ಮಂಗಳವಾರ, ಜೂನ್ 22, 2021
24 °C

ಆಳ–ಅಗಲ: ಇಸ್ರೇಲ್‌–ಪ್ಯಾಲೆಸ್ಟೀನ್‌ ಮತ್ತೆ ಹೆಚ್ಚಿದ ಕಿಚ್ಚು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಇಸ್ರೇಲ್‌ ಮತ್ತು ಪ್ಯಾಲೆಸ್ಟೀನ್‌ ನಡುವಿನ ಸಂಘರ್ಷ ಮತ್ತೆ ತೀವ್ರಗೊಂಡಿದೆ. ರಂಜಾನ್‌ ಮಾಸ ಆರಂಭವಾಗುತ್ತಿದ್ದಂತೆ, ಏಪ್ರಿಲ್‌ ಮಧ್ಯ ಭಾಗದಲ್ಲಿ ಗಾಜಾ ಹಾಗೂ ವೆಸ್ಟ್‌ ಬ್ಯಾಂಕ್‌ಗಳಲ್ಲಿ ರಾತ್ರಿವೇಳೆಯಲ್ಲಿ ನಾಗರಿಕರು ಹಾಗೂ ಪೊಲೀಸರ ನಡುವೆ ಸಂಘರ್ಷಗಳು ನಡೆದಿವೆ.

ಈಗ ಪರಿಸ್ಥಿತಿ ಇನ್ನೂ ಬಿಗಡಾಯಿಸಿದೆ. ಗಾಜಾದ ಮೇಲೆ ಇಸ್ರೇಲ್‌ ಸೇನೆಯು ಸತತ ದಾಳಿ ನಡೆಸಿದೆ, ಇನ್ನೊಂದೆಡೆ, ಇಸ್ರೇಲ್‌ನ ಬೀದಿಗಳಲ್ಲಿ ಅರಬರು ಮತ್ತು ಯಹೂದಿಗಳು ಸಂಘರ್ಷಕ್ಕೆ ಇಳಿದಿದ್ದಾರೆ. ಈವರೆಗೆ 17 ಮಕ್ಕಳೂ ಸೇರಿ 60ಕ್ಕೂ ಹೆಚ್ಚು ಜನರು ಸತ್ತಿದ್ದಾರೆ. 400ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಇಸ್ರೇಲ್‌ನಲ್ಲಿ ಕೆಲಸ ಮಾಡುತ್ತಿದ್ದ ಕೇರಳದ ಸೌಮ್ಯಾ ಸಂತೋಷ್‌ ಎಂಬ ಮಹಿಳೆಯೂ ಪ್ಯಾಲೆಸ್ಟೀನ್‌ ದಾಳಿಗೆ ಬಲಿಯಾಗಿದ್ದಾರೆ.

ಹಲವು ವರ್ಷಗಳ ನಂತರ, ಗಾಜಾ ಮೇಲೆ  ಇಸ್ರೇಲ್‌ ವಾಯು ದಾಳಿ ನಡೆಸಿದೆ. ಗಾಜಾವನ್ನು ನಿಯಂತ್ರಿಸುತ್ತಿರುವುದು ಹಮಸ್‌ ಎಂಬ ಸಂಘಟನೆ. ಅದರ ಕಮಾಂಡರ್‌ ಇಯಾದ್‌ ತಯೇಬ್‌ ಅವರ ಮನೆಯ ಮೇಲೆ ದಾಳಿ ನಡೆಸಲಾಗಿದೆ ಎಂದು ಹೇಳಲಾಗಿದೆ. ತಮ್ಮ ಸೇನಾ ಮುಖ್ಯಸ್ಥರೊಬ್ಬರು ದಾಳಿಯಲ್ಲಿ ಹತರಾಗಿದ್ದಾರೆ ಎಂದು ಹಮಸ್‌ ಹೇಳಿದೆ. ಆದರೆ, ಹಮಸ್‌ನ ಇನ್ನೂ ಮೂವರು ಉನ್ನತ ನಾಯಕರನ್ನು ಕೊಂದಿರುವುದಾಗಿ ಇಸ್ರೇಲ್‌ ಸೇನೆ ಹೇಳಿದೆ.

ಹಮಸ್‌ ಸ್ಥಾಪಿಸಿರುವ ಅಲ್‌ ಅಕ್ಸ ಸುದ್ದಿ ವಾಹಿನಿಯ ಗೋಪುರ ಹೊಂದಿರುವ ಸ್ಥಳವನ್ನೂ ಇಸ್ರೇಲ್‌ ಬುಧವಾರ ನಾಶಪಡಿಸಿದೆ. ‘ಸೋಮವಾರದಿಂದೀಚೆಗೆ ಪ್ಯಾಲೆಸ್ಟೀನಿಯನ್ನರುನಮ್ಮ ಪ್ರದೇಶದ ಮೇಲೆ 1,600ಕ್ಕೂ ಹೆಚ್ಚು ರಾಕೆಟ್‌ ದಾಳಿ ಮಾಡಿದ್ದಾರೆ. ಈ ದಾಳಿಯಲ್ಲಿ ಎರಡು ವರ್ಷದ ಒಂದು ಮಗುವೂ ಸೇರಿದಂತೆ ಏಳು ಮಂದಿ ಪ್ರಾಣ ತೆತ್ತಿದ್ದಾರೆ’ ಎಂದು ಇಸ್ರೇಲ್‌ ಹೇಳಿದೆ.

ಎರಡು ಸೇನೆಗಳ ನಡುವಿನ ಸಂಘರ್ಷದ ಜತೆಗೆ ಆಂತರಿಕವಾಗಿ ಜನರು ಸಹ ಬೀದಿಗಳಲ್ಲಿ ದಂಗೆಗೆ ಇಳಿದಿರುವುದು ಆತಂಕಕ್ಕೆ ಕಾರಣವಾಗಿದೆ. ಜನರು ವಿರೋಧಿ ಗುಂಪುಗಳ ಜತೆಗೆ ಮಾತ್ರವಲ್ಲದೆ ಭದ್ರತಾ ಪಡೆಗಳ ಜತೆಗೂ ಸಂಘರ್ಷಕ್ಕೆ ಇಳಿಯುತ್ತಿದ್ದಾರೆ. ಇಂಥ ಬೀದಿ ಸಂಘರ್ಷದಲ್ಲಿ ಕೆಲವರು ಪ್ರಾಣ ಬಿಟ್ಟಿದ್ದಾರೆ.

‘ಅರಬರು ಯಹೂದಿಗಳನ್ನಾಗಲಿ, ಯಹೂದಿಗಳು ಅರಬರನ್ನಾಗಲಿ ಹತ್ಯೆ ಮಾಡುವುದನ್ನು ಸಮರ್ಥಿಸಲಾಗದು. ಇಸ್ರೇಲ್‌ ಈಗ ಎರಡು ನೆಲೆಗಳಲ್ಲಿ ಹೋರಾಟದಲ್ಲಿ ತೊಡಗಿದೆ’ ಎಂದು ಪ್ರಧಾನಿ ಬೆಂಜಮಿನ್‌ ನೇತನ್ಯಾಹು ಹೇಳಿದ್ದಾರೆ.

ಪ್ಯಾಲೆಸ್ಟೀನ್‌– ಇಸ್ರೇಲ್‌ ವಾದವೇನು?
ಗಾಜಾ ಪಟ್ಟಿಯು ಪ್ಯಾಲೆಸ್ಟೀನ್‌ನ ಸಂಘಟನೆಯಾದ ಹಮಸ್‌ನ ನಿಯಂತ್ರಣದಲ್ಲಿದೆ. ಈ ಸಂಘಟನೆಯು ಹಲವು ಬಾರಿ ಇಸ್ರೇಲ್‌ ಜತೆಗೆ ಸಂಘರ್ಷ ನಡೆಸಿದೆ. ಹಮಸ್‌ಗೆ ಶಸ್ತ್ರಾಸ್ತ್ರ ಸರಬರಾಜಾಗುವುದನ್ನು ತಡೆಯಲು, ಗಾಜಾದ ಗಡಿಯುದ್ದಕ್ಕೂ ಇಸ್ರೇಲ್‌ ಹಾಗೂ ಈಜಿಪ್ಟ್‌ ಬಿಗಿ ಭದ್ರತಾ ವ್ಯವಸ್ಥೆಯನ್ನು ಮಾಡಿವೆ. ಇದು ಇಸ್ರೇಲ್‌– ಪ್ಯಾಲೆಸ್ಟೀನ್‌ ನಡುವಿನ ಹೊಸ ಸಂಘರ್ಷಕ್ಕೆ ಕಾರಣ ಎನ್ನಲಾಗುತ್ತಿದೆ.

‘ಇಸ್ರೇಲ್‌ನ ಕ್ರಮ ಹಾಗೂ ನಿರ್ಬಂಧಗಳಿಂದಾಗಿ ನಾವು ತುಂಬಾ ಸಂಕಷ್ಟಗಳನ್ನು ಎದುರಿಸುವಂತಾಗಿದೆ’ ಎಂದು ಗಾಜಾ ಹಾಗೂ ವೆಸ್ಟ್‌ಬ್ಯಾಂಕ್‌ನಲ್ಲಿರುವ ಪ್ಯಾಲೆಸ್ಟೀನಿಯನ್ನರು  ಹೇಳುತ್ತಿದ್ದಾರೆ.

ಆದರೆ, ‘ಪ್ಯಾಲೆಸ್ಟೀನಿಯನ್ನರ ಹಿಂಸೆಯಿಂದ ನಮ್ಮನ್ನು ರಕ್ಷಿಸಿಕೊಳ್ಳಲು ನಾವು ಈ ಕ್ರಮವನ್ನು ಕೈಗೊಂಡಿದ್ದೇವೆ’ ಎಂದು ಇಸ್ರೇಲ್‌ ಹೇಳಿದೆ.

ಇನ್ನೊಂದೆಡೆ, ಪೂರ್ವ ಜೆರುಸಲೇಂನ ಶೇಖ್‌ ಜರ್‍ರಾ ನಗರದಿಂದ ಪ್ಯಾಲೆಸ್ಟೀನಿಯನ್ನರ ಕುಟುಂಬಗಳನ್ನು ಹೊರದಬ್ಬುತ್ತಿರುವ ಇಸ್ರೇಲ್‌ನ ನೀತಿಯು ಪ್ಯಾಲೆಸ್ಟೀನಿಯನ್ನರ ಆಕ್ರೋಶಕ್ಕೆ ಕಾರಣವಾಗಿದೆ. ಈಗಿನ ಸಂಘರ್ಷಕ್ಕೆ ಅದೇ ಕಾರಣ ಎಂದೂ ಹೇಳಲಾಗುತ್ತಿದೆ. ‘ಗಾಜಾದ ಮೇಲಿನ ದಾಳಿಯನ್ನು ನಿಲ್ಲಿಸುವುದಿಲ್ಲ’ ಎಂದು ಇಸ್ರೇಲ್‌ ಹೇಳಿದ್ದರೆ, ‘ಇಸ್ರೇಲ್‌ ಬಯಸುವುದಾದರೆ ಸಂಘರ್ಷವನ್ನು ಮುಂದುವರಿಸಲು ನಾವೂ ಸಿದ್ಧರಿದ್ದೇವೆ’ ಎಂದು ಪ್ಯಾಲೆಸ್ಟೀನ್‌ ಹೇಳಿದೆ.

ಫಲನೀಡದ ಶಾಂತಿ ಪ್ರಕ್ರಿಯೆ
ಇಸ್ರೇಲ್‌– ಪ್ಯಾಲೆಸ್ಟೀನ್‌ ನಡುವೆ ಮತ್ತೆ ಆರಂಭವಾಗಿರುವ ಸಂಘರ್ಷಕ್ಕೆ ತಡೆಯೊಡ್ಡುವ ಪ್ರಯತ್ನವನ್ನು ವಿಶ್ವ ಸಂಸ್ಥೆಯ ಭದ್ರತಾ ಮಂಡಳಿಯು ಮಾಡಿದ್ದರೂ ಅದು ಫಲ ನೀಡಲಿಲ್ಲ.

ಈ ವಿಚಾರವಾಗಿ ಮಂಡಳಿಯು ಈವರೆಗೆ ಎರಡು ವಿಡಿಯೊ ಕಾನ್ಫರೆನ್ಸ್‌ಗಳನ್ನು ನಡೆಸಿದೆ. ಆದರೆ ಇಸ್ರೇಲ್‌ನ ಸಹಯೋಗಿ ರಾಷ್ಟ್ರವೆನಿಸಿರುವ ಅಮೆರಿಕವು ಈ ವಿಚಾರದಲ್ಲಿ ಜಂಟಿ ಘೋಷಣೆ ಮಾಡಲು ನಿರಾಕರಿಸಿದ್ದರಿಂದ ಮಾತುಕತೆ ಫಲ ನೀಡಲಿಲ್ಲ. ಇಂಥ ಘೋಷಣೆಗಳಿಂದ ಪರಿಸ್ಥಿತಿ ನಿಯಂತ್ರಣಕ್ಕೆ ಬರಲಾರದು ಎಂಬುದು ಅಮೆರಿಕದ ನಿಲುವಾಗಿದೆ.

ಇಸ್ರೇಲ್‌ ಪ್ರಧಾನಿ ನೇತನ್ಯಾಹು ಅವರು ಅಮೆರಿಕದ ಅಧ್ಯಕ್ಷ ಜೋ ಬೈಡನ್‌ ಜತೆ ಬುಧವಾರ ಸಂಜೆ ಮಾತುಕತೆ ನಡೆಸಿದ್ದಾರೆ. ‘ತನ್ನನ್ನು ರಕ್ಷಿಸಿಕೊಳ್ಳುವ ಹಕ್ಕು ಇಸ್ರೇಲ್‌ಗೆ ಇದೆ’ ಎಂದು ಬೈಡನ್‌ ಪ್ರತಿಪಾದಿಸಿದ್ದಾರೆ. ‘ನಾವು ಪ್ಯಾಲೆಸ್ಟೀನ್‌ ಜತೆ ಮಾತನಾಡಿದ್ದೇವೆ. ಕ್ಷಿಪಣಿ ದಾಳಿಯನ್ನು ನಿಲ್ಲಿಸುವಂತೆ ಅಧ್ಯಕ್ಷ ಮಹಮೂದ್‌ ಅಬ್ಬಾಸ್‌ ಅವರಲ್ಲಿ ಮನವಿ ಮಾಡಿದ್ದೇವೆ’ ಎಂದು ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಆ್ಯಂಟನಿ ಬ್ಲಿಂಕನ್ ಹೇಳಿದ್ದಾರೆ.

ಈ ನಡುವೆ, ‘ಇದು ಆರಂಭ ಮಾತ್ರ. ನಾವು ಯಾವುದೇ ಸನ್ನಿವೇಶ ಎದುರಿಸಲು ಸಿದ್ಧತೆ ಮಾಡಿಕೊಳ್ಳುತ್ತಿದ್ದೇವೆ. ಗಾಜಾದ ಮೇಲಿನ ದಾಳಿ ಮುಂದುವರಿಯುವುದು’ ಎಂದು ಇಸ್ರೇಲ್‌ನ ಸೇನಾ ವಕ್ತಾರ ಜೊನಾಥನ್‌ ಕಾನ್ರಿಕಸ್‌ ಹೇಳಿದ್ದಾರೆ. ಇದರಿಂದಾಗಿ, ಸದ್ಯಕ್ಕೆ ಈ ಸಮಸ್ಯೆಗೆ ಪರಿಹಾರ ಸಿಗಲಾರದೇನೋ ಎಂಬ ಆತಂಕ ಮೂಡಿದೆ.

ಎರಡು ಶತಮಾನದ ಸಂಘರ್ಷ

* ಒಟ್ಟೋಮನ್ ಸಾಮ್ರಾಜ್ಯದ ಉತ್ತುಂಗದ ಕಾಲದಲ್ಲಿ ಈ ಪ್ರದೇಶದಲ್ಲಿ ಅರಬ್ ಮುಸ್ಲಿಮರು ಬಹುಸಂಖ್ಯಾತರಾಗಿದ್ದರು. ಜೆರುಸಲೇಂನ ಕೆಲವು ಭಾಗದಲ್ಲಿ ಮಾತ್ರವೇ ಯಹೂದಿಗಳು ಮತ್ತು ಕ್ರೈಸ್ತರು ಇದ್ದರು. ಈಗಿನ ಇಸ್ರೇಲ್ ಮತ್ತು ಪ್ಯಾಲೆಸ್ಟೀನ್ ಪ್ರದೇಶವು ಸಂಪೂರ್ಣವಾಗಿ ಪ್ಯಾಲೆಸ್ಟೀನ್ ಆಗಿತ್ತು. ಇಲ್ಲಿ ಅರಬ್ ಮುಸ್ಲಿಮರ ಪ್ರಾಬಲ್ಯವಿತ್ತು

* 19ನೇ ಶತಮಾನದಲ್ಲಿ ಯೂರೋಪ್‌ನಲ್ಲಿ ಯಹೂದಿಗಳ ಮೇಲೆ ಕಿರುಕುಳ ಆರಂಭವಾಗಿತ್ತು. 1799ರಲ್ಲಿ ಚಕ್ರವರ್ತಿ ನೆಪೋಲಿಯನ್ ಬೋನಾಪಾರ್ಟ್‌,  ಯಹೂದಿಗಳ ಮೂಲ ನೆಲೆಯಾದ ಪ್ಯಾಲೆಸ್ಟೀನ್‌ನಲ್ಲಿ ಯಹೂದಿಗಳಿಗೆ ಆಶ್ರಯ ಕಲ್ಪಿಸುವುದಾಗಿ ಘೋಷಿಸಿದನು. ಪ್ಯಾಲೆಸ್ಟೀನ್ ಅರಬರ ವಿರೋಧದಿಂದಾಗಿ ಈ ಘೋಷಣೆ ಕಾರ್ಯರೂಪಕ್ಕೆ ಬರಲಿಲ್ಲ. ಆದರೆ ಯೂರೋಪ್‌ನಿಂದ ಬಂದಿದ್ದ ಕೆಲವು ಯಹೂದಿಗಳು ಇಲ್ಲಿ ನೆಲೆಸಿದರು

* 1880ರ ನಂತರ ಪ್ಯಾಲೆಸ್ಟೀನ್‌ನಲ್ಲಿ ಯಹೂದಿಗಳಿಗೆ ಆಶ್ರಯ ಕಲ್ಪಿಸುವ ಉದ್ದೇಶದಿಂದ ಫ್ರಾನ್ಸ್‌ನ ನೇತೃತ್ವದಲ್ಲಿ ಐರೋಪ್ಯ ರಾಷ್ಟ್ರಗಳು ಒಂದಾದವು. ಯಹೂದಿಗಳಿಗೆ ಆಶ್ರಯ ಕಲ್ಪಿಸಲು ದೇಣಿಗೆ ಒದಗಿಸಿದವು. 1897ರಲ್ಲಿ ಗಣನೀಯ ಸಂಖ್ಯೆಯ ಯಹೂದಿಗಳು ಪ್ಯಾಲೆಸ್ಟೀನ್‌ಗೆ ಬಂದರು. ಪ್ಯಾಲೆಸ್ಟೀನ್ ಅರಬರ ವಿರೋಧ ನಡೆಯುತ್ತಲೇ ಇತ್ತು. 1907ರಲ್ಲಿ ಬ್ರಿಟಿಷ್ ಕಂಪನಿಯು ಯಹೂದಿಗಳಿಗಾಗಿ ಪ್ಯಾಲೆಸ್ಟೀನ್‌ನಲ್ಲಿ ಭೂಮಿ ಖರೀದಿಸಿತು. ಇದರ ಪರಿಣಾಮವಾಗಿ ಅಲ್ಲಿಂದ 60 ಸಾವಿರಕ್ಕೂ ಹೆಚ್ಚು ಅರಬರನ್ನು ಹೊರಗಟ್ಟಲಾಯಿತು

* ಕಾಲಕ್ರಮೇಣ ಪ್ಯಾಲೆಸ್ಟೀನ್‌ಗೆ ಬಂದು ನೆಲೆಸುವ ಯಹೂದಿಗಳ ಸಂಖ್ಯೆ ಹೆಚ್ಚಾಯಿತು. ಯಹೂದಿಗಳ ವಸತಿ ಪ್ರದೇಶದ ರಕ್ಷಣೆಗೆ ಹಶ್ಮೋರ್ ಎಂಬ ಅರೆಸೇನಾಪಡೆಯನ್ನು ಸ್ಥಾಪಿಸಲಾಯಿತು. ಯಹೂದಿ ವಿರೋಧಿ ಪ್ಯಾಲೆಸ್ಟೀನ್ ಅರಬರನ್ನು ನಿಯಂತ್ರಣದಲ್ಲಿ ಇಡಲು ಈ ಪಡೆಯು ಶಸ್ತ್ರಾಸ್ತ್ರ ಕಾರ್ಯಾಚರಣೆ ನಡೆಸುತ್ತಿತ್ತು. ಲಕ್ಷಾಂತರ ಸಂಖ್ಯೆಯ ಪ್ಯಾಲೆಸ್ಟೀನ್ ಅರಬರು ದೇಶ ತೊರೆದರು. ಇಂದಿಗೂ ಇವರು ಪ್ಯಾಲೆಸ್ಟೀನ್‌ಗೆ ವಾಪಸಾಗಲು ಇಸ್ರೇಲ್ ಬಿಡುತ್ತಿಲ್ಲ

* ಎರಡನೇ ವಿಶ್ವಯುದ್ಧದ ನಂತರ 1948ರಲ್ಲಿ ಬ್ರಿಟಿಷರು ಪ್ಯಾಲೆಸ್ಟೀನ್‌ ಮೇಲಿನ ನಿಯಂತ್ರಣವನ್ನು ಬಿಟ್ಟುಕೊಟ್ಟರು. ಆಗ ಯಹೂದಿಗಳು ತಮ್ಮ ನಿಯಂತ್ರಣದಲ್ಲಿ ಇದ್ದ ಜಾಗವನ್ನು ಇಸ್ರೇಲ್ ಎಂದು ಘೋಷಿಸಿದರು. ಪ್ಯಾಲೆಸ್ಟೀನ್‌ನ ಬಹುಭಾಗವನ್ನು ಯಹೂದಿಗಳು ನಿಯಂತ್ರಣಕ್ಕೆ ತೆಗೆದುಕೊಂಡರು. ಮೆಡಿಟರೇನಿಯನ್ ಸಮುದ್ರದ ದಂಡೆಯಲ್ಲಿದ್ದ ಗಾಜಾಪಟ್ಟಿಯನ್ನು, ಸೇನಾ ಕಾರ್ಯಾಚರಣೆ ಮೂಲಕ ಈಜಿಪ್ಟ್ ವಶಪಡಿಸಿಕೊಂಡಿತು. ಜೋರ್ಡನ್ ಸಾಮ್ರಾಜ್ಯವು ಜೋರ್ಡನ್ ನದಿಯ ಪಶ್ಚಿಮ ದಂಡೆಯ ಪ್ರದೇಶವನ್ನು (ವೆಸ್ಟ್‌ ಬ್ಯಾಂಕ್) ವಶಪಡಿಸಿಕೊಂಡಿತು. ಇಸ್ರೇಲ್ ಮತ್ತು ಜೋರ್ಡನ್ ಮಧ್ಯೆ ಜೆರುಸಲೇಂ ಹಂಚಿಹೋಯಿತು

* ಜೋರ್ಡನ್‌ನ ವಶದಲ್ಲಿದ್ದ ಜೆರುಸಲೇಂನ ಭಾಗವನ್ನು 1967ರಲ್ಲಿ ಸೇನಾ ಕಾರ್ಯಾಚರಣೆಯ ಮೂಲಕ ಇಸ್ರೇಲ್ ವಶಪಡಿಸಿಕೊಂಡಿತು. ಆದರೆ ವೆಸ್ಟ್‌ ಬ್ಯಾಂಕ್‌ನಲ್ಲಿ ಪ್ಯಾಲೆಸ್ಟೀನ್ ಅರಬರ ಪ್ರಾಬಲ್ಯವಿದ್ದ ಕಾರಣ, ಸಂಪೂರ್ಣ ನಿಯಂತ್ರಣ ಸಾಧ್ಯವಾಗಲಿಲ್ಲ. ಇಲ್ಲಿನ ಅರಬರು ಇದನ್ನು ಪ್ಯಾಲೆಸ್ಟೀನ್ ಎಂದು ಘೋಷಿಸಿಕೊಂಡಿದ್ದಾರೆ

* ಇಸ್ರೇಲ್ ಮತ್ತು ಪ್ಯಾಲೆಸ್ಟೀನ್ ಒಳಗೊಂಡ ಪ್ರದೇಶವನ್ನು ಎರಡು ಅಧಿಕೃತ ದೇಶಗಳನ್ನಾಗಿ ಘೋಷಿಸುವ ವಿಶ್ವಸಂಸ್ಥೆ, ಅಮೆರಿಕ ಮತ್ತು ಐರೋಪ್ಯ ಒಕ್ಕೂಟದ ಪ್ರಯತ್ನಗಳು ಈವರೆಗೆ ಫಲಪ್ರದವಾಗಿಲ್ಲ. ವೆಸ್ಟ್‌ಬ್ಯಾಂಕ್‌ ಮತ್ತು ಗಾಜಾವನ್ನು ನಿಯಂತ್ರಣದಲ್ಲಿ ಇರಿಸಿಕೊಂಡಿರುವ ಹಮಸ್ ಬಂಡುಕೋರರು ಇಸ್ರೇಲ್‌ನ ಮೇಲೆ ಶಸ್ತ್ರಾಸ್ತ್ರ ದಾಳಿ ನಡೆಸುತ್ತಲೇ ಇದ್ದಾರೆ. ಇವರ ಮೇಲೆ ಇಸ್ರೇಲ್ ಸಹ ದಾಳಿ ನಡೆಸುತ್ತಲೇ ಇದೆ

ಆಧಾರ: ರಾಯಿಟರ್ಸ್, ಎಎಫ್‌ಪಿ, ಬಿಬಿಸಿ, ಇಂಡಿಪೆಂಡೆಂಟ್


ಗಾಜಾ ನಗರದತ್ತ ಇಸ್ರೇಲ್‌ನ ಫಿರಂಗಿ ದಾಳಿ -ಎಎಫ್‌ಪಿ ಚಿತ್ರ

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು