ಸೋಮವಾರ, ಮೇ 23, 2022
30 °C

ಆಳ–ಅಗಲ: ಇಮ್ರಾನ್‌ ಖಾನ್‌ ಪದಚ್ಯುತಿ ಹಿನ್ನೆಲೆ ಮುನ್ನೆಲೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಪಾಕಿಸ್ತಾನದಲ್ಲಿ ಇಮ್ರಾನ್‌ ಖಾನ್ ನೇತೃತ್ವದ ತೆಹ್ರೀಕ್ ಎ ಇನ್ಸಾಫ್‌ ನೇತೃತ್ವದ ಮೈತ್ರಿ ಸರ್ಕಾರವು ಪತನವಾಗಿದೆ. ಪಿಎಂಎಲ್‌ ನೇತೃತ್ವದ ಮೈತ್ರಿ ಸರ್ಕಾರ ಇನ್ನೇನು ಅಸ್ತಿತ್ವಕ್ಕೆ ಬರಲಿದೆ. ಆದರೆ ಯಾವುದೇ ಸರ್ಕಾರ ಅಸ್ತಿತ್ವಕ್ಕೆ ಬಂದರೂ ಅದರ ಮುಂದೆ ಬೆಟ್ಟದಷ್ಟು ಸವಾಲುಗಳು ಇವೆ. ಇಮ್ರಾನ್‌ ಸರ್ಕಾರದ ಅವಧಿಯಲ್ಲಿ ಇದ್ದ ಸವಾಲುಗಳ ಜತೆಗೆ, ಕಳೆದ ಒಂದು ತಿಂಗಳಲ್ಲಿ ಇಮ್ರಾನ್‌ ಅವರ ಸರ್ಕಾರದ ವಿದೇಶಾಂಗ ನೀತಿಗಳ ಕಾರಣದಿಂದ ಹೊಸ ಸರ್ಕಾರವು ಮತ್ತಷ್ಟು ಸವಾಲುಗಳನ್ನು ಎದುರಿಸಬೇಕಾದ ಪರಿಸ್ಥಿತಿ ಬಂದೊದಗಿದೆ.

ಇಮ್ರಾನ್‌ ಅವರ ಸರ್ಕಾರದ ಅವಧಿಯಲ್ಲಿ ದೇಶವು ತೀವ್ರ ಆರ್ಥಿಕ ಬಿಕ್ಕಟ್ಟಿಗೆ ಗುರಿಯಾಗಿತ್ತು. ಈಗ ಪರಿಸ್ಥಿತಿ ಭಿನ್ನವಾಗೇನೂ ಇಲ್ಲ. ಇಮ್ರಾನ್‌ ಅಧಿಕಾರಕ್ಕೆ ಬಂದಾಗ ‘ನಯಾ ಪಾಕಿಸ್ತಾನ’ ನಿರ್ಮಿಸುವ ಭರವಸೆ ನೀಡಿದ್ದರು. ಆದರೆ ಸುಧಾರಿಸದ ಆರ್ಥಿಕ ನೀತಿ ಮತ್ತು ಕೋವಿಡ್‌ ಸಾಂಕ್ರಾಮಿಕದ ಪರಿಣಾಮವಾಗಿ ದೇಶವು ಸಂಕಷ್ಟಕ್ಕೆ ಸಿಲುಕಿತು. 

ಪಾಕಿಸ್ತಾನದಲ್ಲಿ ಹಣದುಬ್ಬರ ಶೇ 12ರ ಗಡಿಯನ್ನು ದಾಟಿದೆ. ವಿದೇಶಿ ಸಾಲದ ಮೊತ್ತವು 13,000 ಕೋಟಿ ಡಾಲರ್‌ಗಿಂತಲೂ ಹೆಚ್ಚಿದೆ (ಅಂದಾಜು 24.2 ಲಕ್ಷ ಕೋಟಿ ಪಾಕಿಸ್ತಾನ ರೂಪಾಯಿಗಳು). ಇದು ದೇಶದ ಒಟ್ಟು ಉತ್ಪನ್ನದ ಶೇ 43ರಷ್ಟಾಗುತ್ತದೆ. ಇದರ ಮಧ್ಯೆಯೇ, ಅಮೆರಿಕನ್ ಡಾಲರ್ ಎದುರು ಪಾಕಿಸ್ತಾನದ ರೂಪಾಯಿಯ ಮೌಲ್ಯ ಪಾತಾಳಕ್ಕೆ ಕುಸಿದಿದೆ. ಒಂದು ಅಮೆರಿಕನ್ ಡಾಲರ್‌ ವಿನಿಮಯಕ್ಕೆ ಪಾಕಿಸ್ತಾನೀಯರು 190 ರೂಗಳನ್ನು ವ್ಯಯಿಸಬೇಕಾದ ಸ್ಥಿತಿ ಇದೆ. 

‘ಪಾಕಿಸ್ತಾನದ ಮುಂದೆ ಯಾವುದೇ ದಾರಿ ಇಲ್ಲ. ಈ ಬಿಕ್ಕಟ್ಟಿನಿಂದ ಹೊರಬರಲು, ದೇಶದ ಆರ್ಥಿಕ ನೀತಿಯಲ್ಲಿ ಆಮೂಲಾಗ್ರ ಬದಲಾವಣೆ ಅನಿವಾರ್ಯವಾಗಿದೆ’ ಎನ್ನುತ್ತಾರೆ ಪಾಕಿಸ್ತಾನ್ ಇನ್‌ಸ್ಟಿಟ್ಯೂಟ್ ಆಫ್ ಡೆವಲಪ್‌ಮೆಂಟ್‌ ಎಕನಾಮಿಕ್ಸ್‌ನ ಕುಲಪತಿ ನದೀಂ ಉಲ್‌ ಹಕ್.

ಇಮ್ರಾನ್‌ ಖಾನ್ ಆಡಳಿತದ ಅವಧಿಯಲ್ಲಿ ದೇಶದಲ್ಲಿ ಭಯೋತ್ಪಾದನಾ ಚಟುವಟಿಕೆಗಳು ಹೆಚ್ಚಾಗಿದ್ದವು. ತಾಲಿಬಾನ್‌ನ ಪಾಕಿಸ್ತಾನದ ಘಟಕವನ್ನು ಮುಖ್ಯವಾಹಿನಿ ರಾಜಕಾರಣಕ್ಕೆ ತರಲು ಮತ್ತು ಆ ಮೂಲಕ ಭಯೋತ್ಪಾದನಾ ಚಟುವಟಿಕೆಗೆ ಕಡಿವಾಣ ಹಾಕಲು ಇಮ್ರಾನ್‌ ಯತ್ನಿಸಿದ್ದರು. ಇದಕ್ಕಾಗಿ ಅವರು ತಾಲಿಬಾನ್‌ ಜತೆಗೆ 10 ತಿಂಗಳಿಗೂ ಹೆಚ್ಚು ಕಾಲ ಮಾತುಕತೆ ನಡೆಸಿದ್ದರು. ಆದರೆ, ಮಾತುಕತೆ ಮುರಿದು ಬಿದ್ದಿತ್ತು. ಪಾಕಿಸ್ತಾನದ ವಿರುದ್ಧ ಉಗ್ರರು ತಮ್ಮ ನೆಲವನ್ನು ಬಳಸಿಕೊಳ್ಳಲು ಬಿಡುವುದಿಲ್ಲ ಎಂದು ಅಫ್ಗಾನಿಸ್ತಾನದ ತಾಲಿಬಾನ್‌ ಹೇಳಿದೆ. ಆದರೆ, ಪಾಕಿಸ್ತಾನದ ತಾಲಿಬಾನಿಗಳಿಗೆ ಅಫ್ಗಾನಿಸ್ತಾನದಲ್ಲಿ ಆಶ್ರಯ ನೀಡಲಾಗಿದೆಯೇ ಅಥವಾ ಅವರನ್ನು ಅಲ್ಲಿಂದ ಹೊರಗಟ್ಟಲಾಗಿದೆಯೇ ಎಂಬುದನ್ನು ತಾಲಿಬಾನ್ ಸ್ಪಷ್ಟಪಡಿಸಿಲ್ಲ. ಈ ಎಲ್ಲಾ ಸಂಗತಿಗಳನ್ನು ಸ್ಪಷ್ಟಪಡಿಸಿಕೊಳ್ಳಲು ನೂತನ ಸರ್ಕಾರವು, ತಾಲಿಬಾನಿನ ಜೊತೆ ಮತ್ತೆ ಹೊಸದಾಗಿ ಮಾತುಕತೆ ಆರಂಭಿಸಬೇಕಾಗುತ್ತದೆ. 

ಪಾಕಿಸ್ತಾನದಲ್ಲಿ ಖನಿಜ ಸಂಪನ್ಮೂಲ ಹೇರಳವಾಗಿರುವ ಬಲೂಚಿಸ್ತಾನ ಪ್ರದೇಶವು ಇನ್ನೂ ಪೂರ್ಣ ಪ್ರಮಾಣದಲ್ಲಿ ಸರ್ಕಾರದ ನಿಯಂತ್ರಣಕ್ಕೆ ಬಂದಿಲ್ಲ. ಬಂಡುಕೋರ ಸಂಘಟನೆಗಳು ಈ ಪ್ರದೇಶದ ಮೇಲಿನ ತಮ್ಮ ಹಿಡಿತವನ್ನು ಬಿಟ್ಟುಕೊಡುತ್ತಿಲ್ಲ. ಈ ಸಂಘಟನೆಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ದೊಡ್ಡ ಸವಾಲು ನೂತನ ಸರ್ಕಾರದ ಮುಂದೆಯೂ ಇದೆ.

ಪಾಕಿಸ್ತಾನದ ದೀರ್ಘಕಾಲದ ಮಿತ್ರ ಅಮೆರಿಕದ ಜತೆಗೂ ಇಮ್ರಾನ್‌ ಸಂಬಂಧ ಕೆಡಿಸಿಕೊಂಡಿದ್ದಾರೆ. ತಮ್ಮ ಸರ್ಕಾರವನ್ನು ಉರುಳಿಸಲು ಅಮೆರಿಕವು ಸಂಚು ರೂಪಿಸಿದೆ ಎಂದು ಅವರು ನೇರವಾಗಿ ಆರೋಪಿಸಿದ್ದಾರೆ. ಇದು ಅಮೆರಿಕದ ಕಣ್ಣನ್ನು ಕೆಂಪಾಗಿಸಿದೆ. ನೂತನ ಸರ್ಕಾರವು ಈ ಬಿಸಿಯನ್ನು ತಣ್ಣಗಾಗಿಸುವ ದೊಡ್ಡ ಸವಾಲನ್ನು ಎದುರಿಸುತ್ತಿದೆ. ಉಕ್ರೇನ್‌ ಮೇಲೆ ರಷ್ಯಾ ಅತಿಕ್ರಮಣ ನಡೆಸಿದ ವಿಚಾರದಲ್ಲಿ ಇಮ್ರಾನ್‌ ಅವರ ನಿಲುವು, ಪಾಶ್ಚಾತ್ಯ ದೇಶಗಳೊಂದಿಗೆ ಪಾಕಿಸ್ತಾನದ ಸಂಬಂಧವನ್ನು ಹಾಳು ಮಾಡಿದೆ. ಉಕ್ರೇನ್‌ ಮೇಲೆ ರಷ್ಯಾ ದಾಳಿ ನಡೆಸಿದ ದಿನ ಇಮ್ರಾನ್‌ ಅವರು ಮಾಸ್ಕೋದಲ್ಲಿ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಜತೆಗೆ ವೇದಿಕೆ ಹಂಚಿಕೊಂಡಿದ್ದರು. ರಷ್ಯಾ ದಾಳಿಯನ್ನು ಖಂಡಿಸಿ ಬೀಜಿಂಗ್ ಚಳಿಗಾಲದ ಒಲಿಂಪಿಕ್ಸ್‌ ಅನ್ನು ಐರೋಪ್ಯ ದೇಶಗಳು ಬಹಿಷ್ಕರಿಸಿದ್ದವು. ಬೇರೆ ದೇಶಗಳೂ ಬಹಿಷ್ಕರಿಸುವಂತೆ ಕರೆ ನೀಡಿದ್ದವು. ಇದನ್ನು ಕಡೆಗಣಿಸಿ, ಪಾಕಿಸ್ತಾನವು ಕ್ರೀಡಾಕೂಟದಲ್ಲಿ ಭಾಗಿಯಾಯಿತು. ಇದರಿಂದ ಪಾಕಿಸ್ತಾನವು ಈ ದೇಶಗಳ ವಿಶ್ವಾಸವನ್ನು ಕಳೆದುಕೊಂಡಿದೆ. ಈ ಎಲ್ಲಾ ದೇಶಗಳನ್ನು ಮರಳಿ ವಿಶ್ವಾಸಕ್ಕೆ ತೆಗೆದುಕೊಳ್ಳುವ ಕಾರ್ಯಕ್ಕೆ ನೂತನ ಸರ್ಕಾರ ಕೈಹಾಕಬೇಕಿದೆ.

ಕ್ರಿಕೆಟ್‌ ವರ್ಚಸ್ಸಿಗೆ ಮಸಿ ಬಳಿದ ರಾಜಕಾರಣ

1992ರ ಕ್ರಿಕೆಟ್‌ ವಿಶ್ವಕಪ್‌ನಲ್ಲಿ ತಮ್ಮ ಚಂಚಲ ತಂಡವು ಚಾಂಪಿಯನ್‌ಶಿಪ್‌ ಗೆಲ್ಲುವಂತೆ ಮಾಡುವಲ್ಲಿ ಇಮ್ರಾನ್ ಖಾನ್‌ ಯಶಸ್ವಿಯಾಗಿದ್ದರು. ಆದರೆ, ಅದೇ ಚಾಕಚಕ್ಯತೆಯನ್ನು ರಾಜಕೀಯದಲ್ಲಿ ತೋರಲು ಅವರಿಗೆ ಸಾಧ್ಯವಾಗಿಲ್ಲ. ಮೊದಲ ಇನಿಂಗ್ಸ್‌ನ ಮಧ್ಯದಲ್ಲಿಯೇ ವಿರೋಧ ಪಕ್ಷಗಳ ಒಗ್ಗಟ್ಟು ಇಮ್ರಾನ್‌ ಅವರನ್ನು ರನ್ಔಟ್‌ ಮಾಡಿದೆ. 

2018ರಲ್ಲಿ ಪ್ರಧಾನಿ ಹುದ್ದೆಗೆ ಏರುವ ಸಂದರ್ಭದಲ್ಲಿ ಇಮ್ರಾನ್‌ ಅವರಿಗೆ ಎಲ್ಲವೂ ಪೂರಕವಾಗಿಯೇ ಇದ್ದವು. ಕ್ರಿಕೆಟ್‌ ಕ್ರೀಡಾಂಗಣದಲ್ಲಿ ಸಿಕ್ಕ ಯಶಸ್ಸು ತಂದುಕೊಟ್ಟ ತಾರಾ ಪಟ್ಟ ಇತ್ತು. 1996ರಲ್ಲಿಯೇ ಪಕ್ಷ ಕಟ್ಟಿದ್ದ ಅವರು, ಪ್ರಧಾನಿ ಹುದ್ದೆಗೆ ಏರುವ ಹೊತ್ತಿಗೆ, ಪಾಕಿಸ್ತಾನದ ಇತರ ರಾಜಕಾರಣಿಗಳಿಗೆ ಹೋಲಿಸಿದರೆ ಪಕ್ವವಾದಂತೆ ಕಾಣುತ್ತಿದ್ದರು. 

ಸುದೀರ್ಘ ಕಾಲದಿಂದ ಪಾಕಿಸ್ತಾನ ರಾಜಕಾರಣವನ್ನು ಬಿಗಿ ಹಿಡಿತದಲ್ಲಿ ಇರಿಸಿಕೊಂಡಿದ್ದ ಎರಡೂ ಕುಟುಂಬಗಳನ್ನು (ನವಾಜ್‌ ಷರೀಫ್‌ ಪರಿವಾರ ಮತ್ತು ಬೆನಜೀರ್ ಭುಟ್ಟೊ ಪರಿವಾರ) ಅಧಿಕಾರದಿಂದ ದೂರ ಇರಿಸುವುದು ಇಮ್ರಾನ್‌ಗೆ ಸಾಧ್ಯವಾಗಿತ್ತು. ಚುನಾವಣೆ ಸಂದರ್ಭದಲ್ಲಿ ಅವರ ರ‍್ಯಾಲಿಗಳಿಗೆ ಭಾರಿ ಸಂಖ್ಯೆಯಲ್ಲಿ ಜನರು ಸೇರುತ್ತಿದ್ದರು. ಭ್ರಷ್ಟಾಚಾರದ ವಿರುದ್ಧ ಇಮ್ರಾನ್‌ ಆಡಿದ್ದ ಮಾತುಗಳು ಜನರಿಗೆ ಮೋಡಿ ಮಾಡಿದ್ದವು. ಇಮ್ರಾನ್‌ ಅಧಿಕಾರಕ್ಕೆ ಬಂದರೆ ಹೊಸ ಯುಗವೊಂದು ತೆರೆದುಕೊಳ್ಳಲಿದೆ ಎಂದು ಪಾಕಿಸ್ತಾನದ ಜನರು ಭಾವಿಸಿದ್ದರಲ್ಲಿ ಆಶ್ಚರ್ಯ ಏನೂ ಇರಲಿಲ್ಲ.

ಜನಪ್ರಿಯತೆಯ ಜತೆಗೆ ಪಾಕಿಸ್ತಾನದ ಪ್ರಬಲ ಸೇನೆಯ ಬೆಂಬಲವೂ ಇಮ್ರಾನ್‌ ಬೆನ್ನಿಗಿತ್ತು. ಹಾಗಾಗಿ, ಅಧಿಕಾರಕ್ಕೆ ಏರುವುದು ಅವರಿಗೆ ಸುಲಲಿತವಾಯಿತು.

ಆದರೆ, 2021ರ ಡಿಸೆಂಬರ್‌ ಹೊತ್ತಿಗೆ ಪರಿಸ್ಥಿತಿ ಭಿನ್ನವಾಯಿತು. ಪಾಕಿಸ್ತಾನದ ಪ್ರಭಾವಿ ಗುಪ್ತಚರ ಸಂಸ್ಥೆ ಐಎಸ್‌ಐನ ಮುಖ್ಯಸ್ಥರಾಗಿ ಲೆ. ಜ. ಹಮೀದ್‌ ಫೈಝ್‌ ಅವರನ್ನು ಮುಂದುವರಿಸಬೇಕು ಎಂಬುದು ಇಮ್ರಾನ್‌ ಅವರ ಆಗ್ರಹವಾಗಿತ್ತು. ಆದರೆ, ಸೇನಾ ಮುಖ್ಯಸ್ಥ ಜ. ಖಮರ್‌ ಜಾವೇದ್‌ ಬಾಜ್ವಾ ಅವರಿಗೆ ಇದು ಇಷ್ಟ ಇರಲಿಲ್ಲ. ಫೈಝ್‌ ಅವರನ್ನು ವರ್ಗಾಯಿಸಿ ಐಎಸ್‌ಐ ಮುಖ್ಯಸ್ಥ ಹುದ್ದೆಗೆ ನದೀಮ್‌ ಅಹ್ಮದ್‌ ಅಂಜುಮ್‌ ಅವರನ್ನು ಬಾಜ್ವಾ 2021ರ ನವೆಂಬರ್‌ನಲ್ಲಿ ನೇಮಿಸಿದರು. 

ಇಮ್ರಾನ್‌ ಮತ್ತು ಸೇನೆಯ ನಡುವಣ ಸಂಬಂಧ ಕದಡಿದೆ ಎಂಬುದನ್ನು ಈ ನೇಮಕವು ಬಹಿರಂಗಪಡಿಸಿತ್ತು. ಏರುತ್ತಲೇ ಇದ್ದ ಹಣದುಬ್ಬರ ಮತ್ತು ಭ್ರಷ್ಟಾಚಾರವನ್ನು ನಿಯಂತ್ರಣದಲ್ಲಿ ಇರಿಸಿಕೊಳ್ಳಲು ಇಮ್ರಾನ್‌ಗೆ ಸಾಧ್ಯವಾಗಲಿಲ್ಲ. 

ವಿರೋಧ ಪಕ್ಷಗಳಾದ ಪಾಕಿಸ್ತಾನ್‌ ಮುಸ್ಲಿಂ ಲೀಗ್‌–ನವಾಜ್‌ (ಪಿಎಂಎಲ್‌–ಎನ್‌) ಮತ್ತು ಪಾಕಿಸ್ತಾನ್‌ ಪೀಪಲ್ಸ್‌ ಪಾರ್ಟಿಗಳ ನಾಯಕರ ಬಗ್ಗೆ ಇಮ್ರಾನ್‌ ತೀವ್ರ ತಾತ್ಸಾರ ಪ್ರಕಟಿಸಿದ್ದರು. ಇಮ್ರಾನ್‌ ಅವರು ತೋರಿದ್ದ ಅಸಡ್ಡೆಯೇ, ಬದ್ಧ ಪ್ರತಿಸ್ಪರ್ಧಿಗಳಾಗಿದ್ದ ಈ ಎರಡೂ ಪಕ್ಷಗಳ ಮುಖಂಡರನ್ನು ಹತ್ತಿರ ತಂದಿತು. ಇದುವೇ ಇಮ್ರಾನ್‌ ಅವರ ಪದಚ್ಯುತಿಗೆ ಮುಖ್ಯ ಕಾರಣವಾಯಿತು. ಇಮ್ರಾನ್‌ ಅವರ ಪ್ರಖರ ಕ್ರಿಕೆಟ್‌ ಜೀವನದ ಮೇಲೆ ರಾಜಕೀಯ ಜೀವನದ ವೈಫಲ್ಯಗಳು ಕರಿಛಾಯೆ ಬೀರಿದ್ದು ಸುಳ್ಳಲ್ಲ. 

ಅವಿಶ್ವಾಸದ ಸೂತ್ರಧಾರರು ಯಾರು?

ಪಾಕಿಸ್ತಾನ ತೆಹ್ರೀಕ್‌ ಎ ಇನ್ಸಾಫ್‌ ಪಕ್ಷವನ್ನು ಕೇಂದ್ರವಾಗಿಸಿಕೊಂಡು ಇಮ್ರಾನ್‌ ಕಟ್ಟಿದ್ದ ಅತ್ಯಂತ ನಾಜೂಕು ಮೈತ್ರಿಕೂಟವನ್ನು ಒಡೆದದ್ದರ ಹಿಂದೆ ಕೆಲವು ವಾರಗಳ ಶ್ರಮವಿದೆ. ಇಮ್ರಾನ್‌ ಅವರ ನಡವಳಿಕೆಯಿಂದ ಬೇಸತ್ತಿದ್ದ ಅವರದ್ದೇ ಪಕ್ಷದ ಹಲವು ಸಂಸದರನ್ನೂ ವಿರೋಧ ಪಕ್ಷಗಳು ಜತೆಗೆ ಸೇರಿಸಿಕೊಂಡವು. ಈ ಎಲ್ಲವುಗಳು ಇಮ್ರಾನ್‌ ಪದಚ್ಯುತಿಗೆ ಕಾರಣಗಳಾದವು. ಈ ಪದಚ್ಯುತಿ ವಿದ್ಯಮಾನದ ಮುಖ್ಯ ಸೂತ್ರಧಾರರು ಇವರು:

ಶಾಹಬಾಝ್‌ ಷರೀಫ್‌: ಪ್ರಧಾನಿ ಹುದ್ದೆಗೆ ನಾಮಪತ್ರ ಸಲ್ಲಿಸಿರುವ 70 ವರ್ಷದ ಶಾಹಬಾಝ್‌ ಷರೀಫ್‌, ಪಾಕಿಸ್ತಾನದ ಪ್ರಭಾವಿ ರಾಜಕಾರಣಿಗಳಲ್ಲಿ ಒಬ್ಬರು. ಮೂರು ಬಾರಿ ಪ್ರಧಾನಿಯಾಗಿದ್ದ ನವಾಜ್‌ ಷರೀಫ್‌ ಅವರ ತಮ್ಮ. ಷರೀಫ್‌ ಕುಟುಂಬದ ರಾಜಕೀಯ ನೆಲೆಯಾದ ಪಂಜಾಬ್‌ನ ಮುಖ್ಯಮಂತ್ರಿಯಾಗಿ ಶಾಹಬಾಝ್‌ ಕೆಲಸ ಮಾಡಿದ್ದಾರೆ. ಸದ್ಯಕ್ಕೆ ಅವರು ಪಾಕಿಸ್ತಾನ ಮುಸ್ಲಿಂ ಲೀಗ್‌–ಎನ್‌ನ ಅಧ್ಯಕ್ಷ. ಉತ್ತಮ ಆಡಳಿತಗಾರ ಎಂಬ ಹೆಸರು ಅವರಿಗೆ ಇದೆ. ಹೇಳಿಕೆಗಳ ಮೂಲಕ ಹಲವು ಬಾರಿ ವಿವಾದ ಸೃಷ್ಟಿಸಿದ್ದಾರೆ. ಹಲವು ಬಾರಿ ಮದುವೆಯಾಗಿದ್ದಾರೆ, ಲಂಡನ್‌ ಮತ್ತು ದುಬೈ ಸೇರಿಸಿ ವಿವಿಧೆಡೆ ಐಷಾರಾಮಿ ಬಂಗ್ಲೆಗಳು ಮತ್ತು ಆಸ್ತಿ ಹೊಂದಿದ್ದಾರೆ ಎಂಬ ವರದಿಗಳು ಅವರ ಬಗ್ಗೆ ಪ್ರಕಟವಾಗಿವೆ.  

ಆಸಿಫ್‌ ಅಲಿ ಝರ್ದಾರಿ: ಸಿಂಧ್‌ನ ಶ್ರೀಮಂತ ಕುಟುಂಬದ ಝರ್ದಾರಿ, ಮದುವೆಗೆ ಮುನ್ನ ಭೋಗಜೀವಿಯಾಗಿದ್ದವರು ಎಂಬುದು ಅವರ ಬಗ್ಗೆ ಕೇಳಿ ಬರುತ್ತಿರುವ ಮಾತು. ಬೆನಜೀರ್‌ ಭುಟ್ಟೊ ಅವರು ಪಾಕಿಸ್ತಾನದ ಪ್ರಧಾನಿಯಾಗಿ ಮೊದಲ ಬಾರಿಗೆ ಅಧಿಕಾರ ವಹಿಸಿಕೊಳ್ಳುವ ಸ್ವಲ್ಪ ಮೊದಲು ಭುಟ್ಟೊ–ಝರ್ದಾರಿ ಮದುವೆ ನಡೆಯಿತು. ಭಾರಿ ಹುಮ್ಮಸ್ಸಿನಿಂದಲೇ ರಾಜಕಾರಣಕ್ಕೆ ಬಂದ ಝರ್ದಾರಿಗೆ ‘10 ಪರ್ಸೆಂಟ್‌ ರಾಜಕಾರಣಿ’ ಎಂಬ ಅಡ್ಡ ಹೆಸರು ಇದೆ. ಸರ್ಕಾರಿ ಗುತ್ತಿಗೆಗಳಲ್ಲಿ ಅವರು ಶೇ 10ರಷ್ಟು ಲಂಚ ಪಡೆದಿದ್ದರು ಎಂಬ ಆರೋಪದ ಕಾರಣಕ್ಕೆ ಈ ಹೆಸರು ಬಂದಿದೆ. ಭ್ರಷ್ಟಾಚಾರ, ಡ್ರಗ್ಸ್ ಕಳ್ಳ ಸಾಗಾಟ ಮತ್ತು ಕೊಲೆ ಪ್ರಕರಣಗಳಲ್ಲಿ ಎರಡು ಬಾರಿ ಅವರು ಜೈಲು ಸೇರಿದ್ದರು. ಆದರೆ, ವಿಚಾರಣೆ ನಡೆದಿಲ್ಲ. ಪಿಎಂಎಲ್‌–ಎನ್‌ ಪಕ್ಷದ ಜತೆಗಿನ ಅಧಿಕಾರ ಹಂಚಿಕೆ ಒಪ್ಪಂದದ ಮೂಲಕ ಅವರು ಒಮ್ಮೆ ಪಾಕಿಸ್ತಾನದ ಅಧ್ಯಕ್ಷರೂ ಆಗಿದ್ದರು. 2007ರಲ್ಲಿ ಭುಟ್ಟೊ ಹತ್ಯೆ ಬಳಿಕ ಪಾಕಿಸ್ತಾನ ಪೀಪಲ್ಸ್ ಪಾರ್ಟಿಯ ಸಹ ಅಧ್ಯಕ್ಷರಾದರು. 

ಬಿಲಾವಲ್‌ ಭುಟ್ಟೊ: ಭುಟ್ಟೊ–ಝರ್ದಾರಿ ಮಗ ಬಿಲಾವಲ್‌ ಭುಟ್ಟೊ ಅವರು ಪಿಪಿಪಿಯ ಅಧ್ಯಕ್ಷ. ತಾಯಿಯ ಹತ್ಯೆಯ ಬಳಿಕ 19 ವರ್ಷ ವಯಸ್ಸಿನಲ್ಲಿಯೇ ಪಕ್ಷದ ಅಧ್ಯಕ್ಷ ಹುದ್ದೆ ಅವರಿಗೆ ಒಲಿದು ಬಂದಿತ್ತು. ಬಿಲಾವಲ್‌ ಆಕ್ಸ್‌ಫರ್ಡ್‌ನಲ್ಲಿ ಕಲಿತವರು. ಪ್ರಗತಿಪರ ಎಂಬ ವರ್ಚಸ್ಸು ಅವರಿಗೆ ಇದೆ. ಮಹಿಳೆಯರು ಮತ್ತು ಅಲ್ಪಸಂಖ್ಯಾತರ ಹಕ್ಕುಗಳ ಬಗ್ಗೆ ಹಲವು ಬಾರಿ ಮಾತನಾಡಿದ್ದಾರೆ. ಬಿಲಾವಲ್‌ ಅವರು ಸಾಮಾಜಿಕ ಜಾಲ ತಾಣಗಳಲ್ಲಿ ದೊಡ್ಡ ಸಂಖ್ಯೆಯ ಫಾಲೋವರ್‌ಗಳನ್ನು ಹೊಂದಿದ್ದಾರೆ. ಪಾಕಿಸ್ತಾನದ ಜನಸಂಖ್ಯೆಯ ಅರ್ಧಕ್ಕೂ ಹೆಚ್ಚು ಜನರು 22ರ ಒಳಗಿನ ವಯಸ್ಸಿನವರು. ಹಾಗಾಗಿ, ಬಿಲಾವಲ್‌ಗೆ ಹೆಚ್ಚಿನ ಜನಪ್ರಿಯತೆ ಇದೆ. ಉರ್ದು ಭಾಷೆಯನ್ನು ಸರಿಯಾಗಿ ಮಾತನಾಡಲು ಬಾರದು ಎಂಬ ಕಾರಣಕ್ಕೆ ಅವರ ಹಂಗಿಸುವವರೂ ಇದ್ದಾರೆ.

ಫಝಲ್‌ ಉರ್‌ ರಹಮಾನ್‌: ಮೂಲಭೂತವಾದಿ ರಾಜಕಾರಣಿ ಫಝಲ್‌ ಅವರು ಜಮೀಯತ್ ಉಲ್‌ ಉಲೇಮಾ ಎ ಇಸ್ಲಾಂ (ಎಫ್‌) ಪಕ್ಷದ ಅಧ್ಯಕ್ಷ. ಇತ್ತೀಚಿನ ದಿನಗಳಲ್ಲಿ ಅವರು ಹೊಂದಾಣಿಕೆಯ ಮನೋಭಾವ ತೋರಿದ್ದಾರೆ. ಜಾತ್ಯತೀತ, ಎಡಪಂಥೀಯ, ಬಲಪಂಥೀಯ ಪಕ್ಷಗಳ ಜತೆಗೆಲ್ಲ ಹೊಂದಾಣಿಕೆ ಮಾಡಿಕೊಂಡಿದ್ದಾರೆ. ಸಾಮಾನ್ಯವಾಗಿ, ಸರ್ಕಾರ ರಚನೆಯಲ್ಲಿ ನಿರ್ಣಾಯಕ ಪಾತ್ರ ವಹಿಸಿದ್ದರೂ ಅಧಿಕಾರಕ್ಕೆ ಏರುವಷ್ಟು ಸ್ಥಾನಗಳನ್ನು ಎಂದೂ ಪಡೆದಿಲ್ಲ. ಇಮ್ರಾನ್‌ ಅವರ ಕಡು ಟೀಕಾಕಾರರಲ್ಲಿ ಫಝಲ್‌ ಅವರೂ ಒಬ್ಬರು. ಬ್ರಿಟನ್‌ನ ಜೆಮಿಮಾ ಗೋಲ್ಡ್‌ಸ್ಮಿತ್ ಅವರನ್ನು ಇಮ್ರಾನ್‌ ಮದುವೆಯಾದ ಕಾರಣಕ್ಕೆ ಇಮ್ರಾನ್‌ರನ್ನು ‘ಯೆಹೂದಿ’ ಎಂದು ಕರೆದಿದ್ದರು. ಪೆಟ್ರೋಲ್‌ ಬಂಕ್‌ ಪರವಾನಗಿ ಭ್ರಷ್ಟಾಚಾರ ಪ್ರಕರಣದಲ್ಲಿ ಫಝಲ್‌ ಭಾಗಿಯಾಗಿದ್ದಾರೆ ಎಂಬ ಆರೋಪವಿದೆ. ಹಾಗಾಗಿ, ಅವರನ್ನು ‘ಮುಲ್ಲಾ ಡೀಸೆಲ್‌’ ಎಂದು ಇಮ್ರಾನ್‌ ಕರೆದಿದ್ದಾರೆ. 

ಯಾರಿಗೂ ಇಲ್ಲ ಪೂರ್ಣಾವಧಿ ಅಧಿಕಾರ

75 ವರ್ಷದ ಪಾಕಿಸ್ತಾನದ ಇತಿಹಾಸದಲ್ಲಿ ಯಾವ ಪ್ರಧಾನಿಯೂ 5 ವರ್ಷಗಳ ಅವಧಿ ಪೂರ್ಣಗೊಳಿಸಿಲ್ಲ. ಹಲವು ‌ಬಾರಿ ಸೇನಾಡಳಿತಕ್ಕೆ ಸಾಕ್ಷಿಯಾಗಿರುವ ಪಾಕಿಸ್ತಾನವು, 1947ರಿಂದ ಇಲ್ಲಿಯವರೆಗೆ 29 ಪ್ರಧಾನಿಗಳನ್ನು ಕಂಡಿದೆ. ಸೇನಾದಂಗೆ, ಭ್ರಷ್ಟಾಚಾರ ಆರೋಪ, ಆಡಳಿತ ಪಕ್ಷದೊಳಗಿನ ಒತ್ತಡ, ಹತ್ಯೆ ಮೊದಲಾದ ವಿವಿಧ ಕಾರಣಗಳಿಂದ ಯಾವ ಪ್ರಧಾನಿಗೂ ಪೂರ್ಣಾವಧಿ ಆಳ್ವಿಕೆ ಸಾಧ್ಯವಾಗಿಲ್ಲ. 2 ವಾರಗಳ ಅತಿ ಕಡಿಮೆ ಅವಧಿಗೆ ಪ್ರಧಾನಿಯಾಗಿದ್ದವರೂ ಇದ್ದಾರೆ, 4 ವರ್ಷ 2 ತಿಂಗಳಷ್ಟು ದೀರ್ಘ ಅವಧಿಗೆ ಪ್ರಧಾನಿ ಆಗಿದ್ದವರೂ ಇದ್ದಾರೆ. ನವಾಜ್ ಷರೀಫ್ ಮಾತ್ರ ಮೂರು ಬಾರಿ ಪ್ರಧಾನಿಯಾಗಿದ್ದರು. 

ಸೇನೆಯ ಆಡಳಿತ: ಪಾಕಿಸ್ತಾನದಲ್ಲಿ 1958ರಲ್ಲಿ ಮೊದಲ ಬಾರಿಗೆ ಸೇನಾ ಆಡಳಿತ ಶುರುವಾಯಿತು. ಜನರಲ್ ಅಯೂಬ್ ಖಾನ್ ಅವರು 44 ತಿಂಗಳು ದೇಶದ ಚುಕ್ಕಾಣಿ ಹಿಡಿದಿದ್ದರು. 1977ರಲ್ಲಿ ಜಿಯಾ ಉಲ್ ಹಕ್ ಅವರು ಸಂಸತ್ತನ್ನು ವಿಸರ್ಜಿಸಿ 2ನೇ ಬಾರಿ ಪಾಕಿಸ್ತಾವನ್ನು ಸೇನಾಡಳಿತಕ್ಕೆ ತಳ್ಳಿದರು. 199ರಲ್ಲಿ ಜನರಲ್ ಪರ್ವೇಜ್ ಮುಷರಫ್ ಅವರು ನವಾಜ್ ಷರೀಫ್ ಅವರನ್ನು ಪದಚ್ಯುತಿ ಮಾಡಿ ಅಧಿಕಾರ ವಹಿಸಿಕೊಂಡಿದ್ದರು.

ಆಧಾರ: ಎಎಫ್‌ಪಿ, ರಾಯಿಟರ್ಸ್‌, ಬಿಬಿಸಿ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು