ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Explainer: ಏನಿದು ಬಿಳಿ ಫಂಗಸ್‌?

Last Updated 21 ಮೇ 2021, 11:05 IST
ಅಕ್ಷರ ಗಾತ್ರ

ಕೋವಿಡ್‌–19ನಿಂದ ಗುಣಮುಖರಾದ ಕೆಲವರಲ್ಲಿ ಕಪ್ಪು ಶಿಲೀಂಧ್ರ (ಬ್ಲ್ಯಾಕ್‌ ಫಂಗಸ್‌) ಕಾಣಿಸಿಕೊಳ್ಳುತ್ತಿದೆ. ಈ ಸೋಂಕು ಬಹಳ ಅಪಾಯಕಾರಿ, ಕೆಲವೊಮ್ಮೆ ಮಾರಣಾಂತಿಕವಾಗಿಯೂ ಪರಿಣಮಿಸುತ್ತದೆ ಎಂದು ವೈದ್ಯರು ಎಚ್ಚರಿಕೆ ನೀಡಿದ್ದಾರೆ. ಈಗ ಕೆಲ ರೋಗಿಗಳಲ್ಲಿ ‘ಬಿಳಿ ಶಿಲೀಂಧ್ರ’ದ ಸೋಂಕು (ವೈಟ್‌ ಫಂಗಸ್‌) ಕಾಣಿಸಿಕೊಂಡಿದ್ದು, ಕೋವಿಡ್‌–19ನಿಂದ ಗುಣಮುಖರಾದವರಲ್ಲಿ, ವೈದ್ಯರಲ್ಲಿ ಆತಂಕಕ್ಕೆ ಕಾರಣವಾಗಿದೆ.

ಪಟ್ನಾ ಮೆಡಿಕಲ್‌ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ದಾಖಲಾಗಿದ್ದವರ ಪೈಕಿ ನಾಲ್ವರು ರೋಗಿಗಳಲ್ಲಿ ಬಿಳಿ ಶಿಲೀಂಧ್ರ ಕಾಣಿಸಿಕೊಂಡಿದೆ. ಈ ಸೋಂಕಿನಿಂದ ಬಳಲುತ್ತಿರುವವ ಸಂಖ್ಯೆ ಇನ್ನೂ ಹೆಚ್ಚಾಗಿರುವ ಸಾಧ್ಯತೆ ಇದೆ ಎಂದು ಕಾಲೇಜಿನ ಸೂಕ್ಷ್ಮಜೀವಿವಿಜ್ಞಾನ ವಿಭಾಗದ ಪ್ರಾಧ್ಯಾಪಕ ಎಸ್‌.ಎನ್‌.ಸಿಂಗ್‌ ಎಚ್ಚರಿಸಿದ್ದಾರೆ.

ಹಾಗಾದರೆ, ಈ ಬಿಳಿ ಶಿಲೀಂಧ್ರ ಎಂದರೆ ಏನು ಎಂಬ ಪ್ರಶ್ನೆಗಳು ಮೂಡುವುದು ಸಹಜ. ಅದನ್ನು ವೈದ್ಯಕೀಯ ವಿಜ್ಞಾನ ಹೀಗೆ ವಿವರಿಸುತ್ತದೆ.

ಬಿಳಿ ಶಿಲೀಂಧ್ರ ಎಂದರೇನು?

ಕಪ್ಪು ಶಿಲೀಂಧ್ರದಂತೆ, ಬಿಳಿ ಶಿಲೀಂಧ್ರ ಕೂಡ ರೋಗ ನಿರೋಧಕ ಶಕ್ತಿ ಕಡಿಮೆ ಇರುವವರನ್ನು ಬಾಧಿಸುವ ಸೋಂಕು. ಮಧುಮೇಹ, ಏಡ್ಸ್‌ ಹಾಗೂ ಇತ್ತೀಚೆಗೆ ಮೂತ್ರಪಿಂಡ ಕಸಿ ಶಸ್ತ್ರಚಿಕಿತ್ಸೆಗೆ ಒಳಗಾಗಿರುವವರು ಸೇರಿದಂತೆ ವಿವಿಧ ರೀತಿಯ ಆರೋಗ್ಯ ಸಮಸ್ಯೆಗಳನ್ನು ಹೊಂದಿರುವವರಲ್ಲಿ ಇದು ಕಾಣಿಸಿಕೊಳ್ಳುವ ಸಾಧ್ಯತೆ ಹೆಚ್ಚು.

ಸ್ಟಿರಾಯ್ಡ್‌ಗಳ ಅತಿಯಾದ ಬಳಕೆ, ಆಮ್ಲಜನಕ ಸಿಲಿಂಡರ್‌ಗಳನ್ನು ಸಮರ್ಪಕವಾಗಿ ಸ್ವಚ್ಛಗೊಳಿಸದೇ ಬಳಕೆ ಮಾಡಿದಾಗ ಬಿಳಿ ಶಿಲೀಂಧ್ರ ಬಾಧಿಸುವ ಸಾಧ್ಯತೆ ಅಧಿಕ.

ಚರ್ಮ, ಉದರ, ಮೂತ್ರಪಿಂಡ, ಮಿದುಳು, ಜನನಾಂಗಗಳು, ಬಾಯಿ ಹಾಗೂ ಶ್ವಾಸಕೋಶಗಳಲ್ಲಿ ಕಾಣಿಸಿಕೊಳ್ಳಬಹುದು. ಈ ಸೋಂಕು ಶ್ವಾಸಕೋಶಕ್ಕೆ ತಗುಲಿದರೆ ಅಪಾಯ ತಪ್ಪಿದ್ದಲ್ಲ. ಆದರೆ, ಈ ಸೋಂಕಿನಿಂದಾಗಿ ಸಂಭವಿಸಿದ ಮರಣದ ಪ್ರಮಾಣ ಎಷ್ಟು ಎಂಬ ಬಗ್ಗೆ ನಿಖರ ಮಾಹಿತಿ ಇಲ್ಲ.

ರೋಗ ಲಕ್ಷಣಗಳೇನು?

ಬಿಳಿ ಶಿಲೀಂಧ್ರ ಕಂಡುಬಂದವರಲ್ಲಿ ಸೋಂಕು ಶ್ವಾಸಕೋಶವನ್ನು ತಲುಪಿದಾಗ, ಕೋವಿಡ್‌–19 ರೋಗಿಗಳಲ್ಲಿ ಕಂಡುಬರುವಂಥ ಲಕ್ಷಣಗಳೇ ಅವರಲ್ಲಿಯೂ ಕಾಣಿಸಿಕೊಳ್ಳುತ್ತವೆ. ಪರೀಕ್ಷೆ ಮಾಡಿದಾಗ ನೆಗೆಟಿವ್‌ ಅಂತನೇ ವರದಿ ಬರುತ್ತದೆ. ಆದರೆ, ಸಿ.ಟಿ.ಸ್ಕ್ಯಾನ್‌ ಅಥವಾ ಎಕ್ಸ್‌ರೇ ಮಾಡಿದಾಗ ಸೋಂಕಿರುವುದು ಗೊತ್ತಾಗುತ್ತದೆ. ಮಹಿಳೆಯರು ಹಾಗೂ ಮಕ್ಕಳಲ್ಲಿ ಬಿಳಿ ಶಿಲೀಂಧ್ರ ಕಾಣಿಸಿಕೊಳ್ಳುವ ಅಪಾಯ ಹೆಚ್ಚು ಎಂಬುದು ವೈದ್ಯರ ಎಚ್ಚರಿಕೆ ನುಡಿ.

ಆಮ್ಲಜನಕ ಸಿಲಿಂಡರ್‌ಗೆ ತೇವಾಂಶ ನಿರ್ವಹಣೆ ಸಾಧನವೊಂದನ್ನು (ಹ್ಯೂಮಿಡಿಫೈಯರ್‌) ಜೋಡಿಸಲಾಗಿರುತ್ತದೆ. ಈ ಸಾಧನಕ್ಕೆ ಅಳವಡಿಸಿರುವ ನಲ್ಲಿಯ ನೀರನ್ನು ಬಳಸಿದಾಗ ಈ ಸೋಂಕು ಕಾಣಿಸಿಕೊಳ್ಳುವ ಸಾಧ್ಯತೆ ಹೆಚ್ಚು ಎಂದು ಎಸ್‌.ಎನ್‌.ಸಿಂಗ್‌ ಹೇಳುತ್ತಾರೆ.

ನೀರಿನಲ್ಲಿರುವ ಮೃದುವಾದ ಮಣ್ಣು, ಬೂಸಿನ ಬಗ್ಗೆ ಜನರು ಎಚ್ಚರ ವಹಿಸಬೇಕು. ಇದರಿಂದ ಬಿಳಿ ಶಿಲೀಂಧ್ರ ಸೋಂಕು ಹರಡುತ್ತದೆ ಎಂದು ಪಾರಸ್‌ ಆಸ್ಪತ್ರೆಯ ವೈದ್ಯ ಅರುಣೇಶ್‌ ಕುಮಾರ್‌ ಹೇಳುತ್ತಾರೆ.

ಬಿಳಿ ಶಿಲೀಂಧ್ರದ ಚಿಕಿತ್ಸೆ ಹೇಗೆ?

ಈಗ ಲಭ್ಯವಿರುವ ಶಿಲೀಂಧ್ರ ನಿರೋಧಕ ಔಷಧಿಗಳನ್ನೇ ಬಿಳಿ ಶಿಲೀಂಧ್ರ ಸೋಂಕಿತರಿಗೆ ನೀಡಲಾಗುತ್ತಿದೆ ಎಂದು ಪಟ್ನಾ ಮೆಡಿಕಲ್‌ ಕಾಲೇಜು ಮತ್ತು ಆಸ್ಪತ್ರೆ ವೈದ್ಯರು ಹೇಳುತ್ತಾರೆ. ಚಿಕಿತ್ಸೆ ನೀಡಲಾದ ನಾಲ್ವರು ರೋಗಿಗಳ ಆರೋಗ್ಯ ಸ್ಥಿರವಾಗಿದೆ ಎಂದೂ ಅವರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT