ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತೀರ್ಪು: ‘ಹಿಜಾಬ್ ಅತ್ಯವಶ್ಯಕ ಧಾರ್ಮಿಕ ಆಚರಣೆಯಲ್ಲ’

Last Updated 15 ಮಾರ್ಚ್ 2022, 18:45 IST
ಅಕ್ಷರ ಗಾತ್ರ

ಬೆಂಗಳೂರು:ಅಮೆರಿಕದ ಖ್ಯಾತ ಸಂಶೋಧಕಿ ಮತ್ತು ಇತಿಹಾಸ ತಜ್ಞೆ ಸಾರಾ ಸ್ಲಿನಿಗರ್, ಹಿಜಾಬ್ ಕುರಿತಂತೆ ಹೇಳುವ ಮಾತೆಂದರೆ; ‘ಹಿಜಾಬ್‌ ನೋಡಲಿಕ್ಕೆ ಎಷ್ಟು ಸರಳವಾಗಿ ಕಾಣುತ್ತದೆಯೋ ಅದಕ್ಕೆ ವ್ಯತಿರಿಕ್ತವಾಗಿ ಅದೊಂದು ಅಪಾರ ಸಂಕೀರ್ಣತೆಯ ಅಡಗುತಾಣ!’.

ಈ ವಾಕ್ಯದೊಂದಿಗೆ ಆರಂಭವಾಗುವ ಹಿಜಾಬ್‌ ಕುರಿತಾದ ತೀರ್ಪಿನುದ್ದಕ್ಕೂ ಅಲ್ಲಲ್ಲಿ ದಾರ್ಶನಿಕರ ಉಲ್ಲೇಖಗಳಿವೆ. ಅವುಗಳ ಸಾಲಿನಲ್ಲಿ ರವೀಂದ್ರನಾಥ್ ಟ್ಯಾಗೋರ್, ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿಯಾಗಿದ್ದ ಸುಧಿ ರಂಜನ್‌ ದಾಸ್‌, ಪ್ರಖ್ಯಾತ ವಕೀಲರಾದ ಅಲ್ಲಾಡಿ ಕೃಷ್ಣಸ್ವಾಮಿ ಅಯ್ಯರ್‌, ಪ್ರಖ್ಯಾತ ಶಿಕ್ಷಣ ತಜ್ಞ ಬರ್ಟ್ರಂಡ್‌ ರಸಲ್‌, ಆಸ್ಕರ್‌ ವೈಲ್ಡ್‌ ಅಂತಹವರಿದ್ದಾರೆ.

ಇವರೆಲ್ಲರ ಉದ್ಧೃತ ಪದಪುಂಜಗಳನ್ನು ಒಳಗೊಂಡಿರುವ 129 ಪುಟಗಳ ಈ ತೀರ್ಪಿನಲ್ಲಿ ಒಟ್ಟಾರೆ ಹೇಳಿರುವುದೇನೆಂದರೆ, ‘ಮುಸ್ಲಿಂ ಮಹಿಳೆಯರು ಹಿಜಾಬ್‌ ಧರಿಸುವುದು ಕಡ್ಡಾಯ, ಅವರ ಧಾರ್ಮಿಕ ಹಕ್ಕು ಎಂಬುದು ಆಧಾರರಹಿತ ಹಾಗೂ ಶಿಕ್ಷಣ ಸಂಸ್ಥೆಗಳಲ್ಲಿ ಆಯಾ ಶಾಲಾ–ಕಾಲೇಜು ಅಭಿವೃದ್ಧಿ ಮಂಡಳಿಗಳು ಸೂಚಿಸುವ ಸಮವಸ್ತ್ರದ ಸಂಹಿತೆಯನ್ನು ಎಲ್ಲರೂ ಪಾಲಿಸಬೇಕು’ ಎಂಬುದಾಗಿದೆ.

ಅರ್ಜಿದಾರರು ಮತ್ತು ಪ್ರತಿವಾದಿಗಳ ವಾದ–ಪ್ರತಿವಾದ ಆಲಿಸದ ಬಳಿಕ ನ್ಯಾಯಪೀಠ ತೀರ್ಪಿಗೆ ಪೂರಕವಾಗಿ ನಾಲ್ಕು ಪ್ರಶ್ನೆಗಳನ್ನು ಕಣ್ಣ ಮುಂದಿರಿಸಿಕೊಂಡಿತ್ತು. ಅವುಗಳೆಂದರೆ;

ಪ್ರಶ್ನೆ: ಹಿಜಾಬ್‌ ಧರಿಸುವುದು ಇಸ್ಲಾಂ ಧರ್ಮದ ಅತ್ಯವಶ್ಯಕ ಆಚರಣೆಯೇ?ಹಿಜಾಬ್‌ ಧರಿಸುವುದನ್ನು ಸಂವಿಧಾನದ 25ನೇ ವಿಧಿಯ ಅಡಿಯಲ್ಲಿ ರಕ್ಷಿಸಬಹುದೇ?

ಮುಸ್ಲಿಂ ಹೆಣ್ಣುಮಕ್ಕಳು ಹಿಜಾಬ್‌ ಧರಿಸುವುದು ಇಸ್ಲಾಂ ಧರ್ಮದ ಅತ್ಯಾವಶ್ಯಕ ಧಾರ್ಮಿಕ ಆಚರಣೆಯಲ್ಲ. ಒಂದು ಧರ್ಮದ ಆಚರಣೆಯು ಅಗತ್ಯ ಎಂದೆನ್ನಿಸಿಕೊಳ್ಳಬೇಕಾದರೆ; ಒಂದು ವೇಳೆ ಆ ಆಚರಣೆಯನ್ನು ಆಚರಿಸದೇ ಹೋದಲ್ಲಿ ಧರ್ಮ ಅಥವಾ ಮತ ತನ್ನ ಅಸ್ತಿತ್ವವನ್ನೇ ಕಳೆದುಕೊಳ್ಳುತ್ತದೆ ಎಂದಾಗ ಮಾತ್ರವೇ ಅದು ಅತ್ಯಾವಶ್ಯಕ ಎನ್ನಿಸಿಕೊಳ್ಳುತ್ತದೆ. ಹೀಗಾಗಿ, ಹಿಜಾಬ್ ಅತ್ಯಾವಶ್ಯಕ ಧಾರ್ಮಿಕ ಆಚರಣೆಯಲ್ಲ.

ಪ್ರಶ್ನೆ: ಶಾಲೆಯಲ್ಲಿ ಹಿಜಾಬ್‌ ನಿಷೇಧವು ಸಂವಿಧಾನದ 19 (1) (ಎ) ವಿಧಿಯ ಅಡಿಯಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯದ ಉಲ್ಲಂಘನೆಯಾಗುತ್ತದೆಯೇ?

–ಶಾಲಾ ಸಮವಸ್ತ್ರ ಧರಿಸುವಂತೆ ಸೂಚಿಸುವುದನ್ನು ವಿರೋಧಿಸುವುದು, ಸಂವಿಧಾನಕ್ಕೇ ವಿರುದ್ಧವಾದುದು. ಸಮವಸ್ತ್ರವನ್ನು ಬ್ರಿಟಿಷರಾಗಲೀ ಅಥವಾ ಮೊಘಲರಾಗಲೀ ಭಾರತಕ್ಕೆ ತಂದಿದ್ದಲ್ಲ. ಇದು ವೇದಗಳಲ್ಲೇ ಅಡಗಿದೆ. ಇದನ್ನು ಪಾಂಡುರಂಗ ವಾಮನ ಕಾಣೆಯವರು ತಮ್ಮ, ‘ಹಿಸ್ಟರಿ ಆಫ್‌ ಧರ್ಮಶಾಸ್ತ್ರ‘ದಲ್ಲಿಯೇ ಉಲ್ಲೇಖಿಸಿದ್ದಾರೆ. ವಿದ್ಯಾರ್ಥಿಗಳು, ರೈತರು, ಹೆಣ್ಣುಮಕ್ಕಳು, ಧಾರ್ಮಿಕ ಕ್ರಿಯಾವಿಧಿಗಳನ್ನು ನಡೆಸುವಂತಹವು ಯಾವ ಸಂದರ್ಭದಲ್ಲಿ ಏನನ್ನು ಮತ್ತು ನಿತ್ಯಜೀವನದಲ್ಲಿ ಯಾವ ರೀತಿಯ ವಸ್ತ್ರಗಳನ್ನು ತೊಡಬೇಕು ಎಂಬುದನ್ನೆಲ್ಲಾ ಇಲ್ಲಿ ವಿಶದಪಡಿಸಿದ್ದಾರೆ. ನಾಗರಿಕ ಸಮಾಜದ ದೇಶಗಳಲ್ಲಿ ಇದನ್ನು ಚಾಚೂ ತಪ್ಪದೆ ಪಾಲಿಸಿಕೊಂಡು ಬರಲಾಗುತ್ತಿದೆ. ಹಾಗಾಗಿ, ಶಾಲಾ ಕಾಲೇಜುಗಳಲ್ಲಿ ಸಮವಸ್ತ್ರ ಸಂಹಿತೆ ಸೂಚಿಸಿದರೆ ಅದನ್ನು ವಿರೋಧಿಸುವಂತಿಲ್ಲ.

ಪ್ರಶ್ನೆ: ಸಂವಿಧಾನದ 21ನೇ ವಿಧಿಯ ಅಡಿಯಲ್ಲಿ ಸಮವಸ್ತ್ರ ಧರಿಸುವಂತೆ ಸೂಚಿಸುವುದಕ್ಕೆ ಕಾನೂನಾತ್ಮಕ ಅನುಮತಿ ಸಾಧ್ಯವೇ?

–ಸಮವಸ್ತ್ರ ಸಂಹಿತೆ ರೂಪಿಸಲು ಕಾಲೇಜು ಅಭಿವೃದ್ಧಿ ಸಮಿತಿಗಳಿಗೆ (CDC) ಅಧಿಕಾರ ನೀಡಿರಾಜ್ಯ ಸರ್ಕಾರ 2022ರ ಫೆಬ್ರುವರಿ 5ರಂದು ಹೊರಡಿಸಿದ್ದ ಆದೇಶವು ಶಿಕ್ಷಣ ಕಾಯ್ದೆ–1983ಗೆ ಅನುಗುಣವಾಗಿಯೇ ಇದೆ. ಅಧಿಕಾರಿಗಳು ಪ್ರಯೋಗಿಸುವ ಆದೇಶಗಳಲ್ಲಿ ಕೆಲವೊಮ್ಮೆ ಒಂದು ಶಬ್ದವು ಮತ್ತೊಂದು ಶಬ್ದಕ್ಕೆ ಧ್ವನಿಸುವ ಅರ್ಥವನ್ನು ಅರಿತು ವಿಮರ್ಶಿಸಬೇಕಾಗುತ್ತದೆ. ಹೀಗಾಗಿ ಅರ್ಜಿದಾರರು ಆದೇಶದಲ್ಲಿನ ಪದಗಳ ಕುರಿತಂತೆ ಎತ್ತಿದ ಆಕ್ಷೇಪಣೆಗಳು ಮತ್ತು ಸರ್ಕಾರದ ಆದೇಶವನ್ನು ಅಸಿಂಧು ಎಂದು ಘೋಷಿಸಲು ಯಾವುದೇ ಅಧಿಕಾರವಿಲ್ಲ.

ಪ್ರಶ್ನೆ: ಪ್ರತಿವಾದಿಯಾದ ಉಡುಪಿಯ ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರ ವಿರುದ್ಧ ಶಿಸ್ತು ಕ್ರಮಕ್ಕೆ ಕೋರಿದ, ಇದೇ ಕಾಲೇಜಿನ ಶಿಕ್ಷಕಿಯೊಬ್ಬರನ್ನು ಮತ್ತು ಶಾಸಕ ರಘುಪತಿ ಭಟ್‌ ಅವರನ್ನು ಅವರ ಸ್ಥಾನಗಳಿಂದ (ಕಾಲೇಜು ಅಭಿವೃದ್ಧಿ ಮಂಡಳಿ) ವಜಾಗೊಳಿಸಲು ನಿರ್ದೇಶನ ನೀಡಬೇಕೆಂಬ ಕೊ–ವಾರಂಟ್‌ ಅರ್ಜಿಗಳ ಬಗ್ಗೆ

ಶಾಲೆಗಳು ‘ಅರ್ಹತೆ ಹೊಂದಿರುವ ಸಾರ್ವಜನಿಕ ಸ್ಥಳ’ ಎಂದು ಪರಿಗಣಿಸಲ್ಪಟ್ಟಿವೆ. ಇಂತಹ ಸ್ಥಳಗಳಲ್ಲಿ ವಿದ್ಯಾರ್ಥಿಗಳು ತಮ್ಮ ವೈಯಕ್ತಿಕ ಹಕ್ಕುಗಳ ಪ್ರತಿಪಾದನೆಗೆ ಆಸ್ಪದವಿರುವುದಿಲ್ಲ. ಸಂವಿಧಾನದ 14 ಮತ್ತು 15ನೇ ವಿಧಿಯಲ್ಲಿ ಹೇಳಿರುವ ಹಾಗೆ;ಎಲ್ಲಾ ವಿದ್ಯಾರ್ಥಿಗಳಿಗೂ ಸಮವಸ್ತ್ರ ಎಂಬುದುಜಾತಿ, ಧರ್ಮ, ಭಾಷೆ, ಲಿಂಗ ಇವೆಲ್ಲವುಗಳನ್ನು ಹೊರತುಪಡಿಸಿ ಸಮಾನವಾಗಿ ಅನ್ವಯವಾಗುತ್ತದೆಯೇ ಹೊರತು ಪಂಥೀಯ ಆಧಾರದಲ್ಲಿ ನಿರ್ಧರಿತವಾಗಿರುವ ಯಾವ ಪ್ರಕರಣವೂ ನಮಗೆ ಕಾಣ ಸಿಗುವುದಿಲ್ಲ.

ಪ್ರತಿವಾದಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕೆಂಬ ವಿಚಾರಕ್ಕೆ ಸಂಬಂಧಿಸಿದಂತೆ ಕೋರಿರುವ ರಿಟ್‌ ಅರ್ಜಿಗೆ ಯಾವುದೇ ಆಧಾರವಿಲ್ಲ.ಹೀಗಾಗಿ ಈ ಅರ್ಜಿಯನ್ನೂ ವಜಾಗೊಳಿಸಲಾಗುತ್ತಿದೆ.

ಹಿಜಾಬ್‌–ಪ್ರತಿಕ್ರಿಯೆಗಳು
ಅರ್ಜಿದಾರರ ಎಲ್ಲ ಮನವಿಗಳನ್ನೂ ನ್ಯಾಯಪೀಠ ತಿರಸ್ಕರಿಸಿದೆ. ನಾಲ್ಕು ಅಂಶಗಳ ಮೇಲೆ ತೀರ್ಪು ನೀಡಿದೆ. ಸಂವಿಧಾನದ 25ನೇ ವಿಧಿಯ ವಿಶ್ಲೇಷಣೆಗೆಈ ತೀರ್ಪು ಗಮನಾರ್ಹವಾಗಿದೆ.
ಪ್ರಭುಲಿಂಗ ಕೆ.ನಾವದಗಿ,ಅಡ್ವೊಕೇಟ್‌ ಜನರಲ್, ಕರ್ನಾಟಕ ಹೈಕೋರ್ಟ್‌

*

ತೀರ್ಪನ್ನು ಬಹಳ ಸರಿಯಾಗಿ, ಯೋಚನೆ ಮಾಡಿ ಬರೆದಿದ್ದಾರೆ. ಮೂವರು ನ್ಯಾಯಮೂರ್ತಿಗಳೂ ಒಮ್ಮತದಿಂದ ತೀರ್ಮಾನಕ್ಕೆ ಬಂದು ವಿಮರ್ಶಿಸಿ, ತೀರ್ಪು ಬರೆದಿರುವುದು ಸಂತೋಷದ ಸಂಗತಿ. ಅರ್ಜಿದಾರರು ತಮ್ಮ ವೈಯಕ್ತಿಕ ಹಕ್ಕು ಉಲ್ಲಂಘನೆ ಆಗಿದೆ ಎಂದಿದ್ದರು. ಉಲ್ಲಂಘನೆ ಆಗಿಲ್ಲ ಎಂದು ಕೋರ್ಟ್‌ ಹೇಳಿದೆ. ಈ ವಿಷಯದಲ್ಲಿ ರಾಜಕೀಯ ಸಲ್ಲದು.
–ಎಸ್‌.ಎಸ್‌.ನಾಗಾನಂದ,ಹಿರಿಯ ವಕೀಲರು, ಪ್ರತಿವಾದಿ ಶಿಕ್ಷಣ ಸಂಸ್ಥೆ ಪರ ವಾದ ಮಂಡಿಸಿದವರು

*

ನ್ಯಾಯಪೀಠವು ಕುರಾನ್‌ನಲ್ಲಿನ ಶ್ಲೋಕಗಳನ್ನು ಸರಿಯಾಗಿ ಅರ್ಥೈಸಿಕೊಂಡಿಲ್ಲ. ಮುಸ್ಲಿಂ ಹುಡುಗಿಯರು ಶೈಕ್ಷಣಿಕವಾಗಿ ಹಿಂದುಳಿದ್ದಾರೆ ಎಂಬ ನಮ್ಮ ವಾದವನ್ನೂಪರಿಗಣಿಸಿಲ್ಲ. ತಪ್ಪು ಗ್ರಹಿಕೆಯಿಂದ ತೀರ್ಪು ನೀಡಿದೆ. ಇದನ್ನು ನಾವು ಸುಪ್ರೀಂ ಕೋರ್ಟ್‌ನಲ್ಲಿ ಮೇಲ್ಮನವಿ ಮೂಲಕ ಪ್ರಶ್ನಿಸುತ್ತಿದ್ದೇವೆ.
–ರಹಮತ್‌ ಉಲ್ಲಾ ಕೊತ್ವಾಲ್‌,ಸಾರ್ವಜನಿಕ ಹಿತಾಸಕ್ತಿ ಅರ್ಜಿದಾರರಾದ, ಸಾಮಾಜಿಕ ಕಾರ್ಯಕರ್ತ ಅರೀಫ್ ಜಮೀಲ್‌ಪರ ವಕೀಲ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT