ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಳ-ಅಗಲ: ಗಾಳಿಯೆಲ್ಲವೂ ಆಮ್ಲಜನಕವಲ್ಲ..

Last Updated 3 ಮೇ 2021, 19:50 IST
ಅಕ್ಷರ ಗಾತ್ರ

ವಾತಾವರಣದಲ್ಲೇ ಆಮ್ಲಜನಕ ಹೇರಳವಾಗಿರುವಾಗ, ಅದನ್ನು ಉತ್ಪಾದಿಸಿ ಸಿಲಿಂಡರ್‌ಗಳಲ್ಲಿ ತುಂಬಿ ಮಾರಾಟ ಮಾಡುವ ಅಗತ್ಯವಾದರೂ ಏನು? ಈ ಪ್ರಶ್ನೆ ಎಲ್ಲರನ್ನೂ ಒಂದಲ್ಲ ಒಂದು ಬಾರಿಯಾದರೂ ಕಾಡಿರುತ್ತದೆ.

ನಮ್ಮ ಸುತ್ತಮುತ್ತ ಇರುವುದೆಲ್ಲವೂ ಆಮ್ಲಜನಕ ಎಂದೇ ನಾವು ನಂಬಿದ್ದೇವೆ. ಆದರೆ ಅದು ಪೂರ್ಣ ಸತ್ಯವಲ್ಲ. ವಾತಾವರಣದಲ್ಲಿರುವ ಗಾಳಿಯಲ್ಲಿ ಆಮ್ಲಜನಕದ ಪ್ರಮಾಣ ಶೇ 21ರಷ್ಟು ಮಾತ್ರ. ಶೇ 78ರಷ್ಟು ನೈಟ್ರೋಜನ್‌ ಹಾಗೂ ಉಳಿದ ಶೇ 1ರಷ್ಟು ಇಂಗಾಲದ ಡೈಆಕ್ಸೈಡ್‌, ಹೈಡ್ರೋಜನ್‌ ಹಾಗೂ ಇತರ ಅನಿಲಗಳ ಮಿಶ್ರಣ ಇರುತ್ತದೆ.

ರೋಗಿಗಳ ಚಿಕಿತ್ಸೆಯಲ್ಲಿ ಬಳಸುವ ವೈದ್ಯಕೀಯ ಆಮ್ಲಜನಕದ ಸಿಲಿಂಡರ್‌ಗಳಲ್ಲಿ ವಾತಾವರಣದ ಇತರ ಅನಿಲಗಳನ್ನೆಲ್ಲಾ ಬೇರ್ಪಡಿಸಿ, ಶುದ್ಧ ಆಮ್ಲಜನಕವನ್ನು ಮಾತ್ರ ತುಂಬಿಸಲಾಗುತ್ತದೆ. ಇದರ ಶುದ್ಧತೆ ಶೇ 99ರಷ್ಟು ಇರುತ್ತದೆ. ಸೋಂಕಿಗೆ ಒಳಗಾಗಿ, ಸಹಜವಾಗಿ ಉಸಿರಾಡಲು ಕಷ್ಟವಾಗುವ ರೋಗಿಗಳಿಗೆ ನಿಗದಿತ ಒತ್ತಡದಲ್ಲಿ ಈ ಆಮ್ಲಜನಕವನ್ನು ನೇರವಾಗಿ
ಮೂಗಿಗೆ ನೀಡಲಾಗುತ್ತದೆ.

ಉಸಿರಾಟದ ತೊಂದರೆ ಅನುಭವಿಸುತ್ತಿರುವವರಿಗೆ ಶುದ್ಧವಾದ ಆಮ್ಲಜನಕ ನೀಡುವುದು ಅನಿವಾರ್ಯವಾಗುತ್ತದೆ. ಆದ್ದರಿಂದ ವೈದ್ಯಕೀಯ ಆಮ್ಲಜನಕದ ಸಿಲಿಂಡರ್‌ಗಳಲ್ಲಿ ಬೇರೆ ಯಾವುದೇ ಅನಿಲವು ಪ್ರವೇಶವಾಗದಂತೆ ನೋಡಿಕೊಳ್ಳಲಾಗುತ್ತದೆ. ಅವುಗಳನ್ನು ತುಂಬಿಡುವ ಟ್ಯಾಂಕ್‌ ಅಥವಾ ಸಿಲಿಂಡರ್‌ಗಳೂ ಶುದ್ಧವಾಗಿರಬೇಕು. ಹಿಂದೆ ಬೇರೆ ಉದ್ದೇಶಕ್ಕೆ ಬಳಸಿದ್ದ ಸಿಲಿಂಡರ್‌ ಅನ್ನು ಸ್ವಚ್ಛಗೊಳಿಸದೆ, ಆಮ್ಲಜನಕ ತುಂಬಲು ಬಳಸುವಂತಿಲ್ಲ.

ನಮ್ಮ ಶರೀರವು ಶೇ 21ರಷ್ಟು ಆಮ್ಲಜನಕವನ್ನು ಉಸಿರಾಡುವಂತೆ ರೂಪುಗೊಂಡಿದೆ. ನಮಗೆ ವಾತಾವರಣದಲ್ಲಿ ಸಹಜವಾಗಿ ಲಭ್ಯವಾಗುವ ಆಮ್ಲಜನಕವೇ ಸಾಕಾಗುತ್ತದೆ. ಶೇ 100ರಷ್ಟು ಶುದ್ಧವಾದ ಆಮ್ಲಜನಕವನ್ನು ದೀರ್ಘಕಾಲದವರೆಗೆ ಸೇವಿಸುವುದು ದೈಹಿಕವಾದ ಸಮಸ್ಯೆಗಳಿಗೂ ಕಾರಣವಾಗಬಹುದು ಎಂದು ವೈದ್ಯರು ಹೇಳುತ್ತಾರೆ.

ವೈದ್ಯಕೀಯ ಆಮ್ಲಜನಕವನ್ನು ಸರಿಯಾದ ಒತ್ತಡದಲ್ಲಿ ರೋಗಿಗೆ ಒದಗಿಸುವುದು ಅಗತ್ಯ. ಎಲ್ಲಾ ರೋಗಿಗಳಿಗೂ ಒಂದೇ ರೀತಿಯ ಒತ್ತಡದಲ್ಲಿ ಆಮ್ಲಜನಕ ಒದಗಿಸುವುದು ಸರಿಯಾಗದು. ಅದಕ್ಕಾಗಿಯೇ ವೈದ್ಯರ ಸಲಹೆ ಇಲ್ಲದೆ
ಇದನ್ನು ಬಳಸುವಂತಿಲ್ಲ.

ಕೈಗಾರಿಕಾ ಆಮ್ಲಜನಕ ಮತ್ತು ವೈದ್ಯಕೀಯ ಆಮ್ಲಜನಕ

ಕೈಗಾರಿಕಾ ಆಮ್ಲಜನಕಕ್ಕೂ ವೈದ್ಯಕೀಯ ಆಮ್ಲಜನಕಕ್ಕೂ ವ್ಯತ್ಯಾಸವಿದೆ. ಕೈಗಾರಿಕೆಗಳಲ್ಲಿ ಆಮ್ಲಜನಕವನ್ನು ದಹನ, ಆಕ್ಸಿಡೀಕರಣ, ಕತ್ತರಿಸುವುದು ಮತ್ತು ರಾಸಾಯನಿಕ ಕ್ರಿಯೆಗಳಿಗೆ ಬಳಸಲಾಗುತ್ತದೆ.

ವಾಣಿಜ್ಯಿಕವಾಗಿ ಉತ್ಪತ್ತಿಯಾಗುವ ಶೇ 55ರಷ್ಟು ಆಮ್ಲಜನಕವನ್ನು ಕಬ್ಬಿಣ ಮತ್ತು ಉಕ್ಕು ಕಾರ್ಖಾನೆಗಳಲ್ಲಿ ಬಳಸಲಾಗುತ್ತದೆ. ಶೇ 25ರಷ್ಟು ಆಮ್ಲಜನಕವು ರಾಸಾಯನಿಕ ಕಾರ್ಖಾನೆಗಳಲ್ಲಿ ಬಳಕೆಯಾಗುತ್ತದೆ. ಶೇ 20ರಷ್ಟು ವೈದ್ಯಕೀಯ ಉದ್ದೇಶ, ಲೋಹ ಕತ್ತರಿಸಲು, ಬೆಸುಗೆ ಹಾಕಲು, ರಾಕೆಟ್ ಇಂಧನವಾಗಿ, ನೀರಿನ ಸಂಸ್ಕರಣೆಗೆ ಬಳಕೆಯಾಗುತ್ತದೆ.

ಕೈಗಾರಿಕೆಗಳಲ್ಲಿ ತಯಾರಾಗುವ ಆಮ್ಲಜನಕದ ಶುದ್ಧತೆಯ ಮಟ್ಟದಲ್ಲಿ ವ್ಯತ್ಯಾಸವಿರುತ್ತದೆ. ಕೈಗಾರಿಕಾ ಬಳಕೆಗೆ ಉತ್ಪಾದಿಸುವ ಆಮ್ಲಜನಕದ ಶುದ್ಧತೆಯ ಮಟ್ಟ ಕಡಿಮೆಯಿರುತ್ತದೆ. ಕಾರ್ಖಾನೆಯ ಕೆಲಸಗಳಿಗೆ ಬಳಸುವ ಆಮ್ಲಜನಕದ ಶುದ್ಧತೆಯ ಮಟ್ಟವು ಮಾನವನ ಬಳಕೆಗೆ ಸೂಕ್ತವಲ್ಲ. ಅದರಲ್ಲಿ ಕಲ್ಮಶಗಳು ಇರಬಹುದು. ಅದನ್ನೇ ಬಳಸಿದರೆ ರೋಗಿ ಅಸ್ವಸ್ಥಗೊಳ್ಳುತ್ತಾನೆ.

ವೈದ್ಯಕೀಯ ಉದ್ದೇಶಕ್ಕೆ ಆಮ್ಲಜನಕ ಉತ್ಪಾದಿಸುವಾಗ ಶುದ್ಧತೆಯ ಮಟ್ಟವನ್ನು ಹೆಚ್ಚಿಸಲಾಗುತ್ತದೆ. ಆಮ್ಲಜನಕ ಸಿಲಿಂಡರ್‌ಗಳು ಸಹ ಮಾಲಿನ್ಯಕಾರಕಗಳಿಂದ ಮುಕ್ತವಾಗಿರಬೇಕು. ವೈದ್ಯಕೀಯ ಆಮ್ಲಜನಕ ಸಿಲಿಂಡರ್‌ಗಳು ಶುದ್ಧ ಆಮ್ಲಜನಕವನ್ನು ಹೊಂದಿರುತ್ತವೆ. ಶೇ 93ರಿಂದ 95ರಷ್ಟು ಶುದ್ಧವಾದ ಆಮ್ಲಜನಕವನ್ನೇ ರೋಗಿಗಳಿಗೆ ನೀಡಲಾಗುತ್ತದೆ.

ಆಧಾರ: ಡಬ್ಲ್ಯುಎಚ್‌ಒ ಜಾಲತಾಣ, ಮೇಡ್‌ಹೌಡಾಟ್‌.ಕಾಮ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT