ಬುಧವಾರ, ಜೂನ್ 16, 2021
28 °C

ಆಳ-ಅಗಲ: ಹನುಮನ ಜನ್ಮ ಸ್ಥಳ ಯಾವುದು?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ರಾಮಾಯಣ ಮಹಾಕಾವ್ಯದಲ್ಲಿ ಹನುಮಂತ ಅಥವಾ ಆಂಜನೇಯನಿಗೆ ಎಷ್ಟು ಮಹತ್ವವಿದೆ ಎಂಬುದು ಎಲ್ಲರಿಗೂ ಗೊತ್ತು. ಆಂಜನೇಯನ ಬಗ್ಗೆ ಜನರಲ್ಲಿ ಪೂಜ್ಯ ಭಾವ ಇದೆ. ಆದರೆ, ಆಂಜನೇಯ ಹುಟ್ಟಿದ್ದು ಎಲ್ಲಿ ಎಂಬುದು ಈಗ ದೊಡ್ಡ ಚರ್ಚೆಗೆ ಕಾರಣವಾಗಿದೆ. ಹನುಮ ಹುಟ್ಟಿದ್ದು ತಿರುಪತಿಯಲ್ಲಿ ಎಂದು ತಿರುಪತಿ ತಿರುಮಲ ದೇವಸ್ಥಾನಂ ಟ್ರಸ್ಟ್‌ ಇತ್ತೀಚೆಗೆ ಹೇಳಿತ್ತು. ಅದಕ್ಕೆ ಪ್ರತಿಯಾಗಿ, ಆಂಜನೇಯ ಹುಟ್ಟಿದ್ದು ಹಂಪಿಯ ಅಂಜನಾದ್ರಿಯಲ್ಲಿ ಎಂಬ ವಾದವೂ ಮುನ್ನೆಲೆಗೆ ಬಂದಿದೆ. ಹನುಮ ಹುಟ್ಟಿದ ಸ್ಥಳ ಎಂದು ನಂಬಲಾಗುವ ಹಲವು ಸ್ಥಳಗಳು ದೇಶದಲ್ಲಿ ಇವೆ

ಮುನ್ನೆಲೆಗೆ ಬಂದ ಅಂಜನಾದ್ರಿ
ವಿಶ್ವಪ್ರಸಿದ್ಧ ಹಂಪಿಗೆ ಹೊಂದಿಕೊಂಡಿರುವ, ರಾಮನ ಪರಮ ಭಕ್ತ ಆಂಜನೇಯನ ಜನ್ಮಸ್ಥಳ ಎಂದು ಹೇಳಲಾಗುವ ಕಿಷ್ಕಿಂಧೆಯ ಅಂಜನಾದ್ರಿ ಪರ್ವತ ಈಗ ಬಹಳ ಚರ್ಚೆಯಲ್ಲಿದೆ.

ಕಳೆದ ಎರಡು ದಶಕಗಳಲ್ಲಿ ಅಂಜನಾದ್ರಿ ಪರ್ವತದ ಚಹರೆ ದೊಡ್ಡ ಮಟ್ಟದಲ್ಲಿ ಬದಲಾಗಿರುವುದು ನೋಡಿದರೆ ಎಂತಹವರಲ್ಲೂ ಬೆರಗು ಮೂಡುತ್ತದೆ. 20 ವರ್ಷಗಳ ಹಿಂದೆ ಅಂಜನಾದ್ರಿ ಬೆಟ್ಟ ಹತ್ತಿಕೊಂಡು ಹೋಗುವುದಕ್ಕೆ ಮೆಟ್ಟಿಲುಗಳ ಸೌಕರ್ಯವೂ ಇರಲಿಲ್ಲ. ಹಂಪಿ ಸುತ್ತಮುತ್ತಲಿನ ಇತರೆ ಬೆಟ್ಟಗುಡ್ಡಗಳಂತೆ ಅದು ಕೂಡ ಒಂದಾಗಿತ್ತು. ಆದರೆ, ಇಪ್ಪತ್ತು ವರ್ಷಗಳಲ್ಲಿ ಅದರ ಸ್ವರೂಪವೇ ಬದಲಾಗಿದೆ. ಭಾರತದ ಭೂಪಟದಲ್ಲಿ ಅದಕ್ಕೆ ವಿಶೇಷ ಸ್ಥಾನಮಾನ ಸಿಕ್ಕಿದೆ. 

ಚಿಕ್ಕಮಗಳೂರಿನ ಬಾಬಾ ಬುಡನ್‌ಗಿರಿಯ ದತ್ತಮಾಲೆ ಧಾರ್ಮಿಕ ಆಚರಣೆಯ ಮಾದರಿಯಲ್ಲಿ ಅಂಜನಾದ್ರಿಯಲ್ಲಿ ಹನುಮ ಮಾಲೆ ಕಾರ್ಯಕ್ರಮ ಆರಂಭಗೊಂಡಿದೆ. ಅಂದಹಾಗೆ, ಈ ಧಾರ್ಮಿಕ ಆಚರಣೆಗೆ 15 ವರ್ಷಗಳ ಇತಿಹಾಸವಷ್ಟೇ ಇದೆ. ಆರಂಭದಲ್ಲಿ ಬೆರಳೆಣಿಕೆಯ ಜನರಷ್ಟೇ ಹನುಮಮಾಲೆ ಧರಿಸಿ, ವ್ರತ ಮಾಡುತ್ತಿದ್ದರು. ಈ ಆಚರಣೆಯು ಹಂಪಿ, ಅಂಜನಾದ್ರಿ ಸುತ್ತಮುತ್ತಲಿನ ಸ್ಥಳಗಳಿಗಷ್ಟೇ ಸೀಮಿತವಾಗಿತ್ತು. ಈಗ ಇದು ರಾಜ್ಯದ ಬಹುತೇಕ ಜಿಲ್ಲೆಗಳಿಗೆ ವಿಸ್ತರಿಸಿದೆ. ಪ್ರತಿ ವರ್ಷ ಸಾವಿರಾರು ಸಂಖ್ಯೆಯಲ್ಲಿ ಜನ ಹನುಮ ಮಾಲೆ ಧರಿಸಿ, ಅಂಜನಾದ್ರಿಗೆ ಬಂದು ಮಾಲೆ ವಿಸರ್ಜಿಸಿ ವ್ರತ ಮುಗಿಸುತ್ತಾರೆ.

ಅಂಜನಾದ್ರಿಯನ್ನು ಕೇಂದ್ರೀಕರಿಸಿಕೊಂಡು ರಾಷ್ಟ್ರೀಯ ಸ್ವಯಂ ಸೇವಕ ಸಂಘ, ವಿಶ್ವ ಹಿಂದೂ ಪರಿಷತ್‌, ಬಜರಂಗ ದಳ ಅನೇಕ ಕಾರ್ಯಕ್ರಮಗಳನ್ನು ಮೇಲಿಂದ ಮೇಲೆ ಆಯೋಜಿಸುತ್ತಿರುತ್ತವೆ. ಈ ಸಂಘಟನೆಗಳ ಮುಖಂಡರು ಭೇಟಿ ನೀಡಿ, ಧಾರ್ಮಿಕ ಸಭೆಗಳನ್ನು ನಡೆಸುತ್ತಾರೆ. ಹಿಂದೂ ಜನಜಾಗೃತಿ ಸಮಾಜೋತ್ಸವವು ಇದರ ಭಾಗ. 


ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲ್ಲೂಕಿನ ಆನೆಗೊಂದಿ ಸಮೀಪದ ಕಿಷ್ಕಿಂಧಾ ಪ್ರದೇಶದಲ್ಲಿ ಬರುವ ಅಂಜನಾದ್ರಿ ಪರ್ವತ

‘ರಾಷ್ಟ್ರೀಯ ಸ್ವಯಂ ಸೇವಕ ಸಂಘ, ಬಿಜೆಪಿಯ ಹೆಚ್ಚಿನ ಮುಖಂಡರು ಅಂಜನಾದ್ರಿಗೆ ಭೇಟಿ ನೀಡಿ, ಹಿಂದೂ ಸಮಾಜವನ್ನು ಒಗ್ಗೂಡಿಸುವ ಕೆಲಸ ಮಾಡುತ್ತಿದ್ದಾರೆ. ಅಂಜನಾದ್ರಿ ಬೆಳವಣಿಗೆಯಲ್ಲೂ ಇವರ ಪಾತ್ರ ದೊಡ್ಡದಿದೆ. ಬೇರೆ ವಿಚಾರಧಾರೆ ಹೊಂದಿದವರೂ ಆಂಜನೇಯನ ಸನ್ನಿಧಿಗೆ ಬರುತ್ತಾರೆ’ ಎಂದು ಆರ್‌ಎಸ್‌ಎಸ್‌ ಮುಖಂಡ ಅನಿಲ್‌ ಜೋಶಿ ಹೇಳಿದರು.

‘ಕಲ್ಯಾಣ ಕರ್ನಾಟಕದಲ್ಲಿ ಬಿಜೆಪಿ ತನ್ನ ಬೇರುಗಳನ್ನು ಇನ್ನಷ್ಟು ಗಟ್ಟಿಗೊಳಿಸಿಕೊಳ್ಳಲು ಪ್ರಯತ್ನಿಸುತ್ತಿದೆ. ಅಂಜನಾದ್ರಿ, ಹಂಪಿ ಇವೆರಡೂ ಶ್ರೀಮಂತ ಹಿಂದೂ ಸಾಮ್ರಾಜ್ಯದ ಭಾಗ ಎಂದು ಪ್ರಚಾರ ನಡೆಸಿ, ಧರ್ಮದ ಹೆಸರಿನಲ್ಲಿ ದೊಡ್ಡ ಮಟ್ಟದಲ್ಲಿ ರಾಜಕೀಯ ಧ್ರುವೀಕರಣಕ್ಕೆ ಮುಂದಾಗಿದೆ. ಅದರಲ್ಲಿ ಅವರಿಗೆ ಯಶಸ್ಸು ಕೂಡ ಸಿಕ್ಕಿದೆ. ಹನುಮಮಾಲೆ ಅಭಿಯಾನವು ದತ್ತಮಾಲೆ ಅಭಿಯಾನದ ಮುಂದುವರಿದ ಭಾಗ’ ಎನ್ನುತ್ತಾರೆ ಲೇಖಕ ನಂದೀಶ್ವರ ದಂಡೆ.

ಆಂಜನೇಯ, ರಾಮನ ಜತೆಯಾಗಿದ್ದು ಹಂಪಿಯಲ್ಲಿ
ಶ್ರೀರಾಮಚಂದ್ರನ ಬಲಗೈ ಬಂಟ ಆಂಜನೇಯ, ರಾಮನ ಜತೆಗೂಡಿದ್ದು ಹಂಪಿಯ ತುಂಗಭದ್ರಾ ನದಿಯ ತಟದಲ್ಲಿ ಎಂದು ಪುರಾಣದ ಐತಿಹ್ಯಗಳು ಸಾರುತ್ತವೆ ಎನ್ನುತ್ತಾರೆ ಸಾಹಿತಿಗಳು.

‘ಸೀತೆಯನ್ನು ಹುಡುಕಿಕೊಂಡು ಶ್ರೀರಾಮ ಮತ್ತು ಲಕ್ಷ್ಮಣ ಹಂಪಿ ಮಾರ್ಗವಾಗಿ ಬರುತ್ತಾರೆ.. ಪ್ರತಿಕೂಲ ವಾತಾವರಣ, ವಾನರ ಸೇನೆಯ ಬೆಂಬಲ ಪಡೆಯಲು ಸುಮಾರು ಆರು ತಿಂಗಳು ಹಂಪಿಯಲ್ಲೇ ತಂಗುತ್ತಾರೆ. ಈ ಸಂದರ್ಭದಲ್ಲಿ ಆಂಜನೇಯ ರಾಮ, ಲಕ್ಷ್ಮಣರ ಜತೆಗೂಡುತ್ತಾನೆ’ ಎನ್ನುತ್ತಾರೆ ಹಿರಿಯ ಸಾಹಿತಿ ಮೃತ್ಯುಂಜಯ ರುಮಾಲೆ.

‘ಹಂಪಿಯ ಕೋಟಿಲಿಂಗಕ್ಕೆ ರಾಮ ಪೂಜೆ ಸಲ್ಲಿಸಿದ ಎಂಬ ಐತಿಹ್ಯಗಳಿವೆ. ಇದರ ಸಮೀಪದಲ್ಲೇ ಸೀತೆಯ ಸೆರಗು ಎಂಬ ಸ್ಥಳವಿದ್ದರೆ, ನದಿಯಾಚೆ ಅಂಜನಾದ್ರಿ ಪರ್ವತ ಇದೆ. ರಾಮ ಓಡಾಡಿರುವ ಸ್ಥಳ ಎನ್ನುವ ಕಾರಣಕ್ಕಾಗಿಯೇ ಹಂಪಿಯ ಚಕ್ರತೀರ್ಥ, ಕೋದಂಡರಾಮ ದೇವಸ್ಥಾನಕ್ಕೆ ಇನ್ನಿಲ್ಲದ ಮಹತ್ವ ಇದೆ. ಆದರೆ, ಐತಿಹಾಸಿಕವಾದ ಯಾವ ದಾಖಲೆಗಳು ಇಲ್ಲ’ ಎನ್ನುತ್ತಾರೆ ರುಮಾಲೆ.

ಅಂಜನೇರಿಯ ಕೋಟೆ
ಮಹಾರಾಷ್ಟ್ರದಲ್ಲೂ ಆಂಜನೇಯನ ಜನ್ಮಸ್ಥಳ ಎನ್ನಲಾದ ಒಂದು ಪ್ರಸಿದ್ಧ ಯಾತ್ರಾ ಸ್ಥಳವಿದೆ. ನಾಸಿಕ್‌– ತ್ರಯಂಬಕೇಶ್ವರ ರಸ್ತೆಯಲ್ಲಿ, ನಾಸಿಕ್‌ನಿಂದ 20 ಕಿ.ಮೀ. ದೂರದಲ್ಲಿರುವ ‘ಅಂಜನೇರಿ’ಯನ್ನು ಹನುಮಂತನ ಜನ್ಮಸ್ಥಳ ಎಂದು ಹೇಳಲಾಗುತ್ತದೆ.

ಅಂಜನೇರಿಯ ಹಚ್ಚಹಸಿರಿನ ಬೆಟ್ಟಗಳ ಸಾಲಿನ ಮಧ್ಯೆ ಒಂದು ಕೋಟೆ ಇದೆ. ಈ ಪರಿಸರವು ಬಹುತೇಕ ಹಂಪಿಯನ್ನೇ ಹೋಲುತ್ತದೆ. ಮಹಾರಾಷ್ಟ್ರದ ಪ್ರಮುಖ ಪರಿಸರ ಮತ್ತು ಧಾರ್ಮಿಕ ಪ್ರವಾಸಿ ಸ್ಥಳಗಳಲ್ಲಿ ಅಂಜನೇರಿಯೂ ಒಂದು. ಆ ಕೋಟೆಯಲ್ಲೇ ಹನುಮಂತ ಹುಟ್ಟಿದ್ದು ಎಂಬ ಐತಿಹ್ಯವಿದೆ. ಕೋಟೆಯೊಳಗೆ ಆಂಜನೇಯ ದೇವಸ್ಥಾನವಿದೆ. ಹನುಮಂತನ ತಾಯಿ ಅಂಜನಾದೇವಿಯ ಹೆಸರನ್ನು ಈ ಸ್ಥಳಕ್ಕೆ ಇಡಲಾಗಿದೆ. ಅದೇ ಅಂಜನೇರಿಯಾಗಿದೆ ಎಂದು ಸ್ಥಳೀಯರು ಹೇಳುತ್ತಾರೆ. 


ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲ್ಲೂಕಿನ ಅಂಜನಾದ್ರಿ ಬೆಟ್ಟದಲ್ಲಿ ಹನುಮ ಜಯಂತಿ ಪ್ರಯುಕ್ತ ಹನುಮಮಾಲಾಧಾರಿಗಳು ಆಂಜನೇಯನ ದರ್ಶನಕ್ಕೆ ಸರತಿಯಲ್ಲಿ ನಿಂತಿರುವುದು

ಜಾರ್ಖಂಡ್‌ನ ಅಂಜನ ಹಳ್ಳಿ
ಜಾರ್ಖಂಡ್‌ನ ಗುಮ್ಲಾ ಜಿಲ್ಲಾ ಕೇಂದ್ರದಿಂದ 20 ಕಿಲೋಮೀಟರ್ ದೂರದಲ್ಲಿರುವ, ದಟ್ಟ ಕಾನನದಿಂದ ಕೂಡಿದ ಅಂಜನ ಹಳ್ಳಿಯೇ ಹನುಮಂತನ ಹುಟ್ಟಿದ ಸ್ಥಳ ಎಂದು ಅಲ್ಲಿನ ಸ್ಥಳಪುರಾಣಗಳು ಹೇಳುತ್ತವೆ. ಈ ಹಳ್ಳಿಯ ಸಮೀಪ ಅಂಜನ ಜಲಾಶಯವಿದೆ.

ಅಂಜನಾದೇವಿಯಿಂದಾಗಿ ಈ ಗ್ರಾಮಕ್ಕೆ ಅಂಜನ ಎಂಬ ಹೆಸರು ಬಂದಿದೆ ಎಂದು ಹೇಳಲಾಗುತ್ತದೆ. ಈ ಗ್ರಾಮದಿಂದ 4 ಕಿಲೋಮೀಟರ್ ದೂರದಲ್ಲಿ ಅಂಜನಿ ಗುಹೆ ಇದೆ. ಇಲ್ಲಿ ಅಂಜನಾದೇವಿ ವಾಸಿಸಿದ್ದರು ಎಂದು ಹೇಳಲಾಗುತ್ತದೆ. ಈ ಗುಹೆಯಲ್ಲಿ ಅಂಜನಾದೇವಿ ಅವರದ್ದು ಎನ್ನಲಾದ ಹಲವು ವಿಗ್ರಹಗಳಿವೆ. ಗುಹೆಯ ಪ್ರವೇಶದ್ವಾರದಲ್ಲಿ ಬೃಹತ್ ಶಿಲೆಯಿದೆ.

ಹರಿಯಾಣದ ಕೈಥಲ್‌
ಪುರಾಣಗಳ ಪ್ರಕಾರ, ಮಹಾಭಾರತದ ಕಾಲದಲ್ಲಿ ರಾಜ ಯುಧಿಷ್ಠಿರನು ಕೈಥಲ್‌ ಎಂಬ ಊರನ್ನು ಕಟ್ಟಿದ. ಇತಿಹಾಸದಲ್ಲಿ ಈ ಊರಿನ ಹೆಸರು ಉಲ್ಲೇಖವಾಗಿದೆ. ಕಪಿಸ್ಥಳ ಎಂಬ ಪದದಿಂದ ಕೈಥಲ್‌ ಪದ ಹುಟ್ಟಿದೆ ಎಂದು ಇತಿಹಾಸಕಾರರು ಹೇಳುತ್ತಾರೆ. ಕಪಿಸ್ಥಳ ಎಂದರೆ ಕಪಿಗಳು ವಾಸಿಸುವ ಸ್ಥಳ. ಇಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕಪಿಗಳು ಇವೆ. ಪುರಾಣಗಳ ಪ್ರಕಾರ ವಾನರ ಸೇನೆಯ ನಾಯಕ ಎನಿಸಿರುವ ಹನುಮಂತ ಇಲ್ಲಿ ಜನಿಸಿದ್ದ. ಆಂಜನೇಯನ ತಾಯಿ ಅಂಜನಿಗೆ ಸಂಬಂಧಿಸಿದ ದೇವಾಲಯವೂ ಇಲ್ಲಿದೆ.

ಗುಜರಾತಿನ ಅಂಜನಿ ಬೆಟ್ಟ
ಗುಜರಾತಿನ ಡಾಂಗ್ ಜಿಲ್ಲೆಯು ಬುಡಕಟ್ಟು ಸಮುದಾಯದಿಂದ ಕೂಡಿದ ಪ್ರದೇಶ. ಡಾಂಗ್ ಜಿಲ್ಲೆಯ ಅಂಜನಾ ಬೆಟ್ಟದಲ್ಲಿರುವ ಅಂಜನಿ ಗುಹೆಯಲ್ಲಿ ಆಂಜನೇಯ ಜನಿಸಿದ ಎಂದು ಇಲ್ಲಿನ ಬುಡಕಟ್ಟು ಜನರು ನಂಬುತ್ತಾರೆ. ದಟ್ಟ ಅಡವಿಯಿಂದ ಸುತ್ತುವರಿದಿರುವ ಈ ಗುಹೆ ಅತಿ ಪುರಾತನವಾದದ್ದು. ಆಂಜನೇಯನ ತಾಯಿ ಅಂಜನಾ ಮತ್ತು ತಂದೆ ಕೇಸರಿ ಅವರು ಈ ಗುಹೆಯಲ್ಲಿ ವಾಸವಿದ್ದರು ಎಂಬ ಐತಿಹ್ಯವಿದೆ. ಗುಹೆಯ ಪ್ರವೇಶದ್ವಾರವನ್ನು ಕಲ್ಲಿನಿಂದ ಮುಚ್ಚಲಾಗಿದೆಯಾದರೂ, ಸಣ್ಣ ಕಿಂಡಿಯ ಮೂಲಕ ಇಲ್ಲಿ ಬುಡಕಟ್ಟು ಜನರು ಆಂಜನೇಯನ ಜನ್ಮಸ್ಥಳದ ದರ್ಶನ ಪಡೆಯುತ್ತಾರೆ.

ಅಂಜನಾದೇವಿ ಹುಟ್ಟಿದ ಸ್ಥಳ ಕೂಡ ಇದೇ ಗುಹೆ ಎಂಬ ನಂಬಿಕೆ ಇದೆ. ಸ್ಥಳಪುರಾಣದ ಪ್ರಕಾರ, ಮುನಿಸಿಕೊಂಡ ದೇವಿಯನ್ನು ಸಂತೋಷಪಡಿಸಲು ಇಲ್ಲಿನ ಆದಿವಾಸಿಗಳು ಮೇಕೆಯನ್ನು ಗುಹೆಯ ಮುಂದೆ ಬಲಿ ಕೊಟ್ಟಿದ್ದರು. ಇದಕ್ಕೆ ಕೋಪಗೊಂಡ ದೇವಿ, ಗುಹೆಯ ಪ್ರವೇಶದ್ವಾರವನ್ನು ಮುಚ್ಚಿದರು ಎನ್ನಲಾಗುತ್ತದೆ. ಮುಚ್ಚಿರುವ ಬಂಡೆಯನ್ನು ತೆಗೆಯಲು ಯತ್ನಿಸುವವರು ಕಷ್ಟಗಳಿಗೆ ಗುರಿಯಾಗುತ್ತಾರೆ ಎಂಬ ನಂಬಿಕೆಯಿದೆ.

ಗೋಕರ್ಣವೇ ಜನ್ಮಸ್ಥಳ
‘ಆಂಜನೇಯನ ಜನ್ಮಸ್ಥಳ ಕರ್ನಾಟಕ ಎಂಬುದು ನಿಜ. ಆದರೆ, ಅಂಜನಾದ್ರಿ ಅಲ್ಲ, ಆತ ಜನಿಸಿದ್ದು ಗೋಕರ್ಣದಲ್ಲಿ’ ಎಂಬ ವಾದವೂ ಇದೆ. ‘ಗೋಕರ್ಣ ಆಂಜನೇಯನ ಜನ್ಮಭೂಮಿ, ಅಂಜನಾದ್ರಿಯಲ್ಲಿ ಆತ ಬಾಲ್ಯದ ದಿನಗಳನ್ನು ಕಳೆದಿದ್ದ’ ಎಂಬುದು ಗೋಕರ್ಣದ ಸ್ಥಳೀಯರ ವಾದ.

‘ರಾಮಾಯಣದ ಪಾತ್ರಗಳಿಗೆ ಸಂಬಂಧಿಸಿದಂತೆ ಯಾವುದೇ ಮಾಹಿತಿಗೂ ವಾಲ್ಮೀಕಿ ರಾಮಾಯಣಕ್ಕಿಂತ ಖಚಿತವಾದ ದಾಖಲೆ ಬೇರೆ ಇಲ್ಲ. ಆಂಜನೇಯನ ಜನ್ಮಸ್ಥಳದ ವಿಚಾರವಾಗಿಯೂ ರಾಮಾಯಣದಲ್ಲಿ ಸ್ಪಷ್ಟವಾದ ಉಲ್ಲೇಖ ಇದೆ. ರಾಮಾಯಣದ ಸುಂದರಕಾಂಡದಲ್ಲಿ ಒಂದು ಶ್ಲೋಕವು ಆಂಜನೇಯ ಹುಟ್ಟಿದ್ದು ಗೋಕರ್ಣದಲ್ಲಿ ಎಂಬುದನ್ನು ಸ್ಪಷ್ಟವಾಗಿ ಹೇಳುತ್ತದೆ. ಇಲ್ಲಿನ ಕುಡ್ಲೆ ಕಡಲತೀರದ ಕೇಸರಿವನದಲ್ಲಿ ಆತನ ಜನ್ಮಸ್ಥಳವಿದೆ’ ಎಂದು ಗೋಕರ್ಣದ ರಾಮಚಂದ್ರಾಪುರ ಮಠದ ರಾಘವೇಶ್ವರ ಸ್ವಾಮೀಜಿ ಇತ್ತೀಚೆಗೆ ಹೇಳಿದ್ದರು.

‘ಆಂಜನೇಯನು ಮೊದಲ ಬಾರಿಗೆ ಸೀತಾಮಾತೆಯನ್ನು ಭೇಟಿಮಾಡಿದಾಗ, ಆಕೆಗೆ ತನ್ನ ಪರಿಚಯ ಮಾಡಿಕೊಟ್ಟ ಶ್ಲೋಕವಿದೆ. ಅದರಲ್ಲಿ, ‘ಅಂಜನಾದೇವಿಯ ಹೊಟ್ಟೆಯಲ್ಲಿ ಗೋಕರ್ಣದಲ್ಲಿ ನಾನು ಜನಿಸಿದೆ’ ಎಂದು ಹನುಮಂತ ಹೇಳಿದ್ದಾನೆ. ಆದ್ದರಿಂದ ಗೋಕರ್ಣ ಆಂಜನೇಯನ ಜನ್ಮಭೂಮಿ, ಕಿಷ್ಕಿಂದೆಯ ಅಂಜನಾದ್ರಿಯು ಕರ್ಮಭೂಮಿ’ ಎಂದು ಅವರು ವಾದಿಸಿದ್ದಾರೆ.

ಗೋಕರ್ಣದ ಕುಡ್ಲೆಯಲ್ಲಿ ಈಗಲೂ ಅನೇಕ ಧಾರ್ಮಿಕ ಕಾರ್ಯಕ್ರಮಗಳು ನಡೆಯುತ್ತವೆ. ಅಂಜನೇಯಸ್ವಾಮಿ ಜನ್ಮಭೂಮಿ ಅಭಿವೃದ್ಧಿ ಕಾರ್ಯಕ್ರಮಗಳಿಗೂ ಇತ್ತೀಚೆಗೆ ಚಾಲನೆ ನೀಡಲಾಗಿದೆ.

**

ಅಂಜನಾದ್ರಿ ಪರ್ವತವು ಆಂಜನೇಯ ಭಕ್ತಿಗಿಂತ ರಾಜಕೀಯ ಧ್ರುವೀಕರಣಕ್ಕೆ ಬಳಕೆಯಾಗುತ್ತಿರುವುದರಲ್ಲಿ ಅನುಮಾನವೇ ಇಲ್ಲ.
-ಮೃತ್ಯುಂಜಯ ರುಮಾಲೆ, ಹಿರಿಯ ಸಾಹಿತಿ

**

ಒಂದೇ ವಿಚಾರಧಾರೆಯವರು ಅಂಜನಾದ್ರಿಗೆ ಹೆಚ್ಚಾಗಿ ಭೇಟಿ ಕೊಡುತ್ತಿರಬಹುದು. ಹಾಗಂತ ಅದಕ್ಕೆ ಬೇರೆ ಅರ್ಥ ಕಲ್ಪಿಸಬೇಕಿಲ್ಲ.
-ಅನಿಲ್‌ ಜೋಶಿ, ಆರ್‌ಎಸ್‌ಎಸ್‌ ಮುಖಂಡ

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು