ಬುಧವಾರ, ಆಗಸ್ಟ್ 17, 2022
29 °C

ವಿಶ್ವ ಅಂಗವಿಕಲರ ದಿನ: ಎಲ್ಲ ಅಡ್ಡಿಗಳ ಎಲ್ಲೆ ಮೀರಿ

ಪ್ರಜಾವಾಣಿ ವಿಶೇಷ Updated:

ಅಕ್ಷರ ಗಾತ್ರ : | |

ನಮ್ಮ ದೇಶದಲ್ಲಿ ವಿಶೇಷ ಸವಲತ್ತುಗಳನ್ನು ಪಡೆದುಕೊಳ್ಳುವುದು ಅಂಗವಿಕಲರಿಗೆ ಸುಲಭವೇನೂ ಅಲ್ಲ. ಯಾವುದೇ ಸಮಸ್ಯೆ ಇದ್ದರೂ ಅದನ್ನು ಮೀರಿ ನಿಂತು ಬದುಕು ಕಟ್ಟಿಕೊಳ್ಳಬೇಕಾದ ಅನಿವಾರ್ಯ ಅಂಗವಿಕಲರಿಗೂ ಇದೆ. ಹತ್ತಾರು ಎಡರು ತೊಡರುಗಳು ನಡುವೆ ತಮಗೆ ಬೇಕಿದ್ದುದನ್ನು ಸಾಧಿಸುವುದರ ಜತೆಗೆ ಇತರರಿಗೂ ಪ್ರೇರಣೆಯ ಬೆಳಕಾದವರ ಬದುಕಿನತ್ತ ಒಂದು ಕಿರುನೋಟ...

***

ಹನುಮಂತ ಕುರುಬರ ಮಾತು...

ಕತ್ತಲ ಬಾಳಿಗೆ ಬೆಳಕಾಯ್ತು ಬಾನುಲಿ

ಬೆಳಗಾವಿ ಜಿಲ್ಲೆ ಅಥಣಿ ತಾಲ್ಲೂಕು ಬಳ್ಳಿಗೇರಿ ನನ್ನೂರು. ವಯಸ್ಸಾದ ಅಪ್ಪ, ಅವ್ವನ ಗೂಡ ನಾವು ಐದ ಮಂದಿ ಮಕ್ಕಳು. ದೊಡ್ಡಕ್ಕಗ ಪೋಲಿಯೊ ಆಗಿತ್ತು. ಆರು ವರ್ಸಾತು ತೀರಿ. ಇನ್ನೊಬ್ಬ ಅಕ್ಕ ಹುಟ್ಟಾ ಕುರುಡಿ ಅದಾಳು. ಮತ್ತೊಬ್ಬ ತಮ್ಮ ಬ್ಯಾರೆ ಆಗಿದಾನು.

ಕಡುಬಡತನದ ಮನಿ ನಮ್ಮದು. ಕುಟುಂಬಕ್ಕೆ ಸಹಾಯ ಮಾಡೋಕಾಗಿ 8ನೇ ಇಯತ್ತಾಕ ಸಾಲಿ ಬಿಟ್ಟೆ. ಕುರಿ ಮೇಯಿಸಲಿಕ್ಕೆ ಹೊಂಟೆ. ಜಾಲಿ ಮರ ಏರಿ ಕುರಿಗಂತ ದಿನಾ ತೊಪ್ಪಲಾ ಕೀಳ್ತಿದ್ದಾಗ, ಕೆಳಗೆ ಬಿದ್ದು ಬೆನ್ನು ಹುರಿ ಮುರೀತು. ಆಗ ನನಗ 16 ವರ್ಷ. ಮೊದಲಾ ಸಂಕಟದಾಗಿದ್ದ ನನ್ನ ಕುಟುಂಬಕ್ಕ, ಈ ಘಟನಾ ಶಂಬರ್ ಟಕ್ಕೆ ನೋವಿನ ಮ್ಯಾಲ ಮತ್ತೊಂದು ಕಾಸಿ ಬರಿ ಕೊಟ್ಹಂಗ ಆತು.

ಹೆಂಗೋ ಸಾಲ ಹೊಂದಿಸಿ, ಆಪ್ರೇಷನ್ ಮಾಡ್ಸಿದ್ರು. ಪೂರ್ತಿ ಇಜಾರಿ ಗುಣ ಆಗಲಿಲ್ಲ. ದುರ್ದೈವ ಸೊಂಟದ ಕೆಳಭಾಗ ಸ್ವಾಧೀನ ಕಳಕೊಂಡ್ತು. ಸ್ಪರ್ಶ ಜ್ಞಾನ ಹೋತು. ಹಸಿವು ಮತ್ತು ಜೀರ್ಣಿಸಿಕೊಂಡಿದ್ದು ಅವತ್ತಿಗೂ ಇವತ್ತಿಗೂ ನನಗ ಗೊತ್ತಾಗೋದಿಲ್ಲ. ಶೇ 85ರಷ್ಟು ಅಂಗವೈಕಲ್ಯ ಅಂದ್ರು. ಮುಂದ 10 ವರ್ಷ ನರಕ ಯಾತನೆ. ಎಲ್ಲವೂ ಹಾಸಿಗ್ಯಾಗ. ಹಿಂಗಾ ಅಪ್ಪ–ಅಮ್ಮನ ಉಡ್ಯಾಗ 16 ವರ್ಷ ಕಳೆದುಬಿಟ್ಟೆ! ಈಗ ನನಗ 32 ವರ್ಷ.

ಹಿಂಗೆ ಕುಂತು ಸಮಯ ಕಳೆದರ ಹೆಂಗ? ತ್ರಾಸ್ ಆತು. ಅಪ್ಪಗ ದುಂಬಾಲು ಬಿದ್ದು ರೇಡಿಯೊ ಕೊಡಿಸಿಕೊಂಡೆ. ಒಮ್ಮೆ ಧಾರವಾಡ ಆಕಾಶವಾಣ್ಯಾಗ ಲಕ್ಷ್ಮೇಶ್ವರದ ಬಿ.ಡಿ. ತಟ್ಟಿ ಸ್ಮಾರಕ ಚಾರಿಟಬಲ್ ಟ್ರಸ್ಟ್‌ನ ಭಾರತಿ ನಾರಾಯಣ್ ಅವರು ‘ವಿಕಲ ಚೇತನರಿಗೆ ಶಿಕ್ಷಣ ಮತ್ತು ಉದ್ಯೋಗಾವಕಾಶ’ ಕುರಿತು ಮಾತಾಡಿದ್ದು ಕೇಳಿದೆ. ಆ ಒಂದು ಸಂದರ್ಶನ ಕಾರ್ಯಕ್ರಮ ನನ್ನ ಕತ್ತಲ ಬದುಕಿಗೆ ಬೆಳಕಾತು.

ಭಾರತಿ ಮೇಡಂ ಸಹಾಯದಿಂದ ಬೆಂಗಳೂರು ಮತ್ತು ರಾಮನಗರದ ಸಂಸ್ಥೆಯೊಳಗ ತಲಾ ಒಂದೂವರೆ ತಿಂಗಳು ದಾಖಲಿದ್ದು, ತರಬೇತಿ ಪಡೆದೆ. ಬೆನ್ನುಹುರಿ ಅಪಘಾತಕ್ಕ ಈಡಾದವರಿಗೆ ಚಿಕಿತ್ಸೆ ಜೊತೆಗೆ ಇನ್ನೊಬ್ಬರ ಅವಲಂಬನ ಇಲ್ಲದ ಬದುಕೋದು ಹೆಂಗ ಅಂತ ಅಲ್ಲಿ ಕಲಿಸಿದರು.

ಟ್ರೇನಿಂಗ್, ಫಿಸಿಯೊಥೆರಪಿ ನಂತರ ಕ್ಯಾಲಿಪರ್ಸ್ ಹಾಕ್ಕೊಂಡು ಓಡಾಡುವಂತಾದೆ. ಇನ್ನೇನು ಬದುಕು ಹದಕ್ಕ ಬರಬೇಕು ಅನ್ನುವಾಗ ನಮ್ಮ ಜಮೀನಿನ್ಯಾಗ ಕಾಲು ತೊಡರಿ ಬಿದ್ದು ಚಪ್ಪಿ ಮುರಕೊಂಡೆ. ಕಾಯಂ ಆಗಿ ಗಾಲಿ ಕುರ್ಚಿಗೆ ಒರಗಿಬಿಟ್ಟೆ!

ಸೋತಿದ್ದೆ ಮತ್ತೊಮ್ಮೆ; ಆದರೆ, ಸತ್ತಿರಲಿಲ್ಲ. ಎರಡನೇ ಸರ್ತಿ ಅಪಘಡದಿಂದ ಸುಧಾರಿಸಿಕೊಂಡೆ. ಅಪ್ಪನ ಆಸರಿಯಿಂದ ರೇಷ್ಮೆ ಕೃಷಿ ಚಾಲೂ ಮಾಡ್ದೆ. ಗಾಲಿ ಕುರ್ಚಿ ಮ್ಯಾಲೆ ಕುಂತು ನಾಲ್ಕು ವರ್ಷಗಳಿಂದ ನಾಲ್ಕು ಎಕರೆಯೊಳಗ ಬ್ಯಾನಿ-ಬ್ಯಾಸರಕಿ ಇಲ್ದ ರೇಷ್ಮೆ ಕೃಷಿ ಮಾಡ್ತಿದ್ದೀನಿ. ನನ್ನ ಕೈಲಾಗದ ಕೆಲಸಕ್ಕೆ ಆಸರೆಪಡೀತೀನಿ. 

ಒಂದು ಕೈಯೊಳಗ ಚಕ್ರ ಉರುಳಿಸ್ತಾ, ಇನ್ನೊಂದು ಕೈಯಿಂದ ರೇಷ್ಮೆ ಗೂಡಿನ ಚಂದರಕಿ ಬಿಡಿಸ್ತೇನಿ. ರೇಷ್ಮೆ ಹುಳದ ಚಾಕಿ ಸ್ವಚ್ಛ ಮಾಡ್ತೇನಿ. ಇಡೀ ಹೊಲದೊಳಗ ತ್ರಿಚಕ್ರ ಓಡಿಸ್ತಾ ಹಿಪ್ಪು ನೇರಳೆ ಕುಯ್ತೇನಿ. ಹುಳುಗಳಿಗೆ ದಿನಾ ಸೊಪ್ಪು ಹಾಕ್ತೇನಿ. ಅವ್ವನ ಜತೆ ಹೈನುಗಾರಿಕೇನೂ ಮಾಡ್ತೇನಿ. ಆರಂಭದಲ್ಲಿ ಭಯ ಇತ್ತು, ಈಗ ಬದುಕುವುದಕ್ಕೆ ಕಷ್ಟ ಅಂತ ಅನ್ನಿಸುತ್ತಿಲ್ಲ. ಮನೆಯವರಿಗೆ ಭಾರ ಆಗದ ಬದಕಲಿಕ್ಕೆ ಕಲ್ತೇನಿ. ಅದೇ ಸಮಾಧಾನ. 

ನಿರೂಪಣೆ: ಹರ್ಷವರ್ಧನ ವಿ. ಶೀಲವಂತ

***

ಕೇಶವ ತೆಲುಗು ಮಾತು...

ಗೌರವಯುತ ಬದುಕಿಗಾಗಿ ಹೋರಾಟ

‘ಅಂಗವಿಕಲರಿಗೆ ಅನುಕಂಪ ಬೇಡ, ಗೌರವಯುತ ಬದುಕು ಸಾಗಿಸಲು ಕೆಲಸಕೊಡಿ’ ಎಂಬ ಕೂಗು ಹಲವು ದಶಕಗಳಿಂದ ಕೇಳುತ್ತಲೇ ಬರುತ್ತಿದೆ. ಆದರೆ ಆ ಗೌರವಯುತ ಬದುಕಿಗೆ ಸರ್ಕಾರ ಕಲ್ಪಿಸಿರುವ ಸೌಲಭ್ಯಗಳೂ ಅಂಗವಿಕಲರ ಕೈಸೇರದಂತ ಪರಿಸ್ಥಿತಿ ನಿರ್ಮಾಣವಾಗಿರುವುದು ವಿಪರ್ಯಾಸ.

ಬಾಲ್ಯದಲ್ಲೇ ಪೋಲಿಯೊಗೆ ತುತ್ತಾದ ನಾನು ನನ್ನ ಎಡಗಾಲಿನ ಸ್ವಾಧೀನ ಕಳೆದುಕೊಂಡೆ. ಕಿತ್ತುತಿನ್ನುವ ಬಡತನದಿಂದಾಗಿ ಪ್ರೌಢಶಾಲೆ ಹಂತದಲ್ಲೇ ಶಿಕ್ಷಣದಿಂದ ದೂರವಾಗಿ ಧಾರವಾಡದಲ್ಲಿ ಫುಟ್‌ಪಾತ್ ವ್ಯಾಪಾರಿಯಾದೆ.

ಕ್ರೀಡಾಕೂಟಗಳಲ್ಲಿ ಪಾಲ್ಗೊಳ್ಳಲು ನಾನು ಆಗಾಗ ರೈಲಿನ ಮೂಲಕ ಪ್ರಯಾಣಿಸುತ್ತಿದ್ದೆ. ರೈಲಿನಲ್ಲಿ ಅಂಗವಿಕಲರಿಗಾಗಿಯೇ ಮೀಸಲು ಬೋಗಿಗಳು ಹಾಗೂ ಆಸನಗಳಿದ್ದರೂ ಅವು ಅನ್ಯರು ಹಾಗೂ ಅವರ ವಸ್ತುಗಳ ಪಾಲಾಗಿರುತ್ತಿದ್ದವು. ಎಷ್ಟೋ ಸಲ ಹಕ್ಕಿಗಾಗಿ ಜಗಳ ಮಾಡಿ ಕೂರಬೇಕಾಗುತ್ತಿತ್ತು. ಮಾನವೀಯತೆ, ಅನುಕಂಪ ಕೇವಲ ಮಾತುಗಳಷ್ಟೆ ಅಂತನಿಸುತ್ತಿತ್ತು. ಮನಸು ಮುದುಡುತ್ತಿತ್ತು. ಕೆಲವೊಮ್ಮೆ ರೈಲಿನಲ್ಲಿ ಸರಕುಗಳನ್ನೂ ಈ ಬೋಗಿಗೆ ತುಂಬುತ್ತಿದ್ದರು.

ಇದಕ್ಕೆ ಒಂದು ಪರಿಹಾರ ಕಂಡುಕೊಳ್ಳಲೇಬೇಕು ಎಂಬ ಹಟ ಮೂಡಿತು. ರೈಲ್ವೆ ಇಲಾಖೆಗೆ ಮನವಿ ನೀಡಿದೆವು. ಮನವಿಗಳಿಗೆಲ್ಲ ಬೆಲೆ ಸಿಗುವ ಕಾಲ ಇದಲ್ಲವಲ್ಲ. ಮತ್ತೆ ಮರುಮನವಿ ಮಾಡಿದೆ. ಈಗ ಅದಕ್ಕೆ ಸಾಕ್ಷಿಯಾಗಿ, ಫೋಟೊ ಹಾಗೂ ವಿಡಿಯೊಗಳನ್ನು ಚಿತ್ರೀಕರಿಸಿ ಇರಿಸಿದೆ. ರೈಲ್ವೆ ಸಚಿವರು ಹಾಗೂ ಪ್ರಧಾನಿ ಕಾರ್ಯಾಲಯಕ್ಕೂ ಕಳುಹಿಸಿಕೊಟ್ಟೆ. ರೈಲ್ವೆ ಖಾತೆ ರಾಜ್ಯ ಸಚಿವರಾಗಿದ್ದ ಸುರೇಶ ಅಂಗಡಿ ಅವರನ್ನೂ ಭೇಟಿ ಮಾಡಿ ನಮ್ಮ ಅಹವಾಲನ್ನು ಹೇಳಿಕೊಂಡೆವು. ಇದರ ಪ್ರತಿಫಲವಾಗಿ ಸದ್ಯ ಅಂಗವಿಕಲರ ಬೋಗಿಗಳಲ್ಲಿ ಬೇರೆಯವರಿಗೆ ಹತ್ತಲು ಹಲವೆಡೆ ಅವಕಾಶ ನೀಡುತ್ತಿಲ್ಲ.

ಸ್ವಾವಲಂಬಿಯಾಗಲು ನಮಗೆ ಸರ್ಕಾರ ಸಹಕರಿಸಲಿ. ಅಂಗವಿಕಲರಿಗೆ ಸರ್ಕಾರ ತ್ರಿಚಕ್ರ ವಾಹನ ನೀಡುತ್ತದೆ. ಅದನ್ನೇ ಟ್ಯಾಕ್ಸಿಯಾಗಿ ಪರಿವರ್ತಿಸಲು ಅವಕಾಶ ನೀಡಿದರೆ ದುಡಿಮೆಗೊಂದು ದಾರಿಯಾಗಲಿದೆ. ಅಂಗವಿಕಲರಿಗೆ ನೀಡುತ್ತಿರುವ ವಾಹನ ಸೌಲಭ್ಯ ನಿಜಕ್ಕೂ ಉತ್ತಮ. ಆದರೆ ಅದನ್ನು ಉದ್ಯೋಗಾವಕಾಶವಾಗಿ ಪರಿವರ್ತಿಸುವಂತೆ ಯೋಜನೆ ರೂಪಿಸಿದಲ್ಲಿ ಬಹಳಷ್ಟು ಅನುಕೂಲವಾಗಲಿದೆ.

ಹಸಿವಿನಿಂದ ಕಂಗಾಲಾಗಿದ್ದೇನೆ. ಅನುಕಂಪ, ಅಲಕ್ಷ್ಯವಾದಾಗ ನೊಂದಿದ್ದೇನೆ. ಆದರೆ ಛಲ ಬಿಡಲಿಲ್ಲ. ಫುಟ್‌ಪಾತ್‌ನಲ್ಲಿ ವ್ಯಾಪಾರ ಮಾಡುತ್ತ ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದ ನಾನು ಮತ್ತು ನನ್ನಂತಹ ಹಲವರು ಕೋವಿಡ್‌ನಂಥ ದುರಿತ ಕಾಲದಲ್ಲಿ ಉದ್ಯೋಗ ಕಳೆದುಕೊಂಡೆವು. ಅವರ ಕಷ್ಟಕ್ಕೆ ಸ್ಪಂದಿಸಲು ಸಾಧ್ಯವಾಯಿತು. ದಾನಿಗಳ ಮತ್ತು ಸಂಘ ಸಂಸ್ಥೆಗಳ  ಸಹಾಯದಿಂದ  ₹8 ಲಕ್ಷ ಮೌಲ್ಯದ ಆಹಾರದ ಕಿಟ್‌ಗಳನ್ನು ವಿತರಿಸಲಾಯಿತು. ಹೋರಾಟ ನಿರಂತರವಾಗಿದ್ದರೆ ಸೋಲೆಂಬುದು ಸನಿಹಕ್ಕೆ ಸುಳಿಯುವುದಿಲ್ಲ.

ಪ್ಯಾರಾ ಕ್ರೀಡಾಕೂಟಗಳಲ್ಲಿ ಮ್ಯಾರಥಾನ್, ಶಾಟ್‌ಪುಟ್ ಎಸೆತ, ಜಾವ್ಲಿನ್ ಎಸೆತ, ಟೆನ್ನಿಸ್, ಶೂಟಿಂಗ್ ಹೀಗೆ ಹಲವು ಕ್ರೀಡೆಗಳಲ್ಲಿ ರಾಜ್ಯ, ರಾಷ್ಟ್ರ ಹಾಗೂ ಅಂತರರಾಷ್ಟ್ರ ಮಟ್ಟದ ಪದಕಗಳು ಲಭಿಸಿವೆ. ಈ ಪದಕಗಳು ನಿರಂತರ ಹೋರಾಟಕ್ಕೆ ಮತ್ತು ಸೋಲನ್ನು ಸ್ವೀಕರಿಸಿ ಗೆಲುವಿಗಾಗಿ ಮುನ್ನಡೆಯಲು ದೃಢ ಸಂಕಲ್ಪ ನೀಡುವಲ್ಲಿ ಸಹಾಯಕವಾಗಿವೆ.

ಸದ್ಯ ಸಂಸಾರ ಬೇಡವೆಂದು ನಿರ್ಧರಿಸಿರುವೆ. ಅಂಗವಿಕಲರಿಗೆ ಅವರ ಹಕ್ಕುಗಳನ್ನು ಕೊಡಿಸಲು ಬದುಕು ಮುಡಿಪಿಡುವೆ.

ನಿರೂಪಣೆ: ಸುಧೀಂದ್ರ ಪ್ರಸಾದ್‌ ಇ.ಎಸ್‌

***

ಯತಿರಾಜ್ ಮಠದ್ ಮಾತು...

ಫ್ರಾಂಚೈಸಿಯಿಂದ ‘ಪೇವರ್ಸ್’ವರೆಗೆ 

ಡಿಪ್ಲೊಮಾ ಓದುವಾಗಲೇ ತಂದೆ, ತಾಯಿ ಇಬ್ಬರನ್ನೂ ಕಳೆದುಕೊಂಡೆ. ನಮ್ಮ ಊರಿನಿಂದ ಒಂದು ರೂಪಾಯಿಯನ್ನೂ ತರಲಿಲ್ಲ. ಯಾರೂ ಸಹಾಯ ಮಾಡಲಿಲ್ಲ. ನನ್ನ ದುಡಿಮೆಯಿಂದಲೇ ಉದ್ಯಮ ಆರಂಭಿಸಿದೆ.

ಹಾವೇರಿ ಜಿಲ್ಲೆ ಹಿರೇಕೆರೂರು ತಾಲ್ಲೂಕಿನ ಮೇದೂರು ನನ್ನೂರು. ಒಂಬತ್ತು ತಿಂಗಳ ಮಗುವಾಗಿದ್ದಾಗ ನನಗೆ ಜ್ವರ ಬಂದಿತ್ತಂತೆ. ಆಗ ಪೋಲಿಯೊ ಅಟ್ಯಾಕ್ ಆಯಿತು. ಆಮೇಲೆ ಒಂದು ಕಾಲಿನ ಬೆಳವಣಿಗೆ ಸರಿಯಾಗಿ ಆಗಲಿಲ್ಲ. ಹಾಗಿದ್ದೂ ಎದೆಗುಂದದೆ ದಾವಣಗೆರೆಯಲ್ಲಿ ಪೇವರ್ಸ್ ಉದ್ಯಮ ಆರಂಭಿಸಿದೆ.

ತಂದೆ ಶಾಲಾ ಶಿಕ್ಷಕರು. ಊರಿನಲ್ಲೇ ಪ್ರಾಥಮಿಕ ಶಿಕ್ಷಣ ಪಡೆದೆ. ನಂತರ ಮೈಸೂರಿನ ಜೆಎಸ್‌ಎಸ್ ಅಂಗವಿಕಲರಿಗಾಗಿ ಇರುವ ಪಾಲಿಟೆಕ್ನಿಕ್‌ನಲ್ಲಿ ಕಂಪ್ಯೂಟರ್ ಸೈನ್ಸ್‌ನಲ್ಲಿ ಡಿಪ್ಲೊಮಾ ಪೂರೈಸಿದೆ. ಆ ವೇಳೆಗಾಗಲೇ ತಂದೆ–ತಾಯಿ ನಿಧನರಾದರು. ಎದೆಗುಂದಲಿಲ್ಲ. ಪಾಲಿಟೆಕ್ನಿಕ್‌ನಲ್ಲಿ ನಡೆದ ಕ್ಯಾಂಪಸ್ ಸಂದರ್ಶನದಲ್ಲಿ ಐಡಿಯಾ ಕಂಪನಿಯಲ್ಲಿ ಮಾರ್ಕೆಟಿಂಗ್ ಎಕ್ಸಿಕ್ಯುಟಿವ್ ಕೆಲಸ ಸಿಕ್ಕಿತು. ನನಗೆ ಉದ್ಯಮ ಆರಂಭಿಸುವ  ಆಸೆ ಇತ್ತು. ಪ್ರಧಾನಮಂತ್ರಿ ರೋಜಗಾರ್ ಯೋಜನೆಯಡಿ ₹2 ಲಕ್ಷ ಸಾಲ ಪಡೆದು ಮೊಬೈಲ್ ಸಿಮ್‌ಗಳ ಫ್ರಾಂಚೈಸಿ ಅಂಗಡಿ ಹಾಕಿದೆ.

ಬೆಂಗಳೂರಿನಲ್ಲಿ ಸದಾ ಟ್ರಾಫಿಕ್, ಜನಜಂಗುಳಿ ವಾತಾವರಣ. ಅದು ನನಗೆ ಒಗ್ಗಲ್ಲಿಲ್ಲ. ದಾವಣಗೆರೆ ಇಷ್ಟವಾಯಿತು. ಇರುವ ಅಲ್ಪಸ್ವಲ್ಪ ಬಂಡವಾಳದಲ್ಲಿ 2013ರಲ್ಲಿ ಚರ್ಚ್ ರಸ್ತೆಯಲ್ಲಿ ಪತ್ನಿಯ ಜೊತೆಗೂಡಿ ಆ‌ರ್ಟಿಫಿಷಿಯಲ್ ಜ್ಯುವೆಲ್ಸ್‌ನ ಫ್ಯಾನ್ಸಿ ಸ್ಟೋರ್ ಆರಂಭಿಸಿದೆ. 2014–15ರಲ್ಲಿ ದಾವಣಗೆರೆ ‘ಸ್ಮಾರ್ಟ್ ಸಿಟಿ’ ಘೋಷಣೆಯಾಯಿತು. ಬದಲಾಗುತ್ತಿರುವ ನಗರದ ವಿನ್ಯಾಸಕ್ಕೆ ತಕ್ಕಂತೆ ಪೇವರ್ಸ್ ವಿನ್ಯಾಸಗೊಳಿಸುವ ಆಲೋಚನೆ ಬಂತು. 

ಫ್ಯಾನ್ಸಿ ಅಂಗಡಿಯಿಂದ ಬಂದ ₹10 ಲಕ್ಷ ಇತ್ತು. ಅದಲ್ಲದೆ ಎಸ್‌ಬಿಐನಲ್ಲಿ ಸಣ್ಣ ಮತ್ತು ಮಧ್ಯಮ ಉದ್ಯಮ ಸಾಲ ಯೋಜನೆ ಅಡಿಯಲ್ಲಿ ₹20 ಲಕ್ಷ ಸಾಲ ಪಡೆದೆ. ಚಿಕ್ಕ ಜಾಗವನ್ನು ಬಾಡಿಗೆಗೆ ಹಿಡಿದು ಪೇವರ್ಸ್ ಉದ್ಯಮ ಆರಂಭಿಸಿದೆ. ಈಗ 30 ಸಾವಿರ ಚದರ ಅಡಿ ವಿಸ್ತೀರ್ಣದಲ್ಲಿ ಉದ್ಯಮ ನಡೆಸುತ್ತಿದ್ದೇನೆ. ಒಬ್ಬರು ಅಂಗವಿಕಲರೂ ಸೇರಿ 15 ಮಂದಿಗೆ ಕೆಲಸ ನೀಡಿದ್ದು, ವರ್ಷಕ್ಕೆ ₹25 ಲಕ್ಷದವರೆಗೂ ವಹಿವಾಟು ನಡೆಯುತ್ತಿದೆ.

ನನ್ನ ಎಡಗಾಲಿನಲ್ಲಿ ಸ್ವಾಧೀನ ಇಲ್ಲ. ಕ್ಯಾಲಿಪರ್ ಅಳವಡಿಸಿಕೊಂಡಿದ್ದೇನೆ. ಮೂರು ಚಕ್ರದ ಸ್ಕೂಟರ್‌ನಲ್ಲಿ ನಗರದಲ್ಲೆಲ್ಲಾ ಸುತ್ತಾಡಿ  ನಿರ್ಮಾಣವಾಗುತ್ತಿರುವ ಮನೆಗಳ ಮಾಲೀಕರಿಂದ ಆರ್ಡರ್ ತಂದು ಪೇವರ್ಸ್‌ ಪೂರೈಸುತ್ತೇನೆ. ಯಾವುದೇ ಕ್ಷೇತ್ರದಲ್ಲೇ ಆಗಲಿ, ಜ್ಞಾನ, ಆಸಕ್ತಿಯ ಜೊತೆಗೆ ಸಾಧಿಸುವ ಛಲ ಇರಬೇಕು. ಅಂಗವಿಕಲರಿಗೆ ವ್ಯವಸ್ಥೆಯೂ ಸಹಾಯ ಮಾಡಬೇಕು. ಆಸಕ್ತಿ ಇದ್ದರೆ ಯಾರಾದರೂ ಸಹಾಯಕ್ಕೆ ಬರುತ್ತಾರೆ.

ನಿರೂಪಣೆ: ಡಿ.ಕೆ. ಬಸವರಾಜು

***

ಕೆ.ಪಿ.ಪೂಜಾಶ್ರೀ ಮಾತು...

9 ಕಡೆ ಶಂಟ್‌ ಸಂಪರ್ಕ: ಸಾಧನೆಗೆ ಇಲ್ಲ ಅಡ್ಡಿ!

ನನಗೆ ಬುದ್ಧಿ ಬರುವ ಹೊತ್ತಿಗೆ ಅಪ್ಪ–ಅಮ್ಮ ನನ್ನನ್ನು ಆಸ್ಪತ್ರೆಯಿಂದ ಆಸ್ಪತ್ರೆಗೆ ಹೊತ್ತು ತಿರುಗುತ್ತಿದ್ದರು. ಹುಟ್ಟುತ್ತಲೇ ‘ಹೈಡ್ರೋಸೆಫಲಸ್‌’ ರೋಗಕ್ಕೆ ತುತ್ತಾಗಿದ್ದ ನಾನು ವಿಕಾರ ರೂಪ ಪಡೆದಿದ್ದೆ.

ದ್ರವ ತುಂಬಿಕೊಂಡಿದ್ದ ಕಾರಣ ತಲೆ ದೇಹಕ್ಕಿಂತಲೂ ದಪ್ಪವಾಗಿತ್ತು, ಕತ್ತು ನಿಲ್ಲದೆ ಕೆಳಗೆ ಬೀಳುತ್ತಿತ್ತು. ಶಸ್ತ್ರಚಿಕಿತ್ಸೆಯ ಮೂಲಕ ತಲೆಗೆ ‘ಶಂಟ್‌’ ಅಳವಡಿಸಿ,  ಅದರ ಟ್ಯೂಬ್‌ಗಳನ್ನು ದೇಹದ ಇತರ 9 ಅಂಗಗಳಿಗೆ ಜೋಡಿಸಲಾಯಿತು. ಆ ಮೂಲಕ ವೈದ್ಯರು ದ್ರವದ ಸರಾಗ ಪರಿಚಲನೆಗೆ ದಾರಿ ಮಾಡಿಕೊಟ್ಟರು. ಮೊದಲ ಬಾರಿಯ ಶಸ್ತ್ರಚಿಕಿತ್ಸೆ ವಿಫಲಗೊಂಡಿತ್ತು. ಶ್ರವಣದೋಷ ಹುಟ್ಟಿನಿಂದಲೇ ಬಂದಿತ್ತು. ಶಸ್ತ್ರಚಿಕಿತ್ಸೆಯ ನಂತರ ದೃಷ್ಟಿ ದೋಷವೂ ಕಾಣಿಸಿಕೊಂಡಿತು. ಮತ್ತೊಂದು ಶಸ್ತ್ರಚಿಕಿತ್ಸೆಯ ನಂತರ ಕಣ್ಣು ಸ್ವಲ್ಪ ಕಾಣಿಸುವಂತಾಯಿತು.

ನನ್ನ ಅಂಗವೈಕಲ್ಯವನ್ನು ನನ್ನ ತಂದೆ ಕೆ.ಆರ್.ಪಾಂಡುರಂಗ, ತಾಯಿ ಮೇನಕಾದೇವಿ ಎಂದಿಗೂ ಶಾಪ ಎಂದುಕೊಳ್ಳಲಿಲ್ಲ. ನನ್ನನ್ನು ಅಂಗವಿಕಲ ಮಕ್ಕಳ ಶಾಲೆಗೆ ಸೇರಿಸದೆ ಸಾಮಾನ್ಯರ ಶಾಲೆಗೆ ಸೇರಿಸಿದರು. ಎಲ್ಲರಂತೆಯೇ ನಾನೂ ಕಲಿಯುತ್ತಾ ಸಾಗಿದೆ. ಅಂಗವೈಕಲ್ಯದ ನಡುವೆಯೂ ಭರತನಾಟ್ಯದಲ್ಲಿ ಸಾಧನೆ ಮಾಡಿದ್ದ ಸುಧಾಚಂದ್ರನ್‌ ನನಗೆ ಸ್ಫೂರ್ತಿಯಾದರು. ಅವರಂತೆಯೇ ನಾನೂ ಕಾಲಿಗೆ ಗೆಜ್ಜೆ ಕಟ್ಟಿದೆ. ಜೊತೆಗೆ ಕ್ರೀಡೆ, ಗಾಯನ, ಚಿತ್ರಕಲೆಯಲ್ಲೂ ಪ್ರತಿಭೆ ತೋರಿದೆ.

ಸಾಮಾನ್ಯರ ಜೊತೆಯಲ್ಲಿ ಭರತನಾಟ್ಯ ಮಾಡಿದೆ. ಮೈಸೂರು ದಸರಾ ಪ್ರಶಸ್ತಿಯೂ ನನಗೆ ಬಂತು. ಮೈಸೂರಿನ ಜಗನ್ಮೋಹನ ಅರಮನೆಯಲ್ಲಿ ನಡೆದ ಪಠ್ಯ, ಪಠ್ಯೇತರ ಚಟುವಟಿಕೆಯಲ್ಲಿ ಭಾಗವಹಿಸಿ ಚಾಂಪಿಯನ್ ಪಟ್ಟ ಪಡೆದುಕೊಂಡೆ. ಅಂಗವಿಕಲರ ದಕ್ಷಿಣ ಭಾರತ ಕ್ರೀಡಾಕೂಟದಲ್ಲಿ ಓಟದಲ್ಲಿ ಪ್ರಥಮ ಸ್ಥಾನ ಪಡೆದೆ.  ಸಂಜ್ಞೆ (ಸೈನ್ ಲಾಂಗ್ವೆಜ್) ಮೂಲಕ ದಿನನಿತ್ಯದ ಚಟುವಟಿಕೆ ನಡೆಸುತ್ತಿದ್ದ ನಾನು ಮೈಸೂರಿನ ಅಖಿಲ ಭಾರತ ವಾಕ್ ಮತ್ತು ಶ್ರವಣ ಸಂಸ್ಥೆ ಸಹಾಯದೊಂದಿಗೆ ಕೊಂಚ ಮಾತನಾಡುವುದನ್ನು ಕಲಿತೆ. ಅಲ್ಲಿ ‘ರೋಲ್‌ ಮಾಡೆಲ್‌ ಅಚೀವರ್‌’ ಎಂಬ ಹಿರಿಮೆಯೂ ಸಿಕ್ಕಿತು.

13ನೇ ಅಂತರರಾಷ್ಟ್ರೀಯ ವಿಜ್ಞಾನ ಪರೀಕ್ಷೆಯಲ್ಲಿ ಮೊದಲ ಸ್ಥಾನ ಪಡೆದೆ. ಅಬಾಕಸ್‌ನಲ್ಲಿ 7ನೇ ಹಂತದವರೆಗೂ ಸಾಗಿದೆ. ಅಂಗವಿಕಲರ ದಕ್ಷಿಣ ಭಾರತ ಕ್ರೀಡಾಕೂಟ, ಓಟದಲ್ಲಿ ಪ್ರಥಮ ಸ್ಥಾನ ಪಡೆದೆ. ಎಸ್‌ಎಸ್‌ಎಲ್‌ಸಿ ಓದುವಾಗ ನನ್ನ ಆರೋಗ್ಯ ಕೆಟ್ಟಿತ್ತು. ಅದರ ನಡುವೆಯೂ ಓದಿ ಪ್ರಥಮ ದರ್ಜೆಯಲ್ಲಿ ತೇರ್ಗಡೆ ಹೊಂದಿದೆ. ಪಿಯುಸಿ ನಂತರ ಕಮರ್ಷಿಯಲ್‌ ಪ್ರಾಕ್ಟಿಸ್ ಡಿಪ್ಲೊಮಾ ಮುಗಿಸಿದ್ದು ಅಖಿಲ ಭಾರತ ವಾಕ್ ಮತ್ತು ಶ್ರವಣ ಸಂಸ್ಥೆಯಲ್ಲೇ ನೌಕರಿ ಪಡೆದಿದ್ದೇನೆ. 

ವೈಕಲ್ಯಗಳು ನನ್ನ ಸಾಧನೆಯ ಹಾದಿಯಲ್ಲಿ ಎಂದೂ ಅಡ್ಡಿಯಾಗಿಲ್ಲ. ಮಂಡ್ಯ ಸಮೀಪದ ಕಿಕ್ಕೇರಿ ಗ್ರಾಮೀಣ ಪರಿಸರದಲ್ಲಿ ಹುಟ್ಟಿದ ನಾನು ಈಗ ಮೈಸೂರಿನಲ್ಲಿ ಕೆಲಸ ಮಾಡಿ ಜೀವನ ರೂಪಿಸಿಕೊಂಡಿದ್ದೇನೆ. ಕಲೆ, ಕ್ರೀಡಾ ಕ್ಷೇತ್ರದಲ್ಲಿ ಮತ್ತಷ್ಟು ಸಾಧನೆ ಮಾಡುವ ಕನಸು ಕಟ್ಟಿಕೊಂಡಿದ್ದೇನೆ.

ನಿರೂಪಣೆ: ಕಿಕ್ಕೇರಿ ಗೋವಿಂದರಾಜು

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು