ಶುಕ್ರವಾರ, ಮೇ 20, 2022
26 °C

ಆಳ–ಅಗಲ: ಯಾರಿಗೂ ಸಲೀಸಲ್ಲ ಮಣಿಪುರ ಅಧಿಕಾರ

ಜಯಸಿಂಹ ಆರ್., ಅಮೃತ ಕಿರಣ್ ಬಿ.ಎಂ. Updated:

ಅಕ್ಷರ ಗಾತ್ರ : | |

Prajavani

ಬುಡಕಟ್ಟು ಜನರ ಪ್ರಾಬಲ್ಯದ ಈಶಾನ್ಯದ ರಾಜ್ಯ ಮಣಿಪುರವು ವಿಧಾನಸಭೆ ಚುನಾವಣೆಗೆ ಸಜ್ಜಾಗಿದೆ. ರಾಷ್ಟ್ರೀಯ ಪಕ್ಷಗಳಾದ ಕಾಂಗ್ರೆಸ್‌ ಮತ್ತು ಬಿಜೆಪಿಯ ಪ್ರಾಬಲ್ಯ ರಾಜ್ಯದಲ್ಲಿ ಇದೆ. ಜತೆಗೆ ರಾಜ್ಯದ ವಿವಿಧ ಭಾಗಗಳು ಮತ್ತು ಸಮುದಾಯಗಳಲ್ಲಿ ಪ್ರಭಾವಿ ಆಗಿರುವ ಹಲವು ಪ್ರಾದೇಶಿಕ ಪಕ್ಷಗಳೂ ಇವೆ. ಯಾವ ಪಕ್ಷಕ್ಕೂ ಸ್ಪಷ್ಟ ಬಹುಮತದ ಸೂಚನೆ ಈಗ ಕಾಣಿಸುತ್ತಿಲ್ಲ. ಹಾಗಾಗಿ ಫಲಿತಾಂಶದ ಬಳಿಕ, ಪ್ರಾದೇಶಿಕ ಪಕ್ಷಗಳಿಗೆ, ಪಕ್ಷೇತರರಿಗೆ ಭಾರಿ ಬೇಡಿಕೆ ಸೃಷ್ಟಿ ಆಗಬಹುದು

***

ಬಿಜೆಪಿ ಹಾದಿ ಸುಗಮವಲ್ಲ

ಮಣಿಪುರ ವಿಧಾನಸಭಾ ಚುನಾವಣೆಯಲ್ಲಿ, ರಾಜ್ಯದ ಎಲ್ಲಾ ಕ್ಷೇತ್ರಗಳಲ್ಲಿ ಕಣಕ್ಕೆ ಇಳಿಯಲು ಬಿಜೆಪಿ ಸಿದ್ಧತೆ ನಡೆಸಿದೆ ಎಂದು ಪಕ್ಷದ ಮೂಲಗಳು ಭಾನುವಾರವಷ್ಟೇ ಹೇಳಿವೆ. 2017ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ 21 ಸ್ಥಾನಗಳನ್ನು ಗೆದ್ದಿತ್ತು. ಹೀಗಿದ್ದೂ ಮೂರ್ನಾಲ್ಕು ಪ್ರಾದೇಶಿಕ ಪಕ್ಷಗಳ ಬೆಂಬಲ ಪಡೆದು ಸರ್ಕಾರ ರಚನೆ ಮಾಡಿತ್ತು. ಬಹುಮತಕ್ಕೆ 31 ಸ್ಥಾನಗಳ ಅವಶ್ಯಕತೆ ಇದ್ದಾಗ, ಪ್ರಾದೇಶಿಕ ಪಕ್ಷಗಳ ಬೆಂಬಲವಿಲ್ಲದೆ ಬಿಜೆಪಿಗೆ ಸರ್ಕಾರ ರಚಿಸಲು ಸಾಧ್ಯವಿರಲಿಲ್ಲ. ಆದರೆ ಈ ಬಾರಿ ಪಕ್ಷವು ಸ್ವತಂತ್ರವಾಗಿಯೇ ಕಣಕ್ಕೆ ಇಳಿಯಲು ನಿರ್ಧರಿಸಿದೆ ಎಂಬುದು, ರಾಜ್ಯದಲ್ಲಿ ಅದರ ನೆಲೆ ಗಟ್ಟಿಯಾಗಿದೆ ಎಂಬುದನ್ನು ಸೂಚಿಸುತ್ತದೆ ಎಂದು ಪಕ್ಷದ ನಾಯಕರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಆದರೆ ಮಣಿಪುರ ರಾಜಕೀಯ ಪರಿಸ್ಥಿತಿ, ಮುಖ್ಯವಾಗಿ ಬಿಜೆಪಿಯ ಸ್ಥಿತಿ ಅದೇ ಪಕ್ಷದ ನಾಯಕರು ಹೇಳುತ್ತಿರುವುದಕ್ಕಿಂತ ಭಿನ್ನವಾಗಿದೆ. ಬೇರೆ ರಾಜ್ಯಗಳಲ್ಲಿ ಮಾಡಿದಂತೆಯೇ ಬಿಜೆಪಿ ಮಿತ್ರಪಕ್ಷಗಳ ಜತೆಗೆ ದೊಡ್ಡಣ್ಣನಂತೆ ವರ್ತಿಸಿದೆ. ಬಿಜೆಪಿ ಶಾಸಕರಿಗಷ್ಟೇ ಆದ್ಯತೆ ನೀಡಲಾಗಿದೆ. ಪ್ರಭಾವಿ ಅಲ್ಲದವರನ್ನು ಮುಖ್ಯಮಂತ್ರಿ ಮಾಡಿದೆ. ಹೀಗಾಗಿ ಮಣಿಪುರದಲ್ಲಿಯೂ ಬಿಜೆಪಿಯ ವರ್ಚಸ್ಸು ಮತ್ತು ಆ ಪಕ್ಷದ ಬಗೆಗಿನ ವಿಶ್ವಾಸ ಕುಗ್ಗಿದೆ. ಮಿತ್ರಪಕ್ಷಗಳಿಗೇ ಹೆಚ್ಚಿನ ಸಚಿವ ಸ್ಥಾನ ಬಿಟ್ಟುಕೊಟ್ಟಿದ್ದಕ್ಕೆ, ಪಕ್ಷದೊಳಗೂ ಭಿನ್ನಮತ ಜೋರಾಗಿದೆ ಎನ್ನುತ್ತಾರೆ ರಾಜಕೀಯ ವಿಶ್ಲೇಷಕರು.

ಮುಖ್ಯಮಂತ್ರಿ ಬೀರೇನ್‌ ಸಿಂಗ್ ಆಡಳಿತದ ಬಗ್ಗೆ ರಾಜ್ಯದ ಜನರಲ್ಲಿ ಅಸಮಾಧಾನವಿದೆ. ಪಕ್ಷದ ಶಾಸಕರೇ ಮುಖ್ಯಮಂತ್ರಿಯ ಕಾರ್ಯವೈಖರಿಯ ಬಗ್ಗೆ ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ. ಬೇರೆಡೆ ಮುಖ್ಯಮಂತ್ರಿ ಅಭ್ಯರ್ಥಿಗಳನ್ನು ಘೋಷಿಸುವಂತೆ ಪ್ರತಿಪಕ್ಷಗಳಿಗೆ ಸವಾಲು ಹಾಕಿರುವ ಬಿಜೆಪಿ, ಮಣಿಪುರದಲ್ಲಿ ಇನ್ನೂ ಮುಖ್ಯಮಂತ್ರಿ ಅಭ್ಯರ್ಥಿ ಯಾರು ಎಂಬುದನ್ನು ನಿರ್ಧರಿಸಿಲ್ಲ. ಪ್ರಚಾರಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಅವರನ್ನೇ ಬಿಜೆಪಿ ಅವಲಂಬಿಸಿದೆ.

ಕೇಂದ್ರ ಸರ್ಕಾರದ ನೀತಿಗಳು, ರಾಜ್ಯ ಸರ್ಕಾರದ ಆಡಳಿತದ ಸ್ವರೂಪ, ಸರ್ಕಾರಕ್ಕೆ ಶರಣಾದ ನಾಗಾ ಬಂಡುಕೋರರಿಗೆ ಸರಿಯಾದ ಪುನರ್ವಸತಿ ಒದಗಿಸದೇ ಇರುವುದು, ಬಿಜೆಪಿ ಬಗೆಗಿದ್ದ ಮಿತ್ರಪಕ್ಷಗಳ ವಿಶ್ವಾಸವನ್ನು ಕುಗ್ಗಿಸಿದೆ. ಬುಡಕಟ್ಟು ಜನರ ಹಕ್ಕುಗಳ ರಕ್ಷಣೆ ಹೋರಾಟದಲ್ಲಿ ರೂಪುಗೊಂಡ ನ್ಯಾಷನಲ್ ಪೀಪಲ್ಸ್ ಪಾರ್ಟಿ ಮತ್ತು ನಾಗಾ ಪೀಪಲ್ಸ್ ಫ್ರಂಟ್ ಪಕ್ಷಗಳು ಸಹ ಈ ಬಾರಿ ಸ್ವತಂತ್ರವಾಗಿಯೇ ಸ್ಪರ್ಧಿಸುವುದಾಗಿ ಘೋಷಿಸಿವೆ. ಹೀಗಾಗಿ ಚುನಾವಣೆ ಪೂರ್ವದಲ್ಲಿ ಯಾವುದೇ ಮಿತ್ರಪಕ್ಷಗಳನ್ನು ಸಂಭಾಳಿಸಬೇಕಾದ ಅನಿವಾರ್ಯ ಬಿಜೆಪಿಗೆ ಇಲ್ಲ. ಈ ಬಗ್ಗೆ ಬಿಜೆಪಿ ಈವರೆಗೆ ಯಾವ ಪಕ್ಷದ ಜತೆಗೆ ಮಾತುಕತೆಯನ್ನೂ ನಡೆಸಿಲ್ಲ.

ಈ ಎಲ್ಲಾ ಅಂಶಗಳು ಚುನಾವಣೆಯಲ್ಲೂ ಪರಿಣಾಮ ಬೀರುವ ಸಾಧ್ಯತೆ ಇದೆ. ಹೀಗಾಗಿ ಮೇಲ್ನೋಟಕ್ಕೆ ತೋರುತ್ತಿರುವಂತೆ ರಾಜ್ಯದಲ್ಲಿ ಬಿಜೆಪಿಯ ಹಾದಿ ಸುಗಮವಾಗಿಲ್ಲ.

ಆಫ್‌ಸ್ಪಾ ವಿಸ್ತರಣೆ: ಆಡಳಿತ ಪಕ್ಷಕ್ಕೆ ಮಾರಕ

ಶಸಸ್ತ್ರ ಪಡೆಗಳ (ವಿಶೇಷ ಅಧಿಕಾರ) ಕಾಯ್ದೆಯ (ಆಫ್‌ಸ್ಪಾ) ವಿರುದ್ಧ ಈಶಾನ್ಯ ಭಾರತದ ರಾಜ್ಯಗಳಲ್ಲಿ ವಿರೋಧವಿದ್ದೇ ಇದೆ. ಮಣಿಪುರವೂ ಇದಕ್ಕೆ ಹೊರತಲ್ಲ. ರಾಜಧಾನಿ ಇಂಫಾಲಾ ಹೊರತುಪಡಿಸಿ, ರಾಜ್ಯದ ಎಲ್ಲಾ ಜಿಲ್ಲೆಗಳನ್ನು ಆಫ್‌ಸ್ಪಾಗೆ ಒಳಪಡಿಸಲಾಗಿದೆ. ನಾಗಾಲ್ಯಾಂಡ್‌ನಲ್ಲಿ ಈಚೆಗಷ್ಟೇ ನಾಗರಿಕರನ್ನು ಸೈನಿಕರು ಗುಂಡಿಟ್ಟು ಕೊಂದಿದ್ದರು. ಅದರ ವಿರುದ್ಧ ನಾಗಾಲ್ಯಾಂಡ್‌ನಲ್ಲಿ ಭಾರಿ ವಿರೋಧ ವ್ಯಕ್ತವಾಗಿತ್ತು. ಪಕ್ಕದ ಮಣಿಪುರದಲ್ಲೂ ಅಷ್ಟೇ ದೊಡ್ಡಮಟ್ಟದ ವಿರೋಧ ವ್ಯಕ್ತವಾಗಿತ್ತು.

ಈ ಮೊದಲು ರಾಜ್ಯದಲ್ಲಿ ಹೇರಲಾಗಿದ್ದ ಆಫ್‌ಸ್ಪಾದ ಅವಧಿ 2021ರ ಡಿಸೆಂಬರ್‌ 1ಕ್ಕೆ ಅಂತ್ಯವಾಗಿತ್ತು. ನಾಗಾಲ್ಯಾಂಡ್‌ನಲ್ಲಿ ನಾಗರಿಕರ ಹತ್ಯೆ ನಡೆದದ್ದು ಡಿಸೆಂಬರ್ 4ರಂದು. ಇದರ ವಿರುದ್ಧ ಪ್ರಬಲ ವಿರೋಧ ವ್ಯಕ್ತವಾಗುತ್ತಿದ್ದರೂ, ರಾಜ್ಯದ ಮೇಲೆ ಡಿಸೆಂಬರ್ 12ರಂದು ಆಫ್‌ಸ್ಪಾವನ್ನು ಮತ್ತೆ ಹೇರಲಾಯಿತು. ಅದು 2022ರ ಡಿಸೆಂಬರ್ 1ರವರೆಗೆ ಜಾರಿಯಲ್ಲಿ ಇರಲಿದೆ. ಇದು ರಾಜ್ಯದ ಜನರನ್ನು ಕೆರಳಿಸಿದೆ.

ಬುಡಕಟ್ಟು ಜನರೇ ನಿರ್ಣಾಯಕವಾಗಿರುವ 20 ಕ್ಷೇತ್ರಗಳಲ್ಲಿ ಈ ನಿರ್ಧಾರದ ವಿರುದ್ಧ ಭಾರಿ ಆಕ್ರೋಶ ವ್ಯಕ್ತವಾಗಿದೆ. ಈ ಪ್ರದೇಶದಲ್ಲಿ ಹೆಚ್ಚು ಪ್ರಭಾವ ಹೊಂದಿರುವ ನಾಗಾ ಪೀಪಲ್ಸ್ ಫ್ರಂಟ್‌ (ಎನ್‌ಪಿಎಫ್‌) ಈ ಬಾರಿ ಸ್ವತಂತ್ರವಾಗಿಯೇ ಕಣಕ್ಕೆ ಇಳಿಯುವುದಾಗಿ ಘೋಷಿಸಿದೆ. ಈ ಕ್ಷೇತ್ರಗಳಲ್ಲಿ ಗೆಲ್ಲುವ ಪಕ್ಷವು ಸರ್ಕಾರದ ರಚನೆಯಲ್ಲಿ ಮಹತ್ವದ ಪಾತ್ರ ವಹಿಸಲಿದೆ.

ಭಾರಿ ಆಗ್ರಹದ ನಡುವೆಯೂ ಆಫ್‌ಸ್ಪಾವನ್ನು ಮತ್ತೆ ಹೇರುವಂತೆ ಶಿಫಾರಸು ಮಾಡಿದ ರಾಜ್ಯ ಬಿಜೆಪಿ ಸರ್ಕಾರ ಮತ್ತು ಅದನ್ನು ಅನುಮೋದಿಸಿದ ಕೇಂದ್ರದ ಬಿಜೆಪಿ ಸರ್ಕಾರದ ವಿರುದ್ಧ ಇಲ್ಲಿನ ಜನರಿಗೆ ಸಿಟ್ಟಿದೆ. ಅದು ಈ ಚುನಾವಣೆಯಲ್ಲಿ ಬಿಜೆಪಿಯ ಮತ ಪ್ರಮಾಣವನ್ನು ಕಡಿಮೆ ಮಾಡಲಿದೆ. ಬಿಜೆಪಿ ಈ ಹಿಂದಿಗಿಂತ ಕಡಿಮೆ ಕ್ಷೇತ್ರಗಳಲ್ಲಷ್ಟೇ ಗೆಲ್ಲಲಿದೆ. ಅದರ ಮತ ಪ್ರಮಾಣ ಮತ್ತು ಸ್ಥಾನಗಳು ಕಡಿಮೆಯಾಗಲಿವೆ. ಆದರೆ ಇದರ ಲಾಭ ಕಾಂಗ್ರೆಸ್‌ಗೆ ದೊರೆಯುವ ಸಾಧ್ಯತೆ ಕಡಿಮೆ. ಆಫ್‌ಸ್ಪಾ ವಿರುದ್ಧ ಕಾಂಗ್ರೆಸ್‌ ನಾಯಕರು ದೊಡ್ಡ ದನಿಯಲ್ಲಿ ವಿರೋಧ ವ್ಯಕ್ತಪಡಿಸಿಲ್ಲ. ಜನರು ಇದನ್ನು ಸೂಕ್ಷ್ಮವಾಗಿ ಗಮನಿಸಿದ್ದಾರೆ. ಅದು ಕಾಂಗ್ರೆಸ್‌ಗೂ ಹೊಡೆತ ನೀಡಲಿದೆ. ಹೀಗಾಗಿ ಈ ಬಾರಿ ಪ್ರಾದೇಶಿಕ ಪಕ್ಷಗಳೇ ಹೆಚ್ಚು ಸ್ಥಾನಗಳನ್ನು ಗೆಲ್ಲುವ ಸಾಧ್ಯತೆ ಇದೆ ಎಂಬುದು ರಾಜಕೀಯ ವಿಶ್ಲೇಷಕರ ಲೆಕ್ಕಾಚಾರ. 

ಕಾಂಗ್ರೆಸ್‌ಗೆ ಈಗಲೂ ಇಬೋಬಿ ಆಸರೆ

ಈಶಾನ್ಯ ರಾಜ್ಯ ಮಣಿಪುರದಲ್ಲಿ ದೀರ್ಘಕಾಲದಿಂದ ನೆಲೆಯೂರಿದ್ದ ಕಾಂಗ್ರೆಸ್‌ನ ಸ್ಥಿತಿ ಈಗ ಅಷ್ಟೇನೂ ಚೆನ್ನಾಗಿಲ್ಲ. 60 ಸದಸ್ಯಬಲದ ವಿಧಾನಸಭೆಗೆ 2017ರಲ್ಲಿ ನಡೆದ ಚುನಾವಣೆಯಲ್ಲಿ 28 ಸೀಟುಗಳನ್ನು ಪಡೆದಿದ್ದರೂ 2022ರ ಚುನಾವಣೆಯ ಹೊತ್ತಿಗೆ ಈ ಸ್ಥಾನಗಳು ಕೇವಲ 13ಕ್ಕೆ ಕುಸಿದಿವೆ. ಇದು ರಾಜ್ಯದಲ್ಲಿ ಕಾಂಗ್ರೆಸ್‌ನ ವಾಸ್ತವವನ್ನು ಬಿಂಬಿಸುತ್ತದೆ. 

ಮೂರು ಬಾರಿ ರಾಜ್ಯದ ಚುಕ್ಕಾಣಿ ಹಿಡಿದಿದ್ದ ಕಾಂಗ್ರೆಸ್‌ ನಾಯಕ ಒಕ್ರಮ್ ಇಬೋಬಿ ಸಿಂಗ್ ಅವರ ಮೇಲೆ ಪಕ್ಷ ಈಗಲೂ ಅವಲಂಬಿತವಾಗಿದೆ. ಅವರು ರಾಜಕೀಯವಾಗಿ ಸಕ್ರಿಯವಾಗಿಲ್ಲದಿರುವುದೂ, ಪಕ್ಷ ಅನುಭವಿಸುತ್ತಿರುವ ಹಿನ್ನಡೆಗೆ ಕಾರಣ ಎಂದು ವಿಶ್ಲೇಷಕರು ಹೇಳುತ್ತಾರೆ. ಹೊಸ ಮುಖಗಳು ಕಾಣಿಸದ ಮಣಿಪುರ ಕಾಂಗ್ರೆಸ್‌ನಲ್ಲಿ, 73 ವರ್ಷದ ಇಬೋಬಿ ಅವರೇ ಈಗಲೂ ಪಕ್ಷದ ಪ್ರಮುಖ ನಾಯಕ. ಅವರು ಅನಾರೋಗ್ಯದ ತೆರೆ ಹಿಂದೆ ಇದ್ದರೂ, ಅವರನ್ನೇ ಮುಂದಿಟ್ಟುಕೊಂಡು ಚುನಾವಣಾ ಕಣಕ್ಕೆ ಧುಮುಕಬೇಕಾದ ಅನಿವಾರ್ಯಕ್ಕೆ  ಪಕ್ಷ ಸಿಲುಕಿದೆ. 

ಅಂದರೆ, ಇಬೋಬಿ ಆಡಳಿತದಲ್ಲಿ ಎಲ್ಲವೂ ಸರಿಯಿತ್ತು ಎಂದಲ್ಲ. ಅವರು ಮೂರು ಬಾರಿ ಮುಖ್ಯಮಂತ್ರಿ ಆಗಿದ್ದಾಗಲೂ, ಕಾಂಗ್ರೆಸ್‌ನ ಗುಂಪುಗಾರಿಕೆ ಹಾಗೂ ಒಳಜಗಳಗಳು ನಡೆದೇ ಇದ್ದವು. ಇಬೋಬಿಗೆ ನಿಷ್ಠರಾಗಿರುವ ಶಾಸಕರು ಮತ್ತು ಭಿನ್ನಮತೀಯ ಗುಂಪಿನ ನಡುವೆ ಪಕ್ಷ ಹಂಚಿಹೋಗಿತ್ತು. 2016ರಲ್ಲಿ, ಇಬೋಬಿ ಅವರ ಪ್ರತಿಸ್ಪರ್ಧಿ ಎಂದು ಬಿಂಬಿತವಾಗಿದ್ದ ಯುಮ್ಖಾಮ್ ಎರಾಬೋಟ್ ಅವರು ಬಿಜೆಪಿಗೆ ಸೇರುವ ಉದ್ದೇಶದಿಂದ ಕಾಂಗ್ರೆಸ್ ತೊರೆದಾಗ ಬಣ ವೈಷಮ್ಯ ತಾರಕಕ್ಕೇರಿತ್ತು. ಇದು ಬೀರೇನ್‌ ಸೇರಿದಂತೆ ಇತರ ನಾಯಕರೂ ಕಾಂಗ್ರೆಸ್‌ನಿಂದ ಹೊರನಡೆಯಲು ಕಾರಣವಾಯಿತು ಎನ್ನಲಾಗಿದೆ. ಎರಾಬೋಟ್ ಮತ್ತು ಬೀರೇನ್‌ ಅವರ ನಿರ್ಗಮನದ ನಂತರ, ಇತರ ನಾಯಕರು ಮತ್ತು ಶಾಸಕರು ಪಕ್ಷ ಬದಲಿಸಲು ಮುಂದಾದರು. ರಾಜ್ಯದಲ್ಲಿ ಬಿಜೆಪಿ ಸರ್ಕಾರ ರಚಿಸುವುದರೊಂದಿಗೆ ಪಕ್ಷಾಂತರದ ಪ್ರವೃತ್ತಿ ವೇಗ ಪಡೆದುಕೊಂಡಿತು.

ಕಾಂಗ್ರೆಸ್‌ಗೆ ದೊಡ್ಡ ಪೆಟ್ಟು ಕೊಟ್ಟಿದ್ದು ಪಕ್ಷಾಂತರ. 2021ರ ಆಗಸ್ಟ್‌ನಲ್ಲಿ ಆಗಿನ ಮಣಿಪುರ ಕಾಂಗ್ರೆಸ್ ಘಟಕದ ಅಧ್ಯಕ್ಷರಾಗಿದ್ದ ಗೋವಿಂದದಾಸ್ ಕೊಂತೌಜಂ ಅವರೇ ಬಿಜೆಪಿ ಸೇರಿ ಅಚ್ಚರಿ ಮೂಡಿಸಿದ್ದರು. ಇಲ್ಲಿಂದ ಶುರುವಾದ ವಲಸೆ ನಿಲ್ಲಲೇ ಇಲ್ಲ. ಚಾಲ್ಟನ್ಲೀನ್ ಅಮೋ ಮತ್ತು ಕಕ್ಚಿಂಗ್ ವೈ ಸುರ್ಚಂದ್ರ ಅವರಂತಹ ಹಿರಿಯ ಮುಖಂಡರು ಕಾಂಗ್ರೆಸ್ ತೊರೆದು ಬಿಜೆಪಿ ಪಾಳಯ ಸೇರಿದ್ದಾರೆ. ಇದೇ 10ರಂದು ಶಾಸಕ ಚಾಲ್ಟನ್ಲಿನ್ ಅಮೋ ಅವರು ಕಾಂಗ್ರೆಸ್‌ಗೆ ವಿದಾಯ ಹೇಳಿದರು. 

2020ರಲ್ಲಿ ಮಣಿಪುರದಲ್ಲಿ ಬಿಜೆಪಿ ಮಿತ್ರಪಕ್ಷವಾಗಿದ್ದ ನ್ಯಾಷನಲ್ ಪೀಪಲ್ಸ್ ಪಾರ್ಟಿಯ ಮೂವರು ಶಾಸಕರು ಬೀರೇನ್‌ ಸಿಂಗ್ ನೇತೃತ್ವದ ಸರ್ಕಾರಕ್ಕೆ ನೀಡಿದ್ದ ಬೆಂಬಲವನ್ನು ವಾಪಸ್ ಪಡೆದಿದ್ದರು. ಈ ಸಮಯವನ್ನು ಕಾಂಗ್ರೆಸ್ ಬಳಸಿಕೊಂಡು ಅಧಿಕಾರಕ್ಕೆ ಬರಬಹುದು ಎನ್ನಲಾಗಿತ್ತು. ಸರ್ಕಾರ ರಚಿಸುವಲ್ಲಿ ವಿಫಲವಾಗಿದ್ದ ಕಾಂಗ್ರೆಸ್, ಈ ಅವಕಾಶವನ್ನೂ ಉಪಯೋಗಿಸಿಕೊಳ್ಳುವಲ್ಲಿ ಎಡವಿತ್ತು. ಈ ಬಾರಿ ಬಿಜೆಪಿಯ ಆಡಳಿತವಿರೋಧಿ ಅಲೆಯ ಲಾಭ ಕಾಂಗ್ರೆಸ್‌ಗೆ ಸಿಗಲಿದೆ ಎಂಬ ವಿಶ್ವಾಸದಲ್ಲಿ ಪಕ್ಷ ಕಣಕ್ಕೆ ಧುಮುಕಿದೆ. 

ಪ್ರಾದೇಶಿಕ ಪಕ್ಷಗಳ ಕೈಯಲ್ಲಿ ಕೀಲಿ?

ಮಣಿಪುರದಲ್ಲಿ ಈ ಬಾರಿ ಪ್ರಾದೇಶಿಕ ಪಕ್ಷಗಳ ಕೈ ಮೇಲಾಗುವ ಸಾಧ್ಯತೆ ನಿಚ್ಚಳವಾಗಿದೆ ಎಂದು ವಿಶ್ಲೇಷಿಸಲಾಗಿದೆ. ಚುನಾವಣಾ ಪೂರ್ವ ಸಮೀಕ್ಷೆಗಳೂ ಇದೇ ಅಭಿಪ್ರಾಯ ವ್ಯಕ್ತಪಡಿಸಿವೆ.

2017ರ ಚುನಾವಣಾ ಫಲಿತಾಂಶವನ್ನು ಗಮನಿಸಿದರೆ, ಕಾಂಗ್ರೆಸ್ 28, ಬಿಜೆಪಿ 21 ಸ್ಥಾನಗಳನ್ನು ಗಳಿಸಿದ್ದವು. ಆದರೆ ಇಲ್ಲಿ ಕಿಂಗ್ ಮೇಕರ್ ಆಗಿದ್ದು ಪ್ರಾದೇಶಿಕ ಪಕ್ಷಗಳು ಹಾಗೂ ಪಕ್ಷೇತರರು. ಮೇಘಾಲಯ ಮುಖ್ಯಮಂತ್ರಿ ಕಾನ್ರಾಡ್ ಕೆ. ಸಂಗ್ಮಾ ಅವರ ನೇತೃತ್ವದ ನ್ಯಾಷನಲ್ ಪೀಪಲ್ಸ್ ಪಾರ್ಟಿ (ಎನ್‌ಪಿಪಿ) ಈಗ ಮಣಿಪುರದ ಪ್ರಮುಖ ರಾಜಕೀಯ ಪಕ್ಷವಾಗಿ ತನ್ನ ನೆಲೆ ವಿಸ್ತರಿಸಿಕೊಂಡಿದೆ. ರಾಜ್ಯದ ನಾಗಾ ಬುಡಕಟ್ಟು ಜನಾಂಗದ ಮೇಲೆ ನಾಗಾ ಪೀಪಲ್ಸ್ ಫ್ರಂಟ್ (ಎನ್‌ಪಿಎಫ್‌) ಪ್ರಾಬಲ್ಯ ಹೊಂದಿದೆ. ಈ ಎರಡೂ ಪಕ್ಷಗಳ ತಲಾ ನಾಲ್ವರು ಶಾಸಕರು, ಟಿಎಂಸಿ, ಎಲ್‌ಜೆಪಿ ಹಾಗೂ ಒಬ್ಬ ಪಕ್ಷೇತರ ಶಾಸಕನ ಬೆಂಬಲದಿಂದ ಬೀರೇನ್‌ ಅವರು ಸರ್ಕಾರ ರಚಿಸಲು ಸಾಧ್ಯವಾಗಿತ್ತು. ಹೊರಗಿನಿಂದ ಬಂದವರಿಗೆ ಬೀರೇನ್‌ ಸರ್ಕಾರ ಮಹತ್ವದ ಖಾತೆಗಳನ್ನು ನೀಡಿತ್ತು. ಈ ಬಾರಿ ಲೆಕ್ಕಾಚಾರ ಸ್ವಲ್ಪ ಭಿನ್ನವಾಗಿದೆ. ಸಂಗ್ಮಾ ಅವರು ಮೇಘಾಲಯದಲ್ಲಿ ಬಿಜೆಪಿ ಜೊತೆ ಸೇರಿ ಸರ್ಕಾರ ಮುನ್ನಡೆಸುತ್ತಿದ್ದಾರೆ. ಆದರೆ, ಮಣಿಪುರದಲ್ಲಿ ಈ ಬಾರಿ ಏಕಾಂಗಿಯಾಗಿ ಸ್ಪರ್ಧಿಸುವ ಘೋಷಣೆ ಮಾಡಿದ್ದಾರೆ. ಹಿಂದಿನ ಬಾರಿ 9 ಕ್ಷೇತ್ರಗಳಲ್ಲಿ ಸ್ಪರ್ಧಿಸಿದ್ದ ಎನ್‌ಪಿಪಿ 4ರಲ್ಲಿ ಗೆದ್ದಿತ್ತು. ಈ ಬಾರಿ 40 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸುವ ಉದ್ದೇಶದಲ್ಲಿ ಸಂಗ್ಮಾ ಇದ್ದಾರೆ. ಇದು ನಿಜವಾದಲ್ಲಿ, ಬಿಜೆಪಿಗೆ ಎನ್‌ಪಿಪಿ ಪೆಟ್ಟು ನೀಡುವುದು ಖಚಿತ. ಹೀಗಾಗಿಯೇ, ಎನ್‌ಪಿಪಿ ಮನವೊಲಿಸಿ ಚುನಾವಣಾ ಪೂರ್ವ ಮೈತ್ರಿ ಮಾಡಿಕೊಳ್ಳಲು ಬಿಜೆಪಿ ಭಾರಿ ಯತ್ನ ನಡೆಸಿದೆ.

ಎನ್‌ಪಿಎಫ್‌ ಕಳೆದ ಚುನಾವಣೆಯಲ್ಲಿ ನಾಲ್ಕು ಕ್ಷೇತ್ರಗಳಲ್ಲಿ ಜಯಗಳಿಸಿ, ಬಿಜೆಪಿ ಸರ್ಕಾರವನ್ನು ಬೆಂಬಲಿಸಿತ್ತು. ಈಗ ಬಿಜೆಪಿ ಜೊತೆ ಉತ್ತಮ ಸಂಬಂಧ ಇದೆಯಾದರೂ, ಈವರೆಗೆ ಚುನಾವಣಾ ಪೂರ್ವ ಮೈತ್ರಿ ಮಾಡಿಕೊಂಡಿಲ್ಲ. ಪಕ್ಷವು ಈ ಬಾರಿ 15 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸುವ ಸಾಧ್ಯತೆಯಿದ್ದು, 8–10 ಸ್ಥಾನಗಳನ್ನು ಗೆಲ್ಲುವ ಲೆಕ್ಕಾಚಾರದಲ್ಲಿದೆ ಎನ್ನಲಾಗಿದೆ.

ಈ ಎರಡೂ ಪ್ರಾದೇಶಿಕ ಪಕ್ಷಗಳು ಬಿಜೆಪಿ ಹಾಗೂ ಕಾಂಗ್ರೆಸ್‌ನ ಮತಬ್ಯಾಂಕ್‌ ಅನ್ನು ವಿಭಜಿಸಲಿದ್ದು, ರಾಷ್ಟ್ರೀಯ ಪಕ್ಷಗಳಿಗೆ ಸ್ಪಷ್ಟ ಪೆಟ್ಟು ನೀಡುವ ಸಾಧ್ಯತೆಯಿದೆ. ಇವರೆಡೂ ತಲಾ 10 ಕ್ಷೇತ್ರಗಳನ್ನು ಬುಟ್ಟಿಗೆ ಹಾಕಿಕೊಂಡರೂ ಅಚ್ಚರಿಯಿಲ್ಲ ಎನ್ನುತ್ತಾರೆ ವಿಶ್ಲೇಷಕರು. ಕಾಂಗ್ರೆಸ್ ಅಥವಾ ಬಿಜೆಪಿಗೆ ಈ ಬಾರಿಯೂ ಸರಳ ಬಹುತಮ ಸಿಗದಿದ್ದಲ್ಲಿ, ಈ ಪಕ್ಷಗಳೇ ನಿರ್ಣಾಯಕ ಆಗುವ ಎಲ್ಲ ಸಾಧ್ಯತೆಗಳಿವೆ.

–ಮಾಹಿತಿ ಸಂಗ್ರಹ: ಜಯಸಿಂಹ ಆರ್., ಅಮೃತ ಕಿರಣ್ ಬಿ.ಎಂ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು