ಗುರುವಾರ , ಏಪ್ರಿಲ್ 2, 2020
19 °C

ಸದನ ಕಲಾಪವೋ ಕುಸ್ತಿ ಅಖಾಡವೋ?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗಂಭೀರ ಚರ್ಚೆಗಳಿಗೆ ವೇದಿಕೆಯಾಗಬೇಕಿದ್ದ ವಿಧಾನಸಭೆಯ ಕಲಾಪದ ಗುಣಮಟ್ಟ ಇತ್ತೀಚಿನ ದಿನಗಳಲ್ಲಿ ಕುಸಿಯುತ್ತಿದ್ದು, ಸದನದ ಘನತೆಗೆ ಕುಂದು ಉಂಟಾಗುತ್ತಿದೆ ಎಂಬ ದೂರುಗಳು ಜೋರಾಗಿ ಕೇಳಿಬರುತ್ತಿವೆ. ಅಂತಹ ದೂರುಗಳಿಗೆ ಪುಷ್ಟಿ ನೀಡುವಂತಿದೆ ಮೊನ್ನೆ ಸದನದಲ್ಲಿ ನಡೆದ ರಮೇಶಕುಮಾರ್‌–ಸುಧಾಕರ್‌ ಅವರ ನಡುವಿನ ಜಟಾಪಟಿ. ದಶಕಗಳ ಹಿಂದೆ ವಾಗ್ವಾದಗಳು ನಡೆದರೆ ಅದನ್ನೇ ಅಹಿತಕರ ಘಟನೆ ಎಂದು ಭಾವಿಸಲಾಗುತ್ತಿತ್ತು. ಆದರೆ, ಈಗೀಗ ತೊಡೆ, ತೋಳು ತಟ್ಟುವುದು, ಪರಸ್ಪರ ಶಕ್ತಿ ಪ್ರದರ್ಶನಕ್ಕೆ ಆಹ್ವಾನ ನೀಡುವುದು, ಮೇಜು, ಕುರ್ಚಿ ಮುರಿದು ಹಾಕುವುದು, ಅಂಗಿ ಹರಿದುಕೊಳ್ಳುವುದು, ಸೀರೆ ಎಳೆಯುವುದು... ಇಂತಹ ಘಟನೆಗಳಿಂದಲೇ ದೇಶದ ವಿವಿಧ ವಿಧಾನಸಭೆಗಳ ಕಲಾಪಗಳು ಸುದ್ದಿಯಾಗಿವೆ. ಸಂಸದೀಯ ಚರ್ಚೆಗಳ ಚಹರೆಗೆ ಮಸಿ ಬಳಿಯುತ್ತಿವೆ. ಅಂತಹ ಕೆಲವು ಘಟನೆಗಳ ಮೆಲುಕು ಇಲ್ಲಿದೆ...

***

ತೋಳ್ಬಲ ಪ್ರದರ್ಶಿಸಿದ್ದ ಸಿದ್ದರಾಮಯ್ಯ
2010ರಲ್ಲಿ ನಡೆದ ವಿಧಾನಸಭೆ ಅಧಿವೇಶನದಲ್ಲಿ ಅಕ್ರಮ ಗಣಿಗಾರಿಕೆಗೆ ಸಂಬಂಧಿಸಿದಂತೆ ತುಂಬಾ ತುರುಸಿನ ಚರ್ಚೆ ನಡೆಯುತ್ತಿತ್ತು. ಆಡಳಿತ ಮತ್ತು ವಿರೋಧ ಪಕ್ಷಗಳ ಸದಸ್ಯರ ನಡುವಿನ ವಾಗ್ವಾದ ತಾರಕಕ್ಕೇರಿತ್ತು. ಚರ್ಚೆಯಲ್ಲಿ ಮಧ್ಯೆ ಪ್ರವೇಶಿಸಿದ್ದ ಕಂಪ್ಲಿ ಶಾಸಕರಾಗಿದ್ದ ಬಿಜೆಪಿಯ ಸುರೇಶ್‌ ಬಾಬು, ‘ತಾಕತ್ತಿದ್ದರೆ ನೀವು ಬಳ್ಳಾರಿ ಬನ್ನಿ, ನಿಮ್ಮನ್ನು ನೋಡಿಕೊಳ್ಳುತ್ತೇವೆ’ ಎಂದು ಪಂಥಾಹ್ವಾನ ನೀಡಿದರು.

ವಿರೋಧ ಪಕ್ಷದ ನಾಯಕರಾಗಿದ್ದ ಸಿದ್ದರಾಮಯ್ಯ ಅಷ್ಟೇ ಸಿಟ್ಟಿನಿಂದ ಪ್ರತಿಕ್ರಿಯಿಸಿ, ‘ಏನು ಸದನದೊಳಗೆ ತೊಡೆತಟ್ಟಿ ಕುಸ್ತಿಗೆ ಆಹ್ವಾನಿಸುತ್ತೀರಾ? ಬಳ್ಳಾರಿಗೆ ಬರುತ್ತೇನೆ, ಅದೇನು ಮಾಡುತ್ತೀರೋ ನೋಡುತ್ತೇನೆ’ ಎಂದು ತೋಳು ತಟ್ಟಿ ಆಕ್ರೋಶ ವ್ಯಕ್ತಪಡಿಸಿದ್ದರು. ಸಚಿವರಾಗಿದ್ದ ಜನಾರ್ದನ ರೆಡ್ಡಿ ಮತ್ತು ಸಿದ್ದರಾಮಯ್ಯ ಬೆಂಬಲಿಗ ಶಾಸಕರು ಸದನದಲ್ಲೇ ಕೈ–ಕೈ ಮಿಲಾಯಿಸುವ ಹಂತಕ್ಕೂ ಹೋಗಿದ್ದರು.

ಅಂಗಿ ಹರಿದುಕೊಂಡ ಗೂಳಿಹಟ್ಟಿ
ಇದೂ 2010ರಲ್ಲೇ ನಡೆದ ಘಟನೆ. ಬಿಜೆಪಿ ಸರ್ಕಾರದ ವಿರುದ್ಧ ಬಂಡೆದ್ದ ಹದಿನಾಲ್ಕು ಮಂದಿ ಶಾಸಕರು ಬಂಡೆದಿದ್ದರು. ಅವರೆಲ್ಲ ವಿಶ್ವಾಸಮತ ಗೊತ್ತುವಳಿ ವಿರುದ್ಧ ಮತ ಚಲಾವಣೆ ಮಾಡುವುದಾಗಿ ಹೇಳಿಕೊಂಡಿದ್ದರು. ಪಕ್ಷೇತರ ಸದಸ್ಯರಾಗಿದ್ದ ಗೂಳಿಹಟ್ಟಿ ಶೇಖರ್‌ ಕೂಡ ಅವರಲ್ಲಿ ಒಬ್ಬರಾಗಿದ್ದರು.

ಮತದಾನಕ್ಕೆ ಅವಕಾಶ ನೀಡದೆ ಕೊನೆಯಕ್ಷಣದಲ್ಲಿ ಸ್ಪೀಕರ್‌ ತಮ್ಮನ್ನು ಅನರ್ಹಗೊಳಿಸಿದ್ದನ್ನು ವಿರೋಧಿಸಿದ ಅವರು ಟೇಬಲ್‌ ಮೇಲೆ ನಿಂತು, ಅಂಗಿ ಹರಿದುಕೊಂಡು ಪ್ರತಿಭಟಿಸಿದ್ದರು. ಗೂಳಿಹಟ್ಟಿ ಶೇಖರ್‌ ಅವರ ಹೆಸರು ಹಾಕಿ, ಆನ್‌ಲೈನ್‌ನಲ್ಲಿ ಹುಡುಕಾಟ ನಡೆಸಿದರೆ ಮೊದಲು ಕಾಣುವುದು ಆ ಅಂಗಿ ಹರಿದುಕೊಂಡ ಪ್ರಕರಣದ ಚಿತ್ರವೇ. ಆ ಘಟನೆ ಅಷ್ಟೊಂದು ಸುದ್ದಿ ಮಾಡಿತ್ತು.

ಸದನ ಪ್ರವೇಶಿಸಿದ್ದ ಪೊಲೀಸರು
2010ರಲ್ಲಿ ಯಡಿಯೂರಪ್ಪ ವಿಶ್ವಾಸಮತ ಯಾಚನೆ ಮಾಡುವ ಸಂದರ್ಭದಲ್ಲಿನ ಘಟನೆ ರಾಜ್ಯ ವಿಧಾನಸಭೆ ಇತಿಹಾಸದಲ್ಲಿ ಒಂದು ಕಪ್ಪು ಚುಕ್ಕೆ ಎಂದು ರಾಜಕೀಯ ವಿಶ್ಲೇಷಕರು ಹೇಳುತ್ತಾರೆ. ಸಮವಸ್ತ್ರದಲ್ಲಿದ್ದ ಆಗಿನ ಪೊಲೀಸ್‌ ಕಮಿಷನರ್‌ ಶಂಕರ್‌ ಬಿದರಿ, ವಿರೋಧ ಪಕ್ಷದ ನಾಯಕರಾಗಿದ್ದ ಸಿದ್ದರಾಮಯ್ಯ ಹಾಗೂ ಅವರ ವಿರೋಧಪಕ್ಷದ ಇತರ ಶಾಸಕರನ್ನು ಸದನ ಪ್ರವೇಶಿಸದಂತೆ ಬಾಗಿಲಿನಲ್ಲಿಯೇ ತಡೆದಿದ್ದರು. ಸಿದ್ದರಾಮಯ್ಯ, ಜಮೀರ್‌ ಅಹ್ಮದ್‌ ಮತ್ತಿತರರು ಕಮಿಷನರ್‌ ಜತೆ ವಾಗ್ವಾದ ನಡೆಸಿದ್ದರು. ಆಗ ನಡೆದ ತಿಕ್ಕಾಟದಲ್ಲಿ ಬಿದರಿ ಅವರ ಕ್ಯಾಪ್‌ ಕೆಳಗೆ ಬಿದ್ದಿತ್ತು.

ಕಾಂಗ್ರೆಸ್‌ನ ರಹೀಂ ಖಾನ್‌ ಅವರು ಬಾಗಿಲನ್ನು ತಳ್ಳಿದಾಗ ವಿರೋಧಪಕ್ಷದ ಸದಸ್ಯರು ಸದನದ ಒಳಗೆ ನುಗ್ಗಿದ್ದರು. ಸದಸ್ಯರು ಹಾಗೂ ವಿಧಾನಸಭೆ ಸಿಬ್ಬಂದಿಯನ್ನು ಹೊರತುಪಡಿಸಿ ಸದನದ ಒಳಗೆ ಹೋಗಲು ಮಾರ್ಷಲ್‌ಗಳಿಗೆ (ಬಿಳಿ ಸಮವಸ್ತ್ರ ಧರಿಸಿದ ಭದ್ರತಾ ಸಿಬ್ಬಂದಿ) ಮಾತ್ರ ಅವಕಾಶವಿದೆ. ಆದರೆ, ಆ ದಿನ ಪೊಲೀಸ್‌ ಅಧಿಕಾರಿಗಳು ರಿವಾಲ್ವರ್‌ ಸಹಿತ ಸದನ ಪ್ರವೇಶಿಸಿದ್ದರು ಎಂಬ ದೂರುಗಳಿದ್ದವು.

ಮಾರ್ಷಲ್‌ಗಳನ್ನು ಕರೆದಿದ್ದ ಸಿಎಂ
ಇದು 2016ರ ಅಧಿವೇಶನದ ಘಟನೆ. ಪೊಲೀಸ್‌ ಅಧಿಕಾರಿಗಳ ಆತ್ಮಹತ್ಯೆ ಪ್ರಕರಣಗಳಿಗೆ ಸಂಬಂಧಿಸಿದಂತೆ ಚರ್ಚೆ ನಡೆಯುತ್ತಿತ್ತು. ಬಿಜೆಪಿಯ ಕೆ.ಜಿ.ಬೋಪಯ್ಯ ಮಾತನಾಡುತ್ತಿದ್ದಾಗ, ಕಾಂಗ್ರೆಸ್‌ನ ರಮಾನಾಥ ರೈ ಏನೋ ಹೇಳಲು ಎದ್ದಿದ್ದರು. ‘ನೀವು ಅರಣ್ಯ ಸಚಿವರು. ಆನೆ ಓಡಿಸುವ ಕೆಲಸ ಮಾಡಿ. ಪೊಲೀಸರ ಉಸಾಬರಿ ನಿಮಗೇಕೆ’ ಎಂದು ಬಿಜೆಪಿ ಸದಸ್ಯರು ಅವರನ್ನು ಕೆಣಕಿದ್ದರು. ‘ನಾನು ಆರು ಸಲ ಸಚಿವನಾಗಿದ್ದೇನೆ. ನಿಮ್ಮಿಂದ ಹೇಳಿಸಿಕೊಳ್ಳುವ ಅಗತ್ಯವಿಲ್ಲ’ ಎಂದು ರೈ ಮಾರುತ್ತರ ನೀಡಿದ್ದರು.

‘ಕತ್ತೆಗೂ ವಯಸ್ಸು ಆಗುತ್ತೆ’ ಎಂದು ಸಿ.ಟಿ.ರವಿ ಪ್ರತಿಕ್ರಿಯಿಸಿದರೆ, ‘ವಿಜಯಪುರದಲ್ಲಿ ಗೋಲ್‌ ಗುಂಬಜ್‌ ಇದೆ. ಅದು ನಿರ್ಮಾಣವಾಗಿ 360 ವರ್ಷ ಆಗಿದೆ. ಹಾಗಂತ ಅದಕ್ಕೆ ಅಜ್ಜ–ಅಮ್ಮ ಅನ್ನೋಕೆ ಆಗುತ್ತಾ’ ಎಂದು ಲಕ್ಷ್ಮಣ ಸವದಿ ಕೆಣಕಿದ್ದರು. ಆಗ ಎರಡು ಬಣಗಳು ತೋಳು ತಟ್ಟಿದಾಗ, ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ‘ಏ ಮಾರ್ಷಲ್‌ಗಳು ಎಲ್ಲಿದ್ದೀರಪ್ಪ’ ಎಂದು ಕರೆದಿದ್ದರು.

ಸದನ ಕದನದ ಈ ಪರಿ..

ಉತ್ತರ ಪ್ರದೇಶ: 1997ರ ಅ.22ರಂದು ಉತ್ತರಪ್ರದೇಶ ವಿಧಾಸನಭೆಯ ಕಲಾಪ ಆರಂಭವಾಗುತ್ತಿದ್ದಂತೆಯೇ ವಿಶ್ವಾಸಮತದ ನಿರ್ಣಯದ ಮೇಲಿನ ಮತವಿಭಜನೆಗೆ ಒತ್ತಾಯಿಸಿ ಕಾಂಗ್ರೆಸ್‌ ಶಾಸಕಾಂಗ ಪಕ್ಷದ ನಾಯಕ ಪ್ರಮೋದ್‌ ತಿವಾರಿ ಹಾಗೂ ಬಿಎಸ್‌ಪಿ ಶಾಸಕರು ಗದ್ದಲ ಆರಂಭಿಸಿದ್ದರು. ಬಿಎಸ್‌ಪಿ ಶಾಸಕರೊಬ್ಬರು ಸ್ಪೀಕರ್‌ ಕುರ್ಚಿಯತ್ತ ಮೈಕ್‌ ಎಸೆದಿದ್ದರು. ಅದಾಗುತ್ತಿದ್ದಂತೆ ಎಲ್ಲಾ ದಿಕ್ಕುಗಳಿಂದ ಮೈಕ್‌ಗಳು, ಕುರ್ಚಿಗಳು, ಪೇಪರ್‌ವ್ಹೇಟ್‌ಗಳು ತೂರಿಬಂದಿದ್ದವು.

ದೆಹಲಿ: 2007ರಲ್ಲಿ ದೆಹಲಿ ವಿಧಾನಸಭೆಯಲ್ಲಿ ಕಾಂಗ್ರೆಸ್‌ ಶಾಸಕ ಭೀಷ್ಮ ಶರ್ಮಾ ಅವರು ಬಿಜೆಪಿಯ ಶಾಸಕ ಸಾಹೇಬ್‌ಸಿಂಗ್‌ ಚೌಹಾಣ್‌ ಮೇಲೆ ಹಲ್ಲೆ ನಡೆಸಿದ್ದರು. ಘಟನೆ ನಡೆದ ಕೂಡಲೇ ಶರ್ಮಾ ಅವರನ್ನು ದಿನದ ಮಟ್ಟಿಗೆ ಅಮಾನತುಗೊಳಿಸಲಾಗಿತ್ತು

ಮಹಾರಾಷ್ಟ್ರ: ಇದು 2009ರ ನವೆಂಬರ್‌ನಲ್ಲಿ ನಡೆದ ಘಟನೆ. ಹಿಂದಿ ಭಾಷೆಯಲ್ಲಿ ಪ್ರಮಾಣವಚನ ಸ್ವೀಕರಿಸಿದ ಶಾಸಕರ ಮೇಲೆ ಮಹಾರಾಷ್ಟ್ರ ನವನಿರ್ಮಾಣ ಸಮಿತಿಯ (ಎಂಎನ್‌ಎಸ್‌) ನಾಲ್ವರು ಶಾಸಕರು ಹಲ್ಲೆ ನಡೆಸಿದ್ದರು. ನಾಲ್ಕು ವರ್ಷದ ಬಳಿಕ ಇವರನ್ನು ಅಮಾನತುಗೊಳಿಸಲಾಗಿತ್ತು.

ಒಡಿಶಾ: 2011ರಲ್ಲಿ ಒಡಿಶಾ ವಿಧಾನಸಭೆಯಲ್ಲಿ ಕಾಂಗ್ರೆಸ್‌ ಶಾಸಕರೊಬ್ಬರು ಸ್ಪೀಕರ್‌ ಅವರತ್ತ ಕುರ್ಚಿ ಎಸೆಯಲು ಮುಂದಾಗಿದ್ದರು. ಮಧ್ಯಪ್ರವೇಶಿಸಿದ ಸದನದ ಸಿಬ್ಬಂದಿ, ಶಾಸಕರ ಕೈಯಿಂದ ಕುರ್ಚಿಯನ್ನು ಕಸಿದುಕೊಂಡಿದ್ದರು.

ಪಶ್ಚಿಮ ಬಂಗಾಳ: ಪಶ್ಚಿಮ ಬಂಗಾಳದ ವಿಧಾನಸಭೆಯಲ್ಲಿ ಹಲ್ಲೆಯ ಹಲವು ಘಟನೆಗಳು ನಡೆದಿವೆ. 2012ರ ಡಿ.11ರಂದು ಚಿಟ್‌ಫಂಡ್‌ ಹಗರಣದ ವಿಚಾರವಾಗಿ ಚರ್ಚೆಗೆ ಅವಕಾಶ ನೀಡಲು ಸ್ಪೀಕರ್‌ ನಿರಾಕರಿಸಿದಾಗ, ಸಿಪಿಎಂ ಶಾಸಕರೊಬ್ಬರು ಸ್ಪೀಕರ್‌ ಮೇಲೆ ಹಲ್ಲೆಗೆ ಮುಂದಾಗಿದ್ದರು. ಈ ಸಂದರ್ಭದಲ್ಲಿ ಕೋಲಾಹಲ ಸೃಷ್ಟಿಯಾಗಿ ಮೂವರು ಶಾಸಕರಿಗೆ ಗಾಯಗಳಾಗಿದ್ದವು.

ಕೇರಳ: ಭ್ರಷ್ಟಾಚಾರ ಆರೋಪ ಹೊಂದಿದ್ದ ಸಚಿವ ಕೆ.ಎಂ. ಮಾಣಿ ಅವರು 2015ರಲ್ಲಿ ಬಜೆಟ್‌ ಮಂಡಿಸಲು ಮುಂದಾದಾಗ ವಿರೋಧಪಕ್ಷದ ಸದಸ್ಯರು ಅವರ ಕೈಯಿಂದ ಬಜೆಟ್‌ ಪ್ರತಿಯನ್ನು ಕಿತ್ತು ಹರಿದೆಸೆದಿದ್ದರು. ಈ ಸಂದರ್ಭದಲ್ಲಿ ಕಾಂಗ್ರೆಸ್‌ ಹಾಗೂ ಎಲ್‌ಡಿಎಫ್‌ ಶಾಸಕರ ಮಧ್ಯೆ ಮಾರಾಮಾರಿ ಆರಂಭವಾಗಿತ್ತು. ಶಾಸಕರು ಕುರ್ಚಿ, ಮೈಕ್‌ಗಳನ್ನು ಕಿತ್ತು ಎಸೆದಿದ್ದರು. ಘಟನೆಯಲ್ಲಿ ಮೂವರು ಶಾಸಕರು ಗಾಯಗೊಂಡಿದ್ದರು. ವಿರೋಧಪಕ್ಷದ ಶಾಸಕರೊಬ್ಬರು ಸದನದೊಳಗೇ ಮೂರ್ಛೆಹೋಗಿದ್ದರು.

ಪಂಜಾಬ್‌: ಪಂಜಾಬ್‌ ವಿಧಾನಸಭೆಯಲ್ಲಿ 2016ರಲ್ಲಿ ಅವಿಶ್ವಾಸ ನಿರ್ಣಯದ ಮೇಲೆ ಚರ್ಚೆ ನಡೆಯುತ್ತಿತ್ತು. ಸ್ಪೀಕರ್‌ ಆಸನದ ಮುಂದೆ ಸೇರಿದ ಕಾಂಗ್ರೆಸ್‌ ಸದಸ್ಯರು ಕಾಗದಗಳನ್ನು ಹರಿದು ಸ್ಪೀಕರ್‌ ಮೇಲೆ ಎಸೆದಿದ್ದರು. ಗದ್ದಲದ ಮಧ್ಯೆ, ಕಾಂಗ್ರೆಸ್‌ ಶಾಸಕ ತ್ರಿಲೋಚನ ಸೂದ್‌ ಅವರು ಸಚಿವ ಬಿಕ್ರಮ್‌ ಮಜೀಥಿಯಾ ಅವರತ್ತ ತಮ್ಮ ಬೂಟನ್ನು ಎಸೆದಿದ್ದರು.

ಇನ್ನೂ ಕಾಡುವ ಸೀರೆ ಎಳೆದ ಪ್ರಸಂಗ
* 1988ರಲ್ಲಿ ತಮಿಳುನಾಡಿನಲ್ಲಿ ಎಂಜಿಆರ್ ಸಾವಿನ ಬಳಿಕ ಅವರ ಪತ್ನಿ ಜಾನಕಿಗೆ ಕಾಂಗ್ರೆಸ್ ಬೆಂಬಲ ಸಿಕ್ಕಿರಲಿಲ್ಲ. ಐವರು ಶಾಸಕರು ರಾಜೀನಾಮೆ ನಿರ್ಧಾರ ಪ್ರಕಟಿಸಿದ್ದರು. ಇದು ಸದನದಲ್ಲಿ ಕೋಲಾಹಲವನ್ನು ಸೃಷ್ಟಿಸಿತು. ಎಐಎಡಿಎಂಕೆಯ ಇಬ್ಬರು ಶಾಸಕರು ಬಂಡಾಯ ಶಾಸಕರ ಮೇಲೆ ಅಕ್ಷರಶಃ ಮುಗಿಬಿದ್ದಿದ್ದರು. ಮೈಕ್‌ ಕಿತ್ತೆಸೆದು, ಕುರ್ಚಿಗಳನ್ನು ಎಳೆದಾಡಿದ್ದರು. ಗ್ಯಾಲರಿಯಲ್ಲಿದ್ದ ಕೆಲವರು ಅಲ್ಲಿಂದ ಕುರ್ಚಿಗಳನ್ನು ಕೆಳಕ್ಕೆ ಎಸೆದಿದ್ದರು. 20ಕ್ಕೂ ಹೆಚ್ಚು ಸದಸ್ಯರು ಗಾಯಗೊಂಡಿದ್ದರು.

* 1989ರಲ್ಲಿ ಕರುಣಾನಿಧಿ ಅವರು ಬಜೆಟ್ ಮಂಡಿಸುವಾಗ ಜಯಲಲಿತಾ ಅವರ ನೇತೃತ್ವದ ಪಕ್ಷದ ಶಾಸಕರೊಬ್ಬರು ಅಡ್ಡಿಪಡಿಸಿದ್ದರು. ಕೆಲವೇ ಕ್ಷಣಗಳಲ್ಲಿ ಸದನ ರಣರಂಗವಾಗಿತ್ತು. ಶಾಸಕರೊಬ್ಬರು ಜಯಲಲಿತಾ ಅವರ ಸೀರೆಯನ್ನು ಎಳೆದರು ಎಂದು ಆರೋಪಿ ಸಲಾಗಿತ್ತು. ಕರುಣಾನಿಧಿ ಅವರ ಕನ್ನಡಕ ಮುರಿದಿತ್ತು. ಬಜೆಟ್ ಪ್ರತಿಯನ್ನು ಹರಿದುಹಾಕಲಾಗಿತ್ತು. ಮೈಕ್ರೊಫೋನ್, ಪುಸ್ತಕಗಳನ್ನು ಸದನದಲ್ಲಿ ತೂರಲಾಗಿತ್ತು.

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು