ಸೋಮವಾರ, ಆಗಸ್ಟ್ 2, 2021
26 °C

ಆಳ–ಅಗಲ| ಕಾಸಿದ್ದವರಿಗೆ ಕೃಷಿ ಭೂಮಿ: ಹಳ್ಳಿಗಳಲ್ಲಿ ಹೆಚ್ಚಲಿವೆ ಫಾರ್ಮ್‌ ಹೌಸ್‌ಗಳು

ಡಾ. ಸತೀಶ್ ಗೌಡ ಎನ್. Updated:

ಅಕ್ಷರ ಗಾತ್ರ : | |

ಕೃಷಿಕರಲ್ಲದವರಿಗೂ ಕೃಷಿ ಭೂಮಿ ಖರೀದಿಸಲು ಅನುವಾಗುವಂತೆ ರಾಜ್ಯ ಸರ್ಕಾರ ಭೂಕಾಯ್ದೆಗಳಿಗೆ ತಿದ್ದುಪಡಿ ತರಲು ನಿರ್ಧರಿಸಿದೆಯಷ್ಟೆ. ಈ ತಿದ್ದುಪಡಿಯಿಂದ ರೈತರ ಹಿತಾಸಕ್ತಿಗೆ ಹಾಗೂ ಕೃಷಿ ಅಭಿವೃದ್ಧಿಗೆ ಆಗುವ ಕೆಲವೊಂದು ವ್ಯತಿರಿಕ್ತ ಪರಿಣಾಮಗಳನ್ನು ಅವಲೋಕನ ಮಾಡಬೇಕಿದೆ.

ಒಂದು ವೇಳೆ ಕೃಷಿಕರಲ್ಲದವರೂ ಭೂಮಿ ಖರೀದಿಸಲು ಹೊರಟರೆ, ಕೃಷಿಭೂಮಿಯ ಬೆಲೆಯೂ ನಗರದ ಸೈಟ್‌ಗಳ ದರದಂತೆಯೇ ಹೆಚ್ಚಾಗುವ ಅಪಾಯವಿದೆ. ಮೂಲ ರೈತರು ಹಾಗೂ ಮಧ್ಯಮ ವರ್ಗದವರು ಕೃಷಿ ಭೂಮಿಯನ್ನು ಖರೀದಿಸಲು ಸಾಧ್ಯವೇ ಆಗದಂತಹ ಸನ್ನಿವೇಶ ಸೃಷ್ಟಿಯಾಗಲಿದೆ.

ರೈತರು ಹೆಚ್ಚಿನ ಬೆಲೆಗೆ ಆಕರ್ಷಿತರಾಗಿ ತಮ್ಮ ವ್ಯವಸಾಯದ ಭೂಮಿಯನ್ನು ಬಹು ಸುಲಭವಾಗಿ ಮಾರಾಟಮಾಡಿ ಶಾಶ್ವತ ಬಡತನಕ್ಕೆ ಈಡಾಗುವ ಸಾಧ್ಯತೆಯೂ ಇದೆ. ಹಾಗೆಯೇ ಹಳ್ಳಿಗಳಲ್ಲಿ ಫಾರ್ಮ್‌ ಹೌಸ್‌ಗಳು ಹೆಚ್ಚಿ, ಪರೋಕ್ಷ ನಗರೀಕರಣಕ್ಕೂ ಕಾರಣವಾಗುವ ಅಪಾಯವಿದೆ.

ಕೃಷಿಭೂಮಿಯನ್ನು ಕೃಷಿಕರಲ್ಲದವರು ಖರೀದಿಸಲು ಶುರು ಮಾಡಿದರೆ ಅದರ ಪರಿಣಾಮ ಎಲ್ಲಿಗೂ ಹೋಗಿ ಮುಟ್ಟಬಹುದು. ಅಲ್ಲಿ ಕೃಷಿ ಚಟುವಟಿಕೆಗಳಿಗಿಂತ ರೆಸಾರ್ಟ್‌ಗಳೇ ಹೆಚ್ಚಾಗಿ ತಲೆ ಎತ್ತಬಹುದು. ಕಾರ್ಖಾನೆಗಳು ಲಗ್ಗೆ ಹಾಕಬಹುದು. ಬಹುರಾಷ್ಟ್ರೀಯ ಕಂಪನಿಗಳೂ ನೆಲೆ ಕಂಡುಕೊಳ್ಳಬಹುದು. ಇದರಿಂದ ಹಳ್ಳಿಯ ವಾತಾವರಣವೇ ಬದಲಾಗುತ್ತದೆ. ಭೂಸುಧಾರಣೆ ತಿದ್ದುಪಡಿ ವಿಷಯಕ್ಕೆ ಸಂಬಂಧಿಸಿದಂತೆ ಸುಗ್ರೀವಾಜ್ಞೆ ಹೊರಡಿಸಲು ಹವಣಿಸುವ ಅಗತ್ಯವೇನಿದೆ? ಅದು ಅಧಿವೇಶನದಲ್ಲಿ ಚರ್ಚೆಯಾಗಿ ನಿರ್ಧಾರವಾಗಬೇಕಾದ ವಿಷಯವಾಗಿದೆ.

ಕೃಷಿಕರಿಗೆ ಮಾತ್ರ ಕೃಷಿಭೂಮಿಯನ್ನು ಖರೀದಿಸುವ ಹಕ್ಕು ಕಲ್ಪಿಸಿದರೆ ಉಳಿದವರು ಏನು ಮಾಡಬೇಕು? ಇದರಿಂದ ಸಂವಿಧಾನದ ಸಮಾನತೆ ಹಕ್ಕಿನ ಉಲ್ಲಂಘನೆ ಮಾಡಿದಂತಲ್ಲವೇ ಎಂಬ ಪ್ರಶ್ನೆಗಳೂ ಕೇಳಿಬರುತ್ತಿವೆ.

ರೈತರಿಗೆ ಕೃಷಿಯು ಬಹುಮುಖ್ಯ ಉದ್ಯೋಗ. ರೈತರು, ಕೃಷಿಯನ್ನು ನಿಲ್ಲಿಸಿದರೆ ದೇಶದಲ್ಲಿ ಆಹಾರದ ಹಾಹಾಕಾರ ಹೆಚ್ಚಾಗುವುದರ ಜೊತೆಗೆ ಕೃಷಿ ಕ್ಷೇತ್ರದಲ್ಲಿ ಸಮತೋಲನ ತಪ್ಪುತ್ತದೆ. ಬೇರೆಯವರು ಕೃಷಿ ವೃತ್ತಿಗೆ ಇಳಿದಾಗ ಉತ್ಪಾದನೆಯೂ ಕುಂಠಿತವಾಗುತ್ತದೆ.

ಒಂದುವೇಳೆ ವೈದ್ಯ, ವಕೀಲ, ಎಂಜಿನಿಯರ್ ಇತ್ಯಾದಿ ವೃತ್ತಿಗಳನ್ನು ಯಾರು ಬೇಕಾದರೂ ಯಾವುದೇ ಅರ್ಹತೆ ಇಲ್ಲದೆ ‘ಪ್ರಾಕ್ಟೀಸ್’ ಮಾಡಬಹುದು ಎಂಬ ಕಾನೂನನ್ನು ತಂದುಬಿಟ್ಟರೆ ಈ ಮೇಲಿನ ವೃತ್ತಿನಿರತರು ಸುಮ್ಮನಿರುವರೇ?

ಕೃಷಿಕರಲ್ಲದವರು ಕೃಷಿಭೂಮಿಯಲ್ಲಿ ನಿರ್ಮಿಸಿರುವ ಫಾರ್ಮ್‌ ಹೌಸ್‌ಗೆ ತಿಂಗಳಲ್ಲಿ ಒಂದು ಬಾರಿ ಭೇಟಿ ಕೊಡುತ್ತಾರೆ; ಅಲ್ಲಿಯೇ ಉಳಿದುಕೊಳ್ಳುವುದಿಲ್ಲ. ಈ ಪುರುಷಾರ್ಥಕ್ಕಾಗಿ ಅವರು ಭೂಮಿಯನ್ನು ಕೊಳ್ಳಬೇಕೇ?

ಒಂದುವೇಳೆ ಕೃಷಿಕರಲ್ಲದವರಿಗೆ ಕೃಷಿಭೂಮಿಯ ಬಗ್ಗೆ ನಿಜವಾಗಿಯೂ ಆಸಕ್ತಿ ಇದ್ದರೆ ರೈತರಿಂದ ಬಾಡಿಗೆ ತೆಗೆದುಕೊಂಡು ಕೃಷಿ ಚಟುವಟಿಕೆಗಳನ್ನು ಆರಂಭಿಸಬಹುದು. ಉದಾಹರಣೆಗೆ, ಒಂದು ಎಕರೆ ಜಮೀನಿನ ಮೌಲ್ಯ ಕನಿಷ್ಠ ₹ 20 ಲಕ್ಷ ಎಂದುಕೊಂಡರೆ, ಐದು ಎಕರೆಗೆ ಸುಮಾರು ₹1 ಕೋಟಿ ಬಂಡವಾಳವನ್ನು ಹೂಡಬೇಕಾಗುತ್ತದೆ. ಅದರ ಬದಲು, ಒಂದು ಎಕರೆಗೆ ₹ 40 ಸಾವಿರದಂತೆ ವಾರ್ಷಿಕ ಬಾಡಿಗೆ ಕೊಟ್ಟರೆ, ಐದು ಎಕರೆಗೆ ವಾರ್ಷಿಕ ₹ 2 ಲಕ್ಷ ಬಾಡಿಗೆ. ಇಷ್ಟು ಕಡಿಮೆ ಬಾಬತ್ತಿನಲ್ಲೇ ಕೃಷಿ ಮಾಡಬಹುದು.

ಇದರಿಂದ ಎರಡು ಪ್ರಯೋಜನ. ಒಂದೆಡೆ ಕೃಷಿಕರಲ್ಲದವರಿಗೆ ಕೃಷಿ ಚಟುವಟಿಕೆಗಳಲ್ಲಿ ಭಾಗವಹಿಸಿದ ಖುಷಿ ತಂದುಕೊಟ್ಟರೆ, ಇನ್ನೊಂದೆಡೆ ರೈತರೂ ಭೂಮಿಯನ್ನು ಕಳೆದುಕೊಳ್ಳದೆ ಒಂದಿಷ್ಟು ಬಾಡಿಗೆ ಹಣದಿಂದ ತಮ್ಮ ಜೀವನ ಸಾಗಿಸಬಹುದು. ಈ ರೀತಿ ಒಬ್ಬ ಕೃಷಿಕನಲ್ಲದ ವ್ಯಕ್ತಿ ಹತ್ತು ವರ್ಷಗಳ ಕಾಲ ಸತತವಾಗಿ ಬೇಸಾಯ ಮಾಡಿಕೊಂಡು ಬಂದಾಗ, ಆತನ ಕೃಷಿ ಚಟುವಟಿಕೆಗಳ ಆಸಕ್ತಿಯನ್ನು ಗಮನಿಸಿ, ಕೃಷಿಭೂಮಿ ಖರೀದಿಸುವ ಹಕ್ಕನ್ನು ಕೊಡುವಂತಹ ತಿದ್ದುಪಡಿ ಮಾಡಬಹುದಲ್ಲವೇ?

ಲೇಖಕ: ಸಹಾಯಕ ಪ್ರಾಧ್ಯಾಪಕ, ಕಾನೂನು ವಿಭಾಗ, ಬೆಂಗಳೂರು ವಿಶ್ವವಿದ್ಯಾಲಯ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು