ಶನಿವಾರ, ಅಕ್ಟೋಬರ್ 16, 2021
29 °C

ಆಳ- ಅಗಲ | ಐ ಟಿ ಪೋರ್ಟಲ್‌: ಬಗೆಹರಿಯದ ಬವಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಆದಾಯ ತೆರಿಗೆ ಪಾವತಿಗೆ ಬಳಸುವ ‘ಹೊಸ ಐಟಿ ಪೋರ್ಟಲ್’ ಕೇಂದ್ರ ಸರ್ಕಾರ ಮತ್ತು ಇನ್ಫೊಸಿಸ್ ನಡುವೆ ಜಟಾಪಟಿಗೆ ಕಾರಣವಾಗಿದೆ. ತೆರಿಗೆ ಪಾವತಿಸುವ ಹಳೆಯ ವ್ಯವಸ್ಥೆಯ ಬದಲಾಗಿ ಹೊಸ ವ್ಯವಸ್ಥೆ ಸಿದ್ಧಪಡಿಸುವ ಹೊಣೆಯನ್ನು ಇನ್ಫೊಸಿಸ್ ಹೊತ್ತುಕೊಂಡಿತ್ತು. ಆದರೆ ಹೊಸ ಐಟಿ ಪೋರ್ಟಲ್ ಕಾರ್ಯಾರಂಭ ಮಾಡಿದ ಬಳಿಕ ಪ್ರಕ್ರಿಯೆ ಸರಳವಾಗುವ ಬದಲು ಇನ್ನಷ್ಟು ಜಟಿಲವಾಗಿದೆ. ಹಳೆಯ ವ್ಯವಸ್ಥೆಯಲ್ಲಿದ್ದ ಸಮಸ್ಯೆಗಳು ಪರಿಹಾರವಾಗುವ ಬದಲು ಹೊಸ ಸಮಸ್ಯೆಗಳು ತಲೆದೋರಿವೆ. ಹೀಗಾಗಿ ಐಟಿ ರಿಟರ್ನ್ ಫೈಲ್ ಮಾಡುವ ಗಡುವನ್ನು ಸರ್ಕಾರವು ಡಿಸೆಂಬರ್‌ 31ರವರೆಗೆ ವಿಸ್ತರಿಸಿದೆ.

ನಿರೀಕ್ಷೆ ಹುಸಿ: ಐಟಿ ಪೋರ್ಟಲ್ ಸಿದ್ಧಪಡಿಸುವ ಗುತ್ತಿಗೆಯನ್ನು ದೇಶದ ಪ್ರಸಿದ್ಧ ಮಾಹಿತಿ ತಂತ್ರಜ್ಞಾನ ಸಂಸ್ಥೆ ಇನ್ಫೊಸಿಸ್‌ಗೆ 2019ರಲ್ಲಿ ನೀಡಲಾಗಿತ್ತು. ಈ ಗುತ್ತಿಗೆಯ ಒಟ್ಟು ಮೊತ್ತ ₹4,200 ಕೋಟಿ ಪೈಕಿ ಕೇಂದ್ರ ಸರ್ಕಾರ ಸುಮಾರು ₹160 ಕೋಟಿಯನ್ನು ಇನ್ಫೊಸಿಸ್‌ಗೆ ಪಾವತಿಸಿದೆ. ಹಳೆಯ ಪೋರ್ಟಲ್‌ನಲ್ಲಿರುವ ಎಲ್ಲ ಸಮಸ್ಯೆಗಳು ನಿವಾರಣೆಯಾಗಿ, ಅತ್ಯಂತ ಸುಲಭ ಹಾಗೂ ಸರಳೀಕೃತ ವಿಧಾನದಲ್ಲಿ ಆದಾಯ ತೆರಿಗೆ ಪಾವತಿಸುವ ಪೋರ್ಟಲ್ ಸಿದ್ಧವಾಗಲಿದೆ ಎಂದು ಕೇಂದ್ರ ಸರ್ಕಾರ ಹೇಳಿಕೊಂಡಿತ್ತು. 

2021ರ ಜೂನ್‌ 7ರಂದು ಹೊಸ ವ್ಯವಸ್ಥೆಗೆ ಚಾಲನೆ ನೀಡಲಾಯಿತು. ಇ–ಫೈಲಿಂಗ್ ಮಾಡುವ ಸರಳ ಪ್ರಕ್ರಿಯೆ, ಪೋರ್ಟಲ್‌ನ ವಿಭಿನ್ನ ವಿನ್ಯಾಸ, ತಕ್ಷಣದ ಮರುಪಾವತಿ, ಬಳಕೆದಾರ ಸ್ನೇಹಿಯಾಗಿದೆ ಎಂಬ ನಿರೀಕ್ಷೆಗಳು ಹುಸಿಯಾದವು. ತೆರಿಗೆ ವೃತ್ತಿಪರರು ಹೊಸ ಪೋರ್ಟಲ್‌ನ ಲೋಪದೋಷಗಳನ್ನು ಪತ್ತೆಮಾಡಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ಟ್ವೀಟ್‌ ಮಾಡಿ, ಸಮಸ್ಯೆ ದೊಡ್ಡದಿದೆ ಎಂದು ತಿಳಿಸಿದರು. 

ನಿರ್ಮಲಾ ಅವರು ಜೂನ್ 8ರಂದು ಇನ್ಫೊಸಿಸ್ ಸಹಸ್ಥಾಪಕ ಹಾಗೂ ಅಧ್ಯಕ್ಷ ನಂದನ್ ನಿಲೇಕಣಿ ಅವರನ್ನು ಸಂಪರ್ಕಿಸಿ, ಸಮಸ್ಯೆ ಬಗ್ಗೆ ಗಮನ ಹರಿಸುವಂತೆ ಸೂಚಿಸಿದ್ದರು. ಸಮಸ್ಯೆ ಬಗೆಹರಿಯುವ ಲಕ್ಷಣ ಕಾಣದಿದ್ದಾಗ, ಜೂನ್ 22ರಂದು ಇನ್ಫೊಸಿಸ್‌ಗೆ ಕೇಂದ್ರ ಸಮನ್ಸ್ ಜಾರಿಗೊಳಿಸಿತು. ತೊಂದರೆ ಪರಿಹರಿಸಲು ತಂಡವೊಂದು ಕೆಲಸ ಮಾಡುತ್ತಿದೆ ಎಂದು  ಸಂಸ್ಥೆಯ ಸಿಇಒ ಸಲೀಲ್ ಪಾರೇಖ್, ಸಿಒಒ ಪ್ರವೀಣ್ ರಾವ್ ಅವರು ಭರವಸೆ ನೀಡಿದ್ದರು. ಎರಡು ತಿಂಗಳ ಬಳಿಕ ಅಂದರೆ, ಆಗಸ್ಟ್ 23ರಂದು ಹಣಕಾಸು ಸಚಿವರನ್ನು ಭೇಟಿಯಾದ ಇನ್ಫೊಸಿಸ್‌ನ ನಿಯೋಗವು, ಸೆಪ್ಟೆಂಬರ್ 15ರವರೆಗೆ ಕಾಲಾವಕಾಶ ನೀಡುವಂತೆ ಮನವಿ ಮಾಡಿತ್ತು.

‘ಕಂಪನಿಯು ಈ ಕುರಿತು ತ್ವರಿತಗತಿಯಲ್ಲಿ ಕೆಲಸ ಮಾಡುತ್ತಿದೆ. ಸಿಒಒ ರಾವ್ ಅವರ ಮೇಲ್ವಿಚಾರಣೆಯಲ್ಲಿ 750 ಸಿಬ್ಬಂದಿ ಕೆಲಸ ಮಾಡುತ್ತಿದ್ದಾರೆ. ಪೋರ್ಟಲ್‌ನಲ್ಲಿ ಏನು ತಪ್ಪಾಗಿದೆ ಎಂಬುದರ ಕುರಿತು ಹೆಚ್ಚಿನ ಸ್ಪಷ್ಟತೆ ಇಲ್ಲ’ ಎಂದು ಸಂಸ್ಥೆ ತಿಳಿಸಿತ್ತು. 

ಮೂಲದಲ್ಲೇ ಸಮಸ್ಯೆ: ಆದರೆ ತಜ್ಞರು ಹೇಳುವ ಪ್ರಕಾರ ಸಮಸ್ಯೆ ಆಳವಾಗಿದೆ. ಇಷ್ಟು ಬೃಹತ್ ಪ್ರಮಾಣದ ಯೋಜನೆಯ ವ್ಯಾಪ್ತಿಯನ್ನು ಸರ್ಕಾರ ಸರಿಯಾಗಿ ವ್ಯಾಖ್ಯಾನಿಸಿಲ್ಲ. ತರಾತುರಿಯಲ್ಲಿ ಪೋರ್ಟಲ್ ಆರಂಭಿಸಿದ್ದು ಸಮಸ್ಯೆಗೆ ಕಾರಣ ಎನ್ನುತ್ತಾರೆ ಅವರು. ಪೋರ್ಟಲ್ ಆರಂಭಿಸಲು ಇನ್ನಷ್ಟು ಸಮಯ ಕೇಳಿದ್ದರೂ ಅದನ್ನು ಪರಿಗಣನೆಗೆ ತೆಗೆದುಕೊಳ್ಳದ್ದರಿಂದ ಸಮಸ್ಯೆ ಉಂಟಾಗಿದೆ. ಇದರರ್ಥ ಪೋರ್ಟಲ್ ಕಾರ್ಯಾಚರಣೆಗೆ ಶೇಕಡ ನೂರರಷ್ಟು ಸಿದ್ಧವಾಗಿರಲಿಲ್ಲ. ಏಕಕಾಲಕ್ಕೆ ಹಾಗೂ ಒಗ್ಗೂಡಿ ಕೆಲಸ ಮಾಡಬೇಕಾದ ಅನೇಕ ವ್ಯವಸ್ಥೆಗಳು ಪೋರ್ಟಲ್‌ನಲ್ಲಿದ್ದು, ಅವುಗಳ ನಡುವೆ ಇನ್ನೂ ಸಂಪೂರ್ಣ ಸಂವಹನ ಸಾಧ್ಯವಾಗಿರಲಿಲ್ಲ ಎನ್ನುತ್ತಾರೆ ತಾಂತ್ರಿಕ ಪರಿಣತರು.

ಸಮಸ್ಯೆಗಳನ್ನು ಪ್ರಸ್ತಾಪಿಸಿ ಬಂದಿರುವ ಸುಮಾರು 75 ಸಾವಿರ ಮನವಿಗಳಲ್ಲಿ 70 ಸಾವಿರದಷ್ಟು ಮನವಿಗಳಿಗೆ ಸ್ಪಂದಿಸಲಾಗಿದೆ ಎಂದು ಇನ್ಫೊಸಿಸ್‌ ಹೇಳಿದ್ದು, ಸಮಸ್ಯೆ ಬಗೆಹರಿಸುವ ದಿಸೆಯಲ್ಲಿ ನಿರಂತರವಾಗಿ ಕೆಲಸ ಮಾಡುತ್ತಿರುವುದಾಗಿ ತಿಳಿಸಿದೆ. ಹೊಸ ವ್ಯವಸ್ಥೆಯನ್ನು ಆದಾಯ ತೆರಿಗೆ ಇಲಾಖೆಯು ಪರೀಕ್ಷೆಗೆ ಒಳಪಡಿಸಬೇಕಿತ್ತು. ಪೋರ್ಟಲ್ ಅನ್ನು ಜನರ ಬಳಕೆಗೆ ಬಿಡುಗಡೆ ಮಾಡುವುದಕ್ಕಿಂತ ಮುಂಚೆ ಸೂಕ್ತ ಪರಿಶೀಲನೆ ಆಗಿಲ್ಲ ಎನ್ನುತ್ತಾರೆ ತಜ್ಞರು. 

ಸಮಸ್ಯೆಗಳೇನು: ಒನ್ ಟೈಮ್ ಪಾಸ್‌ವರ್ಡ್‌ ಸಂದೇಶಗಳು ಸರಿಯಾಗಿ ಬರುತ್ತಿಲ್ಲ. ಪಾಸ್‌ವರ್ಡ್ ನಮೂದಿಸದಿದ್ದರೆ ಪೋರ್ಟಲ್‌ಗೆ ಪ್ರವೇಶ ಪಡೆಯಲು ಸಾಧ್ಯವಾಗುವುದಿಲ್ಲ. ಎಲ್ಲ ಪ್ರಕ್ರಿಯೆ ನಡೆಯುತ್ತಿದೆ ಎಂದು ಅಂದುಕೊಂಡರೂ, ಇ-ವೆರಿಫಿಕೇಶನ್ ಪೂರ್ಣಗೊಳಿಸಲು ಸಾಧ್ಯವಾಗುತ್ತಿಲ್ಲ. ಹಳೆಯ ಪೋರ್ಟಲ್‌ನಲ್ಲಿ ಫೈಲಿಂಗ್ ವೇಳೆ 7 ರೀತಿಯ ಅರ್ಜಿಗಳಿದ್ದವು. ಆದರೆ ಹೊಸ ಪೋರ್ಟಲ್‌ನಲ್ಲಿ ಐದು ಅರ್ಜಿಗಳು ಲಭ್ಯವಿಲ್ಲ. ಹಳೆಯ ಪೋರ್ಟಲ್‌ಗೂ, ಹೊಸದಕ್ಕೂ ಇರುವ ನೂರಾರು ಸಮಸ್ಯೆಗಳನ್ನು ವೃತ್ತಿಪರರು ಪಟ್ಟಿ ಮಾಡಿದ್ದಾರೆ. ಹಳೆಯ ಪೋರ್ಟಲ್‌ ಅನ್ನೇ ಸಕ್ರಿಯಗೊಳಿಸಬೇಕು ಎಂಬ ಅಭಿಪ್ರಾಯವೂ ವ್ಯಕ್ತವಾಗಿದೆ. ಆದಾಯ ತೆರಿಗೆ ರಿಟರ್ನ್‌ ಫೈಲ್ ಮಾಡಲು ತಡವಾದರೆ ಸರ್ಕಾರ ದಂಡ ವಿಧಿಸುತ್ತದೆ. ಆದರೆ ವ್ಯವಸ್ಥೆಯಲ್ಲೇ ಸಮಸ್ಯೆ ಇರುವಾಗ ದಂಡ ವಿಧಿಸುವುದು ಎಷ್ಟು ಸರಿ ಎಂದು ಸಾಮಾಜಿಕ ಜಾಲತಾಣ ಬಳಕೆದಾರರು ಸರ್ಕಾರವನ್ನು ಪ್ರಶ್ನಿಸಿದ್ದಾರೆ. 

ಐಟಿಆರ್‌ ಸಲ್ಲಿಕೆಗೆ ತೊಡಕು

ನೂತನ ಐಟಿ ಪೋರ್ಟಲ್‌ನಲ್ಲಿ ಹಿಂದಿನ ಸಾಲಿನ ತೆರಿಗೆಯನ್ನು ಪೂರ್ಣ ಪ್ರಮಾಣದಲ್ಲಿ ಪಾವತಿ ಮಾಡಬಹುದು. ಆದರೆ ತೆರಿಗೆ ಪಾವತಿ ಮಾಡಿದ್ದಕ್ಕೆ ತೆರಿಗೆ ಪಾವತಿ ಪ್ರಮಾಣ ಪತ್ರ ದೊರೆಯುತ್ತಿಲ್ಲ. ಜತೆಗೆ ಆದಾಯ ತೆರಿಗೆ ರಿಟರ್ನ್ಸ್ (ಐಟಿಆರ್‌) ಸಲ್ಲಿಸಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಆದಾಯ ತೆರಿಗೆ ಪಾವತಿಸಿದ್ದರೂ, ಐಟಿಆರ್‌ ಸಲ್ಲಿಸದೇ ಇರುವ ಕಾರಣಕ್ಕೆ ತೆರಿಗೆದಾರರು ದಂಡ ತೆರಬೇಕಾಗುತ್ತದೆ. ಈಗಾಗಲೇ ಕೋಟ್ಯಂತರ ಮಂದಿ ಆದಾಯ ತೆರಿಗೆ ಪಾವತಿಸಿದ್ದಾರೆ. ಆದರೆ ಐಟಿಆರ್‌ ಸಲ್ಲಿಸದೇ ಇರುವ ಕಾರಣಕ್ಕೆ ಅವರು, ಈಗಾಗಲೇ ಪಾವತಿ ಮಾಡಿರುವ ಆದಾಯ ತೆರಿಗೆಯ ಮೇಲೆ ಅನವಶ್ಯಕವಾಗಿ ದಂಡ ಪಾವತಿ ಮಾಡಬೇಕಿದೆ.

ಐಟಿಆರ್‌ ಸಲ್ಲಿಸದೇ ಇರುವ ಕಾರಣಕ್ಕೆ ಬ್ಯಾಂಕ್‌ಗಳಿಂದ ಸಾಲ ಪಡೆಯುವಲ್ಲಿ ತೊಡಕಾಗಿದೆ. ಐಟಿಆರ್‌ ಇಲ್ಲದೇ ಇರುವ ಕಾರಣ ಹಲವು ಬ್ಯಾಂಕ್‌ಗಳು ಸಾಲವನ್ನು ನೀಡುತ್ತಿಲ್ಲ. ‘ಐಟಿಆರ್‌ ಇಲ್ಲದೇ ಇರುವ ಕಾರಣಕ್ಕೇ ಮೂರು ಬ್ಯಾಂಕ್‌ಗಳು ನನ್ನ ಸಾಲದ ಅರ್ಜಿಯನ್ನು ತಿರಸ್ಕರಿಸಿವೆ. ಆದಾಯ ತೆರಿಗೆ ಪಾವತಿ ಮಾಡಿಯೂ ಈ ಸಮಸ್ಯೆ ಎದುರಿಸಬೇಕಾಗಿದೆ. ಐಟಿಆರ್‌ ಸಲ್ಲಿಕೆ ಸರಿಯಾಗಿ, ಸಾಮಾನ್ಯ ಸ್ಥಿತಿ ಬರುವವರೆಗೂ ಸಾಲದ ಅರ್ಜಿ ವಿಲೇವಾರಿಯಲ್ಲಿ ಐಟಿಆರ್‌ ಕೈಬಿಡಲು ಸರ್ಕಾರವು ಬ್ಯಾಂಕ್‌ಗಳಿಗೆ ನಿರ್ದೇಶನ ನೀಡಬೇಕು’ ಎಂದು ಬೆಂಗಳೂರಿನ ಉದ್ಯಮಿ ಎಂ.ಬಾಲಕೃಷ್ಣ ಅವರು ವಿವರಿಸಿದ್ದಾರೆ.

ದೊರೆಯದ ಐಟಿಆರ್ ವಿವರ

ನೂತನ ಐಟಿ ಪೋರ್ಟಲ್‌ನಲ್ಲಿ ಈ ಹಿಂದಿನ ಹಲವು ದತ್ತಾಂಶಗಳು ದೊರೆಯುತ್ತಿಲ್ಲ. ಇದರಿಂದ ತೆರಿಗೆದಾರರಿಗೆ ಅವರ ತೆರಿಗೆ ಪಾವತಿ ಮತ್ತು ಐಟಿಆರ್‌ ಮಾಹಿತಿ ಲಭ್ಯವಾಗುತ್ತಿಲ್ಲ. ನೂತನ ಐಟಿ ಪೋರ್ಟಲ್‌ನಲ್ಲಿ 2013-14ಕ್ಕಿಂತ ಹಿಂದಿನ ಸಾಲಿನ ಐಟಿಆರ್‌ ದಾಖಲೆಗಳು ಲಭ್ಯವಾಗುತ್ತಿಲ್ಲ. ಈ ದಾಖಲೆಗಳನ್ನು ಸಂಗ್ರಹಿಸಿ ಇಟ್ಟುಕೊಳ್ಳದೇ ಇರುವವರಿಗೆ ಇದರಿಂದ ತೊಂದರೆಯಾಗಿದೆ.

ಲೆಕ್ಕಪರಿಶೋಧನೆ, ಸಾಲ ನೀಡಿಕೆಗೆ ಐಟಿಆರ್‌ ಪರಿಶೀಲನೆ ನೆಡೆಸಲು ಇದರಿಂದ ಭಾರಿ ತೊಡಕಾಗಿದೆ. ಅರ್ಜಿಗಳಲ್ಲಿ ಕಾಗದದ ರೂಪದಲ್ಲಿ ಈ ದಾಖಲೆಗಳನ್ನು ಸಲ್ಲಿಸಿದ್ದರೂ, ಆನ್‌ಲೈನ್‌ನಲ್ಲಿ ಈ ದಾಖಲೆಗಳ ಪರಿಶೀಲನೆ ಸಾಧ್ಯವಾಗುತ್ತಿಲ್ಲ. ಇದರಿಂದ ಲೆಕ್ಕಪರಿಶೋಧನೆ ಪೂರ್ಣವಾಗುತ್ತಿಲ್ಲ. ಸಾಲದ ಅರ್ಜಿಗಳ ವಿಲೇವಾರಿಗೂ ತೊಂದರೆಯಾಗುತ್ತಿದೆ ಎಂದು ತಜ್ಞರು ವಿವರಿಸಿದ್ದಾರೆ.

ಮರುಪಾವತಿ ತೋರಿಸುತ್ತಿಲ್ಲ

ನೂತನ ಐಟಿ ಪೋರ್ಟಲ್‌ನಲ್ಲಿ ತೆರಿಗೆದಾರರ ತೆರಿಗೆ ವಿವರಗಳು ಗೋಚರಿಸುತ್ತಿಲ್ಲ. ತೆರಿಗೆದಾರರು ಎಷ್ಟು
ತೆರಿಗೆ ಪಾವತಿ ಮಾಡಬೇಕು ಎಂಬ ವಿವರವೂ ಹಲವು ಬಾರಿ ತೋರಿಸುತ್ತಿಲ್ಲ. ಇದರಿಂದಾಗಿ ತೆರಿಗೆ ಪಾವತಿ ಮಾಡಲು ಸಾಧ್ಯವಾಗುತ್ತಿಲ್ಲ. ಇದು ವಿಳಂಬವಾಗುತ್ತಿರುವ ಕಾರಣ ತೆರಿಗೆ ಪಾವತಿಯಲ್ಲಿನ ವಿಳಂಬದ ಮೇಲೆ ತೆರಿಗೆದಾರರು ಅನವಶ್ಯಕವಾಗಿ ದಂಡ ಪಾವತಿ ಮಾಡಬೇಕಿದೆ.

ಈ ಹಿಂದಿನ ಆರ್ಥಿಕ ವರ್ಷಗಳಲ್ಲಿ ಹೆಚ್ಚುವರಿ ತೆರಿಗೆ ಪಾವತಿ ಮಾಡಿರುವ ತೆರಿಗೆದಾರರಿಗೆ ಎಷ್ಟು ಹಣ ಮರುಪಾವತಿಯಾಗಬೇಕು ಎಂಬುದರ ವಿವರವನ್ನು ನೂತನ ಐಟಿ ಪೋರ್ಟಲ್ ತೋರಿಸುತ್ತಿಲ್ಲ. ಆದಾಯ ತೆರಿಗೆ ಇಲಾಖೆಯ ಮರುಪಾವತಿಗೆ ಯಾವುದೇ ಗಡುವು ಅಥವಾ ಕಾಲಮಿತಿ ಇಲ್ಲದೇ ಇರುವ ಕಾರಣಕ್ಕೆ ಇದು ಈಗ ದೊಡ್ಡ ಸಮಸ್ಯೆಯಂತೆ ಕಾಣುತ್ತಿಲ್ಲ. ಆದರೆ ಹೆಚ್ಚುವರಿ ತೆರಿಗೆ ಪಾವತಿ ಮಾಡಿರುವವರ ಹಣವು, ಬಡ್ಡಿ ಇಲ್ಲದೇ ಅನವಶ್ಯಕವಾಗಿ ಒಂದೆಡೆ ಕೊಳೆಯುತ್ತದೆ ಎಂದು ತಜ್ಞರು ಹೇಳಿದ್ದಾರೆ.

ಈ ಹಿಂದಿನ ಪೋರ್ಟಲ್‌ನಲ್ಲಿ ಒಂದು ವರ್ಷದ ಟಿಡಿಎಸ್‌ ಅನ್ನು ಮರುವರ್ಷವೂ ಕ್ಲೇಮಿಗೆ ಹಾಕಬಹುದಿತ್ತು. ನೂತನ ಐಟಿ ಪೋರ್ಟಲ್‌ನಲ್ಲಿ ಇದಕ್ಕೆ ಅವಕಾಶವಿಲ್ಲ. ಹೀಗಾಗಿ ಹಿಂದಿನ ವರ್ಷದ ಟಿಡಿಎಸ್ ಅನ್ನು ಕ್ಲೇಮಿಗೆ ಹಾಕಲು ಸಾಧ್ಯವಾಗುತ್ತಿಲ್ಲ. ಜತೆಗೆ ತೆರಿಗೆ ಪಾವತಿಯಲ್ಲಿ ಆದ ತಪ್ಪುಗಳನ್ನು ಸರಿಪಡಿಸಲು ನೂತನ ಐಟಿ ಪೋರ್ಟಲ್‌ನಲ್ಲಿ ಅವಕಾಶವಿಲ್ಲ.

ತೆರಿಗೆ ಪಾವತಿ ನಿಯಮಗಳಿಗೆ ಸಂಬಂಧಿಸಿದಂತೆ ಆದಾಯ ತೆರಿಗೆ ಇಲಾಖೆಯು ಹೊರಡಿಸಿರುವ ಆದೇಶಗಳು, ಅಧಿಸೂಚನೆಗಳು ಮತ್ತು ಸುತ್ತೋಲೆಗಳು ನೂತನ ಐಟಿ ಪೋರ್ಟಲ್‌ನಲ್ಲಿ ಇವೆ. ಆದರೆ ಡೌನ್‌ಲೋಡ್‌ ಆಯ್ಕೆ ಮಾಡಿದ ತಕ್ಷಣ ಸರ್ವರ್ ಡೌನ್ ಆಗುತ್ತದೆ.

ಇನ್ಫೊಸಿಸ್ ವಿರುದ್ಧ ವಾಗ್ದಾಳಿ

ನೂತನ ಐಟಿ ಪೋರ್ಟಲ್‌ ಅನ್ನು ಅಭಿವೃದ್ಧಿಪಡಿಸಿರುವ ಇನ್ಫೊಸಿಸ್ ವಿರುದ್ಧ ಹಲವು ರೀತಿಯ ವಾಗ್ದಾಳಿ ನಡೆದಿದೆ. ಸರ್ಕಾರವೇ ಇನ್ಫೊಸಿಸ್‌ಗೆ ಎಚ್ಚರಿಕೆ ನೀಡಿದೆ. ಇನ್ಫೊಸಿಸ್‌ನಿಂದ ಇಂತಹ ಕಾರ್ಯ ನಿರೀಕ್ಷಿಸಿರಲಿಲ್ಲ ಎಂದು ಕೇಂದ್ರ ಸರ್ಕಾರದ ವಕ್ತಾರರು ಬಹಿರಂಗವಾಗಿಯೇ ಹೇಳಿದ್ದಾರೆ. ಆದರೆ ಕೆಲವು ಸಂಘಟನೆಗಳೂ ಇನ್ಫೊಸಿಸ್ ವಿರುದ್ಧ ವಾಗ್ದಾಳಿ ನಡೆಸಿವೆ.

ಆರ್‌ಎಸ್‌ಎಸ್‌ನ ಮುಖವಾಣಿಗಳಲ್ಲಿ ಒಂದಾದ ‘ಪಾಂಚಜನ್ಯ’ ನಿಯತಕಾಲಿಕದಲ್ಲಿ ಈಚೆಗೆ, ಇನ್ಫೊಸಿಸ್ ವಿರುದ್ಧ ಮುಖಪುಟ ಲೇಖನ ಪ್ರಕಟಿಸಲಾಗಿತ್ತು. ‘ಅತ್ಯಂತ ಕಡಿಮೆ ಮೊತ್ತ ನಮೂದಿಸಿದ ಕಾರಣಕ್ಕೆ ಇನ್ಫೊಸಿಸ್‌ಗೆ ಈ ಗುತ್ತಿಗೆ ನೀಡಲಾಗಿತ್ತು. ಪ್ರಖ್ಯಾತ ಕಂಪನಿಯಾಗಿರುವ ಕಾರಣಕ್ಕೆ, ಏನನ್ನೂ ಪರಿಶೀಲಿಸದೆ ಗುತ್ತಿಗೆ ನೀಡಲಾಗಿತ್ತು. ಆದರೆ ಇನ್ಫೊಸಿಸ್‌ನ ಈ ಅರೆಬರೆ ಕಾರ್ಯದಿಂದಾಗಿ ಸರ್ಕಾರದ ಘನತೆಗೆ ಧಕ್ಕೆಯಾಗಿದೆ’ ಎಂದು ಪಾಂಚಜನ್ಯದ ಲೇಖನದಲ್ಲಿ ಟೀಕಿಸಲಾಗಿತ್ತು.

‘ಇನ್ಫೊಸಿಸ್ ಭಾರತ ಮತ್ತು ಬಿಜೆಪಿ ಸರ್ಕಾರದ ಹೆಸರಿಗೆ ಮಸಿ ಬಳಿಯಲೆಂದು, ಬೇಕಂತಲೇ ಐಟಿ ಪೋರ್ಟಲ್‌ ಅನ್ನು ಸರಿಯಾಗಿ ಅಭಿವೃದ್ಧಿಪಡಿಸಿಲ್ಲ. ಈ ಕಂಪನಿಯು ದೇಶವಿರೋಧಿಗಳಿಗೆ, ದೇಶದ್ರೋಹಿಗಳಿಗೆ ದೇಣಿಗೆ ನೀಡುತ್ತದೆ. ಭಾರತದ ವಿರುದ್ಧ ಕೆಲಸ ಮಾಡುತ್ತಿರುವವರಿಗೆ ಇನ್ಫೊಸಿಸ್ ನೆರವಾಗುತ್ತಿದೆ’ ಎಂದು ಲೇಖನದಲ್ಲಿ ಆರೋಪಿಸಲಾಗಿತ್ತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು