ಭಾನುವಾರ, ಸೆಪ್ಟೆಂಬರ್ 26, 2021
27 °C
ಆಧುನಿಕ ಚಿಕಿತ್ಸಾ ಪದ್ಧತಿ ಪ್ರಶ್ನಿಸಿದ ರಾಮದೇವ್‌ ವಿರುದ್ಧ ವೈದ್ಯಕೀಯ ಮಂಡಳಿ ಕೆಂಡ

ಆಳ-ಅಗಲ: ಅಲೋಪಥಿ ಜತೆ ಯೋಗಗುರು ಗುದ್ದಾಟ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಯೋಗಗುರು ರಾಮದೇವ್ ಮತ್ತು ಭಾರತೀಯ ವೈದ್ಯಕೀಯ ಮಂಡಳಿ (ಐಎಂಎ) ನಡುವಿನ ಜಟಾಪಟಿ ಜೋರಾಗಿದೆ. ಅಲೋಪಥಿ ವೈದ್ಯಕೀಯ ಪದ್ಧತಿಗೆ ಕೊರೊನಾ ವೈರಸ್‌ಗೆ ಚಿಕಿತ್ಸೆ ನೀಡುವ ಸಾಮರ್ಥ್ಯವಿದೆಯೇ ಎಂಬುದಾಗಿ ರಾಮದೇವ್ ಪ್ರಶ್ನಿಸುವ ಮೂಲಕ ವಿವಾದದ ಕಿಡಿ ಹೊತ್ತಿಕೊಂಡಿತು. ಅಲೋಪಥಿ ಚಿಕಿತ್ಸೆ ಪಡೆದಿದ್ದರಿಂದಲೇ ಲಕ್ಷಾಂತರ ಜನರು ಸಾಯುವಂತಾಗಿದೆ ಎಂದು ಪ್ರತಿಪಾದಿಸಿದರು.

ರಾಮದೇವ್ ಅವರ ಈ ಹೇಳಿಕೆಯು ವೈದ್ಯಕೀಯ ಲೋಕದಲ್ಲಿ ಆಕ್ರೋಶ ಹುಟ್ಟುಹಾಕಿತು. ಆಧುನಿಕ ವೈದ್ಯಪದ್ಧತಿಯ ಸಾಮರ್ಥ್ಯವನ್ನು ಪ್ರಶ್ನಿಸಿದ ರಾಮದೇವ್ ವಿರುದ್ಧ ವೈದ್ಯಕೀಯ ಮಂಡಳಿ ಕೆಂಡವಾಯಿತು. ‘ರಾಮದೇವ್ ಅವರು ಇಂತಹ ಹೇಳಿಕೆ ನೀಡಿದರೆ, ಅವರ ಬೆಂಬಲಿಗರು ಹಾಗೂ ಅನುಯಾಯಿಗಳು ಅವರ ಮಾತನ್ನು ನಿಜ ಎಂದುಕೊಳ್ಳುತ್ತಾರೆ. ಆಧುನಿಕ ವೈದ್ಯಕೀಯ ಪದ್ಧತಿ ಬಗ್ಗೆ ಸಂಶಯ ಮೂಡುತ್ತದೆ. ಜನರಲ್ಲಿ ಗೊಂದಲ ಶುರುವಾಗುತ್ತದೆ’ ಎಂದು ಮಂಡಳಿಯು ಕಳವಳ ವ್ಯಕ್ತಪಡಿಸಿತ್ತು.

ಆಕ್ರೋಶಗೊಂಡ ಮಂಡಳಿಯು ರಾಮದೇವ್ ಬಂಧನಕ್ಕೂ ಪಟ್ಟು ಹಿಡಿಯಿತು. ಅಲ್ಲದೇ, ₹1,000 ಕೋಟಿ ಮೊತ್ತದ ಮಾನನಷ್ಟ ಮೊಕದ್ದಮೆ ಹೂಡಿತು. ‘ರಾಮದೇವ್ ಅವರು ತಮ್ಮ ಹೇಳಿಕೆಗೆ 15 ದಿನದೊಳಗೆ ಕ್ಷಮೆ ಯಾಚಿಸಬೇಕು. ಇಲ್ಲವಾದಲ್ಲಿ ಸಾವಿರ ಕೋಟಿ ರೂಪಾಯಿ ಪರಿಹಾರ ನೀಡಬೇಕು’ ಎಂದು ಮಂಡಳಿ ತಿಳಿಸಿತ್ತು.

‘ಸ್ವತಃ ವೈದ್ಯರಾಗಿರುವ ಕೇಂದ್ರ ಸಚಿವ ಹರ್ಷವರ್ಧನ್ ಅವರು ರಾಮದೇವ್ ಅವರ ಹೇಳಿಕೆಯನ್ನು ಒಪ್ಪುತ್ತಾರೆಯೇ’ ಎಂದು ಐಎಂಎ ಪ್ರಶ್ನಿಸಿತ್ತು. ಹರ್ಷವರ್ಧನ್ ಅವರು ರಾಮದೇವ್ ವಿರುದ್ಧ ಕ್ರಮಕ್ಕೆ ಮುಂದಾಗಬೇಕು. ಇಲ್ಲವೇ, ರಾಮದೇವ್ ಹೇಳಿದ ಹಾಗೆ  ಅಲೋಪಥಿ ವೈದ್ಯಕೀಯ ಪದ್ಧತಿ ಸರಿಯಿಲ್ಲ ಎಂದು ಪರಿಗಣಿಸಿ, ಇಡೀ ವೈದ್ಯ ಪದ್ಥತಿಗೆ  ತಿಲಾಂಜಲಿ ಹಾಡಬೇಕು’ ಎಂದು ಮಂಡಳಿ ಪಟ್ಟು ಹಿಡಿಯಿತು.

ವಿವಾದದಲ್ಲಿ ಮಧ್ಯಪ್ರವೇಶಿಸಿದ ಸಚಿವ ಹರ್ಷವರ್ಧನ್, ಹೇಳಿಕೆ ವಾಪಸ್ ಪಡೆಯುವಂತೆ ರಾಮದೇವ್‌ಗೆ ಮನವಿ ಮಾಡಿದರು. ಎಲ್ಲೆಡೆಯಿಂದ ಬಂದ ಒತ್ತಡದ ಕಾರಣ, ರಾಮದೇವ್ ಅವರು ತಮ್ಮ ಹೇಳಿಕೆಯನ್ನು ವಾಪಸ್ ಪಡೆದರು. ಆದರೂ ಅಲೋಪಥಿ ಬಗ್ಗೆ ಅವರು 25 ಪ್ರಶ್ನೆಗಳಿರುವ ಬಹಿರಂಗ ಪತ್ರ ಬರೆದರು. ಟ್ವಿಟರ್‌ನಲ್ಲಿ ಪ್ರಕಟಿಸಿದ ಈ ಪತ್ರವನ್ನು ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಜನರು ಹಂಚಿಕೊಂಡಿದ್ದಾರೆ.

ಇದನ್ನೂ ಓದಿ: 

‘ಅವರಪ್ಪ ಬಂದರೂ ನನ್ನನ್ನು ಬಂಧಿಸಲು ಸಾಧ್ಯವಿಲ್ಲ’
ತಮ್ಮ ಹೇಳಿಕೆ ವಾಪಸ್ ಪಡೆದರೂ ಸಹ ರಾಮದೇವ್ ಅವರಿಗೆ ಐಎಂಎ ಬಗೆಗಿನ ಸಿಟ್ಟು ಹೋಗಿಲ್ಲ. ಮಾನನಷ್ಟ ಮೊಕದ್ದಮೆ ಹೂಡಿ, ಬಂಧನಕ್ಕೆ ಆಗ್ರಹಿಸಿರುವುದಕ್ಕೆ ಅವರು ಭಾರಿ ಸಿಟ್ಟು ಮಾಡಿಕೊಂಡಿದ್ದಾರೆ. ‘ಅವರಪ್ಪ ಬಂದರೂ ನನ್ನನ್ನು ಬಂಧಿಸಲು ಸಾಧ್ಯವಿಲ್ಲ’ ಎಂದು ರಾಮದೇವ್ ತಿರುಗೇಟು ನೀಡುವ ಮೂಲಕ ವಿವಾದವನ್ನು ಇನ್ನಷ್ಟು ಜೀವಂತವಾಗಿಟ್ಟಿದ್ದಾರೆ.

ಸಾಕಷ್ಟು ವೈರಲ್ ಆಗಿರುವ 40 ಸೆಕೆಂಡ್‌ನ ವಿಡಿಯೊದಲ್ಲಿ ರಾಮದೇವ್ ಅವರು ತಾಕತ್ತಿದ್ದರೆ ತಮ್ಮನ್ನು ಬಂಧಿಸಿ ಎಂದು ಅಧಿಕಾರಿಗಳಿಗೆ ಸವಾಲು ಹಾಕುತ್ತಿರುವ ದೃಶ್ಯವಿದೆ. ಕೊರೊನಾ ವೈರಸ್ ಚಿಕಿತ್ಸೆ ಹಾಗೂ ಆಧುನಿಕ ವೈದ್ಯಪದ್ದತಿ ಬಗ್ಗೆ ಇಲ್ಲಸದಲ್ಲದ ಹೇಳಿಕೆ ನೀಡುತ್ತಿರುವ ರಾಮದೇವ್ ಅವರನ್ನು ದೇಶದ್ರೋಹದಡಿ ಬಂಧಿಸುವಂತೆ ಐಎಂಎ ಮನವಿ ಮಾಡಿದ್ದಕ್ಕೆ ಪ್ರತಿಯಾಗಿ ರಾಮದೇವ್ ಈ ಸವಾಲು ಹಾಕಿದ್ದಾರೆೆ ಎನ್ನಲಾಗಿದೆ.

ರಾಮದೇವ್ ಪ್ರಶ್ನೆಗಳು
*ಟೈಪ್ 1 ಮತ್ತು ಟೈಪ್ 2 ಮಧುಮೇಹ, ರಕ್ತದೊತ್ತಡಕ್ಕೆ ಅಲೋಪತಿಯು ಖಾಯಂ ಚಿಕಿತ್ಸೆ ನೀಡಲು ಸಾಧ್ಯವೇ

*ಪಾರ್ಕಿನ್ಸನ್‌ನಂತಹ ಆಧುನಿಕ ಕಾಯಿಲೆಗೆ ಪರಿಣಾಮಕಾರಿ ಚಿಕಿತ್ಸೆ ಏಕಿಲ್ಲ

*ಬಂಜೆತನಕ್ಕೆ ನೋವುರಹಿತ ಚಿಕಿತ್ಸೆ ಅಲೋಪತಿಯಲ್ಲಿ ಇದೆಯೇ

*ಥೈರಾಯ್ಡ್, ಆರ್ಥರೈಟಿಸ್, ಅಸ್ತಮಾದಂತಹ ಸಮಸ್ಯೆಗೆ ಪರಿಹಾರ ಇಲ್ಲವೇ

*ಕೊಬ್ಬಿನ ಪಿತ್ತಜನಕಾಂಗ (ಲಿವರ್) ಮತ್ತು ಪಿತ್ತಜನಕಾಂಗದ ಸಿರೋಸಿಸ್‌ಗೆ ಅಲೋಪತಿ ಔಷಧ ಹುಡುಕಿದೆಯೇ

*ಅಲೋಪತಿಗೆ ಈಗ 200 ವರ್ಷ. ಕ್ಷIMಯ ಮತ್ತು ಸಿಡುಬು ಕಾಯಿಲೆಗಳಿಗೆ ಪರಿಹಾರ ಕಂಡುಕೊಂಡಂತೆ, ಉಳಿದ ಕಾಯಿಲೆಗಳಿಗೆ ಪರಿಹಾರ ಏಕೆ ಸಿಕ್ಕಿಲ್ಲ

*ಹೃದಯದ ರಕ್ತನಾಳಗಳು ಕಟ್ಟಿಕೊಳ್ಳುವುದಕ್ಕೆ ಶಸ್ತ್ರಚಿಕಿತ್ಸೆ ಇಲ್ಲದ ಪರಿಹಾರ ಸಾಧ್ಯವಾಗಿಲ್ಲವೇ? ಕೊಲೆಸ್ಟರಾಲ್‌ಗೆ ಔಷಧ ಎಲ್ಲಿದೆ

*ಮೈಗ್ರೇನ್‌ಗೆ ಚಿಕಿತ್ಸೆ ಇದೆಯೇ? ಮಲಬದ್ಧತೆ ಮತ್ತು ಅಮ್ನೇಸಿಯಾಗೆ ಯಾವುದೇ ಅಡ್ಡಪರಿಣಾಮಗಳಿಲ್ಲದೆ ಚಿಕಿತ್ಸೆ ನೀಡಲಾಗುವುದೇ

*ಅಲೋಪತಿಯು ಸರ್ವಗುಣ ಸಂಪನ್ನವಾಗಿದ್ದಿದ್ದರೆ ವೈದ್ಯರು ಏಕೆ ಕಾಯಿಲೆ ಬೀಳುತ್ತಿದ್ದರು

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು