ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನವೋದಯ ವಿದ್ಯಾಲಯ: ಆಸ್ಮಿತೆಗೆ ಆತಂಕ: ಒಳನೋಟ ಪ್ರತಿಕ್ರಿಯೆಗಳು

Last Updated 19 ಮಾರ್ಚ್ 2023, 14:15 IST
ಅಕ್ಷರ ಗಾತ್ರ

‘ನವೋದಯ ವಿದ್ಯಾಲಯ: ಆಸ್ಮಿತೆಗೆ ಆತಂಕ’ ಎಂಬ ಶೀರ್ಷಿಕೆಯಡಿ ‘ಪ್ರಜಾವಾಣಿ’ಯಲ್ಲಿ ಭಾನುವಾರ (ಮಾರ್ಚ್‌ 19) ಪ್ರಕಟವಾದ ‘ಒಳನೋಟ’ ವರದಿಗೆ ರಾಜ್ಯದಾದ್ಯಂತ ಓದುಗರ ಪ್ರತಿಕ್ರಿಯಿಸಿದ್ದಾರೆ. ಆಯ್ದ ಕೆಲ ಪ್ರತಿಕ್ರಿಯೆಗಳು ಇಲ್ಲಿವೆ.

***

ಶಿಸ್ತುಬದ್ಧ ಕಲಿಕೆ ಸಿಗುತ್ತಿಲ್ಲ

ಕಳೆದ ಎರಡು ವರ್ಷಗಳಿಂದ ನವೋದಯ ವಿದ್ಯಾಲಯಗಳಲ್ಲಿ ಶಿಕ್ಷಕರ ಕೊರತೆ, ಗುಣಮಟ್ಟದ ಆಹಾರ, ಶಿಸ್ತುಬದ್ಧ ಕಲಿಕೆ ಸಿಗುತ್ತಿಲ್ಲ. ಆದ್ದರಿಂದ ಅಲ್ಲಿದ್ದ ನಮ್ಮ ಮಕ್ಕಳನ್ನು ಬೇರೆ ಶಾಲೆಗಳಿಗೆ ವರ್ಗಾವಣೆ ಮಾಡುವ ಪರಿಸ್ಥಿತಿ ಎದುರಾಗಿದೆ. ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಉತ್ತಮ ಗುಣಮಟ್ಟದ ಶಿಕ್ಷಣ ನೀಡುವ ಉದ್ದೇಶ ಇಂದು ಅಪಾಯದಲ್ಲಿದೆ. ಈ ಕರಿತು ಸ್ಥಳೀಯ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳ ಗಮನ ಸೆಳೆದರೂ ಪ್ರಯೋಜನವಾಗಿಲ್ಲ.

। ರಾಮಚಂದ್ರಪ್ಪ, ಶಿವಮೊಗ್ಗ

****

ಗತವೈಭವ ಪಡೆಯುವುದೇ?

ನವೋದಯ ವಿದ್ಯಾಲಯದಲ್ಲಿ ಕಲಿತ ಅನೇಕ ವಿದ್ಯಾರ್ಥಿಗಳು ವ್ಯೆದ್ಯರಾಗಿ, ಎಂಜಿನಿಯರಾಗಿ, ವಿಜ್ಞಾನಿಗಳಾಗಿ ದೇಶ ಮತ್ತು ವಿದೇಶದಲ್ಲಿ ಕೆಲಸ ಮಾಡುತ್ತಿದ್ದಾರೆ. ಇಂತಹ ಶಾಲೆಗೆ ಕೇಂದ್ರ ಸರ್ಕಾರ ಅನುದಾನವನ್ನು ನೀಡದೇ ನಿರ್ಲಕ್ಷ್ಯ ವಹಿಸುತ್ತಿರುವುದು ಖಂಡನೀಯ. ಈಗಾಗಲೇ ಗಾಜನೂರಿನ ನವೋದಯ ವಿದ್ಯಾಲಯದಲ್ಲಿ ಅನುದಾನದ ಕೊರತೆಯಿಂದ ಕಳೆದ ಮೂರು ತಿಂಗಳಿನಿಂದ ಮಕ್ಕಳಿಗೆ ಮಾಂಸಾಹಾರಿ ಊಟ ಕೊಡುವುದನ್ನು ನಿಲ್ಲಿಸಲಾಗಿದೆ. ವಸತಿನಿಲಯದಲ್ಲಿ ಬಿಸಿನೀರಿನ ವ್ಯವಸ್ಥೆ ಇಲ್ಲ, ಸೊಳ್ಳೆ ಜಾಲರಿಗಳು ಮುರಿದು ಹೋಗಿವೆ. ನಿಲಯದಲ್ಲಿ ಹಿರಿಯ ವಿದ್ಯಾರ್ಥಿಗಳು ಕಿರಿಯ ವಿದ್ಯಾರ್ಥಿಗಳ ಮೇಲಿನ ಕಿರುಕುಳ ಮಿತಿಮೀರಿದೆ. ಕೇಂದ್ರ ಸರ್ಕಾರವು ಜವಹರ ವೆಂಬ ಹೆಸರಿನಿಂದ ಈ ತಾರತಮ್ಯ ನೀತಿ ಅನುಸರಿಸುತ್ತಿರುವ ಕ್ರಮ ಹೇಸಿಗೆ ಹುಟ್ಟಿಸುವಂತಿದೆ. ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳ ಕನಸಾಗಿರುವ ನವೋದಯವು ಗತಕಾಲದ ವೈಭವವನ್ನು ಪಡೆಯುವುದೇ ಎಂಬುದನ್ನು ಕಾದು ನೋಡಬೇಕಾಗಿದೆ.

। ಬೀರೇಶ್ವರ ಎಸ್,ಡಿ, ಚಿಕ್ಕಜೋಗಿಹಳ್ಳಿ, ಶಿಕಾರಿಪುರ, ಶಿವಮೊಗ್ಗ

==

ನವೋದಯ ವಿದ್ಯಾಲಯ ಉಳಿಸಿ

ನವೋದಯ ವಿದ್ಯಾಲಯವು ಭಾರತದ ಪ್ರಮುಖ ಶಿಕ್ಷಣ ಸಂಸ್ಥೆಗಳಲ್ಲಿ ಒಂದಾಗಿದೆ. ಕೇಂದ್ರ ಸರ್ಕಾರವು ಇಂತಹ ವಿದ್ಯಾಲಯಗಳ ನಿರ್ವಹಣೆಗೆ ಯಾವುದೇ ವ್ಯಕ್ತಿ, ಪಕ್ಷವನ್ನಾಧರಿಸದೆ, ತಾರತಮ್ಯ ನೀತಿ ಅನುಸರಿಸಬಾರದು. ಗ್ರಾಮೀಣ ಪ್ರತಿಭಾವಂತ ವಿದ್ಯಾರ್ಥಿಗಳ ಕಲಿಕೆಗೆ ಅನುಕೂಲ ಕಲ್ಪಿಸುವುದು ಇಂದಿನ ಅವಶ್ಯಕತೆ.

। ಲಕ್ಷ್ಮಣ ನಾಯ್ಕ, ಹಗರಿಬೊಮ್ಮನಹಳ್ಳಿ

==

ಹೆಚ್ಚಿನ ಅನುದಾನ ನೀಡಿ

ಕಳೆದ ಏಳೆಂಟು ವರ್ಷಗಳ ಹಿಂದೆ ನವೋದಯ ವಿದ್ಯಾಲಯ ಎಂದರೆ ವಿದ್ಯಾರ್ಥಿಗಳಿಗೆ ಅಚ್ಚುಮೆಚ್ಚಿನ ವಿದ್ಯಾ ಕೇಂದ್ರವಾಗಿತ್ತು. ಆದರೆ ಈಗ ಸಮಸ್ಯೆಗಳ ಆಗರವಾಗಿದೆ. ಅನೇಕ ಪೋಷಕರು ತಮ್ಮ ಮಕ್ಕಳನ್ನು ನವೋದಯ ಶಾಲೆಗಳನ್ನು ಬಿಟ್ಟು, ಖಾಸಗಿ ಶಾಲೆಗಳಿಗೆ ಸೇರಿಸುತ್ತಿದ್ದಾರೆ. ಈ ಶಾಲೆಗಳಲ್ಲಿ ಶಿಕ್ಷಕರ ಕೊರತೆ, ಶುದ್ಧ ಕುಡಿಯುವ ನೀರಿನ ಸಮಸ್ಯೆ, ಸುರಕ್ಷತೆ, ಶಾಲೆಗಳಿಗೆ ಸರ್ಕಾರದಿಂದ ಅನುದಾನದ ಕೊರತೆ ಮತ್ತು ಪಠ್ಯೇತರ ಚಟುವಟಿಕೆ ನಡೆಯುತ್ತಿಲ್ಲ. ಕೂಡಲೇ ಕೇಂದ್ರ ಸರ್ಕಾರ ಈ ಶಾಲೆಗಳಿಗೆ ಹೆಚ್ಚಿನ ಅನುದಾನ ನೀಡಿ ಹಿಂದಿನ ಗತವೈಭವ ಮರುಕಳಿಸುವಂತೆ ಮಾಡಬೇಕು.

ಭೀಮಾಶಂಕರ ದಾದೆಲಿ, ಹಳಿಸಗರ, ಶಹಾಪುರ

==

ನವೋದಯದ ಅಸ್ಮಿತೆ ಉಳಿಯಲಿ

ರಾಜೀವ್ ಗಾಂಧಿ ಅವರ ಕನಸಿನ ವಿದ್ಯಾಲಯವಾದ ನವೋದಯ ಶಾಲೆಗಳ ಉದ್ದೇಶ ಗ್ರಾಮೀಣ ಬಡ ಪ್ರತಿಭಾವಂತರಿಗೆ ಉತ್ತಮ ಗುಣಮಟ್ಟದ ಶಿಕ್ಷಣವನ್ನು ನೀಡುವುದರ ಜೊತೆಗೆ ವಿದ್ಯಾರ್ಥಿಗಳ ಸಮಗ್ರ ವ್ಯಕ್ತಿತ್ವವನ್ನು ರೂಪಿಸುವುದಾಗಿತ್ತು. ಆದರೆ ಇಂದಿನ ಪ್ರಜಾವಿರೋಧಿ ಸರ್ಕಾರದ ನಡೆಯಿಂದ ಅನುದಾನದ ಕೊರತೆ, ಪರೀಕ್ಷೆಯಲ್ಲಿ ಅಕ್ರಮ, ಅಧ್ಯಾಪಕರ ಕೊರತೆ, ಮೂಲಭೂತ ಅವಶ್ಯಕತೆಗಳಂತಹ ಹತ್ತು ಹಲವಾರು ಸಮಸ್ಯೆಗಳಿಂದ ಈ ವಿದ್ಯಾಲಯಗಳು ಬಳಲುತ್ತಿವೆ. ಮಠ ಮಂದಿರಗಳಿಗೆ ನೂರಾರು ಕೋಟಿ ಅನುದಾನವನ್ನು ನೀಡುವ ಹಾಗೆಯೇ ಅನವಶ್ಯಕ ಯಾತ್ರೆಗೆ ಪೋಲು ಮಾಡುವ ಬದಲು ಇಂತಹ ವಿದ್ಯಾಲಯವನ್ನು ಅಭಿವೃದ್ಧಿ ಪಡಿಸಲು ಆಗುವುದಿಲ್ಲವೇ?

ಸುನೀಲ್. ಐ ಎಸ್, ಹಂಪಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT