲ. ಆದರೆ ಎರಡು ಪಕ್ಷಗಳು ಮಾತ್ರ ಜನಪ್ರಿಯವಾಗಿವೆ. ಡೆಮಾಕ್ರಟಿಕ್ ಹಾಗೂ ರಿಪಬ್ಲಿಕನ್ ಪಕ್ಷಗಳೇ ಜನರ ಮುಖ್ಯ ಆಕರ್ಷಣೆ. ಡೆಮಾಕ್ರಟಿಕ್ ಪಕ್ಷದವರನ್ನು ಉದಾರವಾದಿಗಳು ಹಾಗೂ ಎಡ–ಮಧ್ಯಮಮಾರ್ಗದವರು ಎಂದು ಗುರುತಿಸಲಾಗುತ್ತದೆ. ರಿಪಬ್ಲಿಕನ್ನರನ್ನು ಸಂಪ್ರದಾಯವಾದಿಗಳು ಹಾಗೂ ಬಲ–ಮಧ್ಯಮಮಾರ್ಗದವರು ಎಂದು ಕರೆಯಲಾಗುತ್ತದೆ. ಬಹುಪಾಲು ಅಮೆರಿಕನ್ ಮತದಾರರು ತಮ್ಮ ತಮ್ಮ ಸಿದ್ಧಾಂತಕ್ಕೆ ಒಪ್ಪುವ ಪಕ್ಷಗಳನ್ನು ಆಯ್ಕೆ ಮಾಡಿಕೊಂಡಿರುವ ಕಾರಣ, ಎರಡೇ ಪಕ್ಷಗಳು ಜನಪ್ರಿಯವಾಗಿ ಉಳಿದಿವೆ.

1792ರಲ್ಲಿ ಡೆಮಾಕ್ರಟಿಕ್ ಪಕ್ಷ ಹಾಗೂ 1854ರಲ್ಲಿ ರಿಪಬ್ಲಿಕನ್ ಪಕ್ಷ ಸ್ಥಾಪನೆಯಾದವು. ನೂರಾರು ವರ್ಷಗಳಿಂದ ತಮ್ಮ ಅಸ್ತಿತ್ವ ಉಳಿಸಿಕೊಂಡಿರುವ ಕಾರಣ, ಇವುಗಳತ್ತ ಜನರ ಒಲವೂ ಹೆಚ್ಚಿದೆ. ಲಿಬರ್ಟೇರಿಯನ್, ಗ್ರೀನ್ ಪಕ್ಷಗಳು ಇದ್ದರೂ ಅಭ್ಯರ್ಥಿಗಳನ್ನು  ಕಣಕ್ಕಿಳಿಸುವುದು ಕಡಿಮೆ. ಸ್ವತಂತ್ರವಾಗಿ ಸ್ಪರ್ಧಿಸುವ ಅವಕಾಶವೂ ಇದೆ. ಅಮೆರಿಕದ ಇತಿಹಾಸದಲ್ಲಿ ಈ ಎರಡೂ ಪಕ್ಷಗಳನ್ನು ಹೊರತುಪಡಿಸಿ ಬೇರಾವ ಪಕ್ಷದ ಅಭ್ಯರ್ಥಿಯೂ ಅಧ್ಯಕ್ಷರಾಗಿ ಆಯ್ಕೆಯಾಗಿಲ್ಲ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು