ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಳ–ಅಗಲ: ಅರಣ್ಯವಾಸಿಗಳ ಹಕ್ಕು ಮೊಟಕು

ಅರಣ್ಯ ಸಂರಕ್ಷಣಾ ನಿಯಮ ದುರ್ಬಲ: ಕಾಡು ಪರಭಾರೆ ಸಲೀಸು
Last Updated 20 ಸೆಪ್ಟೆಂಬರ್ 2022, 20:15 IST
ಅಕ್ಷರ ಗಾತ್ರ

ಕೇಂದ್ರ ಸರ್ಕಾರವು 2022ರ ಜೂನ್ 28ರಂದು ಅರಣ್ಯ (ಸಂರಕ್ಷಣೆ) ನಿಯಮಗಳಿಗೆ (ಎಫ್‌ಸಿಆರ್‌) ತಿದ್ದುಪಡಿ ತಂದಿತು. ಅರಣ್ಯ ಪ್ರದೇಶದಲ್ಲಿ ಹಮ್ಮಿಕೊಳ್ಳುವ ಯೋಜನೆಗಳನ್ನು ತಿರಸ್ಕರಿಸುವ ಅಧಿಕಾರ ಹೊಂದಿರುವ ಆದಿವಾಸಿಗಳು ಹಾಗೂ ಅರಣ್ಯವಾಸಿಗಳ ಒಪ್ಪಿಗೆ ಪಡೆಯದೇ, ಅರಣ್ಯವನ್ನು ಕೈಗಾರಿಕೆಗಳಿಗೆ ವರ್ಗಾಯಿಸಲು ನೆರವಾಗುವಂತೆ ತಿದ್ದುಪಡಿ ತರಲಾಗಿದೆ.

ಈ ಸುದ್ದಿ ಹೊರಬೀಳುತ್ತಿದ್ದಂತೆಯೇ ಕಾಂಗ್ರೆಸ್ ಮತ್ತು ಇತರ ವಿರೋಧ ಪಕ್ಷಗಳು ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡವು. ಸರ್ಕಾರವು ಆಪ್ತರಿಗೆ ನೆರವಾಗುವ ಉದ್ದೇಶದಿಂದ ಅರಣ್ಯ ಕಾಯ್ದೆಯನ್ನು ನಾಶಪಡಿಸಲು ಮುಂದಾಗಿದ್ದು, ಆದಿವಾಸಿಗಳು ಹಾಗೂ ಅರಣ್ಯವಾಸಿಗಳ ಹಕ್ಕುಗಳನ್ನು ದುರ್ಬಲಗೊಳಿಸುತ್ತಿದೆ ಎಂದು ಕಾಂಗ್ರೆಸ್ ಆರೋಪಿಸಿತು. 2006ರಲ್ಲಿ ಯುಪಿಎ ಸರ್ಕಾರದ ಅವಧಿಯಲ್ಲಿ ಅರಣ್ಯ ಹಕ್ಕುಗಳ ಕಾಯ್ದೆ ಜಾರಿಯಾಗಿತ್ತು.

ಕಾಂಗ್ರೆಸ್ ಆರೋಪಕ್ಕೆ ಪ್ರತಿಕ್ರಿಯಿಸಿದ್ದ ಕೇಂದ್ರ ಪರಿಸರ, ಅರಣ್ಯಮತ್ತು ಹವಾಮಾನ ಬದಲಾವಣೆ ಇಲಾಖೆಯ ಸಚಿವ ಭೂಪೇಂದ್ರ ಯಾದವ್, ಕಾಯ್ದೆಯ ಯಾವುದೇನಿಯಮಗಳನ್ನು ದುರ್ಬಲಗೊಳಿಸುವ ಉದ್ದೇಶವಿಲ್ಲ ಎಂದಿದ್ದರು. ಯೋಜನೆಗಳಿಗೆ ಅಂತಿಮ ಒಪ್ಪಿಗೆ ನೀಡುವಲ್ಲಿ ಆಗುತ್ತಿದ್ದ ವಿಳಂಬವನ್ನು ತಪ್ಪಿಸುವುದರ ಜೊತೆಗೆ ಪ್ರಕ್ರಿಯೆಯನ್ನು ವ್ಯವಸ್ಥಿತಗೊಳಿಸಲು ತಿದ್ದುಪಡಿ ತರಲಾಗಿದೆ ಎಂದು ಅವರು ವಿವರಿಸಿದ್ದರು.

ಬುಡಕಟ್ಟು ಹಕ್ಕುಗಳನ್ನು ರಕ್ಷಿಸುವ ತನ್ನ ಹೊಣೆಗಾರಿಕೆಯಿಂದ ನುಣುಚಿಕೊಳ್ಳಲು ಅರಣ್ಯ ಸಚಿವಾಲಯವು ಎರಡು ವರ್ಷಗಳಿಂದ ಯತ್ನಿಸಿತ್ತು ಎಂಬ ಅಂಶವು ‘ರಿಪೋರ್ಟರ್ಸ್ ಕಲೆಕ್ಟಿವ್‌’ಗೆ ಸಿಕ್ಕಿರುವ ಆಂತರಿಕ ದಾಖಲೆಗಳಿಂದ ತಿಳಿದುಬಂದಿದೆ.

ತಮ್ಮ ಭೂಮಿಯನ್ನು ಕೈಗಾರಿಕೆಗಳಿಗೆ ನೀಡಬೇಕಾದರೆ ಅಲ್ಲಿನ ಅರಣ್ಯವಾಸಿಗಳ ಒಪ್ಪಿಗೆ ಪಡೆಯುವುದು ಕಾಯ್ದೆಯಡಿ ಕಡ್ಡಾಯವಾಗಿತ್ತು. ಆದರೆ, ಕಂಪನಿಗಳು ಅರಣ್ಯವಾಸಿಗಳ ಒಪ್ಪಿಗೆ ಪಡೆಯದೇ ಅರಣ್ಯ ಭೂಮಿಯನ್ನು ಪಡೆಯುವ ವಿಧಾನವನ್ನುಹೊಸ ತಿದ್ದುಪಡಿಗಳು ಸುಲಭಗೊಳಿಸಿವೆ.

ಉದ್ಯಮಗಳ ಪರವಾಗಿರುವ ಅಂಶಗಳಿಗೆ ತಿದ್ದುಪಡಿ ತರುವ ಮುನ್ನ, ಕಾಯ್ದೆಯ ನೋಡಲ್ ಸಚಿವಾಲಯವಾಗಿ ಕೆಲಸ ಮಾಡುತ್ತಿರುವ ಬುಡಕಟ್ಟು ವ್ಯವಹಾರಗಳ ಸಚಿವಾಲಯವನ್ನು ಪರಿಸರ ಸಚಿವಾಲಯ ಸಂಪರ್ಕಿಸಿಲ್ಲ. ಹೊಸ ನಿಯಮಗಳನ್ನು ರೂಪಿಸುವ ವೇಳೆ, ಅವುಗಳನ್ನು ಇನ್ನಷ್ಟು ದುರ್ಬಲಗೊಳಿಸಲು ಹಾಗೂ ಬುಡಕಟ್ಟು ಜನರ ಹಕ್ಕುಗಳ ವಿಚಾರವನ್ನು ನಿರ್ಲಕ್ಷಿಸಲು ಪರಿಸರ ಸಚಿವಾಲಯವು ಆರಂಭದಲ್ಲಿ ಮುಂದಾಗಿತ್ತು. ಕಾನೂನು ಸಚಿವಾಲಯವು ಈ ಬಗ್ಗೆ ಗಮನ ಸೆಳೆಯುವವರೆಗೂ ಸಚಿವಾಲಯ ಇದೇ ಉದ್ದೇಶ ಹೊಂದಿತ್ತು.

2019ರಿಂದಲೇ ಆರಂಭ

ಖಾಸಗಿ ವಲಯದವರಿಗೆ ಸುಲಭವಾಗಿ ಪರವಾನಗಿ ಸಿಗುವಂತಾಗಬೇಕಾದರೆ, ಅರಣ್ಯ ಸಂರಕ್ಷಣೆ ಕಾಯ್ದೆ ಮತ್ತು ಅರಣ್ಯ ಕಡಿಯಲು ಪರವಾನಗಿ ನೀಡಿಕೆ ನಡುವೆಯಾವ ಸಂಬಂಧವೂ ಇರಬಾರದು ಎಂಬ ಸಚಿವಾಲಯದ ಉದ್ದೇಶ2019ರಿಂದಲೇ ಕೆಲಸ ಮಾಡಲು ಆರಂಭಿಸಿತ್ತು. ಸಂಪುಟ ಕಾರ್ಯಾಲಯದ ಸಭೆಗಳಲ್ಲಿ ಈ ಅಂಶ ಮುಖ್ಯವಾಗಿ ಚರ್ಚೆಯಾಗಿತ್ತು ಎಂಬುದೂ ಪರಿಸರ ಸಚಿವಾಲಯದ ದಾಖಲೆಗಳಲ್ಲಿ ಉಲ್ಲೇಖವಾಗಿದೆ. ‘ಉದಾಹರಣೆಗೆ, ಭೂಮಿ ಗುರುತಿಸುವಿಕೆ, ಸ್ಥಳ ಪರಿಶೀಲನೆ ಮೊದಲಾದ ಅಂಶಗಳು ಮುಖ್ಯ ಅಡೆತಡೆಗಳಾಗಿವೆ. ಅರಣ್ಯ ಕಾಯ್ದೆಯಡಿ ಇವುಗಳಿಗೆ ಅನುಮತಿ ನೀಡುವ ಪ್ರಕ್ರಿಯೆ ತೀರಾ ಸಂಕೀರ್ಣವಾಗಿರುವುದರಿಂದ ಸಾಕಷ್ಟು ವಿಳಂಬವಾಗುತ್ತಿದೆ’ ಎಂಬ ಅಂಶವು ಪರಿಸರ ಸಚಿವಾಲಯದ ದಾಖಲೆಗಳಲ್ಲಿ ಇದೆ.

ಅರಣ್ಯ ಹಕ್ಕುಗಳನ್ನು ಎತ್ತಿಹಿಡಿದಿದ್ದ ಯುಪಿಎ

ವಸಾಹತುಶಾಹಿ ಆಳ್ವಿಕೆಯ ಸಂದರ್ಭದಲ್ಲಿ ಅರಣ್ಯವಾಸಿಗಳು ಮತ್ತು ಆದಿವಾಸಿಗಳಿಗೆ ಕಾಡುಗಳ ಮೇಲಿನ ಹಕ್ಕುಗಳು ಇರಲಿಲ್ಲ.ಆದಿವಾಸಿಗಳು ಮತ್ತು ಅರಣ್ಯವಾಸಿಗಳು ತಾವು ಪರಂಪರಾಗತವಾಗಿ ಜೀವಿಸಿದ್ದ ಕಾಡುಗಳ ಮೇಲಿನ ಹಕ್ಕುಗಳಿಂದ ವಂಚಿತರಾಗಿದ್ದರು. ಸ್ವಾತಂತ್ರ್ಯ ಬಂದು ಹಲವು ದಶಕಗಳ ನಂತರವೂ ಸರ್ಕಾರವು ಇವರನ್ನು ‘ಒತ್ತುವರಿದಾರರು’ ಎಂದೇ ಪರಿಗಣಿಸಿತ್ತು. ಅರಣ್ಯ ಸಂರಕ್ಷಣೆ, ಕೈಗಾರಿಕಾ ಯೋಜನೆ ಅಥವಾ ಗಣಿ ಅಭಿವೃದ್ಧಿಯ ಹೆಸರಿನಲ್ಲಿ ಅವರನ್ನು ಸಾಮೂಹಿಕವಾಗಿ ಒಕ್ಕಲೆಬ್ಬಿಸಲಾಗುತ್ತಿತ್ತು.

ಆದಿವಾಸಿಗಳು ಮತ್ತು ಅರಣ್ಯವಾಸಿಗಳನ್ನು ಹಿಂಸಾತ್ಮಕವಾಗಿ ತೆರವು ಮಾಡುವುದರ ವಿರುದ್ಧ ದೊಡ್ಡ ಕೂಗು ಇತ್ತು. ಹಾಗಾಗಿ, ಹಲವು ಒತ್ತಡ ಗುಂಪುಗಳ ಪ್ರಬಲ ವಿರೋಧದ ಮಧ್ಯೆಯೂ ಯುಪಿಎ ಸರ್ಕಾರವು 2006ರಲ್ಲಿ ಅರಣ್ಯ ಹಕ್ಕುಗಳ ಕಾಯ್ದೆಯನ್ನು (ಎಫ್‌ಆರ್‌ಎ) ಜಾರಿಗೆ ತಂದಿತು.

ಬುಡಕಟ್ಟು ವ್ಯವಹಾರಗಳ ಸಚಿವಾಲಯದ ಅಡಿಯಲ್ಲಿ ಎಫ್‌ಆರ್‌ಎಯನ್ನು ಜಾರಿಗೆ ತರಲಾಗಿತ್ತು. ಆದಿವಾಸಿಗಳು ಮತ್ತು 75 ವರ್ಷಗಳಿಗಿಂತ ಹೆಚ್ಚು ಅಥವಾ ಮೂರು ತಲೆಮಾರಿಗಿಂತ ಹೆಚ್ಚು ಅರಣ್ಯದಲ್ಲಿ ವಾಸಿಸುತ್ತಿರುವ ಬುಡಕಟ್ಟುಯೇತರ ಅರಣ್ಯವಾಸಿಗಳ ಅರಣ್ಯ ಹಕ್ಕುಗಳನ್ನು ಈ ಕಾಯ್ದೆ ಎತ್ತಿಹಿಡಿಯಿತು. ‘ಯಾವುದೇ ಕೈಗಾರಿಕೆಗಳಿಗೆ ಕಾಡನ್ನು ಕಡಿಯಲು ಪರವಾನಗಿ ನೀಡುವುದಕ್ಕೂ ಮುನ್ನ ಸಂಬಂಧಿತ ಗ್ರಾಮಸಭೆಗಳ ಮೂಲಕ ಆದಿವಾಸಿಗಳು ಮತ್ತು ಅರಣ್ಯವಾಸಿಗಳ ಲಿಖಿತ ಒಪ್ಪಿಗೆಯನ್ನು ಪಡೆದುಕೊಳ್ಳಬೇಕು’ ಎಂಬುದನ್ನು ಕಡ್ಡಾಯ ಮಾಡಲಾಯಿತು.ಆದರೆ ಪರಿಸರ ಸಚಿವಾಲಯದ ಎಫ್‌ಸಿಎ ಕಾಯ್ದೆಯು ಅಧಿಕಾರಶಾಹಿಯ ವಿವೇಚನೆಯನ್ನು ಆಧರಿಸಿದ ಪ್ರಕ್ರಿಯೆಯ ಮೂಲಕ ಕೈಗಾರಿಕೆಗಳಲ್ಲಿ ಅರಣ್ಯವನ್ನು ಕಡಿಯಲು ಅನುಮತಿ ನೀಡುತ್ತಿತ್ತು.

ಈ ಎರಡೂ ಕಾಯ್ದೆಗಳ ನಡುವೆ ಇದ್ದ ವಿರೋಧಾಭಾಸವನ್ನು ಹೋಗಲಾಡಿಸಲು ಯುಪಿಎ ಸರ್ಕಾರವು 2009ರಲ್ಲಿ ಹೊಸ ಆದೇಶವನ್ನು ಹೊರಡಿಸಿತು. ‘ಎಫ್‌ಆರ್‌ಎ ಅಡಿ ನೀಡಲಾದ ಅರಣ್ಯ ಹಕ್ಕುಗಳನ್ನು ಪ್ರತಿಯೋಜನೆಯಲ್ಲೂ ಅನುಷ್ಠಾನಕ್ಕೆ ತರಲಾಗಿದೆ ಮತ್ತು ಎಲ್ಲಾ ಪ್ರಕ್ರಿಯೆಗಳನ್ನು ಪೂರೈಸಲಾಗಿದೆ ಎಂದು ರಾಜ್ಯ ಸರ್ಕಾರವು ದೃಢಪಡಿಸಿದ ನಂತರವಷ್ಟೇ, ಪರಿಸರ ಸಚಿವಾಲಯವು ಕಾಡನ್ನು ಕಡಿಯಲು ಕೈಗಾರಿಕೆಗಳಿಗೆ ಅನುಮತಿ ನೀಡಬೇಕು’ ಎಂದು ಸರ್ಕಾರವು ತನ್ನ ಆದೇಶದಲ್ಲಿ ಸೂಚಿಸಿತು.

ಅನುಮತಿ ಪಡೆಯಲೇಬೇಕು ಎಂದಿದ್ದ ವೇದಾಂತ ತೀರ್ಪು

‘ಗ್ರಾಮಸಭೆಗಳ ಮೂಲಕ ಆದಿವಾಸಿಗಳು ಮತ್ತು ಅರಣ್ಯವಾಸಿಗಳ ಲಿಖಿತ ಒಪ್ಪಿಗೆಯನ್ನು ಪಡೆದುಕೊಳ್ಳಬೇಕು’ ಎಂಬುದನ್ನು ಸುಪ್ರೀಂ ಕೋರ್ಟ್‌ ಸಹ 2013ರ ತನ್ನ ತೀರ್ಪಿನಲ್ಲಿ ಎತ್ತಿಹಿಡಿದಿತ್ತು. ಈ ತೀರ್ಪು ವೇದಾಂತ ತೀರ್ಪು ಎಂದೇ ಗುರುತಿಸಿಕೊಂಡಿದೆ. ಒಡಿಶಾದ ನಿಯಮಗಿರಿ ಪರ್ವತ ಪ್ರದೇಶದಲ್ಲಿ ಬಾಕ್ಸೈಟ್‌ ಗಣಿಗಾರಿಕೆ ನಡೆಸಲು ಯೋಜನೆ ರೂಪಿಸಿತ್ತು. ಆದರೆ ಈ ಯೋಜನೆಯನ್ನು ಸಂಬಂಧಿತ 12 ಗ್ರಾಮಸಭೆಗಳು ತಿರಸ್ಕರಿಸಿದ್ದವು. ಗ್ರಾಮಸಭೆಗಳ ನಿರ್ಧಾರವನ್ನುಸುಪ್ರೀಂ ಕೋರ್ಟ್‌ ಎತ್ತಿಹಿಡಿದಿತ್ತು.

ಇಂತಹ ಯೋಜನೆಗಳಿಗೆ ಸಂಬಂಧಿಸಿದಂತೆ ಎಫ್‌ಸಿಆರ್‌ ಅಡಿ ಅನುಮತಿ ಪಡೆಯುವ ಪ್ರಕ್ರಿಯೆಯನ್ನು ಪರಿಸರ ಸಚಿವಾಲಯವು 2017ರಲ್ಲಿ ಬದಲಿಸಿತು. ಕಾಡನ್ನು ಕಡಿಯಲು ಬಯಸುವ ಯೋಜನಾ ಅಭಿವೃದ್ಧಿದಾರರು ಅದಕ್ಕಾಗಿ ಮೊದಲು ರಾಜ್ಯ ಸರ್ಕಾರಕ್ಕೆ ಅರ್ಜಿ ಸಲ್ಲಿಸಬೇಕು ಎಂದು ಬದಲಾವಣೆ ತರಲಾಯಿತು. ಆಗ ಸಂಬಂಧಿತ ಜಿಲ್ಲೆಯ ಜಿಲ್ಲಾಧಿಕಾರಿಯು, ಸಂಬಂಧಿತ ಗ್ರಾಮಸಭೆಗಳ ಮೂಲಕ ಆದಿವಾಸಿಗಳು ಮತ್ತು ಅರಣ್ಯವಾಸಿಗಳ ಒಪ್ಪಿಗೆ ಪಡೆಯುವ ಪ್ರಕ್ರಿಯೆಗೆ ಚಾಲನೆ ನೀಡುತ್ತಿದ್ದರು. ಜತೆಗೆ ಅರಣ್ಯ ಹಕ್ಕುಗಳ ಕಾಯ್ದೆಯು ಪಾಲನೆಯಾಗುವುದನ್ನು ಅವರು ದೃಢಪಡಿಸಿಕೊಳ್ಳಬೇಕಿತ್ತು. ಪರಿಸರ ಸಚಿವಾಲಯವು ಯಾವುದೇ ಯೋಜನೆಗೆ ಮೊದಲ ಹಂತದಲ್ಲಿ ತಾತ್ವಿಕ ಒಪ್ಪಿಗೆ ನೀಡುವಷ್ಟರಲ್ಲೇ ಈ ಎಲ್ಲಾ ಪ್ರಕ್ರಿಯೆಗಳು ಪೂರ್ಣಗೊಳ್ಳಬೇಕಿತ್ತು.ಆನಂತರವೇ ಪರಿಸರ ಸಚಿವಾಲಯವು ಎರಡನೇ ಹಂತದಲ್ಲಿ ಅಂತಿಮ ಒಪ್ಪಿಗೆ ಪಡೆಯಬೇಕಿತ್ತು.

ಆದರೆ ಈ ಎರಡು ಹಂತದ ಪ್ರಕ್ರಿಯೆಗಳನ್ನು ಈಗ ಕೈಬಿಡಲಾಗಿದೆ. ಪರಿಸರ ಸಚಿವಾಲಯವು ಯೋಜನಾ ಅಭಿವೃದ್ಧಿದಾರರಿಗೆ ಕಾಡು ಕಡಿಯಲು ಅನುಮತಿ ನೀಡುತ್ತದೆ ಮತ್ತು ಶುಲ್ಕವನ್ನು ಸಂಗ್ರಹಿಸುತ್ತದೆ.

ಆದಿವಾಸಿ ಸಮ್ಮತಿಗಿಲ್ಲ ಕಿಮ್ಮತ್ತು

ಸಂಪುಟ ಕಾರ್ಯದರ್ಶಿ, ಕಲ್ಲಿದ್ದಲು, ವಿದ್ಯುತ್‌, ಪರಿಸರ ಸಚಿವಾಲಯದ ಅಧಿಕಾರಿಗಳಿದ್ದ ಕಾರ್ಯದರ್ಶಿಗಳ ಸಮಿತಿಯ ಸಭೆಯು 2019ರ ಸೆಪ್ಟೆಂಬರ್‌ನಲ್ಲಿ ನಡೆದಿತ್ತು. ಅರಣ್ಯ (ಸಂರಕ್ಷಣೆ) ನಿಯಮಗಳ ಅಡಿಯಲ್ಲಿ ಅನುಮೋದನೆಗಳನ್ನು ನೀಡಲು ಇರುವ ‘ಪ್ರಮುಖ ತೊಡಕು’ಗಳ ಕುರಿತು ಈ ಸಭೆಯಲ್ಲಿ ಚರ್ಚೆ ನಡೆದಿತ್ತು.

ಅರಣ್ಯ ಕಡಿಯಲು ಅನುಮೋದನೆ ನೀಡುವುದಕ್ಕಾಗಿ ಅರಣ್ಯ ಹಕ್ಕುಗಳ ಕಾಯ್ದೆಯಿಂದ ಅರಣ್ಯ (ಸಂರಕ್ಷಣೆ) ನಿಯಮಗಳನ್ನು ಬೇರ್ಪಡಿಸುವ ಪ್ರಕ್ರಿಯೆ ನಡೆಯುತ್ತಿದೆ ಎಂದು ಪರಿಸರ ಸಚಿವಾಲಯವು ಹೇಳಿತ್ತು. ಬುಡಕಟ್ಟು ವ್ಯವಹಾರಗಳ ಸಚಿವಾಲಯದ ಜೊತೆಗೆ ಸಮಾಲೋಚನೆ ನಡೆಸಿದ ಬಳಿಕವೇ ಈ ಬದಲಾವಣೆಗಳನ್ನು ಮಾಡಬೇಕು ಎಂದು ಆ ಸಂದರ್ಭದಲ್ಲಿ ಪರಿಸರ ಸಚಿವಾಲಯಕ್ಕೆ ಹೇಳಲಾಗಿತ್ತು.

ಆದರೆ, ಕಾಡು ಕಡಿಯುವುದಕ್ಕೆ ಸಂಬಂಧಿಸಿದ ನಿಯಮಗಳನ್ನು ಬದಲಾಯಿಸುವಾಗ ಬುಡಕಟ್ಟು ವ್ಯವಹಾರಗಳ ಸಚಿವಾಲಯವನ್ನು ಸಂಪರ್ಕಿಸಿಲ್ಲ ಎಂದು ದಾಖಲೆಗಳು ಹೇಳುತ್ತವೆ. ಬದಲಿಗೆ, ರೈಲ್ವೆ, ನಾಗರಿಕ ವಿಮಾನಯಾನ, ರಸ್ತೆ ಸಾರಿಗೆ ಮತ್ತು ಹೆದ್ದಾರಿ, ಇಂಧನ, ಉಕ್ಕು, ಕಲ್ಲಿದ್ದಲು, ಪೆಟ್ರೋಲಿಯಂ ಹಾಗೂ ಗಣಿಗಾರಿಕೆ ಸಚಿವಾಲಯಗಳ ಜತೆಗೆ ಸಮಾಲೋಚನೆ ನಡೆಸಲಾಗಿದೆ. ಹಾಗೆಯೇ ನೀತಿ ಆಯೋಗದ ಜತೆಗೂ ಸಮಾಲೋಚನೆ ನಡೆದಿದೆ.

ಕರಡು ನಿಯಮಗಳನ್ನು ಕಾನೂನು ಸಚಿವಾಲಯಲಕ್ಕೆ ಪರಾಮರ್ಶೆಗಾಗಿ ಕಳುಹಿಸಲಾಗಿತ್ತು. ಅರಣ್ಯ ಹಕ್ಕುಗಳ ಕಾಯ್ದೆ ಪಾಲನೆಯಾಗಿದೆ ಎಂಬುದನ್ನು ಖಾತರಿಪಡಿಸಿಕೊಳ್ಳುವ ಹೊಣೆಗಾರಿಕೆಯಿಂದ ತಪ್ಪಿಸಿಕೊಳ್ಳುವುದಕ್ಕಾಗಿ ಎಲ್ಲವನ್ನೂ ಸಾರ್ವತ್ರಿಕಗೊಳಿಸುವ ಪದಗಳನ್ನು ಸಚಿವಾಲಯವು ಬಳಸಬಾರದು ಎಂದು ಕಾನೂನು ಸಚಿವಾಲಯ ಹೇಳಿತ್ತು.

ಕಾಡು ಕಡಿಯುವುದಕ್ಕೆ ಸಂಬಂಧಿಸಿದ ನಿಯಮಗಳನ್ನು ಇನ್ನಷ್ಟು ದುರ್ಬಲಗೊಳಿಸಲು ಪರಿಸರ ಸಚಿವಾಲಯವು ಆರಂಭದಲ್ಲಿ ಬಯಸಿತ್ತು. ಅನುಮೋದನೆಗೆ ಇದ್ದ ಎರಡು ಹಂತಗಳ ಪ್ರಕ್ರಿಯೆಯನ್ನು ಒಂದೇ ಹಂತಕ್ಕೆ ಇಳಿಸಲು ಬಯಸಿತ್ತು. ಯೋಜನೆಯನ್ನು ಅಭಿವೃದ್ಧಿಪಡಿಸುವ ಸಂಸ್ಥೆಯು ಅದರ ಮೇಲೆ ಹೇರಲಾದ ಎಲ್ಲ ಷರತ್ತುಗಳನ್ನು ಪಾಲಿಸಿದೆಯೇ ಎಂಬುದನ್ನು ಪರಿಶೀಲಿಸುವುದನ್ನು ರಾಜ್ಯಕ್ಕೆ ಮಾತ್ರ ವಹಿಸಲು ನಿರ್ಧರಿಸಿತ್ತು.

‘ಎರಡನೇ ಹಂತದ ಅನುಮೋದನಾ ಪ್ರಕ್ರಿಯೆಯನ್ನು ರಾಜ್ಯ ಸರ್ಕಾರಕ್ಕೆ ವಹಿಸಬೇಕು’ ಎಂಬ ಉದ್ದೇಶವನ್ನು ಪರಿಸರ ಸಚಿವಾಲಯವು ಹೊಂದಿತ್ತು ಎಂಬುದನ್ನು ಕಡತ ಟಿಪ್ಪಣಿಯೊಂದು ಸೂಚಿಸುತ್ತದೆ. ಅರಣ್ಯ ಹಕ್ಕುಗಳ ಕಾಯ್ದೆಯು ಸೇರಿದಂತೆ ಎಲ್ಲ ಕಾಯ್ದೆಗಳನ್ನು ಯೋಜನಾ ಅಭಿವೃದ್ಧಿ ಸಂಸ್ಥೆಯು ಪಾಲಿಸಿದೆಯೇ ಎಂಬುದನ್ನು ರಾಜ್ಯ ಸರ್ಕಾರವು ಪರಿಶೀಲನೆಗೆ ಒಳಪಡಿಸುವುದಕ್ಕೆ ಮೊದಲೇ ಕಾಡು ಕಡಿಯುವುದಕ್ಕಾಗಿ ಕೇಂದ್ರಕ್ಕೆ ಪರವಾನಗಿ ಶುಲ್ಕ ಪಾವತಿಸುವುದಕ್ಕೆ ಅವಕಾಶ ಒದಗಿಸಲಾಗಿದೆ.

ಒಂದೇ ಹಂತದ ಅನುಮೋದನೆ ಪ್ರಕ್ರಿಯೆಯು ‘ಅಸ್ಪಷ್ಟ ಮತ್ತು ಅನುಮಾನಕ್ಕೆ ಕಾರಣವಾಗುವಂತಿದ್ದು, ಭವಿಷ್ಯದಲ್ಲಿ ಸಮಸ್ಯೆಗೆ ಕಾರಣವಾಗಬಹುದು’ ಎಂದು ಕಾನೂನು ಸಚಿವಾಲಯವು ಹೇಳಿದ ಬಳಿಕ ಪರಿಸರ ಸಚಿವಾಲಯವು ಈ ಬದಲಾವಣೆ ಮಾಡಿಕೊಂಡಿತು.

ತಪಸ್ಯಾ ಅವರು ರಿಪೋರ್ಟರ್ಸ್‌ ಕಲೆಕ್ಟಿವ್‌ನ ವರದಿಗಾರ್ತಿ. ಲೇಖನದ ಇಂಗ್ಲಿಷ್‌ ಆವೃತ್ತಿಯು ‘ಆರ್ಟಿಕಲ್‌14’ ಪೋರ್ಟಲ್‌ನಲ್ಲಿ ಪ್ರಕಟವಾಗಿದೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT