ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Explainer | ಅರ್ಥವ್ಯವಸ್ಥೆಗೆ ಆಪತ್ತು ಉದ್ಯೋಗಕ್ಕೂ ಕುತ್ತು!

ಕರ್ನಾಟಕದಲ್ಲೂ ಕೋವಿಡ್‌–19 ಕಂಟಕ
Last Updated 16 ಮಾರ್ಚ್ 2020, 20:02 IST
ಅಕ್ಷರ ಗಾತ್ರ
ADVERTISEMENT
""
""
""
""

ಕೋವಿಡ್‌–19 ಭೀತಿಯಿಂದಾಗಿ ರಾಜ್ಯದಲ್ಲಿ ಕೆಲವು ನಿರ್ಬಂಧಗಳನ್ನು ಹೇರಿರುವುದರಿಂದ ವಿವಿಧ ಕ್ಷೇತ್ರಗಳ ಮೇಲೆ ಆರ್ಥಿಕವಾಗಿ ಭಾರಿ ಪರಿಣಾಮ ಉಂಟಾಗಿದೆ. ವ್ಯಾಪಾರ–ವಹಿವಾಟು ಸ್ತಬ್ಧಗೊಂಡಂತಾಗಿ, ಸಾವಿರಾರು ಕೋಟಿ ರೂಪಾಯಿ ನಷ್ಟವಾಗಿದೆ. ಪರಿಣಾಮ, ಲಕ್ಷಾಂತರ ಜನರ ಉದ್ಯೋಗಕ್ಕೂ ಕುತ್ತು ಬಂದಿದೆ.

ವ್ಯಾಪಾರ ವಹಿವಾಟಿನ ಮೇಲೆ ಕೇವಲ ಒಂದು ವಾರ ನಿರ್ಬಂಧ ವಿಧಿಸಿದರೆ ಜಿಎಸ್‌ಟಿ, ಮಾರಾಟ ತೆರಿಗೆ ಮುಂತಾದ ರೂಪಗಳಿಂದ ಬರುವ ಆದಾಯದಲ್ಲಿ ಕನಿಷ್ಠ ₹ 2000 ಕೋಟಿ ಖೋತಾ ಆಗಲಿದೆ ಎಂದು ವಾಣಿಜ್ಯೋದ್ಯಮ ಸಂಸ್ಥೆಯ ಪದಾಧಿಕಾರಿಗಳು ಹೇಳುತ್ತಾರೆ.

*ದೆಹಲಿ ಬಿಟ್ಟರೆ ದೇಶದಲ್ಲಿ ಅತಿ ಹೆಚ್ಚು ಮಾಲ್‌ಗಳಿರುವ ನಗರ ಬೆಂಗಳೂರು. ನಗರದಲ್ಲಿ 40ಕ್ಕೂ ಹೆಚ್ಚು ಮಾಲ್‌ಗಳಿವೆ. ಅವುಗಳೊಳಗೆ ಸಾವಿರಾರು ಅಂಗಡಿಗಳು, 38 ಮಲ್ಟಿಪ್ಲೆಕ್ಸ್‌ಗಳಿವೆ. ಮಾಲ್‌ಗಳನ್ನು ಮುಚ್ಚಿದ್ದರಿಂದ ಇಲ್ಲಿ ವ್ಯಾಪಾರ ವಹಿವಾಟು ಸ್ತಬ್ಧಗೊಂಡಿದೆ, ಕಾರ್ಮಿಕರು ಅತಂತ್ರರಾಗಿದ್ದಾರೆ

*ದೇಶದ ಪ್ರಮುಖ ಐಟಿ ಕೇಂದ್ರಗಳಲ್ಲಿ ಬೆಂಗಳೂರು ಒಂದು. ಐಟಿ ಉದ್ಯಮವು ರಾಜ್ಯದ ಜಿಡಿಪಿಗೆ ಶೇ 25ರಷ್ಟು ಕಾಣಿಕೆ ನೀಡುತ್ತಿದೆ. ದೇಶದ ಒಟ್ಟಾರೆ ಸಾಫ್ಟ್‌ವೇರ್‌ ರಫ್ತಿನ ಶೇ 40ರಷ್ಟು ಬೆಂಗಳೂರಿನಿಂದಾಗುತ್ತದೆ. ನಿರ್ಬಂಧವು ಈ ಕ್ಷೇತ್ರದ ಮೇಲೆ ದೀರ್ಘಾವಧಿಯ ಪರಿಣಾಮ ಬೀರಲಿದೆ

*ಸರಬರಾಜು ವ್ಯವಸ್ಥೆ ಏರುಪೇರಾಗಿರುವುದರಿಂದ ದೇಶದ ಅತಿ ದೊಡ್ಡ ಕೈಗಾರಿಕಾ ವಲಯಗಳಲ್ಲಿ ಒಂದಾದ ಪೀಣ್ಯ ಕೈಗಾರಿಕಾ ವಲಯದಲ್ಲಿ ಕಳೆದ 45 ದಿನಗಳಲ್ಲಿ ತಯಾರಿಕಾ ಪ್ರಮಾಣದಲ್ಲಿ ಶೇ 30ರಷ್ಟು ಕುಸಿತ ಉಂಟಾಗಿದೆ. ಇಲ್ಲಿನ ಶೇ 20ರಷ್ಟು ಕಂಪನಿಗಳು ಬಿಡಿ ಭಾಗಗಳಿಗಾಗಿ ಚೀನಾವನ್ನು ಆಶ್ರಯಿಸಿವೆ.

ಹೋಟೆಲ್‌, ಆತಿಥ್ಯ ಉದ್ಯಮಕ್ಕೂ ನಷ್ಟ

ಕೊರೊನಾ ವೈರಸ್‌ ಭೀತಿಯಿಂದ ನಷ್ಟ ಅನುಭವಿಸುತ್ತಿರುವ ವಲಯಗಳಲ್ಲಿ ಹೋಟೆಲ್‌ ಉದ್ಯಮವೂ ಒಂದಾಗಿದೆ. ‘ಐಷಾರಾಮಿ ಹೋಟೆಲ್‌ಗಳ ಅತಿಥಿಗಳಲ್ಲಿ ಶೇ 65ರಷ್ಟು ಮಂದಿ ವಿದೇಶಿಯರೇ ಇರುತ್ತಾರೆ. ಅವರೀಗ ಪ್ರವಾಸವನ್ನು ರದ್ದುಗೊಳಿಸಿರುವ ಕಾರಣ ಉದ್ಯಮಕ್ಕೆ ತೀವ್ರ ಪೆಟ್ಟು ಬಿದ್ದಿರುವುದು ನಿಜ’ ಎನ್ನುತ್ತಾರೆ ಜೆಎಲ್‌ಎಲ್‌ ಹೋಟೆಲ್ಸ್‌ ಅಂಡ್‌ ಹಾಸ್ಪಿಟಾಲಿಟಿ ಗ್ರೂಪ್‌ನ ನಿರ್ದೇಶಕ ಜೈದೀಪ್‌ ಡಾಂಗ್‌.

‘ಐಷಾರಾಮಿ ಹೋಟೆಲ್‌ಗಳ ದರದಲ್ಲಿ ಭಾರಿ ಪ್ರಮಾಣದ ಇಳಿಕೆಯಾಗುವ ಸಂಭವವಿದೆ. ಉದ್ಯಮ ಸಂಪೂರ್ಣ ಚೇತರಿಸಿಕೊಳ್ಳಲು ಸಾಕಷ್ಟು ಕಾಲಾವಕಾಶ ಬೇಕು. ಮಧ್ಯಮ ಗಾತ್ರದ ಹೋಟೆಲ್‌ಗಳು ಸಹ ಸದ್ಯ ದೇಶೀ ಅತಿಥಿಗಳು ಪ್ರವಾಸಕ್ಕೆ ಹಿಂದೇಟು ಹಾಕುತ್ತಿರುವ ಪರಿಣಾಮ ಅವುಗಳ ಸಾಮರ್ಥ್ಯದಷ್ಟು ವಹಿವಾಟು ನಡೆಸುತ್ತಿಲ್ಲ’ ಎಂದು ಹೇಳುತ್ತಾರೆ.

‘ಹೋಟೆಲ್‌ಗೆ ಊಟ–ತಿಂಡಿಗಾಗಿ ಬರುವವರ ಸಂಖ್ಯೆಯಲ್ಲೂ ಭಾರಿ ಇಳಿಕೆಯಾಗಿದೆ. ವಾರಾಂತ್ಯದಲ್ಲಿ ಹೋಟೆಲ್‌ಗಳು ಕಿಕ್ಕಿರಿದು ತುಂಬಿರುತ್ತಿದ್ದವು. ಆದರೆ, ಈ ವಾರಾಂತ್ಯದಲ್ಲಿ ಗ್ರಾಹಕರ ಸಂಖ್ಯೆ ತುಂಬಾ ಕಡಿಮೆ ಪ್ರಮಾಣದಲ್ಲಿತ್ತು’ ಎಂದು ಬೃಹತ್‌ ಬೆಂಗಳೂರು ಹೋಟೆಲ್‌ ಉದ್ಯಮಿಗಳ ಸಂಘದ ಪದಾಧಿಕಾರಿಗಳು ವಿವರಿಸುತ್ತಾರೆ.

ಪ್ರಯಾಣಿಕರ ಸಂಖ್ಯೆಯಲ್ಲಿ ಇಳಿಕೆ

ಕೆಎಸ್‌ಆರ್‌ಟಿಸಿ ಬಸ್‌ ಪ್ರಯಾಣಿಕರ ಸಂಖ್ಯೆ ಗಣನೀಯವಾಗಿ ಕಡಿಮೆ ಯಾಗಿದ್ದು, ಕಳೆದ 15 ದಿನಗಳ ಸಂಸ್ಥೆಯ ವರಮಾನದಲ್ಲಿ ₹3.94 ಕೋಟಿ ಖೋತಾ ಆಗಿದೆ.

ಮಾ.15ರಂದು 734, 16ರಂದು 585 ಮಾರ್ಗಗಳಲ್ಲಿ ಬಸ್ ಸಂಚಾರವನ್ನು ಕೆಎಸ್‌ ಆರ್‌ಟಿಸಿ ರದ್ದುಮಾಡಿದ್ದು, ಭಾನುವಾರ ಒಂದೇ ದಿನ ₹1.07 ಕೋಟಿ ವರಮಾನ ಖೋತಾ ಆಗಿದೆ.

ಹವಾನಿಯಂತ್ರಿತ ಐಷಾರಾಮಿ ಬಸ್‌ಗಳನ್ನು ಹತ್ತಲು ಜನ ಹಿಂದೇಟು ಹಾಕುತ್ತಿದ್ದು, ಬಹುತೇಕ ಈ ಬಸ್‌ಗಳ ಮಾರ್ಗವನ್ನೇ ರದ್ದುಪಡಿಸಲಾಗಿದೆ ಎಂದು ಕೆಎಸ್‌ಆರ್‌ಟಿಸಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಮುಂಗಡ ಟಿಕೆಟ್ ಕಾಯ್ದಿರಿಸುವ ಅವತಾರ್ ಕೇಂದ್ರಗಳಲ್ಲಿ ಪ್ರತಿದಿನ ಸರಾಸರಿ 22 ಸಾವಿರದಿಂದ 23 ಸಾವಿರ ಟಿಕೆಟ್‌ ಬುಕ್ಕಿಂಗ್ ಆಗುತ್ತಿತ್ತು. ಕಳೆದ ಒಂದು ವಾರದಿಂದ ಈ ಪ್ರಮಾಣ ಸರಾಸರಿ 12 ಸಾವಿರದಿಂದ 13 ಸಾವಿರಕ್ಕೆ ಕುಸಿದಿದೆ.

‘ಸಂಬಳ ಕಡಿತ ಮಾಡಬೇಡಿ’

ಮಾಲ್‌, ಪಬ್‌, ಚಿತ್ರ ಮಂದಿರಗಳಲ್ಲಿ ಕೆಲಸ ಮಾಡುವ ಬಹುತೇಕ ಕಾರ್ಮಿಕರಿಗೆ ತಿಂಗಳಿಗೆ ₹ 11 ಸಾವಿರ ಸಂಬಳವಿದೆ. ವಾರಗಟ್ಟಲೆ ವಹಿವಾಟು ಬಂದ್‌ ಆಗಿದ್ದರಿಂದ ಮಾಲ್‌, ಪಬ್‌, ಚಿತ್ರ ಮಂದಿರಗಳ ಮಾಲೀಕರು ಕಾರ್ಮಿಕರ ಸಂಬಳದಲ್ಲಿ ಯಾವುದೇ ಕಡಿತ ಮಾಡದಂತೆ ಸೂಚನೆ ನೀಡಬೇಕು ಎಂದು ಕಾರ್ಮಿಕ ಸಂಘಟನೆಗಳು ಸರ್ಕಾರವನ್ನು ಒತ್ತಾಯಿಸಿವೆ.

‘ಕಾರ್ಮಿಕರ ಕಡಿಮೆ ಸಂಬಳದಲ್ಲಿ ಅವರ ಕುಟುಂಬವನ್ನು ನಿರ್ವಹಣೆ ಮಾಡುವುದು ಮೊದಲೇ ಕಷ್ಟ. ಅಂತಹ ಸನ್ನಿವೇಶದಲ್ಲಿ ಬರುವ ಸಂಬಳದಲ್ಲೂ ಕಡಿತಮಾಡಿದರೆ ಅವರ ಹೊಟ್ಟೆಯ ಮೇಲೆ ಬರೆ ಎಳದಂತೆ’ ಎಂದು ಸಂಘಟನೆಗಳು ಅಭಿಪ್ರಾಯಪಟ್ಟಿವೆ.

ನೌಕರರಿಗೆ ರಜೆ ಹಾಕಲು ಒತ್ತಡ

ಬಸ್‌ ಪ್ರಯಾಣಿಕರ ಸಂಖ್ಯೆಯಲ್ಲಿ ತೀವ್ರ ಇಳಿಮುಖ ಆಗಿರುವುದರಿಂದ ಹಲವು ಮಾರ್ಗಗಳಲ್ಲಿ ಸಂಚಾರವನ್ನು ಸ್ಥಗಿತಗೊಳಿಸಿರುವ ಕೆಎಸ್‌ಆರ್‌ಟಿಸಿ ಆಡಳಿತ, ರಜೆ ತೆಗೆದುಕೊಳ್ಳುವಂತೆ ನೌಕರರ ಮೇಲೆ ಒತ್ತಡ ಹೇರುತ್ತಿದೆ ಎಂದು ಕೆಎಸ್‌ಆರ್‌ಟಿಸಿ ನೌಕರರು ಮತ್ತು ಕಾರ್ಮಿಕರ ಒಕ್ಕೂಟ ದೂರಿದೆ.ಕರ್ತವ್ಯಕ್ಕೆ ಹಾಜರಾದ ನೌಕರರನ್ನು ಯಾವುದೇ ಕಾರಣಕ್ಕೂ ರಜೆ ಮೇಲೆ ಕಳುಹಿಸಬಾರದು ಎಂದು ಒಕ್ಕೂಟ ಆಗ್ರಹಿಸಿದೆ.

ಚಿತ್ರರಂಗಕ್ಕೆ ₹ 60 ಕೋಟಿ ನಷ್ಟ

ಚಿತ್ರಮಂದಿರಗಳನ್ನು ಸ್ಥಗಿತಗೊಳಿಸಿರುವ ಕಾರಣ ಕನ್ನಡ ಚಿತ್ರರಂಗಕ್ಕೆ ವಾರದಲ್ಲಿ ₹ 60 ಕೋಟಿಯಷ್ಟು ನಷ್ಟವಾಗಲಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ಟಿಕೆಟ್‌ವೊಂದಕ್ಕೆ ಶೇ 18ರಷ್ಟು ಜಿಎಸ್‌ಟಿ ಪಾವತಿಯಾಗುತ್ತದೆ. ಹಾಗಾಗಿ, ದಿನವೊಂದಕ್ಕೆ ಸರ್ಕಾರಗಳ ಬೊಕ್ಕಸಕ್ಕೆ ₹ 15 ಲಕ್ಷಕ್ಕೂ ಹೆಚ್ಚು ತೆರಿಗೆ ಖೋತಾ ಆಗಲಿದೆ. ಥಿಯೇಟರ್‌ವೊಂದಕ್ಕೆ ₹ 60 ಸಾವಿರದಿಂದ ₹ 1 ಲಕ್ಷದವರೆಗೆ ನಷ್ಟವಾಗಲಿದೆ.

ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ಕಲಾವಿದರು, ನಿರ್ಮಾಪಕರು, ನಿರ್ದೇಶಕರು ಸೇರಿದಂತೆ ವಿವಿಧ ವಿಭಾಗಗಳಲ್ಲಿ ದುಡಿಯುವ ಎರಡು ಸಾವಿರಕ್ಕೂ ಹೆಚ್ಚು ತಂತ್ರಜ್ಞರು ಸದಸ್ಯತ್ವ ಪಡೆದಿದ್ದಾರೆ. ರಾಜ್ಯದಲ್ಲಿ 650ಕ್ಕೂ ಹೆಚ್ಚು ಚಿತ್ರಮಂದಿರಗಳಿವೆ. ಇಲ್ಲಿ 13 ಸಾವಿರಕ್ಕೂ ಹೆಚ್ಚು ಕಾರ್ಮಿಕರು ದುಡಿಯುತ್ತಿದ್ದಾರೆ. ಎಲ್ಲರ ಕೆಲಸದ ಮೇಲೂ ಕೋವಿಡ್‌ ಪರಿಣಾಮ ಬೀರಿದೆ.

ಶೂಟಿಂಗ್‌ ಸ್ಥಗಿತಗೊಳಿಸಿದ ಚಿತ್ರಗಳು

ಪುನೀತ್‌ ರಾಜ್‌ಕುಮಾರ್‌ ನಟನೆಯ ‘ಯುವರತ್ನ’, ಗಣೇಶ್‌ ನಾಯಕರಾಗಿರುವ ‘ಗಾಳಿಪಟ 2’, ರಕ್ಷಿತ್‌ ಶೆಟ್ಟಿ ನಟನೆಯ ‘777 ಚಾರ್ಲಿ’, ಧ್ರುವ ಸರ್ಜಾ ನಟನೆಯ ‘ಪೊಗರು’, ಉಪೇಂದ್ರ ನಟನೆಯ ‘ಕಬ್ಜ’ ಸಿನಿಮಾದ ಚಿತ್ರೀಕರಣ ಮುಂದೂಡಲಾಗಿದೆ. ಈಗಾಗಲೇ, ಬಿಡುಗಡೆಯಾಗಿರುವ ‘ಶಿವಾರ್ಜುನ’, ‘5 ಅಡಿ 7 ಅಂಗುಲ’,‘ಅಂಬಾನಿ ಪುತ್ರ’, ‘ನರಗುಂದ ಬಂಡಾಯ’ ಸಿನಿಮಾಗಳ ಪ್ರದರ್ಶನ ರದ್ದಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT