ಮಂಗಳವಾರ, ಆಗಸ್ಟ್ 16, 2022
29 °C

ಆಳ –ಅಗಲ: ಕಾರ್ಮಿಕ ಸಂಹಿತೆ ಜಾರಿ ಸಮಯ ಸನ್ನಿಹಿತ?

ಜಯಸಿಂಹ ಆರ್., ಅಮೃತ ಕಿರಣ್ ಬಿ.ಎಂ. Updated:

ಅಕ್ಷರ ಗಾತ್ರ : | |

Prajavani

ದೇಶದ ಕಾರ್ಮಿಕ ಕಾನೂನುಗಳಿಗೆ ಬದಲಾವಣೆ ತರಲು ಕೇಂದ್ರ ಸರ್ಕಾರವು ವರ್ಷದ ಹಿಂದೆಯೇ ನಾಲ್ಕು ನೂತನ ಕಾರ್ಮಿಕ ಸಂಹಿತೆಗಳನ್ನು ಸಂಸತ್ತಿನಲ್ಲಿ ಮಂಡಿಸಿ ಅನುಮೋದನೆ ಪಡೆದಿತ್ತು. ರಾಷ್ಟ್ರಪತಿಗಳ ಅಂಕಿತವನ್ನೂ ಪಡೆದಿರುವ ಈ ಸಂಹಿತೆಗಳ ಅನ್ವಯ, ಕೇಂದ್ರ ಸರ್ಕಾರವು ಈಗಾಗಲೇ ನಿಯಮಗಳನ್ನು ರೂಪಿಸಿದೆ. ಆದರೆ ಕಾರ್ಮಿಕರ ವಿಷಯವು ಸಮವರ್ತಿ ಪಟ್ಟಿಯಲ್ಲಿ ಇರುವ ಕಾರಣ, ರಾಜ್ಯ ಸರ್ಕಾರಗಳೂ ಈ ನಿಯಮಗಳನ್ನು ರೂಪಿಸಿ ಅಧಿಸೂಚನೆ ಹೊರಡಿಸಬೇಕು. ಹಲವು ರಾಜ್ಯಗಳು ಈಗಾಗಲೇ ಕರಡು ನಿಯಮಗಳನ್ನು ಪ್ರಕಟಿಸಿವೆ. ಹೀಗಾಗಿ 2022–23ನೇ ಆರ್ಥಿಕ ವರ್ಷದ ಆರಂಭದಿಂದಲೇ ಈ ನಿಯಮಗಳನ್ನು ಜಾರಿಗೆ ತರಲು ಕೇಂದ್ರ ಸರ್ಕಾರವು ಸಿದ್ಧತೆ ನಡೆಸಿದೆ.

ಕಾರ್ಮಿಕರು, ಕೈಗಾರಿಕೆಗಳಿಗೆ ಸಂಬಂಧಿಸಿದ ಒಟ್ಟು 44 ಕಾನೂನುಗಳನ್ನು ಒಟ್ಟುಗೂಡಿಸಿ ಕೇಂದ್ರ ಸರ್ಕಾರವು ನಾಲ್ಕು ಕಾರ್ಮಿಕ ಸಂಹಿತೆಗಳನ್ನು ರೂಪಿಸಿದೆ. ಅವುಗಳಲ್ಲಿ ಮೊದಲನೆಯದ್ದು ವೇತನ ಸಂಹಿತೆ, ಎರಡನೆಯದ್ದು ಸಾಮಾಜಿಕ ಭದ್ರತಾ ಸಂಹಿತೆ, ನಂತರದ್ದು ಕೆಲಸದ ಸ್ಥಳದಲ್ಲಿ ಸುರಕ್ಷತೆ, ಆರೋಗ್ಯ ಮತ್ತು ಸ್ಥಿತಿಗತಿ ಸಂಹಿತೆ ಹಾಗೂ ಕೊನೆಯದ್ದು ಕೈಗಾರಿಕಾ ಸಂಬಂಧಗಳ ಸಂಹಿತೆ. ಈ ನಾಲ್ಕೂ ಸಂಹಿತೆಗಳಿಗೆ ಸಂಬಂಧಿಸಿದ ನಿಯಮಗಳನ್ನು ಅಂತಿಮಗೊಳಿಸಿ, ಕೇಂದ್ರ ಸರ್ಕಾರವು ಈಗಾಗಲೇ ಗೆಜೆಟ್ ಅಧಿಸೂಚನೆ ಹೊರಡಿಸಿದೆ. 

ಈ ಸಂಹಿತೆಗಳ ಅನ್ವಯ ಹಲವು ರಾಜ್ಯ ಸರ್ಕಾರಗಳೂ ಕರಡು ನಿಯಮಗಳನ್ನು ಪ್ರಕಟಿಸಿವೆ. ಆದರೆ ಎಲ್ಲಾ ರಾಜ್ಯಗಳೂ ನಾಲ್ಕೂ ಸಂಹಿತೆಗಳಿಗೆ ಸಂಬಂಧಿಸಿದ ಕರಡು ನಿಯಮಗಳನ್ನು ಪ್ರಕಟಿಸಿಲ್ಲ. ನಾಲ್ಕೂ ಸಂಹಿತೆಗಳಿಗೆ ಸಂಬಂಧಿಸಿದ ಕರಡು ನಿಯಮಗಳನ್ನು ಪ್ರಕಟಿಸಿದ ರಾಜ್ಯಗಳ ಸಂಖ್ಯೆ 13 ಮಾತ್ರ. ಕರಡು ನಿಯಮಗಳನ್ನು ಪ್ರಕಟಿಸಿ, ಅವುಗಳಿಗೆ ಆಕ್ಷೇಪ ಸಲ್ಲಿಸಲು 30–45 ದಿನ ಕಾಲಾವಕಾಶ ನೀಡಿ, ನಂತರ ನಿಯಮಗಳನ್ನು ಅಂತಿಮಗೊಳಿಸಲು ರಾಜ್ಯ ಸರ್ಕಾರಗಳಿಗೆ ಇನ್ನೂ 3 ತಿಂಗಳ ಕಾಲಾವಕಾಶವಿದೆ. ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು 2022ರ ಮಾರ್ಚ್‌ 31ರ ಒಳಗೆ ಈ ನಿಯಮಗಳನ್ನು ಅಂತಿಮಗೊಳಿಸಿದರೆ, ನೂತನ ಆರ್ಥಿಕ ವರ್ಷದಲ್ಲಿ ಈ ನಿಯಮಗಳು ಜಾರಿಗೆ ಬರಲಿವೆ.

ಎರಡು ಕರಡನ್ನಷ್ಟೇ ಪ್ರಕಟಿಸಿದ ಕರ್ನಾಟಕ
‘ಕರ್ನಾಟಕ ಸರ್ಕಾರವು ಎರಡು ಸಂಹಿತೆಗಳಿಗೆ ಸಂಬಂಧಿಸಿದ ಕರಡು ನಿಯಮಗಳನ್ನು ಮಾತ್ರ ಪ್ರಕಟಿಸಿದೆ. ವೇತನ ಸಂಹಿತೆ ಮತ್ತು ಕೈಗಾರಿಕಾ ಸಂಬಂಧಗಳ ಸಂಹಿತೆಗೆ ಸಂಬಂಧಿಸಿದ ಕರಡು ನಿಯಮಗಳನ್ನು ರಾಜ್ಯ ಸರ್ಕಾರವು ಪ್ರಕಟಿಸಿದ್ದು, ಇನ್ನೂ ಎರಡು ಸಂಹಿತೆಗಳ ಕರಡು ನಿಯಮಗಳನ್ನು ಇನ್ನಷ್ಟೇ ಪ್ರಕಟಿಸಬೇಕು’ ಎಂದು ಕಾರ್ಮಿಕ ಸಚಿವಾಲಯವು ರಾಜ್ಯಸಭೆಯಲ್ಲಿ ಹೇಳಿದೆ.

ರಾಜ್ಯ ಸರ್ಕಾರವು 2021ರ ಮಾರ್ಚ್‌ನಲ್ಲಿಯೇ ಎರಡೂ ಕರಡು ನಿಯಮಗಳನ್ನು ಪ್ರಕಟಿಸಿದೆ ಮತ್ತು ಸಾರ್ವಜನಿಕ ಅಭಿಪ್ರಾಯವನ್ನು ಆಹ್ವಾನಿಸಿದೆ.

ಕನಿಷ್ಠ ವೇತನ ನಿಗದಿಗೆ ನಿಯಮ
ರಾಜ್ಯ ಸರ್ಕಾರವು ಪ್ರಕಟಿಸಿರುವ ವೇತನ ಸಂಹಿತೆ ಕರಡು ನಿಯಮಗಳಲ್ಲಿ, ಕಾರ್ಮಿಕರ ಕನಿಷ್ಠ ವೇತನ ನಿಗದಿ ಮಾಡುವ ಬಗೆಯನ್ನು ವಿವರಿಸಿದೆ. ಇದಕ್ಕಾಗಿ ಮಾನದಂಡಗಳನ್ನು ನಿಗದಿ ಮಾಡಲಾಗಿದೆ. ‘ಕೇಂದ್ರ ಸರ್ಕಾರವು ನಿಗದಿ ಮಾಡಿದ ಕನಿಷ್ಠ ವೇತನವನ್ನು ನೀಡಬೇಕು ಇಲ್ಲವೇ ಕನಿಷ್ಠ ವೇತನವಾಗಿ ಅದಕ್ಕಿಂತ ಹೆಚ್ಚಿನ ಮೊತ್ತವನ್ನು ನಿಗದಿ ಮಾಡಬೇಕು’ ಎಂದು ಈ ಕರಡು ನಿಯಮದಲ್ಲಿ ಹೇಳಲಾಗಿದೆ.

ವೇತನ ನಿಗದಿಯನ್ನು ಗಂಟೆ, ದಿನ, ವಾರ ಮತ್ತು ತಿಂಗಳ ಆಧಾರದಲ್ಲಿ ಮಾಡಬಹುದು ಎಂದು ನಿಯಮಗಳಲ್ಲಿ ವಿವರಿಸಲಾಗಿದೆ. ಕೈಗಾರಿಕಾ ಸಂಬಂಧಗಳ ಸಂಹಿತೆಯಲ್ಲಿ, ಉದ್ಯೋಗದಾತನು ಉದ್ಯೋಗಿಯನ್ನು ಗಂಟೆ, ದಿನ, ವಾರ, ತಿಂಗಳ ಅವಧಿಗೆ ನೇಮಕ ಮಾಡಿಕೊಳ್ಳಲು ಅವಕಾಶವಿರುವ ಕಾರಣ, ವೇತನವನ್ನೂ ಇದೇ ಸ್ವರೂಪದಲ್ಲಿ ನಿಗದಿ ಮಾಡಲು ಅವಕಾಶ ಮಾಡಿಕೊಳ್ಳಲಾಗಿದೆ.

ಕನಿಷ್ಠ ವೇತನ ನಿಗದಿ ಮಾಡುವಲ್ಲಿ ಪರಿಗಣಿಸಬೇಕಾದ ಅಂಶಗಳನ್ನು ನಿಯಮಗಳಲ್ಲಿ ಸೂಚಿಸಲಾಗಿದೆ. ಒಬ್ಬ ಕಾರ್ಮಿಕನ(ಳ) ಕುಟುಂಬದ ಗಾತ್ರ ಅಥವಾ ಸದಸ್ಯರ ಸಂಖ್ಯೆಯನ್ನು ಇಲ್ಲಿ ಸೂಚಿಸಲಾಗಿದೆ. ಒಬ್ಬ ಕಾರ್ಮಿಕ, ಸಂಗಾತಿ ಮತ್ತು ಇಬ್ಬರು ಮಕ್ಕಳು ಇರುವ ಕುಟುಂಬವನ್ನು ಕಾರ್ಮಿಕ ವರ್ಗದ ಒಂದು ಕುಟುಂಬ ಎಂದು ಪರಿಗಣಿಸಲಾಗಿದೆ. ಇಬ್ಬರು ಮಕ್ಕಳನ್ನು ಒಬ್ಬ ವ್ಯಕ್ತಿ ಎಂದು ಪರಿಗಣಿಸಲಾಗುತ್ತದೆ. ‘ಕಾರ್ಮಿಕ ವರ್ಗದ ಒಂದು ಕುಟುಂಬ’ದ ಸದ್ಯಸರ ಒಟ್ಟು ಸಂಖ್ಯೆಯನ್ನು ಮೂರು ಎಂದು ಪರಿಗಣಿಸಲಾಗುತ್ತದೆ. ಈ ಕುಟುಂಬದ ನಿರ್ವಹಣೆಗೆ ಬೇಕಿರುವ ವೆಚ್ಚದ ಆಧಾರದಲ್ಲಿ ಕನಿಷ್ಠ ವೇತನ ನಿಗದಿ ಮಾಡಲಾಗುತ್ತದೆ.

ವೇತನ ನಿಗದಿ ಮಾನದಂಡಗಳು...
2,700 ಕ್ಯಾಲೊರಿ ಈ ಕುಟುಂಬದ ಸದಸ್ಯರು ಒಟ್ಟಾಗಿ ದಿನವೊಂದರಲ್ಲಿ ಸೇವಿಸಬೇಕಾದ ಕನಿಷ್ಠ ಆಹಾರದ ಪ್ರಮಾಣ

66 ಮೀಟರ್‌ ಈ ಕುಟುಂಬದ ಸದಸ್ಯರು ಒಟ್ಟಾಗಿ ವರ್ಷವೊಂದರಲ್ಲಿ ಬಳಸಬಹುದಾದ ಬಟ್ಟೆಯ ಪ್ರಮಾಣ

* ಈ ಕುಟುಂಬವು ಆಹಾರ ಮತ್ತು ಬಟ್ಟೆಗೆ ಮಾಡುವ ವೆಚ್ಚದ ಶೇ 10ರಷ್ಟನ್ನು ಮನೆ ಬಾಡಿಗೆ ವೆಚ್ಚ ಎಂದು ಪರಿಗಣಿಸಬೇಕಾಗುತ್ತದೆ

* ಆ ಕುಟುಂಬದ ಇಂಧನ, ವಿದ್ಯುತ್ ಮತ್ತಿತರ ವೆಚ್ಚದ ಪ್ರಮಾಣವನ್ನು ಕನಿಷ್ಠ ವೇತನದ ಶೇ 20ರಷ್ಟು ಎಂದು ಪರಿಗಣಿಸಿಬೇಕು. ಅದರ ಆಧಾರದಲ್ಲಿ ಕನಿಷ್ಠ ವೇತನ ನಿಗದಿ ಮಾಡಬೇಕು

* ಮಕ್ಕಳ ವಿದ್ಯಾಭ್ಯಾಸದ ವೆಚ್ಚ, ವೈದ್ಯಕೀಯ ಸೇವೆಗಳ ವೆಚ್ಚ, ಪ್ರವಾಸ ಮತ್ತಿತರ ವೆಚ್ಚಗಳ ಪ್ರಮಾಣವನ್ನು ಕನಿಷ್ಠ ವೇತನದ ಶೇ 25ರಷ್ಟು ಎಂದು ಪರಿಗಣಿಸಬೇಕು. ಅದರ ಆಧಾರದಲ್ಲಿ ಕನಿಷ್ಠ ವೇತನ ನಿಗದಿ ಮಾಡಬೇಕು

ಕೆಲಸದ ಅವಧಿ ಮತ್ತು ವೇತನದ ಲೆಕ್ಕಾಚಾರ
ಈ ಕರಡು ನಿಯಮಗಳ ಅಡಿ ಕೆಲಸದ ದಿನಗಳು ಮತ್ತು ವೇತನದ ಲೆಕ್ಕಾಚಾರವನ್ನು ನೀಡಲಾಗಿದೆ. ವೇತನವನ್ನು ಪ್ರತಿದಿನಕ್ಕೆ ನಿಗದಿ ಮಾಡಿ, ಅದನ್ನು ಎಂಟು ಗಂಟೆಗಳಿಗೆ ಅನ್ವಯ ಮಾಡಬೇಕು. ಒಂದು ದಿನದ ವೇತನವನ್ನು 26 ದಿನಗಳಿಗೆ ಗುಣಾಕಾರ ಮಾಡಿ, ತಿಂಗಳ ವೇತನವನ್ನು ನಿಗದಿ ಮಾಡಬೇಕು ಎಂದು ಕರಡು ನಿಯಮಗಳಲ್ಲಿ ವಿವರಿಸಲಾಗಿದೆ.

* ಒಂದು ದಿನದ ಕೆಲಸವನ್ನು 8 ಗಂಟೆಗಳಾಗಿ ವಿಭಜಿಸಬೇಕು. ಒಂದು ಅಥವಾ ಎರಡು ಬಾರಿಯ ವಿಶ್ರಾಮದ ಅವಧಿಯು ಒಂದು ಗಂಟೆಯನ್ನು ಮೀರಬಾರದು

* ಹಲವು ವಿಶ್ರಾಮದ ಅವಧಿಗಳೂ ಸೇರಿ ದಿನವೊಂದರಲ್ಲಿ ಒಟ್ಟು ಕೆಲಸದ ಅವಧಿಯು 12 ಗಂಟೆಗಳನ್ನು ಮೀರಬಾರದು

* 8 ಗಂಟೆಗಳ ಕೆಲಸದ ಅವಧಿಯ ಒಂದು ದಿನದ ವೇತನವನ್ನು, ತಿಂಗಳೊಂದರಲ್ಲಿ ಗರಿಷ್ಠ 26 ದಿನಗಳಿಗೆ ಅನ್ವಯ ಮಾಡಬೇಕು. 26 ದಿನಗಳ ವೇತನವನ್ನು ತಿಂಗಳ ವೇತನ ಎಂದು ಪರಗಣಿಸಬಹುದು

* ತಿಂಗಳಲ್ಲಿ 26 ದಿನಗಳನ್ನು ಹೊರತುಪಡಿಸಿ, ಉಳಿದ ದಿನಗಳಿಗೆ ವೇತನ ಪಾವತಿ ಮಾಡುವಂತಿಲ್ಲ. ಆ ದಿನಗಳಲ್ಲಿ ಕಾರ್ಮಿಕ ಕೆಲಸ ಮಾಡಿದರೆ, ಹೆಚ್ಚುವರಿ ವೇತನವನ್ನು ಪಾವತಿ ಮಾಡಬೇಕು

ಕೈಗಾರಿಕಾ ಸಂಬಂಧಗಳ ಸಂಹಿತೆ
‘ಕೈಗಾರಿಕಾ ಸಂಬಂಧಗಳ ಸಂಹಿತೆ 2021’ರ ಕರಡು ನಿಯಮಗಳನ್ನು ರಾಜ್ಯ ಸರ್ಕಾರ ಪ್ರಕಟಿಸಿದ್ದು, ಕೇಂದ್ರ ಸರ್ಕಾರ ಉಲ್ಲೇಖಿಸಿದ್ದ ನಿಯಮಗಳನ್ನೇ ಯಥಾವತ್ತಾಗಿ ಪ್ರಕಟಿಸಿದೆ. ಕಾರ್ಮಿಕ ಸಂಘಟನೆಗಳು, ಮುಷ್ಕರ, ಲಾಕ್‌ಡೌನ್, ಕೈಗಾರಿಕಾ ನ್ಯಾಯಮಂಡಳಿ ಸದಸ್ಯರ ನೇಮಕಾತಿ ಹಾಗೂ ಅದರ ಕಾರ್ಯವಿಧಾನ ಮೊದಲಾದ ಬಹುತೇಕ ಅಂಶಗಳನ್ನು ರಾಜ್ಯ ಸರ್ಕಾರವೂ ಉಳಿಸಿಕೊಂಡಿದೆ.

ಈ ಸಂಹಿತೆಯು ಜಾರಿಗೆ ಬಂದರೆ, ಕೈಗಾರಿಕಾ ನ್ಯಾಯಮಂಡಳಿ (ಕರ್ನಾಟಕ) ನಿಯಮಗಳು 1955, ಕೈಗಾರಿಕಾ ವ್ಯಾಜ್ಯಗಳು (ಕರ್ನಾಟಕ) ನಿಯಮಗಳು 1957, ಕೈಗಾರಿಕಾ ನೇಮಕಾತಿ (ಸ್ಥಾಯಿ ಆದೇಶಗಳು) ಕರ್ನಾಟಕ ನಿಯಮಗಳು 1961 ಮತ್ತು ಕರ್ನಾಟಕ ಕಾರ್ಮಿಕ ಒಕ್ಕೂಟ ನಿಯಂತ್ರಣಗಳು, 1958 – ಇವು ರದ್ದಾಗಲಿವೆ.

ಕೈಗಾರಿಕಾ ನ್ಯಾಯಮಂಡಳಿ: ಕೈಗಾರಿಕೆಗಳಲ್ಲಿ ಉಂಟಾಗುವ ವ್ಯಾಜ್ಯಗಳನ್ನು ಕೈಗಾರಿಕಾ ನ್ಯಾಯಮಂಡಳಿ ಪರಿಹರಿಸುತ್ತದೆ. ನ್ಯಾಯಾಂಗ ಹಾಗೂ ಆಡಳಿತಾತ್ಮಕ ಕೆಲಸಗಳನ್ನು ನಿರ್ವಹಿಸುವ ಸದಸ್ಯರನ್ನು ಈ ನ್ಯಾಯಮಂಡಳಿ ಹೊಂದಿರುತ್ತದೆ. ಶೋಧನಾ ಸಮಿತಿ ಶಿಫಾರಸು ಮಾಡಿದವರನ್ನು ಮಂಡಳಿಗೆ ನೇಮಿಸಲಾಗುತ್ತದೆ.

ಕಾರ್ಯವಿಧಾನ: ಸಂಸ್ಥೆ ಹಾಗೂ ಅಲ್ಲಿನ ಉದ್ಯೋಗಿಗಳ ನಡುವೆ ಉಂಟಾಗುವ ವ್ಯಾಜ್ಯವನ್ನು ಪರಿಹರಿಸಲು ಸರ್ಕಾರ ನೇಮಿಸಿರುವ ಸಂಧಾನ ಅಧಿಕಾರಿ ಯತ್ನಿಸುತ್ತಾರೆ. ಎರಡೂ ಕಡೆಯವರಿಗೆ ನೋಟಿಸ್ ನೀಡಿ, ವಿಚಾರಣೆಗೆ ಕರೆದು ಸಮಸ್ಯೆಯನ್ನು ಆಲಿಸಲಾಗುತ್ತದೆ. ವ್ಯಾಜ್ಯ ಬಗೆಹರಿಯದಿದ್ದಲ್ಲಿ, ಅದು, ನ್ಯಾಯಮಂಡಳಿಯ ಎದುರು ಬರುತ್ತದೆ. ಎರಡೂ ಕಡೆಯ ಪ್ರತಿನಿಧಿಗಳಿಗೆ ತಮ್ಮ ವಿವರಣೆ ನೀಡುವಂತೆ ಮೊದಲ ಹಂತದಲ್ಲಿ ಸೂಚಿಸಲಾಗುತ್ತದೆ. ಈ ದಾಖಲೆಗಳನ್ನು ಇಟ್ಟುಕೊಂಡು 30 ದಿನದ ಒಳಗಾಗಿ ನ್ಯಾಯಮಂಡಳಿ ವಿಚಾರಣೆ ಆರಂಭಿಸಬೇಕು.

ಮುಷ್ಕರಕ್ಕೆ ಮುನ್ನ ನೋಟಿಸ್: ನೋಂದಾಯಿತ ಕಾರ್ಮಿಕ ಸಂಘಟನೆಯ ಕಾರ್ಯದರ್ಶಿ ಮತ್ತು ಐವರು ಚುನಾಯಿತ ಸದಸ್ಯರ ಸಹಿ ಇರುವ ಪತ್ರವನ್ನು ಕಂಪನಿಯ ಆಡಳಿತ ಮಂಡಳಿಗೆ ನೀಡಿದ ಬಳಿಕವೇ ಕಾರ್ಮಿಕರು ಮುಷ್ಕರ ನಡೆಸಬೇಕು.

ವೇತನ ಕಡಿತ: ಅವಘಡ ಅಥವಾ ವಿಪತ್ತು ಕಾರಣ ಇಟ್ಟುಕೊಂಡು ಉದ್ಯೋಗಿಗಳ ವೇತನದಲ್ಲಿ ಕಡಿತ ಮಾಡುವಂತಿದ್ದರೆ, ಒಂದು ತಿಂಗಳು ಮೊದಲು ಈ ಬಗ್ಗೆ ಕಂಪನಿಗಳು ಮಾಹಿತಿ ನೀಡಬೇಕು. ವೇತನ ಕಡಿತಕ್ಕೆ ಒಳಪಟ್ಟ ಉದ್ಯೋಗಿಗಳ ಸಂಖ್ಯೆ, ಕಡಿತದ ಮೊತ್ತ, ಕಡಿತ ಮಾಡಲಾಗುವ ದಿನಗಳ ಮಾಹಿತಿಯನ್ನು ಕಾರ್ಮಿಕ ಆಯುಕ್ತರಿಗೆ ತಿಳಿಸಬೇಕು. ಈ ಕುರಿತ ಮಾಹಿತಿ ತಲುಪಿದ ಒಂದು ತಿಂಗಳ ಒಳಗೆ, ಅದಕ್ಕೆ ಅನುಮತಿ ನೀಡುವಂತೆ ಅಥವಾ ತಡೆಹಿಡಿಯುವಂತೆ ಅಥವಾ ಪರಿಷ್ಕರಣೆ ಮಾಡುವಂತೆ ಆಯುಕ್ತರು ಸೂಚಿಸಬಹುದು.

ಆಧಾರ: ಕಾರ್ಮಿಕ ಸಚಿವಾಲಯ, ರಾಜ್ಯ ಕಾರ್ಮಿಕ ಇಲಾಖೆ, ಪಿಟಿಐ

ವರದಿ: ಜಯಸಿಂಹ ಆರ್., ಅಮೃತ್‌ಕಿರಣ ಬಿ.ಎಂ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು