ಬುಧವಾರ, ಆಗಸ್ಟ್ 17, 2022
23 °C

ಆಳ–ಅಗಲ: ಪಂಜಾಬ್‌, ರಾಜಸ್ಥಾನ ಒಳಜಗಳವೇ ಪ‍್ರಧಾನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ರಾಜಸ್ಥಾನ ಕಾಂಗ್ರೆಸ್‌ ಘಟಕದಲ್ಲಿ ತೀವ್ರ ಸ್ವರೂಪದ ಭಿನ್ನಮತೀಯ ಚಟುವಟಿಕೆಗಳು ನಡೆದು ಒಂದು ವರ್ಷ ಕಳೆಯುವಷ್ಟರಲ್ಲಿ ಮತ್ತೊಂದು ಸುತ್ತಿನ ಬಂಡಾಯ ಪರ್ವ ಶುರುವಾಗುವ ಎಲ್ಲ ಲಕ್ಷಣಗಳು ಗೋಚರಿಸುತ್ತಿವೆ. ಕಳೆದ ಬಾರಿ ಪಕ್ಷದ ಮೇಲೆ ಮುನಿಸಿಕೊಂಡು ಶಾಸಕರನ್ನು ಕರೆದೊಯ್ದಿದ್ದ ಹಿರಿಯ ಮುಖಂಡ ಸಚಿನ್ ಪೈಲಟ್ ಅವರನ್ನು ಸಮಾಧಾನಪಡಿಸಲಾಗಿತ್ತು. ಇದೀಗ ಅದೇ ಬಣ ಮತ್ತೆ ಭಿನ್ನಮತದ ಹಾದಿ ತುಳಿಯುವ ಸಾಧ್ಯತೆಯಿದೆ ಎನ್ನಲಾಗಿದೆ.

ರಾಜ್ಯ ಸಚಿವ ಸಂಪುಟ ಪುನರ್‌ರಚನೆ ಸದ್ಯದಲ್ಲೇ ನಡೆಯಲಿದೆ. ಖಾಲಿ ಇರುವ 9 ಸ್ಥಾನಗಳ ಮೇಲೆ ಸುಮಾರು 25 ಶಾಸಕರು ಕಣ್ಣಿಟ್ಟಿದ್ದಾರೆ. ಇದರಲ್ಲಿ ಸಚಿನ್ ಪೈಲಟ್ ಬಣ ಮೇಲುಗೈ ಸಾಧಿಸಲು ಹವಣಿಸುತ್ತಿದೆ. ಸಂಪುಟ ವಿಸ್ತರಣೆ ಕುರಿತು ಪ್ರಿಯಾಂಕಾ ಗಾಂಧಿ ಅವರ ಭೇಟಿಗೆ ಪೈಲಟ್ ದಿನ ನಿಗದಿ ಮಾಡಿದ್ದಾರೆ. ಹಿಂದಿನ ವರ್ಷ ಮುನಿಸಿಕೊಂಡಾಗ ಅದಕ್ಕೆ ಮುಲಾಮು ಹಚ್ಚಿದ್ದ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಈಗಿನ ಪರಿಸ್ಥಿತಿಯನ್ನು ಖುದ್ದಾಗಿ ಗಮನಿಸುತ್ತಿದ್ದಾರೆ. ಜಿತಿನ್ ಪ್ರಸಾದ ಅವರು ಕಳೆದ ವಾರ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ್ದರು. ಸಚಿನ್ ಪೈಲಟ್ ಕೂಡ ಅವರ ಹಾದಿ ಹಿಡಿಯುತ್ತಾರಾ ಎಂಬ ಸಂಶಯ ಮೂಡಿದೆ. 

2020ರಲ್ಲಿ ಉಂಟಾಗಿದ್ದ ಸಂಘರ್ಷದ ಬಗ್ಗೆ ವರದಿ ನೀಡಲು ಮೂವರು ಸದಸ್ಯರ ಸಮಿತಿಯನ್ನು ಹೈಕಮಾಂಡ್ ರಚಿಸಿತ್ತು. ಅಹ್ಮದ್ ಪಟೇಲ್, ಕೆ.ಸಿ. ವೇಣುಗೋಪಾಲ್, ಅಜಯ್ ಮಾಕನ್ ಅವರು ಸಮಿತಿಯಲ್ಲಿದ್ದರು. ಪಟೇಲ್ ನಿಧನಾನಂತರ ಅವರ ಸ್ಥಾನಕ್ಕೆ ಹೊಸಬರನ್ನು ಇನ್ನೂ ನೇಮಿಸಿಲ್ಲ. ಹೀಗಾಗಿ ವರ್ಷ ಕಳೆಯುತ್ತಾ ಬಂದರೂ ವರದಿ ಪೂರ್ಣಗೊಂಡಿಲ್ಲ. ಈ ಬಗ್ಗೆ ಉಪಮುಖ್ಯಮಂತ್ರಿಯೂ ಆಗಿದ್ದ ಪೈಲಟ್ ಅವರಿಗೆ ಬೇಸರವಿದೆ ಎನ್ನಲಾಗಿದೆ. ಇಷ್ಟು ದಿನ ಕಳೆದರೂ ತಮ್ಮ ಬೇಡಿಕೆಗಳು ಹಾಗೆಯೇ ಉಳಿದಿವೆ ಎಂಬುದು ಅವರ ಆಕ್ರೋಶ.

ಪತ್ರಿಕೆಯೊಂದಕ್ಕೆ ಸಂದರ್ಶನ ನೀಡಿರುವ ಅವರು, ‘10 ತಿಂಗಳ ಹಿಂದೆ ನೀಡಿದ್ದ ಭರವಸೆಗಳು ಏನಾದವು’ ಎಂದು ಅವರು ಹೈಕಮಾಂಡ್‌ ಅನ್ನು ಪ್ರಶ್ನಿಸಿದ್ದಾರೆ. ‘ಸಂಧಾನ ಸಮಿತಿಯು ತ್ವರಿತವಾಗಿ ಕ್ರಮ ತೆಗೆದುಕೊಳ್ಳುತ್ತದೆ ಎಂದು ನನಗೆ ಭರವಸೆ ನೀಡಲಾಗಿತ್ತು. ಆದರೆ ಅವಧಿ ಮುಗಿದರೂ ಆ ಸಮಸ್ಯೆಗಳು ಇನ್ನೂ ಬಗೆಹರಿದಿಲ್ಲ. ಪಕ್ಷವನ್ನು ಅಧಿಕಾರಕ್ಕೆ ತರಲು ಹಗಲು ರಾತ್ರಿ ದುಡಿದ ಕಾರ್ಯಕರ್ತರ ಮಾತುಗಳನ್ನು ಕೇಳಿಸಿಕೊಳ್ಳದಿರುವುದು ದುರದೃಷ್ಟಕರ’ ಎಂದು ಪೈಲಟ್ ಹೇಳಿದ್ದಾರೆ.

ಸಮಿತಿಯು ಕಳೆದ ಆರು ತಿಂಗಳಿನಿಂದ ಏನನ್ನೂ ಮಾಡಿಲ್ಲ. ರಾಜಸ್ಥಾನದಿಂದ ರಾಜ್ಯಸಭೆಗೆ ಆಯ್ಕೆಯಾಗಿರುವ ವೇಣುಗೋಪಾಲ್ ಅವರು ಕಳೆದ ಆರು ತಿಂಗಳಿನಿಂದ ರಾಜ್ಯದತ್ತ ಸುಳಿದಿಲ್ಲ. ಹೀಗಾಗಿ 10 ತಿಂಗಳಿನಿಂದ ಬೇಡಿಕೆಗಳು ಈಡೇರಿಲ್ಲ ಎಂಬುದು ಪೈಲಟ್ ಬಣದ ವಾದ.

ರಾಜ್ಯ ಕಾಂಗ್ರೆಸ್‌ನಲ್ಲಿ ದಿನಕ್ಕೊಂದು ಬೆಳವಣಿಗೆ ಸಂಭವಿಸುತ್ತಿವೆ. ಪೈಲಟ್ ಆಪ್ತರಾದ ಹೇಮಾರಾಮ್ ಚೌಧರಿ ಅವರು ಮೇ 18ರಂದು ರಾಜೀನಾಮೆ ನೀಡಿದ್ದಾರೆ. ಅಭಿವೃದ್ಧಿ ಕಾರ್ಯಗಳನ್ನು ನಿರ್ಲಕ್ಷಿಸಲಾಗುತ್ತಿದೆ ಎಂಬ ಕಾರಣ ನೀಡಿದ್ದಾರೆ. ಎರಡು ದಿನಗಳ ಹಿಂದೆ, ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರನ್ನು ಹೊಗಳಿದ್ದ ಶಾಸಕ ಪಿ.ಆರ್. ಮೀನಾ ಅವರು ತಾವು ಪೈಲಟ್ ಜೊತೆ ಇರುವುದಾಗಿ ಸ್ಪಷ್ಟನೆ ನೀಡಿದ್ದರು.

ಗೆಹ್ಲೋಟ್‌ಗೆ ಅಗ್ನಿಪರೀಕ್ಷೆ

ಸಂಪುಟ ವಿಸ್ತರಣೆ ಎಂಬ ಅಗ್ನಿಪರೀಕ್ಷೆಯು ಮುಖ್ಯಮಂತ್ರಿ ಅಶೋಕ್‌ ಗೆಹ್ಲೋಟ್‌ ಅವರ ರಾಜಕೀಯ ಭವಿಷ್ಯವನ್ನು ನಿರ್ಧರಿಸಲಿದೆ ಎಂದು ವಿಶ್ಲೇಷಕರು ಹೇಳುತ್ತಾರೆ. ಇದಕ್ಕಾಗಿ ಅವರು ತಮ್ಮ ರಾಜಕೀಯ ಮುತ್ಸದ್ದಿತನ ಬಳಸಿಕೊಳ್ಳಬೇಕಿದೆ. ಪೈಲಟ್ ಸೇರಿದಂತೆ ಪಕ್ಷದ ಮುಖಂಡರು, ಕಾರ್ಯಕರ್ತರನ್ನು ಸಮಾಧಾನಪಡಿಸುವ ತಂತ್ರ ಹೂಡಬೇಕಿದೆ. ತಮ್ಮ ಬೆಂಬಲಿಗರ ಜೊತೆಗೆ ಪೈಲಟ್ ಬಣದವರಿಗೂ ಸಂಪುಟದಲ್ಲಿ ಅರ್ಹ ಸ್ಥಾನಗಳನ್ನು ನೀಡಬೇಕಿದೆ.

ಆದರೆ ಬಿಎಸ್‌ಪಿ ತೊರೆದು ಕಾಂಗ್ರೆಸ್ ಸೇರಿರುವ ಆರು ಶಾಸಕರು ಸಚಿವ ಸ್ಥಾನದ ಮೇಲೆ ಕಣ್ಣಿಟ್ಟಿದ್ಧಾರೆ. ಇತ್ತ ಪೈಲಟ್ ಬಣ ಮೇಲುಗೈ ಸಾಧಿಸಬಹುದು ಎಂಬ ಕಾರಣಕ್ಕೆ ಈ ಶಾಸಕರು ಗೆಹ್ಲೋಟ್ ಮೇಲೆ ಒತ್ತಡ ತಂತ್ರ ಶುರು ಮಾಡಿದ್ದಾರೆ. ತಾವು ಕಾಂಗ್ರೆಸ್ ಸೇರಿ ಬೆಂಬಲ ಸೂಚಿಸಿದ್ದರಿಂದಲೇ ಇಂದು ಗೆಹ್ಲೋಟ್ ಮುಖ್ಯಮಂತ್ರಿ ಹುದ್ದೆಯಲ್ಲಿ ಮುಂದುವರಿದಿದ್ದಾರೆ ಎಂದು ಶಾಸಕ ರಾಜೇಂದ್ರ ಗುಡಾ ಎಚ್ಚರಿಸಿದ್ದಾರೆ. ಗೆಹ್ಲೋಟ್ ಅವರು ಎಲ್ಲವನ್ನೂ ಸರಿದೂಗಿಸಿಕೊಂಡು, ಪಕ್ಷದ ವರ್ಚಸ್ಸನ್ನು ಉಳಿಸಿಕೊಂಡು, ಬಂಡಾಯಗಾರರನ್ನೂ ಮನವೊಲಿಸಿ ತಮ್ಮ ಕುರ್ಚಿಯನ್ನು ಭದ್ರಪಡಿಸಿಕೊಳ್ಳುವ ಸಂದಿಗ್ಧ ಪರಿಸ್ಥಿತಿಯಲ್ಲಿ ಸಿಲುಕಿಕೊಂಡಿದ್ದಾರೆ.

ಪಂಜಾಬ್‌: ಕಾಂಗ್ರೆಸ್‌ಗೆ ನೂರು ಚಿಂತೆ

ವಿಧಾನಸಭಾ ಚುನಾವಣೆಗೆ ಸಿದ್ಧತೆ ಮಾಡಿಕೊಳ್ಳುತ್ತಿರುವ ಪಂಜಾಬ್‌ನಲ್ಲಿ ಬಿಜೆಪಿಗೆ ಒಂದು ಚಿಂತೆಯಾದರೆ ಆಡಳಿತಾರೂಢ ಕಾಂಗ್ರೆಸ್‌ಗೆ ಹತ್ತು ಚಿಂತೆ ಎಂಬಂತಾಗಿದೆ.

ಕೃಷಿ ಕಾನೂನುಗಳನ್ನು ವಿರೋಧಿಸಿ ದೆಹಲಿ ಗಡಿಯಲ್ಲಿ ಆರು ತಿಂಗಳಿಗೂ ಹೆಚ್ಚು ಕಾಲದಿಂದ ನಡೆಯುತ್ತಿರುವ ರೈತರ ಪ್ರತಿಭಟನೆಯು ಬಿಜೆಪಿಯ ಚಿಂತೆಗೆ ಕಾರಣವಾಗಿದೆ. ಪಂಜಾಬ್‌ನಲ್ಲಿ ಬಿಜೆಪಿಗೆ ಗಟ್ಟಿ ಅಡಿಪಾಯವೇನೂ ಇಲ್ಲ. ಶಿರೋಮಣಿ ಅಕಾಲಿದಳದ ಜತೆಗಿನ ಮೈತ್ರಿಯಿಂದ ಅಲ್ಲಿ ಅಸ್ತಿತ್ವ ಉಳಿಸಿಕೊಳ್ಳಲು ಸಾಧ್ಯವಾಗಿದೆ. 

ಇನ್ನೊಂದೆಡೆ, ಕೃಷಿ ಕಾನೂನುಗಳನ್ನು ಹಿಂಪಡೆಯಲು ಕೇಂದ್ರ ನಿರಾಕರಿಸಿದ್ದನ್ನೇ ಕಾರಣವಾಗಿಟ್ಟು ಶಿರೋಮಣಿ ಅಕಾಲಿ ದಳವು ಎನ್‌ಡಿಎಯಿಂದ ಹೊರನಡೆದಿದೆ. ಇದಾದ ಬಳಿಕ ಪಂಜಾಬ್‌ನಲ್ಲಿ ನಡೆದ ಸ್ಥಳೀಯ ಸಂಸ್ಥೆಗಳ ಚುನಾವಣೆಗಳಲ್ಲಿ ಬಿಜೆಪಿಯ ಸಾಧನೆಯು ಕಳಪೆಯಾಗಿತ್ತು. ಆದ್ದರಿಂದ ಬಿಜೆಪಿಗೆ ಪಂಜಾಬ್‌ನಲ್ಲಿ ಹೊಸ ಮಿತ್ರನನ್ನು ಹುಡುಕುವುದು ಅನಿವಾರ್ಯ ಎಂಬಂತಾಗಿದೆ. ಬೇರೆಬೇರೆ ಪಕ್ಷಗಳಲ್ಲಿರುವ ಅತೃಪ್ತ ಪ್ರಭಾವಿ ನಾಯಕರನ್ನು ತನ್ನತ್ತ ಸೆಳೆಯುವ ಕೆಲಸವನ್ನು ಬಿಜೆಪಿ ಈಗಾಗಲೇ ಆರಂಭಿಸಿದೆ ಎಂದು ಮೂಲಗಳು ತಿಳಿಸಿವೆ.

ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್ ಅತ್ಯಂತ ಪ್ರಭಾವಶಾಲಿ ಪಕ್ಷವಾಗಿ ಹೊರಹೊಮ್ಮಿದ್ದರೂ, ಆ ಪಕ್ಷಕ್ಕೂ ಚಿಂತೆಗಳು ಕಡಿಮೆಯಿಲ್ಲ. ಇಲ್ಲಿ ಪ್ರಶ್ನಾತೀತ ನಾಯಕನಂತಿದ್ದ ಮುಖ್ಯಮಂತ್ರಿ ಅಮರಿಂದರ್‌ ಸಿಂಗ್‌ ಅವರ ವಿರುದ್ಧ ಕೆಲವು ಸಚಿವರು ಧ್ವನಿ ಎತ್ತಿರುವುದು ಕಾಂಗ್ರೆಸ್‌ನ ಚಿಂತೆಗೆ ಕಾರಣವಾಗಿದೆ.

ಬಿಜೆಪಿಯಿಂದ ವಲಸೆ ಬಂದು, ಕಾಂಗ್ರೆಸ್‌ ಹೈಕಮಾಂಡ್‌ಗೆ ಆತ್ಮೀಯರೆನಿಸಿಕೊಂಡಿರುವ ನವಜೋತ್‌ಸಿಂಗ್‌ ಸಿಧು ಅವರ ಬಂಡಾಯವೂ ಕಾಂಗ್ರೆಸ್‌ಗೆ ತಲೆನೋವಾಗಿದೆ. ಭಿನ್ನಮತಕ್ಕೆ ತೇಪೆಹಾಕಲು, ಮಲ್ಲಿಕಾರ್ಜುನ ಖರ್ಗೆ ನೇತೃತ್ವದ ಮೂರು ಮಂದಿ ನಾಯಕರ ಸಮಿತಿಯನ್ನು ಹೈಕಮಾಂಡ್‌ ರಚಿಸಿದೆ.

ಈ ಸಮಿತಿಯು ಅಮರಿಂದರ್‌ ಸಿಂಗ್‌ ಸೇರಿದಂತೆ ರಾಜ್ಯದ ಪ್ರಮುಖ ನಾಯಕರನ್ನು ದೆಹಲಿಗೆ ಕರೆಯಿಸಿ ಮಾತುಕತೆ ನಡೆಸಿದೆ. ತನ್ನದೇ ಸಂಪುಟದ ಕೆಲವು ಸಚಿವರೂ ಸೇರಿದಂತೆ ಪ್ರಮುಖ ನಾಯಕರ ವಿರುದ್ಧ ಸಿಂಗ್‌ ಅವರು  ಸುದೀರ್ಘ ಆರೋಪಪಟ್ಟಿಯನ್ನು ಹೈಕಮಾಂಡ್‌ಗೆ ನೀಡಿದ್ದಾರೆ. ಸಚಿವರುಗಳೂ, ಅಮರಿಂದರ್‌ ವಿರುದ್ಧ ಇಂಥ ಪಟ್ಟಿಯನ್ನು ಸಲ್ಲಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಅಮರಿಂದರ್ ವಿರುದ್ಧ ಸಿಧು ಅವರ ಬಂಡಾಯವಂತೂ ಬಹಿರಂಗವಾಗಿ ಪ್ರದರ್ಶನಗೊಂಡಿದೆ. ತಮ್ಮನ್ನು ಉಪಮುಖ್ಯಮಂತ್ರಿ ಮಾಡಬೇಕು ಅಥವಾ ಕಾಂಗ್ರೆಸ್‌ ರಾಜ್ಯ ಘಟಕದ ಮುಖ್ಯಸ್ಥನ ಸ್ಥಾನ ನೀಡಬೇಕು ಎಂಬುದು ಸಿಧು ಅವರ ಬೇಡಿಕೆ. ಇದಕ್ಕೆ ಅಮರಿಂದರ್‌ ಸಿದ್ಧರಿಲ್ಲ.

ಒಟ್ಟಿನಲ್ಲಿ ಈಗ ಎದ್ದಿರುವ ಭಿನ್ನಮತದ ಅಲೆಯನ್ನು ಇಲ್ಲಿಯೇ ಶಮನಗೊಳಿಸಬೇಕಾದ ತುರ್ತು ಕಾಂಗ್ರೆಸ್‌ಗೆ ಇದೆ. ಹಾಗೆ ಆಗಬೇಕಾದರೆ ಸಿಧುಗೆ ನೀಡಿದ್ದ ಪ್ರಾಶಸ್ತ್ಯವನ್ನು ಕಡಿಮೆ ಮಾಡಬೇಕು ಎಂದು ಪಕ್ಷದ ಕೆಲವು ನಾಯಕರು ಹೇಳಿದ್ದಾರೆ. ಅಮರಿಂದರ್‌ ಅವರಂಥ ವರ್ಚಸ್ಸಿನ ಇನ್ನೊಬ್ಬ ನಾಯಕ ರಾಜ್ಯದಲ್ಲಿ ಇಲ್ಲ ಎಂಬುದು ಕಾಂಗ್ರೆಸ್‌ನ ಚಿಂತೆಯನ್ನು ಹೆಚ್ಚಿಸಿದೆ. ಆ ಕಾರಣಕ್ಕೇ ಮಖ್ಯಮಂತ್ರಿಯ ಬದಲಾವಣೆಯ ಪ್ರಶ್ನೆಯೇ ಇಲ್ಲ ಎಂದು ಕಾಂಗ್ರೆಸ್‌ ಸ್ಪಷ್ಟಪಡಿಸಿದೆ. ಇದರಿಂದಾಗಿ ಒಂದಷ್ಟು ನಾಯಕರು ಪಕ್ಷ ತ್ಯಜಿಸುವ ಸಾಧ್ಯತೆ ಇದೆ ಎಂದೂ ಹೇಳಲಾಗುತ್ತಿದೆ. ಅಂಥವರನ್ನು ಬಿಜೆಪಿ ಸೆಳೆದುಕೊಂಡರೆ
ಅಚ್ಚರಿ ಇಲ್ಲ.

‘ಅಪಮಾನಿಸುವುದೇ ಉದ್ದೇಶ’

ಕಾಂಗ್ರೆಸ್‌ ಹೈಕಮಾಂಡ್‌, ಅಮರಿಂದರ್‌ ಅವರನ್ನು ದೆಹಲಿಗೆ ಕರೆಯಿಸಿ ಭಿನ್ನಮತದ ಬಗ್ಗೆ ಸ್ಪಷ್ಟನೆ ಕೇಳಿದ್ದರ ಹಿಂದೆ ಅವರನ್ನು ಅಪಮಾನಿಸುವ ಉದ್ದೇಶವೂ ಇದೆ ಎಂದು ಕೆಲವು ನಾಯಕರು ಹೇಳಿದ್ದಾರೆ.

ಇದಕ್ಕೆ ಕಾರಣವೂ ಇದೆ. ತಮ್ಮನ್ನು ಮುಖ್ಯಮಂತ್ರಿ ಅಭ್ಯರ್ಥಿ ಎಂದು ಘೋಷಿಸದಿದ್ದರೆ ಪಕ್ಷ ವಿಭಜಿಸಿ ಸ್ವತಂತ್ರವಾಗಿ ಸ್ಪರ್ಧಿಸುವುದಾಗಿ 2017ರ ಚುನಾವಣೆಯ ಸಂದರ್ಭದಲ್ಲಿ ಸಿಂಗ್‌ ಅವರು ಹೈಕಮಾಂಡ್‌ಗೆ ಸವಾಲು ಹಾಕಿದ್ದರು. ಅಷ್ಟೇ ಅಲ್ಲ, ಪಕ್ಷವನ್ನು ಮುನ್ನಡೆಸುವ ವಿಚಾರದಲ್ಲಿ ರಾಹುಲ್‌ ಗಾಂಧಿ ಅವರ ಸಾಮರ್ಥ್ಯವನ್ನೂ ಅವರು ಪ್ರಶ್ನಿಸಿದ್ದರು. ಇದು ಹೈಕಮಾಂಡ್‌ಗೆ ಹಿತವೆನಿಸಿರಲಿಲ್ಲ. ಈ ಕಾರಣಕ್ಕಾಗಿಯೇ ಕೆಲವರು ಸಿಧು ಅವರನ್ನು ಸಿಂಗ್‌ ವಿರುದ್ಧ ಎತ್ತಿಕಟ್ಟುತ್ತಿದ್ದಾರೆ ಎಂದೂ ಆರೋಪಿಸಲಾಗಿದೆ.

ಬಿಎಸ್‌ಪಿ–ಅಕಾಲಿದಳ ಮೈತ್ರಿ

ಕೆಲವು ತಿಂಗಳ ಹಿಂದಿನವರೆಗೂ ಅಂದರೆ, ರೈತರ ಹೋರಾಟವು ಉತ್ತುಂಗದ ಸ್ಥಿತಿಗೆ ಬರುವವರೆಗೆ ಅಮರಿಂದರ್‌ ಅವರು ಪಂಜಾಬ್‌ನ ಪ್ರಶ್ನಾತೀತ ನಾಯಕನಂತಿದ್ದರು. ಆದರೆ ಕೃಷಿ ಕಾನೂನುಗಳನ್ನು ವಿರೋಧಿಸಿ ಶಿರೋಮಣಿ ಅಕಾಲಿದಳವು ಎನ್‌ಡಿಎ ದಿಂದ ಹೊರಬಂದ ನಂತರ ಜನರಿಗೆ ಇನ್ನೊಂದು ಆಯ್ಕೆ ಸಿಕ್ಕಂತಾಗಿದೆ.

ಕೃಷಿ ಕುರಿತ ಕಾಂಗ್ರೆಸ್‌ನ ನೀತಿಗಳ ಬಗ್ಗೆ ರೈತ ಮುಖಂಡರಿಗೆ ತೃಪ್ತಿ ಇರಲಿಲ್ಲ. ಆದ್ದರಿಂದ ಶಿರೋಮಣಿ ಅಕಾಲಿದಳ ಅವರಿಗೂ ಪರ್ಯಾಯ ಆಯ್ಕೆಯಾಗಬಹುದು.

ಇದರ ಜತೆಯಲ್ಲೇ ಅಕಾಲಿದಳವು ಬಿಎಸ್‌ಪಿ ಜತೆಗೆ ಮೈತ್ರಿಯನ್ನೂ ಘೋಷಿಸಿದೆ. ಇದು ಕಾಂಗ್ರೆಸ್‌ನ ಚಿಂತೆಯನ್ನು ಹೆಚ್ಚಿಸಬಲ್ಲದು. 1992ರಲ್ಲಿ ಪಂಜಾಬ್‌ ವಿಧಾನಸಭೆಗೆ ಬಿಎಸ್‌ಪಿಯ ಒಂಬತ್ತು ಶಾಸಕರು ಆಯ್ಕೆಯಾಗಿದ್ದರು. ಅತ್ಯಾಚಾರ ಮತ್ತು ಕೊಲೆ ಆರೋಪ ಸಾಬೀತಾಗಿ, ದೇರಾಸಚ್ಚಾ ಸೌದಾ ಮುಖಂಡ ರಾಮ್‌ರಹೀಂ ಜೈಲಿಗೆ ಹೋದ ನಂತರ ರಾಜ್ಯದಲ್ಲಿ ದಲಿತ ಸಮುದಾಯಕ್ಕೆ ಪ್ರಬಲ ನಾಯಕನಿಲ್ಲದಂತಾಗಿತ್ತು. ಬಿಎಸ್‌ಪಿಯು ಈ ಕೊರತೆಯನ್ನು ನೀಗಿಸಬಲ್ಲದೇ ಎಂಬುದನ್ನು ನೋಡಬೇಕಾಗಿದೆ. 2011ರ ಗಣತಿಯ ಪ್ರಕಾರ ಪಂಜಾಬ್‌ನಲ್ಲಿ ಪರಿಶಿಷ್ಟ ಜಾತಿಗೆ ಸೇರಿದ ಜನರ ಪ್ರಮಾಣವು ಶೇ 31.94ರಷ್ಟಿದೆ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು