ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಳ–ಅಗಲ: ರಾಜಕೀಯದ ‘ಪೊಲೀಸ್‌’ಗಿರಿ

Last Updated 17 ಮಾರ್ಚ್ 2021, 19:31 IST
ಅಕ್ಷರ ಗಾತ್ರ

ಪೊಲೀಸ್‌ ಇಲಾಖೆಯೊಳಗೆ ರಾಜಕಾರಣಿಗಳು ಕೈಯಾಡಿಸುತ್ತಿದ್ದಾರೆಯೇ ಅಥವಾ ಪೊಲೀಸ್‌ ಅಧಿಕಾರಿಗಳೇ ರಾಜಕಾರಣಿಗಳ ಅನುಯಾಯಿಗಳಾಗುತ್ತಿದ್ದಾರೆಯೇ? ಈ ಪ್ರಶ್ನೆ ಈಚಿನ ಕೆಲವು ವರ್ಷಗಳಲ್ಲಿ ಜನರನ್ನು ತೀವ್ರವಾಗಿ ಕಾಡುತ್ತಿದೆ.

‘ಆಳುವ ಸರ್ಕಾರಗಳು ಬದಲಾದಂತೆ, ದೇಶದ ಗಮನಸೆಳೆದ ಕೆಲವು ಸೂಕ್ಷ್ಮ ಮತ್ತು ಪ್ರಮುಖ ಪ್ರಕರಣಗಳ ತನಿಖಾ ಹಾದಿಯೂ ಬದಲಾತ್ತಿರುವುದು ಜನರ ಗಮನಕ್ಕೆ ಬರುತ್ತಿದೆ. ಕೆಲವು ವಿಚಾರಗಳಲ್ಲಿ ನ್ಯಾಯಾಲಯಗಳೇ ಪೊಲೀಸ್‌ ಅಧಿಕಾರಿಗಳಿಗೆ ಛೀಮಾರಿ ಹಾಕಿದ ಉದಾಹರಣೆಗಳಿವೆ. ಇದೂ ಸಾಲದೆಂಬಂತೆ, ಅಧಿಕಾರಿಗಳು ‘ತಮ್ಮ ನಾಯಕ’ರ ಬಗ್ಗೆ ಮುಕ್ತವಾಗಿ ಹೊಗಳಿಕೆಯ ಮಾತುಗಳನ್ನು ಆಡಿರುವುದು ಇತ್ತೀಚೆಗೆ ಕಂಡುಬಂದಿದೆ. ಇದು ಒಂದೆರಡು ರಾಜ್ಯಗಳಿಗಷ್ಟೇ ಸೀಮಿತವಾಗಿಲ್ಲ, ಬಹುತೇಕ ಎಲ್ಲಾ ರಾಜ್ಯಗಳ ಸಾಮಾನ್ಯ ಸಮಸ್ಯೆಯಾಗಿದೆ. ಇಂಥ ಬೆಳವಣಿಗೆಗಳು ಪೊಲೀಸ್‌ ವ್ಯವಸ್ಥೆಯ ಮೇಲೆ ಜನರಿಗೆ ಇರುವ ವಿಶ್ವಾಸವನ್ನು ಕುಂದಿಸಿವೆ’ ಎಂದು ಪೊಲೀಸರೇ ಒಪ್ಪಿಕೊಳ್ಳುತ್ತಾರೆ.

‘ವರ್ಗಾವಣೆ, ಬಡ್ತಿ ಮುಂತಾಗಿ ಪೊಲೀಸ್‌ ಇಲಾಖೆಯ ಆಡಳಿತಾತ್ಮಕವಾದ ಪ್ರತಿಯೊಂದು ವಿಚಾರದಲ್ಲೂ ಶಾಸಕರು, ಸಚಿವರು, ಪ್ರಭಾವಿಗಳು ಮೂಗು ತೂರಿಸುತ್ತಾರೆ. ವರ್ಗಾವಣೆ ಮಾಡಿಸಬೇಕಾದರೆ ಶಾಸಕರ ಶಿಫಾರಸು ಪತ್ರದೊಂದಿಗೆ ಹೋಗಬೇಕಾದ ಸ್ಥಿತಿ ಇದೆ’ ಎಂದು ಇಲಾಖೆಯಲ್ಲಿರುವ ಸಿಬ್ಬಂದಿ ಹೇಳುತ್ತಾರೆ. ರಾಜಕೀಯ ಹಾಗೂ ಇತರ ಕೆಲವು ಮಹತ್ವಾಕಾಂಕ್ಷೆಗಳನ್ನು ಹೊಂದಿರುವ ಅಧಿಕಾರಿಗಳು ತಾವೇ ಕಾನೂನನ್ನು ಕೈಗೆತ್ತಿಕೊಂಡು ಸ್ವತಃ ಆರೋಪಿಗಳಾಗುತ್ತಿರುವುದು ಈಚಿನ ಕೆಲವು ವರ್ಷಗಳಲ್ಲಿ ಕಂಡುಬರುತ್ತಿರುವ ಆತಂಕಕಾರಿ ಬೆಳವಣಿಗೆಯಾಗಿದೆ. ಹತ್ಯೆಗೆ ಸಂಚು, ಭ್ರಷ್ಟಾಚಾರ, ಕೊಲೆ, ಘೋಷಿತ ಆದಾಯಕ್ಕೂ ಮೀರಿದ ಆಸ್ತಿ ಸಂಪಾದನೆ, ಅಪಹರಣ ಮುಂತಾದ ಗಂಭೀರ ಸ್ವರೂಪದ ಆರೋಪಗಳು ಪೊಲೀಸರ ಮೇಲೆಯೇ ಬರುತ್ತಿವೆ. ಮುಂಬೈಯ ಪೊಲೀಸ್‌ ಅಧಿಕಾರಿ ಸಚಿನ್‌ ವಾಜೆ ಅವರು ಇದಕ್ಕೆ ಈಚಿನ ಉದಾಹರಣೆಯಾಗಿದ್ದಾರೆ.

ಜೈಲು ಸೇರಿದ ‘ಎನ್‌ಕೌಂಟರ್‌ ತಜ್ಞ’

90ರ ದಶಕದಲ್ಲಿ, ಮುಂಬೈಯಲ್ಲಿ ಭೂಗತ ಪಾತಕಿಗಳ ಉಪಟಳ ವಿಪರೀತವಾದಾಗ, ಪಾತಕಿಗಳ ‘ಎನ್‌ಕೌಂಟರ್’ ಅನ್ನು ಪೊಲೀಸರು ಆರಂಭಿಸಿದ್ದರು. ಪೊಲೀಸ್‌ ಇಲಾಖೆಯಲ್ಲಿ ಆಗ ಇಂಥ ‘ಎನ್‌ಕೌಂಟರ್‌ ಸ್ಪೆಷಲಿಸ್ಟ್‌’ಗಳ ಒಂದು ತಂಡವೇ ಸೃಷ್ಟಿಯಾಯಿತು. ಸಚಿನ್‌ ವಾಜೆ ಆ ತಂಡದ ಒಬ್ಬ ಪ್ರಮುಖ ಸದಸ್ಯರಾಗಿದ್ದರು.

2002ರಲ್ಲಿ ಖ್ವಾಜಾ ಯೂನುಸ್‌ ಎಂಬ 27 ವರ್ಷ ವಯಸ್ಸಿನ ಯುವಕನ ಕಸ್ಟಡಿ ಸಾವಿನ ಪ್ರಕರಣವು ವಾಜೆ ಅವರಿಗೆ ಮುಳುವಾಯಿತು. ಭಯೋತ್ಪಾದನೆ ನಿಗ್ರಹ ಕಾಯ್ದೆಯಡಿ (ಪೋಟ) ಬಂಧನಕ್ಕೊಳಗಾಗಿದ್ದ ಯೂನುಸ್‌ ಅವರನ್ನು, ಹತ್ಯೆ ಮಾಡಿದ ಮತ್ತು ಘಟನೆಗೆ ಸಂಬಂಧಿಸಿದ ಸಾಕ್ಷ್ಯಗಳನ್ನು ನಾಶಮಾಡಿದ ಆರೋಪ ವಾಜೆ ಹಾಗೂ ಇತರ ಮೂವರು ಪೊಲೀಸರ ಮೇಲೆ ಬಂತು.

ಸಚಿನ್‌ ವಾಜೆ
ಸಚಿನ್‌ ವಾಜೆ

‘ಯೂನುಸ್‌ ಅವರನ್ನು ಔರಂಗಾಬಾದ್‌ಗೆ ಕರೆದೊಯ್ಯುತ್ತಿದ್ದಾಗ ಅವರು ತಪ್ಪಿಸಿಕೊಂಡಿದ್ದರು’ ಎಂದು ಪೊಲೀಸರು ವಾದಿಸಿದ್ದರು. ಆದರೆ, ಕಸ್ಟಡಿಯಲ್ಲಿ ಅವರ ಸಾವಾಗಿತ್ತು ಎಂದು ತನಿಖೆಯಿಂದ ಸ್ಪಷ್ಟವಾಯಿತು. ಇದಾಗುತ್ತಿದ್ದಂತೆ ವಾಜೆ ಅವರನ್ನು ಅಮಾನತುಗೊಳಿಸಲಾಯಿತು. ಆ ಪ್ರಕರಣದ ವಿಚಾರಣೆ ಇನ್ನೂ ನಡೆಯುತ್ತಿದೆ. ಈ ನಡುವೆ, 2007ರಲ್ಲಿ ಇಲಾಖೆಯನ್ನು ತ್ಯಜಿಸಿದ ವಾಜೆ, ಅಧಿಕೃತವಾಗಿ ಶಿವಸೇನಾ ಸೇರಿದರು. ತಂತ್ರಜ್ಞಾನದಲ್ಲೂ ಸಾಕಷ್ಟು ಪರಿಣತರಾಗಿದ್ದ ವಾಜೆ, ‘ಲೇ ಭಾರಿ’ ಎಂಬ ಸಾಮಾಜಿಕ ನೆಟ್‌ವರ್ಕಿಂಗ್‌ ತಾಣವನ್ನು ಆರಂಭಿಸಿದ್ದರು. ಜನರ ದೂರವಾಣಿ ಸಂಭಾಷಣೆಗಳನ್ನು ಕದ್ದಾಲಿಸಬಲ್ಲ ಹಾಗೂ ಮೆಸೇಜ್‌ಗಳನ್ನು ಓದಲು ಸಾಧ್ಯವಾಗುವಂಥ ಸಾಫ್ಟ್‌ವೇರ್‌ ಒಂದನ್ನು ಅವರು ಅಭಿವೃದ್ಧಿಪಡಿಸಿದ್ದರು ಎಂಬ ಆರೋಪವೂ ಇದೆ.

ಸುಮಾರು 16 ವರ್ಷಗಳ ನಂತರ ಅವರು ಇಲಾಖೆಗೆ ಮತ್ತೆ ಬಂದಿದ್ದಾರೆ. ‘ಇಲಾಖೆಯಲ್ಲಿ ಸಿಬ್ಬಂದಿಯ ಕೊರತೆ ಇರುವುದರಿಂದ ವಾಜೆ ಅವರನ್ನು ಪುನಃ ಸೇವೆಗೆ ಕರೆಯಿಸಿಕೊಳ್ಳಲಾಗಿದೆ’ ಎಂದು ಸರ್ಕಾರ ಹೇಳಿದೆ. ಆದರೆ ಸೇವೆಗೆ ಬಂದು ಕೆಲವೇ ತಿಂಗಳಲ್ಲಿ ದೊಡ್ಡ ವಿವಾದ ಸೃಷ್ಟಿಸಿ, ಅವರು ಬಂಧನಕ್ಕೆ ಒಳಗಾಗಿದ್ದಾರೆ.

ಮುಕೇಶ್‌ ಅಂಬಾನಿ ಅವರ ಮನೆ ‘ಅಂಟಿಲಿಯಾ’ದ ಮುಂದೆ ಸ್ಫೋಟಕಗಳಿಂದ ತುಂಬಿದ್ದ ವಾಹನವನ್ನಿಟ್ಟ ಪ್ರಕರಣದಲ್ಲಿ ವಾಜೆ ಮೇಲೆ ಆರೋಪಗಳು ಬಂದಿವೆ. ‘ವಾಹನದ ಮಾಲೀಕರಾಗಿದ್ದ ಮನಸುಖ್‌ ಹಿರೇನ್‌ ಅವರ ಜತೆಗೆ ವಾಜೆ ಸತತವಾಗಿ ಸಂಪರ್ಕದಲ್ಲಿದ್ದರು’ ಎಂದು ವಿರೋಧ ಪಕ್ಷದ ನಾಯಕ ದೇವೇಂದ್ರ ಫಡಣವೀಸ್‌ ದೂರವಾಣಿ ಕರೆ ದಾಖಲೆಗಳ ಸಹಿತವಾಗಿ ಆರೋಪಿಸಿದ್ದಾರೆ.

ಅಂಬಾನಿ ಮನೆಯ ಮುಂದೆ ಪತ್ತೆಯಾಗಿದ್ದ ಕಾರು ಕಳ್ಳತನವಾಗಿತ್ತು ಎಂದು ಹಿರೇನ್‌ ಅವರು ಕೆಲವು ತಿಂಗಳ ಹಿಂದೆಯೇ ದೂರು ನೀಡಿದ್ದರು. ಪ್ರಕರಣದ ಕಾವು ಏರುತ್ತಿದ್ದಂತೆ ಕಾರಿನ ಮಾಲೀಕರಾಗಿದ್ದ ಹಿರೇನ್‌ ಅವರು ಅಸಹಜ ಸಾವನ್ನು ಕಂಡಿದ್ದು, ಅವರ ಶವವು ಕಲ್ವಾದ ನಾಲೆಯಲ್ಲಿ ಪತ್ತೆಯಾಗಿದೆ. ‘ಹಿರೇನ್‌ ಸಾವಿನ ಹಿಂದೆ ವಾಜೆ ಕೈವಾಡವಿದೆ, ಸ್ಫೋಟಕ ಇಡಲು ಬಳಸಿದ್ದ ಕಾರನ್ನು ಹಲವು ತಿಂಗಳುಗಳಿಂದ ವಾಜೆ ಅವರು ಬಳಸುತ್ತಿದ್ದರು’ ಎಂದು ಹಿರೇನ್‌ ಅವರ ಪತ್ನಿ ಆರೋಪಿಸಿದ್ದಾರೆ.

ಈ ಮಧ್ಯೆ ರಾಷ್ಟ್ರೀಯ ತನಿಖಾ ದಳವು (ಎನ್‌ಐಎ) ವಾಜೆ ಅವರನ್ನು 12 ಗಂಟೆಗಳ ವಿಚಾರಣೆಗೆ ಒಳಪಡಿಸಿ, ಆನಂತರ ಬಂಧಿಸಿದೆ.

ಎನ್‌ಕೌಂಟರ್ ದಯಾನಾಯಕ್

ಮುಂಬೈ ಪೊಲೀಸ್‌ನ ಎನ್‌ಕೌಂಟರ್‌ ಸ್ಪೆಷಲಿಸ್ಟ್ ಇನ್‌ಸ್ಪೆಕ್ಟರ್ ದಯಾನಾಯಕ್ ಅವರಿಗೂ ಮುಂಬೈನ ಗಣ್ಯರು, ರಾಜಕಾರಣಿಗಳು ಮತ್ತು ಬಾಲಿವುಡ್‌ ತಾರೆಯರ ಜತೆ ನಿಕಟ ಸಂಪರ್ಕವಿತ್ತು ಎಂಬ ಆರೋಪವಿದೆ. ತಮ್ಮ ವೇತನಕ್ಕಿಂತಲೂ ಹೆಚ್ಚಿನ ಮೊತ್ತದ ಆಸ್ತಿ ಹೊಂದಿದ ಆರೋಪದಲ್ಲಿ ಅವರು ಹಲವು ಬಾರಿ ಅಮಾನತುಗೊಂಡಿದ್ದಾರೆ.

ಕರ್ನಾಟಕದ ಕಾರ್ಕಳದ ಎಣ್ಣೆಹೊಳೆಯವರಾದ ದಯಾನಾಯಕ್, 1995ರಲ್ಲಿ ಮುಂಬೈ ಪೊಲೀಸ್‌ ಇಲಾಖೆಯಲ್ಲಿ ಇನ್‌ಸ್ಪೆಕ್ಟರ್ ಆಗಿ ಸೇವೆ ಆರಂಭಿಸಿದರು. 1996ರ ಡಿಸೆಂಬರ್‌ನಲ್ಲಿ ಛೋಟಾ ರಾಜನ್‌ನ ಇಬ್ಬರು ಸಹಚರರನ್ನು ಎನ್‌ಕೌಂಟರ್‌ನಲ್ಲಿ ದಯಾನಾಯಕ್ ಹತ್ಯೆ ಮಾಡಿದ್ದರು. ಇದು ಅವರ ಮೊದಲ ಎನ್‌ಕೌಂಟರ್‌. ಆನಂತರ ಅವರನ್ನು ವಿಶೇಷ ಸ್ಕ್ವಾಡ್‌ಗೆ ವರ್ಗಾವಣೆ ಮಾಡಲಾಗಿತ್ತು. ನಂತರದ ಕೆಲವೇ ವರ್ಷಗಳಲ್ಲಿ ದಯಾನಾಯಕ್ ಅವರು ಎನ್‌ಕೌಂಟರ್‌ನಲ್ಲಿ ಒಟ್ಟು 83 ಜನರನ್ನು ಹತ್ಯೆ ಮಾಡಿದ್ದರು. ಇವರಲ್ಲಿ 80 ಮಂದಿ ಗ್ಯಾಂಗ್‌ಸ್ಟರ್‌ಗಳಾಗಿದ್ದರೆ, 3 ಜನ ಉಗ್ರಗಾಮಿಗಳು.

ಮುಂಬೈ ಭೂಗತಲೋಕದ ಜತೆ ಸಂಪರ್ಕವಿದ್ದ ದಯಾನಾಯಕ್ ಅವರು, ಗ್ಯಾಂಗ್‌ಸ್ಟರ್‌ಗಳ ಪರವಾಗಿ ಎನ್‌ಕೌಂಟರ್ ನಡೆಸಿದ್ದಾರೆ ಎಂಬ ಆರೋಪವಿತ್ತು. 2000ದಲ್ಲಿ ಅವರು ತಮ್ಮ ಊರು ಎಣ್ಣೆಹೊಳೆಯಲ್ಲಿ ತಮ್ಮ ತಾಯಿ ರಾಧಾಬಾಯಿ ನಾಯಕ್ ಅವರ ಹೆಸರಿನಲ್ಲಿ ಶಾಲೆ ಆರಂಭಿಸಿದ್ದರು. ಶಾಲೆಯ ಉದ್ಘಾಟನೆಗೆ ರಾಜ್ಯದ ಅಂದಿನ ಶಿಕ್ಷಣ ಸಚಿವ ಎಚ್.ವಿಶ್ವನಾಥ್, ಬಾಲಿವುಡ್ ತಾರೆ ಅಮಿತಾಬ್ ಬಚ್ಚನ್, ಮುಂಬೈನ ಹಲವು ಗಣ್ಯರು ಭಾಗವಹಿಸಿದ್ದರು. ಆನಂತರವೇ ದಯಾನಾಯಕ್ ವಿರುದ್ಧ ನಕಲಿ ಎನ್‌ಕೌಂಟರ್‌ಗಳ ಆರೋಪದ ತೀವ್ರತೆ ಹೆಚ್ಚಾಯಿತು. ದಯಾನಾಯಕ್ ವಿರುದ್ಧ ಇಲಾಖಾ ತನಿಖೆಯೂ ನಡೆಯಿತು. ಆದರೆ ಆರೋಪಗಳಿಗೆ ಪೂರಕವಾದ ಸಾಕ್ಷ್ಯಗಳಿಲ್ಲ ಎಂದು ಅವರ ಮೇಲಿನ ಎಲ್ಲಾ ಆರೋಪಗಳಿಂದ ಖುಲಾಸೆ ಮಾಡಲಾಯಿತು.

ನಿವೃತ್ತಿ ನಂತರವೂ ಸೇವೆಯಲ್ಲಿರುವ ವಂಜಾರಾ

ಸರ್ಕಾರ, ರಾಜಕಾರಣಿಗಳ ಪರವಾಗಿ ಎನ್‌ಕೌಂಟರ್ ನಡೆಸಿದ ಆರೋಪ ಹೊತ್ತ ಪೊಲೀಸ್ ಅಧಿಕಾರಿಗಳಲ್ಲಿ ಗುಜರಾತ್‌ ಕೇಡರ್‌ನ ಐಪಿಎಸ್‌ ಅಧಿಕಾರಿ ಡಿ.ಜಿ. ವಂಜಾರಾ ಅವರ ಹೆಸರೂ ಇದೆ. ದೇಶದಲ್ಲಿ ಹೆಚ್ಚು ಸುದ್ದಿಯಾದ ಇಶ್ರಾತ್ ಜಹಾನ್ ನಕಲಿ ಎನ್‌ಕೌಂಟರ್ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿದ್ದ ವಂಜಾರಾ ಅವರು ಗುಜರಾತ್‌ನ ರಾಜಕಾರಣಿಗಳ ಜತೆ ಆಪ್ತ ಸಂಪರ್ಕ ಹೊಂದಿದ್ದಾರೆ ಎಂಬ ಮಾತು ಈಗಲೂ ಚಾಲ್ತಿಯಲ್ಲಿದೆ.

ವಂಜಾರಾ
ವಂಜಾರಾ

2004ರಲ್ಲಿ ಅಹಮದಾಬಾದ್‌ನ ಹೊರವಲಯದಲ್ಲಿ ಮುಂಬೈನ ಯುವತಿ ಇಶ್ರಾತ್ ಜಹಾನ್ ಮತ್ತು ಮೂವರು ಸ್ನೇಹಿತರನ್ನು ವಂಜಾರಾ ನೇತೃತ್ವದ ತಂಡವು ಎನ್‌ಕೌಂಟರ್‌ನಲ್ಲಿ ಹತ್ಯೆ ಮಾಡಿತ್ತು. ಗುಪ್ತಚರ ಇಲಾಖೆಯ ಮಾಹಿತಿ ಮೇರೆಗೆ ಇವರನ್ನು ಹತ್ಯೆ ಮಾಡಲಾಗಿತ್ತು ಎಂದು ವಂಜಾರಾ ಮತ್ತು ತಂಡದವರು ತನಿಖಾಧಿಕಾರಿಗಳು ಮತ್ತು ನ್ಯಾಯಾಲಯದ ಮುಂದೆ ಹೇಳಿದ್ದರು. 2005ರಲ್ಲಿ ಗ್ಯಾಂಗಸ್ಟರ್ ಸೊಹ್ರಾಬುದ್ದೀನ್ ಶೇಕ್, ಆತನ ಪತ್ನಿ ಮತ್ತು ಅಸಹಚರ ತುಳೀಸೀರಾಮ್ ಅವರನ್ನು ವಂಜಾರಾ ನೇತೃತ್ವದ ತಂಡ ಆಂಧ್ರಪ್ರದೇಶದಲ್ಲಿ ಬಂಧಿಸಿತ್ತು. ಕೆಲವೇ ದಿನಗಳಲ್ಲಿ ಸೊಹ್ರಾಬುದ್ದೀನ್‌ನನ್ನು ಗುಜರಾತ್‌ನ ಗಾಂಧಿನಗರದ ಬಳಿ ಎನ್‌ಕೌಂಟರ್‌ನಲ್ಲಿ ಹತ್ಯೆ ಮಾಡಲಾಗಿತ್ತು. ಆತನ ಪತ್ನಿಯನ್ನೂ ಪೊಲೀಸರು ಕೊಂದರು ಎಂದು ಪ್ರಜಾಪತಿ ಆರೋಪ ಮಾಡಿದ್ದ. ಕೆಲವೇ ದಿನಗಳಲ್ಲಿ ಪ್ರಜಾಪತಿಯನ್ನೂ ಎನ್‌ಕೌಂಟರ್‌ನಲ್ಲಿ ಹತ್ಯೆ ಮಾಡಲಾಯಿತು.

ಗುಜರಾತ್‌ನ ಅಂದಿನ ಗೃಹ ಸಚಿವ ಅಮಿತ್ ಶಾ ಅವರ ಅಣತಿಯಂತೆ, ವಂಜಾರಾ ಈ ಹತ್ಯೆ ನಡೆಸಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು. ಗ್ರಾನೈಟ್ ಉದ್ಯಮಿಯಾಗಿದ್ದ ಸೊಹ್ರಾಬುದ್ದೀನ್ ಮತ್ತು ಅಮಿತ್ ಶಾ ನಡುವೆ ವ್ಯವಹಾರಕ್ಕೆ ಸಂಬಂಧಿಸಿದಂತೆ ವೈಮನಸ್ಸು ಇತ್ತು. ಹೀಗಾಗಿಯೇ ಅವನನ್ನು ಹತ್ಯೆ ಮಾಡಲಾಗಿದೆ ಎಂಬ ಆರೋಪ ಕೇಳಿಬಂದಿತ್ತು. ಈ ಪ್ರಕರಣದಲ್ಲಿ ಅಮಿತ್ ಶಾ ಹಲವು ತಿಂಗಳು ಜೈಲು ಶಿಕ್ಷೆ ಅನುಭವಿಸಿದರು. ನಂತರ ಆರೋಪದಿಂದ ಖುಲಾಸೆ ಆದರು.

ಈ ಎರಡೂ ಎನ್‌ಕೌಂಟರ್‌ಗಳನ್ನು ನಡೆಸಿದ್ದ ವಂಜಾರಾ ಅವರು 2007ರಲ್ಲಿ ಜೈಲು ಸೇರಿದ್ದರು. 2017ರಲ್ಲಿ ಸೊಹ್ರಾಬುದ್ದೀನ್ ಶೇಕ್ ನಕಲಿ ಎನ್‌ಕೌಂಟರ್‌ ಪ್ರಕರಣದಿಂದ ವಂಜಾರಾ ಅವರನ್ನು ಮತ್ತು ಅಮಿತ್ ಶಾ ಅವರನ್ನೂ ಖುಲಾಸೆ ಮಾಡಲಾಯಿತು. 2018ರಲ್ಲಿ ಇಶ್ರಾತ್ ಜಹಾನ್ ನಕಲಿ ಎನ್‌ಕೌಂಟರ್ ಪ್ರಕರಣದಲ್ಲಿ ವಂಜಾರಾ ಅವರನ್ನು ಖುಲಾಸೆ ಮಾಡಲಾಯಿತು. 2014ರಲ್ಲೇ ಸೇವೆಯಿಂದ ವಂಜಾರಾ ನಿವೃತ್ತರಾಗಿದ್ದರು. ಆದರೆ 2020ರಲ್ಲಿ ಗುಜರಾತ್ ಸರ್ಕಾರವು, ವಂಜಾರಾ ಅವರಿಗಾಗಿಯೇ ನಿವೃತ್ತಿಯೋತ್ತರ ಇನ್ಸ್‌ಪೆಕ್ಟರ್ ಜನರಲ್ ಹುದ್ದೆಯನ್ನು ನೀಡಿತು.

ಸಲ್ವಿಂದರ್ ಸಿಂಗ್

ಪಂಜಾಬ್ ಪೊಲೀಸ್ ಇಲಾಖೆಯಲ್ಲಿ ವಿವಾದಗಳಿಂದಲೇ ಸುದ್ದಿಯಾದವರು ಸಲ್ವಿಂದರ್ ಸಿಂಗ್. ವಿವಿಧ ಲೈಂಗಿಕ ಕಿರುಕುಳ ಆರೋಪಗಳು ಇವರ ಮೇಲಿದ್ದವು. ಪಠಾಣ್‌ಕೋಟ್ ವಾಯುನೆಲೆ ಮೇಲಿನ ದಾಳಿಯಲ್ಲಿ ಸಲ್ವಿಂದರ್ ಪಾತ್ರ ಇದೆ ಎಂದು ಆರೋಪಿಸಲಾಗಿತ್ತು. ಆದರೆ ಎನ್‌ಐಎ ಇವರನ್ನು ಆರೋಪಮುಕ್ತಗೊಳಿಸಿತು. ವೃತ್ತಿಜೀವನದ ಉದ್ದಕ್ಕೂ ಒಂದಿಲ್ಲೊಂದು ವಿವಾದ ಮಾಡಿಕೊಂಡ ಸಲ್ವಿಂದರ್ ಅವರಿಗೆ ಕಡ್ಡಾಯ ನಿವೃತ್ತಿಗೂ ಆದೇಶ ನೀಡಲಾಗಿತ್ತು.

ಸಲ್ವಿಂದರ್ ಸಿಂಗ್
ಸಲ್ವಿಂದರ್ ಸಿಂಗ್

2006ರಲ್ಲಿ ಪಂಜಾಬ್ ಪೊಲೀಸ್ ಇಲಾಖೆಗೆ ಸೇರಿದ ಅವರು, ಶಿರೋಮಣಿ ಅಕಾಲಿದಳ ಮುಖಂಡ ಸಚ್ಚಾ ಸಿಂಗ್ ಲಂಘಾ ಸೇರಿದಂತೆ ರಾಜಕಾರಣಿಗಳ ಜೊತೆ ನಿಕಟ ನಂಟು ಹೊಂದಿದ್ದರು ಎಂಬ ಆರೋಪವಿತ್ತು.

2016ರಲ್ಲಿ ಆರು ಮಂದಿ ಮಹಿಳಾ ಪೊಲೀಸರು ಸಲ್ವಿಂದರ್ ವಿರುದ್ಧ ಲೈಂಗಿಕ ಕಿರುಕುಳ ಆರೋಪ ಹೊರಿಸಿದ್ದರು. 2017ರಲ್ಲೂ ಮತ್ತೊಂದು ಲೈಂಗಿಕ ಕಿರುಕುಳದ ದೂರು ದಾಖಲಾಗಿತ್ತು. ‘ಘೋಷಿತ ಅಪರಾಧಿ’ ಎಂದು ಕರೆಸಿಕೊಂಡ ಅವರ ಜಾಮೀನು ಅರ್ಜಿಯನ್ನು ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ವಜಾಗೊಳಿಸಿತ್ತು. ಆ ಬಳಿಕ ಕೆಲಕಾಲ ಭೂಗತರಾಗಿದ್ದ ಅವರನ್ನು ಸೇವೆಯಿಂದ ವಜಾಗೊಳಿಸಲಾಯಿತು. 2017ರ ಏಪ್ರಿಲ್‌ನಲ್ಲಿ ಅವರು ಗುರುದಾಸ್‌ಪುರ ಕೋರ್ಟ್‌ಗೆ ಶರಣಾಗಿದ್ದರು.

ಗುರುದಾಸ್‌ಪುರ ಎಸ್‌ಪಿ ಆಗಿ ವರ್ಗಾವಣೆಯಾಗಿದ್ದ ವೇಳೆ ಅವರ ಹೆಸರು ಮುನ್ನೆಲೆಗೆ ಬಂದಿತ್ತು. 2016ರಲ್ಲಿ ಪಠಾಣ್‌ಕೋಟ್ ವಾಯುನೆಲೆಯಲ್ಲಿ ನಡೆದ ಉಗ್ರರ ದಾಳಿಗಿಂತ ಕೆಲವು ಗಂಟೆಗಳ ಮುನ್ನ ಸಲ್ವಿಂದರ್ ಅವರನ್ನು ಉಗ್ರರು ಅಪಹರಣ ಮಾಡಿದ್ದರು ಎಂಬ ಸುದ್ದಿ ಹರಿದಾಡಿತ್ತು. ಈ ಬಗ್ಗೆ ಸವಿಸ್ತಾರ ವಿಚಾರಣೆ ನಡೆಸಿದ ಬಳಿಕ ಅವರನ್ನು ಆರೋಪಮುಕ್ತಗೊಳಿಸಲಾಗಿತ್ತು.

ಪಿ.ಪಿ. ಪಾಂಡೆ

2004ರಲ್ಲಿ ಭಾರಿ ಸದ್ದು ಮಾಡಿದ್ದ ಹಾಗೂ ರಾಜಕೀಯ ತಿರುವು ಪಡೆದಿದ್ದ ಇಶ್ರತ್ ಜಹಾಂ ಹಾಗೂ ಇತರ ಮೂವರ ನಕಲಿ ಎನ್‌ಕೌಂಟರ್ ಪ್ರಕರಣದ ಪ್ರಮುಖ ಆರೋಪಿಗಳಲ್ಲಿ ಪಿ.ಪಿ. ಪಾಂಡೆ ಒಬ್ಬರು. ವಿಶೇಷ ನ್ಯಾಯಮೂರ್ತಿ ಪಾಂಡ್ಯ ಅವರು ಪಾಂಡೆ ಅವರನ್ನು ಖುಲಾಸೆಗೊಳಿಸಿದರು.

ಪಿ.ಪಿ. ಪಾಂಡೆ
ಪಿ.ಪಿ. ಪಾಂಡೆ

ಎನ್‌ಕೌಂಟರ್‌ಗೂ ಮುನ್ನ ಇಶ್ರತ್ ಜಹಾಂ ಹಾಗೂ ಇತರರನ್ನು ಅಕ್ರಮವಾಗಿ ಇರಿಸಲಾಗಿದ್ದ ಖೋಡಿಯಾರ್ ಫಾರ್ಮ್‌ಗೆ ಪಾಂಡೆ ಭೇಟಿ ನೀಡಿದ್ದರು ಎಂದು ಸಿಬಿಐ ಆರೋಪಿಸಿತ್ತು. ಐಪಿಎಸ್ ಅಧಿಕಾರಿ ಡಿ.ಜಿ. ವಂಜಾರಾ ಮತ್ತು, ಪ್ರಮುಖ ಸಾಕ್ಷಿ ಹೆಚ್.ಡಿ. ಗೋಸ್ವಾಮಿ ಅವರನ್ನೂ ಭೇಟಿ ಮಾಡಿದ ಆರೋಪವಿತ್ತು. ಆದರೆ ಈ ಆರೋಪಗಳನ್ನು ಪುಷ್ಟೀಕರಿಸುವ ಯಾವುದೇ ಪ್ರಬಲ ಸಾಕ್ಷ್ಯ ಇಲ್ಲ ಎಂದು ಕೋರ್ಟ್ ಹೇಳಿತು. ಖೋಡಿಯಾರ್‌ಗೆ ಪಾಂಡೆ ಅವರ ಗನ್‌ಮ್ಯಾನ್ ಹೋಗಿದ್ದ ಬಗ್ಗೆ ಎಲ್ಲಿಯೂ ಉಲ್ಲೇಖವಾಗಿರಲಿಲ್ಲ. ಎಫ್‌ಐಆರ್ ದಾಖಲಿಸುವಂತಹ ವಿಚಾರಗಳಲ್ಲಿ ಪಾಂಡೆ ಅವರಂತಹ ಹಿರಿಯ ಅಧಿಕಾರಿಗಳು ಕಿರಿಯ ಅಧಿಕಾರಿಯ ಕಚೇರಿಗೆ ಭೇಟಿ ನೀಡುವುದನ್ನು ನಂಬಲಾಗದು ಎಂದು ಕೋರ್ಟ್ ಅಭಿಪ್ರಾಯಪಟ್ಟಿತ್ತು.

1982ರ ಬ್ಯಾಚಿನ ಐಪಿಎಸ್ ಅಧಿಕಾರಿ ಪಾಂಡೆ ಅವರು ಇಲಾಖೆಯಲ್ಲಿ ಸುದೀರ್ಘ ಅವಧಿ ಸೇವೆ ಸಲ್ಲಿಸಿದವರು. ನಕಲಿ ಎನ್‌ಕೌಂಟರ್ ಪ್ರಕರಣದಲ್ಲಿ ಬಂಧಿತರಾಗಿದ್ದ ಅವರನ್ನು 19 ತಿಂಗಳು ಜೈಲಿನಲ್ಲಿ ಇರಿಸಲಾಗಿತ್ತು. 2013ರ ಜುಲೈನಲ್ಲಿ ಬಂಧಿತರಾದ ಅವರು 2015ರ ಫೆಬ್ರುವರಿಯಲ್ಲಿ ಜಾಮೀನಿನ ಮೇಲೆ ಹೊರಬಂದರು. ಗುಜರಾತ್ ಸರ್ಕಾರವು ಅವರಿಗೆ ಡಿಜಿಪಿ ಹುದ್ದೆಗೆ ಬಡ್ತಿ ನೀಡಿತ್ತು. ವಿವಾದದ ಕಾರಣ ಅವರು ರಾಜೀನಾಮೆ ನೀಡಿದ್ದರು. ಪ್ರಕರಣದಲ್ಲಿ ಹೆಸರು ಕೇಳಿಬಂದಿದ್ದ ಏಳು ಪೊಲೀಸ್ ಅಧಿಕಾರಿಗಳಲ್ಲಿ ಪಾಂಡೆ ಅವರೂ ಒಬ್ಬರು.

ಇಶ್ರತ್ ಜಹಾಂ ಅವರ ಸ್ನೇಹಿತ ಜಾವೇದ್ ಶೇಖ್ ಹಾಗೂ ಇಬ್ಬರು ಪಾಕಿಸ್ತಾನಿ ನಾಗರಿಕರ ಹತ್ಯೆಗೆ ಸಂಚು ರೂಪಿಸಿದ, ಅಪಹರಣ ಮಾಡಿದ ಹಾಗೂ ಹತ್ಯೆ ಮಾಡಿದ ಆರೋಪವು ಇವರೆಲ್ಲರ ಮೇಲಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT