ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಳ–ಅಗಲ: ನೇಪಾಳದಲ್ಲಿ ರಾಜಕೀಯ ಅಸ್ಥಿರತೆ

Last Updated 23 ಡಿಸೆಂಬರ್ 2020, 19:30 IST
ಅಕ್ಷರ ಗಾತ್ರ
ADVERTISEMENT
""
""

ನೇಪಾಳದಲ್ಲಿ ಮತ್ತೆ ರಾಜಕೀಯ ಬಿಕ್ಕಟ್ಟು ತಲೆದೋರಿದೆ. ನೇಪಾಳ ಸಂಸತ್ತಿನ ಪ್ರತಿನಿಧಿ ಸಭೆಯನ್ನು ಬರ್ಖಾಸ್ತು ಮಾಡುವಂತೆ ಪ್ರಧಾನಿ ಕೆ.ಪಿ. ಶರ್ಮಾ ಒಲಿ ಅವರು ಮಾಡಿದ್ದ ಪ್ರಸ್ತಾವವನ್ನು ನೇಪಾಳ ಅಧ್ಯಕ್ಷೆ ವಿದ್ಯಾ ದೇವಿ ಭಂಡಾರಿ ಅವರು ಅನುಮೋದಿಸಿದ್ದಾರೆ. ಒಲಿ ಅವರ ಈ ನಡೆ ಸಂವಿಧಾನಬಾಹಿರ ಎಂದು ಆಡಳಿತಾರೂಢ ಪಕ್ಷದ ಹಲವು ಸಂಸದರು ಮತ್ತು ವಿರೋಧ ಪಕ್ಷಗಳು ಆರೋಪಿಸಿವೆ. ಪ್ರಜಾಪ್ರಭುತ್ವ ವಿಫಲವಾಗಿದೆ, ರಾಜಪ್ರಭುತ್ವವೇ ಬರಲಿ ಎಂಬ ಕೂಗೂ ಅಲ್ಲಿ ಕೇಳಿದೆ.

ರಾಜಕೀಯ ಬಿಕ್ಕಟ್ಟು
ಅವಧಿಗೂ ಮುನ್ನವೇ ಪ್ರತಿನಿಧಿ ಸಭೆಯನ್ನು ಪ್ರಧಾನಿ ಅವರು ವಿಸರ್ಜನೆ ಮಾಡಲು ನೇಪಾಳ ಸಂವಿಧಾನದಲ್ಲಿ ಅವಕಾಶವಿಲ್ಲ. ಹಾಗಿದ್ದರೂ ಪ್ರಧಾನಿ ಕೆ.ಪಿ. ಶರ್ಮಾ ಒಲಿ ಅವರು ಪ್ರತಿನಿಧಿ ಸಭೆಯನ್ನು ಬರ್ಖಾಸ್ತು ಮಾಡಿದ್ದಾರೆ. ಈ ಕ್ರಮದ ವಿರುದ್ಧ, ನೇಪಾಳ ಕಮ್ಯುನಿಸ್ಟ್‌ ಪಕ್ಷದ(ಎಂಸಿ) ಮುಖಂಡ ಪುಷ್ಪ ಕಮಾಲ್ ದಹಾಲ್ ‘ಪ್ರಚಂಡ’ ಅವರು ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದ್ದಾರೆ. ಸರ್ಕಾರ ರಚಿಸಲು ಒಲಿ ಅವರಿಗೆ ನೀಡಿದ್ದ ಬೆಂಬಲವನ್ನೂ ಪ್ರಚಂಡ ಅವರು ಹಿಂಪಡೆದಿದ್ದಾರೆ. ನೇಪಾಳ ಕಮ್ಯುನಿಸ್ಟ್ ಪಕ್ಷದ(ಎಂಸಿ) ನಾಯಕರು ಮತ್ತು ಕಾರ್ಯಕರ್ತರು ಒಲಿ ವಿರುದ್ಧ ಬೀದಿಗಿಳಿದು ಪ್ರತಿಭಟನೆ ನಡೆಸುತ್ತಿದ್ದಾರೆ.2015ರಲ್ಲಿ ಅಂಗೀಕರಿಸಲಾಗಿದ್ದ ನೂತನ ಸಂವಿಧಾನವನ್ನೇ ರದ್ದುಮಾಡಬೇಕು ಎಂದು ಕೆಲವು ರಾಜಕೀಯ ಪಕ್ಷಗಳು ಚಳವಳಿ ಆರಂಭಿಸಿವೆ.

ಒಲಿ ಅವರ ಮುಂದಿನ ನಡೆ
ಒಲಿ ಅವರು ಮುಂದೆ ಏನು ಮಾಡಲಿದ್ದಾರೆ ಎಂಬುದು, ಪ್ರತಿನಿಧಿ ಸಭೆಯ ವಿಸರ್ಜನೆಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‌ ನೀಡುವ ತೀರ್ಪನ್ನು ಆಧರಿಸಿದೆ. ಈ ಬಿಕ್ಕಟ್ಟಿಗೆ ಸಂಬಂಧಿಸಿದ ಅರ್ಜಿಗಳನ್ನು ಸುಪ್ರೀಂ ಕೋರ್ಟ್‌ ಬುಧವಾರವಷ್ಟೇ ಸಂವಿಧಾನ ಪೀಠಕ್ಕೆ ವರ್ಗಾಯಿಸಿದೆ. ಅವಧಿಗೂ ಮುನ್ನವೇ ಪ್ರತಿನಿಧಿ ಸಭೆಯನ್ನು ವಿಸರ್ಜನೆ ಮಾಡಿದ ಪ್ರಧಾನಿಯ ನಿರ್ಧಾರ ಸಂವಿಧಾನಬದ್ಧವಾದುದು ಎಂದು ಸುಪ್ರೀಂ ಕೋರ್ಟ್‌ ತೀರ್ಪು ನೀಡಿದರೆ, ಒಲಿ ಅವರಿಗೆ ಅನುಕೂಲ. ಸಂಸತ್ತು ವಿಸರ್ಜನೆಯಾದ ನಂತರ, ಮಧ್ಯಂತರ ಸರ್ಕಾರ ಅಸ್ತಿತ್ವಕ್ಕೆ ಬರಲಿದೆ. 2021ರ ಏಪ್ರಿಲ್‌-ಮೇ ತಿಂಗಳಿನಲ್ಲಿ ಚುನಾವಣೆ ನಡೆದು ಫಲಿತಾಂಶ ಬರಬೇಕು. ಆನಂತರ ನೂತನ ಸರ್ಕಾರ ರಚನೆಯಾಗುವವರೆಗೂ ಒಲಿ ಅವರೇ ನೇಪಾಳದ ಪ್ರಧಾನಿಯಾಗಿ ಮುಂದುವರಿಯಲಿದ್ದಾರೆ.

ಪ್ರತಿನಿಧಿ ಸಭೆಯನ್ನು ವಿಸರ್ಜಿಸಿದ ಒಲಿ ಅವರ ನಿರ್ಧಾರವನ್ನು ಸುಪ್ರೀಂ ಕೋರ್ಟ್‌ ರದ್ದು ಮಾಡಿದರೆ, ಒಲಿ ಅವರಿಗೆ ಭಾರಿ ಹಿನ್ನಡೆಯಾಗಲಿದೆ. ಒಲಿ ಅವರು ಪ್ರಧಾನಿ ಸ್ಥಾನದಿಂದ ಕೆಳಗೆ ಇಳಿಯಬೇಕಾಗುತ್ತದೆ. ಆಗ ಅವರು ತಮ್ಮ ಪಕ್ಷವನ್ನು ತೊರೆದು, ಬೇರೆ ಪಕ್ಷವನ್ನು ಸ್ಥಾಪಿಸಲಿದ್ದಾರೆ ಎಂದು ಅವರ ಆಪ್ತರು ಹೇಳಿದ್ದಾರೆ.

ಹೊಸ ಸರ್ಕಾರ ಯಾವಾಗ?
2021ರ ಏಪ್ರಿಲ್‌ ಮತ್ತು ಮೇನಲ್ಲಿ ಎರಡು ಹಂತದಲ್ಲಿ ಚುನಾವಣೆ ನಿಗದಿಯಾಗಿದೆ. ಸರ್ಕಾರ ರಚನೆ ಆಗುವವರೆಗೆ ಮಧ್ಯಂತರ ಸರ್ಕಾರವೇ ಆಡಳಿತವನ್ನು ನೋಡಿಕೊಳ್ಳಲಿದೆ. ಪ್ರತಿನಿಧಿ ಸಭೆಯನ್ನು ವಿಸರ್ಜಿಸುವ ಒಲಿ ಅವರ ನಿರ್ಧಾರವನ್ನು ನೇಪಾಳ ಸುಪ್ರೀಂ ಕೋರ್ಟ್‌ ಎತ್ತಿಹಿಡಿದರೆ ಮಾತ್ರ ಚುನಾವಣೆಯ ಅವಶ್ಯಕತೆ ಬೀಳುತ್ತದೆ. ಇಲ್ಲದಿದ್ದಲ್ಲಿ, ಅವಧಿಗೂ ಮುನ್ನವೇ ಚುನಾವಣೆ ನಡೆಯುವುದಿಲ್ಲ.

ಪ್ರಮುಖ ವಿರೋಧ ಪಕ್ಷವಾದ ನೇಪಾಳ ಕಾಂಗ್ರೆಸ್‌, ಸರ್ಕಾರ ಈಗ ಘೋಷಿಸಿರುವ ದಿನಾಂಕದಲ್ಲೇ ಚುನಾವಣೆ ನಡೆಸಬೇಕು ಎಂದು ಒತ್ತಾಯಿಸಿದೆ. ರಾಜಕೀಯ ಬಿಕ್ಕಟ್ಟಿನ ಬಿಸಿ ಆರುವ ಮೊದಲೇ ಚುನಾವಣೆ ನಡೆದರೆ, ತಮ್ಮ ಪಕ್ಷಕ್ಕೆ ಹೆಚ್ಚಿನ ಮತಗಳು ಬರಬಹುದು. ಇದರಿಂದ ಸಂಸತ್ತಿನಲ್ಲಿ ತಮ್ಮ ಪ್ರಾತಿನಿಧ್ಯ ಹೆಚ್ಚಲಿದೆ ಎಂದು ನೇಪಾಳ ಕಾಂಗ್ರೆಸ್‌ ನಾಯಕರು ಹೇಳಿದ್ದಾರೆ.

ಪ್ರಧಾನಿ ಕೆ.ಪಿ. ಶರ್ಮಾ ಒಲಿ

ಹಿಂದೂ ರಾಷ್ಟ್ರಕ್ಕೆ ಪಟ್ಟು
ಪ್ರಾದೇಶಿಕ ಶಕ್ತಿಯಾಗಿ ಬೆಳೆಯಬೇಕು ಎಂಬ ಚೀನಾ ಹಾಗೂ ಭಾರತದ ಹಟದಿಂದ, ಎರಡೂ ದೇಶಗಳ ಜತೆ ಗಡಿ ಹಂಚಿಕೊಂಡಿರುವ ನೇಪಾಳದ ಮೇಲೆ ಒತ್ತಡ ಸೃಷ್ಟಿಯಾಗಿದೆ.

ಹೀಗಾಗಿ ನೇಪಾಳವನ್ನು ಸ್ವತಂತ್ರ ಶಕ್ತಿಯಾಗಿ ಉಳಿಸಿಕೊಳ್ಳಬೇಕಾದರೆ, ರಾಜಪ್ರಭುತ್ವಕ್ಕೆ ಮರಳುವುದೊಂದೇ ದಾರಿ ಎಂದು ಅಲ್ಲಿನ ಹಲವು ಜನರು ಭಾವಿಸಿದ್ದಾರೆ. ಕಳೆದ ನವೆಂಬರ್‌ನಲ್ಲಿ ಕಠ್ಮಂಡುವಿನಲ್ಲಿ ಸೇರಿದ್ದ ಸಾವಿರಾರು ಜನರು ಹಿಂದೂ ಸಾಮ್ರಾಜ್ಯ ಮರುಸ್ಥಾಪನೆಗೆ ಪಟ್ಟು ಹಿಡಿದಿದ್ದರು. ನೇಪಾಳವನ್ನು ಹಿಂದೂ ರಾಷ್ಟ್ರ ಎಂಬುದಾಗಿ ಘೋಷಿಸುವಂತೆ ನ್ಯಾಷನಲಿಸ್ಟ್ ಸಿವಿಕ್ ಸೊಸೈಟಿ ಆಗ್ರಹಿಸಿತ್ತು. ಇದಾದ ಎರಡು ದಿನಗಳಲ್ಲಿ ನೇಪಾಳ ಸ್ಕಾಲರ್ಸ್ ಕೌನ್ಸಿಲ್ ಇದೇ ಬೇಡಿಕೆಯಿಟ್ಟು ಬಿರಾಟ್‌ನಗರದಲ್ಲಿ ಧರಣಿ ನಡೆಸಿತ್ತು. 1768ರಿಂದ 2008ರವರೆಗೆ ಆಳ್ವಿಕೆ ನಡೆಸಿದ ಶಾ ಮನೆತನದ ಪೃಥ್ವಿ ನಾರಾಯಣ ಶಾ ಅವರ ಭಾವಚಿತ್ರ ಹಿಡಿದು ಮೆರವಣಿಗೆ ನಡೆಸಲಾಗಿತ್ತು.

ಮತ್ತೆ ರಾಜಪ್ರಭುತ್ವ?
ನೇಪಾಳವು ರಾಜಪ್ರಭುತ್ವ ಮರಳಲಿದೆಯೇ ಎಂಬ ಸಂಶಯಕ್ಕೆ ಸದ್ಯದ ರಾಜಕೀಯ ಬೆಳವಣಿಗೆಗಳು ಎಡೆಮಾಡಿಕೊಟ್ಟಿವೆ. ರಾಜಪ್ರಭುತ್ವವನ್ನು ಕೆಳಗಿಳಿಸಿ, ಪ್ರಜಾಪ್ರಭುತ್ವವನ್ನು ಅಸ್ತಿತ್ವಕ್ಕೆ ತಂದ ದಿನದಿಂದ ಅದು ವಿಫಲವಾಗಿರುವುದೇ ಹೆಚ್ಚು. ರಾಜಕೀಯ ಅಸ್ಥಿರತೆ, ಆರ್ಥಿಕ ದುಃಸ್ಥಿತಿ ಮತ್ತು ಕೋವಿಡ್ ವಿರುದ್ಧದ ಹೋರಾಟದಲ್ಲಿ ಪ್ರಜಾಪ್ರಭುತ್ವ ಸರ್ಕಾರ ಸೊರಗಿರುವುದನ್ನು ನೇಪಾಳಿಗರು ಗುರುತಿಸಿದ್ದಾರೆ. ಹೀಗಾಗಿ ರಾಜಪ್ರಭುತ್ವ ಮರುಸ್ಥಾಪನೆ ವಿಚಾರ ಮತ್ತೆ ಮುನ್ನೆಲೆಗೆ ಬಂದಿದೆ.

ಪೂರ್ಣಾವಧಿಯೇ ಇಲ್ಲ
1990ರ ಬಳಿಕ ನೇಪಾಳದ ಯಾವೊಬ್ಬ ಪ್ರಧಾನಿಯೂ ಪೂರ್ಣಾವಧಿ ಅಧಿಕಾರ ನಡೆಸಿಲ್ಲ ಎಂಬ ಅಂಶವೇ ಆ ದೇಶದ ರಾಜಕೀಯ ಅಸ್ಥಿರತೆಯನ್ನು ತಿಳಿಸುತ್ತಿದೆ. ಕಳೆದ 30 ವರ್ಷಗಳಿಂದ 25 ಬಾರಿ ನಾಯಕತ್ವ ಬದಲಾಗಿದೆ. 14 ಪ್ರಧಾನ ಮಂತ್ರಿಗಳಲ್ಲಿ ಯಾರೂ ಪೂರ್ಣಾವಧಿ ಅಧಿಕಾರ ನಡೆಸಿಲ್ಲ.

ನಕಾಶೆ ವಿವಾದ
ನಕಾಶೆ ವಿಚಾರದಲ್ಲಿ ಭಾರತದ ಜೊತೆ ನೇಪಾಳದ ಸಂಬಂಧ ಹಳಸಿದೆ. ದೇಶದ ನಕಾಶೆಯನ್ನು ತಿದ್ದುಪಡಿ ಮಾಡುವ ಸಾಂವಿಧಾನಿಕ ತಿದ್ದುಪಡಿ ಮಸೂದೆ ಪರವಾಗಿ ಕಳೆದ ಜೂನ್ 13 ರಂದು ನೇಪಾಳದ ಸಂಸತ್ತು ಮತ ಚಲಾಯಿಸಿತು. ಲಿಪುಲೇಖ್, ಕಾಲಾಪಾನಿ ಮತ್ತು ಲಿಂಪಿಯಾಡುರಾ ಪ್ರದೇಶಗಳನ್ನು ತನ್ನ ಸಾರ್ವಭೌಮ ಪ್ರದೇಶದ ಭಾಗವಾಗಿ ನೇಪಾಳ ತೋರಿಸಿತು.

ಕೈಲಾಸ ಮಾನಸ ಸರೋವರ ತೀರ್ಥಯಾತ್ರೆಯ ಭಾಗವಾಗಿ ಲಿಪುಲೇಖ್ ಮೂಲಕ ಸಂಪರ್ಕ ರಸ್ತೆಯನ್ನು ಭಾರತ ಉದ್ಘಾಟಿಸಿದ ನಂತರ ನೇಪಾಳ ಸರ್ಕಾರ ಈ ಕ್ರಮ ತೆಗೆದುಕೊಂಡಿತ್ತು. ಭಾರತ ಹೊಸದಾಗಿ ನಿರ್ಮಿಸಿದ ರಸ್ತೆಯು ತನ್ನ ಭೂಪ್ರದೇಶವನ್ನು ಹಾದುಹೋಗುತ್ತದೆ ಎಂದು ನೇಪಾಳ ಆರೋಪಿಸಿತ್ತು. ನೇಪಾಳದ ನಡೆ ಸಮರ್ಥನೀಯವಲ್ಲ ಎಂದು ಭಾರತ ಹೇಳಿತ್ತು.

ಪ್ರಜಾಪ್ರಭುತ್ವದ ಸೋಲು?
ರಾಜಪ್ರಭುತ್ವಕ್ಕೆ ಆಗ್ರಹಿಸುತ್ತಿರುವುದರ ಹಿಂದೆ ಪ್ರಜಾಪ್ರಭುತ್ವದ ಸೋಲಿನ ಕುರುಹು ಇದೆ. 70 ವರ್ಷಗಳಲ್ಲಿ ನೇಪಾಳವು 22 ಬಾರಿ ಆಡಳಿತದ ಪಲ್ಲಟಗಳನ್ನು ಎದುರಿಸಿದೆ. ಅಸ್ಥಿರತೆ ಸಾಮಾನ್ಯವಾಗಿರುವ ದೇಶದಲ್ಲಿ ಎಲ್ಲ ರಾಜಕೀಯ ಪಕ್ಷಗಳು ನೀಡಿದ್ದ ‌ಭರವಸೆಗಳು ದಾರಿತಪ್ಪಿವೆ. ಇದಲ್ಲದೆ, ಬಲವಾದ ದೇಶೀಯ ಏಕೀಕೃತ ಶಕ್ತಿಯು ಅಸ್ತಿತ್ವದಲ್ಲಿಲ್ಲದ ಕಾರಣ ನೇಪಾಳಿಗರು ತಮ್ಮ ಸಾಂಪ್ರದಾಯಿಕ ಸ್ವಾತಂತ್ರ್ಯವನ್ನು ವಿದೇಶಿ ಶಕ್ತಿಗಳ ಹಸ್ತಕ್ಷೇಪದಿಂದಾಗಿ ಕಳೆದುಕೊಳ್ಳುವ ಭೀತಿಯಲ್ಲಿದ್ದಾರೆ ಎಂಬುದು ವಿಶ್ಲೇಷಕರ ಮಾತು. ಪದಚ್ಯುತ ರಾಜ ಜ್ಞಾನೇಂದ್ರ, ರಾಜನಾಗಿ ಮತ್ತೆ ಅಧಿಕಾರಕ್ಕೆ ಬರುವ ಆಲೋಚನೆಯೊಂದಿಗೆ ತಂತ್ರ ರೂಪಿಸುತ್ತಿದ್ದಾರೆ ಎನ್ನಲಾಗಿದೆ.

ಸಂವಿಧಾನದ ಮೇಲೆ ಮುನಿಸು
2015ರಲ್ಲಿ ಅಸ್ತಿತ್ವಕ್ಕೆ ಬಂದ ನೂತನ ಸಂವಿಧಾನದ ವಿರುದ್ಧ ಅಂದಿನಿಂದಲೇ ಬೀದಿಹೋರಾಟಗಳು ನಡೆಯುತ್ತಿವೆ. ‘ಮೂರನೇ ಎರಡರಷ್ಟು ಬಹುಮತ ಹೊಂದಿದ್ದ ಸರ್ಕಾರವನ್ನು ವಿಸರ್ಜನೆ ಮಾಡಲು ಸಂವಿಧಾನ ಅವಕಾಶ ಮಾಡಿಕೊಡುತ್ತದೆ ಎಂದಾದರೆ, ಅದು ವ್ಯವಸ್ಥೆಯು ಕುಸಿದಿರುವ ಸೂಚನೆ. ಹೀಗಾಗಿ ಸಂವಿಧಾನ ಬದಲಿಸದೇ ವಿಧಿಯಿಲ್ಲ’ ಎಂಬುದು ಚಳವಳಿಗಾರರ ಮಾತು.

ನೇಪಾಳದಲ್ಲಿ ಸಂಸತ್ ವಿಸರ್ಜನೆ ಹೊಸತಲ್ಲವಾದರೂ, 2015ರ ಬಳಿಕ ನಡೆದ ಮೊದಲ ಘಟನೆ ಇದು. ಬೇಕಾಬಿಟ್ಟಿ ಸರ್ಕಾರ ವಿಸರ್ಜನೆಗೆ ಅವಕಾಶ ನೀಡಬಾರದು ಎಂಬ ತತ್ವದ ಮೇಲೆ ಹೊಸ ಸಂವಿಧಾನ ಕಟ್ಟಲಾಗಿದ್ದರೂ, ಅದೂ ಈಗ ಅರ್ಥ ಕಳೆದುಕೊಂಡ ಬೇಸರ ಜನರಲ್ಲಿದೆ. 1991ರ ಸಂವಿಧಾನವು ಸಂಸತ್ ವಿಸರ್ಜನೆ ಅಧಿಕಾರವನ್ನು ಪ್ರಧಾನಿಗೆ ಕೊಟ್ಟಿತ್ತು. ಇದರನ್ವಯ ಮೂರು ಬಾರಿ ಸಂಸತ್ ವಿಸರ್ಜನೆಯಾಗಿತ್ತು. ಈ ಸಂವಿಧಾನವನ್ನು 2006ರಲ್ಲಿ ರದ್ದುಗೊಳಿಸಲಾಯಿತು.

ಚೀನಾ-ನೇಪಾಳ ಸಂಬಂಧದ ಹಾದಿ?
2006ರ ಬಳಿಕ ನೇಪಾಳದ ಆಂತರಿಕ ವಿಚಾರದಲ್ಲಿ ಚೀನಾ ಮಹತ್ವದ ಪಾತ್ರ ವಹಿಸುತ್ತಾ ಬಂದಿದೆ. ತನ್ನ ಅಸ್ತಿತ್ವ ಉಳಿಸಿಕೊಳ್ಳಲು ಲಾಬಿ ನಡೆಸುವ, ನೆರವು ನೀಡುವ, ರಹಸ್ಯ ಕಾರ್ಯಕ್ರಮ ರೂಪಿಸುವ ಯತ್ನದಲ್ಲಿ ತೊಡಗಿಸಿಕೊಂಡಿದೆ. ನೇಪಾಳದ ವ್ಯಾಪಾರ ಮತ್ತು ಹೂಡಿಕೆ, ಇಂಧನ, ಪ್ರವಾಸೋದ್ಯಮ, ಮೊದಲಾದ ಕ್ಷೇತ್ರಗಳಲ್ಲಿ ಚೀನಾ ದೊಡ್ಡ ಮೊತ್ತ ಹೂಡಿದೆ. ಚೀನಾವು ನೇಪಾಳದ ಅತಿದೊಡ್ಡ ಎಫ್‌ಡಿಐ ಪಾಲುದಾರ. 2006ರ ನೇಪಾಳ ರಾಜಕೀಯ ಚಿತ್ರಣ ಬದಲಾವಣೆಯಲ್ಲಿ ಭಾರತವು ಮಹತ್ವದ ಪಾತ್ರ ವಹಿಸಿದೆ ಎಂಬ ಕಾರಣಕ್ಕೆ ಚೀನಾವು ನೇಪಾಳದಲ್ಲಿ ತನ್ನ ಅಸ್ತಿತ್ವವನ್ನು ದಿನೇ ದಿನೇ ಗಟ್ಟಿಗೊಳಿಸಿಕೊಳ್ಳುತ್ತಿದೆ.

ಪ್ರಚಂಡಗೆ ಅಧಿಕಾರ ಬಿಟ್ಟುಕೊಡದಿದ್ದದ್ದೇ ಕಾರಣ
ಒಲಿ ನೇತೃತ್ವದ ನೇಪಾಳ ಕಮ್ಯುನಿಸ್ಟ್ ಪಕ್ಷ (ಯುಎಂಎಲ್‌) ಮತ್ತು ಪ್ರಚಂಡ ನೇತೃತ್ವದ ನೇಪಾಲ ಕಮ್ಯುನಿಸ್ಟ್ ಪಕ್ಷ (ಎಂಸಿ) ಮೈತ್ರಿ ಮಾಡಿಕೊಂಡು, ಚುನಾವಣೆ ಎದುರಿಸಿ 2018ರಲ್ಲಿ ಸರ್ಕಾರ ರಚಿಸಿಕೊಂಡಿದ್ದವು. ಐದು ವರ್ಷಗಳಲ್ಲಿ ಎರಡೂವರೆ ವರ್ಷ ಒಲಿ ಅವರು ಪ್ರಧಾನಿಯಾಗುವುದು ಮತ್ತು ನಂತರದ ಎರಡೂವರೆ ವರ್ಷ ಪ್ರಧಾನಿ ಹುದ್ದೆಯನ್ನು ಪ್ರಚಂಡ ಅವರಿಗೆ ಬಿಟ್ಟುಕೊಡುವುದು ಎಂದು ಇಬ್ಬರೂ ನಾಯಕರೂ ಒಪ್ಪಂದಕ್ಕೆ ಬಂದಿದ್ದರು. ಎರಡೂ ಪಕ್ಷಗಳ ಒಮ್ಮತದ ಪಕ್ಷಕ್ಕೆ ನೇಪಾಳ ಕಮ್ಯುನಿಸ್ಟ್ ಪಕ್ಷ ಎಂದಷ್ಟೇ ನಾಮಕರಣ ಮಾಡಲಾಗಿತ್ತು. ಒಲಿ ಮತ್ತು ಪ್ರಚಂಡ ಅವರು ಈ ಪಕ್ಷದ ಜಂಟಿ ಮುಖ್ಯಸ್ಥರಾಗಿದ್ದರು.

ನೇಪಾಳ ಕಮ್ಯುನಿಸ್ಟ್‌ ಪಕ್ಷದ(ಎಂಸಿ) ಮುಖಂಡ ಪುಷ್ಪ ಕಮಾಲ್ ದಹಾಲ್

ಇಬ್ಬರು ನಾಯಕರೂ ಅಧಿಕಾರ ಹಂಚಿಕೆ ಬಗ್ಗೆ ಒಪ್ಪಂದಕ್ಕೆ ಬಂದಿದ್ದರೂ, ಒಲಿ ಅವರು ಈ ವಿಚಾರವನ್ನು ಪಕ್ಷದ ಸಾಮಾನ್ಯ ಸಭೆಯಲ್ಲಿ ಪ್ರಸ್ತಾಪಿಸಿರಲಿಲ್ಲ. ಒಲಿ ಅವರ ಎರಡೂವರೆ ವರ್ಷದ ಅಧಿಕಾರದ ಅವಧಿ ಮುಗಿದ ನಂತರ, ಅಧಿಕಾರ ಬಿಟ್ಟುಕೊಡುವಂತೆ ಪ್ರಚಂಡ ಅವರು ಇಟ್ಟ ಬೇಡಿಕೆಗೆ ಯಾವುದೇ ಮನ್ನಣೆ ದೊರೆಯಲಿಲ್ಲ. ಒಲಿ ಅವರೇ ಅಧಿಕಾರದಲ್ಲಿ ಮುಂದುವರಿದರು. ಇದರಿಂದದಾಗಿ ಪ್ರಚಂಡ ಅವರು ಒಲಿ ಅವರಿಗೆ ನೀಡಿದ್ದ ಬೆಂಬಲವನ್ನು ವಾಪಸ್ ಪಡೆಯಲು ನಿರ್ಧರಿಸಿದರು.

2020ರ ಮೇನಲ್ಲಿ ಈ ಸಂಬಂಧ ಉಂಟಾಗಿದ್ದ ಬಿಕ್ಕಟ್ಟನ್ನು ನೇಪಾಳಕ್ಕೆ ಚೀನಾದ ರಾಯಭಾರಿಯ ಮಧ್ಯಸ್ಥಿಕೆಯ ಮೂಲಕ ಬಗೆಹರಿಸಿಕೊಳ್ಳಲಾಗಿತ್ತು. ಭಾರತದ ಗಡಿಯಲ್ಲಿನ ಕಾಲಾಪಾನಿಯನ್ನು ನೇಪಾಳದ ಗಡಿಯೊಳಗೆ ಸೇರಿಸಿಕೊಳ್ಳುವ ನೂತನ ಭೂಪಟವನ್ನು ರಚಿಸುವ ಕಸರತ್ತಿನ ಮೂಲಕ ಬಿಕ್ಕಟ್ಟನ್ನು ಮುಂದೂಡುವಲ್ಲಿ ಒಲಿ ಅವರು ಸಫಲವಾಗಿದ್ದರು. ಆದರೆ ಬಿಕ್ಕಟ್ಟನ್ನು ಶಮನಗೊಳಿಸುವ ಈ ಯತ್ನಗಳು ಬಹಳ ದಿನ ನಡೆಯಲಿಲ್ಲ. ಈಗ ರಾಜಿ-ಸಂಧಾನದ ಎಲ್ಲಾ ಯತ್ನಗಳೂ ವಿಫಲವಾಗಿವೆ.

ಅಲ್ಲದೆ ಒಲಿ ಅವರ ಪಕ್ಷದ ಸದಸ್ಯರೇ ಒಲಿ ವಿರುದ್ಧ, ಅವಿಶ್ವಾಸ ವ್ಯಕ್ತಪಡಿಸಿದ್ದಾರೆ. ಒಟ್ಟಾರೆ, ಸರ್ಕಾರ ರಚಿಸಲು ಒಲಿ ಅವರಿಗೆ ಇದ್ದ ಬೆಂಬಲ ಈಗ ಇಲ್ಲವಾಗಿದೆ. ಈ ಬಿಕ್ಕಟ್ಟನ್ನು ಬಗೆಹರಿಸಿಕೊಳ್ಳಲು ಒಲಿ ಅವರು ನಡೆಸಿದ ಮಾತುಕತೆಯೂ ವಿಫಲವಾಗಿದೆ. ಸಂಸತ್ತಿನಲ್ಲಿ ಬಹುಮತ ಸಾಬೀತು ಮಾಡುವ ಪ್ರಸಂಗ ಎದುರಾಗಿದ್ದಲ್ಲಿ, ಒಲಿ ಅವರು ಅಧಿಕಾರ ಕಳೆದುಕೊಳ್ಳಬೇಕಿತ್ತು. ಅಧಿಕಾರ ಕಳೆದುಕೊಳ್ಳುವ ಅಪಾಯದಿಂದ ಪಾರಾಗುವ ಸಲುವಾಗಿಯೇ ಅವರು ಪ್ರತಿನಿಧಿ ಸಭೆಯನ್ನು ವಿಸರ್ಜನೆ ಮಾಡಿದ್ದಾರೆ ಎಂದು ರಾಜಕೀಯ ತಜ್ಞರು ವಿಶ್ಲೇಷಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT