ಬೆಂಗಳೂರು: ‘ಕರ್ನಾಟಕದಲ್ಲಿ ಜಾಗತಿಕ ಹೂಡಿಕೆದಾರರ ಸಮಾವೇಶ ನಡೆದಾಗಲೆಲ್ಲಾ ಹತ್ತಾರು ಲಕ್ಷ ಕೋಟಿ ರೂಪಾಯಿ ಬಂಡವಾಳದ ಘೋಷಣೆ ಆಗುತ್ತದೆ. ಆದರೆ ವಾಸ್ತವದಲ್ಲಿ ಅಷ್ಟು ಹೂಡಿಕೆ ಆಗುವುದೇ ಇಲ್ಲ. ಹೂಡಿಕೆ ದಾರರ ಸಮಾವೇಶದ ಘೋಷಣೆಗಳಿಗೂ, ವಾಸ್ತವದ ಹೂಡಿಕೆಯ ಮೊತ್ತಕ್ಕೂ ತಾಳೆಯಾಗು ವುದೇ ಇಲ್ಲ. ಬಂಡವಾಳ ಆಕರ್ಷಣೆಯಲ್ಲಿ ಕರ್ನಾಟಕವು ಮುನ್ನಲೆಯಲ್ಲಿ ಇದೆಯಾದರೂ, ಲಭ್ಯ ವಿರುವ ಅವಕಾಶ ಗಳನ್ನು ಪೂರ್ಣ ಪ್ರಮಾಣದಲ್ಲಿ ಬಳಸಿಕೊಳ್ಳುತ್ತಿಲ್ಲ ಎಂಬುದು ಸತ್ಯ’ ಎನ್ನುತ್ತಾರೆ ಭಾರತೀಯ ವಾಣಿಜ್ಯೋದ್ಯಮ ಮಹಾಸಂಘದ (ಫಿಕ್ಕಿ) ಅಧ್ಯಕ್ಷ ಎಂ.ಜಿ.ಬಾಲಕೃಷ್ಣ.

ಸರ್ಕಾರದ ದತ್ತಾಂಶ ಮತ್ತು ವರದಿಗಳೂ ಸಹ ಎಂ.ಜಿ.ಬಾಲಕೃಷ್ಣ ಅವರ ಈ ಅಭಿಮತವನ್ನು ಪುಷ್ಟೀಕರಿಸು ತ್ತವೆ. ‘ಬಂಡವಾಳ ಆಕರ್ಷಣೆಯು ಯಾವುದೇ ಆರ್ಥಿಕತೆ ಉತ್ತಮ ಸ್ಥಿತಿಯಲ್ಲಿ ಇದೆ ಅಥವಾ ಪ್ರಗತಿಯ ಹಾದಿಯಲ್ಲಿ ಇದೆ ಎಂಬುದರ ಸೂಚಕ. ಎಲ್ಲ ರಾಜ್ಯಗಳು, ದೇಶಗಳು ಬಂಡವಾಳ ಆಕರ್ಷಣೆಗೆ ಸದಾ ಒತ್ತು ನೀಡುತ್ತವೆ. ಕರ್ನಾಟಕವೂ ಇದಕ್ಕೆ ಹೊರತಲ್ಲ’ ಎಂಬುದು ‘ಪ್ರಜಾವಾಣಿ’ ಜತೆಗೆ ಮಾತನಾಡಿದ ಬಹುತೇಕ ಉದ್ಯಮಿಗಳ ಅಭಿಪ್ರಾಯ.

ಬಂಡವಾಳ ಆಕರ್ಷಿಸಲೆಂದೇ ರಾಜ್ಯ ಸರ್ಕಾರವು ‘ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶ’ವನ್ನು ನಡೆಸಿಕೊಂಡು ಬರುತ್ತಿದೆ. 25 ವರ್ಷಗಳಲ್ಲಿ ರಾಜ್ಯವು ಒಟ್ಟು ಆರು ಹೂಡಿಕೆದಾರರ ಸಮಾವೇಶ ನಡೆಸಿದೆ. ಇದೇ ಫೆಬ್ರುವರಿಯಲ್ಲಿ ನಡೆದ ಆರನೇ ಸಮಾವೇಶವೂ ಸೇರಿ, ಒಟ್ಟು ₹34 ಲಕ್ಷ ಕೋಟಿಗೂ ಹೆಚ್ಚು ಮೊತ್ತದ ಹೂಡಿಕೆ ಘೋಷಣೆಗಳಾಗಿವೆ.

ಆದರೆ ವಾಸ್ತವದಲ್ಲಿ ಹೂಡಿಕೆಯಾಗಿರುವುದು ₹2 ಲಕ್ಷ ಕೋಟಿಗೂ ಕಡಿಮೆ. ಇದರಲ್ಲಿ ₹5 ಲಕ್ಷ ಕೋಟಿಯಷ್ಟು ಹೂಡಿಕೆಗಳು ಅನುಮೋದನೆ ಹಂತದಲ್ಲಿವೆ. ಈ ವರ್ಷ ಘೋಷಣೆಯಾಗಿದ್ದರಲ್ಲಿ ₹7.26 ಕೋಟಿ ಇನ್ನಷ್ಟೇ ಹೂಡಿಕೆ ಆಗಬೇಕಿದೆ.

ಎಸ್.ಎಂ ಕೃಷ್ಣ ಅವರು ಮುಖ್ಯಮಂತ್ರಿ ಆಗಿದ್ದಾಗ 2000ನೇ ಇಸವಿಯಲ್ಲಿ ಮೊದಲ ಹೂಡಿಕೆದಾರರ ಸಮಾವೇಶ ಆಯೋಜಿಸಲಾಗಿತ್ತು. ಸುದ್ದಿ ಪತ್ರಿಕೆಗಳಲ್ಲಿ ಹೆಚ್ಚು ಸದ್ದು ಮಾಡಿದ್ದ ಆ ಸಮಾವೇಶದಲ್ಲಿ ಒಟ್ಟು ₹27,057 ಕೋಟಿ ಹೂಡಿಕೆ ಘೋಷಣೆಯಾಗಿತ್ತು. ಹಲವು ವರ್ಷಗಳ ಅವಧಿಯಲ್ಲಿ ಆ ಘೋಷಣೆಗಳಲ್ಲಿ ಹೂಡಿಕೆಯಾಗಿದ್ದು ₹11,905 ಕೋಟಿ. ಆನಂತರ ನಡೆದ ಬಹುತೇಕ ಸಮಾವೇಶಗಳಲ್ಲಿ ಬೃಹತ್ ಮೊತ್ತದ ಹೂಡಿಕೆ ಘೋಷಣೆಯಾದರೆ, ವಾಸ್ತವದಲ್ಲಿ ಹೂಡಿಕೆ ಪ್ರಮಾಣ ಕಡಿಮೆ ಎನ್ನುತ್ತಿದೆ ಅಂಕಿ ಅಂಶಗಳು.

2000, 2010, 2012, 2016 ಮತ್ತು 2022ರ ಸಮಾವೇಶಗಳಲ್ಲಿ ಒಟ್ಟು ₹23.84 ಲಕ್ಷ ಕೋಟಿ ಬಂಡವಾಳ ಹೂಡಿಕೆಯ ಘೋಷಣೆಯಾಗಿತ್ತು. ಆದರೆ ಅದರಲ್ಲಿ ಈವರೆಗೆ ಹೂಡಿಕೆಯಾಗಿದ್ದು ₹1.89 ಲಕ್ಷ ಕೋಟಿ ಮಾತ್ರ ಎಂಬ ವಿವರನ್ನು ಹಿಂದಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೀಡಿದ್ದರು. ಒಟ್ಟು ಘೋಷಣೆಯಲ್ಲಿ, ಹೂಡಿಕೆಯಾದ ಪ್ರಮಾಣ ಶೇ 8ರಷ್ಟು ಮಾತ್ರ. ಶೇ 92ರಷ್ಟು ಘೋಷಣೆಗಳು, ಘೋಷಣೆಗಳಾಗೇ ಉಳಿದಿವೆ ಎಂಬುದನ್ನು ಸರ್ಕಾರದ ದಾಖಲೆ–ದತ್ತಾಂಶಗಳು ಹೇಳುತ್ತವೆ. ವಿಧಾನಸಭೆಯಲ್ಲಿ ಈ ಬಗ್ಗೆ ಕೇಳಿದ್ದ ಪ್ರಶ್ನೆಗೆ ಉತ್ತರಿಸಿದ್ದ ಬೃಹತ್ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ ಅವರು, ಘೋಷಣೆ ಮತ್ತು ಹೂಡಿಕೆಗಳ ದತ್ತಾಂಶವನ್ನು ಸದನದ ಮುಂದೆ ಇರಿಸಿದ್ದರು.

ಈ ಬಾರಿ ₹10 ಲಕ್ಷ ಕೋಟಿ ಘೋಷಣೆ

2025ರ ಫೆಬ್ರುವರಿಯಲ್ಲಿ ನಡೆದ 6ನೇ ಜಾಗತಿಕ ಹೂಡಿಕೆದಾರರ ಸಮಾವೇಶ ದಲ್ಲಿ ಒಟ್ಟು ₹10.27 ಲಕ್ಷ ಕೋಟಿಯಷ್ಟು ಹೂಡಿಕೆ ಘೋಷಣೆ ಗಳಾಗಿವೆ. ಇದರಲ್ಲಿ ಸುಮಾರು ₹7.26 ಲಕ್ಷ ಕೋಟಿಯಷ್ಟು ಘೋಷಣೆಗಳನ್ನು ವಾಸ್ತವೀಕರಿಸಬೇಕು ಎಂಬುದು ಬೃಹತ್ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ ಅವರ ಗುರಿ.

‘ಘೋಷಣೆ ಮತ್ತು ವಾಸ್ತವ ಹೂಡಿಕೆ ಮಧ್ಯೆ ಇಷ್ಟು ದೊಡ್ಡ ಮಟ್ಟದ ವ್ಯತ್ಯಾಸ ಕಾಣಲು ಸರ್ಕಾರದ ನೀತಿ ಮತ್ತು ಉದ್ಯಮಿಗಳ ಬೇಡಿಕೆ ನಡುವೆ ಹೊಂದಾಣಿಕೆ ಆಗದೇ ಇರುವುದೇ ಕಾರಣ. ಉದ್ಯಮಿಗಳು ಕಾರ್ಯಸಾಧುವಲ್ಲದ ಮತ್ತು ರಾಜ್ಯದ ಆರ್ಥಿಕತೆಗೆ ಅನುಕೂಲವಾಗದೇ ಇರುವಂತಹ ಬೇಡಿಕೆಗಳನ್ನು ಇಡುತ್ತಾರೆ. ಕೈಗಾರಿಕೆಗಳೇ ಇಲ್ಲದ ರಾಜ್ಯಗಳು ಅಂತಹ ಬೇಡಿಕೆಗಳನ್ನು ಒಪ್ಪುತ್ತವೆ. ಆದರೆ ಕರ್ನಾಟಕದಲ್ಲಿ ಹಾಗೆ ಮಾಡಲಾಗುವುದಿಲ್ಲ. ಇಲ್ಲಿ ಎಲ್ಲ ಸವಲತ್ತುಗಳು, ಸೌಕರ್ಯಗಳು ಇವೆ. ಭೂಮಿಗೂ ಹೆಚ್ಚಿನ ಮೌಲ್ಯವಿದೆ. ಹೀಗಾಗಿ ವಿಪರೀತ ಎನಿಸುವಷ್ಟು ವಿನಾಯತಿ ಮತ್ತು ರಿಯಾಯತಿಗಳನ್ನು ಕೊಡಲು ಸಾಧ್ಯವಿಲ್ಲ ಎಂದು ಎಂ.ಬಿ.ಪಾಟೀಲ ಅವರು ಈಗಾಗಲೇ ಸಾಕಷ್ಟು ಬಾರಿ ಹೇಳಿದ್ದಾರೆ. ಅದು ನಿಜವೂ ಹೌದು. ಉದ್ಯಮಿಗಳ ಎಲ್ಲ ಬೇಡಿಕೆಗಳಿಗೆ ಒಪ್ಪದೇ ಇದ್ದಾಗ, ಅವರು ಒಪ್ಪಂದ ರದ್ದುಪಡಿಸಿದ ಹಲವು ಉದಾಹರಣೆಗಳು ಇವೆ’ ಎಂಬುದು ಕೈಗಾರಿಕಾ ಇಲಾಖೆಯ ಉನ್ನತ ಅಧಿಕಾರಿಯೊಬ್ಬರ ಸ್ಪಷ್ಟನೆ.

‘ಈ 25 ವರ್ಷಗಳಲ್ಲಿ ರಾಜ್ಯದಲ್ಲಿ ಆಡಳಿತ ನಡೆಸಿ ಹೋದ ಮತ್ತು ಆಡಳಿತ ನಡೆಸುತ್ತಿರುವ ಪಕ್ಷ–ಸರ್ಕಾರಗಳಿಗೆ ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶ ಎಂಬುದು ಪ್ರತಿಷ್ಠೆಯ ವಿಷಯವೇ ಆಗಿದೆ. ಹೀಗಾಗಿ ಸಮಾವೇಶ ಆಯೋಜನೆಗೂ ಮುನ್ನ ದೇಶ–ದೇಶ ತಿರುಗಿ, ಹೂಡಿಕೆ ಸಾಧ್ಯತೆಗಳ ಬಗ್ಗೆ ಮಾತುಕತೆ ನಡೆಸಲಾಗುತ್ತದೆ. ಹೂಡಿಕೆದಾರರನ್ನು ಸಮಾವೇಶಕ್ಕೆ ಆಹ್ವಾನಿಸಲಾಗುತ್ತದೆ. ರಾಜ್ಯದಲ್ಲಿ ಹೂಡಿಕೆ ಮಾಡಬೇಕೇ ಎಂಬುದು ಆ ಮಾತುಕತೆಗಳಲ್ಲೇ ಅಂತಿಮವಾಗಿರುತ್ತದೆ. ಒಪ್ಪಂದ ಪತ್ರಗಳ ಹಸ್ತಾಂತರ, ಘೋಷಣೆ ಪ್ರಕ್ರಿಯೆಯನ್ನು ಸಮಾವೇಶಕ್ಕೆ ಉಳಿಸಿಕೊಳ್ಳಲಾಗಿರುತ್ತದೆ. ಆ ಹೂಡಿಕೆ ಒಪ್ಪಂದಗಳು ಸಮಾವೇಶದಲ್ಲಿ ಘೋಷಣೆಯಾಗುತ್ತವೆ’ ಎಂಬುದು ಇನ್ವೆಸ್ಟ್ ಕರ್ನಾಟಕ–2025ರಲ್ಲಿ ಸಕ್ರಿಯವಾಗಿ ಭಾಗಿಯಾಗಿದ್ದ ಅಧಿಕಾರಿಯೊಬ್ಬರು ನೀಡಿದ ವಿವರಣೆ.

ಸರ್ಕಾರಗಳು ಇಷ್ಟೇ ದತ್ತಾಂಶವನ್ನು ನೀಡಿದರೆ, ಘೋಷಣೆ ಮತ್ತು ವಾಸ್ತವಿಕ ಹೂಡಿಕೆ ಮಧ್ಯೆ ಬಹಳ ವ್ಯತ್ಯಾಸ ಇರುವುದಿಲ್ಲ. ಪ್ರತಿಷ್ಠೆಯ ಕಾರಣಕ್ಕೆ ಆಸಕ್ತಿ ತೋರಿದ ಕಂಪನಿಗಳ, ಹೂಡಿಕೆ ಮೊತ್ತವನ್ನೂ ಘೋಷಣೆಯಲ್ಲಿ ಸೇರಿಸಿಬಿಡುತ್ತವೆ. ಜನರನ್ನು ಹಾದಿತಪ್ಪಿಸುವುದು ಇದೇ ಘೋಷಣೆಗಳು. 2025ರ ಹೂಡಿಕೆದಾರರ ಸಮಾವೇಶವನ್ನೇ ಉದಾಹರಣೆಗೆ ತೆಗೆದುಕೊಂಡರೆ, ಇಲ್ಲಿ ಒಪ್ಪಂದವಾಗಿದ್ದು ₹7.20 ಲಕ್ಷ ಕೋಟಿಯಷ್ಟು. ನೂರಕ್ಕೂ ಹೆಚ್ಚು ಕಂಪನಿಗಳು ಅಂದಾಜು ₹3 ಲಕ್ಷ ಕೋಟಿಯಷ್ಟು ಹೂಡಿಕೆಗೆ ಆಸಕ್ತಿ ತೋರಿಸಿವೆ. ಸರ್ಕಾರ ಇದನ್ನು ₹10.27 ಲಕ್ಷ ಕೋಟಿ ಹೂಡಿಕೆ ಘೋಷಣೆ ಎಂದು ಹೇಳಿದೆ. ಈ ಹಿಂದಿನ ಎಲ್ಲ ಸಮಾವೇಶಗಳಲ್ಲೂ ಹೀಗೇ ಆಗಿದೆ. ಒಪ್ಪಂದ ಮತ್ತು ಆಸಕ್ತಿ ಎರಡನ್ನೂ ಒಟ್ಟು ಸೇರಿಸಿಕೊಂಡು ಅಂದಂದಿನ ಸರ್ಕಾರಗಳು ಹೂಡಿಕೆ ಘೋಷಣೆ ಮಾಡಿವೆ. ಅವೆಲ್ಲವೂ ಹೂಡಿಕೆ ಆಗದೇ ಇರುವ ಕಾರಣಕ್ಕೆ, ಅದರ ಪ್ರಮಾಣ ಕಡಿಮೆಯಾಗಿ ಕಾಣುತ್ತದೆ ಎಂಬುದು ಆ ಅಧಿಕಾರಿಯ ವಿಶ್ಲೇಷಣೆ.

ಬೃಹತ್ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ ಅವರು ವಿಧಾನಸಭೆಯಲ್ಲಿ ಆಡಿದ್ದ ಮಾತೂ, ಈ ಅಭಿಪ್ರಾಯಕ್ಕೆ ಪುಷ್ಟಿ ನೀಡುತ್ತದೆ. ‘2022ರ ಹೂಡಿಕೆದಾರರ ಸಮಾವೇಶದಲ್ಲಿ ಘೋಷಣೆಯಾದ ₹ 9.81 ಕೋಟಿಯಲ್ಲಿ, ಅಂದಾಜು ₹22,000 ಕೋಟಿಯಷ್ಟು ಮಾತ್ರ ಹೂಡಿಕೆಯಾಗಿದೆ. ಇನ್ನೂ ₹5.20 ಲಕ್ಷ ಕೋಟಿಯಷ್ಟು ಹೂಡಿಕೆ ಒಪ್ಪಂದಗಳು ಅನುಮತಿ ಪಡೆಯುವ ವಿವಿಧ ಹಂತಗಳಲ್ಲಿ ಇವೆ’ ಎಂದು ಅವರು ಸದನಕ್ಕೆ ಉತ್ತರಿಸಿದ್ದರು.

ಆದರೆ ಉದ್ಯಮಿಗಳು ಹೇಳುವ ಮಾತು ಬಂಡವಾಳ ಆಕರ್ಷಣೆಯಲ್ಲಿನ ತೊಡಕಿನ ಮತ್ತಷ್ಟು ಆಯಾಮಗಳನ್ನು ತೆರೆದಿಡುತ್ತವೆ.

‘ಇನ್ನು ಒಪ್ಪಂದ ಆದ ನಂತರವೂ, ಹೂಡಿಕೆ ಆಗೇ ಆಗುತ್ತದೆ ಎಂದು ಹೇಳಲಾಗದು. ಒಪ್ಪಂದ ಎಂಬುದು ಎರಡನೇ ಹಂತದ ಪ್ರಕ್ರಿಯೆ ಅಷ್ಟೆ. ಆನಂತರ ರಾಜ್ಯದಲ್ಲಿ ಲಭ್ಯವಿರುವ ಮೂಲಸೌಕರ್ಯ, ತೆರಿಗೆ ವಿನಾಯತಿ, ಕಾರ್ಮಿಕರ ಲಭ್ಯತೆ, ವಿವಿಧ ಸ್ವರೂಪದ ಅನುಮತಿಗಳ ಕುರಿತಾದ ವಿಸ್ತೃತ ಪರಿಶೀಲನೆ ನಡೆಯುತ್ತದೆ. ಬಹುತೇಕ ಒಪ್ಪಂದಗಳು ಈ ಹಂತದಲ್ಲಿ ಬಿದ್ದು ಹೋಗುತ್ತವೆ. ರಾಜ್ಯದಲ್ಲಿ ಕೈಗಾರಿಕೋದ್ಯಮಗಳ ಸ್ಥಾಪನೆಗೆ ಪರಿಸರ ಅನುಮತಿ ಪಡೆಯುವುದೇ ದೊಡ್ಡ ತೊಡಕು. ಬಹುತೇಕ ಸಂದರ್ಭದಲ್ಲಿ ಅನುಮತಿಗಳು ಸಿಗದೇ ಹೋಗುತ್ತವೆ. ಪರಿಸರ ಅನುಮತಿಗಾಗಿ ಸಲ್ಲಿಸಿದ ಅರ್ಜಿಗಳು ಅರಣ್ಯ ಮತ್ತು ಪರಿಸರಜೀವಿ ವಿಜ್ಞಾನ ಇಲಾಖೆ ಮತ್ತು ಮಾಲಿನ್ಯ ನಿಯಂತ್ರಣ ಮಂಡಲಿಯಲ್ಲೇ ಕೊಳೆಯುತ್ತವೆ. ವಿಪರೀತ ಎನಿಸುವಷ್ಟು ಲಂಚಕ್ಕೆ ಬೇಡಿಕೆ ಇಡುತ್ತಾರೆ. ಲಂಚ ನೀಡದೇ ಇದ್ದರೆ ಅನುಮತಿ ದೊರೆಯುವುದಿಲ್ಲ. ಇಲ್ಲವೇ ಹತ್ತಾರು ಕಾರಣಗಳನ್ನು ಮುಂದೊಡ್ಡಿ ಅರ್ಜಿ ತಿರಸ್ಕರಿಸುತ್ತಾರೆ. ಈ ಹಂತದಲ್ಲೇ ಬಹುತೇಕ ಒಪ್ಪಂದಗಳು ಬಿದ್ದು ಹೋಗುತ್ತವೆ. ಜತೆಗೆ ವಿನಾಯತಿಗಳ ವಿಚಾರದಲ್ಲಿ ಹೂಡಿಕೆದಾರರು ಮತ್ತು ಸರ್ಕಾರದ ಮಧ್ಯೆ ಒಮ್ಮತ ಬರದೇ ಹೋಗುತ್ತದೆ. ಒಪ್ಪಂದ ರದ್ದಾಗಲು ಇದೂ ಒಂದು ಪ್ರಧಾನ ಕಾರಣ’ ಎನ್ನುವುದು ಹೆಸರೇಳಲು ಬಯಸದ ಪೀಣ್ಯ ಕೈಗಾರಿಕಾ ಸಂಘದ ಪದಾಧಿಕಾರಿ ಮತ್ತು ಮಾಜಿ ಅಧ್ಯಕ್ಷರೊಬ್ಬರ ಅಭಿಪ್ರಾಯ.

‘ವಿವಿಧ ಅನುಮತಿಗಳನ್ನು ಪಡೆಯುವ ಸಂಬಂಧ ಕರ್ನಾಟಕದಲ್ಲಿ ಇರುವ ವ್ಯವಸ್ಥೆಯೇ ಸರಿ ಇಲ್ಲ. ಏಕಗವಾಕ್ಷಿ ವ್ಯವಸ್ಥೆ ಇದ್ದರೂ, ಹತ್ತಾರು ಕಚೇರಿಗೆ ಅಲೆಯಬೇಕಾಗಿದೆ. ರಾಜ್ಯದಲ್ಲಿ ಭೂಸ್ವಾಧೀನ ಪ್ರಕ್ರಿಯೆ ಪೂರ್ಣ ಮಾಡುವಲ್ಲಿಯೂ ತೊಡಕುಗಳಿವೆ. ಮೂಲಸೌಕರ್ಯ ಒದಗಿಸುವಲ್ಲಿ ಸಾಕಷ್ಟು ಕೊರತೆಗಳಿವೆ. ಇವೆಲ್ಲಕ್ಕೂ ಅನುಕೂಲವಾಗಲಿ ಎಂದು ಏಕಗವಾಕ್ಷಿ ವ್ಯವಸ್ಥೆ ಜಾರಿಗೆ ತರಲಾಗಿದೆಯಾದರೂ, ಅದು ನಿರೀಕ್ಷಿತ ಮಟ್ಟದಲ್ಲಿ ಕೆಲಸ ಮಾಡುತ್ತಿಲ್ಲ. ರಾಜ್ಯದಲ್ಲಿನ ಕೈಗಾರಿಕಾ ನೀತಿಗಳು ಕಾಗದದ ಮೇಲಷ್ಟೇ ಉದ್ಯಮಿಸ್ನೇಹಿಯಾಗಿವೆ. ವಾಸ್ತವದಲ್ಲಿ ಅಧಿಕಾರಿಗಳಿಗೆ ಹೂಡಿಕೆ ಸಂಬಂಧ ವಿಳಂಬ ಮತ್ತು ನಿರ್ಲಕ್ಯ್ಷವೇ ಹೆಚ್ಚು’ ಎಂಬುದು ಎಫ್ಕೆಸಿಸಿಐ ಅಧ್ಯಕ್ಷ ಎಂ.ಜಿ.ಬಾಲಕೃಷ್ಣ ಅವರ ಅಸಮಾಧಾನ.

‘ಇನ್ನು ಹೂಡಿಕೆದಾರರು ಮತ್ತು ಸರ್ಕಾರದ ನಡುವಣ ಮಾತುಕತೆ ಫಲಪ್ರದವಾಗಿ, ಒಪ್ಪಂದಕ್ಕೆ ಅಗತ್ಯ ಅನುಮತಿಗಳೂ ದೊರೆತುಬಿಡುತ್ತವೆ. ಅನುಷ್ಠಾನದ ಹಂತದಲ್ಲಿ ಸ್ಥಳೀಯ ಜನರ, ರೈತರ, ಸ್ವಯಂಸೇವಾ ಸಂಸ್ಥೆಗಳ ತಕರಾರು ಆರಂಭವಾಗುತ್ತದೆ. ಕೊಪ್ಪಳದಲ್ಲಿ ಬಲ್ದೋಟ ಸಮೂಹವು ₹54,000 ಕೋಟಿ ಮೊತ್ತದ ಉಕ್ಕು ಸ್ಥಾವರ ಸ್ಥಾಪನೆಗೆ ಎದುರಾಗಿರುವ ವಿರೋಧವು, ಇಂಥದ್ದಕ್ಕೆ ಸ್ಪಷ್ಟ ನಿದರ್ಶನ. ಈ ರೀತಿಯ ತಕರಾರುಗಳು ಎದುರಾಗಲು ಸರ್ಕಾರದ ವೈಫಲ್ಯವೇ ಕಾರಣ. ಮಾತುಕತೆ ಹಂತದಲ್ಲೇ ಸ್ಥಳೀಯರನ್ನು, ಭೂಮಿ ಕಳೆದುಕೊಂಡ ರೈತರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಮುಂದುವರೆಯಬೇಕಾದ ಹೊಣೆಗಾರಿಕೆ ಸರ್ಕಾರದ್ದು. ಸರ್ಕಾರಗಳು ಈ ಎಚ್ಚರಿಕೆ ವಹಿಸದೇ ಇರುವುದರಿಂದಲೇ ಹೂಡಿಕೆ ಹಂತದಲ್ಲಿ ತಕರಾರುಗಳು ಆರಂಭವಾಗುತ್ತವೆ. ಇಂಥದ್ದೇ ಕಾರಣಕ್ಕೆ ಘೋಷಣೆಯಾಗಿದ್ದ ಹಲವು ಹೂಡಿಕೆಗಳು ರದ್ದಾಗುತ್ತವೆ’ ಎಂಬುದು ಎಫ್ಕೆಸಿಸಿಐ ಪದಾಧಿಕಾರಿಯೊಬ್ಬರ ಅಭಿಪ್ರಾಯ.

ಈ ಎಲ್ಲ ಕಾರಣಗಳ ಮಧ್ಯೆ, ಹೂಡಿಕೆದಾರರ ಸಮಾವೇಶದಲ್ಲಿ ಘೋಷಣೆಯಾದ ಬಂಡವಾಳವು ಪೂರ್ಣ ಪ್ರಮಾಣದಲ್ಲಿ ಹೂಡಿಕೆ ಆಗುತ್ತಿಲ್ಲ ಎಂಬುದು ವಾಸ್ತವ.

ಇದು ಘೋಷಣೆಯಾಗಿ ಆನಂತರ ಕೈತಪ್ಪಿದ ಹೂಡಿಕೆಗಳ ಕತೆಯಾದರೆ, ಕರ್ನಾಟಕದಲ್ಲೇ ಮೊದಲ ಉದ್ದಿಮೆ ಆರಂಭಿಸಿ ಆನಂತರ ಬೇರೆ ರಾಜ್ಯಗಳಲ್ಲಿ ದೊಡ್ಡಮಟ್ಟದ ಹೂಡಿಕೆ ಮಾಡಿದ ಕತೆಗಳೂ ಸಾಕಷ್ಟಿವೆ. ದೇಶದಲ್ಲಿ ಅತಿಹೆಚ್ಚು ನವೋದ್ಯಮಗಳು ಇರುವುದು ಬೆಂಗಳೂರಿನಲ್ಲಿ. ಇಲ್ಲಿ ಕಾರ್ಯಾರಂಭ ಮಾಡಿದ ಹಲವು ನವೋದ್ಯಮಗಳು ಇಂದು ದೇಶದಲ್ಲಿ ದೊಡ್ಡ ಹೆಸರು ಮಾಡಿವೆ. ಬೆಂಗಳೂರಿನಲ್ಲಿ ಕೇಂದ್ರ ಕಚೇರಿ ಹೊಂದಿರುವ ಅಂತಹ ನವೋದ್ಯಮಗಳು, ನೆರೆ ರಾಜ್ಯಗಳಲ್ಲಿ ದೊಡ್ಡಮಟ್ಟದ ಕೈಗಾರಿಕೆಗಳನ್ನು ಸ್ಥಾಪಿಸಿವೆ.

ವಿದ್ಯುತ್ ಚಾಲಿತ ಸ್ಕೂಟರ್ ತಯಾರಿಕಾ ಕಂಪನಿ, ‘ಏಥರ್ ಎನರ್ಜಿ’ಯ ಕೇಂದ್ರ ಕಚೇರಿ ಇರುವುದು ಬೆಂಗಳೂರಿನಲ್ಲಿ. ಇಲ್ಲಿಯೇ ಸಂಶೋಧನಾ ಮತ್ತು ಅಭಿವೃದ್ಧಿ ಕೇಂದ್ರ, ಮಧ್ಯಮ ಮಟ್ಟದ ತಯಾರಿಕಾ ಘಟಕ ಹೊಂದಿರುವ ಕಂಪನಿಯು ಈಚೆಗೆ ಮಹಾರಾಷ್ಟ್ರದಲ್ಲಿ ಬೃಹತ್ ತಯಾರಿಕಾ ಘಟಕವನ್ನು ಸ್ಥಾಪಿಸಿದೆ. ಮಹಾರಾಷ್ಟ್ರ ಸರ್ಕಾರವು ಕಡಿಮೆ ದರದಲ್ಲಿ ಭೂಮಿ ಒದಗಿಸಿದೆ ಮತ್ತು ಹೆಚ್ಚಿನ ಮಟ್ಟದ ತೆರಿಗೆ ವಿನಾಯತಿ ನೀಡಿದೆ. ಇನ್ನು ಬೆಂಗಳೂರಿನಲ್ಲೇ ಕೇಂದ್ರ ಕಚೇರಿ ಹೊಂದಿರುವ ‘ಓಲಾ’, ಪಕ್ಕದ ತಮಿಳುನಾಡಿನ ಹೊಸೂರಿಗೆ ಹೊಂದಿಕೊಂಡಂತೆ ವಿದ್ಯುತ್ ಚಾಲಿತ ಸ್ಕೂಟರ್ ತಯಾರಿಕಾ ಘಟಕ ‘ಗಿಗಾ ಫ್ಯಾಕ್ಟರಿ’ಯನ್ನು ಆರಂಭಿಸಿದೆ. ಈ ಘಟಕದ ವಿಸ್ತರಣೆ ಕಾರ್ಯವನ್ನೂ ಈಚೆಗೆ ಆರಂಭಿಸಿದೆ.

‘ಆಂಧ್ರ ಪ್ರದೇಶ, ತಮಿಳುನಾಡು, ಮಹಾರಾಷ್ಟ್ರದಲ್ಲಿ ಕೈಗಾರಿಕಾ ಭೂಮಿಯ ಬೆಲೆ ಕರ್ನಾಟಕಕ್ಕಿಂತ ಕಡಿಮೆ ಇದೆ. ಭೂಸ್ವಾಧೀನ ಪ್ರಕ್ರಿಯೆಯನ್ನು ಅತ್ಯಂತ ತ್ವರಿತವಾಗಿ ನಡೆಸಿ, ಉದ್ಯಮಿಗಳಿಗೆ ಹಸ್ತಂತರಿಸಲಾಗುತ್ತದೆ. ಕೈಗಾರಿಕಾ ನಿವೇಶನ ಹಸ್ತಾಂತರಕ್ಕೂ ಮುನ್ನವೇ ಬಹುತೇಕ ಮೂಲಸೌಕರ್ಯಗಳನ್ನು ಒದಗಿಸಿರುತ್ತಾರೆ. ಉದ್ಯಮಗಳ ಸ್ಥಾಪನೆಗೆ ತುದಿಗಾಲಲ್ಲಿ ನಿಂತಿರುವ ಆ ರಾಜ್ಯಗಳು, ಅಗತ್ಯವಿರುವ ಸವಲತ್ತುಗಳನ್ನು ಕೆಲವೇ ತಿಂಗಳುಗಳಲ್ಲಿ ಒದಗಿಸಿಕೊಡುತ್ತವೆ. ಪರಿಣಾಮವಾಗಿ ಉದ್ಯಮಗಳು ಕರ್ನಾಟಕಕ್ಕಿಂತ, ಈ ರಾಜ್ಯಗಳನ್ನೇ ಹೂಡಿಕೆಗೆ ಆಯ್ಕೆ ಮಾಡಿಕೊಳ್ಳುತ್ತಿವೆ’ ಎನ್ನುತ್ತಾರೆ ಎಫ್ಕೆಸಿಸಿಐ ಹಿಂದಿನ ಅಧ್ಯಕ್ಷರೊಬ್ಬರು.

‘ದಕ್ಷಿಣ ಭಾರತದಲ್ಲಿ ವಿದೇಶಿ ಆಟೊಮೊಬೈಲ್ ಕಂಪನಿಯೊಂದು ಕಾರು ತಯಾರಿಕಾ ಘಟಕ ತರೆದು, ಕಾರ್ಯಾರಂಭ ಮಾಡಿದ್ದು ಕರ್ನಾಟಕದಲ್ಲೇ. 1999ರಲ್ಲಿ ಬಿಡದಿ ಸಮೀಪ ಟೊಯೋಟಾ ಕಾರು ತಯಾರಿಕಾ ಘಟಕ ಆರಂಭವಾಗಿತ್ತು. ಸರಿಸುಮಾರು ಅದೇ ಸಮಯದಲ್ಲಿ ಚೆನ್ನೈನಲ್ಲಿ ಹುಂಡೈ ಕಾರು ತಯಾರಿಕಾ ಘಟಕ ಆರಂಭವಾಗಿತ್ತು. ಬಿಡದಿ ಘಟಕದಲ್ಲಿ ಬೇರೆ–ಬೇರೆ ಕಾರಣಗಳಿಗೆ ವರ್ಷವೊಂದರಲ್ಲಿ ಹಲವು ದಿನ ಕೆಲಸ ನಡೆಯುವುದೇ ಇಲ್ಲ. ಇಂತಹ ಬೆಳವಣಿಗೆಯನ್ನು ವಿದೇಶಿ ಹೂಡಿಕೆದಾರರು ಗಮನಿಸುತ್ತಿರುತ್ತಾರೆ. ಈ ಕಾರಣದಿಂದಲೇ ಆನಂತರದಲ್ಲಿ ಬೇರೆ ಯಾವುದೇ ಕಾರು ತಯಾರಿಕಾ ಘಟಕಗಳು ಕರ್ನಾಟಕಕ್ಕೆ ಬಂದಿಲ್ಲ’ ಎಂಬುದು ಅವರು ನೀಡುವ ವಿವರಣೆ.

‘ಆನಂತರದಲ್ಲಿ ತಮಿಳುನಾಡಿನಲ್ಲಿ ಫೋರ್ಡ್, ಆಂಧ್ರ ಪ್ರದೇಶದಲ್ಲಿ ಐಸೂಜೂ ಮತ್ತು ಕಿಯಾ ಕಾರು ತಯಾರಿಕಾ ಘಟಕಗಳನ್ನು ಆರಂಭಿಸಿವೆ. ಕರ್ನಾಟಕದಲ್ಲಿ ಹೀರೊ ಮೋಟೊಕಾರ್ಪ್ ದ್ವಿಚಕ್ರ ತಯಾರಿಕಾ ಘಟಕ ಆರಂಭಿಸುವ ಸಂಬಂಧ ಮಾತುಕತೆಯೂ ನಡೆಯಿತು. ಕಂಪನಿ ಕೇಳಿದಷ್ಟು ವಿನಾಯತಿ–ರಿಯಾಯತಿಗಳನ್ನು ಕರ್ನಾಟಕ ಸರ್ಕಾರ ನೀಡಲಿಲ್ಲ. ಈ ವಿಚಾರದಲ್ಲಿ ಕಂಪನಿ ಮತ್ತು ಸರ್ಕಾರ ವರ್ಷ ಕಾಲ ಜಗ್ಗಾಡಿದವು. ಆ ಅವಕಾಶವನ್ನು ಬಳಸಿಕೊಳ್ಳಲು ತೆಲಂಗಾಣ ಮತ್ತು ಆಂಧ್ರ ಪ್ರದೇಶ ಸರ್ಕಾರ ಪೈಪೋಟಿಗೆ ಬಿದ್ದವು. ವಿಪರೀತ ಎನಿಸುವಷ್ಟು ರಿಯಾಯತಿ ಘೋಷಿಸಿದವು. ಕಡೆಗೆ ಹೀರೋ ಮೋಟೊಕಾರ್ಪ್ ತಯಾರಿಕಾ ಘಟಕ ಆಂಧ್ರ ಪ್ರದೇಶದ ಪಾಲಾಯಿತು. ಕೈಗಾರಿಕೆ–ಉದ್ಯಮ ಸ್ಥಾಪನೆ ಸಂಬಂಧ ಆ ರಾಜ್ಯಗಳಿಗೆ ಇರುವ ಹಸಿವನ್ನು ಅದು ತೋರಿಸುತ್ತದೆ. ಆದರೆ ಕರ್ನಾಟಕದಲ್ಲಿ ಅಂತಹ ಹಸಿವು ಇಲ್ಲ. ಈ ಕಾರಣದಿಂದಲೇ ಇಲ್ಲಿ ಘೋಷಣೆಯಾಗುವ ಹೂಡಿಕೆಗಳಲ್ಲಿ ಬಹುತೇಕವು ಕಾಗದದ ಮೇಲಷ್ಟೇ ಉಳಿಯುತ್ತವೆ’ ಎಂಬುದು ಅವರ ವಿಶ್ಲೇಷಣೆ.

ಒಟ್ಟಾರೆ ಬಂಡವಾಳ ಆಕರ್ಷಣೆಗೆ ಇರುವ ವಿಪುಲ ಅವಕಾಶಗಳನ್ನು ಸರ್ಕಾರದ ಕೈಗಾರಿಕಾ ನೀತಿ, ವಿಳಂಬ ಧೋರಣೆಯ ಕಾರಣಕ್ಕೆ ಕೈಚೆಲ್ಲಬೇಕಾಗಿದೆ ಎಂಬುದರತ್ತ ಉದ್ಯಮಿಗಳ ಅಭಿಪ್ರಾಯಗಳು ಬೊಟ್ಟು ಮಾಡುತ್ತವೆ. ಭೂಸ್ವಾಧೀನ ಮತ್ತು ವಿವಿಧ ಅನುಮತಿ ನೀಡುವ ಪ್ರಕ್ರಿಯೆಗಳನ್ನು ಸರಳ ಹಾಗೂ ತ್ವರಿತಗೊಳಿಸಿದರೆ ಬಂಡವಾಳವು ಬೇರೆಡೆಗೆ ಹೋಗುವುದನ್ನು ತಪ್ಪಿಸಬಹುದು ಎಂಬುದರತ್ತಲೂ ಗಮನ
ಸೆಳೆಯುತ್ತವೆ.

‘ಕಾಗದದ ಮೇಲಷ್ಟೇ ಉದ್ಯಮಸ್ನೇಹಿ’

ಕರ್ನಾಟಕವು ಕೈಗಾರಿಕೆ ಮತ್ತು ಉದ್ಯಮಗಳ ಸ್ಥಾಪನೆಯಲ್ಲಿ ದೇಶದ ಬೇರೆಲ್ಲಾ ರಾಜ್ಯಗಳಿಗಿಂತ ಬಹಳ ಮುಂದೆ ಇದೆ. ಆದರೆ ರಾಜ್ಯವು ಉದ್ಯಮಸ್ನೇಹಿ ಎಂಬುದು ಕಾಗದದ ಮೇಲಷ್ಟೇ ಇರುವ ಘೋಷಣೆ. ಕರ್ನಾಟಕವು ಉದ್ಯಮಸ್ನೇಹಿ ಎಂದಾಗಿದ್ದರೆ, ಹೂಡಿಕೆದಾರರ ಸಮಾವೇಶದಲ್ಲಿ ಘೋಷಣೆಯಾದ ಹೂಡಿಕೆಗಳೆಲ್ಲವೂ ಸ್ಥಾಪನೆಯಾಗಬೇಕಿತ್ತು. ಆದರೆ ಹಾಗೆ ಆಗುತ್ತಿಲ್ಲ. ಇದು ನಮ್ಮೆಲ್ಲರ ಎದುರು ದೊಡ್ಡ ಪ್ರಶ್ನೆಗಳನ್ನು ಇರಿಸಿದೆ. ಉದ್ಯಮಗಳ ಸ್ಥಾಪನೆಗೆ ಅಗತ್ಯವಿರುವ ಅನುಮತಿಗಳನ್ನು ಪಡೆಯುವುದೇ ದೊಡ್ಡ ಸಮಸ್ಯೆಯಾಗದೆ. ಅನುಮತಿಗಾಗಿಯೇ ಹಲವು ತಿಂಗಳು ಅಲೆದಾಡಬೇಕಾದ ಸ್ಥಿತಿ ಇದೆ. ಇವುಗಳ ಜತೆಗೆ ಮೂಲಸೌಕರ್ಯಗಳನ್ನು ಒದಗಿಸುವಲ್ಲಿಯೂ ಹಲವು ಸಮಸ್ಯೆಗಳಿವೆ. ಉತ್ತಮ ರಸ್ತೆ ಸಂಪರ್ಕ, ನೀರು ಮತ್ತು ವಿದ್ಯುತ್ ನಿರಂತರ ಪೂರೈಕೆಯಲ್ಲಿ ಕೊರತೆಗಳಿವೆ. ಅದನ್ನು ಸರ್ಕಾರ ನೀಗಿಸಬೇಕು. ಹೊಸತಲೆಮಾರಿನ ಕೈಗಾರಿಕೆ–ಉದ್ಯಮಗಳಿಗೆ ಅಗತ್ಯವಿರುವಂತಹ ಕೌಶಲಭರಿತ ಉದ್ಯೋಗಿಗಳನ್ನು ಒದಗಿಸುವಲ್ಲಿ ರಾಜ್ಯ ಹಿಂದೆ ಬಿದ್ದಿದೆ. ಕೌಶಲ ಅಭಿವೃದ್ಧಿಗೆ ಸರ್ಕಾರ ಇನ್ನಷ್ಟು ಒತ್ತು ನೀಡಬೇಕು. ತಂತ್ರಜ್ಞಾನ, ಕೈಗಾರಿಕೆ, ಸೇವಾ ವಲಯವೇ ಕರ್ನಾಟಕದ ಶಕ್ತಿ. ಅದನ್ನು ಸರಿಯಾಗಿ ಬಳಸಿಕೊಳ್ಳಬೇಕು ಅಷ್ಟೆ. ಈ ಎಲ್ಲ ಸಮಸ್ಯೆಗಳನ್ನು ನಿವಾರಿಸಿಕೊಂಡು ಸರ್ಕಾರವು, ಉದ್ಯಮಿಗಳೊಂದಿಗೆ ಸಮನ್ವಯ ಸಾಧಿಸಿದರೆ ಘೋಷಣೆಯಾದ ಒಪ್ಪಂದವನ್ನು ಅನುಷ್ಠಾನಕ್ಕೆ ತರುವುದು ಸಾಧ್ಯವಾಗುತ್ತದೆ. ಈ ನಿಟ್ಟಿನಲ್ಲಿ ಸರ್ಕಾರ ಹೆಚ್ಚು ಗಮನ ಹರಿಸಬೇಕು.

– ಎಂ.ಜಿ.ಬಾಲಕೃಷ್ಣ, ಅಧ್ಯಕ್ಷ, ಭಾರತೀಯ ವಾಣಿಜ್ಯೋದ್ಯಮ ಮಹಾಸಂಘ (ಫಿಕ್ಕಿ)

‘ಗರಿಷ್ಠ ಪ್ರಮಾಣದ ಅನುಷ್ಠಾನಕ್ಕೆ ಯತ್ನ’

2022ರ ಹೂಡಿಕೆದಾರರ ಸಮಾವೇಶದಲ್ಲಿ, ಹಸಿರು ಜಲಜನಕ ಕ್ಷೇತ್ರಕ್ಕೆ ₹2 ಲಕ್ಷ ಕೋಟಿಗೂ ಹೆಚ್ಚು ಹೂಡಿಕೆ ಘೋಷಣೆಗಳು ಆಗಿದ್ದವು. ಕಾರ್ಯಸಾಧ್ಯತೆ ಅಧ್ಯಯನದ ವೇಳೆ ಅವುಗಳಿಂದ ರಾಜ್ಯಕ್ಕಾಗಲೀ, ಜನರಿಗಾಗಲೀ ಹೆಚ್ಚಿನ ಉಪಯೋಗ ಇಲ್ಲ ಎಂಬುದು ಗೊತ್ತಾಯಿತು. ಹೂಡಿಕೆ ಘೋಷಿಸಿದ್ದವರೂ, ಹಿಂದೆ ಸರಿದಿದ್ದಾರೆ. ಹೀಗಾಗಿ ಹಿಂದಿನ ಹೂಡಿಕೆದಾರರ ಸಮಾವೇಶದ ಘೋಷಣೆಗೂ, ವಾಸ್ತವಿಕ ಹೂಡಿಕೆಗೂ ಬಹಳ ಅಂತರವಿದೆ.

ಆದರೆ ಈ ಬಾರಿ ಹಾಗೆ ಆಗದಂತೆ ಎಚ್ಚರವಹಿಸಿದ್ದೇವೆ. ಕಾರ್ಯಸಾಧ್ಯತೆ ಮತ್ತು ಹೂಡಿಕೆ ಸಾಮರ್ಥ್ಯವನ್ನು ಪರಿಗಣಿಸಿ, ಸಮಾವೇಶಕ್ಕೆ ಕರೆಸಿದ್ದೆವು. ಬರಿಯ ಘೋಷಣೆ ಮಾಡುವವರನ್ನು ಆರಂಭದ ಹಂತದಲ್ಲೇ ಹೊರಗಿಟ್ಟಿರುವ ಕಾರಣ, ಈ ಬಾರಿ ಗರಿಷ್ಠ ಪ್ರಮಾಣದ ಹೂಡಿಕೆ ಆಗಲಿದೆ. 2025ರ ಹೂಡಿಕೆದಾರರ ಸಮಾವೇಶದಲ್ಲಿ ಘೋಷಣೆಯಾದ ಹೂಡಿಕೆಗಳಲ್ಲಿ ಶೇ 70ಕ್ಕಿಂತಲೂ ಹೆಚ್ಚು ಅನುಷ್ಠಾನಕ್ಕೆ ತರಬೇಕು ಎಂಬ ಗುರಿ ಹಾಕಿಕೊಳ್ಳಲಾಗಿದೆ. ಅದನ್ನು ಸಾಧಿಸುತ್ತೇವೆ. ರಾಜ್ಯದಲ್ಲಿ ಹೂಡಿಕೆಗೆ ಅವಕಾಶ ಉತ್ತಮವಾಗಿದೆ. ಬೆಂಗಳೂರಿನಲ್ಲಿ ಎಂಆರ್ಒ ಘಟಕ ಆರಂಭಿಸುವುದಾಗಿ, ಇಂಡಿಗೊ ಯಾವ ಸಮಾವೇಶದಲ್ಲೂ ಘೋಷಿಸಿರಲಿಲ್ಲ. ಈಗ ನೇರವಾಗಿ ₹1,100 ಕೋಟಿಗೂ ಹೆಚ್ಚು ಹೂಡಿಕೆಗೆ ಕ್ರಮ ತೆಗೆದುಕೊಂಡಿದೆ.

ಕೈಗಾರಿಕೆ, ಉದ್ಯಮಗಳ ಸ್ಥಾಪನೆ ಮತ್ತು ಕಾರ್ಯನಿರ್ವಹಣೆಗೆ ಸಂಬಂಧಿಸಿದ ಪ್ರಕ್ರಿಯೆಗಳನ್ನು ನಡೆಸಲು ಈ ಹಿಂದೆ ಇದ್ದ ಏಕಗವಾಕ್ಷಿ ವ್ಯವಸ್ಥೆಯಲ್ಲಿ ಹಲವು ತೊಡಕುಗಳು ಇದ್ದವು. ಅದರಿಂದಲೇ ವಿಳಂಬವಾಗುತ್ತಿದೆ ಎಂದು ಉದ್ಯಮವಲಯದಿಂದ ದೂರುಗಳು ಬರುತ್ತಿದ್ದವು. ಅದನ್ನೆಲ್ಲಾ ಕೂಲಂಕಷವಾಗಿ ಪರಿಗಣಿಸಿ, ನೂತನ ಏಕಗವಾಕ್ಷಿ ವ್ಯವಸ್ಥೆಯನ್ನು ಜಾರಿಗೆ ತರಲಾಗಿದೆ. ಉದ್ಯಮಗಳ ಸ್ಥಾಪನೆ ಮತ್ತು ಕಾರ್ಯನಿರ್ವಹಣೆಗೆ ಸಂಬಂಧಿಸಿದಂತೆ 150ಕ್ಕೂ ಹೆಚ್ಚು ಅನುಮೋದನೆ ಮತ್ತು ಅನುಮತಿಗಳಿಗೆ ಒಂದೆಡೆಯೇ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ರಾಜ್ಯ ಸರ್ಕಾರದ 30ಕ್ಕೂ ಹೆಚ್ಚು ಇಲಾಖೆಗಳು ಮತ್ತು ವಿವಿಧ ನಿಗಮ ಮಂಡಳಿಗಳು ಈ ವ್ಯವಸ್ಥೆಯ ಅಡಿ ಕಾರ್ಯನಿರ್ವಹಿಸುತ್ತವೆ. ಈ ಮೂಲಕ ಏಕಗವಾಕ್ಷಿ ವ್ಯವಸ್ಥೆಯಲ್ಲಿ ಇದ್ದ ತೊಡಕುಗಳನ್ನು ನಿವಾರಿಸಲಾಗಿದೆ.

– ಎಂ.ಬಿ.ಪಾಟೀಲ, ಬೃಹತ್ ಕೈಗಾರಿಕಾ ಸಚಿವ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.