ಭಾನುವಾರ, 10 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅನುಭವ ಮಂಟಪ | ಪಶ್ಚಿಮ ಘಟ್ಟ: ವಿರೋಧಕ್ಕೆ ತರಾತುರಿಯೇಕೆ?

ಪಶ್ಚಿಮ ಘಟ್ಟ: ಪರಿಸರ ಸೂಕ್ಷ್ಮ ವಲಯ ಘೋಷಣೆ ಕರಡು ಅಧಿಸೂಚನೆ
Last Updated 3 ಆಗಸ್ಟ್ 2022, 21:00 IST
ಅಕ್ಷರ ಗಾತ್ರ

ಪಶ್ಚಿಮ ಘಟ್ಟವನ್ನು ಪರಿಸರ ಸೂಕ್ಷ್ಮ ವಲಯ ಎಂದು ಘೋಷಿಸಲು ಕೇಂದ್ರ ಅರಣ್ಯ ಸಚಿವಾಲಯವು ಹೊರಡಿಸಿರುವ ಕರಡು ಅಧಿಸೂಚನೆಗೆ ರಾಜ್ಯದಲ್ಲಿ ಭಾರಿ ವಿರೋಧ ವ್ಯಕ್ತವಾಗಿದೆ. ರಾಜ್ಯದ ಮಲೆನಾಡು ಭಾಗದ ಶಾಸಕರು ಮತ್ತು ಸಂಸದರು ಪಕ್ಷಾತೀತವಾಗಿ ಈ ಕರಡು ಅಧಿಸೂಚನೆಯ ವಿರುದ್ಧ ಧ್ವನಿ ಎತ್ತಿದ್ದಾರೆ. ಕರಡು ಅಧಿಸೂಚನೆ ಬಂದು, ಅದಕ್ಕೆ ಆಕ್ಷೇಪಗಳನ್ನು ಸಲ್ಲಿಸಲು 60 ದಿನಗಳವರೆಗೆ (ಸೆಪ್ಟೆಂಬರ್ 6ರವರೆಗೆ) ಕಾಲಾವಕಾಶವಿತ್ತು. ಆದರೆ ಮಲೆನಾಡಿನ ರಾಜಕಾರಣಿಗಳೆಲ್ಲರೂ ಅತ್ಯಂತ ತರಾತುರಿಯಲ್ಲಿ ದೆಹಲಿಗೆ ಓಡಿಹೋಗಿದ್ದಾರೆ ಮತ್ತು ತಮ್ಮ ಆಕ್ಷೇಪಗಳನ್ನು ದಾಖಲಿಸಿದ್ದಾರೆ. ಕರಡು ಅಧಿಸೂಚನೆಯಲ್ಲಿ ಏನಿದೆ ಎಂಬುದನ್ನು ಪರಿಶೀಲಿಸುವ ಮತ್ತು ಅವುಗಳ ಬಗ್ಗೆ ಜನರಲ್ಲಿ ಅರಿವು ಮೂಡಿಸುವ ಕೆಲಸವನ್ನೂ ಚುನಾಯಿತ ಜನಪ್ರತಿನಿಧಿಗಳು ಮಾಡಿಲ್ಲ.

ಇವನ್ನೂ ಓದಿ:

ಕರಡು ಅಧಿಸೂಚನೆಗೆ ಇಷ್ಟೊಂದು ತರಾತುರಿಯಲ್ಲಿ ವಿರೋಧ ವ್ಯಕ್ತಪಡಿಸಲು ರಾಜಕಾರಣಗಳು, ‘ಇದು ಜನರ ಪರವಾಗಿಲ್ಲ. ಹೀಗಾಗಿ ಜನರಿಗೆ ಒಳ್ಳೆಯದಾಗಲಿ ಎಂದು ವಿರೋಧ ವ್ಯಕ್ತಪಡಿಸುತ್ತಿದ್ದೇವೆ’ ಎಂದು ತಮ್ಮ ನಡೆಯನ್ನು ಸಮರ್ಥಿಸಿಕೊಳ್ಳುತ್ತಿದ್ದಾರೆ. ಆದರೆ, ಈ ಕರಡು ಅಧಿಸೂಚನೆಯು ಹೇಗೆ ಜನ ವಿರೋಧಿಯಾಗಿದೆ ಎಂಬುದನ್ನು ವಿವರಿಸುವ ಗೋಜಿಗೆ ಯಾವ ರಾಜಕಾರಣಿಯೂ ಹೋಗಿಲ್ಲ. ಇದರಿಂದಲೇ ಕರಡು ಅಧಿಸೂಚನೆಯ ಬಗ್ಗೆ ಜನರಲ್ಲಿ ಗೊಂದಲ ಮೂಡಿದೆ.

ಶಾಸಕರು ಮತ್ತು ಸಂಸದರು ಜನರ ಒಳಿತಿಗಾಗಿಯೇ ಈ ವಿರೋಧ ವ್ಯಕ್ತಪಡಿಸುತ್ತಿದ್ದಾರೆ ಎಂದುಕೊಂಡರೆ, ಮಲೆನಾಡಿನ ಜನರಿಗೆ ಸಂಬಂಧಿಸಿದ ಇತರ ಸಮಸ್ಯೆಗಳ ಬಗ್ಗೆ ಇಷ್ಟೇ ಕಾಳಜಿ ಏಕಿಲ್ಲ ಎಂಬ ಪ್ರಶ್ನೆ ಮೂಡುತ್ತದೆ. ಪಶ್ಚಿಮ ಘಟ್ಟವನ್ನು ಪರಿಸರ ಸೂಕ್ಷ್ಮ ಪ್ರದೇಶ ಎಂದು ಘೋಷಿಸಿದರೆ ಆ ಪ್ರದೇಶದಲ್ಲಿ ಇರುವ ಕಲ್ಲು ಮತ್ತು ಮರಳು ಗಣಿಗಾರಿಕೆಗಳನ್ನು ಹಂತಹಂತವಾಗಿ ಮುಚ್ಚಬೇಕಾಗುತ್ತದೆ. ಆ ಗಣಿಗಳಿಂದ ಇರುವ ಕೋಟ್ಯಂತರ ರೂಪಾಯಿ ಆದಾಯ ಖೋತಾ ಆಗುತ್ತದೆ. ಈ ಆದಾಯದಲ್ಲಿ ಸ್ಥಳೀಯ ರಾಜಕಾರಣಗಳಿಗೂ ಪಾಲು ಇದೆ ಮತ್ತು ಅವರಿಗೆ ಆದಾಯ ನಷ್ಟವಾಗುತ್ತದೆ ಎಂಬುದನ್ನು, ಅವರ ಈ ತರಾತುರಿಯು ತೋರಿಸುತ್ತದೆ. ರಾಜಕಾರಣಿಗಳು ಇದೇ ಕಾರಣಕ್ಕೆ ಈ ಕರಡು ಅಧಿಸೂಚನೆಯನ್ನು ವಿರೋಧಿಸುತ್ತಿದ್ದಾರೆ ಎಂದು ಪ್ರತಿಪಾದಿಸಲು ಹಲವು ಅಂಶಗಳನ್ನು ಈ ಕೆಳಗಿನಂತೆ ಪಟ್ಟಿ ಮಾಡಬಹುದು.

1.ಪರಿಸರ ಸೂಕ್ಷ್ಮ ಪ್ರದೇಶ ಕರಡು ಅಧಿಸೂಚನೆಯನ್ನು ಸರ್ಕಾರವೇ ಕನ್ನಡಕ್ಕೆ ಭಾಷಾಂತರಿಸಿ ಜನರಿಗೆ ಹಂಚ ಬೇಕು ಎಂದು ಮಲೆನಾಡಿನ ಆಳುವ ವರ್ಗವು ಏಕೆ ಒತ್ತಾಯಿಸುತ್ತಿಲ್ಲ? ಕರಡು ಅಧಿಸೂಚನೆಯಲ್ಲಿರುವ ಯಾವ ಅಂಶವನ್ನು ಮುಚ್ಚಿಡಲು ಇವರು ಯತ್ನಿಸುತ್ತಿ ದ್ದಾರೆ? ಕನ್ನಡಕ್ಕೆ ಭಾಷಾಂತರಿಸಿ ಜನರಿಗೆ ಹಂಚಿದರೆ, ಅವರೇ ಓದಿಕೊಂಡು ಪ್ರಶ್ನಿಸುತ್ತಾರೆ ಎಂಬ ಭಯವೇ?

2.ಜಾಗತಿಕ ತಾಪಮಾನ ಮತ್ತು ಹವಾಮಾನ ವೈಪರೀತ್ಯದ ಬಿಸಿ ಈಗಾಗಲೇ ಮಲೆನಾಡಿಗರಿಗೆ ತಟ್ಟುತಿದೆ. ನಿಜವಾಗಿಯೂ ನಮ್ಮ ಶಾಸಕರು ಮತ್ತು ಸಂಸದರು ಜನಪರ ಕಾಳಜಿ ಹೊಂದಿದ್ದರೆ ಪಶ್ಚಿಮ ಘಟ್ಟದಲ್ಲಿ ತುರ್ತಾಗಿ ಈ ವಿಷಯದ ಬಗ್ಗೆ ಸ್ಥಳೀಯರಲ್ಲಿ ಯಾಕೆ ಅರಿವು ಮೂಡಿಸುತ್ತಿಲ್ಲ?

3.ಅತಿಯಾದ ವಾಣಿಜ್ಯೀಕರಣ ಮಾಡಬಾರದು ಎಂಬ ಉದ್ದೇಶದಿಂದ ಕೃಷಿ ಮತ್ತು ಸರ್ಕಾರಿ ಜಾಗಗಳನ್ನೂ ಪರಿಸರ ಸೂಕ್ಷ್ಮ ಪ್ರದೇಶಕ್ಕೆ ಸೇರಿಸಲಾಗಿದೆ. ರಕ್ಷಿತಾರಣ್ಯಗಳಿಗೆ ಅರಣ್ಯ ಮತ್ತು ವನ್ಯಜೀವಿ ಕಾಯ್ದೆಯ ರಕ್ಷಣೆ ಈಗಾಗಲೇ ಇದೆ. ಪರಿಸರ ಸೂಕ್ಷ್ಮ ಪ್ರದೇಶವನ್ನು ಬರೀ ಅರಣ್ಯ ಪ್ರದೇಶಗಳಿಗೆ ಸೀಮಿತವಾಗಿಡಿ ಎಂದು ರಾಜಕಾರಣಿಗಳು ಹೇಳುತ್ತಿರುವುದೇ ಹಾಸ್ಯಾಸ್ಪದ. ಅರಣ್ಯ ಪ್ರದೇಶದಲ್ಲಿ ಮರಳು ಮತ್ತು ಕಲ್ಲುಗಣಿಗಾರಿಕೆ ಮಾಡಲು ಅವಕಾಶವಿಲ್ಲ ಎಂಬುದು ರಾಜಕಾರಣಿಗಳಿಗೆ ಗೊತ್ತಿದೆ. ಅವರಿಗೆ ಸೇರಿರುವ ಗಣಿಗಾರಿಕೆಗಳ ಜಾಗಗಳೆಲ್ಲಾ ಇರುವುದು ಕೃಷಿ ಮತ್ತು ಸರ್ಕಾರಿ ಭೂಮಿಯಲ್ಲಿ. ಅದನ್ನು ಪರಿಸರ ಸೂಕ್ಷ್ಮ ಪ್ರದೇಶಕ್ಕೆ ಸೇರಿಸಿದರೆ ಇವರ ಆದಾಯ ಶೂನ್ಯವಾಗುತ್ತದೆ. ಆದ್ದರಿಂದ ಅವರು ದೆಹಲಿಗೆ ತರಾತುರಿಯಲ್ಲಿ ಓಡಿಹೋಗಿದ್ದಾರೆ. ಬದಲಿಗೆ ಇವರ‍್ಯಾರೂ ಜನರ ಪರವಾಗಿಯೂ ಇಲ್ಲ, ಪರಿಸರದ ಪರವಂತೂ ಇಲ್ಲವೇ ಇಲ್ಲ

4.ಜನರ ಹಿತಕ್ಕಾಗಿ ಈ ಕರಡು ಅಧಿಸೂಚನೆಯನ್ನು ವಿರೋಧಿಸುತ್ತಿದ್ದೇವೆ ಎಂದು ರಾಜಕಾರಣಿಗಳು ಹೇಳುತ್ತಿದ್ದಾರೆ. ಆದರೆ ಜನರ ಹಿತಕ್ಕಾಗಿ ತುರ್ತಾಗಿ ಆಗಬೇಕಿದ್ದ ಕೆಲಸಗಳನ್ನು ನಿರ್ಲಕ್ಷಿಸಲಾಗಿದೆ. ಕೊಡಗು ಮತ್ತು ಚಿಕ್ಕಮಗಳೂರಿನಲ್ಲಿ ನಡೆದ ಭೂಕುಸಿತಕ್ಕೆ ಇನ್ನೂ ಪರಿಹಾರ ಬಂದಿಲ್ಲ. ಮಲೆನಾಡಿನಲ್ಲಿ ಶಿಥಿಲಾವಸ್ಥೆಯಲ್ಲಿರುವ ಸರ್ಕಾರಿ ಶಾಲೆಗಳು ಮತ್ತು ಆಸ್ಪತ್ರೆಗಳನ್ನು ಅಭಿವೃದ್ಧಿಪಡಿಸಿಲ್ಲ. ಶಿವಮೊಗ್ಗ ಜಿಲ್ಲೆಯಲ್ಲಿ ಮಂಗನ ಕಾಯಿಲೆಗೆ ಕಳೆದ ಹತ್ತು ವರ್ಷದಿಂದ ನೂರಾರು ಜನ ಸತ್ತರೂ, ಅಗತ್ಯ ಪ್ರಮಾಣದ ಲಸಿಕೆಗಳು ಪೂರೈಕೆಯಾಗುತ್ತಿಲ್ಲ. ಭೂರಹಿತರಿಗೆ ಭೂಮಿ ಒದಗಿಸುವ ಬಗ್ಗೆ ಚಿಂತನೆಯೇ ನಡೆದಿಲ್ಲ. ಅಡಿಕೆಯ ಹಳದಿ ರೋಗಕ್ಕೆ ಪರಿಹಾರ ಕಂಡುಕೊಂಡಿಲ್ಲ. ಇವು ಯಾವುವೂ ಜನರ ಹಿತಕಾಯುವ ವಿಷಯವಲ್ಲವೇ? ಇವುಗಳ ಪರಿಹಾರಕ್ಕೆ ತರಾತುರಿ ಏಕಿಲ್ಲ?

5.ಪಶ್ಚಿಮ ಘಟ್ಟವನ್ನು ಹಾದು ಹೋಗುವ ಕೆಲವು ಹೆದ್ದಾರಿಗಳ ವಿಸ್ತರಣೆ ಯೋಜನೆಗಳು ಚಾಲ್ತಿಯಲ್ಲಿವೆ. ಹಲವು ಯೋಜನೆಗಳು ಕಾರ್ಯಸಾಧ್ಯತಾ ಅಧ್ಯಯನದ ಹಂತದಲ್ಲಿವೆ. ಪಶ್ಚಿಮ ಘಟ್ಟವನ್ನು ಪರಿಸರ ಸೂಕ್ಷ್ಮ ಪ್ರದೇಶ ಎಂದು ಘೋಷಿಸಿದರೆ, ಒಟ್ಟು 18 ಬೃಹತ್ ಯೋಜನೆಗಳು ನಿಂತು ಹೋಗುತ್ತವೆ. ಇಂತಹ ಯೋಜನೆಗಳ ಜಾರಿಯಲ್ಲಿ ಸ್ಥಳೀಯ ಶಾಸಕರು ಮತ್ತು ಸಂಸದರ ಪಾತ್ರ ಮಹತ್ವದ್ದಾಗಿರುತ್ತದೆ. ಯೋಜನೆ ರದ್ದಾದರೆ ಅದು ರಾಜಕಾರಣಿಗಳಿಗೆ ಹಿನ್ನಡೆಯಾಗುತ್ತದೆ.

ಪಶ್ಚಿಮ ಘಟ್ಟ ಪ್ರದೇಶದ ಪ್ರಮುಖ ಯೋಜನೆಗಳು

1. ಬೆಳಗಾವಿ –ಗೋವಾ ರಾಷ್ಟ್ರೀಯ ಹೆದ್ದಾರಿ (NH4A) ವಿಸ್ತರಣೆ

2. ಕಾಳಿ ಹುಲಿ ಸಂರಕ್ಷಿತ ಅರಣ್ಯದಲ್ಲಿ ತಿನಾಯ್ ಘಾಟ್–ಕ್ಯಾಸಲ್ ರಾಕ್–ವಾಸ್ಕೋ (ಗೋವಾ) ಜೋಡಿ ರೈಲು ಮಾರ್ಗ

3. ಕೈಗಾ ಅಣು ಸ್ಥಾವರದ ಐದನೇ ಹಾಗೂ ಆರನೇ ಘಟಕಗಳ ವಿಸ್ತರಣೆ

4. ಹುಬ್ಬಳ್ಳಿ ಅಂಕೋಲಾ ರೈಲ್ವೆ ಯೋಜನೆ

5. ಶಿರಸಿ – ಕುಮಟಾ ಹೆದ್ದಾರಿ (NH766E) ವಿಸ್ತರಣೆ

6. ಶರಾವತಿ ಸಿಂಹಬಾಲದ ಸಿಂಗಳೀಕ ವನ್ಯಜೀವಿ ಅಭಯಾರಣ್ಯದಲ್ಲಿ 2000 ಮೆಗಾವಾಟ್‌ ಅಂತರ್ಗತ ಜಲವಿದ್ಯುತ್ ಯೋಜನೆ (Pumped storage project)

7. ಶರಾವತಿ ಕಣಿವೆಯಲ್ಲಿ ಸರ್ವಋತು ಜಲಪಾತ ಮತ್ತು 5 ಸ್ಟಾರ್ ಹೋಟೆಲ್ ಇತ್ಯಾದಿ ಯೋಜನೆಗಳು

8. ಸಾಗರ-ಸಿಗಂದೂರು-ಕೊಲ್ಲೂರು ರಸ್ತೆ (NH369E) ವಿಸ್ತರಣೆ

9. ಶಿಕಾರಿಪುರ–ಹೊಸನಗರ-ನಗರ-ನಿಟ್ಟೂರು–ಬೈಂದೂರು ಮಾರ್ಗವಾಗಿ ಸಾಗುವ (NH766C) ರಾಷ್ಟ್ರೀಯ ಹೆದ್ದಾರಿ ವಿಸ್ತರಣೆ

10. ಆಗುಂಬೆ ಮತ್ತು ಸೋಮೇಶ್ವರ ವನ್ಯಜೀವಿ ಅಭಯಾರಣ್ಯವನ್ನು ಹಾದು ಹೋಗುವ ತೀರ್ಥಹಳ್ಳಿ–ಮಲ್ಪೆ 2 ಪಥಗಳ ರಾಷ್ಟ್ರೀಯ ಹೆದ್ದಾರಿ (NH169A) ಅಗಲೀಕರಣ.

11. ಶೆಟ್ಟಿಹಳ್ಳಿ ವನ್ಯಜೀವಿ ಅಭಯಾರಣ್ಯ ಮತ್ತು ಕುದುರೆಮುಖ ರಾಷ್ಟ್ರೀಯ ಉದ್ಯಾನದ ಮೇಲೆ ಹಾದುಹೋಗುವ ಶಿವಮೊಗ್ಗ-ತೀರ್ಥಹಳ್ಳಿ-ಶೃಂಗೇರಿ-ಕಾರ್ಕಳ-ಮಂಗಳೂರು ರಾಷ್ಟ್ರೀಯ ಹೆದ್ದಾರಿ (NH169) ಅಗಲೀಕರಣ

12. ಚಾರ್ಮಾಡಿ ಘಾಟಿ ವಿಸ್ತರಣೆ

13. ಬೆಂಗಳೂರು–ಮಂಗಳೂರು ಹೆದ್ದಾರಿ (NH75) ವಿಸ್ತರಣೆ

14. ಹೊಳೆನರಸೀಪುರ -ಅರಕಲಗೂಡು -ಶನಿವಾರಸಂತೆ- ಸೋಮವಾರಪೇಟೆ-ಮಡಿಕೇರಿ ರಾಜ್ಯ ಹೆದ್ದಾರಿ, ರಾಷ್ಟ್ರೀಯ ಹೆದ್ದಾರಿಯಾಗಿ ಪರಿವರ್ತನೆ.

15. ಪಣತ್ತೂರು (ಕೇರಳ)-ಭಾಗಮಂಡಲ-ಮಡಿಕೇರಿ-ಮೈಸೂರು ರಸ್ತೆ ವಿಸ್ತರಣೆ

16. ಮೈಸೂರು-ಕುಶಾಲನಗರ-ಮಡಿಕೇರಿ ರೈಲ್ವೆ ಯೋಜನೆ

ಜೀವಸಂಕುಲದ ಉಳಿವಿಗೆ ಬೇಕು ಪಶ್ಚಿಮ ಘಟ್ಟ -ಆರ್.ಕೆ.ಮಧು

ಪಶ್ಚಿಮ ಘಟ್ಟವನ್ನು ಪಾರಂಪರಿಕ ತಾಣ ಎಂದು ಘೋಷಿಸಬೇಕು ಎಂಬ ನಮ್ಮ ಬೇಡಿಕೆ ಹಲವು ವರ್ಷಗಳಿಂದಲೂ ಬೇಡಿಕೆಯಾಗಿಯೇ ಇದೆ. ವರದಿಗಳು ಕಡತದಲ್ಲಿ ಉಳಿದವೇ ಹೊರತು ಕಾರ್ಯರೂಪಕ್ಕೆ ಬರಲಿಲ್ಲ. ಪಶ್ಚಿಮ ಘಟ್ಟವನ್ನು ಪರಿಸರ ಸೂಕ್ಷ್ಮ ಪ್ರದೇಶ ಎಂದು ಘೋಷಿಸುವ ವಿಚಾರದಲ್ಲೂ ವಿಳಂಬವಾಗುತ್ತಿದೆ.ಪರಿಸರ ಸೂಕ್ಷ್ಮ ಪ್ರದೇಶ ಎಂದು ಘೋಷಿಸಿದರೆ ಅಭಿವೃದ್ಧಿ ಕಾರ್ಯಕ್ಕೆ ಅವಕಾಶ ಇಲ್ಲ ಎಂಬುದು ವಿರೋಧ ವ್ಯಕ್ತಪಡಿಸುವವರು ಹೇಳುವ ಮಾತು.

ಕಾಡಿನ ಆರೋಗ್ಯವನ್ನು ಹದಗೆಡಿಸಿ ಅಭಿವೃದ್ಧಿ ಮಾಡಲು ಹೊರಟರೆ ಆ ಪ್ರದೇಶದಲ್ಲಿರುವ ಜನರು ತೊಂದರೆ ಅನುಭವಿಸುವುದು ಖಚಿತ. ಕೊಡಗು, ಉತ್ತರ ಕನ್ನಡದ ಉದಾಹರಣೆಗಳು ನಮ್ಮ ಕಣ್ಣ ಮುಂದಿವೆ. ಎರಡು ವರ್ಷಗಳಲ್ಲಿ ಈ ಜಿಲ್ಲೆಗಳಲ್ಲಿ ಹಲವು ಕಡೆ ಗುಡ್ಡಗಳು ಕುಸಿದು ಅನಾಹುತಗಳೇ ಉಂಟಾಗಿವೆ. ಪ್ರಕೃತಿಯನ್ನು ಹಾಳು ಮಾಡಿ ಅಭಿವೃದ್ಧಿ ಮಾಡಿದರೆ ಮನುಕುಲಕ್ಕೆ ಬದುಕಲು ಸಾಧ್ಯವೇ? ಇರುವ ಅರಣ್ಯವನ್ನು ರಕ್ಷಿಸುವ ನಿಟ್ಟಿನಲ್ಲಿ ಸರ್ಕಾರ ಕ್ರಮ ಕೈಗೊಳ್ಳಬೇಕು. ಅಪರೂಪದ, ವೈವಿಧ್ಯಮಯ ಜೀವ ಸಂಕುಲಕ್ಕೆ ಆಶ್ರಯ ಒದಗಿಸಿರುವ ಪಶ್ಚಿಮ ಘಟ್ಟವನ್ನು ಉಳಿಸಲು ಕಸ್ತೂರಿರಂಗನ್‌ ವರದಿ ಜಾರಿಗೆ ಬರಬೇಕು.

- ಆರ್.ಕೆ.ಮಧು,ವನ್ಯಜೀವಿ ಛಾಯಾಗ್ರಾಹಕ, ಗುಂಡ್ಲುಪೇಟೆ

****

ಕೆಲವು ಬದಲಾವಣೆ ಅಗತ್ಯ -ಕವಲಕೋಡು

ಪ್ರಪಂಚದಲ್ಲಿ ಇರುವುದೊಂದೇ ಪಶ್ಚಿಮ ಘಟ್ಟ ಅದರ ರಕ್ಷಣೆ ನಮ್ಮೆಲ್ಲರ ಹೊಣೆ. ಮುಂದಿನ ಜನಾಂಗಕ್ಕೆ ನಾವು ರಕ್ಷಿಸದೇ ಹೋದರೆ, ಅವರ ಶಾಪ ನಮಗೆ ತಟ್ಟುತ್ತದೆ. ಅದರಿಂದ ಭೀಕರ ಪರಿಣಾಮಗಳಾಗುವುದರಲ್ಲಿ ಸಂದೇಹವಿಲ್ಲ. ಆದರೆ, ಪಶ್ಚಿಮ ಘಟ್ಟ ಸಂರಕ್ಷಣೆಗಾಗಿ ಹೊರಡಿಸಿರುವ ಕರಡು ಅಧಿಸೂಚನೆಯಲ್ಲಿ ಕೆಲವು ಬದಲಾವಣೆಗಳ ಅಗತ್ಯವಿದೆ. ಅವು ಈ ಮುಂದಿನಂತಿವೆ

1.ಬೃಹತ್ ಗಣಿಗಾರಿಕೆ, ಬೃಹತ್ ಉಷ್ಣ ಕೈಗಾರಿಕೆಗಳನ್ನು ಸ್ಥಾಪಿಸಲು ಅವಕಾಶ ನೀಡಬಾರದು.

2.ಪರಿಸರ ಸೂಕ್ಷ್ಮ ಪ್ರದೇಶದ ಹಳ್ಳಿಗಳು ರೈತರನ್ನು, ವನವಾಸಿಗಳನ್ನು, ಬುಡಕಟ್ಟು ಜನಾಂಗದವರನ್ನು ಒಕ್ಕಲೆಬ್ಬಿಸಬಾರದು. ರೈತರ ಪಾರಂಪರಿಕ ಉದ್ಯೋಗಕ್ಕೆ ಯಾವುದೇ ತೊಂದರೆಯಿಲ್ಲವೆಂದು ಘೋಷಿಸಬೇಕು.

3.ಹಳ್ಳಿಗಳಲ್ಲಿನ ಕೆರೆ, ನಿಸರ್ಗ, ಅರಣ್ಯ ಸಮ್ರದ್ಧಿಗಳು, ಕಾಡು, ಡೀಮ್ಡ್ ಅರಣ್ಯ ಯಥಾಸ್ಥಿತಿಯಲ್ಲಿ ಮುಂದುವರೆಯಬೇಕು ಎಂದು ನಮೂದಿಸಬೇಕು.

4.ಪಶ್ಚಿಮ ಘಟ್ಟದಲ್ಲಿ ಹಸಿರುಬೆಳೆಗೆ ಉತ್ತೇಜಿಸುವುದು. ಬೆಳೆಗಾರರನ್ನು ಸಾವಯುವ ಕೃಷಿಯೆಡೆಗೆ ಸೆಳೆಯುವುದು. ಉತ್ಪನ್ನಗಳನ್ನು ವಿಶ್ವ ಮಾರುಕಟ್ಟೆಯಲ್ಲಿ ಬೇರೆ ಬೇರೆ ಬ್ರ್ಯಾಂಡ್‌ ಸೃಷ್ಟಿಸಲು ಪ್ರೋತ್ಸಾಹಿಸಬೇಕು.

5. ಪರಿಸರ ಸೂಕ್ಷ್ಮ ಹಳ್ಳಿಗಳೆಂದು ಘೋಷಿಸಿದ ಗ್ರಾಮದ ರೈತರ ಬದುಕಿಗೆ ಯಾವುದೇ ತೊಂದರೆ ಇರಬಾರದು.

6. ಗ್ರಾಮ ಸಭೆಗಳ ಮತ್ತು ಸಮುದಾಯ ಅಭಿಪ್ರಾಯ ಕೇಳದೇ ಯಾವುದೇ ಯೋಜನೆಗಳನ್ನು ಜಾರಿ ಮಾಡಬಾರದು.

7. ಪಾರಂಪರಿಕ ಸೇವೆಗಳನ್ನು ನೀಡುವ ಹಳ್ಳಿಗಳಲ್ಲಿ ರಾಜ್ಯ ಮತ್ತು ಕೇಂದ್ರ ಸರ್ಕಾರವು ಈ ಹಳ್ಳಿಗಳ ಅಭಿವೃದ್ಧಿಗಾಗಿ ಅತಿ ಹೆಚ್ಚಿನ ಅನುದಾನಗಳನ್ನು ನೀಡಬೇಕು.

8.ಗ್ರಾಮ ಪಂಚಾಯಿತಿ, ತಾಲ್ಲೂಕು ಮತ್ತು ಜಿಲ್ಲಾ ಮಟ್ಟದ ಪರಿಸರ ಸೂಕ್ಷ್ಮ ಹಳ್ಳಿಗಳಲ್ಲಿ ಕನ್ನಡದಲ್ಲಿ ಕರಡು ಅಧಿಸೂಚನೆ ಪ್ರಕಟಿಸಿ ಗ್ರಾಮದ ಜನರಿಗೆ ತಿಳಿಸಿ ಅವರ ಅಭಿಪ್ರಾಯ ಪಡೆದು ಜನರಿಗೆ ಅನುಕೂಲವಾಗುವಂತೆ ಪಶ್ಚಿಮ ಘಟ್ಟವನ್ನು ಸಂರಕ್ಷಿಸಿ ಕಾಪಾಡುವ ನಿರ್ಣಯವಿರಬೇಕು.

9.ಪಶ್ಚಿಮ ಘಟ್ಟವಿರುವ ಸೂಕ್ಷ್ಮ ಪ್ರದೇಶದ ಅಭಿವೃದ್ದಿಗೆ ಸ್ಥಳೀಯರನ್ನೊಳಗೊಂಡ ಉನ್ನತ ಮಟ್ಟದ ಸಮಿತಿ ರಚಿಸಬೇಕು.‌

- ಕವಲಕೋಡು ಕೆ.ವೆಂಕಟೇಶ., ಸದಸ್ಯ, ಕರ್ನಾಟಕ ಜೀವ ವೈವಿಧ್ಯ ಮಂಡಳಿ

*****

ಸಂರಕ್ಷಣೆಯ ಇತರ ಸಾಧ್ಯತೆಗಳು

ಪಶ್ಚಿಮ ಘಟ್ಟದ ಸಂರಕ್ಷಣೆಗೆ ಸಂಬಂಧಿಸಿದಂತೆ ನೀಡಲಾಗಿರುವ ಯಾವುದೇ ವರದಿಗಳನ್ನು ಅನುಷ್ಠಾನ ಮಾಡದೇ ಇದ್ದರೂ, ಸಂರಕ್ಷಣೆಯ ಬೇರೆ ಸಾಧ್ಯತೆಗಳೂ ಇವೆ. ಅವು ಈ ಮುಂದಿನಂತಿವೆ.

1.ಸಂವಿಧಾನದ 371 (ಎ) ವಿಧಿಯ ಅಡಿ ಈಶಾನ್ಯ ರಾಜ್ಯಗಳಿಗೆ ನೀಡಿರುವಂತಹ ವಿಶೇಷ ಸ್ಥಾನವನ್ನು ಪಶ್ಚಿಮ ಘಟ್ಟಗಳಿಗೂ ನೀಡಬಹುದು.

2.ಹೊರಗಿನವರು ಅಥವಾ ಹೊರರಾಜ್ಯದವರು ಪಶ್ಚಿಮ ಘಟ್ಟದಲ್ಲಿ ಭೂಹಕ್ಕು ಪಡೆಯದಂತೆ ಕರ್ನಾಟಕ ಭೂ ಸುಧಾರಣೆ ಕಾನೂನಿಗೆ ತಿದ್ದುಪಡಿ ತರಬಹುದು. ಇದಕ್ಕಾಗಿ ವಲಸೆ ನೀತಿಯನ್ನೂ ರಚಿಸಬಹುದು.

3.ಪಟ್ಟಣಗಳ ಕಲುಷಿತ ನೀರು ಪಶ್ಚಿಮ ಘಟ್ಟ ಸೇರಿ, ಗಣನೀಯ ಹಾನಿಯನ್ನುಂಟು ಮಾಡುತ್ತಿವೆ. ಹೀಗಾಗಿ ಮಲಿನಯುಕ್ತ ನೀರನ್ನು ಪಟ್ಟಣಗಳಲ್ಲೇ ಸಂಸ್ಕರಿಸಿ ಮರುಬಳಕೆ ಮಾಡುವ ನಿಟ್ಟಿನಲ್ಲಿ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಬೇಕು.

4.ಪರಿಸರ ಸೂಕ್ಷ್ಮ ಪ್ರದೇಶದ ರೈತರುಗಳಿಗೆ ಹೆಚ್ಚುವರಿ ಭದ್ರತೆ ನೀಡುವ ಸಲುವಾಗಿ ಗರಿಷ್ಟ ಬೆಂಬಲ ಬೆಲೆಯನ್ನು ನೀಡುವುದು ಹಾಗೂ ಸಂರಕ್ಷಣೆಯ ಸಲುವಾಗಿ ನೈಸರ್ಗಿಕ ಸೇವೆಗಳಿಗೆ ಬೆಲೆ ನೀಡುವಂತೆ ತಿದ್ದುಪಡಿ ಮಾಡಬೇಕು.

5.ಮಾನವ-ವನ್ಯಜೀವಿ ಸಂಘರ್ಷದಲ್ಲಿ ನಷ್ಟವಾಗುವ ರೈತರಿಗೆ ಇನ್ನೂ ಹೆಚ್ಚಿನ ಪರಿಹಾರವನ್ನು ತ್ವರಿತವಾಗಿ ನೀಡುವ ವ್ಯವಸ್ಥೆಯಾಗಬೇಕು.

6.ಪಾರಂಪಾರಿಕವಾಗಿ ಬೆಳೆಯುವ ಭತ್ತದ ತಳಿಗಳ ಬೆಳೆಗಳಿಗೆ ಹೆಚ್ಚಿನ ಪ್ರೋತ್ಸಾಹ ನೀಡುವಂತೆ ನರೇಗಾ ಯೋಜನೆಯನ್ನು ವಿಸ್ತರಿಸಬೇಕು. ಈ ಮೂಲಕ ರಾಸಾಯನಿಕ ಗೊಬ್ಬರಗಳ ಬಳಕೆ ಕಡಿಮೆ ಮಾಡಬೇಕು.

7.ಗುಡ್ಡಗಾಡುಗಳಿಗೆ ಸೂಕ್ತವಾಗುವಂತೆ ವೈಜ್ಞಾನಿಕ ಆಧಾರಿತ ನಿಯಮಗಳಿಗೆ ಒಳಪಟ್ಟು ಮನೆಗಳನ್ನು ನಿರ್ಮಿಸುವುದು ಹಾಗೂ ಯಾವುದೇ ಕಾರಣಕ್ಕೂ ನೆಲ ಕುಸಿಯದಂತಹ ಪೂರಕ ಅಂದರೆ, ಅರಣ್ಯ ಬೆಳೆಸುವಂತೆ ನೋಡಿಕೊಳ್ಳಬೇಕು.

8.ಪರಿಸರ ಸೂಕ್ಷ್ಮ ಪ್ರದೇಶದ ಜಿಲ್ಲೆಯ ಜಿಲ್ಲಾಧಿಕಾರಿಗಳಿಗೆ ಹಾಗೂ ಉಪ ವಿಭಾಗಾಧಿಕಾರಿಗಳಿಗೆ ಮತ್ತು ತಾಲ್ಲೂಕು ಮಟ್ಟದಲ್ಲಿ ತಹಶೀಲ್ದಾರ್ ಮಟ್ಟದ ಅಧಿಕಾರಿಗಳಿಗೆ ಇಲ್ಲಿನ ಜೀವಿವೈವಿಧ್ಯದ ಕುರಿತಾಗಿ ಜಾಗೃತಿ ಮೂಡಿಸಬೇಕು ಮತ್ತು ಆ ಮೂಲಕ ಬೇಕಾಬಿಟ್ಟಿ ಭೂಪರಿವರ್ತನೆಯಾಗದಂತೆ ನೋಡಿಕೊಳ್ಳುವುದು.

ಪರಿಸರವನ್ನು ಕಾಪಾಡಿಕೊಳ್ಳುವ ಮೂಲಕ ಶುದ್ಧಗಾಳಿ, ನೀರು, ಆಹಾರ ಭದ್ರತೆ ನೀಡುವುದು ಆಳುವ ವರ್ಗದ ಪ್ರತಿಯೊಬ್ಬರ ಆದ್ಯ ಕರ್ತವ್ಯವಾಗಿರುತ್ತದೆ. ಹೀಗಾಗಿ ಪಶ್ಚಿಮ ಘಟ್ಟಗಳ ರಕ್ಷಣೆಗೆ ರಾಜಕಾರಣಿಗಳು ಅಗತ್ಯ ಕ್ರಮ ತೆಗೆದುಕೊಳ್ಲಬೇಕು. ಬದಲಿಗೆ ಅಭಿವೃದ್ಧಿಯ ಹೆಸರಿನಲ್ಲಿ ಪಶ್ಚಿಮ ಘಟ್ಟಗಳನ್ನು ಕಳೆದುಕೊಂಡರೆ, ಈ ಎಲ್ಲಾ ಭದ್ರತೆಗಳ ತಳಪಾಯವೇ ಕುಸಿದುಹೋಗುತ್ತದೆ.

ಲೇಖಕ: ಪಶ್ಚಿಮಘಟ್ಟ ಜಾಗೃತಿ ವೇದಿಕೆಯ ಮುಂದಾಳು,ಕೊಪ್ಪ, ಚಿಕ್ಕಮಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT