ಮಂಗಳವಾರ, ಜೂನ್ 15, 2021
27 °C

ಆಳ–ಅಗಲ: ಬಿಜೆಪಿ ಕಾಂಗ್ರೆಸ್‌ ಟೂಲ್‌ಕಿಟ್‌ ಜಟಾಪಟಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೋವಿಡ್ ಸಂಕಷ್ಟದ ಈ ಸಮಯದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ವರ್ಚಸ್ಸಿಗೆ ಮಸಿ ಬಳಿಯಲು ಕಾಂಗ್ರೆಸ್‌ ಪಕ್ಷವು ಟೂಲ್‌ಕಿಟ್ ಸಿದ್ಧಪಡಿಸಿದೆ ಎಂದು ಬಿಜೆಪಿ ಆರೋ‍ಪಿಸಿದೆ. ‘#ಕಾಂಗ್ರೆಸ್‌ ಟೂಲ್‌ಕಿಟ್ ಎಕ್ಸ್‌ಪೋಸ್‌ಡ್’ ಎಂಬ ಹ್ಯಾಷ್‌ಟ್ಯಾಗ್‌ನಡಿ ಬಿಜೆಪಿ ವಾಗ್ದಾಳಿ ನಡೆಸಿದೆ. ಈ ಆರೋಪಗಳನ್ನು ಕಾಂಗ್ರೆಸ್ ಸಾರಾಸಗಟಾಗಿ ತಳ್ಳಿಹಾಕಿದೆ. ಬಿಜೆಪಿ ಬಿಡುಗಡೆ ಮಾಡಿರುವುದು ನಕಲಿ ದಾಖಲೆಗಳು ಎಂದಿದೆ. ಬಿಜೆಪಿ ಮುಖಂಡರಾದ ಜೆ.ಪಿ.ನಡ್ಡಾ, ಸಂಬಿತ್ ಪಾತ್ರಾ, ಸ್ಮೃತಿ ಇರಾನಿ, ಬಿ.ಎಲ್.ಸಂತೋಷ್ ಮತ್ತು ಇತರರ ವಿರುದ್ಧ ದೆಹಲಿ ಪೊಲೀಸ್ ಆಯುಕ್ತರಿಗೆ ದೂರು ಸಲ್ಲಿಸಿದೆ. ಬಿಜೆಪಿ ಮುಖಂಡರು ಟ್ವೀಟ್‌ ಮಾಡಿರುವ ಟೂಲ್‌ಕಿಟ್‌ ನಕಲಿ ಎಂದು ಹಲವು ಫ್ಯಾಕ್ಟ್‌ಚೆಕ್‌ ವೇದಿಕೆಗಳು ಹೇಳಿವೆ.

ಟೂಲ್‌ಕಿಟ್ ಎಂದರೇನು?

ಟೂಲ್‌ಕಿಟ್ ಎಂಬುದು ಡಿಜಿಟಲ್ ಯುಗದ ಪ್ರತಿಭಟನೆಗಳಿಗೆ ಸರಕು ಒದಗಿಸುವ ಸಾಧನ. ಕರಪತ್ರಗಳಿಗೆ ಇದು ಸಮನಾಗಿರುತ್ತದೆ. ಪ್ರತಿಭಟನಕಾರರು ಇದನ್ನು ಬಳಸುತ್ತಾರೆ. ಸರಳವಾಗಿ ಹೇಳುವುದಾದರೆ, ಪ್ರತಿಭಟನೆಯನ್ನು ಹೇಗೆ ಮುಂದಕ್ಕೆ ಕೊಂಡೊಯ್ಯಬೇಕು, ಏನು ಮಾಡಬೇಕು, ಯಾವಾಗ ಮತ್ತು ಹೇಗೆ ಮಾಡಬೇಕು ಎಂಬುದನ್ನು ಇದು ವಿವರಿಸುತ್ತದೆ.

ಟೂಲ್‌ಕಿಟ್‌ನಲ್ಲಿ ಏನಿದೆ?

ಬಿಜೆಪಿ ಬಿಡುಗಡೆ ಮಾಡಿರುವ ದಾಖಲೆಗಳು ಎರಡು ಅಂಶಗಳನ್ನು ಒಳಗೊಂಡಿವೆ. ನಾಲ್ಕು ಪುಟಗಳ ಕೋವಿಡ್–19 ಟೂಲ್‌ಕಿಟ್ ಮತ್ತು ನಾಲ್ಕು ಪುಟಗಳ ಸೆಂಟ್ರಲ್ ವಿಸ್ತಾ ಯೋಜನೆಯ ಕುರಿತ ಅಂಶಗಳಿವೆ. ‘ಭಾರತದಲ್ಲಿ ಹುಟ್ಟಿಕೊಂಡಿರುವ ಕೋವಿಡ್‌ನ ಹೊಸ ರೂಪಾಂತರಕ್ಕೆ ‘ಮೋದಿ ತಳಿ’ ಎಂಬ ಪದವನ್ನು ಬಳಸಲು ಸಾಮಾಜಿಕ ಮಾಧ್ಯಮ ಸ್ವಯಂಸೇವಕರಿಗೆ ಕಾಂಗ್ರೆಸ್ ಸಲಹೆ ನೀಡಿದೆ’ ಎಂಬುದು ಬಿಜೆಪಿ ಆರೋಪ.  

ಇತ್ತೀಚೆಗೆ ನಡೆದ ಕುಂಭಮೇಳವು ವೈರಸ್‌ ಹರಡುವಿಕೆಗೆ ಭಾರಿ ವೇಗ ನೀಡಿತ್ತು ಎಂಬ ಅಂಶವನ್ನು ಪ್ರಸ್ತಾಪ ಮಾಡುವಂತೆ ಕಾಂಗ್ರೆಸ್ ಪಕ್ಷವು ತನ್ನ ಕಾರ್ಯಕರ್ತರು, ಸದಸ್ಯರಿಗೆ ಸೂಚಿಸಿದ್ದ ಅಂಶವು ಟೂಲ್‌ಕಿಟ್‌ನಲ್ಲಿ ಉಲ್ಲೇಖವಾಗಿದೆ. ಜೊತೆಗೆ ‘ಈದ್ ಕೂಟಗಳ ಬಗ್ಗೆ ಪ್ರತಿಕ್ರಿಯಿಸಬೇಡಿ’, ‘ಯುವಕಾಂಗ್ರೆಸ್‌ ಅನ್ನು ಟ್ಯಾಗ್ ಮಾಡಿರುವ ಕೋವಿಡ್ ಎಸ್‌ಒಎಸ್ ಸಂದೇಶಗಳಿಗೆ ಮಾತ್ರ ಪ್ರತಿಕ್ರಿಯಿಸಿ’ ಎಂಬ ಅಂಶಗಳನ್ನು ಕಾಂಗ್ರೆಸ್ ತಿಳಿಸಿತ್ತು ಎಂದು ಆಪಾದಿಸಲಾಗಿದೆ.

‘ಈಗಾಗಲೇ ವಿದೇಶಿ ಮಾಧ್ಯಮಗಳಲ್ಲಿ ಪ್ರಕಟವಾಗಿರುವ ಕೊರೊನಾಪೀಡಿತರ ಅಂತ್ಯಕ್ರಿಯೆಯ ಘೋರ ಚಿತ್ರಗಳನ್ನು ಬಳಸಿಕೊಳ್ಳುವಂತೆ ಸೂಚಿಸಲಾಗಿದೆ. ಬಿಜೆಪಿಯ ಹಿರಿಯ ಮುಖಂಡರಿಗೆ ನಿರ್ದಿಷ್ಟ ವಿಶೇಷಣಗಳನ್ನು ಬಳಸಲು ‘ಟೂಲ್‌ಕಿಟ್’ ಸಲಹೆ ನೀಡುತ್ತದೆ. ಉದಾಹರಣೆಗೆ, ‘ಕಾಣೆಯಾದ ಅಮಿತ್ ಶಾ’, ‘ನಿರ್ಬಂಧಿತ ಜೈಶಂಕರ್’, ‘ನಿರ್ಲಕ್ಷಿತ ರಾಜನಾಥ್ ಸಿಂಗ್’ ಎಂಬುದಾಗಿ ಕರೆಯಲು ಸೂಚಿಸಲಾಗಿದೆ ಎಂಬುದು ಆರೋಪ. 

ನರೇಂದ್ರ ಮೋದಿ ಅವರ ಕನಸಿನ ‘ಸೆಂಟ್ರಲ್ ವಿಸ್ತಾ ಯೋಜನೆ’ಯನ್ನು ಎರಡನೇ ಭಾಗ ವಿಶ್ಲೇಷಣೆಗೆ ಒಳಪಡಿಸಿದೆ. ಯೋಜನೆಯ ವೆಚ್ಚ, ಪರಿಸರದ ಮೇಲೆ ಯೋಜನೆಯ ದುಷ್ಪರಿಣಾಮವನ್ನು ಪಟ್ಟಿ ಮಾಡಿದೆ. 

ಬಿಜೆಪಿ ಹೇಳುವುದೇನು?

ಕಾಂಗ್ರೆಸ್‌ ಸಿದ್ಧಪಡಿಸಿದೆ ಎಂದು ಆರೋಪಿಸಲಾಗಿರುವ ಟೂಲ್‌ಕಿಟ್‌ ಬಿಜೆಪಿಯನ್ನು ಕೆರಳಿಸಿದೆ. ಎಬಿವಿಪಿಯ ಅಧಿಕೃತ ಟ್ವಿಟರ್ ಖಾತೆಯು ಈ ಟೂಲ್‌ಕಿಟ್‌ ಅನ್ನು  ಹಂಚಿಕೊಂಡಿದೆ. 

ಪಕ್ಷದ ಅಧ್ಯಕ್ಷ ಜೆ.ಪಿ. ನಡ್ಡಾ, ಮುಖಂಡರಾದ ಸ್ಮೃತಿ ಇರಾನಿ, ತೀರಥ್ ಸಿಂಗ್ ರಾವುತ್, ಪೀಯೂಷ್ ಗೋಯಲ್, ರಾಜ್ಯವರ್ಧನ್ ರಾಥೋಡ್, ತೇಜಸ್ವಿ ಸೂರ್ಯ, ಕಿರಣ್ ರಿಜಿಜು, ಅನುರಾಗ್ ಠಾಕೂರ್, ಪಿ.ಸಿ. ಮೋಹನ್, ಹರ್ದೀಪ್ ಸಿಂಗ್ ಪುರಿ, ಡಾ. ವಿನಯ್ ಸಹಸ್ರಬುದ್ಧೆ, ಅಮಿತ್ ಮಾಳವೀಯ, ಸಂಬಿತ್ ಪಾತ್ರಾ, ಬಿ.ಎಲ್.ಸಂತೋಷ್, ಪ್ರೀತಿ ಗಾಂಧಿ, ಸಿ.ಟಿ.ರವಿ, ಸಿಟಿಆರ್ ನಿರ್ಮಲ್ ಕುಮಾರ್ ಮೊದಲಾದವರು ಕಾಂಗ್ರೆಸ್‌ ಅನ್ನು ಖಂಡಿಸಿದ್ದಾರೆ. 

ಈ ಜಾಗತಿಕ ಸಂಕಷ್ಟದ ಸಮಯದಲ್ಲಿ ತಪ್ಪು ಮಾಹಿತಿಯನ್ನು ಹರಡಲು ಪ್ರಯತ್ನಿಸುವುದು ಶೋಚನೀಯ ಸಂಗತಿ ಎಂದು ಕೇಂದ್ರ ಆರೋಗ್ಯ ಸಚಿವ ಡಾ. ಹರ್ಷವರ್ಧನ್ ಆರೋಪಿಸಿದ್ದಾರೆ. 

‘ಇಡೀದೇಶ ಆರೋಗ್ಯ ಸಂಕಷ್ಟವನ್ನು ಎದುರಿಸುತ್ತಿರುವ ಸಂದರ್ಭದಲ್ಲಿ ವಿರೋಧ ಪಕ್ಷವು ತನ್ನ ರಾಜಕೀಯ ಮಹತ್ವಾಕಾಂಕ್ಷೆಗಳನ್ನು ಬಲಪಡಿಸಿಕೊಳ್ಳಲು ಯತ್ನಿಸುತ್ತಿರುವುದನ್ನು ಜನರು ನೋಡುತ್ತಿದ್ದಾರೆ’ ಎಂದು ಸಂಬಿತ್ ಪಾತ್ರಾ ಹೇಳಿದ್ದಾರೆ.

‘ಟೂಲ್‌ಕಿಟ್‌ನಲ್ಲಿ, ‘ಪ್ರಧಾನಿ ನರೇಂದ್ರ ಮೋದಿಯ ಖ್ಯಾತಿ’ ಎಂಬ ಭಾಗವಿದೆ. ಅದರಲ್ಲಿ, ಪ್ರಧಾನಿಯವರ ಖ್ಯಾತಿಗೆ ಧಕ್ಕೆ ತರುವಂತೆ ಮತ್ತು ಜನಪ್ರಿಯತೆಯನ್ನು ಕುಗ್ಗಿಸುವಂತೆ ಸೂಚನೆಗಳನ್ನು ನೀಡಲಾಗಿದೆ’ ಎಂದು ಗಂಭೀರವಾಗಿ ಆರೋಪಿಸಿದ್ದಾರೆ. 

‘ಸಮಾಜವನ್ನು ಒಡೆಯುವುದು ಮತ್ತು ಇತರರ ವಿರುದ್ಧ ವಿಷ ಹರಡುವುದರಲ್ಲಿ ಕಾಂಗ್ರೆಸ್ಸಿಗರು ನಿಸ್ಸೀಮರು. ಭಾರತವು ಕೋವಿಡ್-19‌ ವಿರುದ್ಧ ಹೋರಾಟ ನಡೆಸುತ್ತಿದ್ದು, ಕಾಂಗ್ರೆಸ್‌ನ ನಡೆಯನ್ನು ಗಮನಿಸುತ್ತಿದೆ. ಕಾಂಗ್ರೆಸ್‌, ಟೂಲ್‌ಕಿಟ್‌ ಮಾದರಿಗಳನ್ನು ಮೀರಿ, ದೇಶಕ್ಕಾಗಿ ರಚನಾತ್ಮಕವಾಗಿ ಏನನ್ನಾದರೂ ಮಾಡಬೇಕೆಂದು‌ ಒತ್ತಾಯಿಸುತ್ತೇನೆ’ ನಡ್ಡಾ ಟ್ವೀಟ್‌ ಮಾಡಿದ್ದಾರೆ. 

‘ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಅವರು ಏಪ್ರಿಲ್ 29ರಂದು ಸಾಮೂಹಿಕ ಅಂತ್ಯಸಂಸ್ಕಾರದ ಚಿತ್ರವನ್ನು ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಪ್ರಕಟಿಸಿದ್ದರು. ಏಪ್ರಿಲ್ 25ರಂದು ನ್ಯೂಯಾರ್ಕ್ ಟೈಮ್ಸ್ ಇಂತಹದೇ ಚಿತ್ರವನ್ನು ಬಳಸಿತ್ತು. ಇದಾದ ಕೆಲ ವಾರಗಳಲ್ಲಿ ಟೂಲ್‌ಕಿಟ್ ಸಿದ್ಧವಾಗಿದ್ದರೂ, ಪತ್ರಿಕಾ ವರದಿಗೆ ಟೂಲ್‌ಕಿಟ್ ಕಾರಣ’ ಎಂದು ಸರ್ಕಾರದ ಆನ್‌ಲೈನ್ ಸಿಟಿಜನ್ ಎಂಗೇಜ್‌ಮೆಂಟ್ ಕಾರ್ಯಕ್ರಮ ‘ಮೈಗೌಇಂಡಿಯಾ’ದ ಮಾಜಿ ನಿರ್ದೇಶಕ ಅಖಿಲೇಶ್ ಮಿಶ್ರಾ ಆಪಾದಿಸಿದ್ದಾರೆ.

‘ಮನೆಗೆ ಮಗನೂ ಆಗಲಿಲ್ಲ ಸ್ಮಶಾನಕ್ಕೆ ಹೆಣವೂ ಆಗಲಿಲ್ಲ’ ಎನ್ನುವಂತಹ ಒಂದು ರಾಜಕೀಯ ಪಕ್ಷ ನಮ್ಮ ದೇಶದಲ್ಲಿ ಇದ್ದರೆ ಅದು ಕಾಂಗ್ರೆಸ್. ಜನ ಕಾಂಗ್ರೆಸ್ ಪಕ್ಷವನ್ನು ಸೋಲಿಸಿ ಮೂಲೆಗುಂಪು ಮಾಡಿದ್ದರೂ ಅವರಿಗಿನ್ನೂ ಬುದ್ಧಿ ಬಂದಿಲ್ಲ...’ ಎಂದು ಬಿಜೆಪಿ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಟ್ವೀಟ್ ಮಾಡಿದ್ದಾರೆ. 

ಬಿಜೆಪಿ ನಾಯಕರ ವಿರುದ್ಧ ಕಾಂಗ್ರೆಸ್ ದೂರು

‘ಬಿಜೆಪಿ ಹೇಳುತ್ತಿರುವ ಟೂಲ್‌ಕಿಟ್ ಅನ್ನು ತಾವು ಸಿದ್ಧಪಡಿಸಿಲ್ಲ’ ಎಂದು ಕಾಂಗ್ರೆಸ್‌ನ ಸಂಶೋಧನಾ ಘಟಕದ ಮುಖ್ಯಸ್ಥ ರಾಜೀವ್ ಗೌಡ ಅವರು ಹೇಳಿದ್ದಾರೆ. ‘ಬಿಜೆಪಿಯ ಸಂಬಿತ್ ಪಾತ್ರಾ ಅವರು ಬಿಡುಗಡೆ ಮಾಡಿರುವ ದಾಖಲೆಗಳಲ್ಲಿ ಸೆಂಟ್ರಲ್‌ ವಿಸ್ತಾ ಯೋಜನೆಗೆ ಸಂಬಂಧಿಸಿದ ದಾಖಲೆಯನ್ನು ನಾವೇ ಸಿದ್ಧಪಡಿಸಿದ್ದು. ಆದರೆ, ಕೇಂದ್ರ ಸರ್ಕಾರ ಮತ್ತು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಟೂಲ್‌ಕಿಟ್‌ ಅನ್ನು ನಾವು ಸಿದ್ಧಪಡಿಸಿಲ್ಲ’ ಎಂದು ರಾಜೀವ್ ಗೌಡ ಅವರು ವಿವಾದ ಸೃಷ್ಟಿಯಾದ ಮೊದಲ ದಿನವೇ ಟ್ವಿಟ್ ಮಾಡಿದ್ದರು.

‘ನಮ್ಮ ಪಕ್ಷ ಮತ್ತು ಪಕ್ಷದ ಸಂಶೋಧನಾ ಘಟಕದ ಲೆಟರ್‌ಹೆಡ್‌ ಅನ್ನು ನಕಲು ಮಾಡಿ, ‘ಟೂಲ್‌ಕಿಟ್‌’ ಸಿದ್ಧಪಡಿಸಲಾಗಿದೆ. ಈ ಸಂಬಂಧ ಬಿಜೆಪಿ ನಾಯಕರ ವಿರುದ್ಧ ಫೋರ್ಜರಿ ಪ್ರಕರಣ ದಾಖಲಿಸುತ್ತೇವೆ’ ಎಂದು ರಾಜೀವ್ ಹೇಳಿದ್ದರು. ಈ ಪ್ರಕಾರ ರಾಜೀವ್ ಮತ್ತು ಪಕ್ಷದ ಪದಾಧಿಕಾರಿಗಳು ದೆಹಲಿ ಪೊಲೀಸರಿಗೆ ದೂರು ನೀಡಿದ್ದಾರೆ.

ಸಂಬಿತ್ ಪಾತ್ರಾ, ಬಿಜೆಪಿ ಅಧ್ಯಕ್ಷ ಜೆ.ಪಿ.ನಡ್ಡಾ, ಸಚಿವೆ ಸ್ಮೃತಿ ಇರಾನಿ ಮತ್ತು ಈ ದಾಖಲೆಗಳನ್ನು ಹಂಚಿಕೊಂಡಿದ್ದ ಪಕ್ಷದ ಎಲ್ಲಾ ನಾಯಕರ ವಿರುದ್ಧ ದೆಹಲಿ ಪೊಲೀಸರಿಗೆ ದೂರು ನೀಡಿದ್ದಾರೆ. ಈ ದೂರಿನ ಅನ್ವಯ ಎಫ್‌ಐಆರ್ ದಾಖಲಾಗಿದೆಯೇ ಇಲ್ಲವೇ ಎಂಬುದರ ಮಾಹಿತಿ ಬಹಿರಂಗವಾಗಿಲ್ಲ. ಕಾಂಗ್ರೆಸ್‌ ಆಗಲೀ, ಪೊಲೀಸರಾಗಲೀ ಈ ಬಗ್ಗೆ ಮಾಹಿತಿ ನೀಡಿಲ್ಲ.

ಇದೇ 19ರ ಬುಧವಾರ ಸಹ ಸಂಬಿತ್ ಪಾತ್ರಾ ಅವರು ‘ಈ ದಾಖಲೆಯನ್ನು ಕಾಂಗ್ರೆಸ್ ಸಂಶೋಧನಾ ಘಟಕದ ಸೌಮ್ಯ ವರ್ಮಾ ಎಂಬುವವರು ಸಿದ್ಧಪಡಿಸಿದ್ದಾರೆ’ ಎಂದು ಮತ್ತೊಂದು ಸ್ಕ್ರೀನ್‌ಶಾಟ್ ಅನ್ನು ಟ್ವೀಟ್ ಮಾಡಿದ್ದರು. ಇದಕ್ಕೂ ಕಾಂಗ್ರೆಸ್ ಸಮರ್ಥನೆ ನೀಡಿದೆ. ‘ಸೆಂಟ್ರಲ್ ವಿಸ್ತಾಗೆ ಸಂಬಂಧಿಸಿದ ದಾಖಲೆಯನ್ನು ಸೌಮ್ಯ ವರ್ಮಾ ಅವರೇ ಸಿದ್ಧಪಡಿಸಿದ್ದಾರೆ. ಆದರೆ ಬಿಜೆಪಿ ಹೇಳುತ್ತಿರುವ ಟೂಲ್‌ಕಿಟ್‌ನ ಮೂಲ ದಾಖಲೆಯನ್ನು ನೀಡಲಿ. ಅದು ಎಷ್ಟು ಸಾಚಾ ಎಂಬುದನ್ನು ಪತ್ತೆ ಮಾಡಲು ವಿಧಿವಿಜ್ಞಾನ ಪರೀಕ್ಷೆ ನಡೆಯಲಿ’ ಎಂದು ರಾಜೀವ್ ಗೌಡ ಸವಾಲು ಹಾಕಿದ್ದಾರೆ. ಬಿಜೆಪಿ ನಾಯಕರು ಇದಕ್ಕೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ಟ್ವಿಟರ್ ಖಾತೆ ಸ್ಥಗಿತಕ್ಕೆ ಮನವಿ: ‘ಬಿಜೆಪಿ ಅಧ್ಯಕ್ಷ ಜೆ.ಪಿ.ನಡ್ಡಾ, ಬಿ.ಎಲ್.ಸಂತೋಷ್, ಸಂಬಿತ್ ಪಾತ್ರಾ ಮತ್ತು ಕೇಂದ್ರ ಸಚಿವೆ ಸ್ಮೃತಿ ಇರಾನಿ ಅವರು ಸುಳ್ಳು ಸುದ್ದಿಗಳು ಮತ್ತು ತಪ್ಪು ಮಾಹಿತಿಯನ್ನು ಹಂಚಿಕೊಳ್ಳಲು ಟ್ವಿಟರ್ ಅನ್ನು ಬಳಸಿಕೊಳ್ಳುತ್ತಿದ್ದಾರೆ. ಈ ಮೂಲಕ ಸಮಾಜದಲ್ಲಿ ಅಶಾಂತಿ ಮೂಡಿಸಲು ಯತ್ನಿಸುತ್ತಿದ್ದಾರೆ. ಇವರೆಲ್ಲರ ಟ್ವಿಟರ್ ಖಾತೆಗಳನ್ನು ಶಾಶ್ವತವಾಗಿ ಸ್ಥಗಿತಗೊಳಿಸಬೇಕು’ ಎಂದು ಕಾಂಗ್ರೆಸ್‌, ಟ್ವಿಟರ್‌ಗೆ ಪತ್ರ ಬರೆದಿದೆ.

ಟೂಲ್‌ಕಿಟ್ ನಕಲಿ ಆಲ್ಟ್‌ನ್ಯೂಸ್‌, ದಿ ವೈರ್

ಕಾಂಗ್ರೆಸ್ ಸಿದ್ಧಪಡಿಸಿದೆ ಎಂದು ಬಿಜೆಪಿ ಹೇಳುತ್ತಿರುವ ಟೂಲ್‌ಕಿಟ್ ಅಸಲಿಯೇ ಅಥವಾ ನಕಲಿಯೇ ಎಂಬ ಚರ್ಚೆ ಆರಂಭವಾಗಿದೆ. ಈ ಬಗ್ಗೆ ಹಲವು ಫ್ಯಾಕ್ಟ್‌ಚೆಕ್ ವೇದಿಕೆಗಳು ಪರಿಶೀಲನೆ ನಡೆಸಿವೆ. ಆಲ್ಟ್‌ನ್ಯೂಸ್ ಮತ್ತು ದಿ ವೈರ್‌ ಫ್ಯಾಕ್ಟ್‌ಚೆಕ್ ಪ್ರಕಟಿಸಿದ್ದು, ಟೂಲ್‌ಕಿಟ್ ಹೆಸರಿನಲ್ಲಿ ನಕಲಿ ದಾಖಲೆಯನ್ನು ಬಿಜೆಪಿ ಬಿಡುಗಡೆ ಮಾಡಿವೆ ಎಂದು ಹೇಳಿವೆ.

‘ಸಂಬಿತ್ ಪಾತ್ರಾ ಅವರು ಟ್ವೀಟ್‌ನಲ್ಲಿ ತಲಾ ನಾಲ್ಕು ಪುಟಗಳ ಎರಡು ದಾಖಲೆಗಳನ್ನು ಬಿಡುಗಡೆ ಮಾಡಿದ್ದರು. ಅದರಲ್ಲಿ ಒಂದು ಸೆಂಟ್ರಲ್ ವಿಸ್ತಾಗೆ ಸಂಬಂಧಿಸಿದ್ದು. ಎರಡನೆಯದ್ದು, ಟೂಲ್‌ಕಿಟ್. ಸೆಂಟ್ರಲ್ ವಿಸ್ತಾ ದಾಖಲೆ ನಾವೇ ಸಿದ್ಧಪಡಿಸಿದ್ದು ಎಂದು ಕಾಂಗ್ರೆಸ್‌ನ ಸಂಶೋಧನಾ ಘಟಕ ಒಪ್ಪಿಕೊಂಡಿದೆ. ಸೆಂಟ್ರಲ್ ವಿಸ್ತಾ ದಾಖಲೆಯಲ್ಲಿರುವ ಕಾಂಗ್ರೆಸ್‌ನ ಲೆಟರ್‌ಹೆಡ್‌ಗೂ, ಟೂಲ್‌ಕಿಟ್‌ನಲ್ಲಿರುವ ಲೆಟರ್‌ಹೆಡ್‌ಗೂ ವ್ಯತ್ಯಾಸವಿದೆ. ಅಕ್ಷರಗಳು, ಸಂಖ್ಯೆಗಳ ವಿನ್ಯಾಸದಲ್ಲಿ ವ್ಯತ್ಯಾಸವಿದೆ’ ಎಂದು ಆಲ್ಟ್‌ನ್ಯೂಸ್ ಹೇಳಿದೆ.

‘ಬಿಜೆಪಿ ಬಿಡುಗಡೆ ಮಾಡಿರುವ ಟೂಲ್‌ಕಿಟ್‌ನಲ್ಲಿ ಮುಂದಿನ ದಿನಗಳಲ್ಲಿ ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆ ಮಾಹಿತಿ ಇದೆ. ಟೂಲ್‌ಕಿಟ್‌ನಲ್ಲಿರುವ ದಿನಾಂಕದ ಪ್ರಕಾರ ಅದನ್ನು ಮೇ ತಿಂಗಳಿನಲ್ಲಿ ಸಿದ್ಧಪಡಿಸಲಾಗಿದೆ. ವಿದೇಶಿ ಮಾಧ್ಯಮಗಳಲ್ಲಿ ಮೋದಿಯನ್ನು ತೆಗಳಿ ಬರಹಗಳು ಪ್ರಕಟವಾಗುವಂತೆ ನೋಡಿಕೊಳ್ಳಬೇಕು ಎಂದು ಆ ದಾಖಲೆಯಲ್ಲಿ ಇದೆ. ಆದರೆ, ಏಪ್ರಿಲ್‌ ತಿಂಗಳಿನಲ್ಲಿಯೇ ಅಂತಹ ಬರಹಗಳು ಮತ್ತು ವರದಿಗಳು ವಿದೇಶಿ ಮಾಧ್ಯಮಗಳಲ್ಲಿ ಪ್ರಕಟವಾಗಿವೆ’ ಎಂದು ಆಲ್ಟ್‌ನ್ಯೂಸ್ ವಿವರಿಸಿದೆ.

‘ಇನ್ನು ‘ಮೋದಿ ಸ್ಟ್ರೈನ್‌’ ಮತ್ತು ‘ಇಂಡಿಯನ್ ಸ್ಟ್ರೈನ್‌’ ಎಂಬ ಪದಗಳನ್ನು ಬಳಸಿ ಎಂದು ದಾಖಲೆಯಲ್ಲಿ ಹೇಳ ಲಾಗಿದೆ. ಮೇ 1ರಿಂದ ಮೇ 17ರವರೆಗೆ ಈ ಎರಡೂ ಪದಗಳು ಮತ್ತು ಹ್ಯಾಷ್‌ಟ್ಯಾಗ್‌ಗಳನ್ನು ಬಳಸಿ ಪ್ರಕಟವಾಗಿರುವ ವರದಿಗಳನ್ನು ಹಾಗೂ ಸಾಮಾಜಿಕ ಜಾಲತಾಣ ಪೋಸ್ಟ್‌ಗಳನ್ನು ಪರಿಶೀಲಿಸಲಾಗಿದೆ. ಭಾರತದ ಬಹುತೇಕ ಎಲ್ಲಾ ಮಾಧ್ಯಮಗಳು ‘ಇಂಡಿಯನ್ ಸ್ಟ್ರೈನ್‌’ ಎಂಬ ಪದವನ್ನು ಬಳಸಿವೆ. ಇನ್ನು ಸಂಬಿತ್ ಪಾತ್ರಾ ಅವರು ಈ ದಾಖಲೆಗಳನ್ನು ಬಿಡುಗಡೆ ಮಾಡಿದ ನಂತರ 15 ಬಾರಿ ಮಾತ್ರ ಇಂಡಿಯನ್ ಸ್ಟ್ರೈನ್‌ ಎಂಬ ಹ್ಯಾಷ್‌ಟ್ಯಾಗ್ ಟ್ವೀಟ್ ಆಗಿದೆ. 15 ಬಾರಿಯೂ ಬಿಜೆಪಿ ನಾಯಕರೇ ಅದನ್ನು ಟ್ವೀಟ್ ಮಾಡಿದ್ದಾರೆ. ಏಪ್ರಿಲ್‌ನಲ್ಲಾಗಲೀ, ಮೇನಲ್ಲಾಗಲೀ ಕಾಂಗ್ರೆಸ್ ನಾಯಕರು ಮತ್ತು ಕಾರ್ಯಕರ್ತರು ಈ ಹ್ಯಾಷ್‌ಟ್ಯಾಗ್‌ ಅನ್ನು ಬಳಸಿಲ್ಲ’ ಎಂದು ಆಲ್ಟ್‌ನ್ಯೂಸ್ ವಿವರಿಸಿದೆ.

‘ಮೋದಿ ಸ್ಟ್ರೈನ್‌’ ಎಂಬ ಹ್ಯಾಷ್‌ಟ್ಯಾಗ್‌ ಅನ್ನು ಈವರೆಗೆ 5 ಬಾರಿ ಮಾತ್ರ ಟ್ವೀಟ್ ಮಾಡಲಾಗಿದೆ. ಕಾಂಗ್ರೆಸ್‌ನ ನಾಯಕರು ಮತ್ತು ಕಾರ್ಯಕರ್ತರು ಈ ಹ್ಯಾಷ್‌ಟ್ಯಾಗ್ ಅನ್ನು ಬಳಸಿಯೇ ಇಲ್ಲ. ಹೀಗಾಗಿ ಬಿಜೆಪಿ ಹೇಳುತ್ತಿರುವಂತೆ ಈ ಟೂಲ್‌ಕಿಟ್ ಅನ್ನು ಕಾಂಗ್ರೆಸ್ ಸಿದ್ಧಪಡಿಸಿಲ್ಲ. ಕಾಂಗ್ರೆಸ್‌ನ ಲೆಟರ್‌ಹೆಡ್‌ ಅನ್ನು ನಕಲು ಮಾಡಿ, ಈ ಟೂಲ್‌ಕಿಟ್ ಸಿದ್ಧಪಡಿಸಲಾಗಿದೆ. ಆದರೆ, ಲೆಟರ್‌ಹೆಡ್‌ ಸಹ ತಪ್ಪಾಗಿರುವ ಕಾರಣ ಇದು ನಕಲಿ ಟೂಲ್‌ಕಿಟ್ ಮತ್ತು ಈ ಟೂಲ್‌ಕಿಟ್‌ ಅನ್ನು ಕಾಂಗ್ರೆಸ್‌ ಸಿದ್ಧಪಡಿಸಿದೆ ಎಂಬುದು ಸುಳ್ಳು ಸುದ್ದಿ ಎಂದು ಸಾಬೀತಾಗಿದೆ’ ಎಂದು ಆಲ್ಟ್‌ನ್ಯೂಸ್ ವಿಶ್ಲೇಷಿಸಿದೆ.

ದಿ ವೈರ್ ವರದಿ: ‘ಸೌಮ್ಯ ವರ್ಮಾ ಅವರು ಈ ದಾಖಲೆ ಸಿದ್ಧಪಡಿಸಿದ್ದಾರೆ’ ಎಂದು ಸಂಬಿತ್ ಪಾತ್ರಾ ಅವರು ಟ್ವೀಟ್ ಮಾಡಿದ್ದ ಸ್ಕ್ರೀನ್‌ಶಾಟ್ ಅನ್ನು ದಿ ವೈರ್ ಪರಿಶೀಲಿಸಿದೆ. ಸೆಂಟ್ರಲ್ ವಿಸ್ತಾ ದಾಖಲೆಯ ಡಿಜಿಟಲ್ ಪ್ರಾಪರ್ಟಿ ವಿವರವನ್ನು ಈ ಸ್ಕ್ರೀನ್‌ಶಾಟ್ ಒಳಗೊಂಡಿದೆ. ಈ ದಾಖಲೆಯನ್ನು ಮೈಕ್ರೊಸಾಫ್ಟ್‌ ವರ್ಡ್‌ನಲ್ಲಿ ಸಿದ್ಧಪಡಿಸಿ, ಅಲ್ಲಿಯೇ ಪಿಡಿಎಫ್ ಆಗಿ ಪರಿರ್ತಿಸಲಾಗಿದೆ ಎಂದು ಪ್ರಾಪರ್ಟಿ ಹೇಳುತ್ತದೆ.

‘ವಾಟ್ಸ್‌ಆ್ಯಪ್‌ನಲ್ಲಿ ಈ ದಾಖಲೆಯನ್ನು ಡೌನ್‌ಲೋಡ್ ಮಾಡಿಕೊಂಡಿರುವ ಕಾರಣ, ಈ ಕಡತ ವಾಟ್ಸ್‌ಆ್ಯಪ್‌ನ ಯುಆರ್‌ಎಲ್‌ ತೋರಿಸುತ್ತದೆ. ಆದರೆ, ಇಂತಹ ಕಡತಗಳಿಗೆ ವಾಟ್ಸ್‌ಆ್ಯಪ್ ನೀಡುವ ಯುಆರ್‌ಎಲ್‌ಗೂ, ಸಂಬಿತ್ ಪಾತ್ರಾ ಅವರು ನೀಡಿರುವ ಸ್ಕ್ರೀನ್‌ಶಾಟ್‌ನಲ್ಲಿರುವ ಯುಆರ್‌ಎಲ್‌ಗೂ ಭಾರಿ ವ್ಯತ್ಯಾಸವಿದೆ. ಸಂಬಿತ್ ಪಾತ್ರಾ ಅವರು ನೀಡಿರುವ ಸ್ಕ್ರೀನ್‌ಶಾಟ್‌ನಲ್ಲಿರುವ ಮಾಹಿತಿ ನಕಲಿ ಎಂದು ತಜ್ಞರು ಹೇಳಿದ್ದಾರೆ’ ಎಂದು ದಿ ವೈರ್ ವರದಿ ಮಾಡಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು