ಮಂಗಳವಾರ, ಜೂನ್ 28, 2022
25 °C

ರಷ್ಯಾ–ಉಕ್ರೇನ್ ಯುದ್ಧ: ಈ 5 ಅಗತ್ಯ ವಸ್ತು ಪೂರೈಕೆ ಮೇಲೆ ಗಂಭೀರ ಪರಿಣಾಮ ಸಾಧ್ಯತೆ

ಪಿಟಿಐ Updated:

ಅಕ್ಷರ ಗಾತ್ರ : | |

ರಷ್ಯಾ–ಉಕ್ರೇನ್ ಯುದ್ಧದಿಂದ ಅಗತ್ಯ ವಸ್ತುಗಳ ಪೂರೈಕೆ ಸರಪಳಿಗೆ ಮತ್ತಷ್ಟು ಅಡ್ಡಿ ಉಂಟಾಗುವ ಭೀತಿ ಎದುರಾಗಿದೆ. ಜರ್ಮನಿ, ಅಮೆರಿಕದಂಥ ಉತ್ಪಾದಕ ರಾಷ್ಟ್ರಗಳು ಉಕ್ರೇನ್ ಹಾಗೂ ರಷ್ಯಾದಿಂದ ಸಣ್ಣಮಟ್ಟಿನ ಆಮದು ಮಾತ್ರ ಮಾಡಿಕೊಳ್ಳುತ್ತಿರಬಹುದು. ಆದರೆ ಈ ಎರಡು ರಾಷ್ಟ್ರಗಳು ಇತರ ದೇಶಗಳಿಗೆ ಕಚ್ಚಾವಸ್ತುಗಳು, ಇಂಧನ ಹಾಗೂ ಇತರ ಅಗತ್ಯ ವಸ್ತುಗಳ ಪೂರೈಕೆಯಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತಿವೆ.

ಉಕ್ರೆನ್ ಜನರ ಮೇಲೆ ಯುದ್ಧವು ನೇರ ಪರಿಣಾಮ ಬೀರಿದರೆ, ವಿಶ್ವದ ಇತರ ದೇಶಗಳಿಗೆ ಅಗತ್ಯ ವಸ್ತುಗಳ ಪೂರೈಕೆ ವಿಚಾರದಲ್ಲಿಯೂ ತೊಂದರೆ ಉಂಟುಮಾಡಲಿದೆ.

1) ಇಂಧನ

ಯುರೋಪ್‌ನ ಅನೇಕ ದೇಶಗಳು ಇಂಧನ ಮತ್ತು ವಿಶೇಷವಾಗಿ ಅನಿಲದ ವಿಚಾರದಲ್ಲಿ ರಷ್ಯಾದ ಮೇಲೆ ಅವಲಂಬಿತವಾಗಿವೆ. ಈ ದೇಶಗಳಿಗೆ ಹಲವು ಪೈಪ್‌ಲೈನ್‌ಗಳ ಮೂಲಕ ರಷ್ಯಾದಿಂದ ಅನಿಲ ಪೂರೈಕೆಯಾಗುತ್ತದೆ. ಇದರ ಮೇಲೆ ಯುದ್ಧವು ಪರಿಣಾಮ ಬೀರಲಿದೆ.

ರಷ್ಯಾದಿಂದ ಇತರ ದೇಶಗಳಿಗೆ ಅನಿಲ ಪೂರೈಕೆ ಸಂಪೂರ್ಣವಾಗಿ ಸ್ಥಗಿತಗೊಳ್ಳದೇ ಇದ್ದರೂ ಅಡಚಣೆಯಂತೂ ಉಂಟಾಗಲಿದೆ. ಆದರೆ ಸಣ್ಣಮಟ್ಟಿನ ಅಡಚಣೆಯೂ ಈಗಿನ ಸಂದರ್ಭದಲ್ಲಿ ದೊಡ್ಡ ಹೊಡೆತ ನೀಡಲಿದೆ. ಕೋವಿಡ್ ಸಾಂಕ್ರಾಮಿಕದಿಂದಾಗಿ ಈಗಾಗಲೇ ಉತ್ಪಾದನೆ ಕಡಿತದಂಥ ಸಮಸ್ಯೆ ಸೃಷ್ಟಿಯಾಗಿದ್ದು, ಬೆಲೆ ಏರಿಕೆಯಾಗುತ್ತಿದೆ. ಇದು ಗ್ರಾಹಕರು ಮತ್ತು ಕೈಗಾರಿಕೆಗಳ ಮೇಲೆ ತೀವ್ರ ಪರಿಣಾಮ ಬೀರುತ್ತಿವೆ ಎಂದು ಮೂಲಗಳು ಹೇಳಿವೆ.

2) ಆಹಾರ

ಇಂಧನ ದರ ಹೆಚ್ಚಳ, ಹವಾಮಾನ ಬದಲಾವಣೆ ಕಾರಣದಿಂದಾಗಿ ಆಹಾರ ವಸ್ತುಗಳ ಬೆಲೆ 2021ರಿಂದಲೇ ಏರಿಕೆಯಾಗುತ್ತಿದೆ. ಪ್ರಮುಖ ವಸ್ತುಗಳ ಬೆಲೆ ಏರಿಕೆಯಿಂದ ಆಹಾರ ವಸ್ತುಗಳ ಉತ್ಪಾದಕರು ಒತ್ತಡಕ್ಕೆ ಸಿಲುಕಲಿದ್ದಾರೆ. ಜಾಗತಿಕ ಗೋಧಿ ರಫ್ತಿನಲ್ಲಿ ರಷ್ಯಾ ಮತ್ತು ಉಕ್ರೇನ್‌ನದ್ದು ಬಹುಪಾಲಿದೆ. ಉಕ್ರೇನ್‌ ಹೆಚ್ಚಿನ ಪ್ರಮಾಣದಲ್ಲಿ ಸೂರ್ಯಕಾಂತಿ ಎಣ್ಣೆ ರಫ್ತು ಮಾಡುವ ದೇಶವಾಗಿದೆ. ಇವೆರಡೂ ಆಹಾರ ಉತ್ಪನ್ನ ತಯಾರಿಕೆಯಲ್ಲಿ ಪ್ರಮುಖ ಪಾತ್ರವಹಿಸಿವೆ. ಯುದ್ಧಪೀಡಿತ ಉಕ್ರೇನ್‌ನಿಂದ ರಫ್ತು ಚಟುವಟಿಕೆ ಈಗ ಸಂಪೂರ್ಣ ಸ್ಥಗಿತಗೊಂಡಿದೆ. ಉಕ್ರೇನ್‌ನಲ್ಲಿ ಯುದ್ಧದಿಂದಾಗಿ ಕೊಯ್ಲು, ಸಂಸ್ಕರಣೆ ಪ್ರಕ್ರಿಯೆಗೆ ಅಡಚಣೆಯಾಗಿದ್ದು, ಆಮದುದಾರರು ಇತರೆಡೆಗಳಿಂದ ವಸ್ತುಗಳ ಖರೀದಿಗೆ ಕಷ್ಟಪಡಬೇಕಾಗಬಹುದು ಎನ್ನಲಾಗಿದೆ.

ಕೆಲವು ದೇಶಗಳು ಆಹಾರ ಧಾನ್ಯಗಳಿಗಾಗಿ ರಷ್ಯಾ ಮತ್ತು ಉಕ್ರೇನ್ ಅನ್ನೇ ಅವಲಂಬಿಸಿವೆ. ಉದಾಹರಣೆಗೆ; ಟರ್ಕಿ ಹಾಗೂ ಈಜಿಪ್ಟ್ ಶೇ 70ರಷ್ಟು ಗೋಧಿಯನ್ನು ಆಮದು ಮಾಡಿಕೊಳ್ಳುತ್ತಿವೆ. ಚೀನಾಕ್ಕೆ ಜೋಳ ಪೂರೈಕೆಯಲ್ಲಿ ಉಕ್ರೇನ್ ಅಗ್ರ ಸ್ಥಾನದಲ್ಲಿದೆ.

ಜಾಗತಿಕವಾಗಿ ಕೆಲವು ರಸಗೊಬ್ಬರಗಳ ರಫ್ತಿನಲ್ಲಿಯೂ ರಷ್ಯಾ ಪ್ರಮುಖ ಪಾತ್ರ ವಹಿಸುತ್ತಿದೆ. ರಷ್ಯಾದ ಮೇಲೆ ಅಂತರರಾಷ್ಟ್ರೀಯ ಮಟ್ಟದಲ್ಲಿ ವಿಧಿಸಲಾಗಿರುವ ನಿರ್ಬಂಧಗಳು ಇದರ ಮೇಲೆ ಪರಿಣಾಮ ಬೀರಲಿದೆ.

3) ಸಾರಿಗೆ

ಕೋವಿಡ್‌ ಸಾಂಕ್ರಾಮಿಕದಿಂದಾಗಿ ಈಗಾಗಲೇ ವಿಶ್ವಮಟ್ಟದಲ್ಲಿ ಸಾರಿಗೆ ವ್ಯವಸ್ಥೆಗೆ ಅಡಚಣೆಯಾಗಿದೆ. ಯುದ್ಧದಿಂದಾಗಿ ಇದು ಇನ್ನಷ್ಟು ಬಿಗಡಾಯಿಸಲಿದೆ. ಸಾಗರ ಮತ್ತು ರೈಲು ಮಾರ್ಗಗಳ ಸರಕು ಸಾಗಾಟದ ಮೇಲೆಯೂ ಯುದ್ಧವು ಪರಿಣಾಮ ಬೀರಲಿದೆ.

2011ರಿಂದಲೂ ಚೀನಾ ಮತ್ತು ಯುರೋಪ್‌ ಮಧ್ಯೆ ರೈಲುಗಳ ಮೂಲಕ ಸರಕು ಸಾಗಾಟ ನಡೆಯುತ್ತಿದೆ. ಒಟ್ಟಾರೆಯಾಗಿ ಏಷ್ಯಾ ಮತ್ತು ಯುರೋಪ್ ನಡುವೆ ಈ ರೈಲು ಸಂಪರ್ಕವು ಸಣ್ಣಮಟ್ಟಿನ ಸರಕು ಸಾಗಾಟ ಮಾಡುವುದಾದರೂ ಯುದ್ಧದ ಕಾರಣ ಇತ್ತೀಚಿನ ದಿನಗಳಲ್ಲಿ ಇದು ಪ್ರಮುಖ ಪಾತ್ರವಹಿಸಿತ್ತು.

ರಷ್ಯಾ ಮೇಲಿನ ನಿರ್ಬಂಧಗಳಿಂದಾಗಿ ಲಿಥುವೇನಿಯಾದಂಥ ದೇಶಗಳಲ್ಲಿ ರೈಲು ಸಂಚಾರಕ್ಕೆ ತೊಡಕು ಉಂಟಾಗಲಿದೆ ಎನ್ನಲಾಗಿದೆ.

ಯುದ್ಧದಿಂದಾಗಿ ತೈಲ ಬೆಲೆ ಏರಿಕೆಯಾಗುತ್ತಿರುವುದೂ ಸರಕು ಸಾಗಾಟದ ಮೇಲೆ ಪರಿಣಾಮ ಬೀರುತ್ತಿದೆ. ಸರಕುಸಾಗಣೆ ವೆಚ್ಚ ಈಗಲೇ ಹೆಚ್ಚಿದ್ದು, ಇದು ಇನ್ನಷ್ಟು ಏರಿಕೆಯಾಗುವ ಸಾಧ್ಯತೆ ಇದೆ.

ಅಂತರರಾಷ್ಟ್ರೀಯ ವಹಿವಾಟುಗಳ ಸಂದರ್ಭದಲ್ಲಿ ಆನ್‌ಲೈನ್‌ ಮೂಲಕವೇ ಹೆಚ್ಚಿನ ಮಾಹಿತಿ ವಿನಿಮಯ ನಡೆಯುತ್ತಿದೆ. ಇವುಗಳ ಮೇಲೆ ಸೈಬರ್ ದಾಳಿಗಳು ನಕಾರಾತ್ಮಕ ಪರಿಣಾಮ ಬೀರಲಿದ್ದು, ಇದೂ ಸಹ ವಿಶ್ವದಾದ್ಯಂತ ಪೂರೈಕೆ ಸರಪಳಿಗೆ ಅಡ್ಡಿ ಉಂಟುಮಾಡಲಿದೆ.

4) ಲೋಹಗಳು

ನಿಕೆಲ್, ತಾಮ್ರ ಮತ್ತು ಕಬ್ಬಿಣದ ಜಾಗತಿಕ ಉತ್ಪಾದನೆಯಲ್ಲಿ ರಷ್ಯಾ ಮತ್ತು ಉಕ್ರೇನ್ ಮುಂಚೂಣಿಯಲ್ಲಿವೆ. ನಿಯೋನ್, ಪ್ಲಾಟಿನಂನಂಥ ಇತರ ಲೋಹಗಳ ಉತ್ಪಾದನೆಗೆ ಕಚ್ಚಾ ವಸ್ತುಗಳ ಪೂರೈಕೆಯಲ್ಲಿಯೂ ಈ ದೇಶಗಳು ಮಹತ್ವದ ಪಾತ್ರ ವಹಿಸಿವೆ.

ರಷ್ಯಾ ಮೇಲೆ ಅಮೆರಿಕ ಮತ್ತು ಯುರೋಪ್ ದೇಶಗಳು ವಿಧಿಸಿರುವ ನಿರ್ಬಂಧಗಳಿಂದ ಈ ಲೋಹಗಳ ಬೆಲೆ ಏರಿಕೆಯಾಗುವ ಸಾಧ್ಯತೆ ಇದೆ.

5) ಮೈಕ್ರೋ ಚಿಪ್‌

2021ರಲ್ಲಿ ವಿಶ್ವದಾದ್ಯಂತ ಮೈಕ್ರೋ ಚಿಪ್‌ಗಳ ಕೊರತೆಯು ಉತ್ಪಾದನೆ ಚಟುವಟಿಕೆಗಳ ಮೇಲೆ ವ್ಯಾಪಕ ಪರಿಣಾಮ ಬೀರಿತ್ತು. 2022ರಲ್ಲಿ ಈ ಸಮಸ್ಯೆ ಕಡಿಮೆಯಾಗಬಹುದು ಎಂದು ಭಾವಿಸಲಾಗಿತ್ತು. ಆದರೆ ಇತ್ತೀಚಿನ ಅಂತರರಾಷ್ಟ್ರೀಯ ವಿದ್ಯಮಾನಗಳು ಮತ್ತೆ ಆತಂಕ ಸೃಷ್ಟಿಸಿವೆ.

ನಿರ್ಬಂಧದ ಭಾಗವಾಗಿ ರಷ್ಯಾದ ಮೈಕ್ರೋ ಚಿಪ್ ಪೂರೈಕೆಗೆ ಕಡಿವಾಣ ಹಾಕುವುದಾಗಿ ಅಮೆರಿಕ ಹೇಳಿದೆ. ಮೈಕ್ರೋ ಚಿಪ್ ತಯಾರಿಗೆ ಬೇಕಾಗಿರುವ ನಿಯೋನ್, ಪ್ಲಾಟಿನಂನಂಥ ಲೋಹಗಳನ್ನು ಹೆಚ್ಚು ಪ್ರಮಾಣದಲ್ಲಿ ರಫ್ತು ಮಾಡುವ ದೇಶಗಳು ಉಕ್ರೇನ್ ಮತ್ತು ರಷ್ಯಾ ಆಗಿವೆ. ಇವೆಲ್ಲ ಅಂಶಗಳು ಜಾಗತಿಕ ಮೈಕ್ರೋ ಚಿಪ್‌ ಪೂರೈಕೆಗೆ ಹೊಡೆತ ನೀಡಲಿವೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು