ಸೋಮವಾರ, ಜನವರಿ 25, 2021
14 °C
ಜನತಂತ್ರದ ಮೇಲೆ ಟ್ರಂಪ್‌ ಬೆಂಬಲಿಗರ ಆಕ್ರಮಣ

ಆಳ–ಅಗಲ: ಅಮೆರಿಕ ‘ಕ್ಯಾಪಿಟಲ್‌’ಗೆ ಕರಾಳ ದಿನ

ಜಯಸಿಂಹ ಆರ್./ಅಮೃತಕಿರಣ್ ಬಿ.ಎಂ. Updated:

ಅಕ್ಷರ ಗಾತ್ರ : | |

ಟ್ರಂಪ್‌ ಬೆಂಬಲಿಗನೊಬ್ಬ ವಿಚಿತ್ರ ವೇಷ ಧರಿಸಿ ಕ್ಯಾಪಿಟಲ್‌ನ ಒಳಗೆ ಕಾಣಿಸಿಕೊಂಡ -ಎಎಫ್‌ಪಿ ಚಿತ್ರ

ಅಮೆರಿಕದ ಕ್ಯಾಪಿಟಲ್ ಕಟ್ಟಡದ ಮೇಲೆ ಬುಧವಾರ ನಡೆದ ದಾಳಿಯು, ಅಮೆರಿಕದ ಪ್ರಜಾಪ್ರಭುತ್ವದ ಆತ್ಮದ ಮೇಲೆ ನಡೆದ ದಾಳಿ ಎಂದೇ ಬಿಂಬಿತವಾಗಿದೆ. ಜಗತ್ತಿನ ಪ್ರಮುಖ ರಾಷ್ಟ್ರಗಳು ಈ ದಾಳಿಯ ಬಗ್ಗೆ ಆಘಾತ ವ್ಯಕ್ತಪಡಿಸಿವೆ.

‘ಇರಾಕ್‌ನಲ್ಲಿ ಹಲವು ವರ್ಷ ಸೈನಿಕನಾಗಿ ಹೋರಾಡಿದ್ದೇನೆ. ಇರಾಕ್‌ನಂತಹ ದೇಶದಲ್ಲಿ ಮಾತ್ರವೇ ಸಂಸತ್ತಿನ ಮೇಲೆ ದಾಳಿ ನಡೆಯುತ್ತದೆ ಎಂದು ಈವರೆಗೆ ನಾನು ನಂಬಿದ್ದೆ. ಆದರೆ ಇಂದು ಅಮೆರಿಕದ ಕ್ಯಾಪಿಟಲ್‌ ಕಟ್ಟಡದ ಮೇಲೆ ದಾಳಿ ನಡೆದಿದೆ. ನನ್ನ ದೇಶದಲ್ಲೂ ಇಂತಹ ದಾಳಿ ನಡೆಯಬಹುದು ಎಂದು ನಾನು ಊಹಿಸಿಯೂ ಇರಲಿಲ್ಲ’

–ಅಮೆರಿಕದ ನಿವೃತ್ತ ಸೈನಿಕನೊಬ್ಬ ಮಾಡಿದ್ದ ಈ ಟ್ವೀಟ್ ಈಗ ವೈರಲ್ ಆಗಿದೆ. ಜಗತ್ತಿನ ಅತ್ಯಂತ ಸುಭದ್ರ ಪ್ರಜಾಪ್ರಭುತ್ವ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಅಮೆರಿಕದಲ್ಲಿ, ಅಧ್ಯಕ್ಷೀಯ ಚುನಾವಣೆಯ ನಂತರ ನಡೆದ ಹಲವು ಘಟನೆಗಳು ಈ ಹೆಗ್ಗಳಿಕೆಯನ್ನು ಮುಕ್ಕಾಗಿಸಿವೆ. ಅಮೆರಿಕದ ಕ್ಯಾಪಿಟಲ್ ಕಟ್ಟಡದ ಮೇಲೆ ಬುಧವಾರ ನಡೆದ ದಾಳಿಯು, ಅಮೆರಿಕದ ಪ್ರಜಾಪ್ರಭುತ್ವದ ಆತ್ಮದ ಮೇಲೆ ನಡೆದ ದಾಳಿ ಎಂದೇ ಬಿಂಬಿತವಾಗಿದೆ. ಜಗತ್ತಿನ ಪ್ರಮುಖ ರಾಷ್ಟ್ರಗಳು ಈ ದಾಳಿಯ ಬಗ್ಗೆ ಆಘಾತ ವ್ಯಕ್ತಪಡಿಸಿವೆ.

2020ರ ಅಧ್ಯಕ್ಷೀಯ ಚುನಾವಣೆಯಲ್ಲಿ ಹಾಲಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸೋತಿರುವುದು ದೃಢಪಟ್ಟಿದೆ. ಡೆಮಾಕ್ರಟಿಕ್ ಪಕ್ಷದ ಜೋ ಬೈಡನ್‌ ಅವರ ಗೆಲುವನ್ನು ಪ್ರಮಾಣೀಕರಿಸುವ ಕೆಲಸವನ್ನು ಅಮೆರಿಕದ ಸಂಸತ್ತು ಬುಧವಾರ ಮಾಡಬೇಕಿತ್ತು. ಸಂಸತ್ತು ಸೇರುವ ಮೊದಲೇ ಜಾರ್ಜಿಯಾದಲ್ಲಿನ ಚುನಾವಣೆಯಲ್ಲಿ ಡೆಮಾಕ್ರಟಿಕ್ ಪಕ್ಷದ ಇಬ್ಬರು ಅಮೆರಿಕದ ಸೆನೆಟ್‌ಗೆ ಆರಿಸಿ ಬಂದರು. ಸೆನೆಟ್‌ನಲ್ಲಿ ರಿಪಬ್ಲಿಕನ್ ಮತ್ತು ಡೆಮಾಕ್ರಟಿಕ್ ಪಕ್ಷದ ಬಲಾಬಲ (50:50) ಸಮವಾಗಿತ್ತು. ಉಪಾಧ್ಯಕ್ಷೆಯಾಗಿ ಆಯ್ಕೆಯಾಗಿರುವ ಕಮಲಾ ಹ್ಯಾರಿಸ್ ಅವರ ಮತವೂ ಸೇರಿದರೆ, ಡೆಮಾಕ್ರಟಿಕ್ ಪಕ್ಷಕ್ಕೆ ಬಹುಮತ ದೊರೆಯುತ್ತದೆ. ಈ ಬೆಳವಣಿಗೆಯ ನಂತರವೇ ಅಮೆರಿಕದ ಕಾಂಗ್ರೆಸ್ (ಸಂಸತ್ತು) ಬೈಡನ್ ಅವರ ಗೆಲುವಿನ ಪ್ರಮಾಣೀಕರಣಕ್ಕೆ ಚಾಲನೆ ನೀಡಿತ್ತು. ಈ ಚುನಾವಣೆಯಲ್ಲಿ ತಮಗೆ ಮೋಸವಾಗಿದೆ ಎಂದು ಡೊನಾಲ್ಡ್ ಟ್ರಂಪ್ ಪದೇ-ಪದೇ ಹೇಳಿದ್ದರ ಪರಿಣಾಮವಾಗಿ, ಟ್ರಂಪ್‌ ಬೆಂಬಲಿಗರು ಅಮೆರಿಕದ ಕಾಂಗ್ರೆಸ್‌ ಇರುವ ಕ್ಯಾಪಿಟಲ್ ಕಟ್ಟಡದ ಮೇಲೆ ದಾಳಿ ನಡೆಸಿದರು. 

ಇಂತಹ ದಾಳಿಯ ಮಧ್ಯೆಯೂ ಪ್ರಜಾಸತ್ತಾತ್ಮಕ ನಿಲುವುಗಳಿಗೆ ಅಮೆರಿಕನ್ನರ ಬದ್ಧತೆ ಹೇಗಿದೆ ಎಂಬುದಕ್ಕೂ ಜಗತ್ತು ಈಗ ಸಾಕ್ಷಿಯಾಗಿದೆ. ಬೈಡನ್ ಅವರ ಗೆಲುವನ್ನು ಕಾಂಗ್ರೆಸ್ ಪ್ರಮಾಣೀಕರಿಸಿತು ಇದರ ಬೆನ್ನಲ್ಲೇ ಚುನಾವಣೆಯ ಇಡೀ ಫಲಿತಾಂಶವನ್ನು ರದ್ದುಪಡಿಸುವಂತೆ ಟ್ರಂಪ್‌ ಅವರು ತಮ್ಮ ಆಪ್ತ ಮತ್ತು ಅಮೆರಿಕದ ಉಪಾಧ್ಯಕ್ಷ ಮೈಕ್ ಪೆನ್ಸ್ ಅವರಿಗೆ ಸೂಚಿಸಿದರು. ನಾಲ್ಕು ವರ್ಷ ಟ್ರಂಪ್‌ ಅವರಿಗೆ ನಿಷ್ಠರಾಗಿದ್ದ ಪೆನ್ಸ್ ಅವರು, ‘ಇದು ನನ್ನ ಅಧಿಕಾರದ ವ್ಯಾಪ್ತಿಯಲ್ಲಿ ಬರುವುದಿಲ್ಲ. ನಾನು ಹೀಗೆ ಮಾಡಲು ಸಾಧ್ಯವಿಲ್ಲ’ ಎಂದು ಟ್ರಂಪ್ ಅವರ ಸೂಚನೆಯನ್ನು ತಿರಸ್ಕರಿಸಿದರು. ಕಾಂಗ್ರೆಸ್‌ ಸದಸ್ಯರು, ಕಾಂಗ್ರೆಸ್ ಸಿಬ್ಬಂದಿ ಮತ್ತು ಚುನಾವಣಾ ಸಿಬ್ಬಂದಿಯನ್ನು ಗುರಿಯಾಗಿಸಿಕೊಂಡು ಈ ದಾಳಿ ನಡೆಸಲಾಗಿತ್ತು. ದಾಳಿಯಿಂದ ಆಘಾತಗೊಂಡಿದ್ದರೂ, ಪರಿಸ್ಥಿತಿ ನಿಯಂತ್ರಣಕ್ಕೆ ಬಂದ ನಂತರ ಇವರೆಲ್ಲರೂ ಬೈಡನ್ ಗೆಲುವನ್ನು ದೃಢೀಕರಿಸಿದ್ದಾರೆ. ದೇಶದ ಅತ್ಯಂತ ಮಹತ್ವದ ಪ್ರಜಾಸತ್ತಾತ್ಮಕ ಪ್ರಕ್ರಿಯೆಯನ್ನು ಪೂರ್ಣಗೊಳಿಸಿದ್ದಾರೆ. ಅಧಿಕಾರ ಹಸ್ತಾಂತರದ ಸಮಯದಲ್ಲಿ ಇಂತಹ ಘಟನೆ ನಡೆದಿದ್ದು, ಅಮೆರಿಕದ ಇತಿಹಾಸದಲ್ಲಿ ಇದೇ ಮೊದಲು. ಇದರಿಂದ ಕಂಗೆಡದೆ, ಚುನಾವಣಾ ಪ್ರಕ್ರಿಯೆಯನ್ನು ಅಮೆರಿಕವು ಪೂರ್ಣಗೊಳಿಸಿದೆ. ಇಷ್ಟು ದಿನ ಚುನಾವಣೆಯಲ್ಲಿ ತಮಗೆ ಮೋಸವಾಗಿದೆ ಎಂದು ಆರೋಪಿಸುತ್ತಿದ್ದ ಟ್ರಂಪ್, ಈಗ ತಮ್ಮ ಸೋಲನ್ನು ಒಪ್ಪಿಕೊಂಡಿದ್ದಾರೆ. ಅಷ್ಟರಮಟ್ಟಿಗೆ ಅಮೆರಿಕದ ಪ್ರಜಾಪ್ರಭುತ್ವವು ಶಕ್ತವಾಗಿದೆ.

ಈ ಪರಿಸ್ಥಿತಿಗೆ ಕಾರಣ

ನವೆಂಬರ್‌ನಲ್ಲಿ ನಡೆದ ಚುನಾವಣೆಯಲ್ಲಿ ತಮಗೆ ವಂಚನೆಯಾಗಿದೆ ಎಂದು ಡೊನಾಲ್ಡ್ ಟ್ರಂಪ್ ಅವರು ಪದೇ-ಪದೇ ಆರೋಪಿಸಿದ್ದರು. ಫೇಸ್‌ಬುಕ್‌, ಟ್ವಿಟರ್‌ ಮತ್ತು ಮಾಧ್ಯಮಗಳಲ್ಲಿ ಇದನ್ನು ಮತ್ತೆ ಮತ್ತೆ ಪುನರುಚ್ಚರಿಸಿದ್ದರು. ಚುನಾವಣೆಯಲ್ಲಿ ತಮಗೆ ವಂಚನೆಯಾಗಿದೆ ಎಂದೇ ರಿಪಬ್ಲಿಕನ್ ಪಕ್ಷದ ನಾಯಕರು, ಬೆಂಬಲಿಗರು ಭಾವಿಸಿದರು. ಯಾವುದೇ ಕಾರಣಕ್ಕೂ ತಾವು ಅಧಿಕಾರ ಬಿಟ್ಟುಕೊಡುವುದಿಲ್ಲ ಎಂದು ರಿಪಬ್ಲಿಕನ್ ಪಕ್ಷದ ನಾಯಕರು ಮತ್ತು ಬೆಂಬಲಿಗರು ಪಣತೊಟ್ಟರು. ಇದರ ಪರಿಣಾಮವಾಗಿಯೇ ಬುಧವಾರ (ಅಮೆರಿಕದ ಕಾಲಮಾನ) ಅಮೆರಿಕದ ಕ್ಯಾಪಿಟಲ್ ಕಟ್ಟಡದ ಮೇಲೆ ದಾಳಿ ನಡೆಯಿತು.

ಪಟ್ಟು ಕಾಯ್ದುಕೊಂಡಿದ್ದ ಟ್ರಂಪ್

‘ಈ ಚುನಾವಣೆಯ ಫಲಿತಾಂಶವನ್ನು ನಾನು ಒಪ್ಪಿಕೊಳ್ಳುವುದಿಲ್ಲ’ ಎಂದು ಡೊನಾಲ್ಡ್ ಟ್ರಂಪ್ ಅವರು ಫಲಿತಾಂಶದ ದಿನವೇ ಹೇಳಿದ್ದರು. ಈಗ, ಸೋಲನ್ನು ಒಪ್ಪಿಕೊಳ್ಳುವ ಸಂದರ್ಭದವರೆಗೂ ಈ ಮಾತನ್ನು ಉಳಿಸಿಕೊಳ್ಳುವ ಎಲ್ಲಾ ಪ್ರಯತ್ನಗಳನ್ನು ಟ್ರಂಪ್ ಮಾಡಿದ್ದಾರೆ. ಚುನಾವಣೆಯಲ್ಲಿ ತಮಗೆ ಮೋಸವಾಗಿದೆ ಎಂದು ಬಿಂಬಿಸುವಲ್ಲಿ ಟ್ರಂಪ್ ಯಶಸ್ವಿಯಾಗಿದ್ದಾರೆ. ಈ ಬಗ್ಗೆ ಪದೇ-ಪದೇ ಮಾತನಾಡುವ ಮೂಲಕ ತಮ್ಮ ಬೆಂಬಲಿಗರನ್ನು ಉದ್ದೀಪಿಸುವಲ್ಲಿ ಟ್ರಂಪ್ ಯಶಸ್ವಿಯಾಗಿದ್ದಾರೆ.

ಇದರ ಜತೆಯಲ್ಲಿ ಹಲವು ರಾಜ್ಯಗಳಲ್ಲಿ ಚುನಾವಣಾ ಫಲಿತಾಂಶದ ವಿರುದ್ಧ ಟ್ರಂಪ್ ಬೆಂಬಲಿಗರು ಮತ್ತು ರಿಪಬ್ಲಿಕನ್ ಪಕ್ಷದ ಸದಸ್ಯರು ನ್ಯಾಯಾಲಯದ ಮೊರೆ ಹೋಗಿದ್ದರು. ಅಮೆರಿಕದಾದ್ಯಂತ ವಿವಿಧ ನ್ಯಾಯಾಲಯಗಳಲ್ಲಿ ಇಂತಹ 80ಕ್ಕೂ ಹೆಚ್ಚು ಅರ್ಜಿಗಳು ಸಲ್ಲಿಕೆಯಾಗಿವೆ. ಇವುಗಳಲ್ಲಿ 62 ಅರ್ಜಿಗಳು ಈಗಾಗಲೇ ತಿರಸ್ಕೃತವಾಗಿವೆ. ಆದರೆ ಇಷ್ಟು ಪ್ರಮಾಣದಲ್ಲಿ ಅರ್ಜಿಗಳು ಸಲ್ಲಿಕೆಯಾದ ಕಾರಣ, ಚುನಾವಣೆಯಲ್ಲಿ ಮೋಸವಾಗಿದೆ ಎಂದು ಟ್ರಂಪ್ ಬೆಂಬಲಿಗರು ಬಲವಾಗಿ ನಂಬಿದ್ದಾರೆ. ಈ ಮೂಲಕ ತಮ್ಮದು ನಿಜವಾದ ಸೋಲಲ್ಲ ಎಂದು ತಮ್ಮ ಬೆಂಬಲಿಗರನ್ನು ನಂಬಿಸುವಲ್ಲಿ ಟ್ರಂಪ್ ಯಶಸ್ವಿಯಾಗಿದ್ದಾರೆ.

ಅಮೆರಿಕದ ಕಾಂಗ್ರೆಸ್‌ನಲ್ಲಿ ರಿಪಬ್ಲಿಕನ್ ಪಕ್ಷದ ಇಬ್ಬರು ಸದಸ್ಯರು, ಚುನಾವಣಾ ಫಲಿತಾಂಶದ ವಿರುದ್ಧ ಬುಧವಾರ ಆಕ್ಷೇಪಗಳನ್ನು ಸಲ್ಲಿಸಿದರು. ಇದರ ಬೆನ್ನಲ್ಲೇ ಕ್ಯಾಪಿಟಲ್ ಕಟ್ಟಡದ ಮೇಲೆ ಟ್ರಂಪ್ ಬೆಂಬಲಿಗರು ದಾಳಿ ನಡೆಸಿದರು. ಆನಂತರ ಆ ಇಬ್ಬರು ಸದಸ್ಯರು ತಮ್ಮ ಆಕ್ಷೇಪಗಳನ್ನು ವಾಪಸ್ ಪಡೆದರು. ಅಷ್ಟರಲ್ಲಿ ದಾಳಿ ನಡೆದುಹೋಗಿತ್ತು. ಇವೆಲ್ಲವುಗಳ ನಂತರ ಟ್ರಂಪ್‌ ಅವರನ್ನು ಅಧಿಕಾರದಿಂದ ಕೆಳಗಿಳಿಸುವ ಮಾತು ಕೇಳಿಬಂದಿತು. ಆದರೆ, ಟ್ರಂಪ್ ಅವರು ತಾವೇ ಹೊರನಡೆಯುವುದಾಗಿ ಹೇಳಿದ್ದಾರೆ. ‘ನಮ್ಮ ಹೋರಾಟ ಈಗಷ್ಟೇ ಆರಂಭವಾಗಿದೆ’ ಎಂದು ಹೇಳಿದ್ದಾರೆ.

1814ರಲ್ಲಿ ಮೊದಲ ದಾಳಿ

ಕ್ಯಾಪಿಟಲ್ ಕಟ್ಟಡದ ಮೇಲೆ ಈವರೆಗೆ ಹಲವು ಬಾರಿ ದಾಳಿ ನಡೆದಿದೆ. ಆದರೆ 1814ರಲ್ಲಿ ನಡೆದಿದ್ದ ದಾಳಿಯೇ ಅತ್ಯಂತ ದೊಡ್ಡದು ಎನ್ನಲಾಗಿದೆ. ಅಮೆರಿಕ ಸಂಯುಕ್ತ ಸಂಸ್ಥಾನ ಅಸ್ತಿತ್ವಕ್ಕೆ ಬಂದು ಒಂದು ದಶಕ ಪೂರೈಸಿದ್ದ ಸಂದರ್ಭದಲ್ಲಿ ಬ್ರಿಟನ್‌ ಜತೆ ವಾಣಿಜ್ಯ ಸಮರ ಉಂಟಾಗಿತ್ತು. ಫ್ರಾನ್ಸ್ ಜತೆ ಅಮೆರಿಕವು ವಾಣಿಜ್ಯ ಸಂಬಂಧ ಮುಂದುವರಿಸುವುದಕ್ಕೆ ಬ್ರಿಟನ್ ತಡೆಯೊಡ್ಡಿತ್ತು. ಇದಕ್ಕಾಗಿ ಅಮೆರಿಕವು ಬ್ರಿಟನ್ ವಿರುದ್ಧ 1812ರಲ್ಲಿ ಯುದ್ಧ ಘೋಷಿಸಿತ್ತು. ಎರಡು ವರ್ಷ ನಡೆದಿದ್ದ ಯುದ್ಧದಲ್ಲಿ, ಬ್ರಿಟನ್ ಸೇನೆಯು ವಾಷಿಗ್ಟಂನ್ ಡಿ.ಸಿ.ಯಲ್ಲಿ ಇದ್ದ ಕ್ಯಾಪಿಟಲ್ ಕಟ್ಟಡದ ಮೇಲೆ ದಾಳಿ ನಡೆಸಿತ್ತು. 1814ರ ಆಗಸ್ಟ್‌ 7ರಂದು ಕ್ಯಾಪಿಟಲ್ ಕಟ್ಟಡಕ್ಕೆ ಬೆಂಕಿ ಹಚ್ಚಲಾಗಿತ್ತು.

1835ರಲ್ಲಿ ಅಧ್ಯಕ್ಷ ಆ್ಯಂಡ್ರೊ ಜಾಕ್ಸನ್ ಅವರ ಹತ್ಯೆ ಯತ್ನದ ಭಾಗವಾಗಿ ಈ ಕಟ್ಟಡದ ಮೇಲೆ ದಾಳಿ ನಡೆದಿತ್ತು. ನಂತರ 1856, 1915, 1954, 1971, 1983 ಮತ್ತು 1998ರಲ್ಲಿ ಈ ಕಟ್ಟಡದ ಮೇಲೆ ದಾಳಿಗಳು ನಡೆದಿದೆ. ಆದರೆ, ಬುಧವಾರ ನಡೆದ ದಾಳಿಯೇ ಕ್ಯಾಪಿಟಲ್ ಕಟ್ಟಡದ ಮೇಲೆ ನಡೆದ ಎರಡನೇ ಅತ್ಯಂತ ದೊಡ್ಡ ದಾಳಿ ಎನ್ನಲಾಗಿದೆ.

ಏನಿದೆ ಕ್ಯಾಪಿಟಲ್ ಹಿಲ್‌ನಲ್ಲಿ?

ಅಮೆರಿಕದ ಪ್ರಜಾಪ್ರಭುತ್ವದಲ್ಲಿ ರಾಜಧಾನಿ ವಾಷಿಂಗ್ಟನ್ ಡಿಸಿಯಲ್ಲಿರುವ ಕ್ಯಾಪಿಟಲ್‌ ಹಿಲ್ಸ್‌ಗೆ ಮಹತ್ವದ ಸ್ಥಾನವಿದೆ. ‘ಯುಎಸ್‌ ಕ್ಯಾಪಿಟಲ್’‌ ಎಂಬ ಹೆಸರಿನ ಸಂಸತ್‌ ಭವನದ ಜತೆಗೆ ಅಲ್ಲಿನ ಶಾಸಕಾಂಗ, ಕಾರ್ಯಾಂಗ ಮತ್ತು ನ್ಯಾಯಾಂಗಕ್ಕೆ ಸಂಬಂಧಿಸಿದ ಹಲವು ಕಟ್ಟಡಗಳು ಇಲ್ಲಿ ಇವೆ. 

ಕ್ಯಾಪಿಟಲ್ ಹಿಲ್ ಹೆಗ್ಗುರುತುಗಳಲ್ಲಿ ಕ್ಯಾಪಿಟಲ್ ಮಾತ್ರವಲ್ಲ, ಸುಪ್ರೀಂ ಕೋರ್ಟ್ ಕಟ್ಟಡ, ಲೈಬ್ರರಿ ಆಫ್ ಕಾಂಗ್ರೆಸ್, ಮೆರೈನ್ ಬ್ಯಾರಕ್ಸ್, ವಾಷಿಂಗ್ಟನ್ ನೇವಿ ಯಾರ್ಡ್ ಮತ್ತು  ಸ್ಮಶಾನವೂ ಸೇರಿವೆ.

ವಸತಿ ಪ್ರದೇಶವೂ ಇಲ್ಲಿದೆ. ಕ್ಯಾಪಿಟಲ್ ಹಿಲ್ ವಾಷಿಂಗ್ಟನ್‌ನ ಅತ್ಯಂತ ಹಳೆಯ ವಸತಿ ಪ್ರದೇಶಗಳಲ್ಲಿ ಒಂದಾಗಿದೆ. ಇದೇ ಸಂಕೀರ್ಣದಲ್ಲಿ ರೊಟುಂಡಾ ಇದೆ. ಇದು ಯುಎಸ್ ಕ್ಯಾಪಿಟಲ್‌ನ ಹೃದಯಭಾಗ. ಇದು ರಾಷ್ಟ್ರೀಯ ಮಹತ್ವದ ಗಣ್ಯರು ಮೃತಪಟ್ಟಾಗ ಅಂತ್ಯಕ್ರಿಯೆ ನಡೆಸುವ ಸ್ಥಳವೂ ಆಗಿದೆ.

ಶ್ವೇತಭವನ, ವಾಷಿಂಗ್ಟನ್ ಸ್ಮಾರಕ ಮತ್ತು ಸ್ಮಿತ್ಸೋನಿಯನ್ ವಸ್ತುಸಂಗ್ರಹಾಲಯದ ಪೂರ್ವದಲ್ಲಿ ಇದು ನೆಲೆಯಾಗಿದೆ.

ಹಸ್ತಾಂತರ ಪ್ರಕ್ರಿಯೆ

ಅಮೆರಿಕ ಪ್ರಜಾಪ್ರಭುತ್ವದಲ್ಲಿ ಚುನಾವಣೆಯ ಬಳಿಕ ಹಾಲಿ ಅಧ್ಯಕ್ಷರು ನಿಯೋಜಿತ ಅಧ್ಯಕ್ಷರಿಗೆ ಅಧಿಕಾರವನ್ನು ಶಾಂತಿಯುತವಾಗಿ ಹಸ್ತಾಂತರಿಸುವುದು ಮಹತ್ವದ ಘಟ್ಟ. 1963ರ ಕಾಯ್ದೆ ಮತ್ತು ತಿದ್ದುಪಡಿಗಳು ಇದಕ್ಕೆ ಸ್ಪಷ್ಟ ನಿಯಮಾವಳಿಗಳನ್ನು ರೂಪಿಸಿವೆ. ಸೆಕ್ಷನ್ 1ರ ಪ್ರಕಾರ, ಮೊದಲ ಅವಧಿಗೆ ಆಯ್ಕೆಯಾಗಿರುವ ನಿಯೋಜಿತ ಅಧ್ಯಕ್ಷರು ಸಂಭವನೀಯ ಆಡಳಿತಕ್ಕಾಗಿ ತಯಾರಿ ಪ್ರಾರಂಭಿಸಲು ಮುಂಚಿತವಾಗಿಯೇ ‘ಟ್ರಾನ್ಸಿಷನ್ ತಂಡ’ ರಚಿಸಬೇಕು. ಚುನಾವಣಾ ವರ್ಷದ ಏಪ್ರಿಲ್/ಮೇನಲ್ಲಿಶುರುವಾಗಿ, ಅಧಿಕಾರ ಹಸ್ತಾಂತರವಾಗುವ ಮುಂದಿನ ವರ್ಷದ ಜನವರಿ 20ರ ನಂತರದ ಕೆಲವು ದಿನಗಳವರೆಗೆ, ಅಂದರೆ ಬಹುತೇಕ ಒಂದು ವರ್ಷ ಈ ತಂಡ ಕಾರ್ಯನಿರ್ವಹಿಸುತ್ತದೆ.

ಆರಂಭದಿಂದ ಚುನಾವಣಾ ದಿನದವರೆಗೆ ಇರುವ ಅವಧಿಯನ್ನು ‘ಯೋಜನೆ’ ಹಂತ ಎಂದೂ, ಚುನಾವಣೆಯಿಂದ ಅಧಿಕಾರ ಹಿಡಿಯುವವರೆಗಿನ ಅವಧಿಯನ್ನು ‘ಪರಿವರ್ತನೆ’ ಹಂತ ಎಂದೂ, ಮತ್ತು ಅಂತಿಮವಾಗಿ ‘ಹಸ್ತಾಂತರ’ ಎಂಬುದಾಗಿ ಪ್ರಕ್ರಿಯೆಯನ್ನು 3 ಹಂತಗಳಲ್ಲಿ ವಿಂಗಡಿಸಲಾಗಿದೆ.

ಹಾಂಗ್‌ಕಾಂಗ್ ಗಲಭೆಗೆ ಹೋಲಿಸಿದ ಚೀನಾ

ಕ್ಯಾಪಿಟಲ್ ಹಿಲ್ ಗಲಭೆಯನ್ನು, 2019ರಲ್ಲಿ ಸ್ಥಳೀಯ ಜನಪ್ರತಿನಿಧಿಗಳ ಮೇಲೆ ಹಾಂಗ್‌ಕಾಂಗ್ ಪ್ರತಿಭಟನಕಾರರು ನಡೆಸಿದ ದಾಳಿಗೆ ಚೀನಾ ಹೋಲಿಸಿದೆ. ಚೀನಾದ ಇಂಟರ್ನೆಟ್‌ ಬಳಕೆದಾರರು (ನೆಟಿಜನ್ಸ್) ಇದನ್ನು ‘ಕರ್ಮ’ ಎಂದಿದ್ದಾರೆ.

ಅಮೆರಿಕ ಸಾಧ್ಯವಾದಷ್ಟು ಬೇಗ ಸಹಜ ಸ್ಥಿತಿಗೆ ಮರಳಲಿ ಎಂದು ಚೀನಾದ ವಿದೇಶಾಂಗ ಇಲಾಖೆ ವಕ್ತಾರ ಹುವಾ ಚುನಿಯಿಂಗ್ ಹೇಳಿದ್ದಾರೆ. ಸಾಕಷ್ಟು ನೆಟಿಜನ್‌ಗಳು ಇಂದಿನ ಅಮೆರಿಕದ ಸ್ಥಿತಿಯನ್ನು ‘ಕರ್ಮ’, ‘ಪ್ರತೀಕಾರ’ ಮತ್ತು ‘ಅರ್ಹರು’ ಎಂಬ ಪದಗಳ ಜತೆ ಉಲ್ಲೇಖಿಸಿದ್ದಾರೆ ಎಂದು ಚೀನಾದ ಸರ್ಕಾರಿ ಪತ್ರಿಕೆ ಗ್ಲೋಬಲ್ ಟೈಮ್ಸ್ ವರದಿ ಮಾಡಿದೆ.

* ಕ್ಯಾಪಿಟಲ್ ಕಟ್ಟಡದಲ್ಲಿ ನಡೆದ ಗಲಭೆ ಅಮೆರಿಕದ ಅವನತಿಗೆ ಸಾಕ್ಷಿ. ಅಮೆರಿಕದ ಹಳೆಯ ಚುನಾವಣಾ ವ್ಯವಸ್ಥೆಯು ಪ್ರಜಾಪ್ರಭುತ್ವವನ್ನು ಕುಗ್ಗುವಂತೆ ಮಾಡಿದೆ

-ಮರಿಯಾ ಝಕೊರೊವಾ, ರಷ್ಯಾ ವಿದೇಶಾಂಗ ಇಲಾಖೆ ವಕ್ತಾರರು

* ಅಮೆರಿಕದಲ್ಲಿ ನಡೆದ ಘಟನೆಗಳಿಂದ ನಮ್ಮ ದೇಶ ತೀವ್ರವಾಗಿ ನೊಂದಿದೆ. ಹಿಂಸೆ ಎಂದಿಗೂ ಯಶಸ್ವಿಯಾಗುವುದಿಲ್ಲ. ಅಮೆರಿಕದಲ್ಲಿ ಪ್ರಜಾಪ್ರಭುತ್ವವನ್ನು ಎತ್ತಿಹಿಡಿಯಬೇಕು

-ಜಸ್ಟಿನ್ ಟ್ರೂಡೊ, ಕೆನಡಾ ಪ್ರಧಾನಿ

* ವಾಷಿಂಗ್ಟನ್‌ನಲ್ಲಿ ಇಂದು ಏನು ಮಾಡಿದ್ದಾರೋ ಅವರು ಅಮೆರಿಕನ್ನರಲ್ಲ. ಪ್ರಶ್ನಿಸುವ ಕೆಲವರ ಹಿಂಸಾಚಾರಕ್ಕಾಗಿ ಪ್ರಜಾಪ್ರಭುತ್ವವನ್ನು ಬಿಟ್ಟುಕೊಡುವುದಿಲ್ಲ.

-ಇಮ್ಯಾನುಯೆಲ್ ಮ್ಯಾಕ್ರನ್, ಫ್ರಾನ್ಸ್ ಅಧ್ಯಕ್ಷ

* ಅಮೆರಿಕದ ಸಂಸತ್ತಿನ ದೃಶ್ಯಗಳು ನಾಚಿಕೆಗೇಡಿನ ಕೃತ್ಯಗಳು. ಪ್ರಪಂಚದಾದ್ಯಂತ ಪ್ರಜಾಪ್ರಭುತ್ವದ ಜೊತೆ ಬ್ರಿಟನ್ ನಿಂತಿದೆ. ಅಧಿಕಾರದ ಶಾಂತಿಯುತ ಮತ್ತು ಕ್ರಮಬದ್ಧ ವರ್ಗಾವಣೆಯಾಗುವುದು ಈಗ ಬಹಳ ಮುಖ್ಯ

-ಬೋರಿಸ್ ಜಾನ್ಸನ್, ಬ್ರಿಟನ್ ಪ್ರಧಾನಿ

ತ್ರಿವರ್ಣ ಧ್ವಜ ಏಕೆ?

ಡೊನಾಲ್ಡ್‌ ಟ್ರಂಪ್‌ ಬೆಂಬಲಿಗರು ಅಮೆರಿಕದ ಕ್ಯಾಪಿಟಲ್‌ ಕಟ್ಟಡಕ್ಕೆ ನುಗ್ಗಿ ಗುರುವಾರ ನಡೆಸಿದ ಹಿಂಸಾಚಾರದ ವೇಳೆ ಭಾರತದ ತ್ರಿವರ್ಣ ಧ್ವಜ ಕಾಣಿಸಿಕೊಂಡಿರುವುದು ನೆಟ್ಟಿಗರ ಆಕ್ರೋಶಕ್ಕೆ ಗುರಿಯಾಗಿದೆ.

ಟ್ರಂಪ್ ಬೆಂಬಲಿಗರು ನಡೆಸುತ್ತಿದ್ದ ಪ್ರತಿಭಟನೆ ಸಂದರ್ಭದಲ್ಲಿ ಭಾರತದ ತ್ರಿವರ್ಣ ಧ್ವಜವನ್ನು ಹಿಡಿದು ವ್ಯಕ್ತಿಯೊಬ್ಬರು ಪ್ರತ್ಯಕ್ಷರಾಗಿದ್ದಾರೆ. ಈ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದ್ದು, ಅನಿವಾಸಿ ಭಾರತೀಯರು ಟ್ರಂಪ್‌ ಪರ ನಡೆದ ದಾಂದಲೆಯಲ್ಲಿ ಭಾಗಿಯಾಗಿರಬಹುದು ಎಂಬ ಸಂಶಯ ವ್ಯಕ್ತವಾಗಿದೆ. ಪ್ರತಿಭಟನೆಯಲ್ಲಿ
ತ್ರಿವರ್ಣ ಧ್ವಜ ಕಾಣಿಸಿಕೊಂಡಿರುವುದಕ್ಕೆ ಬಹುತೇಕ ನೆಟ್ಟಿಗರು ಬೇಸರ ಮತ್ತು ಆಕ್ರೋಶವನ್ನೂ ವ್ಯಕ್ತಪಡಿಸಿದ್ದಾರೆ.

ಈ ಬಗ್ಗೆ ವಿಡಿಯೊ ಟ್ವೀಟ್‌ ಮಾಡಿರುವ ಬಿಜೆಪಿ ಮುಖಂಡ ವರುಣ್‌ ಗಾಂಧಿ, ‘ಅಲ್ಲಿ ಭಾರತೀಯ ಧ್ವಜ ಏಕೆ ಇದೆ? ಇದು ಖಂಡಿತವಾಗಿಯೂ ನಾವು ಭಾಗವಹಿಸಲೇಬಾರದ ಒಂದು ಪ್ರತಿಭಟನೆಯಾಗಿದೆ’ ಎಂದು ಹೇಳಿದ್ದಾರೆ.

 

ಸಿವಿಲ್ ವಾರ್ ಧ್ವಜ: ಈ ಪ್ರತಿಭಟನೆ ವೇಳೆ ಅಮೆರಿಕದ ಸಿವಿಲ್ ವಾರ್‌ನಲ್ಲಿ ಬಿಳಿಯರು ಬಳಸಿದ್ದ ಧ್ವಜವನ್ನೂ ಹಾರಿಸಲಾಗಿದೆ. ಜನಾಂಗೀಯ ನಿಂದನೆಯನ್ನು ಪ್ರತಿಬಿಂಬಿಸುವ ಧ್ವಜವನ್ನು ಪ್ರತಿಭಟನೆಯಲ್ಲಿ ಬಳಸಿರುವುದಕ್ಕೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.

ಮೋದಿ ಖಂಡನೆ

ನವದೆಹಲಿ: ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಜತೆಗೆ ನಿಕಟ ಸ್ನೇಹ ಹೊಂದಿದ್ದರೂ ಪ್ರಧಾನಿ ನರೇಂದ್ರ ಮೋದಿ ಅವರು, ಟ್ರಂಪ್ ಬೆಂಬಲಿಗರು ಕ್ಯಾಪಿಟಲ್ ಹಿಲ್‌ನಲ್ಲಿ ನಡೆಸಿದ ದಾಂದಲೆಯನ್ನು ಖಂಡಿಸಿದ್ದಾರೆ. ಅಮೆರಿಕದ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಡೆಮಾಕ್ರಟಿಕ್ ಪಕ್ಷದ ಜೋ ಬೈಡನ್ ಅವರಿಗೆ ಶಾಂತಿಯುತವಾಗಿ ಅಧಿಕಾರ ಹಸ್ತಾಂತರ ಮಾಡುವಂತೆ ಹೇಳಿದ್ದಾರೆ.

‘ವಾಷಿಂಗ್ಟನ್ ಡಿಸಿಯಲ್ಲಿ ನಡೆದ ಹಿಂಸಾಚಾರವನ್ನು ನೋಡಿ ಕಸಿವಿಸಿಯಾಯಿತು. ಶಾಂತಿಯುತ ಮತ್ತು ಕ್ರಮಬದ್ಧ ಅಧಿಕಾರ ಹಸ್ತಾಂತರ ಪ್ರಕ್ರಿಯೆಯು ಮುಂದುವರಿಯಬೇಕು. ಇಂತಹ ಪ್ರಜಾಸತ್ತಾತ್ಮಕ ಪ್ರಕ್ರಿಯೆಗೆ ಕಾನೂನುಬಾಹಿರ ಪ್ರತಿಭಟನೆಯ ಮೂಲಕ ಧಕ್ಕೆತರಬಾರದು’ ಎಂದು ಮೋದಿ ಅವರು ಟ್ವೀಟ್ ಮಾಡಿದ್ದಾರೆ.

ಮೋದಿಯೂ ಸೇರಿದಂತೆ ಹಲವು ದೇಶಗಳ ಮುಖ್ಯಸ್ಥರು ಈ ಹಿಂಸಾಚಾರವನ್ನು ಖಂಡಿಸಿದ್ದಾರೆ. ಪ್ರಧಾನಿ ಮೋದಿ ಮತ್ತು ಟ್ರಂಪ್ ಅವರ ನಡುವೆ ಸ್ನೇಹ ಸಂಬಂಧವಿದೆ. ಅಮೆರಿಕದಲ್ಲಿ ನಡೆದಿದ್ದ ‘ಹೌಡಿ ಮೋದಿ’ ಕಾರ್ಯಕ್ರಮದಲ್ಲಿ ಟ್ರಂಪ್ ಅವರು ಮೋದಿಗೆ ಜತೆಯಾಗಿದ್ದರು. ಗುಜರಾತ್‌ನ ಅಹಮದಾಬಾದ್‌ನಲ್ಲಿ ಟ್ರಂಪ್ ಅವರಿಗಾಗಿ ‘ನಮಸ್ತೆ ಟ್ರಂಪ್’ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

ಆಧಾರ: ಪಿಟಿಐ, ರಾಯಿಟರ್ಸ್, ದಿ ವಾಷಿಗ್ಟನ್ ಪೋಸ್ಟ್, ನ್ಯಾಷನಲ್ ಜಿಯಾಗ್ರಫಿಕ್ ಚಾನಲ್, ಟ್ವಿಟರ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು