ಸೋಮವಾರ, ಜನವರಿ 25, 2021
17 °C

ಮಠಾಧೀಶರ ರಾಜಕೀಯ ಹಸ್ತಕ್ಷೇಪಕ್ಕೆ ಆಕ್ಷೇಪ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಾಜ್ಯ ಸರ್ಕಾರದ ನಾಯಕತ್ವ ಬದಲಾವಣೆ, ಸಚಿವ ಸ್ಥಾನ ನೀಡಿಕೆ ಮತ್ತು ಜಾತಿ ಹೆಸರಿನಲ್ಲಿ ನಿಗಮ ರಚನೆಯ ಬೇಡಿಕೆ ಕುರಿತು ಮಾತನಾಡುತ್ತಿರುವ ಕೆಲವು ಮಠಾಧೀಶರು ‘ಸರ್ಕಾರವನ್ನೇ ನಿಯಂತ್ರಿಸುವ’ ಎಚ್ಚರಿಕೆಯನ್ನೂ ನೀಡಿದ್ದಾರೆ. ‘ಮಠಾಧೀಶರು ರಾಜಕೀಯ ಪಕ್ಷಗಳ ವಕ್ತಾರರಂತೆ ಮಾತನಾಡಬಾರದು’ ಎಂದು ವಿಧಾನ ಪರಿಷತ್‌ ಸದಸ್ಯ ಬಸವರಾಜ ಹೊರಟ್ಟಿ ಹೇಳಿದ್ದಾರೆ. ಈ ಬೆಳವಣಿಗೆಗಳಿಂದಾಗಿ, ಧಾರ್ಮಿಕ ನಾಯಕರ ರಾಜಕೀಯ ಹಸ್ತಕ್ಷೇಪದ ಕುರಿತ ಚರ್ಚೆ ಮತ್ತೆ ಮುನ್ನೆಲೆಗೆ ಬಂದಿದೆ

***

'ಕಾವಿ ಬಟ್ಟೆ ಹಾಕಿಕೊಂಡು ರಾಜಕೀಯ'

ಸ್ವಾಮೀಜಿಗಳು ತಮ್ಮ ನಿಜವಾದ ಕೆಲಸ ಮರೆತು, ರಾಜಕೀಯ ಹಸ್ತಕ್ಷೇಪದಲ್ಲಿ ತೊಡಗಿದ್ದಾರೆ. ಸಮಾಜದ ಬಗ್ಗೆ ಚಿಂತಿಸಬೇಕಾದ ಸರ್ವಸಂಗ ಪರಿತ್ಯಾಗಿಗಳು, ಜಾತಿವಾದಿಗಳಾಗಿದ್ದಾರೆ. ಇದು ಮನಸ್ಸಿಗೆ ನೋವುಂಟು ಮಾಡುವಂಥದ್ದು. ಕಾವಿ ಬಟ್ಟೆ ಹಾಕಿಕೊಂಡು ರಾಜಕೀಯ ಮಾಡುತ್ತಿದ್ದಾರೆ. ಚುನಾವಣಾ ಪ್ರಚಾರ ಹೀಗೆ ನಡೆಯಬೇಕು, ಇಂಥವರನ್ನೇ ಆಯ್ಕೆ ಮಾಡಬೇಕು ಎಂದು ಹೇಳುವವರೂ ಇದ್ದಾರೆ. ಅಷ್ಟೇ ಅಲ್ಲ; ವರ್ಗಾವಣೆಯಲ್ಲಿ ತೊಡಗಿದ್ದಾರೆ.  ಒಂದಿಬ್ಬರು ಸ್ವಾಮೀಜಿಗಳು ಮಾತ್ರ ರಾಜಕೀಯದಿಂದ ದೂರವಿದ್ದಾರೆ. ಸ್ವಾಮೀಜಿಗಳು ರಾಜಕೀಯ ಹಸ್ತಕ್ಷೇಪ ಮಾಡಬಾರದು, ಜಾತಿ ವಿಚಾರದಲ್ಲಿ ತಲೆ ಹಾಕಬಾರದು. ಸಮಾಜದ ಬಗ್ಗೆ ಚಿಂತಿಸಲಿ, ಮನುಕುಲದ ಒಳಿತಿಗೆ ಕೆಲಸ ಮಾಡಲಿ.

–ವಿ.ಶ್ರೀನಿವಾಸಪ್ರಸಾದ್‌, ಸಂಸದ

***

ತುಷ್ಟೀಕರಣ ನೀತಿ ಸರಿಯಲ್ಲ: ಪೇಜಾವರ ಶ್ರೀ

ಸರ್ಕಾರಗಳು ಧರ್ಮ ನಿರಪೇಕ್ಷವಾಗಿ ಆಡಳಿತ ನಡೆಸಬೇಕು. ಸರ್ಕಾರಗಳ ತುಷ್ಟೀಕರಣದ ನೀತಿ ಸರಿಯಲ್ಲ. ಒಂದು ಮತೀಯರಿಗೆ ಕೊಡುವುದು, ಮತ್ತೊಂದು ಮತೀಯರಿಗೆ ಬಿಡುವುದನ್ನು ಮಾಡಿದರೆ ಸಹಜವಾಗಿ ಸಮಸ್ಯೆಗಳು ಉದ್ಭವಿಸುತ್ತವೆ. ಇದುವರೆಗೂ ರಾಜ್ಯದಲ್ಲಿ ಆಡಳಿತ ನಡೆಸಿದ ಎಲ್ಲ ಪಕ್ಷಗಳಿಗೂ ಇದು ಅನ್ವಯ. ಜಾತಿ, ಧರ್ಮಗಳ ತುಷ್ಟೀಕರಣದೊಂದಿಗೆ ರಾಜಕೀಯ ವ್ಯವಸ್ಥೆ ಬಹುದೂರ ಸಾಗಿರುವ ಈ ಹೊತ್ತಿನಲ್ಲಿ, ಮಠಾಧೀಶರ ರಾಜಕೀಯ ಹಸ್ತಕ್ಷೇಪ ಸರಿಯೇ ಎಂಬ ಪ್ರಶ್ನೆ ಅಸಮಂಜಸ. ಈ ಸಮಸ್ಯೆಯನ್ನು ಮೂಲದಲ್ಲಿಯೇ ಪರಿಹರಿಸಬೇಕಿತ್ತು. ಈಗ ಸರಿಪಡಿಸಲು ಹೊರಟರೆ ಪ್ರಯೋಜನವಿಲ್ಲ. 

-ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ, ಪೇಜಾವರ ಮಠ

***

‘ಬ್ಲ್ಯಾಕ್‌ಮೇಲ್ ತಪ್ಪು’

ನಮ್ಮವರು ಇಷ್ಟು ಜನರಿಗೆ ಸಚಿವ ಸ್ಥಾನ ಕೊಡಬೇಕು ಎಂದು ಮುಖ್ಯಮಂತ್ರಿಗೆ ಬೆದರಿಕೆ ಹಾಕುವುದು, ತಪ್ಪು. ಆದರೆ ಸಮುದಾಯದ ಭಾವನೆ, ಜನರ ಅಭಿಪ್ರಾಯಗಳನ್ನು ಸಿಎಂ, ಪಕ್ಷಗಳ ಹೈಕಮಾಂಡ್‌ಗೆ ಸಲಹೆ ರೂಪದಲ್ಲಿ ನೀಡುವುದರಲ್ಲಿ ತಪ್ಪೇನಿಲ್ಲ.

ಹಿಂದೆ ಧರ್ಮಗುರುಗಳು ಪ್ರಭುಗಳಿಗೆ ಮಾರ್ಗದರ್ಶನ ಮಾಡುತ್ತಿದ್ದರು. ಇಂದು ಅದೇ ರೀತಿ ಸರ್ಕಾರಕ್ಕೆ ಸಲಹೆ, ಹಕ್ಕೊತ್ತಾಯ ಮಾಡುವುದರಲ್ಲಿ ತಪ್ಪಿಲ್ಲ. ದಂಡಿ ಪಾದಯಾತ್ರೆ ಮಹಾತ್ಮಾ ಗಾಂಧೀಜಿ ಬ್ರಿಟಿಷರ ವಿರುದ್ಧ ಬಳಸಿದ ಅಹಿಂಸಾತ್ಮಕವಾದ ಪರಿಣಾಮಕಾರಿ ಅಸ್ತ್ರ. ಮೀಸಲಾತಿ ನಮ್ಮ ಸಮುದಾಯಕ್ಕೆ ಸಂವಿಧಾನದತ್ತವಾದ ನ್ಯಾಯಯುತ ಅವಕಾಶ. ಸರ್ಕಾರದ ಕಣ್ಣು–ಕಿವಿ ತೆರೆಸಿ ಅದನ್ನು ಪಡೆಯಲು ಪಾದಯಾತ್ರೆ ಅನಿವಾರ್ಯ. ಆದರೆ ಅದೂ ಕೂಡ ಬೆದರಿಕೆಯ ಅಸ್ತ್ರವಾಗಬಾರದು.

-ಬಸವಜಯಮೃತ್ಯುಂಜಯ ಸ್ವಾಮೀಜಿ, ಕೂಡಲಸಂಗಮ ಪಂಚಮಸಾಲಿ ಪೀಠದ ಜಗದ್ಗುರು

***

ಅಧ್ಯಾತ್ಮದಿಂದ ಅಧಿಕಾರದತ್ತ...

ರಾಜಕೀಯಕ್ಕೂ ತಮಗೂ ಸಂಬಂಧವೇ ಇಲ್ಲ ಎಂಬ ನಿಲುವು ತೆಗೆದುಕೊಂಡ ಸನ್ಯಾಸಿಗಳು ಮತ್ತು ಧರ್ಮಗುರುಗಳು ನಮ್ಮ ದೇಶದಲ್ಲಿ ಇದ್ದಾರೆ. ರಾಜಕೀಯ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡವರು, ರಾಜಕಾರಣಿಗಳ ಜತೆಗೆ ನಿಕಟ ಸಂಪರ್ಕ ಇರುವವರೂ ಇದ್ದಾರೆ. ಜತೆಗೆ, ನೇರವಾಗಿ ರಾಜಕೀಯ ಪ್ರವೇಶಿಸಿ ಜನಪ್ರತಿನಿಧಿಗಳು, ಸಚಿವರು, ಮುಖ್ಯಮಂತ್ರಿ ಆದವರೂ ಇದ್ದಾರೆ...

***

ಮಹಾಂತ ಅವೈದ್ಯನಾಥ

ಇವರು ಯೋಗಿ ಆದಿತ್ಯನಾಥರ ಗುರು ಮತ್ತು ಅವರಿಗಿಂತ ಹಿಂದೆ ಗೋರಖಪುರ ಮಠದ ಮುಖ್ಯ ಅರ್ಚಕರಾಗಿದ್ದವರು. 1970ರಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಲೋಕಸಭೆಗೆ ಆಯ್ಕೆಯಾಗಿದ್ದರು. 1989ರಲ್ಲಿ ಹಿಂದೂಮಹಾಸಭಾದ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗೆದ್ದಿದ್ದರು. ಜನಸಂಖ್ಯೆ ಕಡಿಮೆ ಮಾಡಲು ಮುಸ್ಲಿಂ ಮಹಿಳೆಯರಿಗೆ ಸಾಮೂಹಿಕ ಸಂತಾನ ಶಕ್ತಿಹರಣ ಶಸ್ತ್ರಚಿಕಿತ್ಸೆ ಮಾಡಿಸಬೇಕೆಂಬ ವಿವಾದಾತ್ಮಕ ಪ್ರಸ್ತಾವವನ್ನೂ ಮಾಡಿದ್ದರು.

ಬದ್ರುದ್ದೀನ್‌ ಅಜ್ಮಲ್‌

ಜಗತ್ತಿನ 500 ಮಂದಿ ಪ್ರಭಾವಿ ಮುಸ್ಲಿಮರ ಪಟ್ಟಿಯಲ್ಲಿ ಹೆಸರು ಹೊಂದಿರುವ ಮೌಲಾನಾ ಬದ್ರುದ್ದೀನ್‌ ಅಜ್ಮಲ್‌ ಇವರು ಅಸ್ಸಾಂನ ಧುಬ್ರಿ ಕ್ಷೇತ್ರದ ಸಂಸದ. ಆಲ್‌ ಇಂಡಿಯಾ ಯುನೈಟೆಡ್‌ ಡೆಮಾಕ್ರೆಟಿಕ್‌ ಫ್ರಂಟ್‌ (ಎಐಯುಡಿಎಫ್‌) ಸಂಸ್ಥಾಪಕರಾಗಿರುವ ಇವರು ದಾರುಲ್‌ ಉಲೂಮ್‌ನ ಸಲಹಾ ಮಂಡಳಿಯ ಸದಸ್ಯರೂ ಆಗಿದ್ದಾರೆ. 2014ರ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ದ್ವೇಷಭಾಷಣ ಮಾಡಿದ ಆರೋಪವೂ ಇವರ ಮೇಲೆ ಬಂದಿದೆ.

ಉಮಾಭಾರತಿ

ಅತಿ ಸಣ್ಣ ವಯಸ್ಸಿನಲ್ಲೇ ರಾಜಕೀಯಕ್ಕೆ ಧುಮುಕಿದ್ದ ಇವರು, ಎರಡು ದಶಕಗಳ ಹಿಂದೆ ಬಿಜೆಪಿಯ ಪ್ರಮುಖ ನಾಯಕರ ಸಾಲಿನಲ್ಲಿ ಕಾಣಿಸಿಕೊಂಡಿದ್ದರು. ಬಿಜೆಪಿ ನೇತೃತ್ವದ ಹಿಂದಿನ ಸರ್ಕಾರದಲ್ಲಿ ಜಲಸಂಪನ್ಮೂಲ, ನದಿಗಳ ಅಭಿವೃದ್ಧಿ ಹಾಗೂ ಗಂಗಾ ಶುದ್ಧೀಕರಣ ಸಚಿವಾಲಯದ ಹೊಣೆ ಹೊತ್ತಿದ್ದರು.

ರಾಮ ಜನ್ಮಭೂಮಿ ಹೋರಾಟದಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಇವರು ಬಾಬರಿ ಮಸೀದಿ ಕೆಡವಿದ ಪ್ರಕರಣದ ಆರೋಪಿಗಳಲ್ಲಿ ಒಬ್ಬರಾಗಿದ್ದರು. 2003ರಲ್ಲಿ ಮಧ್ಯಪ್ರದೇಶದ ಮುಖ್ಯಮಂತ್ರಿಯಾಗಿದ್ದರು. ಹುಬ್ಬಳ್ಳಿಯ ಈದ್ಗಾ ಮೈದಾನದಲ್ಲಿ ಅಂಜುಮಾನ್‌ ಇಸ್ಲಾಂ ಸಂಸ್ಥೆಯವರು ಕಟ್ಟಡ ನಿರ್ಮಿಸುವುದನ್ನು ವಿರೋಧಿಸಿ ಬಿಜೆಪಿ ನೇತೃತ್ವದಲ್ಲಿ ನಡೆದ ಹೋರಾಟದಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದರು. ಈ ಸಂಬಂಧ 1994ರಲ್ಲಿ ನಡೆದ ಗಲಭೆ ಹಾಗೂ ಆ ಸಂದರ್ಭದಲ್ಲಿ ನಡೆದ ಪೊಲೀಸರ ಗೋಲಿಬಾರ್‌ನಲ್ಲಿ ಆರು ಮಂದಿ ಸತ್ತಿದ್ದರು. ಈ ಹೋರಾಟದಲ್ಲಿ ಉಮಾಭಾರತಿ ಅವರ ಪಾತ್ರವಿದೆ ಎಂಬ ಆರೋಪ ಬಂದಿದ್ದರಿಂದ ಒಂದೇ ವರ್ಷದಲ್ಲಿ ಮುಖ್ಯಮಂತ್ರಿ ಸ್ಥಾನದಿಂದ ಅವರು ಕೆಳಗಿಳಿಯಬೇಕಾಯಿತು. 2019ರ ಲೋಕಸಭಾ ಚುನಾವಣೆಯಲ್ಲಿ ಅವರು ಸ್ಪರ್ಧಿಸಲಿಲ್ಲ.

ನಿರಂಜನ ಜ್ಯೋತಿ

ಧರ್ಮಪ್ರಸಾರದ ಚಟುವಟಿಕೆಯಲ್ಲಿ ತೊಡಗಿಸಿಕೊಂಡು, ಸಾಧ್ವಿ ನಿರಂಜನಾ ಎಂದೇ ಪರಿಚಿತರಾಗಿದ್ದ ಇವರು ಮಧ್ಯಪ್ರದೇಶದ ಫತೇಪುರ್‌ ಕ್ಷೇತ್ರದಿಂದ ಸಂಸತ್ತಿಗೆ ಆಯ್ಕೆಯಾದರು. 2014ರಲ್ಲಿ ಅವರನ್ನು ಆಹಾರ ಸಂಸ್ಕರಣ ಉದ್ದಿಮೆಗಳ ಸಚಿವಾಲಯದ ಸಹಾಯಕ ಸಚಿವೆಯಾಗಿ ನೇಮಕಮಾಡಲಾಯಿತು. 2014ರಲ್ಲಿ ದೆಹಲಿಯಲ್ಲಿ ಆಯೋಜಿಸಿದ್ದ ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ, ‘ನಿಮಗೆ ರಾಮನ ಮಕ್ಕಳ ಆಳ್ವಿಕೆ ಬೇಕೇ ಅಥವಾ ಅಕ್ರಮ ಸಂತಾನಗಳ ಆಡಳಿತ ಬೇಕೇ ಎಂಬುದನ್ನು ನೀವೇ ನಿರ್ಧರಿಸಿ’ ಎಂದು ಕರೆ ನೀಡುವ ಮೂಲಕ
ವಿವಾದ ಸೃಷ್ಟಿಸಿದ್ದರು.

ಸಾಕ್ಷಿ ಮಹರಾಜ್‌

ಉತ್ತರಪ್ರದೇಶದ ಉನ್ನಾವ್‌ ಕ್ಷೇತ್ರದ ಸಂಸದರಾಗಿರುವ ಇವರು ದ್ವೇಷ ಭಾಷಣಗಳ ಮೂಲಕವೇ ಹೆಚ್ಚು ಸದ್ದು ಮಾಡಿದವರು. 1991ರಲ್ಲಿ ಮಥುರಾ ಕ್ಷೇತ್ರದಿಂದ ಮೊದಲ ಬಾರಿ ಸಂಸತ್ತಿಗೆ ಆಯ್ಕೆಯಾಗಿದ್ದ ಇವರು ಈಗ ನಾಲ್ಕನೇ ಅವಧಿಗೆ ಸಂಸದರಾಗಿದ್ದಾರೆ. 

‘ಮದರಸಾಗಳಲ್ಲಿ ಭಯೋತ್ಪಾದಕರನ್ನು ಸೃಷ್ಟಿಸಲಾಗುತ್ತದೆ ಮತ್ತು ಅಲ್ಲಿಯ ವಿದ್ಯಾರ್ಥಿಗಳಿಗೆ ಲವ್‌ ಜಿಹಾದ್‌ ನಡೆಸಲು ಉತ್ತೇಜನ ನೀಡಲಾಗುತ್ತದೆ’ ಎಂದು 2015ರಲ್ಲಿ ಅವರು ಆರೋಪಿಸಿದ್ದರು. ಹಿಂದೂ ಧರ್ಮ ರಕ್ಷಣೆಗಾಗಿ ಪ್ರತಿ ಹಿಂದೂ ಮಹಿಳೆ ಕನಿಷ್ಠ ನಾಲ್ವರು ಮಕ್ಕಳಿಗೆ ಜನ್ಮನೀಡಬೇಕು ಎಂದೂ ಕರೆ ನೀಡಿದ್ದರು. ಇವರ ವಿರುದ್ಧ ಕೊಲೆ, ಭ್ರಷ್ಟಾಚಾರ ಮತ್ತು ಅತ್ಯಾಚಾರದ ಆರೋಪಗಳೂ ಕೇಳಿ ಬಂದಿದ್ದವು.

ಪಕ್ಷ, ವ್ಯಕ್ತಿ ಬೆಂಬಲಿಸುವ ಸ್ವಾಮೀಜಿಗಳು ವಿಧಾನಸೌಧ ಪ್ರವೇಶಿಸಲಿ

ಇಂತಹ ಪಕ್ಷಕ್ಕೆ ಮತ ನೀಡಿ, ಇಂತಹ ವ್ಯಕ್ತಿಗಳಿಗೆ ಮತ ನೀಡಿ ಎನ್ನುವವರು, ಪಕ್ಷಗಳ ಪರ ವಕ್ತಾರರಂತೆ ಮಾತನಾಡುವ ಸ್ವಾಮೀಜಿಗಳು ವಿಧಾನಸೌಧ ಪ್ರವೇಶಿಸಲಿ ಎಂದು ವಿಧಾನ ಪರಿಷತ್‌ ಸದಸ್ಯ ಬಸವರಾಜ ಹೊರಟ್ಟಿ ಪ್ರತಿಪಾದಿಸಿದರು.

ತಮ್ಮ ಸಮುದಾಯ ಪರವಾಗಿ, ಸಮುದಾಯ ಅಭಿವೃದ್ಧಿಗಾಗಿ ಮೀಸಲಾತಿ, ಸೌಲಭ್ಯಗಳನ್ನು ಕೇಳಲಿ. ಅದಕ್ಕೆ ನನ್ನ ಬೆಂಬಲವಿದೆ. ಆದರೆ, ಹಲವರು ಪಕ್ಷ, ವ್ಯಕ್ತಿಗಳ ಬೆಂಬಲಕ್ಕೆ ನಿಂತು ಮಾತನಾಡುತ್ತಿದ್ದಾರೆ. ಇದು ಸರಿಯಲ್ಲ ಎಂದು ‘ಪ್ರಜಾವಾಣಿ’ಗೆ ತಿಳಿಸಿದರು.

ಕಳೆದ ವಿಧಾನಸಭಾ ಚುನಾವಣೆ ವೇಳೆ ಕೆಲವರು ಬಿಜೆಪಿ ಪರವಾಗಿ ಮತ ಹಾಕಲು ಹೇಳಿದರು. ಈಗ ಕೆಲವರು ಇಂತಹವರನ್ನೇ ಸಚಿವರನ್ನಾಗಿ ಮಾಡಿ ಎಂದು ಕೇಳುತ್ತಿದ್ದಾರೆ. ಇದೆಲ್ಲ ರಾಜಕೀಯ ಯಾಕೆ ಬೇಕು? ಅವರ ಸಮುದಾಯದವರು ಒಂದೇ ಪಕ್ಷದಲ್ಲಿ ಹಲವರಿರುತ್ತಾರೆ. ಎಲ್ಲ ಪಕ್ಷಗಳಲ್ಲೂ ಇರುತ್ತಾರೆ. ಎಲ್ಲರನ್ನೂ ಸಮಾನವಾಗಿ ಕಾಣಬೇಕಾದವರೇ ಕೆಲವರ ಪರ ನಿಲ್ಲುತ್ತಿದ್ದಾರೆ. ಇದರ ಬದಲು ವಿಧಾನಸೌಧ ಪ್ರವೇಶಿಸಿ ನೇರ ರಾಜಕಾರಣ ಮಾಡಲಿ ಎಂದರು.

ಸಮುದಾಯದ ಜನಪ್ರತಿನಿಧಿಗಳ ರಾಜೀನಾಮೆ, ಪಾದಯಾತ್ರೆಗಳಿಂದ ಆಡಳಿತ ನಡೆಸುವವರನ್ನು ಬೆದರಿಸುವ ಸ್ವಾಮೀಜಿಗಳ ಹೇಳಿಕೆಯನ್ನು ರಾಜಕಾರಣಿಗಳು ಗಂಭೀರವಾಗಿ ಪರಿಗಣಿಸುವುದಿಲ್ಲ. ಇಂದಿನ ರಾಜಕೀಯ ಹೇಗೆ ನಡೆಯುತ್ತಿದೆ ಎಂಬುದು ಗೊತ್ತಿಲ್ಲದ್ದೇನಲ್ಲ. ಅಂತಹ ಹೇಳಿಕೆಗಳಿಂದ ಸ್ವಾಮೀಜಿಗಳ ಘನತೆಗೆ ಧಕ್ಕೆ ಬರುತ್ತದೆ. ಅವರು ಸಮುದಾಯದ ಪರವಾಗಿ ಮಂಡಿಸುವ ಬೇಡಿಕೆ ಸರಿ. ಆದರೆ, ಅದನ್ನು ಸರ್ಕಾರಕ್ಕೆ ಮನದಟ್ಟು ಮಾಡಿಕೊಡಬೇಕೇ ಹೊರತು ಬೆದರಿಕೆಯ ಮಾತುಗಳನ್ನಾಡಬಾರದು ಎಂದು ಹೇಳಿದರು.

ಕೂಡಲಸಂಗಮದ ಬಸವ ಜಯಮೃತ್ಯುಂಜಯ ಸ್ವಾಮೀಜಿ ಹಿಂದೆ ಲಿಂಗಾಯತ ಹೋರಾಟದಲ್ಲಿ ಭಾಗವಹಿಸಿದ್ದರು. ಈಗ ಪಂಚಮಸಾಲಿ ಎಂದು ಮಾತನಾಡುತ್ತಿದ್ದಾರೆ. ಹರಿಹರದ ಪಂಚಮಸಾಲಿ ಪೀಠದ ವಚನಾನಂದ ಸ್ವಾಮೀಜಿ, ಲಿಂಗಾಯತ ಗೌಡ ಸಮುದಾಯವನ್ನು 2ಎ ಪ್ರವರ್ಗಕ್ಕೆ ಸೇರಿಸಬೇಕು ಎನ್ನುತ್ತಾರೆ. ಬಾಗಲಕೋಟೆಯಲ್ಲಿ ಒಂದು, ಬೆಂಗಳೂರಿನಲ್ಲಿ ಒಂದು ಮಾತನಾಡುತ್ತಾರೆ. ಇದು ಅವರಿಗೆ ಶೋಭೆ ತರುವುದಿಲ್ಲ. ಅವರೇ ಸಮುದಾಯದಲ್ಲಿ ಒಡುಕುಂಟು ಮಾಡುತ್ತಾರೆ ಎಂದು ಟೀಕಿಸಿದರು.

ಕಾರು ನೀಡುವ, ಅವರ ಮಠಗಳಿಗೆ ಅನುದಾನ ಮಂಜೂರು ಮೂಲಕ ರಾಜಕಾರಣಿಗಳು ಸ್ವಾಮೀಜಿಗಳನ್ನು ಮಠದಿಂದ ಹೊರಗೆ ತಂದು ನಿಲ್ಲಿಸಿದ್ದಾರೆ. ಈಗ ಅವರು ಅಂತಹವರ ಪರ  ಮಾತನಾಡುವುದು ಎಷ್ಟು ಸರಿ? ಸ್ವಾಮೀಜಿಗಳು ಧ್ವನಿ ಎತ್ತಬೇಕಾಗಿರುವುದು ಸಮುದಾಯದ ಉಳ್ಳವರ ಪರವಾಗಿ ಅಲ್ಲ, ಬಡವರ ಪರವಾಗಿ ಧ್ವನಿ ಎತ್ತಬೇಕು ಎಂದರು.

***

‘ನೆಲ, ಜಲ, ಭಾಷೆ, ಸಾಮಾಜಿಕ ಹೋರಾಟಕ್ಕೆ ಸೀಮಿತ’

ಗದಗ: ರಾಜಕೀಯದಲ್ಲಿ ಧರ್ಮಗುರುಗಳು ಹಸ್ತಕ್ಷೇಪ ಮಾಡುವುದು ಸರಿಯಲ್ಲ. ಮಠಾಧೀಶರು ರಾಜಕೀಯದಿಂದ ದೂರ ಇರಬೇಕು. ರಾಜಗುರುಗಳಂತೆ ಇದ್ದು ಮುಖಂಡರು ಅಭಿಪ್ರಾಯ ಕೇಳಿದರೆ ಮಾತ್ರ ಸಲಹೆ ನೀಡಬೇಕು ಅಷ್ಟೇ.

ಸರ್ಕಾರದ ಆಡಳಿತದಲ್ಲಿ ಮಠಾಧೀಶರು ಯಾವುದೇ ಕಾರಣಕ್ಕೂ ಮೂಗು ತೂರಿಸಬಾರದು. ಜಾತಿ, ಮತ ಇಟ್ಟುಕೊಂಡು ನಮ್ಮವರನ್ನು ಮಂತ್ರಿ ಮಾಡಿ ಅಥವಾ ಇನ್ನೊಂದು ಸವಲತ್ತು ನೀಡಿ ಎಂದು ಕೇಳಬಾರದು. ಅದು ಮಠಾಧೀಶರ ಕೆಲಸ ಅಲ್ಲ.

ನೆಲ, ಜಲ, ಭಾಷೆ ಹಾಗೂ ಜನಪರ ಹೋರಾಟಗಳಲ್ಲಿ ಧರ್ಮಗುರುಗಳು ತೊಡಗಿಸಿಕೊಳ್ಳಬೇಕು. ಅದಕ್ಕೆ ಮಾತ್ರ ರಾಜಕೀಯ ಪಕ್ಷಗಳ ಬೆಂಬಲ ಪಡೆಯಬೇಕು. ಉಳಿದಂತೆ ಯಾವುದೇ ಕಾರಣಕ್ಕೂ, ಯಾವುದೇ ವಿಚಾರವಾಗಿ ರಾಜಕೀಯ ಹಸ್ತಕ್ಷೇಪ ಮಾಡುವುದು ಸರಿಯಲ್ಲ.

-ಸಿದ್ಧರಾಮ ಸ್ವಾಮೀಜಿ,  ಗದುಗಿನ ತೋಂಟದಾರ್ಯ ಮಠ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು