ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Explainer | ಜಗತ್ತಿನಾದ್ಯಂತ ಕೋವಿಡ್ ಲಸಿಕೆ ಪ್ರಯೋಗ; ಅಂತಿಮ ಹಂತದಲ್ಲಿ 6 ಲಸಿಕೆ

ಅಕ್ಷರ ಗಾತ್ರ
ADVERTISEMENT
""
""
""
""
""

ಮನುಷ್ಯ ಮನುಷ್ಯನ ನಡುವೆ ಅಂತರ ಕಾಯ್ದುಕೊಳ್ಳುವುದು ಹಾಗೂ ಮಾಸ್ಕ್‌ ಧರಿಸುವ ಅಭ್ಯಾಸಗಳು ಮಾತ್ರವೇ ಕೊರೊನಾ ಸೋಂಕು ವ್ಯಾಪಿಸುವುದನ್ನು ತಡೆಯಲು ಪ್ರಸ್ತುತ ಜಗತ್ತಿನ ಮುಂದಿರುವ ಬಹು ದೊಡ್ಡ ಅಸ್ತ್ರ. ಜಗತ್ತಿನಾದ್ಯಂತ ವಿಜ್ಞಾನಿಗಳು ಕೋವಿಡ್‌–19 ಚಿಕಿತ್ಸೆಗೆ ಲಸಿಕೆ ಅಭಿವೃದ್ಧಿ ಪಡಿಸಲು ನಿರಂತರ ಶ್ರಮಿಸುತ್ತಿದ್ದಾರೆ. ಪ್ರಸ್ತುತ ಸಂಶೋಧನೆಗಳು ಯಾವ ಹಂತದಲ್ಲಿವೆ, ಏನೆಲ್ಲ ಬೆಳವಣಿಗೆಯಾಗುತ್ತಿವೆ ಎಂಬುದರ ಕುರಿತು ವಿವರ ಇಲ್ಲಿದೆ.

ಇದೇ ವರ್ಷ ಜನವರಿಯಲ್ಲಿ ಸಾರ್ಸ್‌ ಕೋವ್–2 ಜಿನೋಮ್‌ ಕುರಿತು ಅರಿತುಕೊಳ್ಳುವ ಮೂಲಕ ಸಂಶೋಧಕರು ಲಸಿಕೆ ಅಭಿವೃದ್ಧಿ ಕಾರ್ಯಕ್ಕೆ ಮುನ್ನುಡಿ ಬರೆದರು. ಅಭಿವೃದ್ಧಿ ಪಡಿಸಲಾದ ಮೊದಲ ಲಸಿಕೆಯ ಮನುಷ್ಯರ ಮೇಲಿನ ಪ್ರಯೋಗ ಮಾರ್ಚ್‌ನಲ್ಲಿ ಆರಂಭಿಸಲಾಯಿತು. ಫಲಿತಾಂಶ ಏನು ಬೇಕಾದರೂ ಆಗಬಹುದು! ದೇಹದ ರೋಗ ನಿರೋಧಕ ವ್ಯವಸ್ಥೆಯ ಮೂಲಕ ವೈರಸ್‌ ವಿರುದ್ಧ ಪ್ರತಿಕಾಯಗಳ ಉತ್ಪತ್ತಿಗೆ ಪ್ರಚೋದಿಸಲು ಲಸಿಕೆ ಯಶಸ್ವಿಯಾಗಬಹುದು, ಇಲ್ಲವೇ ವಿಫಲವೂ ಆಗಬಹುದು. ಮೂರು ಹಂತಗಳಲ್ಲಿ ಮನುಷ್ಯನ ಮೇಲೆ ನಡೆಸಲಾದ ಪ್ರಯೋಗ ಯಶಸ್ವಿಯಾದರೆ, ಅದನ್ನು ಸಾರ್ವಜನಿಕ ಬಳಕೆಗೆ ತರಲು ಅಧಿಕೃತ ಸಂಸ್ಥೆಗಳಿಂದ ಅನುಮೋದನೆಯ ಹಂತವಷ್ಟೇ ದೂರದಲ್ಲಿರುತ್ತದೆ. ಅನಂತರವಷ್ಟೇ ಲಸಿಕೆಯ ಸಾಮೂಹಿಕ ತಯಾರಿಕೆ ಮತ್ತು ವಿತರಣೆ ಸಾಧ್ಯ.

ಪ್ರೀ–ಕ್ಲಿನಿಕಲ್‌ ಹಂತದಲ್ಲಿ 140ಕ್ಕೂ ಹೆಚ್ಚು

ಪುಣೆ ಮೂಲದ ಜಿನೊವಾ ಬಯೋಫಾರ್ಮಾಸ್ಯೂಟಿಕಲ್ಸ್‌ ಪ್ರಸ್ತುತ ಪ್ರೀ–ಕ್ಲಿನಿಕಲ್‌ ಪ್ರಯೋಗಗಳನ್ನು ನಡೆಸುತ್ತಿದೆ. ಮನುಷ್ಯನ ಮೇಲೆ ಲಸಿಕೆ ಪ್ರಯೋಗಕ್ಕೂ ಮುನ್ನ ಇಲಿ ಅಥವಾ ಮೊಲಗಳ ಮೇಲೆ ಪ್ರಯೋಗಾಲಯಗಳಲ್ಲಿ ಲಸಿಕೆ ಪರೀಕ್ಷೆ ನಡೆಸಲಾಗುತ್ತದೆ. ಅದರ ಅಧ್ಯಯನಗಳ ಆಧಾರದ ಮೇಲೆ ಕ್ಲಿನಿಕಲ್‌ ಪ್ರಯೋಗಗಳಿಗೆ ಅನುಮತಿ ನೀಡಲಾಗುತ್ತದೆ. ಅಕ್ಟೋಬರ್‌ನಿಂದ ಮನುಷ್ಯನ ಮೇಲೆ ಪ್ರಯೋಗ ಆರಂಭಿಸುವ ಭರವಸೆಯನ್ನು ಜಿನೊವಾ ಬಯೊಫಾರ್ಮಾ ವ್ಯಕ್ತಪಡಿಸಿದೆ.

ಜಗತ್ತಿನಾದ್ಯಂತ 140ಕ್ಕೂ ಹೆಚ್ಚು ಲಸಿಕೆಗಳು ಪ್ರೀ–ಕ್ಲಿನಿಕಲ್‌ ಹಂತದಲ್ಲಿವೆ. 18 ಲಸಿಕೆಗಳು ಮೊದಲ ಹಂತದಲ್ಲಿ ಸುರಕ್ಷತೆ ಮತ್ತು ನೀಡಬಹುದಾದ ಡೋಸೆಜ್‌ ಪರೀಕ್ಷೆ ನಡೆಸಿವೆ. ಎರಡನೇ ಹಂತದಲ್ಲಿ 12 ಲಸಿಕೆಗಳು, ಮೂರನೇ ಹಂತದಲ್ಲಿ ಹೆಚ್ಚು ಜನರ ಮೇಲೆ 6 ಲಸಿಕೆಗಳ ಪ್ರಯೋಗ ನಡೆಯುತ್ತಿವೆ. ಒಂದು ಲಸಿಕೆ ಮಾತ್ರ ಯಶಸ್ವಿ ಪ್ರಯೋಗಗಳ ಬಳಿಕ ಸೀಮಿತ ಬಳಕೆಗೆ ಅನುಮತಿ ಪಡೆದಿದೆ.

ಐಸಿಯುನಲ್ಲಿ ಕೊರೊನಾ ಸೋಂಕಿತರಿಗೆ ಚಿಕಿತ್ಸೆ ನೀಡುತ್ತಿರುವುದು–ಸಾಂದರ್ಭಿಕ ಚಿತ್ರ

ಮೂರನೇ ಹಂತದಲ್ಲಿ 6 ಲಸಿಕೆ

ಜುಲೈ 27ರ ವರೆಗೂ ಆರು ಲಸಿಕೆಗಳು ಎರಡು ಮತ್ತು ಮೂರನೇ ಹಂತ ತಲುಪಿವೆ. ಈಗಾಗಲೇ ಚೀನಾದ ಕ್ಯಾನ್‌ಸಿನೊ ಬಯೊಲಾಜಿಕ್ಸ್‌ ಕಂಪನಿಯು ಎಲ್ಲ ಹಂತಗಳ ಪ್ರಯೋಗಗಳನ್ನೂ ಯಶಸ್ವಿಯಾಗಿ ಪೂರೈಸಿದ್ದು, ಜೂನ್‌ 25ರಂದು ಚೀನಾದ ಮಿಲಿಟರಿ ಅದರ ಬಳಕೆಗೆ ಅನುಮೋದಿಸಿದೆ. ಮೊಟ್ಟ ಮೊದಲ ಬಾರಿಗೆ ಕೋವಿಡ್‌ ಲಸಿಕೆಯನ್ನು ಮನುಷ್ಯನ ಮೇಲೆ ಪ್ರಯೋಗಿಸಿದ್ದು, ಅಮೆರಿಕದ 'ಮಾಡರ್ನಾ'. ನ್ಯಾಷನಲ್‌ ಇನ್‌ಸ್ಟಿಟ್ಯೂಟ್‌ ಆಫ್‌ ಹೆಲ್ತ್‌ ಜೊತೆಗೂಡಿರುವ ಮಾಡರ್ನಾ ಜುಲೈ 27ರಿಂದ ಮೂರನೇ ಹಂತದ ಪರೀಕ್ಷೆ ಆರಂಭಿಸಿದೆ. ಅಮೆರಿಕದ ಸುಮಾರು 89 ಪ್ರದೇಶಗಳಲ್ಲಿ 30,000 ಆರೋಗ್ಯವಂತ ವ್ಯಕ್ತಿಗಳ ಮೇಲೆ ಲಸಿಕೆ ಪ್ರಯೋಗ ನಡೆಸಲಾಗುತ್ತಿದೆ.

* ಜರ್ಮನ್‌ ಕಂಪನಿ ಬಯೋಎನ್‌ಟೆಕ್‌, ನ್ಯೂಯಾರ್ಕ್‌ ಮೂಲದ ಪಿಫಿಜರ್‌ ಹಾಗೂ ಚೀನಾದ ಫೊಸನ್‌ ಫಾರ್ಮಾದ ಸಹಕಾರ ಪಡೆದು ಎಂಆರ್‌ಎನ್‌ಎ ಲಸಿಕೆ ಅಭಿವೃದ್ಧಿ ಪಡಿಸುತ್ತಿದೆ. ಅಮೆರಿಕ, ಅರ್ಜೆಂಟಿನಾ, ಬ್ರೆಜಿಲ್‌ ಹಾಗೂ ಜರ್ಮನಿಯಲ್ಲಿ 30 ಸಾವಿರ ಆರೋಗ್ಯವಂತ ವ್ಯಕ್ತಿಗಳ ಮೇಲೆ ಲಸಿಕೆಯ ಎರಡು ಮತ್ತು 3ನೇ ಹಂತದ ಪ್ರಯೋಗ ಆರಂಭಿಸಿದೆ.

* ಯೂನಿವರ್ಸಿಟಿ ಆಫ್‌ ಆಕ್ಸ್‌ಫರ್ಡ್‌ ಮತ್ತು ಬ್ರಿಟಿಷ್–ಸ್ವೀಡಿಷ್‌ ಕಂಪನಿ ಆಸ್ಟ್ರಾಜೆನೆಕಾ ಸಹಯೋಗದಲ್ಲಿ ಅಭಿವೃದ್ಧಿಯಾಗಿರುವ ಲಸಿಕೆಯ ಮೇಲೆ ಬಹುನಿರೀಕ್ಷೆ ಸೃಷ್ಟಿಯಾಗಿದೆ. ಚಿಂಪಾಂಜಿಯ ಅಡೆನೊ ವೈರಸ್ ಆಧಾರಿತ 'ChAdOx1' ಲಸಿಕೆ ಮೊದಲ ಎರಡು ಹಂತಗಳ ಪ್ರಯೋಗಗಳಲ್ಲಿ ಯಶಸ್ವಿಯಾಗಿದ್ದು, ಸುರಕ್ಷಿತ ಲಸಿಕೆ ಎಂಬ ಭರವಸೆ ಮೂಡಿಸಿದೆ. ಈಗ ಇಂಗ್ಲೆಂಡ್‌ನಲ್ಲಿ ಎರಡು ಮತ್ತು 3ನೇ ಹಂತ, ಬ್ರೆಜಿಲ್‌ ಮತ್ತು ದಕ್ಷಿಣ ಆಫ್ರಿಕಾದಲ್ಲಿ ಮೂರನೇ ಹಂತದ ಪ್ರಯೋಗ ನಡೆಯುತ್ತಿದೆ. ಅಕ್ಟೋಬರ್‌ಗೆ ತುರ್ತು ಲಸಿಕೆ ಬಿಡುಗಡೆ ಮಾಡುವ ಪ್ರಯತ್ನದಲ್ಲಿ ಪರೀಕ್ಷೆಗಳನ್ನು ಕೈಗೊಳ್ಳಲಾಗುತ್ತಿದೆ.

* ಚೀನಾದ ಸರ್ಕಾರಿ ಸ್ವಾಮ್ಯದ 'ಸಿನೊಫಾರ್ಮಾ' ಇದೇ ತಿಂಗಳು ಯುನೈಟೆಡ್‌ ಅರಬ್ ಎಮಿರೇಟ್ಸ್‌ನಲ್ಲಿ 3ನೇ ಹಂತದ ಪ್ರಯೋಗ ಆರಂಭಿಸಿದೆ. ಅಬು ಧಾಬಿಯ ಆರೋಗ್ಯ ಸಚಿವ ಈ ಲಸಿಕೆಯ ಪ್ರಯೋಗದಲ್ಲಿ ಭಾಗಿಯಾದ ಮೊದಲಿಗ. ಒಟ್ಟು 15,000 ಜನರ ಮೇಲೆ ಪ್ರಯೋಗ ನಡೆಸಲು ಉದ್ದೇಶಿಸಲಾಗಿದೆ.

* ಚೀನಾ ಮೂಲದ ಖಾಸಗಿ ಸಂಸ್ಥೆ ಸಿನೊವ್ಯಾಕ್‌, 743 ಜನರ ಮೇಲೆ ಮೊದಲ ಎರಡು ಹಂತಗಳ ಪ್ರಯೋಗ ನಡೆಸಿ, ಈಗ ಬ್ರೆಜಿಲ್‌ನಲ್ಲಿ 3ನೇ ಹಂತದ ಪ್ರಯೋಗ ನಡೆಸುತ್ತಿದೆ. 'ಕೊರೊನಾವ್ಯಾಕ್‌' ಲಸಿಕೆ ಪ್ರಯೋಗ ಯಶಸ್ವಿಯಾಗಿ ಅನುಮೋದನೆ ದೊರೆತರೆ, ಲಸಿಕೆ ತಯಾರಿಸಲು ವ್ಯವಸ್ಥೆ ರೂಪಿಸುತ್ತಿದೆ. ವಾರ್ಷಿಕ 10 ಕೋಟಿ ಡೋಸ್‌ (ಔಷಧ ಪ್ರಮಾಣ) ಲಸಿಕೆ ಸಿದ್ಧ ಪಡಿಸುವ ಯೋಜನೆ ಹೊಂದಿದೆ.

* ಆಸ್ಟ್ರೇಲಿಯಾ ಮೂಲದ ಮರ್ಡೋಕ್‌ ಚಿಲ್ಡ್ರನ್ಸ್‌ ರಿಸರ್ಚ್‌ ಇನ್‌ಸ್ಟಿಟ್ಯೂಟ್‌ ಸಹ 3ನೇ ಹಂತದ ಪ್ರಯೋಗ ನಡೆಸಿದೆ. ಕ್ಷಯ ರೋಗದ ಚಿಕಿತ್ಸೆಗಾಗಿ 1900ನೇ ಇಸವಿಯಲ್ಲಿ ಅಭಿವೃದ್ಧಿಪಡಿಸಿದ್ದ 'ಬೆಸಿಲಸ್‌ ಕ್ಯಾಲ್‌ಮೆಟೆ ಗ್ವೆರಿನ್‌' ಲಸಿಕೆಗಳ ಪ್ರಯೋಗಗಳನ್ನು ನಡೆಸುತ್ತಿದೆ.

ಒಂದು ಮತ್ತು 2ನೇ ಹಂತದಲ್ಲಿ ಭಾರತದ ಲಸಿಕೆಗಳು

ಭಾರತ ಮೂಲದ ಕಂಪನಿಗಳು ಅಭಿವೃದ್ಧಿ ಪಡಿಸಿರುವ ಎರಡೂ ಲಸಿಕೆಗಳು ಮೊದಲ ಎರಡು ಹಂತಗಳ ಮನುಷ್ಯನ ಮೇಲಿನ ಪ್ರಯೋಗಗಳಿಗೆ ಒಳಗಾಗಿವೆ. ಐಸಿಎಂಆರ್‌ ಮತ್ತು ರಾಷ್ಟ್ರೀಯ ವೈರಾಣು ಸಂಶೋಧನಾ ಸಂಸ್ಥೆಯ ಸಹಯೋಗದಲ್ಲಿ ಭಾರತ್‌ ಬಯೋಟೆಕ್‌ 'ಕೊವ್ಯಾಕ್ಸಿಸ್‌' ಪ್ರಯೋಗ ನಡೆಯುತ್ತಿದೆ. 2021ರ ಆರಂಭಕ್ಕೂ ಮುನ್ನವೇ ಲಸಿಕೆ ಬಳಕೆಗೆ ತರುವ ನಿರೀಕ್ಷೆ ವ್ಯಕ್ತವಾಗಿದೆ. ಮತ್ತೊಂದು ಸಂಸ್ಥೆ 'ಝೈಡಸ್‌ ಕ್ಯಾಡಿಲಾ' ಡಿಎನ್‌ಎ ಆಧಾರಿತ ಲಸಿಕೆ ತಯಾರಿಸಿ, ಪ್ರಯೋಗ ನಡೆಸುತ್ತಿದೆ.

ಇಂಪೆರಿಯಲ್‌ ಕಾಲೇಜ್‌ ಲಂಡನ್, ಜಪಾನ್‌ನ ಆ್ಯನ್‌ಜೆಸ್, ಜಾನ್ಸನ್‌ ಆ್ಯಂಡ್‌ ಜಾನ್ಸನ್‌ ಸೇರಿದಂತೆ 12 ಲಸಿಕೆಗಳು ಎರಡನೇ ಹಂತದ ಪ್ರಯೋಗದಲ್ಲಿವೆ.

ಯಾವುದೇ ರೋಗ ಶಮನಗೊಳಿಸಲು ಅಗತ್ಯವಿರುವ ಲಸಿಕೆ ಬಳಕೆಗೆ ತರಲು ಹಲವು ವರ್ಷಗಳ ಸಂಶೋಧನೆ ಮತ್ತು ಪ್ರಯೋಗಗಳನ್ನು ನಡೆಸಲಾಗುತ್ತದೆ. ಆದರೆ, ಈಗ ವಿಶ್ವದ ಹಲವು ಭಾಗಗಳಲ್ಲಿ ಸಂಶೋಧಕರು ಕಡಿಮೆ ಅವಧಿಯಲ್ಲಿ ಕೊರೊನಾ ವೈರಸ್‌ಗೆ 165 ಲಸಿಕೆಗಳ ಅಭಿವೃದ್ಧಿ ನಡೆಸಿದ್ದಾರೆ ಹಾಗೂ ಅವುಗಳ ಪೈಕಿ ಈಗಾಗಲೇ 27 ಲಸಿಕೆಗಳು ಮನುಷ್ಯನ ಮೇಲಿನ ಪ್ರಯೋಗ ಹಂತದಲ್ಲಿವೆ. ವರ್ಷಾಂತ್ಯಕ್ಕೆ ಅಥವಾ ಮುಂದಿನ ವರ್ಷದ ಆರಂಭದಲ್ಲಿ ಪರಿಣಾಮಕಾರಿ ಹಾಗೂ ಸುರಕ್ಷಿತ ಲಸಿಕೆ ಹೊರತರುವ ಮಹಾತ್ವಾಕಾಂಕ್ಷೆಯೊಂದಿಗೆ ವಿಜ್ಞಾನಿಗಳು ಶ್ರಮಿಸುತ್ತಿದ್ದಾರೆ.

ಕೋವಿಡ್‌ ಚಿಕಿತ್ಸೆಗೆ ಬಳಕೆಯಲ್ಲಿರುವ ಔಷಧಗಳು

* ಎಚ್‌ಸಿಕ್ಯುಎಸ್‌ (HCQS): ಮಲೇರಿಯಾ ಶಮನಗೊಳಿಸಲು 1930ರಲ್ಲಿ ಜರ್ಮನಿಯ ಕೆಮಿಸ್ಟ್‌ಗಳು ಕ್ಲೋರೊಕ್ವೀನ್‌ ತಯಾರಿಸಿದರು. ಅದರ ಮುಂದುವರಿದ ಪ್ರಯೋಗಗಳಿಂದ ಹೈಡ್ರೊಕ್ಲೊರೊಕ್ವೀನ್‌ (ಎಚ್‌ಸಿಕ್ಯುಎಸ್‌) ಅಭಿವೃದ್ಧಿ ಪಡಿಸಲಾಯಿತು. ಅನಂತರದಲ್ಲಿ ಆ ಔಷಧಿಯನ್ನು ಆರ್ಥರೈಟಿಸ್‌ ಸೇರಿದಂತೆ ಇತರೆ ಕಾಯಿಲೆಗಳ ಚಿಕಿತ್ಸೆಗೆ ಬಳಸಲು ಶುರು ಮಾಡಲಾಯಿತು. ಈ ಮದ್ದು ಜೀವಕೋಶಗಳಲ್ಲಿ ಕೊರೊನಾ ವೈರಸ್‌ ವ್ಯಾಪಿಸುವುದನ್ನು ತಡೆಯುತ್ತವೆ ಎಂದು ಕೆಲವು ಸಂಶೋಧನೆಗಳ ಮೂಲಕ ವರದಿಯಾದವು. ವಿಶ್ವ ಆರೋಗ್ಯ ಸಂಸ್ಥೆ ಸಹ ಹಲವು ಕಡೆ ಆ ಮದ್ದು ಪರೀಕ್ಷೆಗಳನ್ನು ನಡೆಸಿತು ಹಾಗೂ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಮಾಧ್ಯಮಗಳ ಮುಂದೆ ಎಚ್‌ಸಿಕ್ಯುಎಸ್‌ ಕೊರೊನಾಗೆ ರಾಮಬಾಣ ಎಂಬಂತೆ ಪ್ರಚುರಪಡಿಸಿದರು. ಇದರಿಂದಾಗಿ ಜಾಗತಿಕ ಮಟ್ಟದಲ್ಲಿ ಎಚ್‌ಸಿಕ್ಯುಎಸ್‌ಗೆ ತೀವ್ರ ಬೇಡಿಕೆ ಉಂಟಾಗುವ ಜೊತೆಗೆ ಕೊರತೆಯೂ ಸೃಷ್ಟಿಯಾಯಿತು.

ಆದರೆ, ಹೆಚ್ಚಿನ ಬಳಕೆಯ ನಂತರದಲ್ಲಿ ಎಚ್‌ಸಿಕ್ಯುಎಸ್‌ ಕೊರೊನಾ ವೈರಸ್‌ ನಿಯಂತ್ರಿಸುವುದಿಲ್ಲ ಎಂದು ಕಂಡುಕೊಳ್ಳಲಾಯಿತು. ಅದರ ಬಳಕೆಯು ದೇಹದ ಅಂಗಾಂಗಳಿಗೆ ಘಾಸಿ ಮಾಡುವ ಸಾಧ್ಯತೆ ಹೆಚ್ಚಿಸುತ್ತದೆ ಎಂದು ವರದಿಯಾದವು. ವಿಶ್ವ ಆರೋಗ್ಯ ಸಂಸ್ಥೆಯು ಅದರ ಬಳಕೆಯ ಪ್ರಯೋಗಗಳನ್ನು ನಿಲ್ಲಿಸಿತು. ಈ ನಡುವೆಯೂ ಕೆಲವು ರಾಷ್ಟ್ರಗಳಲ್ಲಿ ಎಚ್‌ಸಿಕ್ಯುಎಸ್ ಜೊತೆಗೆ ಮತ್ತೊಂದು ಔಷಧ ಸೇರಿಸಿ ಕೋವಿಡ್‌ ಚಿಕಿತ್ಸೆಗೆ ಬಳಸುವುದು ಮುಂದುವರಿದಿದೆ.

* ರೆಮ್ಡೆಸಿವಿರ್‌ (Remdesivir)

ಎಬೊಲಾ ಮತ್ತು ಹೆಪಟೈಟಿಸ್‌ ಸಿ ವಿರುದ್ಧದ ಆ್ಯಂಟಿವೈರಲ್‌ ಡ್ರಗ್‌ ಆಗಿ ರೆಮ್ಡೆಸಿವಿರ್‌ ಪ್ರಯೋಗ ನಡೆಸಲಾಗಿತ್ತು. ಅದೇ ಔಷಧವನ್ನು ಕೋವಿಡ್‌ ಚಿಕಿತ್ಸೆಗೆ ಬಳಕೆ ಮಾಡಲಾಗುತ್ತಿದೆ. ಇದರಿಂದಾಗಿ ಸೋಂಕಿತರು ಗುಣಮುಖರಾಗಲು ತೆಗೆದುಕೊಳ್ಳುವ ಸಮಯ ಕಡಿಮೆಯಾಗುತ್ತಿದೆ ಹಾಗೂ ಸಾವಿನ ಸಂಖ್ಯೆಯೂ ಇಳಿಕೆಯಾಗಿದೆ.

ಕೊರೊನಾ ವೈರಸ್‌ನಿಂದ ರಕ್ಷಣೆ ಪಡೆಯಲು ಮಾಸ್ಕ್‌ ಧರಿಸಿರುವ ಹುಡುಗಿ–ಸಂಗ್ರಹ ಚಿತ್ರ

ಉಸಿರಾಟದ ಸಮಸ್ಯೆ ಎದುರಿಸುತ್ತಿರುವವರಿಗೆ ಡೆಕ್ಸಾಮೆಥಾಸೊನ್ (Dexamethasone) ಔಷಧ ಉಪಯೋಗಿಸಲಾಗುತ್ತಿದೆ. ಇನ್ನೂ ಇನ್‌ಫ್ಲುಯೆನ್ಸಾ ಚಿಕಿತ್ಸೆಗೆ ಪ್ರಯೋಗಿಸಲಾಗಿದ್ದ ಫವಿಪಿರಾವಿರ್‌ (Favipiravir) ಔಷಧ ಸಹ ವೈರಸ್‌ ತಡೆಯುವ ಸಾಮರ್ಥ್ಯ ಹೊಂದಿರುವುದಾಗಿ ವರದಿಯಾಗಿದೆ. ಎಚ್‌ಐವಿಗೆ ಚಿಕಿತ್ಸೆ ನೀಡಲು ಬಳಸಲಾಗುವ ಲೋಪಿನಾವಿರ್‌ (Lopinavir) ಮತ್ತು ರಿಟನಾವಿರ್‌ ( ritonavir) ಔಷಧಗಳನ್ನು ಕೋವಿಡ್‌ ಚಿಕಿತ್ಸೆಗೆ ಬಳಸುವ ಪ್ರಯೋಗ ಮಾಡಿ ವಿಫಲವಾಯಿತು.

ಪ್ರಸ್ತುತ ಪ್ಲಾಸ್ಮಾ ಚಿಕಿತ್ಸೆಯನ್ನು ಪರ್ಯಾಯ ಚಿಕಿತ್ಸಾ ಕ್ರಮವಾಗಿ ಅನುಸರಿಸುವ ಪ್ರಯತ್ನಗಳು ನಡೆದಿವೆ.

(ಮೂಲ: ನ್ಯೂಯಾರ್ಕ್‌ ಟೈಮ್ಸ್‌, ದಿ ಇಂಡಿಯನ್‌ ಎಕ್ಸ್‌ಪ್ರೆಸ್‌)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT