ಭಾನುವಾರ, 21 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಒಳನೋಟ | ನವೋದಯ ವಿದ್ಯಾಲಯ: ಅಸ್ಮಿತೆಗೆ ಆತಂಕ

Last Updated 18 ಮಾರ್ಚ್ 2023, 19:31 IST
ಅಕ್ಷರ ಗಾತ್ರ

ಬೆಂಗಳೂರು: ಅತ್ಯುತ್ತಮ ಪರಿಸರ, ಸುಸಜ್ಜಿತ ಕಟ್ಟಡ, ನುರಿತ ಬೋಧಕರು, ಉತ್ತಮ ಮೂಲಸೌಕರ್ಯ, ಗುಣಮಟ್ಟದ ಆಹಾರ, ಶಿಸ್ತುಬದ್ಧ ಕಲಿಕೆಗೆ ಹೆಸರಾಗಿದ್ದ ಜವಾಹರ್ ನವೋದಯ ವಿದ್ಯಾಲಯಗಳು ಇಂದು ಶಾಪಗ್ರಸ್ತವಾಗಿ, ಹಲವು ಸಮಸ್ಯೆಗಳ ತಾಣಗಳಾಗಿವೆ.

ಮಧ್ಯಪ್ರದೇಶ ಏಕಲವ್ಯ ಶಿಕ್ಷಣ ಸಂಸ್ಥೆಗೆ ಭೇಟಿ ನೀಡಿದ್ದ ಅಂದಿನ ಪ್ರಧಾನಿ ರಾಜೀವ್ ಗಾಂಧಿ ಅಲ್ಲಿನ ಸಮಗ್ರ ಶಿಕ್ಷಣಕ್ಕೆ ಮಾರುಹೋಗಿದ್ದರು. ಅಂತಹ ಶಾಲೆಗಳು ದೇಶದ ಪ್ರತಿ ಜಿಲ್ಲೆಯಲ್ಲೂ ಒಂದು ಇರಬೇಕು ಎಂಬ ಬಯಕೆಯ ಫಲವಾಗಿಯೇ 1986-87ನೇ ಸಾಲಿನಲ್ಲಿ ‘ಜವಾಹರ್ ನವೋದಯ ವಿದ್ಯಾಲಯ’ಗಳು ಜನ್ಮ ತಾಳಿದವು.

1976ರಲ್ಲಿ ಸಂವಿಧಾನಕ್ಕೆ ತಂದಿದ್ದ ತಿದ್ದುಪಡಿಯಿಂದಾಗಿ ಕೇಂದ್ರ ಸರ್ಕಾರಕ್ಕೂ ಶಿಕ್ಷಣ ನೀತಿ ರೂಪಿಸುವ ಅಧಿಕಾರ ದೊರೆತಿತ್ತು. ತಾವು ಕಲಿತಿದ್ದ ‘ಡೂನ್‌ ಸ್ಕೂಲ್‌’ ಮಾದರಿಯಲ್ಲೇ ನವೋದಯ ಶಾಲೆಯ ಶಿಕ್ಷಣ ಇರುವಂತೆ ಯೋಜನೆ ಸಿದ್ಧಪಡಿಸಲು ಸೂಚಿಸಿದ್ದ ಅವರು, 1986ರಲ್ಲಿ ರೂಪಿಸಿದ್ದ ರಾಷ್ಟ್ರೀಯ ಶಿಕ್ಷಣ ನೀತಿಯಲ್ಲೂ ನವೋದಯ ಪರಿಕಲ್ಪನೆ ಅಳವಡಿಸಿದ್ದರು. ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯದ ಅಧೀನದಲ್ಲಿ ಜವಾಹರ್ ನವೋದಯ ವಿದ್ಯಾಲಯಗಳು ಆರಂಭವಾಗಿದ್ದವು.

ಪ್ರತಿಷ್ಠಿತ ಕಾನ್ವೆಂಟ್‌ ಶಾಲೆಗಳ ಕೇಂದ್ರ ಪಠ್ಯಕ್ರಮದ ಸಮಗ್ರ ಶಿಕ್ಷಣ ಗ್ರಾಮೀಣ ಪ್ರದೇಶದ ಬಡ, ಮಧ್ಯಮ ವರ್ಗದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಉಚಿತವಾಗಿ ಲಭಿಸಲಿ ಎನ್ನುವ ದೂರದೃಷ್ಟಿ ಇಟ್ಟುಕೊಂಡು 6ರಿಂದ 12ನೇ ತರಗತಿಯವರೆಗೆ ನವೋದಯ ವಿದ್ಯಾಲಯಗಳನ್ನು ಆರಂಭಿಸಲಾಗಿತ್ತು. 2022-23 ಶೈಕ್ಷಣಿಕ ಅಧಿವೇಶನದ ಕೊನೆಯಲ್ಲಿ 2,87,568 ವಿದ್ಯಾರ್ಥಿಗಳು ನವೋದಯ ವಿದ್ಯಾಲಯಗಳಲ್ಲಿ ಕಲಿಯುತ್ತಿದ್ದಾರೆ. ಗ್ರಾಮೀಣ ವಿದ್ಯಾರ್ಥಿಗಳಿಗೆ, ವಿಶೇಷವಾಗಿ ಬಾಲಕಿಯರಿಗೆ, ಪರಿಶಿಷ್ಟ ವಿದ್ಯಾರ್ಥಿಗಳಿಗೆ ಹೆಚ್ಚಿನ ಅವಕಾಶ ದೊರೆಯುತ್ತಿದೆ. ಆದರೆ ಇಂದು ಈ ವಿದ್ಯಾಲಯಗಳು ಹಲವು ಸಮಸ್ಯೆಗಳ ಕೂಪವಾಗಿವೆ.

‘ಜವಾಹರ’ ಹೆಸರಿನ ಕಾರಣದಿಂದಲೂ ಇದನ್ನು ಮೂಲೆಗುಂಪಾಗಿಸುವ ಯತ್ನ ನಡೆಯುತ್ತಿದೆ ಎನ್ನುವ ಆರೋಪಗಳಿವೆ.

ಕಳೆದ ಏಳೆಂಟು ವರ್ಷಗಳಿಂದ ಅನುದಾನದ ಕೊರತೆ ಎದುರಾಗಿದೆ. ಕಟ್ಟಡಗಳ ದುರಸ್ತಿ, ಶುದ್ಧ ನೀರಿನ ಘಟಕಗಳ ಬದಲಾವಣೆಗೂ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಬಹುತೇಕ ಅನುಭವಿ ಶಿಕ್ಷಕರು ನಿವೃತ್ತರಾಗಿದ್ದಾರೆ. ಹೊಸ ನೇಮಕಾತಿ ವರ್ಷಗಳ ಕಾಲ ಆಗಲಿಲ್ಲ. ಈಗ ಒಂದಷ್ಟು ನೇಮಕಾತಿ ಪ್ರಕ್ರಿಯೆಗಳು ಆರಂಭವಾಗಿವೆ. ಇದು ಎಂದು ಮುಗಿಯುತ್ತದೆ ಎನ್ನುವುದು ಸ್ಪಷ್ಟವಾಗಿಲ್ಲ.

ಉಪಾಹಾರ, ಊಟ, ಪಾದರಕ್ಷೆ, ಸಮವಸ್ತ್ರ, ಸೋಪು ಸೇರಿದಂತೆ ಇತರೆ ಎಲ್ಲ ವೆಚ್ಚಗಳಿಗಾಗಿ ನವೋದಯ ಶಾಲೆಯ ಪ್ರತಿ ವಿದ್ಯಾರ್ಥಿಗೆ ₹ 40 ಸಾವಿರದಷ್ಟು ವಾರ್ಷಿಕವಾಗಿ ಖರ್ಚು ಮಾಡಲಾಗುತ್ತಿದೆ. ಅದಕ್ಕಾಗಿ ಸುಮಾರು ₹ 1 ಸಾವಿರ ಕೋಟಿ ಅನುದಾನ ನೀಡಲಾಗುತ್ತಿದೆ. ಕಳೆದ ಮೂರು ವರ್ಷಗಳಿಂದ ಕೇಂದ್ರ ಸರ್ಕಾರ ನೀಡುವ ಅನುದಾನ ₹ 800 ಕೋಟಿಗಿಂತಲೂ ಕಡಿಮೆಯಾಗಿದೆ. ಇದು ಶಾಲೆಯ ಅಭಿವೃದ್ಧಿ ಮತ್ತು ಆಡಳಿತಕ್ಕೆ ಹೊಡೆತ ನೀಡಿದೆ.

ಈಡೇರದ ಶಿಕ್ಷಕರ ಪಿಂಚಣಿ ಬೇಡಿಕೆ: ಕೇಂದ್ರೀಯ ವಿದ್ಯಾಲಯಗಳ ಶಿಕ್ಷಕರು ಪಿಂಚಣಿ ಸೌಲಭ್ಯ ಪಡೆಯುತ್ತಿದ್ದರೂ, ನವೋದಯ ಶಾಲೆಯ ನಿವೃತ್ತ ಶಿಕ್ಷಕರನ್ನು ಕೇಂದ್ರ ಸರ್ಕಾರ ಇದುವರೆಗೂ ಪಿಂಚಣಿ ಯೋಜನೆ ವ್ಯಾಪ್ತಿಗೆ ಒಳಪಡಿಸಿಲ್ಲ.

‘ಕೇಂದ್ರೀಯ ವಿದ್ಯಾಲಯದ ಶಿಕ್ಷಕರು ಮಕ್ಕಳಿಗೆ ಪಾಠವನ್ನಷ್ಟೇ ಮಾಡುತ್ತಾರೆ. ನವೋದಯ ಶಾಲೆಯ ಶಿಕ್ಷಕರಿಗೆ ಪಾಠದ ಜತೆ ಅವರನ್ನು ಸಾಕುವ ಜವಾಬ್ದಾರಿಯೂ ಇದೆ. 11 ವರ್ಷಕ್ಕೆ ಶಾಲೆಗೆ ಪ್ರವೇಶ ಪಡೆಯುವ ಮಕ್ಕಳನ್ನು 18 ವರ್ಷ ತುಂಬುವತನಕ ಸಲಹುವ ಹೊಣೆಗಾರಿಕೆ ವಸತಿಶಾಲೆಯಲ್ಲಿ ಕಾರ್ಯನಿರ್ವಹಿಸುವ ಎಲ್ಲ ಶಿಕ್ಷಕರ ಮೇಲಿದೆ. ಆದರೆ, ಎರಡೂ ಶಾಲೆಗಳ ಶಿಕ್ಷಕರಿಗೆ ವೇತನ ಶ್ರೇಣಿ ಒಂದೇ ಇದೆ. ಜತೆಗೆ, ಕೇಂದ್ರೀಯ ವಿದ್ಯಾಲಯದ ಶಿಕ್ಷಕರು ನಿವೃತ್ತಿ ನಂತರ ಪಿಂಚಣಿ ಪಡೆಯುತ್ತಿದ್ದಾರೆ. ನವೋದಯ ಶಿಕ್ಷಕರಿಗೆ ಆ ಸೌಲಭ್ಯ ದೊರೆಯುತ್ತಿಲ್ಲ’ ಎನ್ನುತ್ತಾರೆ ನವೋದಯ ವಿದ್ಯಾಲಯದ ನಿವೃತ್ತ ಶಿಕ್ಷಕ ಛಾಯನಾಥ್‌.

ಕರ್ನಾಟಕದಲ್ಲಿಯೂ 34 ನವೋದಯ ವಿದ್ಯಾಲಯಗಳಿವೆ. ಹೊರ ರಾಜ್ಯದ ಪ್ರತಿಭಾವಂತ ಶಿಕ್ಷಕರು ರಾಜ್ಯದ ನವೋದಯ ಶಾಲೆಗಳಿಗೆ ನೇಮಕ ಆದರೂ, ಬಂದ ಸ್ವಲ್ಪ ದಿನಗಳಲ್ಲೇ ತಮ್ಮ ರಾಜ್ಯಗಳಿಗೆ ವರ್ಗಾವಣೆ ಮಾಡಿಸಿಕೊಳ್ಳುತ್ತಾರೆ. ಹಲವು ವಿದ್ಯಾಲಯಗಳು ಪಾಠಗಳಿಗೆ ಸ್ಥಳೀಯ ಹೊರಗುತ್ತಿಗೆ ಶಿಕ್ಷಕರನ್ನು ಅವಲಂಬಿಸಿವೆ.

ಸರ್ಕಾರಿ ಶಾಲೆಯಲ್ಲಿ ದಾಖಲಾತಿ, ಪ್ರತಿಷ್ಠಿತ ಸಂಸ್ಥೆಗಳಲ್ಲಿ ತರಬೇತಿ: ಗ್ರಾಮೀಣ ಪ್ರದೇಶದ ಪ್ರತಿಭಾವಂತ ಮಕ್ಕಳಿಗೆ ಉತ್ತಮ ಗುಣಮಟ್ಟದ ಆಧುನಿಕ ಶಿಕ್ಷಣ ನೀಡುವ ಉದ್ದೇಶದಿಂದ ನವೋದಯ ವಿದ್ಯಾಲಯಗಳನ್ನು ಸ್ಥಾಪಿಸಲಾಗಿದೆ. ನವೋದಯ ಶಾಲೆಯ ಶೇ 75ರಷ್ಟು ಸೀಟುಗಳು ಗ್ರಾಮೀಣ ವಿದ್ಯಾರ್ಥಿಗಳಿಗೆ ಮೀಸಲಾಗಿವೆ. ಈ ಮೀಸಲಾತಿಯ ಸೌಲಭ್ಯ ಪಡೆಯುವ ಮಕ್ಕಳು ಗ್ರಾಮೀಣ ಪ್ರದೇಶದ ಶಾಲೆಗಳಲ್ಲಿ 5ನೇ ತರಗತಿಯವರೆಗೆ ಓದಿರಬೇಕು. ಹಲವು ಪೋಷಕರು ಮಕ್ಕಳನ್ನು ಗ್ರಾಮೀಣ ಪ್ರದೇಶದ ಶಾಲೆಗಳಲ್ಲಿ ದಾಖಲು ಮಾಡುತ್ತಾರೆ. ಅಲ್ಲಿ ಶಾಲೆಗೆ ಹೋಗದಿದ್ದರೂ ಹಾಜರಾತಿ ದೊರೆಯುತ್ತದೆ. ನಂತರ ನಗರಗಳ ಪ್ರತಿಷ್ಠಿತ ಶಾಲೆಗಳಲ್ಲಿ ಓದಿಸುತ್ತಾ, ನವೋದಯ ಪ್ರವೇಶ ಪರೀಕ್ಷೆಗೆ ತರಬೇತಿ ಕೊಡಿಸುತ್ತಾರೆ. ಹೀಗೆ ತರಬೇತಿ ಪಡೆದ ಮಕ್ಕಳು ಗ್ರಾಮೀಣ ಕೋಟಾದ ಅಡಿ ಆಯ್ಕೆಯಾಗುತ್ತಾ ಬಂದಿದ್ದಾರೆ. ಗ್ರಾಮೀಣ ಮಕ್ಕಳ ಹೆಸರಲ್ಲಿ ನಗರ ಪ್ರದೇಶಗಳ ಮಕ್ಕಳು ಲಾಭ ಪಡೆಯುತ್ತಿದ್ದಾರೆ.

ಮೂಲಸೌಕರ್ಯ ಕೊರತೆ, ಕಳಪೆ ಊಟ: ಉತ್ತರ ಕರ್ನಾಟಕದ ಬಹುತೇಕ ಜಿಲ್ಲೆಗಳ ಜವಾಹರ ನವೋದಯ ವಿದ್ಯಾಲಯಗಳು ಮೂಲಸೌಕರ್ಯ, ಸ್ವಚ್ಛತೆಯ ಕೊರತೆ ಎದುರಿಸುತ್ತಿವೆ. ಉತ್ತಮ ಊಟ, ವಾತಾವರಣವಿಲ್ಲದೇ ವಿದ್ಯಾರ್ಥಿಗಳು ರೋಸಿ ಹೋಗಿದ್ದಾರೆ.

ಯಾದಗಿರಿ ಜಿಲ್ಲೆಯ ಶಹಾಪುರ ತಾಲ್ಲೂಕಿನ ಹೊತಪೇಟ ನವೋದಯ ವಿದ್ಯಾಲಯ, ಕೊಪ್ಪಳ ಜಿಲ್ಲೆಯ ಕುಕನೂರು, ಬೀದರ್ ಜಿಲ್ಲೆಯ ಬಸವಕಲ್ಯಾಣ ತಾಲ್ಲೂಕಿನ ನಾರಾಯಣಪುರ ಮತ್ತಿತರ ಕಡೆ ಸ್ವಚ್ಛತೆ ಹಾಗೂ ನೀರಿನ ಕೊರತೆಯಿಂದ ಗಿಡಗಳು ಬಾಡಿವೆ. ಕಟ್ಟಡ ಶಿಥಿಲಾವಸ್ಥೆ ತಲುಪಿದೆ. ಹಳೆಯ ಶೌಚಾಲಯಗಳು ದುರಸ್ತಿ ಕಂಡಿಲ್ಲ. ನೀರು ಕುಡಿಯಲು ಯೋಗ್ಯವಿಲ್ಲ. ವಿದ್ಯಾರ್ಥಿ ವಸತಿ ಗೃಹಗಳ ಕಿಟಕಿ ಬಾಗಿಲು ಹಾಳಾಗಿವೆ. ಜಾಲರಿ ಇರದ ಕಾರಣ ಸೊಳ್ಳೆಗಳ ಹಾವಳಿ ಇದೆ. ಸ್ನಾನಕ್ಕೆ ಬಿಸಿನೀರಿನ ವ್ಯವಸ್ಥೆ ಇಲ್ಲ. ‘ವಿದ್ಯಾಲಯದಲ್ಲಿ ಚಳಿಗಾಲದಲ್ಲಿ ಬಿಸಿ ನೀರಿನ ಸಮಸ್ಯೆ ಇತ್ತು. ಮೇಲಧಿಕಾರಿಗೆ ತಿಳಿಸಲಾಗಿದೆ’ ಎಂದು ಹೋತಪೇಟ ನವೋದಯ ವಿದ್ಯಾಲಯದ ಪ್ರಾಚಾರ್ಯ ಜಿ.ಗೋವಿಂದರಾಜ್ ತಿಳಿಸಿದರು.

ಕ್ಯಾಂಪಸ್‌ನಲ್ಲೂ ಗುಟಕಾ, ಸಿಗರೇಟು!
ಶಿವಮೊಗ್ಗದ ಗಾಜನೂರಿನಲ್ಲಿರುವ ನವೋದಯ ವಿದ್ಯಾಲಯದಲ್ಲಿ 11 ಹಾಗೂ 12ನೇ ತರಗತಿ ವಿದ್ಯಾರ್ಥಿಗಳು, ಗುಟಕಾ, ಸಿಗರೇಟು ಸೇದುವುದು ಪತ್ತೆಯಾಗಿತ್ತು. ಈ ವಿಷಯವನ್ನು ಶಿಕ್ಷಕರ ಗಮನಕ್ಕೆ ತಂದಿದ್ದ ನಾಲ್ವರು 8ನೇ ತರಗತಿ ವಿದ್ಯಾರ್ಥಿಗಳನ್ನು ಹಿರಿಯ ವಿದ್ಯಾರ್ಥಿಗಳು ಥಳಿಸಿದ್ದರು. ಇದು ದೊಡ್ಡ ವಿಷಯವಾಗಿ ಪೋಷಕರು ಅಲ್ಲಿನ ಅವ್ಯವಸ್ಥೆ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದರು.

‘ವಿದ್ಯಾಲಯದಲ್ಲಿ ಗುಟಕಾ, ಸಿಗರೇಟು ಸಿಕ್ಕಿತ್ತು. ಕೆಲ ವಿದ್ಯಾರ್ಥಿಗಳು ಊರಿಗೆ ಹೋದಾಗ ಹೆಚ್ಚಿನ ಗುಟಕಾ, ಸಿಗರೇಟು ತಂದು ಸಂಗ್ರಹ ಮಾಡಿಕೊಳ್ಳುತ್ತಿದ್ದರು. ಗಮನಕ್ಕೆ ತಂದ ವಿದ್ಯಾರ್ಥಿಗಳ ಮೇಲೆ ಹಲ್ಲೆಯನ್ನೂ ಮಾಡಿದ್ದರು’ ಎಂದು ಹೆಸರು ಹೇಳಲು ಇಚ್ಛಿಸದ ಪಾಲಕರೊಬ್ಬರು ಹೇಳಿದರು.

ಹಲ್ಲೆ ನಡೆಸಿದ ಹಾಗೂ ಹಲ್ಲೆಗೆ ಒಳಗಾದ ಪಾಲಕರನ್ನು ಕರೆಸಿ ?... ಬುದ್ಧಿವಾದ ಹೇಳಿದ್ದರು. ವಿದ್ಯಾರ್ಥಿಗಳಿಂದ ಮುಚ್ಚಳಿಕೆ ಬರೆಯಿಸಿಕೊಳ್ಳಲಾಗಿತ್ತು. ಈಗ ವಿದ್ಯಾಲಯದಲ್ಲಿ ಉತ್ತಮ ವಾತಾವರಣ ಇದೆ ಎಂದರು.

ಕೆಲ ವಿದ್ಯಾರ್ಥಿಗಳಿಗೆ ಶಿಕ್ಷಕರು ಗಮನ ಕೊಡದೇ ತಾರತಮ್ಯ ಮಾಡುತ್ತಿದ್ದರು. ಇದನ್ನು ಪಾಲಕರು, ಶಿಕ್ಷಕರ ಸಭೆಯಲ್ಲಿ ವಿಷಯ ಗಮನಕ್ಕೆ ತಂದಿದ್ದ ವಿದ್ಯಾರ್ಥಿಯ ಜೊತೆ ಸೇರದಂತೆ ನಿರ್ಬಂಧ ಹೇರಿದ್ದರು. ಇದೂ ಸಹ ಸುದ್ದಿಯಾಗಿತ್ತು. ಈ ಘಟನೆಯ ಬಳಿಕ ಅಂದಿನ ಜಿಲ್ಲಾಧಿಕಾರಿಗಳು, ಅಧಿಕಾರಿಗಳು ಮತ್ತು ಪಾಲಕರ ಸಭೆ ನಡೆಸಿ ಇನ್ನು ಮುಂದೆ ಯಾವುದೇ ಸಮಸ್ಯೆ ಆಗದಂತೆ ನೋಡಿಕೊಳ್ಳುವಂತೆ ಹೆಚ್ಚುವರಿ ಜಿಲ್ಲಾಧಿಕಾರಿಗೆ ಸೂಚಿಸಿದ್ದರು.

11 ಮತ್ತು 12ನೇ ತರಗತಿಗೆ ನಿರಾಸಕ್ತಿ
ಒಂದು ಕಾಲದಲ್ಲಿ ಕೇಂದ್ರ ಪಠ್ಯಕ್ರಮದ ಇತರೆ ಶಾಲೆಗಳ ವಿದ್ಯಾರ್ಥಿಗಳಿಗಿಂತ ಸಾಕಷ್ಟು ಪ್ರತಿಭಾವಂತರನ್ನು ನೀಡಿದ್ದ ನವೋದಯ ಶಾಲೆಗಳು ಬದಲಾದ ಕಾಲಘಟ್ಟಕ್ಕೆ ತಕ್ಕಂತೆ ಶಿಕ್ಷಣ ಸ್ವರೂಪವನ್ನು ಬದಲಾಯಿಸಿಕೊಂಡಿಲ್ಲ.

ಸಾಂಸ್ಕೃತಿಕ ಏಕತೆ, ಸಮಗ್ರತೆ, ಗ್ರಾಮೀಣ ಅಸ್ಮಿತೆ ಮೈಗೂಡಿಸಿಕೊಂಡಿದ್ದ ನವೋದಯ ವಿದ್ಯಾರ್ಥಿಗಳು ಪಠ್ಯ ಹಾಗೂ ಪಠ್ಯೇತರ ಚಟುವಟಿಕೆಗಳಲ್ಲಿ ಪೈಪೋಟಿ ನೀಡುತ್ತಿದ್ದರು. ಸ್ಪರ್ಧಾತ್ಮಕ ಯುಗದಲ್ಲಿ ಸುಸಜ್ಜಿತ ಕೇಂದ್ರಗಳಲ್ಲಿ ನೀಟ್‌, ಸಿಇಟಿ ತರಬೇತಿ ಪಡೆದವರೇ ಹೆಚ್ಚಿನ ಸಂಖ್ಯೆಯಲ್ಲಿ ವೈದ್ಯಕೀಯ, ಎಂಜಿನಿಯರಿಂಗ್‌ ಪ್ರವೇಶ ಪಡೆಯುತ್ತಿದ್ದಾರೆ. ನವೋದಯ ವಿದ್ಯಾರ್ಥಿಗಳು ಹಿಂದುಳಿದಿದ್ದಾರೆ.

ಈ ಕಾರಣಕ್ಕಾಗಿ ನವೋದಯ ಶಾಲೆಯಲ್ಲಿ ಕಲಿಯುತ್ತಿರುವ ಬಹುತೇಕ ವಿದ್ಯಾರ್ಥಿಗಳು 10ನೇ ತರಗತಿ ಮುಗಿದ ನಂತರ ಹೊರಹೋಗುತ್ತಿದ್ದಾರೆ. ನೀಟ್‌, ಸಿಇಟಿ, ಐಐಟಿ ತರಬೇತಿ ಒಳಗೊಂಡ ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ದಾಖಲಾಗುತ್ತಿದ್ದಾರೆ. ಕೇಂದ್ರ ಸರ್ಕಾರ 11 ಮತ್ತು 12ನೇ ತರಗತಿಯಲ್ಲೂ ಸ್ಪರ್ಧಾತ್ಮಕ ಸ್ವರೂಪದ ಶಿಕ್ಷಣ ನೀಡುವತ್ತ ಗಮನ ಹರಿಸಬೇಕು ಎನ್ನುತ್ತಾರೆ ಮಂಡ್ಯ ಜಿಲ್ಲೆ ನವೋದಯ ಶಾಲೆಯ ಪ್ರಥಮ ಬ್ಯಾಚ್‌ ವಿದ್ಯಾರ್ಥಿ ಡಾ.ರಾಜಶೇಖರ್ ಜಕಾ.

ನವೋದಯ ನಿರ್ಲಕ್ಷಿಸಿಲ್ಲ: ಕೇಂದ್ರ ಸಚಿವೆ ಅನ್ನಪೂರ್ಣಾದೇವಿ
‘ನವೋದಯ ವಿದ್ಯಾಲಯಗಳನ್ನು ಆರಂಭಿಸುವುದು ನಿರಂತರ ಪ್ರಕ್ರಿಯೆ. ಇದಕ್ಕಾಗಿ ಆಯಾ ರಾಜ್ಯ ಸರ್ಕಾರಗಳು ಪ್ರಸ್ತಾವನೆ ಸಲ್ಲಿಸಬೇಕು. ಕಟ್ಟಡ ನಿರ್ಮಾಣಕ್ಕೆ ಅಗತ್ಯ ಭೂಮಿಯನ್ನು ಉಚಿತವಾಗಿ ನೀಡಬೇಕು’ ಎಂದು ಕೇಂದ್ರ ಶಿಕ್ಷಣ ಖಾತೆಯ ರಾಜ್ಯ ಸಚಿವೆ ಅನ್ನಪೂರ್ಣಾ ದೇವಿ ಹೇಳಿದರು.

‘ಪ್ರತಿಯೊಂದು ವಿದ್ಯಾಲಯದಲ್ಲೂ ಪ್ರತಿವರ್ಷ ಆರನೇ ತರಗತಿಗೆ ಗರಿಷ್ಠ 80 ವಿದ್ಯಾರ್ಥಿಗಳ ಸೇರ್ಪಡೆಗೆ ಅವಕಾಶ ಇದೆ. 6ನೇ ತರಗತಿಗೆ 2020-21ರಲ್ಲಿ 45,291, 2021-22ರಲ್ಲಿ 46,430 ಹಾಗೂ 2022-23ರಲ್ಲಿ 46,714 ವಿದ್ಯಾರ್ಥಿಗಳ ದಾಖಲಾತಿ ಮಾಡಲಾಗಿದೆ. ವಿದ್ಯಾಲಯಗಳಿಗೆ ಅಗತ್ಯ ಮೂಲಸೌಕರ್ಯ ಹಾಗೂ ಶಿಕ್ಷಕರನ್ನು ಕೇಂದ್ರ ಸರ್ಕಾರ ಒದಗಿಸುತ್ತಿದೆ’ ಎಂದರು. ‘ವಿದ್ಯಾಲಯದಲ್ಲಿ ವಸತಿ ಕೊರತೆ ಇದ್ದರೆ ಆರನೇ ತರಗತಿಗೆ ವಿದ್ಯಾರ್ಥಿಗಳ ಸೇರ್ಪಡೆ ನಿರ್ಬಂಧಿಸಲಾಗುತ್ತದೆ. ಕೋಲಾರದ ನವೋದಯ ವಿದ್ಯಾಲಯದಲ್ಲಿ ನಿರ್ಮಾಣ ಚಟುವಟಿಕೆ ಕಾರಣ ಆರನೇ ತರಗತಿಗೆ 40 ವಿದ್ಯಾರ್ಥಿಗಳನ್ನಷ್ಟೇ ದಾಖಲಾತಿ ಮಾಡಿಕೊಳ್ಳಲಾಗಿದೆ’ ಎಂದು ಮಾಹಿತಿ ನೀಡಿದರು.

ಸರ್ವರ್‌ ಸಮಸ್ಯೆ, ಆಧಾರ್‌ ಮಿಸ್‌ಮ್ಯಾಚ್‌
ನವೋದಯ ವಿದ್ಯಾಲಯ ಸಮಿತಿ 2023-24ರ ಶೈಕ್ಷಣಿಕ ಅವಧಿಗೆ ಆಹ್ವಾನಿಸಿದ ಅರ್ಜಿಗಳನ್ನು ಸಲ್ಲಿಸುವ ಪ್ರಕ್ರಿಯೆಗೆ ಸಂಬಂಧಿಸಿದಂತೆ ವೆಬ್‌ಸೈಟ್‌ನಲ್ಲಿ ಉಂಟಾದ ತಾಂತ್ರಿಕ ಲೋಪದೋಷಗಳಿಂದ ವಿದ್ಯಾರ್ಥಿಗಳು, ಪಾಲಕರು ಸಾಕಷ್ಟು ತೊಂದರೆ ಅನುಭವಿಸಿದರು.

‘ಅಗತ್ಯ ದಾಖಲೆಗಳೊಂದಿಗೆ ಆನ್‌ಲೈನ್‌ ಮೂಲಕ ಅರ್ಜಿಯನ್ನು ಸಲ್ಲಿಸಲು ಶಾಲಾ ವೆಬ್‌ಸೈಟ್‌ನಲ್ಲಿ ತಾಂತ್ರಿಕ ಸಮಸ್ಯೆ ಸಾಮಾನ್ಯವಾಗಿದೆ. ಇದರಿಂದ ಪೋಷಕರು ಸಾಕಷ್ಟು ಸಮಸ್ಯೆ ಎದುರಿಸುತ್ತಾರೆ. ಆರನೇ ತರಗತಿಯ ಪ್ರವೇಶ ಪರೀಕ್ಷೆಗೆ ಅರ್ಜಿ ಸಲ್ಲಿಸುವ ನಿಯಮಾವಳಿಗಳ ಗೊಂದಲದಿಂದಾಗಿ ಪ್ರಸ್ತುತ ವರ್ಷ ಹಲವಾರು ವಿದ್ಯಾರ್ಥಿಗಳು ಪ್ರವೇಶ ಪರೀಕ್ಷೆಯಿಂದ ವಂಚಿತರಾಗಿದ್ದಾರೆ’ ಎಂದು ಹನಮಂತಪ್ಪ ಲಟ್ಟಿಮನಿ ಹೇಳಿದರು.

ಅರ್ಜಿ ಸಲ್ಲಿಸುವ ಸಮಯದಲ್ಲಿ ಆಧಾರ್ ನಂಬರ್ ಕಡ್ಡಾಯಗೊಳಿಸಲಾಗಿದೆ. ಆಧಾರ್ ಕಾರ್ಡ್‌ನಲ್ಲಿರುವ ಜಿಲ್ಲೆ ಹಾಗೂ ಪ್ರಸ್ತುತ ವಿದ್ಯಾರ್ಥಿ ಓದುತ್ತಿರುವ ಜಿಲ್ಲೆ ಒಂದೇ ಅಗಿರಬೇಕು. ಆಧಾರ್‌ನಲ್ಲಿ ಗದಗ ಜಿಲ್ಲೆ ನಮೂದಾಗಿದ್ದರೆ ಆ ವಿದ್ಯಾರ್ಥಿಯು ಗದಗಿನಲ್ಲಿ ಮಾತ್ರ ಅರ್ಜಿ ಸಲ್ಲಿಸಬೇಕು. ಗದುಗಿನ ವಿದ್ಯಾರ್ಥಿ ಕೊಪ್ಪಳದಲ್ಲಿ ಅರ್ಜಿ ಸಲ್ಲಿಸಿದರೆ ಅರ್ಜಿಯು ‘ಮಿಸ್ ಮ್ಯಾಚ್’ ಎಂದು ತಿರಸ್ಕೃತಗೊಳ್ಳುತ್ತದೆ. ಸರ್ಕಾರಿ ನೌಕರರು ಉದ್ಯೋಗ ನಿಮಿತ್ತ ಊರಿಂದ ಊರಿಗೆ, ಜಿಲ್ಲೆಯಿಂದ ಜಿಲ್ಲೆಗೆ ಹೋಗಬೇಕಾಗುತ್ತದೆ. ಇಂತಹ ಸಂದರ್ಭದಲ್ಲಿ ಆಧಾರ್ ಕಾರ್ಡ್‌ನಲ್ಲಿರುವ ಜಿಲ್ಲೆ ಹಾಗೂ ಉದ್ಯೋಗಿ ಕೆಲಸ ಮಾಡುವ ಜಿಲ್ಲೆ ಸಹಜವಾಗಿ ಬೇರೆ, ಬೇರೆಯಾಗಿರುತ್ತವೆ. ಇದೇ ಕಾರಣದಿಂದ ಬಹುತೇಕ ಅರ್ಜಿಗಳು ತಿರಸ್ಕೃತಗೊಂಡು, ಪ್ರವೇಶ ಪರೀಕ್ಷೆಯಿಂದ ವಂಚಿತರಾಗಿದ್ದಾರೆ ಎನ್ನುತ್ತಾರೆ ಉದ್ಯೋಗಿ ರಮೇಶ್.

ಚಾಮರಾಜನಗರ ಶಾಲೆಗೆ ಭಾರಿ ಬೇಡಿಕೆ: ಶೈಕ್ಷಣಿಕವಾಗಿ ಹಿಂದುಳಿದಿರುವ ಚಾಮರಾಜನಗರ ತಾಲ್ಲೂಕಿನ ಹೊಂಡರಬಾಳುವಿನಲ್ಲಿ ನವೋದಯ ವಿದ್ಯಾಲಯವಿದೆ. ಜಿಲ್ಲಾ ಕೇಂದ್ರದ ಸಮೀಪ ಕೇಂದ್ರೀಯ ವಿದ್ಯಾಲಯವೂ ಇದೆ. ‘ಕೇಂದ್ರೀಯ ವಿದ್ಯಾಲಯಕ್ಕೆ ಹೋಲಿಸಿದರೆ, ನವೋದಯ ಶಾಲೆಯಲ್ಲೇ ಚೆನ್ನಾಗಿ ಹೇಳಿಕೊಡುತ್ತಿದ್ದಾರೆ’ ಎನ್ನುತ್ತಾರೆ ಪೋಷಕರು. ಕೇಂದ್ರಿಯ ವಿದ್ಯಾಲಯದಲ್ಲಿ ಕಾಯಂ ಬೋಧಕರಿಲ್ಲದಿರುವುದರಿಂದ ಗುತ್ತಿಗೆ ಆಧಾರದಲ್ಲಿ ನೇಮಿಸಿಕೊಳ್ಳಲಾಗಿದೆ. ನವೋದಯ ಶಾಲೆಯಲ್ಲಿ ಕಾಯಂ ಶಿಕ್ಷಕರಿದ್ದಾರೆ. ಸ್ಮಾರ್ಟ್‌ಕ್ಲಾಸ್‌, ಅತ್ಯಾಧುನಿಕ ಪ್ರಯೋಗಾಲಯ ಸೇರಿದಂತೆ ಅತ್ಯಾಧುನಿಕ ತಂತ್ರಜ್ಞಾನ ಆಧಾರಿತ ಬೋಧನಾ ವ್ಯವಸ್ಥೆ ವಿದ್ಯಾಲಯಗಳಲ್ಲಿವೆ. ಹಾಗಾಗಿ ಪ್ರತಿ ವರ್ಷ ಎರಡು ಸಾವಿರ ಮಕ್ಕಳು ಪ್ರವೇಶ ಬಯಸಿ ಪರೀಕ್ಷೆ ಬರೆಯುತ್ತಾರೆ.

ನವೋದಯ ಅಂದು–ಇಂದು
ನಾನು ನವೋದಯ ಶಾಲೆ ಪ್ರವೇಶಿಸಿದ್ದು 1987-88 ನೇ ಸಾಲಿನಲ್ಲಿ. ಚಿತ್ರದುರ್ಗ ಜಿಲ್ಲೆಯ ಕತ್ರಾಳ್‌ನ ತೋಟಗಾರಿಕಾ ಇಲಾಖೆಗೆ ಸೇರಿದ ಒಂದು ಪುಟ್ಟ ತರಬೇತಿ ಸಂಸ್ಥೆಯ ಅವರಣದಲ್ಲಿ. ಅಂದು ಸುಮಾರು 56 ಸಹಪಾಠಿಗಳ ಜತೆ ನನ್ನ ನವೋದಯದ ಪ್ರಯಾಣ ಶುರುವಾಗಿತ್ತು. ಆಗ ನಮ್ಮ ನವೋದಯದಲ್ಲಿ ಕಟ್ಟಡಗಳಿರಲಿಲ್ಲ. ಆದರೆ, ಶಿಕ್ಷಕರು ಮತ್ತು ನಮ್ಮ ನಡುವೆ ಒಳ್ಳೆಯ ಬಾಂಧವ್ಯ ಬೆಳೆದಿತ್ತು. ಹೆಚ್ಚಿನ ಮಟ್ಟಿಗೆ ಹಳ್ಳಿಗಳಿಂದಲೇ ಬಂದಿದ್ದ ನಮಗೆ, ಹೆಚ್ಚಿನ ಶ್ರದ್ದಾ ಶಕ್ತಿಗಳಿಂದ ಕಲಿಸುತ್ತಿದ್ದ ಶಿಕ್ಷಕರಿದ್ದರು. ಹಗಲೂ ರಾತ್ರಿ ನಮ್ಮೊಂದಿಗೇ ಇದ್ದು ನಮ್ಮನ್ನು ತಿದ್ದಿ ತೀಡುತ್ತಿದ್ದ ಶಿಕ್ಷಕರು ನಮ್ಮ ವ್ಯಕ್ತಿತ್ವಗಳನ್ನು ಅವರಿಸಿರುತ್ತಿದ್ದರು. ನಾವು 9ನೇ ತರಗತಿಗೆ ಬರುವಷ್ಟರಲ್ಲಿ ಮಧ್ಯಪ್ರದೇಶದ ದೇವಾಸ್ ನವೋದಯದಿಂದ ಹೊಸ ಸ್ನೇಹಿತರು ಬಂದು, ನಮ್ಮ ಸ್ನೇಹಿತರು ಅಲ್ಲಿಗೆ ಹೋದರು.

ಹಿಂದಿಯಲ್ಲಿ ಮಾತಾಡುತ್ತಾ, ಹಿಂದಿ ಹಾಡುಗಳನ್ನು ಹಾಡುತ್ತಾ ನಮಗಿಂತಲೂ ಸ್ವಲ್ಪ ಭಿನ್ನ ಅನ್ನಿಸುವ ಆಚರಣೆಗಳನ್ನು ಹೊಂದಿದ್ದ ಅವರು ನಮ್ಮ ಆಚರಣೆಗಳನ್ನು, ಆಹಾರವನ್ನು, ಭಾಷೆಯನ್ನು ಒಗ್ಗಿಸಿಕೊಳ್ಳಲು ಪಡುತ್ತಿದ್ದ ಹರಸಾಹಸ ಈಗಲೂ ಕಣ್ಣಿಗೆ ಕಟ್ಟಿದಂತಿದೆ. ಅವರ ಹಬ್ಬಗಳನ್ನು ನಾವೂ ಆಚರಿಸಿ, ನಮ್ಮ ಹಬ್ಬಗಳಂದು ಅವರನ್ನೂ ನಮ್ಮ ಮನೆಗಳಿಗೆ ಕರೆದುಕೊಂಡು ಹೋಗಿ ಸಂಭ್ರಮಿಸಿದ್ದಿದೆ. ನಮ್ಮೊಳಗೆ ಕೌಶಲಗಳನ್ನು ತುಂಬಿ ಅಗಾಧವಾದ ಶಕ್ತಿಯ ಇರುವಿಕೆಯನ್ನು ಪರಿಚಯಿಸಿದ್ದು ನನ್ನ ನವೋದಯ. ನನ್ನ ಸಹಪಾಠಿಗಳೆಲ್ಲ ಎಲ್ಲ ರಂಗಗಳಲ್ಲಿ ಅತ್ಯುತ್ತಮ ಸಾಧನೆಮಾಡಿದವರಾಗಿ ಈಗ ಸಮಾಜಕ್ಕೆ ತಮ್ಮ ಕೊಡುಗೆ ನೀಡುವ ಮೂಲಕ ದೇಶದ ಪ್ರಬುದ್ಧ ಮಾನವ ಸಂಪನ್ಮೂಲಗಳಾಗಿರುವುದು ನನಗಂತೂ ಹೆಮ್ಮೆ.

ಈಗ ನವೋದಯಗಳಲ್ಲಿ ಒಳ್ಳೆಯ ಕಟ್ಟಡಗಳು, ಆಧುನಿಕ ವ್ಯವಸ್ಥೆಗಳು ಇವೆ. ಸಿಬಿಎಸ್‌ಇ 10ನೇ ಮತ್ತು 12ನೇ ತರಗತಿಗಳ ಪರೀಕ್ಷೆಯಲ್ಲಿ ದೇಶದಲ್ಲೇ ಅತ್ಯುತ್ತಮ ಫಲಿತಾಂಶ ಕೊಡುತ್ತಿವೆ. ಜಗತ್ತಿನಲ್ಲೇ ಅತೀ ದೊಡ್ಡ ಹಳೆಯ ವಿದ್ಯಾರ್ಥಿಗಳ ಸಂಘ ಹೊಂದಿರುವುದೂ ನವೋದಯಗಳ ಹಿರಿಯ ವಿದ್ಯಾರ್ಥಿಗಳೆ. ಆದರೂ ಮೊದಲಿನಂತೆ ಶಿಕ್ಷಕರ ಮತ್ತು ಮಕ್ಕಳ ನಡುವೆ ಬಾಂಧವ್ಯ ಉಳಿದಿಲ್ಲ ಎನ್ನುವುದು ಬೇಸರದ ಸಂಗತಿ.
–ಕಿರಣ್‌ಕುಮಾರ್ ಕೆ., ಮುಖ್ಯಸ್ಥರು, ಒಎಂಡಬ್ಲ್ಯೂಎಸ್‌, ಶಿವಮೊಗ್ಗ

***

ಆರಂಭದಲ್ಲಿ ಕಟ್ಟಡ ಸೇರಿದಂತೆ ಮೂಲಸೌಕರ್ಯಗಳೇ ಇರಲಿಲ್ಲ. ಅತ್ಯುತ್ತಮ ಶಿಕ್ಷಕರಿದ್ದರು. ಇಂದು ಕಟ್ಟಡ, ಸೌಕರ್ಯಗಳಿವೆ. ಆದರೆ, ಶಿಕ್ಷಕರು, ವಿದ್ಯಾರ್ಥಿಗಳಲ್ಲಿ ಬಾಂಧವ್ಯ ಇಲ್ಲ.
–ಡಾ.ರಾಜಶೇಖರ್ ಜಕಾ, ಅಧ್ಯಕ್ಷರು, ರಾಜ್ಯ ನವೋದಯ ಹಳೇ ವಿದ್ಯಾರ್ಥಿಗಳ ಸಂಘ

***
ಜವಾಹರ್‌ ನವೋದಯ ವಿದ್ಯಾಲಯಗಳನ್ನು ಸರ್ಕಾರ ನಿರ್ಲಕ್ಷ್ಯ ಮಾಡುತ್ತಿಲ್ಲ. ದೇಶದಲ್ಲಿ ಕಳೆದ ಮೂರು ವರ್ಷಗಳಲ್ಲಿ 14 ವಿದ್ಯಾಲಯಗಳನ್ನು ಆರಂಭಿಸಿರುವುದೇ ಇದಕ್ಕೆ ಸಾಕ್ಷಿ.
–ಅನ್ನಪೂರ್ಣಾ ದೇವಿ, ಕೇಂದ್ರ ಶಿಕ್ಷಣ ಖಾತೆಯ ರಾಜ್ಯ ಸಚಿವೆ

____________________________

ಸಹಕಾರ: ಮಂಜುನಾಥ್‌ ಹೆಬ್ಬಾರ್, ಸತೀಶ್‌ ಬೆಳ್ಳಕ್ಕಿ, ಆರ್‌.ಚಂದ್ರಶೇಖರ್, ರಾಹುಲ್‌ ಬೆಳಗಲಿ, ವಿ.ಸೂರ್ಯನಾರಾಯಣ,

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT