ಮಂಗಳವಾರ, ಡಿಸೆಂಬರ್ 6, 2022
24 °C

ಆಳ-ಅಗಲ | ಇದು ವ್ಯಾಕ್ಸಿನ್ ರೇಸ್‌!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

prajavani

ಕೊರೊನಾ ಸೋಂಕು ಜಗತ್ತಿನ ತುಂಬಾ ಆವರಿಸಿ, ಕಾಡುತ್ತಿರುವ ಈ ಹೊತ್ತಿನಲ್ಲಿ ಅದನ್ನು ಎದುರಿಸುವಂತಹ ಪರಿಣಾಮಕಾರಿ ಲಸಿಕೆಗಾಗಿ ಎಲ್ಲ ದೇಶಗಳು ಎದುರು ನೋಡುತ್ತಿವೆ. ಚೀನಾ, ಅಮೆರಿಕ, ಇಂಗ್ಲೆಂಡ್‌, ಜರ್ಮನಿ ಭಾರತ ಸೇರಿದಂತೆ ಹಲವು ದೇಶಗಳು ಲಸಿಕೆ ಅಭಿವೃದ್ಧಿಗಾಗಿ ಭಾರಿ ಪ್ರಯತ್ನ ಹಾಕುತ್ತಿದ್ದು, ಬೇಗ ಬಿಡುಗಡೆಗಾಗಿ ಸ್ಪರ್ಧೆಗೆ ಬಿದ್ದಿವೆ. ರೇಸ್‌ನಲ್ಲಿ ಸದ್ಯ ಚೀನಾ ಮುಂದಿದೆ. ಕೋವಿಡ್‌ಗೆ ಲಸಿಕೆ ಕಂಡು ಹಿಡಿದ ಜಗತ್ತಿನ ಮೊದಲ ದೇಶ ಎಂಬ ಹಿರಿಮೆ ಅದರ ಪಾಲಾಗುವ ಸಾಧ್ಯತೆ ಹೆಚ್ಚಾಗಿದೆ. ಹೌದು, ಲಸಿಕೆ ಸಂಶೋಧನೆಯಲ್ಲಿ ಇದುವರೆಗೆ ಏನೇನಾಗಿದೆ?

ಜಗತ್ತಿನಾದ್ಯಂತ ಕೋವಿಡ್‌ಗೆ ತುತ್ತಾಗಿರುವವರ ಸಂಖ್ಯೆ 1.20 ಕೋಟಿಯನ್ನು ದಾಟಿದೆ. ಈ ರೋಗದಿಂದ 5.5 ಲಕ್ಷ ಜನ ಮೃತಪಟ್ಟಿದ್ದಾರೆ. ಸೋಂಕು ಹರಡುವಿಕೆ ವ್ಯಾಪಕವಾಗಿರುವ ಕಾರಣ, ಇನ್ನೂ ಕೋಟ್ಯಂತರ ಜನರಿಗೆ ಇದು ತಗಲುವ ಅಪಾಯವಿದೆ. ಈ ರೋಗವನ್ನು ನಿರ್ಮೂಲನೆ ಮಾಡುವ ಲಸಿಕೆಯ ಅಗತ್ಯ ತೀವ್ರವಾಗಿದೆ. ಜಗತ್ತಿನ 187 ದೇಶಗಳಿಗೆ ಸೋಂಕು ಹರಡಿದೆಯಾದರೂ, ಕೆಲವು ಶಕ್ತ ರಾಷ್ಟ್ರಗಳಷ್ಟೇ ಈ ರೋಗಕ್ಕೆ ಲಸಿಕೆ ಕಂಡುಹಿಡಿಯಲು ಪೈಪೋಟಿಗೆ ಬಿದ್ದಿವೆ. ರೋಗದಿಂದ ತನ್ನ ಜನರನ್ನು ರಕ್ಷಿಸಿಕೊಳ್ಳುವುದು ಪ್ರತಿಯೊಂದು ರಾಷ್ಟ್ರಕ್ಕೂ ಮುಖ್ಯವಾಗಿದ್ದರಿಂದ ಈ ರೋಗದ ತಡೆಗೆ ಸೃಷ್ಟಿಯಾಗಲಿರುವ ಲಸಿಕೆಯ ಮಾರುಕಟ್ಟೆಯೂ ದೊಡ್ಡ ಪೈಪೋಟಿಗೆ ಕಾರಣವಾಗಿದೆ.

ಈ ರೋಗದ ತೀವ್ರತೆ ಇನ್ನೊಂದು ವರ್ಷ ಹೀಗೇ ಇರುವ ಸಾಧ್ಯತೆ ದಟ್ಟವಾಗಿದೆ. ಹೀಗಾಗಿ ವರ್ಷದ ನಂತರ ಲಸಿಕೆ ಅಭಿವೃದ್ಧಿಯಾದರೂ ಅದು ಕೋಟ್ಯಂತರ ಜನರಿಗೆ ಬೇಕಾಗುತ್ತದೆ. ಒಬ್ಬ ರೋಗಿಗೆ ಹಲವು ಡೋಸ್‌ಗಳನ್ನು ಕೊಡಬೇಕಾಗುತ್ತದೆ ಅಂದುಕೊಂಡರೆ ನೂರಾರು ಕೋಟಿ ಡೋಸ್‌ಗಳಷ್ಟು ಲಸಿಕೆ ಬೇಕಾಗುತ್ತದೆ. ಅನಿವಾರ್ಯದ ಸಂದರ್ಭದಲ್ಲಿ ಮೊದಲ ಲಸಿಕೆ ಅಭಿವೃದ್ಧಿಪಡಿಸಲಿರುವ ಕಂಪನಿಗೆ/ದೇಶಕ್ಕೆ ಜಾಗತಿಕ ಮಟ್ಟದಲ್ಲಿ ಹೊಸ ಪ್ರಾಮುಖ್ಯತೆ ಬರಲಿದೆ. ಹೀಗಾಗಿ ಅಮೆರಿಕ, ಚೀನಾ, ಬ್ರಿಟನ್‌ ಮತ್ತು ಜರ್ಮನಿಯಂತಹ ಸಿರಿವಂತ ರಾಷ್ಟ್ರಗಳ ಸರ್ಕಾರಗಳೇ ಲಸಿಕೆ ಸಂಶೋಧನೆ ಮತ್ತು ಅಭಿವೃದ್ಧಿಗೆ ಹಣ ಹೂಡಿಕೆ ಮಾಡಿವೆ. 

ಅಮೆರಿಕ ಸರ್ಕಾರವೊಂದೇ 25ಕ್ಕೂ ಹೆಚ್ಚು ಲಸಿಕೆ ಅಭಿವೃದ್ಧಿ ಯೋಜನೆಗಳಿಗೆ ಹಣ ಹೂಡಿಕೆ ಮಾಡಿದೆ. ಜರ್ಮನಿಯ ಸರ್ಕಾರವು ಅಮೆರಿಕದ ಕಂಪನಿ ಯೊಂದರಲ್ಲಿ ಹಣ ಹೂಡಿಕೆ ಮಾಡಿದೆ. ಚೀನಾ ಸಹ ಎಂಟು ಲಸಿಕೆ ಅಭಿವೃದ್ಧಿ ಯೋಜನೆಯಲ್ಲಿ ಹೂಡಿಕೆ ಮಾಡಿದೆ. ಹೀಗಾಗಿ ಲಸಿಕೆ ಅಭಿವೃದ್ಧಿಯಲ್ಲಿ ಪೈಪೋಟಿ ತೀವ್ರವಾಗಿದೆ. 

ಈ ಪೈಪೋಟಿಯಲ್ಲಿ ಎಲ್ಲಾ ದೇಶಗಳಿಗಿಂತ ಚೀನಾ ಮುಂದೆ ಇದೆ. ಮೂರನೇ ಹಂತದ ಕ್ಲಿನಿಕಲ್ ಟ್ರಯಲ್ ಹಂತ ಮುಟ್ಟಿರುವ ನಾಲ್ಕು ಲಸಿಕೆಗಳಲ್ಲಿ, ಚೀನಾ ದೇಶದ್ದೇ ಮೂರು ಲಸಿಕೆಗಳು ಇವೆ. ಹೀಗಾಗಿ ಪೈಪೋಟಿಯಲ್ಲಿ ಚೀನಾ ಗೆಲ್ಲುವ ಸಾಧ್ಯತೆ ಇದೆ. ಆದರೆ, ಅತ್ಯಧಿಕ ಜನರ ಮೇಲೆ ಪ್ರಯೋಗ ನಡೆಸಲು ಚೀನಾ ದೊಡ್ಡ ತೊಡಕು ಎದುರಿಸುತ್ತಿದೆ. ಚೀನಾದಲ್ಲಿ ಕೋವಿಡ್‌ಗೆ ತುತ್ತಾದವರಲ್ಲಿ ಬಹುತೇಕ ಮಂದಿ ಗುಣಮುಖರಾಗಿರುವ ಕಾರಣ, ಪ್ರಯೋಗಕ್ಕೆ ಅವಶ್ಯವಿರುವಷ್ಟು ಸ್ವಯಂಸೇವಕರು ಲಭ್ಯರಿಲ್ಲ. ಬೇರೆ ದೇಶಗಳಿಂದಲೂ ಇದಕ್ಕೆ ಸಹಕಾರ ಸಿಗುತ್ತಿಲ್ಲ. ಸಹಕಾರ ದೊರೆಯದೇ ಇರುವುದೂ ಲಸಿಕೆ ಪೈಪೋಟಿಯ ಒಂದು ಭಾಗವಾಗಿದೆ.

ಮೂರನೇ ಹಂತದ ಕ್ಲಿನಿಕಲ್ ಟ್ರಯಲ್‌ನಲ್ಲಿರುವ ಲಸಿಕೆ ಅಮೆರಿಕದ ಮಾಡೆರ್ನಾ ಕಂಪನಿಯದ್ದು. ಇದನ್ನು ಸಾವಿರಾರು ಜನರ ಮೇಲೆ ಪ್ರಯೋಗಕ್ಕೆ ಬಳಸಲಾಗುತ್ತಿದೆ. ಇದು ಐದಾರು ತಿಂಗಳ ಅವಧಿಯ ಪ್ರಯೋಗ. ಎಷ್ಟೇ ಕ್ಷಿಪ್ರವಾಗಿ ಪರೀಕ್ಷೆ ನಡೆಸಿದರೂ 2021ರ ಮುನ್ನ ಈ ಲಸಿಕೆ ಸಾರ್ವಜನಿಕ ಬಳಕೆಗೆ ದೊರೆಯುವುದು ಕಷ್ಟಸಾಧ್ಯ. ಅಮೆರಿಕದಲ್ಲಿ ಆಸ್ಟ್ರಾಜೆನಿಕಾ ಕಂಪನಿಯು ಅಭಿವೃದ್ಧಿಪಡಿಸುತ್ತಿರುವ ಲಸಿಕೆಯು ಎರಡನೇ ಹಂತದ ಕ್ಲಿನಿಕಲ್ ಟ್ರಯಲ್‌ನಲ್ಲಿದೆ. ಈ ಲಸಿಕೆಯು ಕೋವಿಡ್ ವಿರುದ್ಧ ಹೆಚ್ಚು ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ ಎಂಬುದನ್ನು ಎರಡನೇ ಹಂತದ ಟ್ರಯಲ್ ಮಧ್ಯೆಯೇ ವಿಜ್ಞಾನಿಗಳು ಹೇಳಿದ್ದಾರೆ.

ಬ್ರಿಟನ್ ಆಕ್ಸ್‌ಫರ್ಡ್‌ ವಿಶ್ವವಿದ್ಯಾಲಯದ ಸಹಯೋಗದಲ್ಲಿ ಮತ್ತು ಜರ್ಮನಿಯ ಬಯೋಎನ್‌ಟೆಕ್ ಕಂಪನಿ ಅಮೆರಿಕದ ಕಂಪನಿಗಳ ಸಹಯೋಗದಲ್ಲಿ ಅಭಿವೃದ್ಧಿಪಡಿಸುತ್ತಿರುವ ಲಸಿಕೆಗಳು ಇನ್ನೂ ಎರಡನೇ ಹಂತದ ಕ್ಲಿನಿಕಲ್ ಟ್ರಯಲ್‌ನಲ್ಲಿ ಇವೆ. ಇವು ಸಹ 2021ಕ್ಕೂ ಮುನ್ನ ಸಾರ್ವಜನಿಕ ಬಳಕೆಗೆ ಲಭ್ಯವಾಗುವುದು ಕಷ್ಟಸಾಧ್ಯ.

ಲಸಿಕೆ ತಯಾರಿಕೆಗೆ ಒಪ್ಪಂದ: ಲಸಿಕೆ ಅಭಿವೃದ್ಧಿಯಾದರೆ ಅದನ್ನು ಕೋಟ್ಯಂತರ ಡೋಸ್‌ಗಳಷ್ಟು ತಯಾರು ಮಾಡಬೇಕಾಗುತ್ತದೆ. ಇದಕ್ಕಾಗಿ ಜಗತ್ತಿನ ಹಲವು ಕಂಪನಿಗಳ ಪರಸ್ಪರ ಒಪ್ಪಂದ ಮಾಡಿಕೊಂಡಿವೆ.

ಅಮೆರಿಕದ ಆಸ್ಟ್ರಾಜೆನಿಕಾ ಕಂಪನಿಯು ಭಾರತದ ಸೀರಂ ಕಂಪನಿ ಜತೆ ಲಸಿಕೆ ತಯಾರಿಕೆಗೆ ಒಪ್ಪಂದ ಮಾಡಿಕೊಂಡಿದೆ. ಸೀರಂ ಕಂಪನಿಯು ಸ್ವಿಡ್ಜರ್ಲೆಂಡ್‌ನಲ್ಲೂ ತಯಾರಿಕಾ ಘಟಕ ಹೊಂದಿದ್ದು, ಅಲ್ಲಿ ಲಸಿಕೆ ತಯಾರಿಸಲು ಒಪ್ಪಂದ ಮಾಡಿಕೊಳ್ಳಲಾಗಿದೆ. ಜರ್ಮಿನಿಯ ಬಯೋಎನ್‌ಟೆಕ್ ಕಂಪನಿಯು ಅಮೆರಿಕದ ಫಿಜೆರ್ ಮತ್ತು ಫೋಸನ್ ಫಾರ್ಮಾ ಜತೆ ಒಪ್ಪಂದ ಮಾಡಿಕೊಂಡಿದೆ. ಅಮೆರಿಕದ ಈ ಎರಡೂ ಕಂಪನಿಗಳೂ ಲಸಿಕೆ ಅಭಿವೃದ್ಧಿಪಡಿಸುತ್ತಿವೆ. ಲಸಿಕೆ ಸಿದ್ಧವಾದರೆ, ಬಯೋಎನ್‌ಟೆಕ್ ಅದನ್ನು ತಯಾರಿಸಿಕೊಡಲು ಒಪ್ಪಂದ ಮಾಡಿಕೊಂಡಿದೆ. 

ಲಸಿಕೆ ಅಭಿವೃದ್ಧಿಗೆ ಏಕೆ ಅಷ್ಟು ಕಾಲಾವಕಾಶ?

ಕೋವಿಡ್‌ ತಡೆಗಟ್ಟುವ ಲಸಿಕೆ ಮಾತ್ರವಲ್ಲ; ಯಾವುದೇ ಲಸಿಕೆಯನ್ನು ಶೋಧಿಸುವಾಗಲೂ ಅದಕ್ಕೆ ತುಂಬಾ ಸಮಯ ಬೇಕಾಗುತ್ತದೆ. ಏಕೆಂದರೆ, ಈ ಸಂಶೋಧನೆಯು ತುಂಬಾ ಸಂಕೀರ್ಣ ಹಂತಗಳನ್ನು ಹೊಂದಿರುತ್ತದೆ. ಯಾವುದೇ ಲಸಿಕೆಯು ಬಳಕೆಗೆ ಸಿದ್ಧವಾಗುವ ಮುನ್ನ ಸುದೀರ್ಘವಾದ ತಪಾಸಣಾ ಪ್ರಕ್ರಿಯೆಗೆ ಒಳಗಾಗಬೇಕಾಗುತ್ತದೆ. ಹಾಗೆ ನೋಡಿದರೆ ಈ ತಪಾಸಣಾ ಪ್ರಕ್ರಿಯೆ ಪರಿಪೂರ್ಣವಾಗಿ ಮುಗಿಯಲು 10ರಿಂದ 15 ವರ್ಷಗಳಷ್ಟು ಕಾಲಾವಕಾಶ ಬೇಕಾಗುತ್ತದೆ. ಆದರೆ, ಕೋವಿಡ್‌ ಚಿಕಿತ್ಸೆಗೆ ಬೇಕಾಗಿರುವ ಲಸಿಕೆಗಾಗಿ ಜಗತ್ತಿನ ಹಲವು ಪ್ರಭಾವಿ ಸರ್ಕಾರಗಳು ಹಿಂದೆ ಬಿದ್ದಿದ್ದರಿಂದ ಇನ್ನು ಕೆಲವೇ ತಿಂಗಳಲ್ಲಿ ಸಂಶೋಧನೆಯಲ್ಲಿ ಮಹತ್ವದ ಪ್ರಗತಿ ಸಾಧಿಸುವ ಸಾಧ್ಯತೆ ನಿಚ್ಚಳವಾಗಿದೆ.

ಮೊದಲ ಹಂತ: ವೈರಾಣುವಿನ ಗುಣಲಕ್ಷಣ, ಅದರ ವರ್ತನೆ ಅರಿಯುವುದು

ಎರಡನೇ ಹಂತ: ವೈರಾಣುವಿನ ಪ್ರಭಾವ ನಿಷ್ಕ್ರಿಯಗೊಳಿಸುವಂತೆ ಮಾನವನ ದೇಹದಲ್ಲಿ ರೋಗ ನಿರೋಧ ಶಕ್ತಿ ವೃದ್ಧಿಮಾಡುವ ಲಸಿಕೆ ಕ್ಯಾಂಡಿಡೇಟ್‌ಗಳ ಪತ್ತೆ ಮಾಡುವುದು

ಮೂರನೇ ಹಂತ: ಕ್ಲಿನಿಕಲ್‌ ಪೂರ್ವ ಪ್ರಯೋಗ ನಡೆಸುವುದು ಅಂದರೆ ಪ್ರಾಣಿಗಳ ಮೇಲೆ ಲಸಿಕೆ ಪ್ರಯೋಗ ಮಾಡುವುದು. ಇದರಿಂದ ಲಸಿಕೆಯು ಮನುಷ್ಯನ ಮೇಲೆ ಹೇಗೆ ಪ್ರಭಾವ ಬೀರುತ್ತದೆ ಎನ್ನುವ ಹೊಳಹು ಸಂಶೋಧಕರಿಗೆ ಸಿಗುತ್ತದೆ

ನಾಲ್ಕನೇ ಹಂತ: ಮನುಷ್ಯರ ಮೇಲೆ ಪ್ರಯೋಗ ನಡೆಸುವ ಕ್ಲಿನಿಕಲ್‌ ಟ್ರಯಲ್‌ ಹಂತ ಇದು. ಇದರಲ್ಲೂ ಮೂರು ಹಂತಗಳಿವೆ. ಮೊದಲ ಹಂತದಲ್ಲಿ ಸಣ್ಣ ಪ್ರಮಾಣದ ಡೋಸ್‌ಗಳನ್ನು ನೀಡುವ ಮೂಲಕ ಪರೀಕ್ಷೆ ನಡೆಸಲಾಗುತ್ತದೆ. ಆರೋಗ್ಯವಂತ ವ್ಯಕ್ತಿಗಳ ಮೇಲೆ ಈ ಪ್ರಯೋಗ ನಡೆಯುತ್ತದೆ. ಪರಿಣಾಮಗಳನ್ನು ನೋಡಿ, ಡೋಸ್‌ನ ಪ್ರಮಾಣವನ್ನು ನಿಗದಿ ಮಾಡಲಾಗುತ್ತದೆ. ಈ ಪ್ರಕ್ರಿಯೆ ಮುಗಿಯಲು 3–6 ತಿಂಗಳು ಬೇಕು

ಎರಡನೇ ಹಂತದಲ್ಲಿ ರೋಗಿಗಳಿಗೂ ಲಸಿಕೆ ನೀಡಿ ವಿಸ್ತೃತ ಪರೀಕ್ಷೆ ನಡೆಸಲಾಗುತ್ತದೆ. ನೂರಾರು ರೋಗಿಗಳನ್ನು ಈ ಉದ್ದೇಶಕ್ಕಾಗಿ ಆಯ್ಕೆ ಮಾಡಿಕೊಳ್ಳಲಾಗುತ್ತದೆ. ಇದಕ್ಕೆ ಸಾಮಾನ್ಯ ಸಂದರ್ಭದಲ್ಲಾದರೆ 2–4 ವರ್ಷ ಬೇಕು. ಅಲ್ಲಿನ ಫಲಿತಾಂಶವನ್ನು ನೋಡಿಕೊಂಡು ಕ್ಷಮತೆ ಪರೀಕ್ಷಿಸುವುದು ಕೊನೆಯ ಹಂತ. ಈ ಸಂದರ್ಭದಲ್ಲಿ ಸಾವಿರಾರು ಜನರ ಮೇಲೆ ಪ್ರಯೋಗ ಮಾಡಲಾಗುತ್ತದೆ

ಐದನೇ ಹಂತ: ಸರ್ಕಾರದ ನಿಯಂತ್ರಣ ಪ್ರಾಧಿಕಾರವು ಲಸಿಕೆಯನ್ನು ಪರಿಶೀಲಿಸಿ, ಮಾರುಕಟ್ಟೆಗೆ ಬಿಡುಗಡೆ ಮಾಡಲು ಒಪ್ಪಿಗೆ ನೀಡುವುದು 

ಮೂರನೇ ಹಂತಕ್ಕೆ ಬಂದಿದ್ದು 4 ಲಸಿಕೆ ಮಾತ್ರ

ಕೋವಿಡ್‌ ಚಿಕಿತ್ಸೆಗೆಂದು ಅಭಿವೃದ್ಧಿಪಡಿಸುತ್ತಿರುವ 145ಕ್ಕೂ ಹೆಚ್ಚು ವ್ಯಾಕ್ಸಿನ್ ಕ್ಯಾಂಡಿಡೇಟ್‌ಗಳು ಜಗತ್ತಿನಾದ್ಯಂತ ಪ್ರಯೋಗದಲ್ಲಿವೆ. ಇವುಗಳಲ್ಲಿ ಮಾನವನ ಮೇಲಿನ ಪ್ರಯೋಗದ ಹಂತಕ್ಕೆ ಬಂದಿರುವ ಕ್ಯಾಂಡಿಡೇಟ್‌ಗಳ ಸಂಖ್ಯೆ ಬೆರಳೆಣಿಕೆಯಷ್ಟು ಮಾತ್ರ. ಕೆಲವು ವ್ಯಾಕ್ಸಿನ್ ಕ್ಯಾಂಡಿಡೇಟ್‌ಗಳು ಮೂರನೇ ಹಂತದ ಪ್ರಯೋಗಕ್ಕೂ ಬಂದಿವೆ. ಆದರೆ, 2021ಕ್ಕೂ ಮುನ್ನ ಯಾವ ಲಸಿಕೆಯೂ ಸಾರ್ವಜನಿಕ ಬಳಕೆಗೆ ಲಭ್ಯವಾಗುವುದಿಲ್ಲ ಎಂದು ವಿಜ್ಞಾನಿಗಳು ಹೇಳಿದ್ದಾರೆ.

ಭಾರತದ್ದು ಎರಡು ಲಸಿಕೆ

ಹೈದರಾಬಾದ್‌ನ ಭಾರತ್ ಬಯೋಟೆಕ್ ಕಂಪನಿಯು ಭಾರತೀಯ ವೈದ್ಯಕೀಯ ಸಂಶೋಧನಾ ಪರಿಷತ್ತಿನ (ಐಸಿಎಂಆರ್) ಸಹಯೋಗದಲ್ಲಿ ಅಭಿವೃದ್ಧಿಪಡಿಸಿರುವ ಕೋವ್ಯಾಕ್ಸಿನ್ ಈಗಾಗಲೇ ಮೊದಲ ಹಂತದ ಕ್ಲಿನಿಕಲ್ ಟ್ರಯಲ್‌ಗೆ ಬಂದಿದೆ. ಅಹಮದಾಬಾದ್‌ನ ಝೈಡಸ್ ಕ್ಯಾಡಿಲಾ ಕಂಪನಿ ಅಭಿವೃದ್ಧಿಪಡಿಸಿರುವ ಝೈಕೋವ್‌–ಡಿ ಲಸಿಕೆಯೂ ಕ್ಲಿನಿಕಲ್ ಟ್ರಯಲ್‌ಗೆ ಬಂದಿದೆ.

ಈ ಎರಡೂ ಲಸಿಕೆಗಳು ಮನುಷ್ಯನ ದೇಹದಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ಕೆಲಸ ಮಾಡುತ್ತವೆ. ಕೋವಿಡ್‌ಗೆ ಕಾರಣವಾಗುವ ಕೊರೊನಾವೈರಸ್ ವಿರುದ್ಧ ಸೃಷ್ಟಿಯಾಗುವ ಪ್ರತಿಕಾಯಗಳ ಸಂಖ್ಯೆಯನ್ನು ಹೆಚ್ಚಿಸುವ ಕೆಲಸ ಮಾಡುತ್ತವೆ. ಇವು ಪರಿಣಾಮಕಾರಿಯಾಗಿ ಕೆಲಸ ಮಾಡಲಿವೆ ಎಂದು ನಿರೀಕ್ಷಿಸಲಾಗಿದೆ.

ಎಲ್ಲರಿಗೂ ಸಿಗಲಿದೆಯೇ ಲಸಿಕೆ?

ಲಸಿಕೆ ಅಭಿವೃದ್ಧಿಯಾದರೂ ಅದು ಎಲ್ಲ ದೇಶಗಳಿಗೆ ಸಿಗಲಿದೆಯೇ ಎಂಬುದರ ಬಗ್ಗೆ ಕಳವಳ ವ್ಯಕ್ತವಾಗಿದೆ. ಲಸಿಕೆ ಅಭಿವೃದ್ಧಿಪಡಿಸಿದ ದೇಶವು, ಬೇರೆ ದೇಶಗಳ ಜತೆ ಅದನ್ನು ಹಂಚಿಕೊಳ್ಳುತ್ತದೆಯೇ ಎಂಬುದರ ಬಗ್ಗೆ ಅನುಮಾನ ವ್ಯಕ್ತವಾಗಿದೆ.

ಅಮೆರಿಕದ ಗಿಲೀಡ್ ಸೈನ್ಸಸ್‌ ಕಂಪನಿ ಅಭಿವೃದ್ಧಿಪಡಿಸಿರುವ ರೆಮ್ಡೆಸಿವಿರ್ ಔಷಧವನ್ನು ಭಾರತದಲ್ಲಿ ತುರ್ತು ಸಂದರ್ಭದಲ್ಲಿ ಕೋವಿಡ್ ಚಿಕಿತ್ಸೆಗೆ ಬಳಸಲಾಗುತ್ತಿದೆ. ಭಾರತದ ಎರಡು ಕಂಪನಿಗಳು ಇವನ್ನು ತಯಾರಿಸುತ್ತಿವೆ. ಆದರೆ, ಅಮೆರಿಕದಲ್ಲಿ ಸೆಪ್ಟೆಂಬರ್ ಅಂತ್ಯದವರೆಗೆ ತಯಾರಾಗುವ ಎಲ್ಲಾ ಡೋಸ್‌ಗಳನ್ನು ಅಮೆರಿಕ ಸರ್ಕಾರ ಜೂನ್ ಮೊದಲ ವಾರದಲ್ಲೇ ಖರೀದಿಸಿದೆ. ಹೀಗಾಗಿ ಬೇರೆ ಯಾವುದೇ ರಾಷ್ಟ್ರಕ್ಕೆ ರೆಮ್ಡೆಸಿವಿರ್ ಬೇಕೆಂದರೆ, ಅದು ಅಕ್ಟೋಬರ್‌ವರೆಗೂ ಕಾಯಲೇಬೇಕು.

ಲಸಿಕೆ ವಿಚಾರದಲ್ಲೂ ಹೀಗೇ ಆದರೆ, ಶಕ್ತ ರಾಷ್ಟ್ರವಷ್ಟೇ ಲಸಿಕೆ ಮೇಲೆ ಪ್ರಾಬಲ್ಯ ಸಾಧಿಸಲಿದೆ. ಕೋವಿಡ್ ಲಸಿಕೆಯ ಇಡೀ ಮಾರುಕಟ್ಟೆಯನ್ನು ಆ ರಾಷ್ಟ್ರ ನಿಯಂತ್ರಣಕ್ಕೆ ತೆಗೆದುಕೊಳ್ಳುವ ಅಪಾಯವಿದೆ. ಹೀಗೆ ಆದರೆ, ಆಯಾ ರಾಷ್ಟ್ರಗಳು ತಾವು ಅಭಿವೃದ್ಧಿಪಡಿಸುವ ಲಸಿಕೆಗಳನ್ನೇ ಅವಲಂಬಿಸಬೇಕಾಗುತ್ತದೆ. ಆ ಲಸಿಕೆಗಳು ಸಿದ್ಧವಾಗುವವರೆಗೂ ಕಾಯಬೇಕಾಗುತ್ತದೆ.

ಭಾರತದ ಎರಡು ಲಸಿಕೆಗಳು ಮನುಷ್ಯನ ಮೇಲಿನ ಪ್ರಯೋಗದ ಹಂತಕ್ಕೆ ಬಂದಿವೆ. ಈ ಲಸಿಕೆಗಳು ಯಶಸ್ವಿಯಾದರೆ, ಈ ಅಪಾಯದಿಂದ ಭಾರತ ಬಚಾವಾಗಲಿದೆ.

ಆಧಾರ: ನ್ಯೂಯಾರ್ಕ್ ಟೈಮ್ಸ್‌, ರಾಯಿಟರ್ಸ್‌, ಗ್ಲೋಬಲ್ ಟೈಮ್ಸ್‌, ಪಿಟಿಐ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು