ಶನಿವಾರ, 5 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ಒಳನೋಟ: ಮಳೆಗಾಲದ ಯಕ್ಷ ಸಂಕಟ..
ಒಳನೋಟ: ಮಳೆಗಾಲದ ಯಕ್ಷ ಸಂಕಟ..
ಕೆಲವು ವರ್ಷಗಳ ಹಿಂದಿನವರೆಗೂ ಯಕ್ಷಗಾನ ಕಲಾವಿದರಿಗೆ ಮಳೆಗಾಲವೆಂದರೆ ಭಯ ಹಟ್ಟುತ್ತಿತ್ತು. ಕಲೆಯನ್ನೇ ನಂಬಿದ್ದವರಿಗೆ ಈ ಆರು ತಿಂಗಳು ಅರೆ ಹೊಟ್ಟೆಯ ಜೀವನವಾಗಿರುತ್ತಿತ್ತು.
ಫಾಲೋ ಮಾಡಿ
Published 16 ಜುಲೈ 2023, 0:32 IST
Last Updated 16 ಜುಲೈ 2023, 0:32 IST
Comments

ಮಂಗಳೂರು: ಉರಿಯುವ ‘ದೊಂದಿ’ಗೆ (ದೀವಟಿಗೆ) ರಾಳದ ಪುಡಿಯನ್ನು ಎರಚುತ್ತಾ..., ಪ್ರೇಕ್ಷಕರ ಮಧ್ಯದಿಂದ ಅಬ್ಬರಿಸುತ್ತಾ ವೇದಿಕೆಯ ಮೇಲೆ ಬರುವ, ದೇವೇಂದ್ರನಾದಿಯಾಗಿ ದೇವಾಧಿದೇವತೆಗಳಲ್ಲಿ ನಡುಕ ಹುಟ್ಟಿಸಿದ ಮಹಿಷಾಸುರ... ಮಳೆಗಾಲದಲ್ಲಿ ಪುತ್ತೂರಿನ ಅಡಿಕೆ ಬೆಳೆಗಾರರ ಮನೆಯಲ್ಲಿ ಬೆಳಿಗ್ಗೆಯಿಂದ ಸಂಜೆಯವರೆಗೂ ಅಡಿಕೆ ಸುಲಿಯುತ್ತಾನೆ.

ಹೇಗಿದ್ದೀರಿ ಎಂದು ವಿಚಾರಿಸಿದರೆ ಮುಖವನ್ನು ಆಕಾಶದತ್ತ ಎತ್ತಿ, ಹುಂ.. ಹೂಂ.. ಊಹೂಂ... ಎಂದು ಧ್ವನಿಯಲ್ಲೇ ಸಂಜ್ಞಾ ಭಾಷೆಯಲ್ಲಿ ಮಾತನಾಡುತ್ತಾನೆ. ಮತ್ತೂ ಮಾತಿಗೆಳೆದರೆ ಬಾಯಿಯಲ್ಲಿದ್ದ ಕವಳವನ್ನು ಪಕ್ಕದ ಹೂವಿನ ಗಿಡದ ಬುಡಕ್ಕೆ ಪಿಚಕ್ಕನೆ ಉಗಿದು, ಅಡಿಕೆ ಸುಲಿಯುತ್ತಾ ಲೋಕಾಭಿರಾಮದ ಮಾತಿಗಿಳಿಯುತ್ತಾನೆ.

ತಾಯಿಗೆ ಬಾಯಿಯಲ್ಲಿ ಬ್ರಹ್ಮಾಂಡವನ್ನು ತೋರಿದ್ದ, ತನಗಾಗಿ ಅವಲಕ್ಕಿ ತಂದಿದ್ದ ಬಾಲ್ಯದ ಸ್ನೇಹಿತ ಕುಚೇಲನಿಗೆ ಧನಕನಕಾದಿಗಳ ಮಳೆಗರೆದಿದ್ದ ಕೃಷ್ಣ (ಪಾತ್ರಧಾರಿ) ತಮ್ಮೂರಿನ ನ್ಯಾಯಬೆಲೆ ಅಂಗಡಿಯಲ್ಲಿ ಬಯೊಮೆಟ್ರಿಕ್‌ ಯಂತ್ರದ ಮೇಲೆ ಬೆರಳಿಟ್ಟು ಅಕ್ಕಿಗಾಗಿ ಕಾಯುತ್ತಿದ್ದ. ಗೋವರ್ಧನ ಗಿರಿಯನ್ನು ಕಿರು ಬೆರಳಿನಿಂದ ಎತ್ತಿ ಹಿಡಿದು, ಮಥುರೆಯ ಜನರನ್ನು ರಕ್ಷಿಸಿದ್ದ ಆತ, ರೇಷನ್‌ ಅಕ್ಕಿಯನ್ನು ಮನೆಗೊಯ್ಯಲು ಬಸ್ಸಿಗೆ ಎದುರು ನೋಡುತ್ತಿದ್ದ...

ಒಂದು ಬಣ್ಣಬಣ್ಣದ ವೇದಿಕೆಯ ಮೇಲೆ ತೆರೆದುಕೊಳ್ಳುವ ಪೌರಾಣಿಕ ಕಥನ, ಇನ್ನೊಂದು ಬದುಕಿನ ವಾಸ್ತವ. ಉಡುಪಿ, ದಕ್ಷಿಣ ಕನ್ನಡ ಹಾಗೂ ಉತ್ತರ ಕನ್ನಡ ಭಾಗದ ಯಕ್ಷಗಾನದ ಕಲಾವಿದರಿಗೆ ಇದೇ ಬದುಕು. ತುಳುನಾಡಿನಲ್ಲಿ ‘ಪತ್ತನಾಜೆ’ (ಹಬ್ಬಗಳ ಋತುವಿನ ಕೊನೆಯದಿನ) ಬಂತೆಂದರೆ ಯಕ್ಷಗಾನ ಪ್ರದರ್ಶನಗಳಿಗೆ ತೆರೆಬೀಳುತ್ತದೆ. ಮುಂದೆ ಪ್ರದರ್ಶನಗಳು ಆರಂಭವಾಗುವುದು ನವೆಂಬರ್‌ ಅಂತ್ಯ ಅಥವಾ ಡಿಸೆಂಬರ್‌ ತಿಂಗಳಲ್ಲಿ. ವೇದಿಕೆಯಲ್ಲಿ ಕೃಷ್ಣನಾಗಿ, ರಾಮನಾಗಿ, ಮಹಿಷಾಸುರನಾಗಿ ಅಥವಾ ಸಾಮಾಜಿಕ ಪ್ರಸಂಗಗಳಲ್ಲಿ ರಾಜನಾಗಿ, ವಿದೂಷಕನಾಗಿ ಮಿಂಚಿದ ಕಲಾವಿದರಿಗೆ, ಮಳೆಗಾಲದ ಆರಂಭದಿಂದ ಆರು ತಿಂಗಳ ಕಾಲ ಬೇರೆ ವೃತ್ತಿ ಅನಿವಾರ್ಯ. ಮೇಲೆ ಉದಾಹರಿಸಿದ ಪ್ರಸಂಗಗಳು ಸ್ವಲ್ಪ ಉತ್ಪ್ರೇಕ್ಷಿತವೇ ಎನಿಸಿದರೂ, ಪರಿಸ್ಥಿತಿ ತುಂಬಾ ಭಿನ್ನವಾಗಿಲ್ಲ.

ಖ್ಯಾತ ಚಂಡೆ ವಾದಕ ವಿಘ್ನೇಶ್ವರ ಗೌಡ ಕೆಸರಕೊಪ್ಪ ಬಾಡಿಗೆ ವಾಹನ ಚಾಲನೆ ಮಾಡುತ್ತಿರುವುದು
ಖ್ಯಾತ ಚಂಡೆ ವಾದಕ ವಿಘ್ನೇಶ್ವರ ಗೌಡ ಕೆಸರಕೊಪ್ಪ ಬಾಡಿಗೆ ವಾಹನ ಚಾಲನೆ ಮಾಡುತ್ತಿರುವುದು

ಸ್ವಲ್ಪ ಸುಧಾರಿಸಿದೆ

ಕೆಲವು ವರ್ಷಗಳ ಹಿಂದಿನವರೆಗೂ ಯಕ್ಷಗಾನ ಕಲಾವಿದರಿಗೆ ಮಳೆಗಾಲವೆಂದರೆ ಭಯ ಹಟ್ಟುತ್ತಿತ್ತು. ಕಲೆಯನ್ನೇ ನಂಬಿದ್ದವರಿಗೆ ಈ ಆರು ತಿಂಗಳು ಅರೆ ಹೊಟ್ಟೆಯ ಜೀವನವಾಗಿರುತ್ತಿತ್ತು. ಈ ಆರು ತಿಂಗಳಲ್ಲಿ ಗದ್ದೆ ಕೆಲಸ, ಕೂಲಿ–ನಾಲಿ ಮಾಡುತ್ತಿದ್ದ ನೂರಾರು ಕಲಾವಿದರು ಕಾಣಸಿಗುತ್ತಿದ್ದರು. ಕೆಲವರಿಗೆ ಸ್ವಂತ ಜಮೀನು ಇದ್ದು, ಅಂಥವರು ತಮ್ಮದೇ ಹೊಲ–ಗದ್ದೆಯಲ್ಲಿ ಕೆಲಸ ಮಾಡಿ ಆರ್ಥಿಕವಾಗಿ ಸದೃಢರಾಗುತ್ತಿದ್ದರು. ಕೆಲವರು ಮಳೆಗಾಲದ ಖರ್ಚಿಗೆಂದೇ ಮೇಳದ ಯಜಮಾನರಿಂದ ಮುಂಗಡ ಹಣ ಪಡೆದಿರುತ್ತಿದ್ದರು. ಈಗ ಪರಿಸ್ಥಿತಿ ಬದಲಾಗಿದೆ. ಎಲ್ಲರೂ ಪರ್ಯಾಯಗಳನ್ನು ಹುಡುಕಿದ್ದಾರೆ. ಕೂಲಿ ಮಾಡುವವರು, ಅಡಿಕೆ ಸುಲಿಯುವವರು ಈಗಲೂ ಇಲ್ಲವೆಂದಲ್ಲ, ಅದರ ಹೊರತಾಗಿಯೂ ಮಳೆಗಾಲದಲ್ಲಿ ಸಂಪಾದನೆಯ ದಾರಿಗಳನ್ನು ಹಲವರು ಕಂಡುಕೊಂಡಿದ್ದಾರೆ. ಇವರಲ್ಲಿ ಕೆಲವರು ಆಯ್ಕೆ ಮಾಡಿರುವ ಮಾರ್ಗಗಳ ಬಗ್ಗೆ ಹಿರಿಯ ಕಲಾವಿದರ ಆಕ್ಷೇಪವೂ ಇದೆ.

ಚಿಕ್ಕಮೇಳ

ಉಡುಪಿ– ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಕಳೆದ ಕೆಲವು ವರ್ಷಗಳಲ್ಲಿ ಚಿಕ್ಕ ಮೇಳಗಳ ಸಂಖ್ಯೆ ಹೆಚ್ಚಿದೆ. ಇಬ್ಬರು ವೇಷಧಾರಿಗಳು ಹಾಗೂ ಹಿಮ್ಮೇಳದಲ್ಲಿ ಮೂವರು ಹೀಗೆ ಒಟ್ಟು ಐವರು ಕಲಾವಿದರನ್ನು ಒಳಗೊಂಡ ಈ ತಂಡಗಳು ಮನೆಮನೆಗೆ ಹೋಗಿ ಅರ್ಧಗಂಟೆ– ಒಂದು ಗಂಟೆ ಪ್ರದರ್ಶನ ನೀಡುತ್ತವೆ. ಮನೆಯವರು ಹಣದ ಜೊತೆಗೆ ಅಕ್ಕಿ, ತೆಂಗಿನ ಕಾಯಿ, ಹಣ್ಣು ಹಂಪಲ ನೀಡುತ್ತಾರೆ. ‘ಇಂಥ ಕಲಾವಿದರಿಗೆ ದಿನಕ್ಕೆ ಸಾವಿರ ರೂಪಾಯಿ ಗೌರವಧನ ಹಾಗೂ ಸಿಕ್ಕಿದ ಅಕ್ಕಿ, ಕಾಯಿಯಲ್ಲಿ ಪಾಲು ನೀಡಲಾಗುತ್ತದೆ’ ಎಂದು ಹೆಸರು ಬಹಿರಂಗಪಡಿಸಲು ಇಚ್ಛಿಸದ ಕಲಾವಿದರೊಬ್ಬರು ಹೇಳಿದರು.

‘ಚಿಕ್ಕಮೇಳದಲ್ಲಿ ಈಚೆಗೆ ಹೆಚ್ಚು ಆದಾಯ ಬರುತ್ತಿದೆ. ಆದ್ದರಿಂದ ಮೇಳಗಳ ಸಂಖ್ಯೆ ಹೆಚ್ಚಾಗುತ್ತಿದೆ. ವಾಸ್ತವದಲ್ಲಿ ಇದರಲ್ಲಿ ಕಲೆಯ ಅಂಶ ಇರುವುದು ಅತ್ಯಲ್ಪ. ಇದು ಕಲೆಯಾಗಿ ಅಲ್ಲ, ಕಲಾವಿದರ ಆದಾಯದ ಮೂಲವಾಗಿಯಷ್ಟೇ ಇದೆ’ ಎನ್ನುತ್ತಾರೆ ಅವರು.

ಇನ್ನೂ ಕೆಲವು ಮೇಳದವರು ಬೇರೆಬೇರೆ ಊರುಗಳಿಗೆ, ವಿಶೇಷವಾಗಿ ಬೆಂಗಳೂರು, ಮುಂಬೈಗೆ ಹೋಗಿ ಪ್ರದರ್ಶನ ನೀಡುತ್ತಿದ್ದರು. ಈಗಲೂ ಅಲ್ಲಿ ಪ್ರದರ್ಶನಗಳಿಗೆ ಅವಕಾಶ ಇದ್ದರೂ ಆದಾಯ ಕಡಿಮೆಯಾಗಿದೆ. ಆದ್ದರಿಂದ ಒಂದೆರಡು ಮೇಳದವರು ಹಾಗೂ ಹೆಚ್ಚು ಖ್ಯಾತಿ ಪಡೆದ ಕಲಾವಿದರಷ್ಟೇ ಹೋಗುತ್ತಾರೆ. ಉಳಿದವರು ತಮ್ಮ ಊರಿನಲ್ಲೇ ಬೇರೆಬೇರೆ ಕೆಲಸ ಮಾಡುತ್ತಾರೆ.

‘ಕಲಾವಿದರಿಗೆ ಹಿಂದೆ ಇದ್ದಷ್ಟು ಕಷ್ಟ ಈಗ ಇಲ್ಲ. ಬೇರೆಬೇರೆ ಉಪ ವೃತ್ತಿಗಳು ತೆರೆದುಕೊಂಡಿವೆ. ಸ್ವಲ್ಪ ಹೆಸರು ಗಳಿಸಿರುವ ಕಲಾವಿದರು ಸ್ವಂತ ಒಂದಿಷ್ಟು ಆಸ್ತಿ ಪಾಸ್ತಿ ಮಾಡಿಕೊಂಡಿದ್ದಾರೆ, ಇನ್ನೂ ಕೆಲವರು ಯಕ್ಷಗಾನ ತರಗತಿಗಳನ್ನು ನಡೆಸುತ್ತಾರೆ. ಅಲ್ಲಿ– ಇಲ್ಲಿ ಪ್ರದರ್ಶನಗಳನ್ನು ನೀಡುತ್ತಾರೆ. ಹೇಗೋ ಸಂಪಾದನೆ ಆಗುತ್ತದೆ’ ಎಂದು ಹಿರಿಯ ಕಲಾವಿದ ತಾರಾನಾಥ ವರ್ಕಾಡಿ ಹೇಳುತ್ತಾರೆ.

‘ಈಚಿನ ವರ್ಷಗಳಲ್ಲಿ ಈ ಕ್ಷೇತ್ರದಲ್ಲಿ ಗಮನಾರ್ಹ ಬದಲಾವಣೆಯಾಗಿದೆ. ಹಗಲು ಹೊತ್ತಿನಲ್ಲಿ ಬೇರೆ ವೃತ್ತಿ ಮಾಡುವವರು, ರಾತ್ರಿ ವೇಳೆಯಲ್ಲಿ ವೇಷ ಹಾಕಿ ಪ್ರದರ್ಶನ ನೀಡುತ್ತಾರೆ. ಇಂಥವರಿಗೆ ಯಕ್ಷಗಾನ ಒಂದು ಉಪವೃತ್ತಿ. ಇವರಿಗೆ ಮಳೆಗಾಲದಲ್ಲಿ ಮೂಲ ವೃತ್ತಿಯಿಂದ ವೇತನ ಬರುತ್ತಿರುತ್ತದೆ. ಜೀವನಕ್ಕೆ ಯಾವುದೇ ತೊಂದರೆ ಆಗುವುದಿಲ್ಲ’ ಎಂದು ವರ್ಕಾಡಿ ಹೇಳುತ್ತಾರೆ.

ವೃತ್ತಿಪರ ಮೇಳಗಳಲ್ಲಿ ಎರಡು– ಮೂರು ಮೇಳದವರು ಮಳೆಗಾಲದ ಆರು ತಿಂಗಳಲ್ಲಿ ಕಲಾವಿದರಿಗೆ ಒಂದಷ್ಟು ಮಾಸಾಶನ ನೀಡುತ್ತಿದ್ದಾರೆ. ಹೆಚ್ಚಿನ ಮೇಳದವರು ಏನನ್ನೂ ಕೊಡುವುದಿಲ್ಲ ಎಂದು ಕಲಾವಿದರು ಹೇಳುತ್ತಾರೆ. ಕಲಾವಿದರಿಗೆ ಆ ಬಗ್ಗೆ ಬೇಸರವೇನೂ ಇದ್ದಂತಿಲ್ಲ. ಆದರೆ ತಮಗೆ ಸಮಾಜದಲ್ಲಿ ಗೌರವ ಹಾಗೂ ಒಂದಿಷ್ಟು ಜೀವನ ಭದ್ರತೆ ಸಿಗಬೇಕು ಎಂದು ಬಯಸುತ್ತಾರೆ.

ಬದುಕಿನ ಚೌಕಿಯಲ್ಲಿ ಬಣ್ಣ ಮಸುಕು

ಪರಿಸ್ಥಿತಿ ಎಲ್ಲಾ ಕಡೆ ಒಂದೇ ರೀತಿಯಾಗಿರುವುದಿಲ್ಲ. ‘ಬದುಕಿನ ‘ಚೌಕಿ’ಯಲ್ಲಿ ಬಹುತೇಕ ಯಕ್ಷ ಕಲಾವಿದರು ಬಣ್ಣ ಕಳೆದುಕೊಳ್ಳುತ್ತಿದ್ದಾರೆ. ವೃದ್ಧಾಪ್ಯದ ಭದ್ರತೆಯ ನಿರೀಕ್ಷೆಯಲ್ಲಿ ದಿನ ಕಳೆಯುತ್ತಿದ್ದಾರೆ. ಕಲೆಯನ್ನೇ ವೃತ್ತಿಯಾಗಿಸಿಕೊಂಡವರಿಗೆ ಬೇರೆ ವೃತ್ತಿ ಕಷ್ಟಸಾಧ್ಯ. ಯಕ್ಷಗಾನ ಹೊರತುಪಡಿಸಿ ಬೇರೆ ಕೆಲಸ ಗೊತ್ತಿಲ್ಲದವರಿಗೆ ಅನಿಶ್ಚಿತತೆ ಸಹಜವಾಗಿ ಕಾಡುತ್ತದೆ’ ಎಂದು ಹಾಸ್ಯ ಕಲಾವಿದ ಶ್ರೀಧರ ಹೆಗಡೆ ಚಪ್ಪರಮನೆ ಹೇಳುವಾಗ, ಅವರ ಮುಖದಲ್ಲಿ ವಿಷಾದದ ಗೆರೆಗಳು ಮೂಡಿದ್ದವು.

ಯಕ್ಷರಂಗದಲ್ಲಿ ಹಾಸ್ಯದ ಮೂಲಕ ಪ್ರೇಕ್ಷಕರನ್ನು ನಗೆಗಡಲಲ್ಲಿ ತೇಲಿಸುವ ಅವರು, ಯಕ್ಷಗಾನದಲ್ಲೇ ಹಲವು ವರ್ಷಗಳಿಂದ ಜೀವನ ಸವೆಸಿದ್ದಾರೆ. ಕಲಾವಿದರು ಬೆಳೆದಿದ್ದು, ಖ್ಯಾತಿ ಗಳಿಸಿದ್ದು, ಯಶಸ್ಸು ಕಾಣದೇ ಬಿದ್ದಿದ್ದು, ಸಂಕಷ್ಟದಲ್ಲೇ ಬದುಕು ಕಟ್ಟಿಕೊಂಡಿದ್ದು ಎಲ್ಲವನ್ನೂ ಬದುಕಿನಲ್ಲಿ ಕಂಡಿದ್ದಾರೆ.

‘ತಿರುಗಾಟ ಮುಗಿದ ಬಳಿಕ ಪ್ರದರ್ಶನ ಇಲ್ಲದಿರುವಾಗ ಸಮಸ್ಯೆ ಕಾಣುತ್ತದೆ. ಇದಕ್ಕೆ ಸರ್ಕಾರ ಅಥವಾ ಅಕಾಡೆಮಿ ನೇರ ಹೊಣೆಯಲ್ಲ. ಆದರೆ, ಸಂಪೂರ್ಣ ನಿರ್ಲಕ್ಷ್ಯವೂ ಸಲ್ಲ. ಕಲಾವಿದರಿಗೆ ಯಕ್ಷಗಾನ ಅಕಾಡೆಮಿಯಿಂದ ಗುರುತಿನ ಕಾರ್ಡ್ ವಿತರಿಸಬೇಕು ಎಂಬ ಬೇಡಿಕೆ ವರ್ಷಗಳಿಂದ ಇದ್ದರೂ ಅದು ಈಡೇರಿಲ್ಲ’ ಎನ್ನುತ್ತಾರೆ.

‘ಕಲಾವಿದರು ಖರ್ಚುವೆಚ್ಚಗಳ ಮೇಲೆ ಸ್ವಯಂ ನಿಯಂತ್ರಣ ಹಾಕಿಕೊಳ್ಳುತ್ತಾರೆ. ದುಡಿಯುವ ಸಂದರ್ಭದಲ್ಲಿ ಸ್ವಲ್ಪ ಹಣ ಕೂಡಿಟ್ಟು ಮುಂದಿನ ಪ್ರದರ್ಶನದವರೆಗೆ ಸಮಸ್ಯೆಯಾಗದಂತೆ ನೋಡಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೂ ಬದುಕಿನ ಅವಶ್ಯಕತೆಗಳ ಎದುರು ಸೋಲುವುದೇ ಹೆಚ್ಚು’ ಎಂದು ಕಲಾವಿದರ ಬದುಕನ್ನು ಅವರು ತೆರೆದಿಡುತ್ತಾರೆ.

‘ಯಕ್ಷಗಾನದಲ್ಲಿ ವಿವಿಧ ತಿಟ್ಟುಗಳು (ಪ್ರಕಾರಗಳು) ಸಮನ್ವಯ ಸಾಧಿಸಬೇಕು. ಯಕ್ಷಗಾನ ಶಾಸ್ತ್ರೀಯವೇ, ಜನಪದೀಯವೇ ಎಂಬ ದ್ವಂದ್ವ ಬದಿಗಿಟ್ಟು, ಪ್ರತಿ ತಿಟ್ಟನ್ನು ಅಂಗೀಕರಿಸುವ ಮನೋಭಾವ ಬಂದರೆ ಯಕ್ಷಗಾನದ ವಿಸ್ತಾರ ಹೆಚ್ಚುತ್ತದೆ. ಹಾಗಾದರೆ ಕಲಾವಿದರಿಗೂ ಸಂಭಾವನೆ ಹೆಚ್ಚುತ್ತದೆ. ಈ ನಿಟ್ಟಿನಲ್ಲಿ ಅಕಾಡೆಮಿ ಶ್ರಮಿಸುವ ಅಗತ್ಯವಿದೆ’ ಎಂಬುದು ಅವರ ವಾದ.

ವೇದಿಕೆಯ ಮೇಲೆ ಚಂಡೆಯ ಅಬ್ಬರದ ಮೂಲಕ ಮನೆಮಾತಾಗಿರುವ ವಿಘ್ನೇಶ್ವರ ಗೌಡ ಕೆಸರಕೊಪ್ಪ ವೃತ್ತಿ ಬದುಕಿನ ಸಂಭಾವನೆ ಜೀವನ ನಿರ್ವಹಣೆಗೆ ಸಾಲದಾದಾಗ ಬಾಡಿಗೆ ವಾಹನ ಚಾಲನೆ ಮಾಡುತ್ತಾರೆ.

ರಂಗಶಂಕರ ಸಂಸ್ಥೆಯ ಶಂಕರ ಭಾಗವತ ಮಾಸಾಶನಕ್ಕೆ ಅಲೆದು ಸುಸ್ತಾಗಿ, ‘ಕಲಾವಿದರು ಬದುಕಿರುವಾಗಲೇ ಅವರಿಗೆ ಸಿಗುವಂತಹ ವ್ಯವಸ್ಥೆ ಆಗಬೇಕು. ಬಹುತೇಕ ಸಮಯವನ್ನು ಸಂಕಷ್ಟದಲ್ಲೇ ಕಳೆಯುವ ಕಲಾವಿದರಿಗೆ ಇಳಿವಯಸ್ಸಿನಲ್ಲಾದರೂ ನೆಮ್ಮದಿ ದೊರೆಯುವಂತೆ ಮಾಡಬೇಕು’ ಎನ್ನುತ್ತಾರೆ.

ಪ್ರಸಿದ್ಧ ಭಾಗವತ ಕೊಳಗಿ ಕೇಶವ ಹೆಗಡೆ ಕೃಷಿ ಬದುಕನ್ನು ನೆಚ್ಚಿಕೊಳ್ಳುತ್ತಾರೆ. ಇಂಥ ಸಾವಿರಾರು ಕಲಾವಿದರು ವೃತ್ತಿಗೂ, ವೃತ್ತಿಯಾಚೆಗೂ ಬಗೆಬಗೆಯ ಮುಖ ಧರಿಸಿ ಜೀವನ ಕಟ್ಟಿಕೊಳ್ಳುತ್ತಿದ್ದಾರೆ. 

ಮುಂಬೈ ಈಗ ಬಲು ದೂರ

ಒಂದು ಕಾಲವಿತ್ತು... ಮಳೆಗಾಲ ಆರಂಭವಾಗುತ್ತಿದ್ದಂತೆ ಕರಾವಳಿ ಭಾಗದ ಯಕ್ಷಗಾನ ಮೇಳದವರು ಗಂಟು ಮೂಟೆ ಕಟ್ಟಿಕೊಂಡು ಮುಂಬೈ ಬಸ್ಸು ಹತ್ತಿಬಿಡುತ್ತಿದ್ದರು. ಮುಂಬೈಯ ಮಾಟುಂಗಾದಲ್ಲಿರುವ ಕರ್ನಾಟಕ ಸಂಘದ ಹವಾನಿಯಂತ್ರಿತ ಸಭಾಂಗಣದಲ್ಲಿ ಸುಮಾರು ಒಂದು ತಿಂಗಳ ಕಾಲ ನಿರಂತರ ಪ್ರದರ್ಶನ ನೀಡಿ, ಅರ್ಧ ವರ್ಷದ ಜೀವನಕ್ಕಾಗುವಷ್ಟು ಹಣ ಸಂಪಾದಿಸಿ ಊರಿಗೆ ಮರಳುತ್ತಿದ್ದರು.

ಮುಂಬೈಯಲ್ಲಿ ರಾತ್ರಿ ಇಡೀ ಪ್ರದರ್ಶನ ನಡೆಸಲು ಅನುಮತಿ ಇಲ್ಲದಿದ್ದರೂ, ‘ಯಾವುದೋ ಮಾರ್ಗ’ದಲ್ಲಿ ಪ್ರದರ್ಶನಗಳನ್ನು ನಡೆಸಲಾಗುತ್ತಿತ್ತು. ಅಲ್ಲಿ ನೆಲೆಸಿರುವ, ಕರಾವಳಿ ಭಾಗದ ಜನರು ಟಿಕೆಟ್‌ ಖರೀದಿಸಿ ಪ್ರದರ್ಶನಕ್ಕೆ ಬರುತ್ತಿದ್ದರು. ಅಂತಹ ಮುಂಬೈ ಈಗ ಯಕ್ಷ ಕಲಾವಿದರಿಗೆ ದೂರವಾಗಿದೆ.

‘ನವೀಕರಣಕ್ಕಾಗಿ ಕರ್ನಾಟಕ ಸಂಘದ ಕಟ್ಟಡವನ್ನು ಕೆಡವಲಾಗಿದೆ. ಬೇರೆಬೇರೆ ಉಪನಗರಗಳ ಸಭಾಂಗಣಗಳಲ್ಲಿ ಪ್ರದರ್ಶನ ನಡೆಸಬೇಕು. ರಾತ್ರಿಯಿಡೀ ಪ್ರದರ್ಶನಕ್ಕೆ ಅವಕಾಶವೇ ಇಲ್ಲ. ಟಿಕೆಟ್‌ ಖರೀದಿಸಿ ಆಟ ನೋಡಲು ಬರುವವರೂ ಇಲ್ಲ. ಪ್ರತಿ ಪ್ರದರ್ಶನಕ್ಕೂ ‍ಪ್ರಾಯೋಜಕರನ್ನು ಹುಡುಕಬೇಕು. ಬರುವ ಪ್ರೇಕ್ಷಕರಿಗೆ ಟೀ–ಕಾಫಿ, ಕೆಲವೊಮ್ಮೆ ಊಟದ ವ್ಯವಸ್ಥೆಯನ್ನೂ ಮಾಡಬೇಕು. ಈಗಲೂ ಎರಡು ಮೇಳಗಳನ್ನು ಆಹ್ವಾನಿಸಿ ಪ್ರದರ್ಶನ ಏರ್ಪಡಿಸುತ್ತೇನೆ. ಸಂಪಾದನೆಗಾಗಿ ಅಲ್ಲ, ಕಲೆಯ ಮೇಲಿನ ಅಭಿಮಾನಕ್ಕೆ’ ಎಂದು ಮೂರು ದಶಕಗಳಿಂದ ಮುಂಬೈಯಲ್ಲಿ ಯಕ್ಷಗಾನ ಪ್ರದರ್ಶನಗಳನ್ನು ಏರ್ಪಡಿಸುತ್ತಾ ಬಂದಿರುವ ಮೋಹನ ರೈ ಹೇಳುತ್ತಾರೆ.

‘ಒಂದರನಂತರ ಒಂದರಂತೆ ಹೆಚ್ಚಿನ ಎಲ್ಲಾ ಮೇಳದವರನ್ನು ಮುಂಬೈಗೆ ಆಹ್ವಾನಿಸುತ್ತಿದ್ದೆ. ನನಗೂ ಒಳ್ಳೆಯ ಸಂಪಾದನೆಯಾಗುತ್ತಿತ್ತು. ಈಗ ಪೆರ್ಡೂರು ಮತ್ತು ಪಾವಂಜೆ ಮೇಳದವರು ಬಂದು ಪ್ರದರ್ಶನ ನೀಡುತ್ತಾರೆ. ಆದರೆ ತಿಂಗಳುಗಟ್ಟಲೆ ಪ್ರದರ್ಶನಗಳು ನಡೆಯುವುದಿಲ್ಲ. ಪ್ರಾಯೋಜಕರು ಸಿಕ್ಕಷ್ಟು ದಿನ, ಅಂದರೆ 10–15 ಪ್ರದರ್ಶನಗಳು ನಡೆಯುತ್ತವೆ’ ಎಂದು ಅವರು ತಿಳಿಸಿದರು.

ಬಹುತೇಕ ಎಲ್ಲಾ ಪ್ರಸಂಗಗಳ ತುಣುಕುಗಳು ಈಗ ಯೂಟ್ಯೂಬ್‌, ಫೆಸ್‌ಬುಕ್‌ನಲ್ಲಿ ಲಭ್ಯ ಇರುತ್ತವೆ. ಆಸಕ್ತರು ಮನೆಯಲ್ಲೇ ಕುಳಿತು ಅಷ್ಟು–ಇಷ್ಟು ವೀಕ್ಷಿಸುತ್ತಾರೆ. ಆದ್ದರಿಂದ ಆಟ ನೋಡಲು ದುಡ್ಡುಕೊಟ್ಟು ಬರಬೇಕಾದ ಅಗತ್ಯವಿಲ್ಲ. ಸ್ಥಳೀಯವಾಗಿಯೂ ಕೆಲವರು ಯಕ್ಷಗಾನ ಕಲಿತು, ಆಗಾಗ ಇಲ್ಲಿ ಪ್ರದರ್ಶನ ನೀಡುತ್ತಾರೆ. ತಮ್ಮ ಮಕ್ಕಳ ಅಥವಾ ಸಂಬಂಧಿಕರ ವೇಷ ನೋಡಲು ಜನರು ಬರುತ್ತಾರೆ. ಒಟ್ಟಿನಲ್ಲಿ ಯಕ್ಷಗಾನದ ಚಟುವಟಿಕೆಗಳು ನಡೆಯುತ್ತಲೇ ಇವೆ, ಆದರೆ ಊರಿನ ಕಲಾವಿದರು ಬರುವುದು ಕಡಿಮೆಯಾಗಿದೆ ಎನ್ನುತ್ತಾರೆ ಮೋಹನ್‌.

‘ಹಿಂದೆ ಕರಾವಳಿ ಭಾಗದ ಜನರು ಉದ್ಯೋಗಕ್ಕಾಗಿ ಬೆಂಗಳೂರಿಗಿಂತ ಮುಂಬೈ ಕಡೆಗೆ ಮುಖ ಮಾಡುತ್ತಿದ್ದರು. ಅಂಥವರಿಗೆ ಊರಿನ ಕಲೆಯ ಬಗ್ಗೆ ವಿಶೇಷವಾದ ಗೌರವ ಇತ್ತು. ಈಗ ಕರಾವಳಿ ಭಾಗದಿಂದ ಮುಂಬೈಗೆ ಬರುವವರ ಸಂಖ್ಯೆ ಕಡಿಮೆಯಾಗಿದೆ. ಇಲ್ಲಿಯೇ ಇರುವ ಹೊಸ ತಲೆಮಾರಿನವರಿಗೆ ಯಕ್ಷಗಾನದಲ್ಲಿ ಅಷ್ಟೊಂದು ರುಚಿ ಇಲ್ಲ. ಇದರಿಂದಾಗಿ ಪ್ರದರ್ಶನಗಳ ಸಂಖ್ಯೆ ಇಳಿಯುತ್ತಿದೆ’ ಎಂದರು.‘

ಪೂರಕ ಮಾಹಿತಿ: ರಾಜೇಂದ್ರ ಹೆಗಡೆ (ಶಿರಸಿ), ಬಾಲಚಂದ್ರ ಎಚ್‌. (ಉಡುಪಿ)

ಜಿ.ಎಲ್.ಹೆಗಡೆ ಕುಮಟಾ
ಜಿ.ಎಲ್.ಹೆಗಡೆ ಕುಮಟಾ
ಮೋಹನ ರೈ
ಮೋಹನ ರೈ
ತೋಟದ ಕೆಲಸದಲ್ಲಿ ನಿರತರಾಗಿರುವ ಸಿದ್ದಾಪುರದ ಕೇಶವ‌ ಹೆಗಡೆ ಕೊಳಗಿ ಭಾಗವತರು
ತೋಟದ ಕೆಲಸದಲ್ಲಿ ನಿರತರಾಗಿರುವ ಸಿದ್ದಾಪುರದ ಕೇಶವ‌ ಹೆಗಡೆ ಕೊಳಗಿ ಭಾಗವತರು
ಕಾಸರಗೋಡು ಎಡನೀರು ಮಠದ ಶ್ರೀಗಳ ಚಾತುರ್ಮಾಸ್ಯದ ಅಂಗವಾಗಿ ಜುಲೈ 3ರಂದು ನಡೆದ ವಿವಿಧ ಮೇಳಗಳ ಕಲಾವಿದರ ಕೂಡುವಿಕೆಯ ಅಕ್ಷಯಾಂಬರ ಪ್ರಸಂಗ.
ಕಾಸರಗೋಡು ಎಡನೀರು ಮಠದ ಶ್ರೀಗಳ ಚಾತುರ್ಮಾಸ್ಯದ ಅಂಗವಾಗಿ ಜುಲೈ 3ರಂದು ನಡೆದ ವಿವಿಧ ಮೇಳಗಳ ಕಲಾವಿದರ ಕೂಡುವಿಕೆಯ ಅಕ್ಷಯಾಂಬರ ಪ್ರಸಂಗ.
ಕಾಸರಗೋಡು ಎಡನೀರು ಮಠದ ಶ್ರೀಗಳ ಚಾತುರ್ಮಾಸ್ಯದ ಅಂಗವಾಗಿ ಜುಲೈ 3ರಂದು ನಡೆದ ವಿವಿಧ ಮೇಳಗಳ ಕಲಾವಿದರ ಕೂಡುವಿಕೆಯ ಅಕ್ಷಯಾಂಬರ ಪ್ರಸಂಗ.
ಕಾಸರಗೋಡು ಎಡನೀರು ಮಠದ ಶ್ರೀಗಳ ಚಾತುರ್ಮಾಸ್ಯದ ಅಂಗವಾಗಿ ಜುಲೈ 3ರಂದು ನಡೆದ ವಿವಿಧ ಮೇಳಗಳ ಕಲಾವಿದರ ಕೂಡುವಿಕೆಯ ಅಕ್ಷಯಾಂಬರ ಪ್ರಸಂಗ.

ಅಂಕಿಅಂಶ

(ಕಲಾವಿದರ ಸಂಪೂರ್ಣ ಸಮೀಕ್ಷೆಯಾಗದ ಕಾರಣ ಅಂದಾಜು ಸಂಖ್ಯೆ ಹೀಗಿದೆ)

32 ವೃತ್ತಿ ಮೇಳಗಳು

1,300+ ವೃತ್ತಿ ಕಲಾವಿದರು

7,000+ ಹವ್ಯಾಸಿ ಕಲಾವಿದರು

ಇಂದು ಯಕ್ಷ ಕಲಾವಿದರ ಬದುಕು ಅಷ್ಟೊಂದು ದಯನೀಯವಾಗಿಲ್ಲ. ವರ್ಷದಲ್ಲಿ ಎರಡು ತಿಂಗಳು ಗಳಿಕೆ ಇಲ್ಲದಿದ್ದರೂ ಉಳಿದ ಸಂದರ್ಭದಲ್ಲಿ ಸಂಭಾವನೆ ಉತ್ತಮವಾಗಿದೆ. ಆದರೂ ಅಕಾಡೆಮಿಯು ಸರ್ಕಾರ ಹಾಗೂ ಕಲಾವಿದರ ನಡುವೆ ಸಮರ್ಥ ಮಧ್ಯವರ್ತಿಯಾಗಿ ಕಾರ್ಯನಿರ್ವಹಿಸಬೇಕು.

-ಶಿವಾನಂದ ಹೆಗಡೆ ಕೆರೆಮನೆ, ಇಡಗುಂಜಿ ಮಹಾಗಣಪತಿ ಯಕ್ಷಗಾನ ಮಂಡಳಿ ಮುಖ್ಯಸ್ಥ

‘ಸರ್ಕಾರದ ನೆರವು ಬೇಕು’

‘ಯಕ್ಷಗಾನ ಬೆಳೆಸಲು ಸರ್ಕಾರ ಹಲವು ಮಗ್ಗುಲುಗಳಲ್ಲಿ ಕ್ರಮ ವಹಿಸುವ ಅಗತ್ಯವಿದೆ’ ಎಂಬುದು ಯಕ್ಷಗಾನ ಅಕಾಡೆಮಿ ನಿಕಟಪೂರ್ವ ಅಧ್ಯಕ್ಷ ಜಿ.ಎಲ್. ಹೆಗಡೆ ಕುಮಟಾ ಅವರ ಅಭಿಪ್ರಾಯ. ‘ಕಲಾವಿದರಿಗೆ ಅಕಾಡೆಮಿ ನೇರವಾಗಿ ಆರ್ಥಿಕ ನೆರವು ನೀಡುವುದಿಲ್ಲ. ಬದಲಾಗಿ ಯಕ್ಷಗಾನ ಕಮ್ಮಟ ಪ್ರಯೋಗ ಕಾರ್ಯಾಗಾರ ತರಬೇತಿಗಳಿಗೆ ಅನುದಾನ ನೀಡುತ್ತದೆ. ಹೀಗಾಗಿ ಇಂಥ ಕಾರ್ಯಗಳಿಗೆ ಹೆಚ್ಚುವರಿ ಅನುದಾನ ಸರ್ಕಾರ ನೀಡಬೇಕು. ವಾರ್ಷಿಕವಾಗಿ ₹1.20 ಕೋಟಿ ಅನುದಾನ ಸಿಗುತ್ತಿದೆ. ಕೋವಿಡ್ ನಂತರ ₹60 ಲಕ್ಷ ಮಾತ್ರ ನೀಡಲಾಗುತ್ತಿದೆ. ಇದರಿಂದ ಕಾರ್ಯಕ್ರಮ ಸಂಘಟನೆಗೆ ಸಮಸ್ಯೆಯಾಗುತ್ತಿದೆ’ ಎಂದು ಅವರು ಹೇಳುತ್ತಾರೆ. ‘ರಾಜ್ಯದಲ್ಲಿ ಯಕ್ಷಗಾನ ಕಲಾವಿದರ ಸಮೀಕ್ಷೆ ಈವರೆಗೆ ಆಗಿಲ್ಲ. ಕೆಲ ಕಲಾವಿದರಿಗೆ ವೃದ್ಧಾಪ್ಯದಲ್ಲಿ ಔಷಧ ಖರ್ಚಾದರೂ ಸರಿದೂಗುತ್ತದೆ ಎಂಬ ಕಾರಣಕ್ಕೆ ₹5 ಸಾವಿರ ಸಹಾಯಧನ ನೀಡಲು ಸರ್ಕಾರದ ಎದುರು ಪ್ರಸ್ತಾವ ಇಡಲಾಗಿತ್ತು. ಆದರೆ ಅನುಷ್ಠಾನವಾಗಿಲ್ಲ. ಸರ್ಕಾರದ ಮಾಸಾಶನ ಯೋಜನೆಯಡಿ ₹2 ಸಾವಿರ ಕೊಡುತ್ತಾರೆ. ಆದರೆ ಅದರ ಪ್ರಕ್ರಿಯೆ ತುಂಬ ತಡವಾಗುತ್ತದೆ. ಕಲಾವಿದರ ನೋಂದಣಿ ಪ್ರಕ್ರಿಯೆ ತೀರಾ ಕ್ಲಿಷ್ಟವಿದ್ದು ಅದನ್ನು ಸರಳೀಕರಿಸಬೇಕು. ಉಡುಪಿಯಲ್ಲಿ ಇರುವ ಯಕ್ಷ ರಂಗಾಯಣದಂತೆ ಉತ್ತರ ಕನ್ನಡದಲ್ಲಿಯೂ ಯಕ್ಷ ರಂಗಾಯಣ ಅನುಷ್ಠಾನ ಮಾಡಬೇಕು’ ಎಂಬುದು ಅವರು ಆಶಯ. ‘ಯಕ್ಷಗಾನ ಉಳಿಸಲು ಕಳೆದ ವರ್ಷಗಳಲ್ಲಿ ಸಂಘಟಿಸಿದ್ದ ರಾಜ್ಯಮಟ್ಟದ ಯಕ್ಷಗಾನ ಸಮ್ಮೇಳನ ಮುಂದುವರಿಸಬೇಕು. ಗುರುಕುಲ ಪದ್ಧತಿಯಲ್ಲಿ ಅಕಾಡೆಮಿಕ್ ಶಿಕ್ಷಕರನ್ನು ಇಟ್ಟು ಯಕ್ಷಗಾನ ಕುರಿತು ಬಹು ಆಯಾಮದ ತರಬೇತಿ ನೀಡಬೇಕು’ ಎನ್ನುತ್ತಾರೆ ಅವರು.

ಪ್ರಸಿದ್ಧರಿಗೆ ತಾರಾ ಪಟ್ಟ ಬದುಕಿಗೆ ದಾರಿಯೇ ಇಲ್ಲದವರು ಯಕ್ಷಗಾನ ಕಲೆಯನ್ನು ನಂಬಿ ಬಂದು ಬದುಕು ಕಂಡುಕೊಂಡು ದೊಡ್ಡ ಕಲಾವಿದರೆನಿಸಿದ ಉದಾಹರಣೆಗಳು ಸಾಕಷ್ಟಿವೆ. ಆದರೆ ಅಂಥವರಿಗೆ ತಾರಾ ಪಟ್ಟ ಇರಲಿಲ್ಲ. ಈಗ ಯಕ್ಷಗಾನ ಕ್ಷೇತ್ರ ಬದಲಾಗಿದೆ. ಸ್ವಲ್ಪ ಹೆಸರು ಮಾಡಿದ ಕಲಾವಿದರಿಗೆ ತಾರಾ ಪಟ್ಟ ಲಭಿಸುತ್ತದೆ. ಸಾಮಾಜಿಕ ಮಾಧ್ಯಮಗಳಲ್ಲಿ ಸಭೆ ಸಮಾರಂಭಗಳಲ್ಲಿ ಮಿಂಚುತ್ತಾರೆ. ಸಣ್ಣ ಪುಟ್ಟ ಕಲಾವಿದರಿಗೆ ಇಂಥ ಭಾಗ್ಯ ಲಭಿಸುವುದಿಲ್ಲ. ಪ್ರಸಿದ್ಧ ಕಲಾವಿದರಿಗಷ್ಟೆ ಮಳೆಗಾಲದ ಆಟಗಳಲ್ಲಿ ಹೆಚ್ಚು ಅವಕಾಶಗಳು ದೊರೆತರೆ ಉಳಿದ ಕಲಾವಿದರು ಕೃಷಿ ಹೈನುಗಾರಿಕೆ ಸೇರಿದಂತೆ ಇತರೆ ವೃತ್ತಿಗಳತ್ತ ಹೊರಳಿ ಬದುಕು ಕಟ್ಟಿಕೊಳ್ಳುತ್ತಾರೆ. ಉಡುಪಿ ಜಿಲ್ಲೆಯೊಂದರಲ್ಲೇ 200ಕ್ಕೂ ಹೆಚ್ಚು ಹವ್ಯಾಸಿ ಯಕ್ಷಗಾನ ಮಂಡಳಿಗಳಿದ್ದು ಬೇಡಿಕೆಗೆ ಅನುಗುಣವಾಗಿ ಸಂಘದ ವಾರ್ಷಿಕೋತ್ಸವ ಹಬ್ಬ ಹರಿದಿನಗಳು ಹಾಗೂ ಕೆಲವು ಖಾಸಗಿ ಸಮಾರಂಭಗಳಲ್ಲಿ ಪ್ರದರ್ಶನ ನೀಡುತ್ತಾರೆ. ಇಂಥ ಮೇಳಗಳಲ್ಲಿ ಶಿಕ್ಷಕರು ಬ್ಯಾಂಕ್ ನೌಕರರು ವೈದ್ಯರು ಸೆಂಟ್ರಿಂಗ್ ಕೆಲಸ ಮಾಡುವವರು ಕೃಷಿಕರು ಹೀಗೆ ಅನ್ಯ ವೃತ್ತಿಗಳಲ್ಲಿ ತೊಡಗಿಸಿಕೊಂಡವರು ಇರುತ್ತಾರೆ. ಮಳೆಗಾಲದ ಅವಧಿಯಲ್ಲಿ ಹವ್ಯಾಸಿ ಮೇಳಗಳ ಪ್ರದರ್ಶನ ಬೆರಳೆಣಿಕೆಯಷ್ಟು ಮಾತ್ರ. ಈ ಸಮಯವನ್ನು ಅವರು ತರಬೇತಿಗೆ ಬಳಸಿಕೊಳ್ಳುವುದು ಹೆಚ್ಚು. ಪ್ರಸಿದ್ಧ ಕಲಾವಿದರನ್ನು ಕರೆಸಿ ಭಾಷಾ ಶುದ್ಧಿ ಸಂಭಾಷಣೆ ನೃತ್ಯದ ಸೂಕ್ಷ್ಮಗಳು ಹಾವ ಭಾವ ಪ್ರಸಂಗಗಳಲ್ಲಿ ಪರಿಣಾಮಕಾರಿಯಾಗಿ ಅಭಿನಯಿಸುವ ಪಟ್ಟುಗಳನ್ನು ಕಲಾವಿದರಿಗೆ ಕಲಿಸಿಕೊಡಲಾಗುತ್ತದೆ. ಕಲಿಕೆಯ ಜತೆಗೆ ಯಕ್ಷಗಾನದಲ್ಲಿ ಬಳಕೆಯಾಗುವ ವೇಷಭೂಷಣ ಹಾಗೂ ಇತರ ಪರಿಕರಗಳ ತಯಾರಿಕೆಯಲ್ಲೂ ತೊಡಗಿಸಿಕೊಳ್ಳುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT