ಗುರುವಾರ , ಏಪ್ರಿಲ್ 2, 2020
19 °C
ಸಕ್ರಿಯ ರಾಜಕೀಯದತ್ತ ನ್ಯಾಯಮೂರ್ತಿಗಳು

Explainer | ನ್ಯಾಯಪೀಠದಿಂದ ರಾಜ್ಯಸಭೆಯತ್ತ ರಂಜನ್‌ ಗೊಗೊಯಿ

ಪ್ರಜಾವಾಣಿ ವಿಶೇಷ Updated:

ಅಕ್ಷರ ಗಾತ್ರ : | |

Prajavani

ಸುಪ್ರೀಂ ಕೋರ್ಟ್‌ನ ನಿವೃತ್ತ ಮುಖ್ಯ ನ್ಯಾಯಮೂರ್ತಿ ರಂಜನ್‌ ಗೊಗೊಯಿ ಅವರನ್ನು ರಾಜ್ಯಸಭಾ ಸದಸ್ಯರನ್ನಾಗಿ ನೇಮಕ ಮಾಡಿರುವುದು ದೇಶದ ಕಾನೂನು ಹಾಗೂ ರಾಜಕೀಯ ವಲಯದಲ್ಲಿ ಅಚ್ಚರಿಯ ಅಲೆಯನ್ನೇ ಎಬ್ಬಿಸಿದೆ. ಅವರು ನಿವೃತ್ತಿಗೊಂಡು ಈಗಷ್ಟೇ ನಾಲ್ಕು ತಿಂಗಳು ಕಳೆದಿರುವುದು ಇದಕ್ಕೆ ಪ್ರಮುಖ ಕಾರಣವಾಗಿದೆ.

ಮುಖ್ಯ ಪ್ರಕರಣಗಳಲ್ಲಿ ತೀರ್ಪು ನೀಡಿದವರು

ನರೇಂದ್ರ ಮೋದಿ ಅವರ ನೇತೃತ್ವದ ಸರ್ಕಾರದ ಅವಧಿಯಲ್ಲೇ ಗೊಗೊಯಿ ಅವರು ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಯಾಗಿದ್ದರು. ಈ ಅವಧಿಯಲ್ಲಿ ಸರ್ಕಾರದ ನೀತಿ–ನಿರ್ಧಾರಗಳಿಗೆ ಸಂಬಂಧಿಸಿದ ಹಲವು ಪ್ರಕರಣಗಳಲ್ಲಿ ತೀರ್ಪುಗಳನ್ನು ನೀಡಿದಂತಹ ಪೀಠಗಳಿಗೆ ಅವರು ಮುಖ್ಯಸ್ಥರಾಗಿದ್ದರು. ರಫೇಲ್‌, ಸಿಬಿಐ ನಿರ್ದೇಶಕರ ಹುದ್ದೆಯಿಂದ ಅಲೋಕ್‌ ವರ್ಮಾ ಅವರ ವಜಾ, ಅಯೋಧ್ಯೆ, ತ್ರಿವಳಿ ತಲ್ಲಾಖ್‌, ಶಬರಿಮಲೆ, ಕಾಶ್ಮೀರ ಹಾಗೂ ಅಸ್ಸಾಂ ಎನ್‌ಆರ್‌ಸಿಯಂತಹ ಪ್ರಮುಖ ಪ್ರಕರಣಗಳ ತೀರ್ಪುಗಳನ್ನು ಅವರ  ನೇತೃತ್ವದ ಪೀಠಗಳೇ ನೀಡಿದ್ದವು.

ಕಾಕತಾಳೀಯ ಎಂಬಂತೆ ಕಳೆದ ಜನವರಿಯಲ್ಲಷ್ಟೇ ಕೇಂದ್ರ ಸರ್ಕಾರ, ನ್ಯಾಯಮೂರ್ತಿ ಗೊಗೊಯಿ ಅವರ ಸಹೋದರ ಏರ್‌ ಮಾರ್ಷಲ್‌ (ನಿವೃತ್ತ) ಅಂಜನ್‌ ಕುಮಾರ್‌ ಗೊಗೊಯಿ ಅವರನ್ನು ಈಶಾನ್ಯ ಪರಿಷತ್ತಿನ (ಎನ್‌ಇಸಿ) ಪೂರ್ಣ ಪ್ರಮಾಣದ ಅಧಿಕಾರಿಯೇತರ ಸದಸ್ಯರನ್ನಾಗಿ ನೇಮಕ ಮಾಡಿತ್ತು.

ಗೊಗೊಯಿ ಅವರು 2019ರ ನವೆಂಬರ್‌ 17ರಂದು ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಹುದ್ದೆಯಿಂದ ನಿವೃತ್ತರಾಗಿದ್ದರು. ಅವರ ಸುತ್ತ ಕೆಲವು ವಿವಾದಗಳು ಸಹ ಸೃಷ್ಟಿಯಾಗಿದ್ದವು. ಅದರಲ್ಲಿ ಮಹಿಳೆಯೊಬ್ಬರು ಅವರ ವಿರುದ್ಧ ಮಾಡಿದ್ದ ಲೈಂಗಿಕ ಕಿರುಕುಳದ ಆರೋಪವೂ ಒಂದಾಗಿತ್ತು. ಕಳೆದ ವರ್ಷದ ಏಪ್ರಿಲ್‌ನಲ್ಲಿ ತಮ್ಮ ವಿರುದ್ಧ ಈ ಆರೋಪ ಕೇಳಿಬಂದಾಗ ತಾವೇ ತುರ್ತು ವಿಚಾರಣೆ ನಡೆಸಿದ್ದರು.

ಯಾವುದೇ ರಾಜಕೀಯ ಪಕ್ಷ ಸೇರಬಹುದೇ?

ನ್ಯಾಯಮೂರ್ತಿ ಗೊಗೊಯಿ ಅವರು ರಾಜ್ಯಸಭೆಗೆ ನಾಮನಿರ್ದೇಶನಗೊಂಡ ಸದಸ್ಯರಾಗಲಿದ್ದಾರೆ. ಹೀಗಾಗಿ ಅವರು ಯಾವುದೇ ಪಕ್ಷದ ಸದಸ್ಯರಲ್ಲ. ಆದರೆ, ಅವರು ರಾಜಕೀಯ ಪಕ್ಷದ ಸದಸ್ಯರಾಗಲು ಇಚ್ಛಿಸಿದರೆ ಪ್ರಮಾಣವಚನ ಸ್ವೀಕರಿಸಿದ ಆರು ತಿಂಗಳೊಳಗೆ ಅದನ್ನು ಘೋಷಿಸಬೇಕು. 1952ರಿಂದ ಇದುವರೆಗೆ ಒಟ್ಟಾರೆ 135 ಜನ ರಾಜ್ಯಸಭೆಗೆ ಸದಸ್ಯರಾಗಿ ನಾಮನಿರ್ದೇಶನಗೊಂಡಿದ್ದಾರೆ. ಅದರಲ್ಲಿ ರಾಜಕೀಯ ಪಕ್ಷಗಳನ್ನು ಸೇರಿದವರು 25 ಮಂದಿ. ಸದ್ಯ ರಾಜ್ಯಸಭೆಯಲ್ಲಿ 12 ನೇಮಕಗೊಂಡ ಸದಸ್ಯರಿದ್ದು, ಅದರಲ್ಲಿ ಎಂಟು ಜನ ರಾಜಕೀಯ ಪಕ್ಷದ (ಬಿಜೆಪಿ) ಜತೆ ಗುರುತಿಸಿಕೊಂಡಿದ್ದಾರೆ.

ಯಾರನ್ನು ನೇಮಕ ಮಾಡಬಹುದು?

ಸಂವಿಧಾನದ 80ನೇ ವಿಧಿ ಪ್ರಕಾರ, 12 ಜನರನ್ನು ರಾಜ್ಯಸಭೆಗೆ ನಾಮನಿರ್ದೇಶನದ ಮೂಲಕ ನೇಮಕ ಮಾಡಲು ಅವಕಾಶವಿದೆ. ಕೇಂದ್ರ ಸರ್ಕಾರದ ಸಲಹೆ ಮೇರೆಗೆ ರಾಷ್ಟ್ರಪತಿಯವರು ಈ ನೇಮಕ ಮಾಡುತ್ತಾರೆ. ಸಾಹಿತ್ಯ, ವಿಜ್ಞಾನ, ಕಲೆ ಹಾಗೂ ಸಾಮಾಜಿಕ ಸೇವೆಯಲ್ಲಿ ತೊಡಗಿ, ಆಳವಾದ ಅನುಭವ ಇರುವವರನ್ನು ನೇಮಕ ಮಾಡಬೇಕು ಎಂಬ ನಿಯಮವಿದೆ.

ನ್ಯಾಯಮೂರ್ತಿಗಳು ರಾಜಕೀಯಕ್ಕೆ ಸೇರಬಹುದೇ?

ನ್ಯಾಯಮೂರ್ತಿಗಳು ತಾವು ವಹಿಸಿಕೊಂಡ ಹುದ್ದೆಯಿಂದ ನಿರ್ಗಮಿಸಿದ ಮೇಲೆ (ನಿವೃತ್ತಿ ಅಥವಾ ರಾಜೀನಾಮೆ) ಸಕ್ರಿಯ ರಾಜಕೀಯವನ್ನು ಪ್ರವೇಶಿಸಲು ಕಾನೂನಿನ ಯಾವುದೇ ಅಡಚಣೆಗಳು ಇಲ್ಲ. ಹುದ್ದೆಯಿಂದ ನಿರ್ಗಮಿಸಿದ ಮೇಲೆ ಹಲವು ನ್ಯಾಯಮೂರ್ತಿಗಳು ರಾಜಕೀಯ ಸೇರಿದ ಉದಾಹರಣೆಗಳು ಭಾರತ ಮಾತ್ರವಲ್ಲದೆ ಜಗತ್ತಿನ ಹಲವು ದೇಶಗಳಲ್ಲಿ ಸಿಗುತ್ತವೆ.

ರಾಜಕೀಯ ವ್ಯಕ್ತಿಗಳು ನ್ಯಾಯಮೂರ್ತಿ ಆಗಬಹುದೇ?

ನ್ಯಾಯಮೂರ್ತಿ ವಿ.ಆರ್‌. ಕೃಷ್ಣ ಅಯ್ಯರ್‌ ಅವರು ಕೇರಳದ ಸಿಪಿಐ ನೇತೃತ್ವದ ಸರ್ಕಾರದಲ್ಲಿ ಮಂತ್ರಿಯಾಗಿದ್ದವರು. ಬಳಿಕ ರಾಜಕೀಯದಿಂದ ಹೊರಬಂದ ಅವರು ಸುಪ್ರೀಂ ಕೋರ್ಟ್‌ನ ನ್ಯಾಯಮೂರ್ತಿಯಾಗಿ ನಿಯುಕ್ತಿಗೊಂಡರು. ಒಂದೊಮ್ಮೆ ಸಕ್ರಿಯ ರಾಜಕೀಯದಲ್ಲಿ ತೊಡಗಿಸಿಕೊಂಡವರು, ಅದರಿಂದ ಹೊರಬಂದರೆ ಅವರಿಗೆ ನ್ಯಾಯಮೂರ್ತಿಯಾಗುವ ಅವಕಾಶವಿದೆ. ಆ ಹುದ್ದೆಗೆ ಬೇಕಾದ ಅರ್ಹತೆಗಳನ್ನು ಅವರು ಹೊಂದಿರಬೇಕು. ನ್ಯಾಯಮೂರ್ತಿಗಳು, ರಾಜಕೀಯ ವ್ಯವಸ್ಥೆಯ ಜತೆಗೆ ಬೆರೆಯುವುದು ಅಪಾಯಕಾರಿ. ಇದರಿಂದ ನ್ಯಾಯಾಂಗ ವ್ಯವಸ್ಥೆಯ ಸ್ವಾತಂತ್ರ್ಯಕ್ಕೆ ಧಕ್ಕೆ ಬರುತ್ತದೆ ಎನ್ನುವುದು ಸಾರ್ವಜನಿಕ ವಲಯದಲ್ಲಿ ಕೇಳಿಬರುವ ಸಾಮಾನ್ಯ ಅಭಿಪ್ರಾಯ.


ಬಹರುಲ್‌ ಇಸ್ಲಾಂ

ಈ ಹಿಂದೆ ನೇಮಕಗೊಂಡವರು

ಮುಖ್ಯ ನ್ಯಾಯಮೂರ್ತಿಯೊಬ್ಬರು ನಿವೃತ್ತಿಯ ಬಳಿಕ ರಾಜ್ಯಸಭೆಗೆ ನಾಮನಿರ್ದೇಶನಗೊಂಡಿದ್ದು ಇದೇ ಮೊದಲಲ್ಲ. ನ್ಯಾಯಮೂರ್ತಿಗಳಾದ ಬಹರುಲ್‌ ಇಸ್ಲಾಂ ಹಾಗೂ ರಂಗನಾಥ ಮಿಶ್ರಾ ಅವರು ಹಿಂದೆ ರಾಜ್ಯಸಭೆಗೆ ನಾಮನಿರ್ದೇಶನಗೊಂಡಿದ್ದರು.

ನ್ಯಾಯಮೂರ್ತಿ ಬಹರುಲ್‌ ಇಸ್ಲಾಂ

ನಿವೃತ್ತಿಯಾದ ಕೂಡಲೇ ರಾಜ್ಯಸಭೆಗೆ ನಾಮನಿರ್ದೇಶನಗೊಂಡ ಮುಖ್ಯ ನ್ಯಾಯಮೂರ್ತಿಗಳಲ್ಲಿ ಬಹರುಲ್‌ ಇಸ್ಲಾಂ ಮೊದಲಿಗರು.

1983ರಲ್ಲಿ ಮುಖ್ಯ ನ್ಯಾಯಮೂರ್ತಿ ಹುದ್ದೆಯಿಂದ ನಿವೃತ್ತಿಹೊಂದಿದ್ದ ಅವರು, ಅದೇ ವರ್ಷ ರಾಜ್ಯಸಭೆಯನ್ನು ಪ್ರವೇಶಿಸಿದ್ದರು. ಆಗ ಇಂದಿರಾ ಗಾಂಧಿ ಪ್ರಧಾನಿಯಾಗಿದ್ದರು. ಬಹರುಲ್‌ ಅವರು ನ್ಯಾಯಮೂರ್ತಿಯಾಗುವುದಕ್ಕೂ ಮುನ್ನ, 1962ರಿಂದ 1972ರವರೆಗೆ ರಾಜಸ್ಯಸಭೆಯ ಸದಸ್ಯರಾಗಿದ್ದರು.

ಪಟ್ನಾ ನಗರ ಸಹಕಾರ ಬ್ಯಾಂಕ್‌ ಹಗರಣಕ್ಕೆ ಸಂಬಂಧಿಸಿದ ಪ್ರಕರಣದ ತೀರ್ಪನ್ನು ನ್ಯಾಯಮೂರ್ತಿ ಬಹರುಲ್‌ ಅವರು ನೀಡಿದ್ದರು. ಕಾಂಗ್ರೆಸ್‌ ಮುಖಂಡ, ಬಿಹಾರದ ಅಂದಿನ ಮುಖ್ಯಮಂತ್ರಿ ಜಗನ್ನಾಥ ಮಿಶ್ರಾ ಅವರು ಈ ಹಗರಣದ ಪ್ರಮುಖ ಆರೋಪಿಯಾಗಿದ್ದರು.

ನ್ಯಾಯಮೂರ್ತಿ ರಂಗನಾಥ ಮಿಶ್ರಾ


ರಂಗನಾಥ ಮಿಶ್ರಾ

ಮಿಶ್ರಾ ಅವರು 1990ರ ಸೆಪ್ಟೆಂಬರ್‌ನಿಂದ 1991ರ ನವೆಂಬರ್‌ವರೆಗೆ ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಯಾಗಿದ್ದರು. ನಿವೃತ್ತರಾದ ಬಳಿಕ ಪಿ.ವಿ. ನರಸಿಂಹ ರಾವ್‌ ನೇತೃತ್ವದ ಅಂದಿನ  ಸರ್ಕಾರವು ಅವರನ್ನು ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷರನ್ನಾಗಿ ನೇಮಕ ಮಾಡಿತ್ತು. 1998ರಲ್ಲಿ ಕಾಂಗ್ರೆಸ್‌ ಪಕ್ಷದಿಂದ ಇವರನ್ನು ರಾಜ್ಯಸಭೆಗೆ ಆಯ್ಕೆ ಮಾಡಲಾಯಿತು. ಆಗ ಕೇಂದ್ರದಲ್ಲಿ ಅಟಲ್‌ ಬಿಹಾರಿ ವಾಜಪೇಯಿ ನೇತೃತ್ವದ ಬಿಜೆಪಿ ಸರ್ಕಾರವಿತ್ತು.

ಮಿಶ್ರಾ ಅವರು 1984ರಲ್ಲಿ ದೆಹಲಿಯಲ್ಲಿ ನಡೆದ ಸಿಖ್ಖರ ನರಮೇಧದ ತನಿಖೆಗಾಗಿ ರಚಿಸಿದ್ದ ಆಯೋಗದ (ನ್ಯಾಯಮೂರ್ತಿ ರಂಗನಾಥ ಮಿಶ್ರಾ ಆಯೋಗ) ಮುಖ್ಯಸ್ಥರಾಗಿದ್ದರು.

ಉನ್ನತ ಹುದ್ದೆಗೆ ಏರಿದ ನ್ಯಾಯಮೂರ್ತಿಗಳು

* ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಹುದ್ದೆಯಿಂದ 1970ರಲ್ಲಿ ನಿವೃತ್ತಿ ಹೊಂದಿದ್ದ ಎಂ. ಹಿದಾಯತ್‌ ಉಲ್ಲಾ ಅವರು ಆನಂತರ ದೇಶದ ಉಪರಾಷ್ಟ್ರಪತಿಯಾಗಿದ್ದರು.

* ಬಾಂಬೆ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಯಾಗಿದ್ದ ಎಂ.ಸಿ. ಚಾಗ್ಲಾ ಅವರನ್ನು ನಿವೃತ್ತಿಯ ನಂತರ ಅಮೆರಿಕಕ್ಕೆ ಭಾರತೀಯ ರಾಯಭಾರಿಯಾಗಿ ನಿಯುಕ್ತಿಗೊಳಿಸಲಾಗಿತ್ತು. ಅದಾದ ಬಳಿಕ ಅವರನ್ನು ಬ್ರಿಟನ್‌ನ ಹೈಕಮಿಷನರ್‌ ಆಗಿ ನೇಮಕ ಮಾಡಲಾಗಿತ್ತು. ಆ ನಂತರ ಅವರು ಕೇಂದ್ರದ ಶಿಕ್ಷಣ ಸಚಿವರಾಗಿ ಮತ್ತು ವಿದೇಶಾಂಗ ವ್ಯವಹಾರಗಳ ಖಾತೆ ಸಚಿವರೂ ಆಗಿದ್ದರು

* ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಹುದ್ದೆಯಿಂದ 2013ರಲ್ಲಿ ನಿವೃತ್ತಿಹೊಂದಿದ್ದ ಪಿ. ಸದಾಶಿವಂ ಅವರನ್ನು ಮೋದಿ ನೇತೃತ್ವದ ಸರ್ಕಾರವು 2014ರಲ್ಲಿ ಕೇರಳದ ರಾಜ್ಯಪಾಲರನ್ನಾಗಿ ನೇಮಕ ಮಾಡಿತ್ತು. ಆ ಮೂಲಕ ಅವರು ರಾಜ್ಯಪಾಲ ಹುದ್ದೆಗೇರಿದ ಮೊದಲ ನಿವೃತ್ತ ನ್ಯಾಯಮೂರ್ತಿ ಎನಿಸಿದ್ದರು.

ಸದಾಶಿವಂ ಅವರು ಗುಜರಾತ್‌ನಲ್ಲಿ ನಡೆದಿದ್ದ ತುಳಸಿರಾಂ ಪ್ರಜಾಪತಿ ಅವರ ಕಸ್ಟಡಿ ಸಾವಿನ ವಿಚಾರಣೆ ನಡೆಸಿದ್ದ ಪೀಠದ ಮುಖ್ಯಸ್ಥರಾಗಿದ್ದರು. ಗುಜರಾತ್‌ನ ಅಂದಿನ ಗೃಹ ಸಚಿವ ಅಮಿತ್‌ ಶಾ ಅವರು ಈ ಪ್ರಕರಣದ ಆರೋಪಿಯಾಗಿದ್ದರು.

* 1952ರಲ್ಲಿ ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿ ಹುದ್ದೆಯಿಂದ ನಿವೃತ್ತಿ ಹೊಂದಿದ್ದ ಎಸ್‌. ಫಜಲ್‌ ಅಲಿ ಅವರು ಮರು ತಿಂಗಳಲ್ಲೇ ಒರಿಸ್ಸಾದ (ಈಗಿನ ಒಡಿಶಾ) ರಾಜ್ಯಪಾಲರಾಗಿ ನಿಯುಕ್ತರಾಗಿದ್ದರು. ಈ ಹುದ್ದೆಗೆ ಏರಿದ ಮೊದಲ ನ್ಯಾಯಮೂರ್ತಿ ಅವರಾಗಿದ್ದರು.

* 1992ರಲ್ಲಿ ನಿವೃತ್ತಿಹೊಂದಿದ್ದ ನ್ಯಾಯಮೂರ್ತಿ ಫಾತಿಮಾ ಬೀವಿ ಅವರು 1997ರಲ್ಲಿ ತಮಿಳುನಾಡಿನ ರಾಜ್ಯಪಾಲರಾದರು.

ಗೆದ್ದುಬಂದ ಹೆಗ್ಡೆ

1973ರಲ್ಲಿ ಸುಪ್ರೀಂ ಕೋರ್ಟ್‌ನ ನ್ಯಾಯಮೂರ್ತಿಯಾಗಿದ್ದ ಕೆ.ಎಸ್‌. ಹೆಗ್ಡೆ ಅವರು, ಭಾರತೀಯ ನ್ಯಾಯಾಂಗದ ಇತಿಹಾಸದಲ್ಲೇ ಅಪರೂಪದ ಪ್ರಕರಣ ಎನಿಸಿರುವ ಕೇಶವಾನಂದಭಾರತಿ ಪ್ರಕರಣದ ತೀರ್ಪು ನೀಡಿದ ಬೆನ್ನಿಗೇ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದರು. ಕೇಂದ್ರದಲ್ಲಿ ಆಗ ಇಂದಿರಾಗಾಂಧಿ ನೇತೃತ್ವದ ಕಾಂಗ್ರೆಸ್‌ ಸರ್ಕಾರವಿತ್ತು.

ಹುದ್ದೆಗೆ ರಾಜೀನಾಮೆ ನೀಡಿದ್ದ ಹೆಗ್ಡೆ ಅವರು ಜನತಾ ಪಕ್ಷದ ಅಭ್ಯರ್ಥಿಯಾಗಿ ಬೆಂಗಳೂರು ದಕ್ಷಿಣ ಕ್ಷೇತ್ರದಿಂದ ಸ್ಪರ್ಧಿಸಿ ಲೋಕಸಭೆಗೆ ಆಯ್ಕೆಯಾದರು. ಅಷ್ಟೇ ಅಲ್ಲ, 1977ರಿಂದ 80ರವರೆಗೆ ಅವರು ಲೋಕಸಭೆಯ ಸ್ಪೀಕರ್‌ ಆಗಿದ್ದರು.

ಯಾರು ಏನಂತಾರೆ?

ಗೊಗೊಯಿ ಅವರಿಗೆ ಗೌರವಾರ್ಥವಾಗಿ ಏನಾದರೂ ಸಿಗಬಹುದು ಎಂಬ ಬಗ್ಗೆ ಊಹಾಪೋಹಗಳಿದ್ದವು. ಅವರ ನಾಮನಿರ್ದೇಶನದಿಂದ ಅಚ್ಚರಿಯೇನೂ ಆಗಿಲ್ಲ. ಆದರೆ ಇಷ್ಟು ಬೇಗನೇ ಮಾಡಿದ್ದು ಅಚ್ಚರಿ ಮೂಡಿಸಿದೆ. ಇದು ನ್ಯಾಯಾಂಗದ ಸ್ವಾತಂತ್ರ್ಯ, ನಿಷ್ಪಕ್ಷಪಾತ ಮತ್ತು ಸಮಗ್ರತೆಯನ್ನು ಮರು ವ್ಯಾಖ್ಯಾನಿಸುವಂತೆ ಮಾಡಿದೆ. ಕೊನೆಯ ಭದ್ರಕೋಟೆ ಕಳಚಿತೇ?

–ಮದನ್ ಬಿ. ಲೋಕೂರ್, ಸುಪ್ರೀಂ ಕೋರ್ಟ್‌ ನಿವೃತ್ತ ನ್ಯಾಯಮೂರ್ತಿ

ಇದು ಅಸಹ್ಯಕರ. ಒಂದಕ್ಕೆ ಪ್ರತಿಯಾಗಿ ಇನ್ನೊಂದನ್ನು ವಿನಿಮಯ ಮಾಡಿಕೊಳ್ಳುವ ರೀತಿ ಆಗಿದೆ. ನ್ಯಾಯಾಂಗದ ಸ್ವಾತಂತ್ರ್ಯಕ್ಕೆ ಸಂಪೂರ್ಣ ಧಕ್ಕೆಯಾಗಿದೆ.

–ದುಷ್ಯಂತ್ ದವೆ, ಹಿರಿಯ ವಕೀಲ, ಸುಪ್ರೀಂ ಕೋರ್ಟ್ ಬಾರ್ ಅಸೋಸಿಯೇಷನ್ ಅಧ್ಯಕ್ಷ (‘ದಿ ವೈರ್‌’ಗೆ ನೀಡಿದ ಪ್ರತಿಕ್ರಿಯೆ)

ಇದು ತುಂಬಾ ದುಃಖಕರ. ಲಜ್ಜೆಗೇಡಿತನದಿಂದ ಕೂಡಿದೆ. ಕೇವಲ ರಾಜ್ಯಸಭಾ ಸೀಟಿಗಾಗಿ ಸಾಂವಿಧಾನಿಕ ಗೌರವವನ್ನು ಹಾಳುಮಾಡಲಾಗುತ್ತಿದೆ.

–ಕರುಣಾ ನಂದಿ, ವಕೀಲ (ಟ್ವೀಟ್‌ನಲ್ಲಿ ಪ್ರತಿಕ್ರಿಯೆ)

ಮೂವರು ಹಿರಿಯ ನ್ಯಾಯಮೂರ್ತಿಗಳಿದ್ದರೂ ಅವರ ಸೇವಾಹಿರಿತನ ಕಡೆಗಣಿಸಿ ಎ.ಎನ್.ರಾಯ್ ಅವರನ್ನು ಸುಪ್ರೀಂ ಕೋರ್ಟ್ ಮುಖ್ಯನ್ಯಾಯಮೂರ್ತಿಯಾಗಿ ನೇಮಿಸಲಾಗಿತ್ತು. ‘ಅತ್ಯುತ್ತಮ ಪ್ರಬಂಧ ಬರೆದ ಹುಡುಗ ಮೊದಲ ಬಹುಮಾನ ಪಡೆಯುತ್ತಾನೆ’ ಎಂದು 1973ರಲ್ಲಿ ಸಿ.ಕೆ. ತ್ರಿಪಾಠಿ ಅದನ್ನು ವಿಶ್ಲೇಷಿಸಿದ್ದರು. 

–ರಾಜು ರಾಮಚಂದ್ರನ್, ಹಿರಿಯ ವಕೀಲ (ತಮ್ಮ ಫೇಸ್‌ಬುಕ್ ಪೇಜ್‌ನಲ್ಲಿ ಉಲ್ಲೇಖ)

ಇಬ್ಬರ ಭರವಸೆಗಳೂ ಈಡೇರಿವೆ

–ಕಾಂಗ್ರೆಸ್ (ಟ್ವೀಟ್)

ರಂಜನ್ ಗೊಗೊಯಿ ಅವರು ರಾಜ್ಯಸಭಾ ಹುದ್ದೆಗಾಗಿ ಸರ್ಕಾರದ ಪರವಾಗಿ ಇದ್ದು, ಸ್ವಂತ ಮತ್ತು ನ್ಯಾಯಾಂಗದ ಸಮಗ್ರತೆಯ ಜತೆ ರಾಜಿ ಮಾಡಿಕೊಂಡಿದ್ದಾರೆ

–ಕಪಿಲ್ ಸಿಬಲ್, ಕಾಂಗ್ರೆಸ್ ಮುಖಂಡ

ಗೊಗೊಯಿ ಅವರು ರಾಜ್ಯಸಭೆ ಸದಸ್ಯತ್ವ ಬೇಡ ಎನ್ನಲು ಅವಕಾಶವಿತ್ತು. ಅವರು ನ್ಯಾಯಾಂಗದ ಘನತೆಗೆ ಅಪಾರ ಹಾನಿ ಮಾಡುವ ಸಾಧ್ಯತೆಯಿದೆ.

–ಯಶವಂತ್ ಸಿನ್ಹಾ, ಹಿರಿಯ ಮುಖಂಡ

ರಂಜನ್ ಗೊಗೊಯಿ ಅವರು ರಾಜ್ಯಸಭಾ ಸದಸ್ಯತ್ವವನ್ನು ಒಪ್ಪಿಕೊಳ್ಳುವುದು ಭಾರತದ ಹೆಮ್ಮೆಯ, ಸ್ವತಂತ್ರ ಹಾಗೂ ರಾಜಕೀಯ ಪ್ರಭಾವಕ್ಕೆ ಒಳಪಡದ ನ್ಯಾಯಾಂಗ ವ್ಯವಸ್ಥೆಗೆ ಕೊಡಲಿಪೆಟ್ಟು ಬಿದ್ದಂತೆ. ಅವರು ಅದನ್ನು
ತಿರಸ್ಕರಿಸದಿದ್ದರೆ ಭವಿಷ್ಯದ ಭಾರತ ಅವರನ್ನೆಂದೂ ಕ್ಷಮಿಸಲಾರದು.

-ಪ್ರೊ.ಬಿ.ಕೆ.ಚಂದ್ರಶೇಖರ್, ಕಾಂಗ್ರೆಸ್‌ ಮುಖಂಡ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು