ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಳ–ಅಗಲ | ಹಣ ಅಕ್ರಮ ವರ್ಗಾವಣೆ ತಡೆ ಕಾಯ್ದೆ; ದುರ್ಬಳಕೆ ದೂರುಗಳ ಮಹಾಪೂರ

Last Updated 24 ಮೇ 2022, 19:30 IST
ಅಕ್ಷರ ಗಾತ್ರ

2002ರಲ್ಲಿ ರೂಪುಗೊಂಡ ಹಣ ಅಕ್ರಮ ವರ್ಗಾವಣೆ ತಡೆ ಕಾಯ್ದೆಯನ್ನು (‍ಪಿಎಂಎಲ್‌ಎ) ಅತ್ಯಂತ ವ್ಯಾಪಕವಾಗಿ ದುರ್ಬಳಕೆ ಮಾಡಲಾಗಿದೆ. ರಾಜಕೀಯ ಪ‍್ರತಿಸ್ಪರ್ಧಿಗಳನ್ನು ಹಣಿಯುವುದಕ್ಕೆ ಕೇಂದ್ರ ಸರ್ಕಾರವು ಈ ಕಾಯ್ದೆಯನ್ನು ಬಳಸಿಕೊಳ್ಳುತ್ತಿದೆ ಎಂದು ವಿರೋಧ ಪಕ್ಷಗಳು ಪದೇ ಪದೇ ದೂರಿವೆ. ವಿರೋಧ ಪಕ್ಷಗಳ ಈ ಆರೋಪಕ್ಕೆ ಪುಷ್ಟಿ ನೀಡುವಂತೆ, ವಿರೋಧ ಪಕ್ಷಗಳ ಹಲವು ಪ್ರಮುಖ ಮುಖಂಡರ ವಿರುದ್ಧ ಪಿಎಂಎಲ್‌ಎ ಬಳಕೆಯಾಗಿದೆ. ಕಾಂಗ್ರೆಸ್‌ನ ಪಿ. ಚಿದಂಬರಂ, ಕಾರ್ತಿ ಚಿದಂಬರಂ, ಡಿ.ಕೆ.ಶಿವಕುಮಾರ್‌, ಎನ್‌ಸಿಪಿಯ ನವಾಬ್‌ ಮಲಿಕ್‌, ಮಹಾರಾಷ್ಟ್ರದ ಮಾಜಿ ಗೃಹ ಸಚಿವ ಅನಿಲ್‌ ದೇಶಮುಖ್‌ ಮುಂತಾದ ಮುಖಂಡರನ್ನು ಜಾರಿ ನಿರ್ದೇಶನಾಲಯವು (ಇ.ಡಿ) ಬಂಧಿಸಿದೆ.

ಕಾಯ್ದೆಯ ಸಾಂವಿಧಾನಿಕ ಸಿಂಧುತ್ವವನ್ನು ಪ್ರಶ್ನಿಸಿ ಹಾಗೂ ದುರ್ಬಳಕೆ ತಡೆಯಬೇಕು ಮತ್ತು ಕಾಯ್ದೆಯ ವಿವಿಧ ಅವಕಾಶಗಳನ್ನು ರದ್ದುಪಡಿಸಬೇಕು ಎಂದು ಕೋರಿ ಸುಮಾರು 200 ಅರ್ಜಿಗಳು ಸಲ್ಲಿಕೆಯಾಗಿವೆ ಎಂದು ಸಾಲಿಸಿಟರ್‌ ಜನರಲ್‌ ತುಷಾರ್ ಮೆಹ್ತಾ ಅವರು ಸುಪ್ರೀಂ ಕೋರ್ಟ್‌ಗೆ ಈ ಹಿಂದೆ ಮಾಹಿತಿ ನೀಡಿದ್ದರು. ನ್ಯಾಯಮೂರ್ತಿಗಳಾದ ಎ.ಎಂ. ಖಾನ್ವಿಲ್ಕರ್‌, ಸಿ.ಟಿ.ರವಿಕುಮಾರ್‌ ಮತ್ತು ದಿನೇಶ್‌ ಮಾಹೇಶ್ವರಿ ಅವರ ಪೀಠವು ಈ ಪ್ರಕರಣಗಳ ವಿಚಾರಣೆ ನಡೆಸಿದೆ. ಪಿಎಂಎಲ್‌ಎಯನ್ನು ಪ್ರಶ್ನಿಸಿ ಅರ್ಜಿ ಸಲ್ಲಿಸಿದವರಲ್ಲಿ ಕಾರ್ತಿ ಚಿದಂಬರಂ ಮತ್ತು ಪಿಡಿಪಿ ಮುಖ್ಯಸ್ಥೆ ಮೆಹಬೂಬಾ ಮುಫ್ತಿ ಸೇರಿದ್ದಾರೆ.

ಪಿಎಂಎಲ್‌ಎ ಅಡಿಯಲ್ಲಿ ಆರೋಪಿಯನ್ನು ಬಂಧಿಸಬೇಕಿದ್ದರೆ ಮ್ಯಾಜಿಸ್ಟ್ರೇಟ್‌ ಅನುಮತಿ ಪಡೆದುಕೊಳ್ಳಬೇಕೇ?, ಅಪರಾಧ ಪ್ರಕ್ರಿಯಾ ಸಂಹಿತೆಯಲ್ಲಿರುವ ಪೊಲೀಸ್‌ ತನಿಖೆಗೆ ಅನ್ವಯವಾಗುವ ನಿಯಮಗಳು ಪಿಎಂಎಲ್‌ಎ ಅಡಿಯಲ್ಲಿ ತನಿಖೆ ನಡೆಸುವ ಇ.ಡಿ.ಗೆ ಅನ್ವಯ ಆಗುವುದಿಲ್ಲವೇ ಮುಂತಾದ ವಿಚಾರಗಳನ್ನು ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಲಾಗಿದೆ.

ಪಿಎಂಎಲ್‌ಎ 45ನೇ ಸೆಕ್ಷನ್‌ಗೆ ತಿದ್ದುಪಡಿ ತರುವ ಮೂಲಕ, ಈ ಕಾಯ್ದೆಯ ಅಡಿಯಲ್ಲಿ ದಾಖಲಾಗುವ ಪ್ರಕರಣಗಳು ‘ವಿಚಾರಣಾಯೋಗ್ಯ ಮತ್ತು ಜಾಮೀನುರಹಿತ’ ಎಂದು ಹೇಳಲಾಗಿದೆ. ಈ ತಿದ್ದುಪಡಿಯಿಂದಾಗಿ ಆರೋಪಿಯನ್ನು ಯಾವುದೇ ವಾರಂಟ್‌ ಇಲ್ಲದೆ ಬಂಧಿಸುವ ಅಧಿಕಾರವು ಇ.ಡಿ.ಗೆ ದೊರೆಯುತ್ತದೆ. ‘ಆರೋಪಿಯು ತಪ್ಪು ಮಾಡಿಯೇ ಇಲ್ಲ ಎಂದು ನ್ಯಾಯಾಧೀಶರಿಗೆ ಮನವರಿಕೆ ಆದರೆ ಮಾತ್ರ ಜಾಮೀನು ನೀಡಬಹುದು’ ಎಂದು ಜಾಮೀನು ನಿಯಮ ರೂಪಿಸಲಾಗಿದೆ. ಹಾಗಾಗಿ, ಆರೋಪಿಯು ಜಾಮೀನು ಪಡೆಯುವುದು ಬಹಳ ‌ಕ್ಲಿಷ್ಟಕರವಾಗುತ್ತದೆ. ಇದು ಅಪರಾಧ ಪ್ರಕ್ರಿಯಾ ಸಂಹಿತೆಗಿಂತ ಭಿನ್ನವಾಗಿದೆ. ಅದರ ಪ್ರಕಾರ, ಆರೋಪಿಯು ಪರಾರಿಯಾಗುವ ಸಾಧ್ಯತೆ ಇಲ್ಲ ಮತ್ತು ತನಿಖೆಗೆ ಅಡ್ಡಿ ಮಾಡುವುದಿಲ್ಲ ಎಂಬುದು ಮನದಟ್ಟಾದರೆ ಜಾಮೀನು ನೀಡಬಹುದು. ಹಾಗಾಗಿಯೇ, ಇ.ಡಿ. ಹೊಂದಿರುವ ಶೋಧ, ಮುಟ್ಟುಗೋಲು ಮತ್ತು ಬಂಧನದ ಅಧಿಕಾರದ ಬಗ್ಗೆ ಹೆಚ್ಚಿನ ಚರ್ಚೆ ನಡೆಯುತ್ತಿದೆ. ಇ.ಡಿ. ಹೊಂದಿರುವ ಶೋಧ, ಮುಟ್ಟುಗೋಲು ಮತ್ತು ಬಂಧನದ ಅಧಿಕಾರವು ಸಂವಿಧಾನಬಾಹಿರವೇ ಎಂಬ ಪ್ರಶ್ನೆಯನ್ನೂ ಸುಪ್ರೀಂ ಕೋರ್ಟ್ ಮುಂದೆ ಇರಿಸಲಾಗಿದೆ.

ನ್ಯಾಯಮೂರ್ತಿಗಳಾದ ರೋಹಿಂಗ್ಟನ್‌ ನರಿಮನ್‌ ಮತ್ತು ಸಂಜಯ್‌ ಕಿಶನ್‌ ಕೌಲ್‌ ಅವರ ಪೀಠವು ಪಿಎಂಎಲ್‌ಎ ಸೆಕ್ಷನ್‌ 45 ಸಂವಿಧಾನಬಾಹಿರ ಎಂದು ನಿಕೇಶ್‌ ತಾರಾಚಂದ್‌ ಶಾ ಪ್ರಕರಣದಲ್ಲಿ ಹೇಳಿತ್ತು. ಆದರೆ, ನ್ಯಾಯಮೂರ್ತಿ ಖಾನ್ವಿಲ್ಕರ್‌ ಅವರ ಪೀಠದ ಮುಂದೆ ನಡೆದ ವಿಚಾರಣೆಯಲ್ಲಿ, ತುಷಾರ್ ಮೆಹ್ತಾ ಅವರು ಕಾಯ್ದೆಯ ಎಲ್ಲ ಅಂಶಗಳನ್ನು ಬಲವಾಗಿ ಸಮರ್ಥಿಸಿಕೊಂಡಿದ್ದಾರೆ. ‘2002ರಲ್ಲಿ ಕಾಯ್ದೆ ಜಾರಿಗೆ ಬಂದಾಗಿನಿಂದ ಈವರೆಗೆ 313 ಮಂದಿಯನ್ನು ಮಾತ್ರ ಬಂಧಿಸಲಾಗಿದೆ. ಅತ್ಯಂತ ಕಟ್ಟುನಿಟ್ಟಿನ ಶಾಸನಾತ್ಮಕ ರಕ್ಷಣೆಗಳು ಇರುವ ಕಾರಣಕ್ಕೇ ಇಷ್ಟು ಕಡಿಮೆ ಮಂದಿಯ ಬಂಧನವಾಗಿದೆ’ ಎಂದು ಫೆಬ್ರುವರಿ 23ರಂದು ನಡೆದ ವಿಚಾರಣೆ ವೇಳೆ ಮೆಹ್ತಾ ಹೇಳಿದ್ದರು.

ಸುಪ್ರೀಂ ಕೋರ್ಟ್‌ ಇನ್ನಷ್ಟೇ ತೀರ್ಪು ನೀಡಬೇಕಿದೆ.

ಬಿಜೆಪಿ ಅಧಿಕಾರದ ಅವಧಿಯಲ್ಲೇ ಹೆಚ್ಚು ಪ್ರಕರಣ
ಪಿಎಂಎಲ್‌ಎ ಜಾರಿಗೆ ಬಂದ ನಂತರದಿಂದ ಇದೇ ಮೇ 9ರವರೆಗೆ ದೇಶದಾದ್ಯಂತ ಈ ಕಾಯ್ದೆಯ ಅಡಿ ಒಟ್ಟು 5,422 ಪ್ರಕರಣಗಳನ್ನು ಜಾರಿ ನಿರ್ದೇಶನಾಲಯವು ದಾಖಲಿಸಿದೆ.

ಈ ಕಾಯ್ದೆಯು ರೂಪುಗೊಂಡು 20 ವರ್ಷ ಕಳೆದಿದೆ. ಈ ಅವಧಿಯಲ್ಲಿ ಒಟ್ಟು 5,422 ಪ್ರಕರಣಗಳು ದಾಖಲಾಗಿವೆ. ಇವುಗಳಲ್ಲಿ 2,908 ಪ್ರಕರಣಗಳು ಕಳೆದ 7 ವರ್ಷಗಳಲ್ಲಿ ದಾಖಲಾಗಿವೆ. ಅಂದರೆ 2016ರಿಂದ 2022ರ ಮೇ ಎರಡನೇ ವಾರದವರೆಗೆ ಒಟ್ಟು 2,908 ಪ್ರಕರಣಗಳು ದಾಖಲಾಗಿವೆ. ಬಿಜೆಪಿ ನೇತೃತ್ವದ ಸರ್ಕಾರವು ಅಧಿಕಾರಕ್ಕೆ ಬಂದ ನಂತರದ ಅವಧಿಯಲ್ಲಿ ಈ ಕಾಯ್ದೆಯ ಅಡಿ ಹೆಚ್ಚು ಪ್ರಕರಣಗಳನ್ನು ದಾಖಲಿಸಲಾಗಿದೆ. ಒಟ್ಟು ಪ್ರಕರಣಗಳಲ್ಲಿ, ಬಿಜೆಪಿ ಅಧಿಕಾರದ ಅವಧಿಯಲ್ಲಿ ದಾಖಲಾದ ಪ್ರಕರಣಗಳ ಪ್ರಮಾಣ ಶೇ 53.6ರಷ್ಟು.

ಈ ಕಾಯ್ದೆ ಅಡಿ ದಾಖಲಾದ ಒಟ್ಟು ಪ್ರಕರಣಗಳಲ್ಲಿ ವಿಚಾರಣೆಯ ಹಂತವನ್ನು ತಲುಪಿದ ಪ್ರಕರಣಗಳ ಸಂಖ್ಯೆ 992 ಮಾತ್ರ. ಇದು ಒಟ್ಟು ಪ್ರಕರಣಗಳ ಶೇ 18.33ರಷ್ಟಾಗುತ್ತದೆ. ಒಟ್ಟು ಪ್ರಕರಣಗಳಲ್ಲಿ ಶೇ 32.07ರಷ್ಟು ಪ್ರಕರಣಗಳಲ್ಲಿ ಮಾತ್ರ ಆಸ್ತಿ ಮುಟ್ಟುಗೋಲಿಗೆ ಆದೇಶ ಹೊರಡಿಸಲಾಗಿದೆ. ಆದರೆ ಒಟ್ಟು ಪ್ರಕರಣಗಳಶೇ 49.6ರಷ್ಟು ಇನ್ನೂ ವಿಚಾರಣೆಯ ಹಂತದಲ್ಲೇ ಇವೆ.

ಈ ಎಲ್ಲಾ ಪ್ರಕರಣಗಳಲ್ಲಿ ಈವರೆಗೆ ಬಂಧನಕ್ಕೆ ಒಳಗಾದವರ ಸಂಖ್ಯೆ 400. ಆದರೆ ಎಷ್ಟು ಪ್ರಕರಣಗಳಲ್ಲಿ ಆರೋಪಿಗಳನ್ನು ಬಂಧಿಸಲಾಗಿದೆ ಎಂಬುದರ ಮಾಹಿತಿ ಲಭ್ಯವಿಲ್ಲ. ಒಟ್ಟು ಪ್ರಕರಣಗಳಲ್ಲಿ ಈವರೆಗೆ 25 ಮಂದಿಗಷ್ಟೇ ಶಿಕ್ಷೆಯಾಗಿದೆ. ಆದರೆ ಎಷ್ಟು ಪ್ರಕರಣಗಳಲ್ಲಿ ಶಿಕ್ಷೆಯಾಗಿದೆ ಎಂಬುದರ ಮಾಹಿತಿ ಸಹ ಲಭ್ಯವಿಲ್ಲ.

ಹೀಗಾಗಿ ಈ ಕಾಯ್ದೆ ಅಡಿ ದಾಖಲಾದ ಒಟ್ಟು ಪ್ರಕರಣಗಳಲ್ಲಿ, ವಿಲೇವಾರಿಯಾದ ಒಟ್ಟು ಪ್ರಕರಣಗಳ ಸಂಖ್ಯೆಗೆ ಸಂಬಂಧಿಸಿದ ನಿಖರ ಮಾಹಿತಿ ಲಭ್ಯವಿಲ್ಲ. ಈ ದತ್ತಾಂಶವನ್ನು ಜಾರಿ ನಿರ್ದೇಶನಾಲಯವಾಗಲೀ, ಹಣಕಾಸು ಸಚಿವಾಲಯವಾಗಲೀ ನೀಡಿಲ್ಲ. ಬೇರೆಲ್ಲಾ ಆರ್ಥಿಕ ಅಪರಾಧ ಪ್ರಕರಣಗಳ ದತ್ತಾಂಶಗಳನ್ನು ದಾಖಲಿಸುವ ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೊ ಸಹ ಪಿಎಂಎಲ್‌ಎ ಪ್ರಕರಣಗಳ ದತ್ತಾಂಶವನ್ನು ಸಂಗ್ರಹಿಸಿಲ್ಲ. ಒಟ್ಟಾರೆಯಾಗಿ ಪಿಎಂಎಲ್‌ಎ ಪ್ರಕರಣಗಳ ಸ್ಥಿತಿಗತಿಗೆ ಸಂಬಂಧಿಸಿದ ಸಂಪೂರ್ಣ ಮಾಹಿತಿ ಲಭ್ಯವಿಲ್ಲ.

ಕಾನೂನು ಹೇಳುವುದೇನು?
ಅಕ್ರಮವಾಗಿ ಹಣ ಗಳಿಸುವುದು ಮತ್ತು ಅದು ಸಕ್ರಮ ಎಂದು ಬಿಂಬಿಸುವ ಕೃತ್ಯದಲ್ಲಿ ಯಾವುದೇ ವ್ಯಕ್ತಿ ನೇರವಾಗಿ ಅಥವಾ ಪರೋಕ್ಷವಾಗಿ ಭಾಗಿಯಾಗುವುದು ಅಥವಾ ಇತರರಿಗೆ ಉದ್ದೇಶಪೂರ್ವಕವಾಗಿ ನೆರವಾಗುವುದು ಅಥವಾ ಇಂತಹ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗಿಯಾಗುವುದು ಹಣ ಅಕ್ರಮ ವರ್ಗಾವಣೆ ಎನಿಸಿಕೊಳ್ಳುತ್ತದೆ ಎಂದು ಹಣ ಅಕ್ರಮ ವರ್ಗಾವಣೆ (ತಡೆ) ಕಾಯ್ದೆಯ ಮೂರನೇ ಸೆಕ್ಷನ್‌ನಲ್ಲಿ ವಿವರಿಸಲಾಗಿದೆ.

ವಿಪಕ್ಷಗಳ ನಾಯಕರೇ ಗುರಿ
*ಡಿ.ಕೆ. ಶಿವಕುಮಾರ್
ಕಾಂಗ್ರೆಸ್ ಮುಖಂಡ ಡಿ.ಕೆ. ಶಿವಕುಮಾರ್ ಅವರ ವಿರುದ್ಧದೆಹಲಿಯ ಫ್ಲ್ಯಾಟ್‌ವೊಂದರಲ್ಲಿ ಅಪಾರ ಪ್ರಮಾಣದ ಹಣ ಪತ್ತೆ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯವು (ಇ.ಡಿ.) ಹಣಅಕ್ರಮ ವರ್ಗಾವಣೆ ತಡೆ (ಪಿಎಂಎಲ್‌ಎ) ಕಾಯ್ದೆಯ ಅಡಿ ಪ್ರಕರಣ ದಾಖಲಿಸಿಕೊಂಡಿತ್ತು. ವಿಚಾರಣೆ ವೇಳೆ ಅವರನ್ನು ಬಂಧಿಸಲಾಗಿತ್ತು.ಅವರ ಬಂಧನವು ರಾಜ್ಯ ರಾಜಕೀಯದಲ್ಲಿ ಸಂಚಲನಕ್ಕೆ ಕಾರಣವಾಗಿತ್ತು. ಶಿವಕುಮಾರ್ ಅವರ ಪುತ್ರಿ ಐಶ್ವರ್ಯಾ ಅವರನ್ನೂ ಮತ್ತೊಂದು ಪ್ರಕರಣದಲ್ಲಿ ಇ.ಡಿ. ವಿಚಾರಣೆಗೆ ಒಳಪಡಿಸಿತ್ತು.

*ಪಿ. ಚಿದಂಬರಂ, ಕಾರ್ತಿ ಚಿದಂಬರಂ
ಐಎನ್‌ಎಕ್ಸ್ ಮೀಡಿಯಾ ಹಗರಣದಲ್ಲಿ ಕೇಂದ್ರದ ಮಾಜಿ ಹಣಕಾಸು ಸಚಿವ ಪಿ.ಚಿದಂಬರಂ ಅವರನ್ನು ಬಂಧಿಸ
ಲಾಗಿತ್ತು. ಪುತ್ರ ಕಾರ್ತಿ ಚಿದಂಬರಂ ಅವರಿಗೆ ಸಹಾಯ ಮಾಡುವಂತೆ ಚಿದಂಬರಂ ನಿರ್ದೇಶಿಸಿದ್ದರು ಎಂಬ ಆರೋಪ
ದಡಿ ಅವರನ್ನು ಬಂಧಿಸಿ, ಪಿಎಂಎಲ್‌ಎ ಪ್ರಕರಣದ ಅಡಿ ವಿಚಾರಣೆ ನಡೆಸಲಾಗಿತ್ತು. 2018ರಲ್ಲಿ ಕಾರ್ತಿಗೆ ಸೇರಿದ ₹54 ಕೋಟಿ ಮೌಲ್ಯದ ಆಸ್ತಿಯನ್ನು ಇ.ಡಿ. ಮುಟ್ಟುಗೋಲು ಹಾಕಿಕೊಂಡು, ಹಲವು ಬಾರಿ ವಿಚಾರಣೆ ನಡೆಸಿತ್ತು.

*ಶರದ್ ಪವಾರ್, ಅಜಿತ್ ಪವಾರ್
ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್ ಹಾಗೂ ಅವರ ಸಂಬಂಧಿ ಅಜಿತ್ ಪವಾರ್ ವಿರುದ್ಧಮಹಾರಾಷ್ಟ್ರ ಸಹಕಾರಿ ಬ್ಯಾಂಕ್‌ ಹಗರಣದಲ್ಲಿ ದೂರು ದಾಖಲಿಸಲಾಗಿತ್ತು. 2019ರಲ್ಲಿ,ಮಹಾರಾಷ್ಟ್ರ ವಿಧಾನಸಭಾ ಚುಣಾವಣೆಗೆ ಒಂದು ತಿಂಗಳು ಬಾಕಿಯಿದ್ದಾಗ ಈ ವಿದ್ಯಮಾನ ನಡೆದಿತ್ತು. ಶರದ್ ಪವಾರ್ ಅವರು ಸ್ವಯಂಪ್ರೇರಣೆಯಿಂದ ವಿಚಾರಣೆಗೆ ಹಾಜರಾಗಲು ನಿರ್ಧರಿಸಿ,ರಾಜಕೀಯ ಷಡ್ಯಂತ್ರದ ವಿರುದ್ಧ ‘ಗಾಂಧಿಗಿರಿ’ ಪ್ರದರ್ಶಿಸಿದ್ದರು.

*ಅನಿಲ್ ದೇಶ್‌ಮುಖ್, ನವಾಬ್ ಮಲಿಕ್
ಮಹಾರಾಷ್ಟ್ರದಲ್ಲಿ ಶಿವಸೇನಾ ನೇತೃತ್ವದ ಮಹಾವಿಕಾಸ ಅಘಾಡಿ (ಎಂವಿಎ) ಸರ್ಕಾರ ಅಸ್ತಿತ್ವಕ್ಕೆ ಬಂದ ಬಳಿಕ ಇಬ್ಬರು ಸಚಿವರನ್ನು ಈ ಕಾಯ್ದೆಯಡಿ ಬಂಧಿಸಿ ವಿಚಾರಣೆ ನಡೆಸಲಾಗಿದೆ. ಗೃಹಸಚಿವರಾಗಿದ್ದ ಅನಿಲ್ ದೇಶ್‌ಮುಖ್ ಹೆಸರುಅಮಾನತುಗೊಂಡಿದ್ದ ಪೊಲೀಸ್ ಅಧಿಕಾರಿ ಸಚಿನ್ ವಾಜೆ ಮೂಲಕ ಹಣ ವಸೂಲಿ ಪ್ರಕರಣದಲ್ಲಿ ಕೇಳಿಬಂದಿತ್ತು. ಅವರನ್ನು ಕಳೆದ ನವೆಂಬರ್‌ನಲ್ಲಿ ಬಂಧಿಸಲಾಗಿತ್ತು. ಜಮೀನು ವಿಚಾರದಲ್ಲಿ ನವಾಬ್ ಮಲಿಕ್ ಅವರು ಭೂಗತಪಾತಕಿ ದಾವೂದ್ ಇಬ್ರಾಹಿಂ ಸಹೋದರಿ ಹಸೀನಾ ಪಾರ್ಕರ್ ಅವರಿಗೆ ₹55 ಲಕ್ಷ ನಗದು ನೀಡಿದ್ದರು ಎಂದು ಇ.ಡಿ. ಆರೋಪಿಸಿದೆ. 10ಕ್ಕೂ ಹೆಚ್ಚು ಎಂವಿಎ ಮುಖಂಡರೂ ಪಿಎಂಎಲ್‌ಎ ವಿಚಾರಣೆ ಎದುರಿಸುತ್ತಿದ್ದಾರೆ.

*ಶಾರದಾ ಚಿಟ್‌ಫಂಡ್ ಪ್ರಕರಣ
ಟಿಎಂಸಿ ಪ್ರಮುಖ ನಾಯಕರಾಗಿದ್ದ ಮುಕುಲ್ ರಾಯ್, ಸುವೇಂದು ಅಧಿಕಾರಿ, ಸೋವನ್ ಚಟರ್ಜಿ ಸೇರಿ ಹಲವು ಟಿಎಂಸಿ ನಾಯಕರ ಹೆಸರು2013ರ ಶಾರದಾ ಚಿಟ್‌ಫಂಡ್ ಹಗರಣದಲ್ಲಿ ಉಲ್ಲೇಖವಾಗಿತ್ತು. ಈ ಮೂವರೂ ಈಗ ಬಿಜೆಪಿಯಲ್ಲಿದ್ದಾರೆ. ಮಮತಾ ಬ್ಯಾನರ್ಜಿ ಅವರ ಅಳಿಯ ಅಭಿಷೇಕ್ ಬ್ಯಾನರ್ಜಿ ಹಾಗೂ ಅವರ ಪತ್ನಿ ರುಜಿರಾ ಅವರನ್ನು ಕಲ್ಲಿದ್ದಲು ಹಗರಣದಲ್ಲಿ ಇ.ಡಿ. ವಿಚಾರಣೆ ನಡೆಸಿದೆ.

*ಪ್ರಫುಲ್ ಪಟೇಲ್, ವರ್ಷಾ ರಾವುತ್
2020ರಲ್ಲಿ ಎನ್‌ಸಿಪಿ ಸೇರಿದ್ದಏಕನಾಥ ಖಾಡ್ಸೆ ಹಾಗೂ ಅವರ ಪತ್ನಿ ವಿರುದ್ಧಮಹಾರಾಷ್ಟ್ರ ಕೈಗಾರಿಕಾ ಅಭಿವೃದ್ಧಿ ನಿಗಮಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಪಿಎಂಎಲ್‌ಎ ಪ್ರಕರಣ ದಾಖಲಾಗಿದೆ. ಪ್ರಫುಲ್ ಪಟೇಲ್ ಕುಟುಂಬದ ಒಡೆತನದ ಅಪಾರ್ಟ್‌ಮೆಂಟ್‌ನಲ್ಲಿಗ್ಯಾಂಗ್‌ಸ್ಟರ್ ಇಕ್ಬಾಲ್ ಮಿರ್ಚಿ ಕುಟುಂಬದವರು ಫ್ಲ್ಯಾಟ್ ಖರೀದಿಸಿದ್ದಾರೆ ಎಂಬ ಆರೋಪದಲ್ಲಿ ಪ್ರಕರಣ ದಾಖಲಾಗಿದೆ. ಶಿವಸೇನಾ ವಕ್ತಾರ ಸಂಜಯ್ ರಾವುತ್ ಅವರ ಪತ್ನಿ ವರ್ಷಾ ರಾವುತ್ ವಿರುದ್ಧ ಪಿಎಂಸಿ ಬ್ಯಾಂಕ್ ಹಗರಣದ ದೂರು ಇದೆ. ಶಿವಸೇನಾ ಶಾಸಕ ಪ್ರತಾಪ್ ಸರ್ನಾಯಕ್ ಹಾಗೂ ಅನಿಲ್ ಭೋಸಲೆ ಅವರ ವಿರುದ್ಧ ₹175 ಕೋಟಿ ಮೊತ್ತದ ಅಕ್ರಮ ಹಣ ವರ್ಗಾವಣೆ ಪ್ರಕರಣವಿದೆ.

*ಡಿಎಂಕೆಯ ರಾಜಾ, ಕನಿಮೋಳಿ
ಡಿಎಂಕೆ ಮುಖಂಡರಾದ ಎ.ರಾಜಾ, ಕನಿಮೊಳಿ ಅವರು 2010ರ 2ಜಿ ಸ್ಪೆಕ್ಟ್ರಂ ಹಗರಣದಲ್ಲಿ ಅಕ್ರಮ ಹಣ ವರ್ಗಾವಣೆ ಪ್ರಕರಣದ ಅಡಿ ವಿಚಾರಣೆ ಎದುರಿಸಿದ್ದರು.

ಎನ್‌ಸಿ ಮುಖ್ಯಸ್ಥ ಫಾರೂಕ್ ಅಬ್ದುಲ್ಲಾ, ಆರ್‌ಜೆಡಿ ಮುಖ್ಯಸ್ಥ ಲಾಲು ಪ್ರಸಾದ್, ಪಂಜಾಬ್‌ ಮಾಜಿ ಮುಖ್ಯಮಂತ್ರಿ ಅಮರಿಂದರ್ ಸಿಂಗ್, ಆಂಧ್ರಪ್ರದೇಶ ಮುಖ್ಯಮಂತ್ರಿ ವೈ.ಎಸ್. ಜಗನ್‌ಮೋಹನ್ ರೆಡ್ಡಿ ವಿರುದ್ಧ ಹಣಅಕ್ರಮ ವರ್ಗಾವಣೆ ಆರೋಪವಿದೆ. ತಲೆಮರೆಸಿಕೊಂಡಿರುವ ಉದ್ಯಮಿಗಳಾದ ವಿಜಯ್ ಮಲ್ಯ, ಮೆಹುಲ್ ಚೋಕ್ಸಿ ಹಾಗೂ ಎನ್‌ಎಸ್‌ಇ ಮಾಜಿ ಮುಖ್ಯಸ್ಥೆ ಚಿತ್ರಾ ರಾಮಕೃಷ್ಣ ಅವರು ಪಿಎಂಎಲ್‌ಎ ಪ್ರಕರಣ ಎದುರಿಸುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT