ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಳನೋಟ | ಬಾಯ್ತೆರೆಯಲು ಕಾದಿದೆ ಸಹ್ಯಾದ್ರಿ

ಮಲೆನಾಡು, ಕರಾವಳಿ ಪ್ರದೇಶದ 800 ಸ್ಥಳಗಳಲ್ಲಿ ಭೂಕುಸಿತದ ಸಾಧ್ಯತೆ
Last Updated 21 ಜನವರಿ 2023, 20:39 IST
ಅಕ್ಷರ ಗಾತ್ರ

ಬೆಂಗಳೂರು: ಹಿಮಾಲಯದ ಜೋಶಿಮಠದ ತಲ್ಲಣ ದೇಶದ ಗಮನಸೆಳೆದಿದೆ. ಪುಟ್ಟ ಪಟ್ಟಣ ಕುಸಿತದಿಂದ ನಲುಗಿದೆ. ಮನೆ, ಕಟ್ಟಡಗಳು ಬಿರುಕು ಬಿಟ್ಟಿವೆ. ಸಂತ್ರಸ್ತರನ್ನು ಸ್ಥಳಾಂತರ ಮಾಡಲಾಗಿದೆ. ದಕ್ಷಿಣ ಭಾರತದಲ್ಲಿ ಸಹ್ಯಾದ್ರಿಯೂ ಇತ್ತೀಚಿನ ವರ್ಷಗಳಲ್ಲಿ ಎಚ್ಚರಿಕೆಯ ಗಂಟೆಯನ್ನು ಬಾರಿಸುತ್ತಲೇ ಇದೆ.

ಹಿಮಾಲಯವಿರಲಿ, ಹಚ್ಚ ಹಸಿರಿನ ಸಹ್ಯಾದ್ರಿಯೇ ಆಗಲಿ, ಮಳೆ–ಪ್ರವಾಹದಿಂದ ಅಲ್ಲಿನ ಮನೆಗಳು ಕುಸಿಯುತ್ತಿರುವ ದೃಶ್ಯಗಳನ್ನು ಟಿ.ವಿ.ಗಳಲ್ಲೋ, ಯೂಟ್ಯೂಬ್‌ನಲ್ಲೊ ನೋಡಿ ‘ಛೇ...!’ ಎಂದು ಸಹಾನುಭೂತಿ ತೋರಿಸುತ್ತೇವೆ ಅಷ್ಟೆ. ಆದರೆ ನಿಂತ ನೆಲ ಕುಸಿಯುತ್ತಿರುವುದರ ಅರಿವಿಲ್ಲ. ಸಹ್ಯಾದ್ರಿ ಎಂದು ಕರೆಸಿಕೊಳ್ಳುವ ಸಸ್ಯಶ್ಯಾಮಲೆಯ ಮಲೆಯ ಬೀಡು ಮೂರು ವರ್ಷಗಳಿಂದ ಅಲ್ಲಲ್ಲಿ ಕುಸಿಯುತ್ತಲೇ ಅಪಾಯದ ಮುನ್ಸೂಚನೆಯನ್ನು ನೀಡುತ್ತಲೇ ಇದೆ.

ಈ ವಿದ್ಯಮಾನ ಪಶ್ಚಿಮಘಟ್ಟದ ವಾಸಿಗಳ ಬೆನ್ನುಹುರಿಯಲ್ಲಿ ಛಳುಕು ಮೂಡಿಸಿದೆಯೇ? ಪ್ರಾಯಶಃ ಇಲ್ಲ. ಆದರೆ
ಪಶ್ಚಿಮಘಟ್ಟದ ಸಾಕಷ್ಟು ಪಟ್ಟಣಗಳು ಅಭಿವೃದ್ಧಿಯ ‘ಭಾರ’ವನ್ನು ತಾಳಲಾರದ ಸ್ಥಿತಿಗೆ ತಲುಪಿವೆ.

‘ಸಹ್ಯಾದ್ರಿ’ ಹೆಸರಿನಿಂದ ಕರೆಸಿಕೊಳ್ಳುವ ಪಶ್ಚಿಮಘಟ್ಟ ಪರ್ವತ ಶ್ರೇಣಿ ಅತ್ಯಂತ ಪ್ರಾಚೀನ. ಜಗತ್ತಿನ ಜೀವ ವೈವಿಧ್ಯತೆಯ ಅಪೂರ್ವ ಭಂಡಾರ ಇಲ್ಲಿದೆ. ಆದರೆ, ಮನುಷ್ಯನ ಭೋಗಾಪೇಕ್ಷೆಯ ವಿಸ್ತರಣಾವಾದದ ಕಾರಣ ಕಾಡುಗಳು, ಜೀವ ವೈವಿಧ್ಯಗಳು ನಾಶವಾಗುತ್ತಿವೆ. ಬೃಹತ್‌ ಯೋಜನೆಗಳ ಭಾರದಿಂದ ನಲುಗುತ್ತಿದೆ. ಗಣಿಗಾರಿಕೆಯಿಂದ ಆಳವಾದ ಗಾಯಗಳಾಗುತ್ತಿವೆ. ಇದರ ಪರಿಣಾಮ ಸಹ್ಯಾದ್ರಿ ಶ್ರೇಣಿಯ ಜೀವವೈವಿಧ್ಯ ಭಾರಿ ಒತ್ತಡಕ್ಕೆ ಸಿಲುಕಿದೆ.

2009 ರಲ್ಲಿ ಕಾರವಾರ ಸಮೀಪದ ಶಿರವಾಡದಲ್ಲಿ ಭಾರಿ ಭೂಕುಸಿತ ಸಂಭವಿಸಿತು. ಅದು ಪಶ್ಚಿಮಘಟ್ಟ ಕಂಡ ಶತಮಾನದ ಮೊದಲ ಭೂಕುಸಿತ. ಮೊದಲ ಭೂಕುಸಿತವೇ ಎಚ್ಚರಿಕೆಯ ಗಂಟೆಯಂತಿತ್ತು. ಇದಾದ ಒಂದು ದಶಕದ ಬಳಿಕ ಅಂದರೆ 2018ರ ನಂತರ ಕೊಡಗು, ದಕ್ಷಿಣ ಕನ್ನಡ, ಚಿಕ್ಕಮಗಳೂರು, ಶಿವಮೊಗ್ಗ, ಉತ್ತರ ಕನ್ನಡ ಜಿಲ್ಲೆಗಳಲ್ಲಿ ಭೂಕುಸಿತ ಸಂಭವಿಸುತ್ತಲೇ ಇದೆ. ಮಳೆಗಾಲ ಬಂದಾಗ ಯಾವಾಗ ಭೂಕುಸಿತವಾಗಿ ಅನಾಹುತವಾಗುತ್ತದೆಯೇ ಎಂಬ ಭಯದಲ್ಲೇ ದಿನ ದೂಡಬೇಕಾಗುತ್ತಿದೆ. ಕೆಲವು ಮನೆಗಳು, ಹಳ್ಳಿಗಳು, ತೋಟಗಳು ಭೂಕುಸಿತದಿಂದ ಕಣ್ಮರೆಯಾಗಿವೆ.

ಪಶ್ಚಿಮಘಟ್ಟದಲ್ಲಿ ಭೂಕುಸಿತದ ಸರಣಿ ಶುರುವಾದ ಮೇಲೆ ಅಧ್ಯಯನಕ್ಕಾಗಿ 2019 ರಲ್ಲಿ ಸರ್ಕಾರ ಸಮಿತಿಯೊಂದನ್ನು ರಚಿಸಿತು. ಪಶ್ಚಿಮಘಟ್ಟ ಮತ್ತು ಕರಾವಳಿ ಪ್ರದೇಶದಲ್ಲಿ ಎಲ್ಲೆಲ್ಲಿ ಭವಿಷ್ಯದಲ್ಲಿ ಭೂಕುಸಿತ ಆಗಬಹುದು ಎಂಬುದರ ಬಗ್ಗೆ ವಿವರವಾದ ಅಧ್ಯಯನ ನಡೆಸಿ, ಅಂತಿಮ ವರದಿಯನ್ನೂ ಸರ್ಕಾರಕ್ಕೆ ಸಲ್ಲಿಸಿದೆ. ಅಂತಿಮ ವರದಿಯು ಪಶ್ಚಿಮ ಘಟ್ಟದ ಏಳು ಜಿಲ್ಲೆಗಳ 23 ತಾಲ್ಲೂಕುಗಳಲ್ಲಿ ಭವಿಷ್ಯದಲ್ಲಿ ಭೂಕುಸಿತ ಸಾಧ್ಯತೆಗಳನ್ನು ಪಟ್ಟಿ ಮಾಡಿದೆ. ಅಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆಯೂ ವಿವರ ನೀಡಿದೆ.

ಪಶ್ಚಿಮಘಟ್ಟದಲ್ಲಿ ಏನಾಗುತ್ತಿದೆ?: ಪಶ್ಚಿಮಘಟ್ಟದಲ್ಲಿ ಏನಾಗುತ್ತಿದೆ ಮತ್ತು ಭವಿಷ್ಯದಲ್ಲಿ ಯಾವ ರೀತಿಯ ಅಪಾಯಗಳು ಎದುರಾಗಬಹುದು ಎಂಬುದನ್ನು ವಿಜ್ಞಾನಿ ಡಾ.ಮಾಧವ್‌ ಗಾಡ್ಗೀಳ್ ತಮ್ಮ ವರದಿಯಲ್ಲಿ ಹೇಳಿದ್ದರು. ಅದೇ ಪ್ರಕಾರ; ಕೇರಳ, ಕರ್ನಾಟಕದ ಪಶ್ಚಿಮಘಟ್ಟದ ಹಲವು ಭಾಗಗಳಲ್ಲಿ ಭಾರೀ ಪ್ರಮಾಣದ ಪ್ರವಾಹ ಮತ್ತು ಭೂಕುಸಿತಗಳು ಸಂಭವಿಸಿವೆ. ಮುಂದಿನ ದಿನಗಳಲ್ಲಿ ಈ ವಿದ್ಯಮಾನ ಸಂಭವಿಸುತ್ತಲೇ ಇರುತ್ತದೆ. ಹವಾಮಾನ ಬದಲಾವಣೆಯಿಂದ ಮಳೆ, ಪ್ರವಾಹ, ಭೂಕುಸಿತ ನಿರಂತರ ಎಂಬುದು ವಿಜ್ಞಾನಿಗಳ ಮಾತು.

ರಾಜಕಾರಣಿಗಳು, ಟಿಂಬರ್‌, ಗಣಿ ಮಾಫಿಯಾಗಳು ಪಶ್ಚಿಮಘಟ್ಟದ ಸಂಪತ್ತು ಇರುವುದೇ ಭೋಗಕ್ಕೆ, ಲೂಟಿಗೆ ಎಂದು ಭಾವಿಸಿದಂತಿದೆ. ಆದರೆ, ಇಲ್ಲಿ ಲಕ್ಷಾಂತರ ವರ್ಷಗಳಿಂದ ಉಳಿದುಕೊಂಡು ಬಂದಿರುವ ಜೀವ ವೈವಿಧ್ಯವಿವೆ. ವಿಶೇಷವಾಗಿ ಕಪ್ಪೆಗಳು, ಮೀನುಗಳು, ಹಾವುಗಳು ಸೇರಿ ಹಲವು ಬಗೆಯ ಜೀವಜಂತುಗಳು, ಸಸ್ಯ ಪ್ರಭೇದಗಳಿವೆ. ಪಶ್ಚಿಮಘಟ್ಟ ಪರ್ವತಗಳ ಶ್ರೇಣಿಯ ಸಂರಚನೆ ವಿಶಿಷ್ಟ ಮತ್ತು ಬಲು ಸೂಕ್ಷ್ಮವಾದುದು. ಲಕ್ಷಗಟ್ಟಲೆ ವರ್ಷಗಳಿಂದ ವಿಕಸನಗೊಂಡು ಬಂದಿರುವ ಅಮೂಲ್ಯ ಜೀವ ವೈವಿಧ್ಯಗಳ ಸೂಕ್ಷ್ಮತಾಣಗಳಿಗೆ ಭಾರೀ ಪ್ರಮಾಣದಲ್ಲಿ ಗಾಸಿಯಾಗುತ್ತಿದೆ. ವಿಶ್ವ ಜೈವಿಕ ವೈವಿಧ್ಯಗಳ ಪ್ರಮುಖ ಎಂಟು ತಾಣಗಳಲ್ಲಿ ಪಶ್ಚಿಮಘಟ್ಟವೂ ಒಂದು ಎಂದು ಯುನೆಸ್ಕೋ ಗುರುತಿಸಿದೆ. ದೇಶದ ಶೇ 30ರಷ್ಟು ಸರೀಸೃಪ, ಉಭಯಚರ, ಮೀನುಗಳು, ಪಕ್ಷಿಗಳು ಮತ್ತು ಸಸ್ತನಿಗಳ ಪ್ರಭೇದಗಳು ಇಲ್ಲಿಯೇ ಇವೆ.

ದಖ್ಖನ್‌ ಪ್ರಸ್ಥಭೂಮಿಯ ಉಳಿದ ಭೂಪ್ರದೇಶಗಳಿಗೆ ಹೋಲಿಸಿದರೆ ಪಶ್ಚಿಮಘಟ್ಟಗಳಲ್ಲಿ ಶಿಥಿಲೀಕರಣ (ಕಲ್ಲು ಮಣ್ಣಾಗುವುದು) ಪ್ರಕ್ರಿಯೆ ಹೆಚ್ಚು. ಹೀಗಾಗಿ ಉಳಿದ ಕಡೆಗಳಿಗಿಂತ ಇಲ್ಲಿ ಮಣ್ಣಿನ ಪದರ ಹೆಚ್ಚು ದಪ್ಪ. ನೂರಾರು ಅಡಿಗಳಷ್ಟು ಮಣ್ಣು ಇರುತ್ತದೆ. ಪಶ್ಚಿಮಘಟ್ಟದ ಜಿಲ್ಲೆಗಳಲ್ಲಿ ಇತ್ತೀಚಿನ ವರ್ಷಗಳಲ್ಲಿ ವಾಡಿಕೆಗಿಂತ ಮೂರು ಪಟ್ಟು ಹೆಚ್ಚು ಮಳೆ ಆಗುತ್ತಿರುವ ಕಾರಣ ಸಹಜವಾಗಿ ಇಲ್ಲಿನ ಭೂಪ್ರದೇಶದ ಮೇಲೆ ಒತ್ತಡ ಹೆಚ್ಚಾಗಿದೆ. ಹಾಗಾಗಿ ಅಲ್ಲಲ್ಲಿ ಭೂಕುಸಿತಗಳು ಉಂಟಾಗುತ್ತಿವೆ.

ಈ ಘಟ್ಟ ಪ್ರದೇಶಗಳಲ್ಲಿ ಅತಿಯಾದ ಮಾನವ ಹಸ್ತಕ್ಷೇಪ, ಚಟುವಟಿಕೆಯಿಂದಾಗಿ ಭೂಮಿಯ ಹೊರಕವಚ ಸಂಪೂರ್ಣ ಬದಲಾಗುತ್ತಿದೆ. ಇಲ್ಲಿ ಈ ಹಿಂದೆ, ಮೇಲ್ಮೈ ಸಂರಚನೆಗೆ ಅನುಗುಣವಾಗಿ ದಟ್ಟಾರಣ್ಯ, ಪೊದೆ, ಹುಲ್ಲುಹಾಸುಗಳ ಹದವಾದ ಮಿಶ್ರಣವಿತ್ತು. ಇತ್ತೀಚೆಗೆ ಇಲ್ಲಿ ರಸ್ತೆ ನಿರ್ಮಾಣ, ರೆಸಾರ್ಟ್‌, ಕಟ್ಟಡಗಳ ನಿರ್ಮಾಣ, ತೋಟಗಳ ವಿಸ್ತರಣೆಗೆ ಗುಡ್ಡಗಳನ್ನು ಬೇಕಾಬಿಟ್ಟಿ ಕತ್ತರಿಸಲಾಗಿದೆ. ಕಲ್ಲುಕ್ವಾರಿಗಳಿಗೆ ಅವಕಾಶ ಕಲ್ಪಿಸಲಾಗಿದೆ. ಕಾಫಿ, ರಬ್ಬರ್‌, ಶುಂಠಿ ಬೆಳೆಸಲು ಕಾಡುಗಳನ್ನು ಕಡಿಯಲಾಗಿದೆ. ಇದರಿಂದಾಗಿ ನಿರ್ದಿಷ್ಟ ಪ್ರಮಾಣಕ್ಕಿಂತ ಹೆಚ್ಚು ನೀರು ಭೂಮಿಯೊಳಗೆ ಇಂಗದಂತೆ ತಡೆಯುವ ಹುಲ್ಲುಹಾಸುಗಳು ಮಾಯವಾಗಿವೆ. ಭಾರಿ ಮಳೆಯಾಗಿದ್ದರಿಂದ ಭೂಮಿಯ ಆಳಕ್ಕೆ ಇಂಗುವ ನೀರಿನ ಪ್ರಮಾಣವೂ ಹೆಚ್ಚಿದೆ. ಇದು ಮಣ್ಣಿನ ಪದರ ಸಡಿಲಗೊಳ್ಳುವುದಕ್ಕೆ ಕಾರಣ. ನೀರಿನ ಹರಿವಿನಿಂದ ಹೆಚ್ಚು ಒತ್ತಡ ಸೃಷ್ಟಿಯಾಗಿರುವ ಕಡೆ ಭೂಕುಸಿತ ಉಂಟಾಗಿದೆ ಎಂದು ವಿಶ್ಲೇಷಿಸುತ್ತಾರೆ ವಿಜ್ಞಾನಿಗಳು.

ಸಾಮಾನ್ಯವಾಗಿ ಭೂಮಿಯ ಮೇಲ್ಭಾಗದಲ್ಲಿ ಹರಿಯುವ ನದಿ, ತೊರೆಗಳನ್ನು ಮಾತ್ರ ನಾವು ನೋಡುತ್ತೇವೆ. ವಾಸ್ತವದಲ್ಲಿ ನದಿಗಳು ಆಳ ಶಿಲಾಪದರದ ಬಿರುಕುಗಳ ಮೂಲಕ ಅಂತರ್ಗಾಮಿಯಾಗಿಯೂ ಪ್ರವಹಿಸುತ್ತವೆ. ಮೇಲ್ಮೈನಿಂದ ಒಂದೆರಡು ಕಿಲೊಮೀಟರ್‌ ಆಳದಲ್ಲೂ ನೀರಿನ ಹರಿವು ಇರುತ್ತವೆ. ಭೌಗೋಳಿಕ ಬದಲಾವಣೆಗಳು ನದಿಯ ಹರಿವಿನ ದಿಕ್ಕನ್ನೂ ಬದಲಾಯಿಸುತ್ತಿವೆ. ಪಶ್ಚಿಮಘಟ್ಟದಲ್ಲೂ ಈ ವಿದ್ಯಮಾನ ಕಾಣಬಹುದು. ಕಣ್ಣಿಗೆ ಕಾಣಿಸದೆ ಒಳಗೊಳಗೇ ಹರಿಯುವ ನೀರು ಕೂಡಾ ಭೂಕುಸಿತಕ್ಕೆ ಕಾರಣ. ಸಾವಿರಾರು ಎಕರೆ ಪ್ರದೇಶದಲ್ಲಿ ಕಾಫಿ ತೋಟಗಳ ವಿಸ್ತರಣೆ ಕೂಡ ಇಲ್ಲಿ ಭೂಮಿಯ ಸಂರಚನೆ ವ್ಯತ್ಯಯ ಉಂಟಾಗುವುದಕ್ಕೆ ಕಾರಣವಾಗಿದೆ. ಬೆಟ್ಟದ ತುದಿಯನ್ನು ಕತ್ತರಿಸಿ ರೆಸಾರ್ಟ್‌ ಮತ್ತು ಕೆರೆ–ಕೊಳ್ಳಗಳನ್ನು ನಿರ್ಮಿಸಲಾಗುತ್ತಿದೆ.

‘ಕರಾವಳಿ ಮತ್ತು ಮಲೆನಾಡನ್ನು ಒಳಗೊಂಡ ಪಶ್ಚಿಮಘಟ್ಟದಲ್ಲಿ ನಾಲ್ಕು ದಶಕಗಳಿಂದ ಅವ್ಯಾಹತವಾಗಿ ಅರಣ್ಯ ನಾಶ ನಡೆದಿರುವುದರಿಂದ ಇಲ್ಲಿನ ಭೂಪ್ರದೇಶ ಟೊಳ್ಳಾಗಿದೆ’ ಎನ್ನುತ್ತಾರೆ ಸಂರಕ್ಷಣೆ ಜೀವಶಾಸ್ತ್ರಜ್ಞ ಕೇಶವ ಕೊರ್ಸೆ.

ಈ ಪ್ರದೇಶದ ಉಷ್ಣ ವಲಯದ ಕಾಡುಗಳನ್ನು ಕಡಿದಾಗ ಮಣ್ಣಿನಡಿಯೇ ಉಳಿಯುವ ಬೃಹತ್‌ ಗಾತ್ರದ ಮರಗಳ ಬೇರುಗಳು ಕೊಳೆತು ಮಣ್ಣಾಗಲು ಕನಿಷ್ಠ 25 ರಿಂದ 30 ವರ್ಷಗಳು ಬೇಕಾಗುತ್ತದೆ. ಈಗ ಈ ಪ್ರದೇಶಗಳಲ್ಲೆಲ್ಲ ಮಣ್ಣಿನಡಿ ಬೇರುಗಳು ಕೊಳೆತು ವಿಶಾಲ ರಂಧ್ರಗಳು ನಿರ್ಮಾಣವಾಗುತ್ತಿವೆ. ಇದಕ್ಕೆ ಪ್ರತಿಯಾಗಿ ಮೇಲ್ಮೈನಲ್ಲಿ ಮತ್ತೆ ಸಹಜ ಕಾಡುಗಳನ್ನು ಬೆಳೆಸುವ ಪ್ರಯತ್ನಗಳಂತೂ ನಡೆದಿಲ್ಲ. ಬಹುಪಾಲು ಪ್ರದೇಶಗಳು ರಸ್ತೆ, ಮನೆ, ಪಟ್ಟಣ, ಕೈಗಾರಿಕೆ ಮತ್ತು ಕೃಷಿ ಪ್ರದೇಶಗಳಾಗಿವೆ.

‘ವಿಶಾಲ ರಂಧ್ರಗಳಲ್ಲಿ ಮಳೆ ನೀರು ತುಂಬಿಕೊಂಡು ಮಣ್ಣು ಸಡಿಲವಾಗಿ ಭೂಕುಸಿತಕ್ಕೆ ಕಾರಣವಾಗಿದೆ. ಹೀಗಾಗಿ ಭೂಕುಸಿತದ ಸಾಧ್ಯತೆಗಳು ಹೆಚ್ಚುತ್ತಲೇ ಇವೆ. ಹಲವು ವರ್ಷಗಳ ಅರಣ್ಯ ನಾಶದ ಒಟ್ಟು ಪರಿಣಾಮವೇ ಇದಾಗಿದೆ’ ಎನ್ನುತ್ತಾರೆ ಕೊರ್ಸೆ.

ಕೊಡಗು ಜಿಲ್ಲೆ ರೆಸಾರ್ಟ್‌ಗಳಿಂದ ತುಂಬಿಹೋಗಿದೆ. ಅದರಿಂದ ನಿಸರ್ಗಕ್ಕೆ ಆದ ಹಾನಿ ಊಹಿಸುವುದೂ ಕಷ್ಟ. ನಿಸರ್ಗದ ನಿಯಮವನ್ನು ಉಲ್ಲಂಘಿಸುತ್ತಿರುವುದೂ ಅಲ್ಲದೇ, ಕಾಡು ಉಳಿಸುವವರೇ ನಾವು, ಪರಿಸರ ವಿಜ್ಞಾನಿಗಳಿಗೇನು ಗೊತ್ತು ಎಂದು ಮಾಧವ ಗಾಡ್ಗೀಳ್‌ ಅಂತಹವರನ್ನೇ ಪ್ರಶ್ನಿಸಿದವರೂ ಇದ್ದಾರೆ.

ಹಾಸನ ಜಿಲ್ಲೆಯ ಸಕಲೇಶಪುರದ ಈ ದೃಷ್ಟಾಂತ ಗಮನಿಸಿ, ಇಲ್ಲಿ ಆರು ಜಲ ವಿದ್ಯುತ್‌ ಯೋಜನೆಗಳು ತಲೆ ಎತ್ತಿವೆ. ಧಾರಾಕಾರ ಮಳೆ ಸುರಿಯುವುದರಿಂದ ಇಲ್ಲಿಯ ಮಣ್ಣು ಮೃದು. ದಟ್ಟ ಮಳೆ ಕಾಡಿನಿಂದಾಗಿ ಬೇರುಗಳು ಮಣ್ಣನ್ನು ಹಿಡಿದಿಟ್ಟುಕೊಳ್ಳುತ್ತವೆ. ಜೊತೆಗೆ ಧಾರಾಕಾರವಾಗಿ ಮಳೆ ಸುರಿದರೂ ಸಹ ಅಷ್ಟೇ ವೇಗವಾಗಿ ಸಮುದ್ರದತ್ತ ಹರಿದು ಹೋಗುತ್ತಿದ್ದುದರಿಂದ ಇದುವರೆಗೂ ಈ ಭಾಗದಲ್ಲಿ ಭೂಕುಸಿತದ ಸಮಸ್ಯೆ ಇರಲಿಲ್ಲ. ಜಲವಿದ್ಯುತ್‌ ಯೋಜನೆಗಳು, ಎತ್ತಿನಹೊಳೆ ತಿರುವು ಯೋಜನೆಗಾಗಿ ಹರಿಯುವ ನೀರನ್ನು ಡ್ಯಾಂ ಕಟ್ಟಿ ತಡೆದು ನಿಲ್ಲಿಸಲಾಗಿದೆ. ಒಂದೆಡೆ ನೀರಿನ ಒತ್ತಡ ಹೆಚ್ಚಾಗುತ್ತಿದೆ. ಜೊತೆಗೆ ನಿಂತ ನೀರಿನಿಂದ ಭೂಮಿಯಲ್ಲಿ ತೇವಾಂಶ ಹೆಚ್ಚಾಗಿ ಭೂಮಿ ಕುಸಿಯುವ ಹಾಗೂ ಇಳಿಜಾರಿನತ್ತ ಜರುಗುವ ಸಾಧ್ಯತೆ ಹೆಚ್ಚು. ಈಗ್ಗೆ ಎರಡು– ಮೂರು ವರ್ಷಗಳ ಹಿಂದೆ ಒಣಗೂರು, ಕಾಡುಮನೆ, ನಡಹಳ್ಳಿಗಳಲ್ಲಿ ಭೂಕುಸಿತ ಉಂಟಾಗಿದೆ.

ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲ್ಲೂಕಿನ ಕಳಚೆಯಲ್ಲಿ 2021 ರ ಜುಲೈನಲ್ಲಿ ಭಾರಿ ಪ್ರಮಾಣದ ಭೂಕುಸಿತ ಸಂಭವಿಸಿ ಇಡೀ ಗ್ರಾಮವೇ ಇಬ್ಭಾಗವಾಗಿತ್ತು. 2022 ರ ಆಗಸ್ಟ್ ನಲ್ಲಿ ಭಟ್ಕಳ ತಾಲ್ಲೂಕಿನ ಮುಟ್ಟಳ್ಳಿಯಲ್ಲಿ ಭೂಕುಸಿತ ಸಂಭವಿಸಿ ನಾಲ್ವರು ಮೃತಪಟ್ಟಿದ್ದರು. ಈ ಘಟನೆಗಳು ಪಶ್ಚಿಮಘಟ್ಟದಲ್ಲಿ ಭೂಕುಸಿತದ ಗಂಭೀರತೆಯನ್ನು ಎತ್ತಿ ತೋರಿಸಿದ್ದವು.

2017 ರಿಂದ 2020 ರ ನಡುವಿನ ಅವಧಿಯಲ್ಲಿ ಜಿಲ್ಲೆಯ ಶಿರಸಿ, ಯಲ್ಲಾಪುರ, ಅಂಕೋಲಾ ಮತ್ತು ಸಿದ್ದಾಪುರ ತಾಲ್ಲೂಕುಗಳ ಸುಮಾರು 8 ಕಡೆಗಳಲ್ಲಿ ದೊಡ್ಡ ಪ್ರಮಾಣದಲ್ಲಿ ಭೂಕುಸಿತ ಸಂಭವಿಸಿದ್ದವು. ಕರಾವಳಿ ಭಾಗದಲ್ಲಿ ರಾಷ್ಟ್ರೀಯ ಹೆದ್ದಾರಿ ವಿಸ್ತರಣೆಯ ಪರಿಣಾಮ ಮಳೆಗಾಲದ ವೇಳೆ ಅಲ್ಲಲ್ಲಿ ಭೂಕುಸಿತಗಳು ನಡೆಯುತ್ತಲೇ ಇವೆ.

ಸೂಕ್ಷ್ಮ ಪ್ರದೇಶವಾಗಿದ್ದರೂ ಜಿಲ್ಲೆಯಲ್ಲಿ 17 ಕಲ್ಲು ಕ್ವಾರಿಗಳು ಈಗಲೂ ಕಾರ್ಯನಿರ್ವಹಿಸುತ್ತಿವೆ. ಪ್ರತಿ ವರ್ಷ ಸರಾಸರಿ 5 ರಿಂದ 6 ಕ್ವಾರಿಗಳನ್ನು ಆರಂಭಿಸಲು ಅರ್ಜಿಗಳು ಸಲ್ಲಿಕೆಯಾಗುತ್ತಿವೆ. 2019 ರಲ್ಲಿ ಜಿಲ್ಲೆಯಲ್ಲಿ 30,548 ಹೆಕ್ಟೇರ್ ಇದ್ದ ಅಡಿಕೆ ತೋಟದ ಪ್ರಮಾಣ ಮೂರೇ ವರ್ಷಕ್ಕೆ 33,364 ಹೆಕ್ಟೇರ್ ಗೆ ಏರಿಕೆಯಾಗಿದೆ. ದಶಕದ ಹಿಂದೆ ಈ ಪ್ರಮಾಣ ಅರ್ಧಕ್ಕಿಂತಲೂ ಕಡಿಮೆ ಇತ್ತು. ಪರಿಸರ ಸೂಕ್ಷ್ಮ ಪ್ರದೇಶ ಆಗಿರುವ ಕಾರಣ ಕೈಗಾರಿಕೆಗಳ ಸ್ಥಾಪನೆಗೆ ಜಿಲ್ಲೆಯಲ್ಲಿ ಅವಕಾಶ ಸಿಕ್ಕಿಲ್ಲ.

ಈ ಪ್ರದೇಶವೆಲ್ಲ ಈಗ ಆತಂಕಕ್ಕೆ ಸಿಲುಕಿವೆ. ನೆರವಿಗೆ ಮೊರೆಯಿಡುತ್ತಿದೆ ಪಶ್ಚಿಮ ಘಟ್ಟ.

100 ವರ್ಷಗಳಲ್ಲಿ ಕಾಡು ನಾಶ
ಕಳೆದ ಒಂಬತ್ತು ದಶಕಗಳಲ್ಲಿ (1920 ರಿಂದ 2013) ಪಶ್ಚಿಮಘಟ್ಟದಲ್ಲಿ 33,579 ಚ.ಕಿ.ಮೀ ಅಂದರೆ ಶೇ 35.3 ರಷ್ಟು ಅರಣ್ಯ ನಾಶವಾಗಿದೆ ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ ನ್ಯಾಷನಲ್‌ ರಿಮೋಟ್‌ ಸೆನ್ಸಿಂಗ್‌ ಸೆಂಟರ್‌ ನಡೆಸಿರುವ ಅಧ್ಯಯನ ಅಂದಾಜು ಮಾಡಿದೆ. ಗುಜರಾತ್‌, ಮಹಾರಾಷ್ಟ್ರ, ಕರ್ನಾಟಕ,ಗೋವಾ, ಕೇರಳ, ತಮಿಳುನಾಡು ರಾಜ್ಯಗಳಲ್ಲಿ ಪಶ್ಚಿಮಘಟ್ಟ ಹಾದು ಹೋಗಿದ್ದು, ಅರಣ್ಯ ವ್ಯಾಪ್ತಿ ಎಷ್ಟು ಪ್ರಮಾಣದಲ್ಲಿ ಕಡಿಮೆ ಆಗಿದೆ ಎಂಬ ಮಾಹಿತಿ ಹೀಗಿದೆ–

ಭವಿಷ್ಯದಲ್ಲಿ ಭೂಕುಸಿತ ಎಲ್ಲೆಲ್ಲಿ ಸಾಧ್ಯತೆ
* ಮಡಿಕೇರಿ, ಸೋಮವಾರಪೇಟೆ ಹಾಗೂ ವಿರಾಜಪೇಟೆ (ಕೊಡಗು ಜಿಲ್ಲೆ)
* ಸಕಲೇಶಪುರ (ಹಾಸನ ಜಿಲ್ಲೆ)
* ಸಾಗರ (ಶಿವಮೊಗ್ಗ ಜಿಲ್ಲೆ)
* ಕಾರವಾರ, ಅಂಕೋಲಾ, ಕುಮಟಾ, ಹೊನ್ನಾವರ,ಸಿದ್ದಾಪುರ, ಶಿರಸಿ,ಯಲ್ಲಾಪುರ ಮತ್ತು ಜೋಯ್ಡಾ (ಉತ್ತರಕನ್ನಡ ಜಿಲ್ಲೆ)
* ಕಾರ್ಕಳ (ಉಡುಪಿ ಜಿಲ್ಲೆ)
* ಬೆಳ್ತಂಗಡಿ, ಬಂಟ್ವಾಳ, ಪುತ್ತೂರು,ಸುಳ್ಯ ಮತ್ತು ಮಂಗಳೂರು (ದಕ್ಷಿಣಕನ್ನಡ ಜಿಲ್ಲೆ)
* ಕುಂದಾಪುರ ತಾಲ್ಲೂಕು (ಉಡುಪಿ ಜಿಲ್ಲೆ), ತೀರ್ಥಹಳ್ಳಿ, ಹೊಸನಗರ ತಾಲ್ಲೂಕು (ಶಿವಮೊಗ್ಗ ಜಿಲ್ಲೆ) ಮತ್ತು ಖಾನಾಪುರ ತಾಲ್ಲೂಕು(ಬೆಳಗಾವಿ ಜಿಲ್ಲೆ) ಭೂಕುಸಿತವಾಗುವ ಬಗ್ಗೆ ಸೂಕ್ಷ್ಮ ಪ್ರದೇಶ ಎಂದು ಗುರುತಿಸಬೇಕಾಗಿದೆ)
* ಜಿಯಾಲಾಜಿಕಲ್ ಸರ್ವೇ ಆಫ್ ಇಂಡಿಯಾ (ಜಿಎಸ್‌ಐ) 25 ತಾಲ್ಲೂಕುಗಳಲ್ಲಿ ಎಂಟು ನೂರಕ್ಕೂ ಸ್ಥಳಗಳನ್ನು ‘ಭೂಕುಸಿತದ ಸಾಧ್ಯತೆಗಳಿರುವ ಪ್ರದೇಶ’ ಎಂದು ಗುರುತಿಸಿದೆ.
* ಭಾರತೀಯ ಭೂವೈಜ್ಞಾನಿಕ ಸರ್ವೇಕ್ಷಣಾ ಸಂಸ್ಥೆ (ಜಿಎಸ್ಐ), ನ್ಯಾಷನಲ್ ಜಿಯೋ ಫಿಜಿಕಲ್ ರಿಸರ್ಚ್ ಇನ್‌ಸ್ಟಿಟ್ಯೂಟ್ (ಎನ್‌ಜಿಆರ್‌ಎಫ್), ನ್ಯಾಷನಲ್ ಇನ್‌ಸ್ಟಿಟ್ಯೂಟ್‌ ಆಫ್ ರಾಕ್ ಮೆಕಾನಿಕ್ಸ್ (ಎನ್‌ಐಆರ್‌ಎಂ) ಹಾಗೂ ಅಮೃತ ವಿಶ್ವವಿದ್ಯಾನಿಲಯದ ತಜ್ಞರಿಂದ ಕರ್ನಾಟಕದಲ್ಲಿನ ಭೂಕಂಪ, ಭೂಕುಸಿತ ಕುರಿತು ಅಧ್ಯಯನಗಳು ನಡೆಯುತ್ತಿವೆ ಎನ್ನುತ್ತಾರೆ ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ನಿರ್ದೇಶಕ ಡಾ.ಮನೋಜ್ ರಾಜನ್.

20 ಸಾವಿರ ಹೆಕ್ಟೇರ್‌ಗಳಲ್ಲಿನ ಮರ ಎಲ್ಲಿ ಹೋಯ್ತು?
2012 ರಿಂದ ಈಚೆಗೆ ಭಾರೀ ಪ್ರಮಾಣದಲ್ಲಿ ಅರಣ್ಯ ನಾಶವಾಗಿದೆ ಎಂದು ‘ಫಾರೆಸ್ಟ್‌ ಗ್ಲೋಬಲ್ ವಾಚ್‌’ (ಜಿಎಫ್‌ಡಬ್ಲ್ಯೂ) ದತ್ತಾಂಶ ಹೇಳುತ್ತವೆ. ಕರ್ನಾಟಕದಲ್ಲಿ 2012 ರಿಂದ 2017 ರ ಅವಧಿಯಲ್ಲಿ ಪಶ್ಚಿಮಘಟ್ಟದಲ್ಲಿ 20 ಸಾವಿರ ಹೆಕ್ಟೇರ್‌ ಅರಣ್ಯ ನಾಶವಾಗಿದ್ದು, ಇದು ಆತಂಕಕಾರಿ ಪ್ರಮಾಣ. ಇಲ್ಲಿನ ಜೀವ ವೈವಿಧ್ಯ ಅಪಾಯಕ್ಕೆ ಸಿಲುಕಿದೆ ಎಂದು ಜಿಎಫ್‌ಡಬ್ಲ್ಯೂ ಎಚ್ಚರಿಕೆ ನೀಡಿದೆ.

2012 ರಿಂದ 2017 ರ ಅವಧಿಯಲ್ಲಿ ಕರ್ನಾಟಕದ ಉತ್ತರಕನ್ನಡ, ಉಡುಪಿ, ಕೊಡಗು ಮತ್ತು ದಕ್ಷಿಣಕನ್ನಡ ಜಿಲ್ಲೆಗಲ್ಲಿ ಒಟ್ಟು 10 ಸಾವಿರ ಹೆಕ್ಟೇರ್‌ ಪ್ರದೇಶದಲ್ಲಿ ಮರಗಳು ನಾಶವಾಗಿವೆ. 2017 ಒಂದೇ ವರ್ಷದಲ್ಲಿ 2,208 ಹೆಕ್ಟೇರ್‌ ಪ್ರದೇಶ ನಾಶವಾಗಿದೆ. ದಕ್ಷಿಣಕನ್ನಡದಲ್ಲಿ 955, ಉಡುಪಿಯಲ್ಲಿ 857, ಉತ್ತರಕನ್ನಡದಲ್ಲಿ 236 ಮತ್ತು ಕೊಡಗು ಜಿಲ್ಲೆಯಲ್ಲಿ 160 ಹೆಕ್ಟೇರ್‌ ಪ್ರದೇಶದಲ್ಲಿ ಅರಣ್ಯ ನಾಶವಾಗಿದೆ. ರಾಜ್ಯದಲ್ಲಿ ಸರಾಸರಿ 5 ಲಕ್ಷ ಹೆಕ್ಟೇರ್‌ ಅಡಿಕೆ ಕ್ಷೇತ್ರವಿದೆ. ಅದರಲ್ಲಿ 3 ಲಕ್ಷ ಹೆಕ್ಟೆರ್‌ ಪಶ್ಚಿಮಘಟ್ಟದ ವ್ಯಾಪ್ತಿಯಲ್ಲೇ ಇದೆ. ಒಂದು ಲಕ್ಷ ಹೆಕ್ಟೇರ್‌ನಲ್ಲಿ ಅಕೇಶಿಯಾ ಸೇರಿದಂತೆ ಏಕ ಜಾತಿಯ ನೆಡುತೋಪುಗಳಿವೆ.

***

ಸೂಕ್ಷ್ಮ ಪರಿಸರದಲ್ಲಿ ಯೋಜನೆಗಳು ಬೇಡ
ಈಗಿರುವ ಸನ್ನಿವೇಶಗಳನ್ನು ನೋಡಿದರೆ ’ಅಭಿವೃದ್ಧಿ‘ ಎನ್ನುವುದು ಮೂರ್ಖತನದ ಪರಮಾವಧಿ. ಪರಿಸರದ ಬಗ್ಗೆ ಜ್ಞಾನ ಇಲ್ಲದವರು ಅಧಿಕಾರ ನಡೆಸುತ್ತಿದ್ದಾರೆ. ದುರ್ಬಲವಾಗಿರುವ ಪರಿಸರದಲ್ಲಿ ಯಾವುದೇ ಯೋಜನೆಗಳನ್ನು ಕೈಗೊಳ್ಳಬಾರದು. ಈಗ ಕೈಗೊಂಡಿರುವ ಹಲವಾರು ಯೋಜನೆಗಳಿಂದ ಪ್ರವಾಹ ಸೃಷ್ಟಿಯಾಗುತ್ತದೆ. ನಂತರ ನೀರಿನ ಕ್ಷಾಮ ಉಂಟಾಗುತ್ತದೆ. ಶಿರಾಡಿಘಾಟ್‌ ಮತ್ತು ಚಾರ್ಮಾಡಿ ಘಾಟ್‌ಗಳಲ್ಲಿ ಯಾವುದೇ ಕಾಮಗಾರಿಗಳನ್ನು ಕೈಗೊಳ್ಳಬಾರದು. ಶಿರಾಡಿಘಾಟ್‌ನಲ್ಲಿ ಸುರಂಗ ಮತ್ತು ರಸ್ತೆ ವಿಸ್ತರಣೆಯಂತಹ ಯೋಜನೆಗಳನ್ನು ನಿಸರ್ಗದ ಮೇಲೆ ಅಪಾರ ಪರಿಣಾಮಗಳು ಬೀರಲಿವೆ.
–ಪ್ರೊ.ಟಿ.ವಿ. ರಾಮಚಂದ್ರ, ಪ್ರಾಧ್ಯಾಪಕ, ಐಐಎಸ್‌ಸಿ

***

‘ಸುಸ್ಥಿರ ಅಭಿವೃದ್ಧಿ ಅಗತ್ಯ’
ಯಲ್ಲಾಪುರ ತಾಲ್ಲೂಕಿನ ಕಳಚೆ, ಕೊಡಗು, ಚಿಕ್ಕಮಗಳೂರು ಸೇರಿದಂತೆ ಪಶ್ಚಿಮಘಟ್ಟದಲ್ಲಿ ಅವಘಡಗಳು ನಡೆಯುತ್ತಿವೆ. ಬೃಹತ್‌ ಯೋಜನೆಗಳನ್ನು ಅನುಷ್ಠಾನಗೊಳಿಸುವ ಮುನ್ನ ಎಚ್ಚರವಹಿಸಬೇಕು. ಅದರಲ್ಲೂ ಪಶ್ಚಿಮಘಟ್ಟದ ಸೂಕ್ಷ್ಮ ಪ್ರದೇಶಗಳನ್ನು ಸಂರಕ್ಷಿಸಲು ಸರ್ಕಾರ ಅತಿ ಹೆಚ್ಚು ಕಾಳಜಿ ವಹಿಸಬೇಕು. ಈಗಾಗಲೇ ‘ಮಲೆನಾಡು ಸುಸ್ಥಿರ ಅಭಿವೃದ್ಧಿ’ ಪ್ಯಾಕೇಜ್‌ ನೀಡಿ ಎಂದು ಮುಖ್ಯಮಂತ್ರಿ ಅವರಿಗೆ ಕೋರಿದ್ದೇವೆ. ಸರ್ಕಾರ ಭೂಮಿ ಬಳಕೆಯ ಬಗ್ಗೆ ಸ್ಪಷ್ಟವಾದ ನೀತಿ ರೂಪಿಸಬೇಕಾಗಿದೆ.
–ಅನಂತ ಹೆಗಡೆ ಅಶೀಸರ, ಕರ್ನಾಟಕ ಜೀವ ವೈವಿಧ್ಯ ಮಂಡಳಿ ಮಾಜಿ ಅಧ್ಯಕ್ಷ

***

ಜೋಶಿಮಠದ ಪರಿಸ್ಥಿತಿ ಇಲ್ಲಿಯೂ ಉದ್ಭವಿಸಬಹುದು
ಸುಮಾರು 15 ಕೋಟಿ ವರ್ಷಗಳಿಗೂ ಹಿಂದೆ ಉಗಮವಾಗಿದ್ದೆಂದು ಅಂದಾಜಿಸಲಾಗಿರುವ ಪಶ್ಚಿಮಘಟ್ಟ ಶ್ರೇಣಿಯು, ಹಿಮಾಲಯಕ್ಕೆ ಹೋಲಿಸಿದರೆ ಹಳೆಯದು ಮತ್ತು ಸ್ಥಿರವಾದದ್ದು. ಭೂತಳದಲ್ಲಿನ ಕುದಿಯುವ ಲಾವಾರಸ ಒಮ್ಮೆಲೆ ಹೊರಚಿಮ್ಮಿ ಪಶ್ಚಿಮದ ಸಮುದ್ರದಂಚಿಗೆ ಬಸಿದು ಗಟ್ಟಿಯಾದ ಪರ್ವತಶ್ರೇಣಿ ಈ ಸಹ್ಯಾದ್ರಿ. ಇಲ್ಲಿ ಆಳದಲ್ಲಿ ಗಟ್ಟಿಯಾದ ಗ್ರಾನೈಟ್ ಪದರಗಳಿವೆ. ಅದರ ಮೇಲ್ಮೈಯಲ್ಲಿ, ಬಸಾಲ್ಟ್ ವರ್ಗದ ಗುಂಡುಕಲ್ಲುಗಳು, ಸಡಿಲವಾದ ಜಂಬಿಟ್ಟಿಗೆ, ಮೆದುವಾದ ಸುಣ್ಣದಕಲ್ಲು ಇವೆಲ್ಲ ಮಿಶ್ರಣಗೊಂಡು ರೂಪಗೊಂಡ ಎರೆಮಣ್ಣಿದೆ. ಈ ಮೇಲ್ಮಣ್ಣು ಮಾತ್ರ ಬಹಳ ಸಡಿಲ.

ಇದರ ಮೇಲೆ ಆವರಿಸಿರಿರುವ ಕಾಡಿನ ಸಸ್ಯಲೋಕದ ಬೇರಿನಜಾಲ ಮತ್ತು ಜೀವಜನ್ಯ ವಸ್ತುಗಳು ಸೇರಿ ಸೃಷ್ಟಿಸುವ “ಹ್ಯೂಮಸ್” ಪದರ ಈ ಸಡಿಲಮಣ್ಣನ್ನು ಈವರೆಗೆ ಬೆಸೆದು ಗಟ್ಟಿಯಾಗಿ ಹಿಡಿದಿಟ್ಟಿವೆ. ಆದರೆ, ಅತ್ಯಗತ್ಯವಾದ ಈ ಕಾಡಿನ ಹಸಿರು ಹೊದಿಕೆಯು ನಾಶವಾದಂತೆಲ್ಲ ಮಣ್ಣು ಸವಕಳಿಯಾಗಿ, ಕಣಿವೆಯ ಪ್ರದೇಶದಲ್ಲಿ ಭೂ ಕುಸಿಯುವುದು ಸಹಜವಾಗುತ್ತದೆ. ಸಹ್ಯಾದ್ರಿಯ ಹೃದಯಭಾಗದ ಸುಮಾರು ಇಪ್ಪತ್ತರಷ್ಟು ಭಾಗವೇ ಅಪಾಯದಂಚಿಗೆ ಬಂದು ತಲುಪಿದೆ. ಈಗಲಾದರೂ, ವೈಜ್ಞಾನಿಕ ‘ಭೂಬಳಕೆ ನೀತಿ’ ಯೊಂದನ್ನು ಕಟ್ಟುನಿಟ್ಟಾಗಿ ಜಾರಿಗೆ ತರಲು ಸರ್ಕಾರ ಕ್ರಮ ಕೈಗೊಳ್ಳಬೇಕಿದೆ.
–ಡಾ. ಕೇಶವ ಎಚ್.ಕೊರ್ಸೆ, ಸಂರಕ್ಷಣಾ ಜೀವಶಾಸ್ತ್ರಜ್ಞ, ಶಿರಸಿ

(ಪೂರಕ ಮಾಹಿತಿ: ಸಚ್ಚಿದಾನಂದ ಕುರುಗುಂದ, ಗಣಪತಿ ಹೆಗಡೆ, ಜಾನೇಕೆರೆ ಆರ್. ಪರಮೇಶ್/ಕೆ.ಎಸ್.ಗಿರೀಶ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT