ಬುಧವಾರ, ಆಗಸ್ಟ್ 4, 2021
25 °C

ಆಳ-ಅಗಲ: ಚಂಡಮಾರುತ ಹೆಚ್ಚುತ್ತಿರುವುದೇಕೆ?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಅರಬ್ಬಿ ಸಮುದ್ರದಲ್ಲಿ ಸೃಷ್ಟಿಯಾದ ತೌತೆ ಎಂಬ ಚಂಡಮಾರುತವು ಅಬ್ಬರಿಸಿ, ಮರೆಯಾಗಿ ಒಂದು ವಾರವೂ ಆಗಿಲ್ಲ; ಬಂಗಾಳ ಕೊಲ್ಲಿಯಲ್ಲಿ ಯಸ್‌ ಎಂಬ ಹೆಸರಿನ ಮತ್ತೊಂದು ಚಂಡಮಾರುತ ರೂಪುಗೊಂಡು ಅದು ಇದೇ ಬುಧವಾರ ಒಡಿಶಾ ಕರಾವಳಿಯನ್ನು ಅಪ್ಪಳಿಸಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಮುಂಗಾರು ಋತುವಿಗೆ ಮೊದಲು ಮತ್ತು ಮುಂಗಾರು ಋತುವಿನ ನಂತರ ಸಮುದ್ರದಲ್ಲಿ ಉಂಟಾಗುವ ಚಂಡಮಾರುತಗಳ ಸಂಖ್ಯೆಯಲ್ಲಿ ಹೆಚ್ಚಳವಾಗಿದೆ. ಹವಾಮಾನ ಬದಲಾವಣೆ ಯಿಂದಾಗಿ ಸಾಗರದ ಮೇಲ್ಮೈಯ ತಾಪದಲ್ಲಿ ಏರಿಕೆ ಇದಕ್ಕೆ ಮುಖ್ಯ ಕಾರಣ ಎಂದು ವಿಜ್ಞಾನಿಗಳು ಗುರುತಿಸಿದ್ದಾರೆ. 2014ರಲ್ಲಿ ನಡೆಸಿದ ಅಧ್ಯಯನದ ಪ್ರಕಾರ, ಹಿಂದೂ ಮಹಾಸಾಗರದ ಮೇಲ್ಮೈಯ ಸರಾಸರಿ ತಾಪವು 0.7 ಡಿಗ್ರಿ ಸೆಲ್ಸಿಯಸ್‌ನಷ್ಟು ಏರಿದೆ. ಇತರ ಸಾಗರಗಳಿಗೆ ಹೋಲಿಸಿದರೆ ಹಿಂದೂ ಮಹಾಸಾಗರವು ಹೆಚ್ಚು ತಂಪು. ಹಾಗಿದ್ದರೂ ಬೇಸಿಗೆಯ ಅವಧಿಯಲ್ಲಿ ಸಾಗರದ ಮೇಲ್ಮೈ ತಾಪವು 1.2 ಡಿಗ್ರಿ ಸೆಲ್ಸಿಯಸ್‌ ಏರಿಕೆಯಾಗಿತ್ತು.

ಹಸಿರುಮನೆ ಅನಿಲಗಳು ಹೊರಸೂಸುವ ತಾಪದ ಶೇ 90ರಷ್ಟನ್ನು ಸಮುದ್ರವು ಹೀರಿಕೊಳ್ಳು ತ್ತದೆ. ಮಾರುತಗಳಿಗೆ ಶಕ್ತಿ ನೀಡುವುದೇ ನೀರಿನ ತಾಪ. ಇತರ ಸಮುದ್ರಗಳಿಗೆ ಹೋಲಿಸಿದರೆ ಅರಬ್ಬಿಸಮುದ್ರದ ತಾಪವು ಅತ್ಯಂತ ವೇಗವಾಗಿ ಏರಿಕೆಯಾಗುತ್ತಿದೆ ಎಂದು ಗುರುತಿಸಲಾಗಿದೆ.

ಹವಾಮಾನ ಬದಲಾವಣೆಯಿಂದಾಗಿ ಸಮುದ್ರ ಮಟ್ಟ ಏರಿಕೆಯಾಗುತ್ತದೆ ಮತ್ತು ಚಂಡಮಾರುತದ ವೇಗ ಹೆಚ್ಚಳವಾಗುತ್ತದೆ. ಇದು ಮಾರುತವು ಕರಾವಳಿಯನ್ನು ಪ್ರವೇಶಿಸಿದ ನಂತರ ಪರಿಣಾಮ ಬೀರುವ ಭೂ ಪ್ರದೇಶದ ವ್ಯಾಪ್ತಿಯನ್ನೂ ಹೆಚ್ಚಿಸುತ್ತದೆ. ಚಂಡಮಾರುತದ ಅವಧಿಯಲ್ಲಿ ಬೀಳುವ ಮಳೆಯ ಪ್ರಮಾಣ ಹೆಚ್ಚಳವಾಗಿ, ಜಲಾವೃತಗೊಳ್ಳುವ ಪ್ರದೇಶವೂ ಹೆಚ್ಚುತ್ತದೆ. ಯೋಜಿತವಲ್ಲದ ನಗರಾಭಿವೃದ್ಧಿ, ಕಾಂಡ್ಲಾವನಗಳ ನಾಶ ಚಂಡಮಾರುತಗಳ ಪರಿಣಾಮವನ್ನು ತೀವ್ರವಾಗಿಸುತ್ತವೆ ಎಂಬುದು ತಜ್ಞರ ವಿಶ್ಲೇಷಣೆ.

ಬಂಗಾಳ ಕೊಲ್ಲಿ ಮತ್ತು ಅರಬ್ಬಿ ಸಮುದ್ರಗಳೆರಡಲ್ಲೂ ಚಂಡಮಾರುತಗಳು ಸೃಷ್ಟಿಯಾಗುತ್ತಿವೆ. ಬಂಗಾಳ ಕೊಲ್ಲಿಗೆ ಹೋಲಿಸಿದರೆ ಅರಬ್ಬಿ ಸಮುದ್ರದಲ್ಲಿ ಚಂಡಮಾರುತಗಳ ಸಂಖ್ಯೆ ಕಡಿಮೆ. 1891ರಿಂದ 2,000ದವರೆಗೆ ಬಂಗಾಳ ಕೊಲ್ಲಿಯಲ್ಲಿ 308 ಚಂಡಮಾರುತಗಳು ಸೃಷ್ಟಿ ಯಾಗಿವೆ. ಅವುಗಳ ಪೈಕಿ 103 ತೀವ್ರವಾಗಿದ್ದವು. ಅರಬ್ಬಿ ಸಮುದ್ರದಲ್ಲಿ ಸೃಷ್ಟಿಯಾದ 48 ಬಿರುಗಾಳಿಗಳಲ್ಲಿ 24 ತೀವ್ರ ಪರಿಣಾಮ ಉಂಟು ಮಾಡಿದ್ದವು.

7,516 ಕಿ.ಮೀ. ಉದ್ದದ ಕರಾವಳಿ ಹೊಂದಿರುವ ಭಾರತದಲ್ಲಿ ಚಂಡಮಾರುತಗಳ ಅಪಾಯ ಹೆಚ್ಚು. 13 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಕರಾವಳಿಯನ್ನು ಹೊಂದಿವೆ. ಪೂರ್ವ ಕರಾವಳಿಯಲ್ಲಿರುವ ಆಂಧ್ರ ಪ್ರದೇಶ, ತಮಿಳುನಾಡು, ಪುದುಚೇರಿ, ಒಡಿಶಾ ಮತ್ತು ಪಶ್ಚಿಮ ಬಂಗಾಳ ಹೆಚ್ಚು ಅಪಾಯ ಎದುರಿಸುವ ಪ್ರದೇಶಗಳು. ಪಶ್ಚಿಮ ಕರಾವಳಿಯಲ್ಲಿ ಗುಜರಾತ್‌ ಮತ್ತು ಮಹಾರಾಷ್ಟ್ರ ರಾಜ್ಯಗಳು ಚಂಡಮಾರುತಗಳಿಂದ ಹೆಚ್ಚಿನ ಹಾನಿಗೆ ಒಳಗಾಗುತ್ತವೆ.

ಚಾರಿತ್ರಿಕವಾಗಿ ನೋಡಿದರೆ, ಅರಬ್ಬಿ ಸಮುದ್ರದಲ್ಲಿ ವರ್ಷಕ್ಕೆ ಒಂದು ಅಥವಾ ಎರಡು ಚಂಡಮಾರುತಗಳಷ್ಟೇ ಸೃಷ್ಟಿಯಾಗುತ್ತಿದ್ದವು. ಅವುಗಳು ಕೂಡ ದುರ್ಬಲವಾಗಿರುತ್ತಿದ್ದವು. ಬಂಗಾಳ ಕೊಲ್ಲಿಯಲ್ಲಿ ಕೂಡ ಚಂಡಮಾರುತಗಳ ಸಂಖ್ಯೆ ಬಹಳ ಕಡಿಮೆ ಇತ್ತು.


‘ತೌತೆ’ ಪ್ರಭಾವದಿಂದ ಎದ್ದ ಬೃಹತ್‌ ಅಲೆಗಳು ಮಂಗಳೂರು ಸಮೀಪದ ಸುರತ್ಕಲ್‌ ಕಡಲ ಕಿನಾರೆಯಲ್ಲಿರುವ ಡ್ರೆಡ್ಜರ್‌ ಯಂತ್ರಕ್ಕೆ ಅಪ್ಪಳಿಸಿತ್ತು

2018ರಲ್ಲಿ ಬಂಗಾಳ ಕೊಲ್ಲಿಯಲ್ಲಿ ನಾಲ್ಕು ಮತ್ತು ಅರಬ್ಬಿ ಸಮುದ್ರದಲ್ಲಿ ಮೂರು ತೀವ್ರವಾದ ಚಂಡಮಾಡರುತಗಳು ಸೃಷ್ಟಿ ಯಾಗಿವೆ. 2014ರಿಂದ 2019ರ ಅವಧಿಯಲ್ಲಿ ಚಂಡಮಾರುತಗಳ ಪ್ರಮಾಣವು ಶೇ 32ರಷ್ಟು ಏರಿಕೆಯಾಗಿದೆ.

ಸಾವು ನೋವಿಗೆ ಕಡಿವಾಣ
ಚಂಡಮಾರುತಗಳ ತೀವ್ರತೆ ಹೆಚ್ಚಾಗಿದ್ದರೂ ಈಚಿನ ಕೆಲವು ವರ್ಷಗಳಲ್ಲಿ ಅವುಗಳಿಂದ ಸಂಭವಿಸುವ ಸಾವುನೋವಿನ ಸಂಖ್ಯೆ ತೀರಾ ಕಡಿಮೆಯಾಗಿದೆ. ಹಿಂದೆಲ್ಲ ಚಂಡಮಾರುತಗಳು ಆಸ್ತಿ ನಾಶ ಮಾಡುವುದರ ಜತೆಗೆ ಸಾವಿರಾರು ಮಂದಿಯ ಪ್ರಾಣವನ್ನೂ ತೆಗೆಯುತ್ತಿದ್ದವು. ಈಗ ನಿಖರ ಮುನ್ಸೂಚನಾ ವ್ಯವಸ್ಥೆ ಅಭಿವೃದ್ಧಿ ಹೊಂದಿರುವುದರಿಂದ ಸಾವು ನೋವಿನ ಪ್ರಮಾಣ ಕಡಿಮೆಯಾಗಿದೆ.

ಚಂಡಮಾರುತಗಳನ್ನು ಗ್ರಹಿಸುವ ವ್ಯವಸ್ಥೆಯು ಹಲವು ದಶಕಗಳಿಂದಲೇ ಇದ್ದರೂ, ಬರಲಿರುವ ಚಂಡಮಾರುತವು ಎಷ್ಟು ಶಕ್ತಿಶಾಲಿಯಾದುದು, ಅದು ಉಂಟುಮಾಡಬಹುದಾದ ಹಾನಿ ಯಾವ ಪ್ರಮಾಣದ್ದು ಎಂಬುದನ್ನು ನಿಖರವಾಗಿ ಊಹಿಸಲು ಸಾಧ್ಯವಾಗುತ್ತಿರಲಿಲ್ಲ. ಆದರೆ ‘ಇನ್‌ಸ್ಯಾಟ್‌’ ಉಪಗ್ರಹಗಳು ಹಾಗೂ ಚಂಡಮಾರುತ ಪತ್ತೆ ರೇಡಾರ್‌ ವ್ಯವಸ್ಥೆ ಅಭಿವೃದ್ಧಿಯಾದ ನಂತರ ಚಂಡಮಾರುತವು ರೂಪುಗೊಳ್ಳುವ ಹಂತದಿಂದ ಕ್ಷಣಕ್ಷಣದ ಮಾಹಿತಿಯನ್ನು ಪಡೆಯಲು ಸಾಧ್ಯವಾಗುತ್ತಿದೆ. ಸಮುದ್ರದಲ್ಲಿ ನೂರಾರು ಮೈಲಿ ದೂರದಲ್ಲಿ ವಾಯುಭಾರ ಕುಸಿತವಾದಾಗ ಅದನ್ನು ಗುರುತಿಸಬಹುದಾದ ವ್ಯವಸ್ಥೆ ಈಗ ಇದೆ. ಅದು ಚಂಡಮಾರುತವಾಗಿ ರೂಪುಗೊಳ್ಳುತ್ತಿದೆಯೇ, ಎಷ್ಟು ವೇಗದಲ್ಲಿ, ಯಾವ ದಿಕ್ಕಿನಲ್ಲಿ ಸಾಗುತ್ತಿದೆ. ಯಾವ ಸಮಯದಲ್ಲಿ ಭೂಮಿಯನ್ನು ಅಪ್ಪಳಿಸಲಿದೆ, ಭೂಮಿಗೆ ಅಪ್ಪಳಿಸುವಾಗ ಅದರ ವೇಗ ಎಷ್ಟಿರುತ್ತದೆ, ಎಷ್ಟು ಹಾನಿ ಸಂಭವಿಸಬಹುದು ಎಂಬೆಲ್ಲಾ ವಿಚಾರಗಳನ್ನು ಕೆಲವು ದಿನಗಳ ಮುಂಚಿತವಾಗಿಯೇ ನಿಖರವಾಗಿ ಪತ್ತೆ ಮಾಡಬಹುದಾಗಿದೆ. ಇದರಿಂದಾಗಿ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಲು ಸರ್ಕಾರಗಳಿಗೆ ಸಾಧ್ಯವಾಗುತ್ತಿದೆ. ಈ ಕಾರಣದಿಂದಾಗಿ  ಇತ್ತೀಚಿನ ವರ್ಷಗಳಲ್ಲಿ ಸಂಭವಿಸಿದ ಚಂಡಮಾರುತಗಳಿಂದ ಪ್ರಾಣ ಹಾನಿಯ ಪ್ರಮಾಣ ತುಂಬಾ ಕಡಿಮೆಯಾಗಿರುತ್ತದೆ. ಜನರು ಆಡಳಿತಕ್ಕೆ ಸಂಪೂರ್ಣ ಸಹಕಾರ ನೀಡಿದರೆ ಪ್ರಾಣಹಾನಿಯನ್ನು ಸಂಪೂರ್ಣವಾಗಿ ತಡೆಯಬಹುದು ಎನ್ನುತ್ತಾರೆ ತಜ್ಞರು.

ಭಾರತೀಯ ಹವಾಮಾನ ಇಲಾಖೆಯು ಈಗ ತಮ್ಮ ಪ್ರಾದೇಶಿಕ ಚಂಡಮಾರುತ ಮುನ್ನೆಚ್ಚರಿಕೆ ಕೇಂದ್ರಗಳು (ಎಸಿಡಬ್ಲ್ಯುಸಿ) ಮತ್ತು ಚಂಡಮಾರುತ ಮುನ್ನೆಚ್ಚರಿಕೆ ಕೇಂದ್ರಗಳ (ಸಿಡಬ್ಲ್ಯುಸಿ) ಮೂಲಕ ಆಯಾ ಕರಾವಳಿ ರಾಜ್ಯಗಳಿಗೆ ಮುಂಚಿತವಾಗಿ ಎಚ್ಚರಿಕೆಗಳನ್ನು ನೀಡುತ್ತಿದೆ.

ಆದರೆ ಪ್ರಕೃತಿಯ ಮುಂದೆ ಈ ವ್ಯವಸ್ಥೆಯೂ ಕೆಲವೊಮ್ಮೆ ಸ್ವಲ್ಪ ವಿಫಲವಾಗುವುದಿದೆ. ಉಪಗ್ರಹ ಹಾಗೂ ಇತರ ವ್ಯವಸ್ಥೆಯ ಮೂಲಕ ಮಾಡಿರುವ ಅಂದಾಜು ತಪ್ಪುವುದಿದೆ. ಗುಜರಾತ್‌ ಕರಾವಳಿಯನ್ನು ಅಪ್ಪಳಿಸಲಿದೆ ಎಂದು ಭಾವಿಸಿದ್ದ ಚಂಡಮಾರುತವು ಕರಾವಳಿಯನ್ನು ತಲುಪುವ ವೇಳೆಗೆ ದುರ್ಬಲವಾಗುವುದು, ಅಥವಾ ತನ್ನ ಹಾದಿಯನ್ನು ಬದಲಿಸಿರುವ ಉದಾಹರಣೆ ಇದೆ. ಅದೇ ರೀತಿ, ಚಂಡಮಾರುತವು ಹಠಾತ್‌ ತನ್ನ ಪ್ರಭಾವವನ್ನು ಹೆಚ್ಚಿಸಿಕೊಂಡು ನಿರೀಕ್ಷಿಸಿದ್ದಕ್ಕಿಂತ ಹೆಚ್ಚು ಶಕ್ತಿಶಾಲಿಯಾಗಿ ತೀರವನ್ನು ಅಪ್ಪಳಿಸಿದ್ದೂ ಇದೆ. ಏನೇ ಆದರೂ, ಸಾವುನೋವಿನ ಪ್ರಮಾಣವನ್ನು ತಗ್ಗಿಸುವಲ್ಲಿ ಮುನ್ನೆಚ್ಚರಿಕೆ ವ್ಯವಸ್ಥೆ ಸಹಾಯ ಮಾಡಿದೆ ಎಂದು ಹಿಂದಿನ ಕೆಲವು ಚಂಡಮಾರುತಗಳಲ್ಲಿ ಸಂಭವಿಸಿದ ಮತ್ತು ಇತ್ತೀಚೆಗೆ ಸಂಭವಿಸುತ್ತಿರುವ ಸಾವುನೋವುಗಳ ಸಂಖ್ಯೆಯನ್ನು ತಾಳೆ ಮಾಡಿದಾಗ ಸ್ಪಷ್ಟವಾಗುತ್ತದೆ.

ನಾಮಕರಣ ಹೇಗೆ?
ಚಂಡಮಾರುತಗಳು ಒಂದು ವಾರ ಅಥವಾ ಅದಕ್ಕಿಂತ ಹೆಚ್ಚು ಸಮಯ ಇರಬಹುದು. ಹಾಗಾಗಿ, ಒಂದೇ ಸಮಯದಲ್ಲಿ ಒಂದಕ್ಕಿಂತ ಹೆಚ್ಚು ಚಂಡಮಾರುತ ಬೀಸುವ ಸಾಧ್ಯತೆ ಇದೆ. ಹಾಗಾದಾಗ ಗೊಂದಲ ಸಹಜ. ಈ ಗೊಂದಲ ನಿವಾರಣೆಗಾಗಿ ಚಂಡಮಾರುತಗಳಿಗೆ ಹೆಸರು ಇರಿಸುವ ಪರಿಪಾಟ ಶುರುವಾಯಿತು. ಪ್ರಾದೇಶಿಕವಾಗಿ ಒಪ್ಪಿತವಾದ ನಿಯಮಾನುಸಾರ ಹೆಸರು ಇರಿಸಲಾಗುತ್ತದೆ.

ಚಂಡಮಾರುತಗಳ ಮೇಲೆ ನಿಗಾ ಇರಿಸುವ ಆರು ಪ್ರಾದೇಶಿಕ ವಿಶೇಷ ಹವಾಮಾನ ಕೇಂದ್ರಗಳು (ಆರ್‌ಎಸ್‌ಎಂಸಿ) ಮತ್ತು ಐದು ಪ್ರಾದೇಶಿಕ ಚಂಡಮಾರುತ ಎಚ್ಚರಿಕೆ ಕೇಂದ್ರಗಳು (ಟಿಸಿಡಬ್ಲ್ಯುಸಿ) ಇವೆ. ಚಂಡಮಾರುತದ ಮುನ್ನೆಚ್ಚರಿಕೆ ನೀಡುವುದು ಮತ್ತು ಹೆಸರು ಇರಿಸುವುದು ಈ ಕೇಂದ್ರಗಳ ಹೊಣೆಯಾಗಿದೆ. ಹಿಂದೂ ಮಹಾಸಾಗರ ಪ್ರದೇಶದ 13 ದೇಶಗಳಿಗೆ ಚಂಡಮಾರುತ ಎಚ್ಚರಿಕೆ ನೀಡುವುದು ದೆಹಲಿಯಲ್ಲಿರುವ ಆರ್‌ಎಸ್‌ಎಂಸಿಯ ಜವಾಬ್ದಾರಿ. ಈ 13 ದೇಶಗಳೆಂದರೆ, ಬಾಂಗ್ಲಾದೇಶ, ಭಾರತ, ಇರಾನ್‌, ಮಾಲ್ಡೀವ್ಸ್‌, ಮ್ಯಾನ್ಮಾರ್‌, ಒಮಾನ್‌, ಪಾಕಿಸ್ತಾನ, ಕತಾರ್‌, ಸೌದಿ ಅರೇಬಿಯಾ, ಶ್ರೀಲಂಕಾ, ಥಾಯ್ಲೆಂಡ್‌, ಅರಬ್‌ ಸಂಯುಕ್ತ ಸಂಸ್ಥಾನ ಮತ್ತು ಯೆಮನ್‌.


ಆಂಫನ್‌ ಚಂಡಮಾರುತದದಿಂದಾಗಿ ಚೆನ್ನೈ ಕರಾವಳಿಯಲ್ಲಿ ಎದ್ದ ಬೃಹತ್‌ ಅಲೆಗಳು

ಅರಬ್ಬಿ ಸಮುದ್ರ ಮತ್ತು ಬಂಗಾಳ ಕೊಲ್ಲಿಯಲ್ಲಿ ಸೃಷ್ಟಿಯಾಗುವ ಚಂಡಮಾರುತಳಿಗೆ ಹೆಸರು ಇರಿಸುವುದು ಕೂಡ ದೆಹಲಿಯ ಆರ್‌ಎಸ್‌ಎಂಸಿಯ ಹೊಣೆ. ಈ ಪ್ರದೇಶದ ದೇಶಗಳು ಸೂಚಿಸಿದ ಹೆಸರುಗಳನ್ನು ಪಟ್ಟಿ ಮಾಡಿ ಇರಿಸಲಾಗುತ್ತದೆ. ಈ ಪಟ್ಟಿಯಲ್ಲಿರುವ ಹೆಸರುಗಳನ್ನು ಸರದಿಯಂತೆ ಇರಿಸಬೇಕಾಗುತ್ತದೆ. ಚಂಡಮಾರುತ ಸೃಷ್ಟಿಯಾಗುವುದಕ್ಕೆ ಎಷ್ಟೋ ವರ್ಷ ಮೊದಲೇ ಹೆಸರು ನಿರ್ಧಾರ ಆಗಿರುತ್ತದೆ.

2004ರಲ್ಲಿ ರೂಪಿಸಿದ್ದ 64 ಹೆಸರುಗಳ ಪಟ್ಟಿಯಲ್ಲಿದ್ದ ಕೊನೆಯ ಹೆಸರನ್ನು ಕಳೆದ ವರ್ಷ ಬೀಸಿದ ಆಂಫನ್‌ ಚಂಡಮಾರುತಕ್ಕೆ ಇರಿಸಲಾಗಿದೆ. 

ಭಾರತೀಯ ಹವಾಮಾನ ಇಲಾಖೆಯು 2020ರಲ್ಲಿ ಹೊಸ ಪಟ್ಟಿ ರೂಪಿಸಿದೆ. 13 ದೇಶಗಳು ಸೂಚಿಸಿದ ತಲಾ 13 ಹೆಸರುಗಳು ಹೊಸ ಪಟ್ಟಿಯಲ್ಲಿ ಸೇರಿವೆ. ಒಟ್ಟು 169 ಹೆಸರುಗಳಿವೆ. ಈಗ ಹೊಸ ಪಟ್ಟಿಯಲ್ಲಿರುವ ಹೆಸರುಗಳನ್ನು ಬಳಸಲಾಗುತ್ತಿದೆ. ಈ ವಾರ ಅಪ್ಪಳಿಸಲಿರುವ ಚಂಡಮಾರುತ ‘ಯಸ್‌’ ಹೆಸರನ್ನು ಒಮಾನ್‌ ಸೂಚಿಸಿದೆ. ಮುಂದಿನ ಚಂಡಮಾರುತದ ಹೆಸರು ‘ಗುಲಾಬ್‌’, ಇದನ್ನು ‍ಪಾಕಿಸ್ತಾನ ಸೂಚಿಸಿದೆ. 

ಇತ್ತೀಚಿನ ಕೆಲವು ಚಂಡಮಾರುತಗಳು
* ಕಳೆದ ವರ್ಷ ಬಂಗಾಳ ಕೊಲ್ಲಿಗೆ ಅಪ್ಪಳಿಸಿ ಅತಿಹೆಚ್ಚು ಹಾನಿ ಮಾಡಿದ ಆಂಪನ್ ಚಂಡಮಾರುತವು ‘ಸೂಪರ್ ಸೈಕ್ಲೋನ್’ ಎಂದು ಕರೆಸಿಕೊಂಡಿತು. ಬಂಗಾಳದಲ್ಲಿ 72 ಜನರು, ಬಾಂಗ್ಲಾದೇಶದಲ್ಲಿ 12 ಜನರು ಇದಕ್ಕೆ ಬಲಿಯಾಗಿದ್ದರು. ಬಂಗಾಳದಲ್ಲಿ 1.40 ಕೋಟಿ ಜನರು ವಿದ್ಯುತ್‌ ಸಂಪರ್ಕ ಕಳೆದುಕೊಂಡಿದ್ದರು. ಗಂಟೆಗೆ 160 ಕಿಲೋಮೀಟರ್ ವೇಗದಲ್ಲಿ ಬೀಸಿದ ಇದು, ಒಟ್ಟು ₹95,000 ಕೋಟಿ ನಷ್ಟ ಉಂಟು ಮಾಡಿತ್ತು ಎಂದು ಅಂದಾಜಿಸಲಾಗಿದೆ.

* ಕಳೆದ ವರ್ಷ ಅರಬ್ಬೀ ಸಮುದ್ರದ ಮೂಲಕ ‘ನಿಸರ್ಗ’ ಚಂಡಮಾರುತವು ಮುಂಬೈ ಕರಾವಳಿಗೆ ಅಪ್ಪಳಿಸಿತ್ತು. ಆಗ ಮುಂಬೈನಲ್ಲಿ ಕೋವಿಡ್‌ನ ಮೊದಲ ಅಲೆ ಭಾರಿ ಜೋರಾಗಿತ್ತು. ಆದರೆ ಚಂಡಮಾರುತ ಒಮಾನ್ ಕಡೆಗೆ ದಿಕ್ಕು ಬದಲಿಸಿದ್ದರಿಂದ, ಭಾರಿ ಪ್ರಮಾಣದ ಹಾನಿ ತಪ್ಪಿತು.

* ‘ಫನಿ’ ಚಂಡಮಾರುತವು 1998ರ ಒಡಿಶಾ ಚಂಡಮಾರುತದ ನಂತರ ಒಡಿಶಾಗೆ ಅಪ್ಪಳಿಸಿದ ಪ್ರಬಲ ಉಷ್ಣವಲಯದ ಚಂಡಮಾರುತವಾಗಿದೆ. 2019ರಲ್ಲಿ ಒಡಿಶಾ, ಪಶ್ಚಿಮ ಬಂಗಾಳ, ಆಂಧ್ರಪ್ರದೇಶ ಮತ್ತು ಪೂರ್ವ ಭಾರತದಲ್ಲಿ ಭಾರಿ ಪ್ರಮಾಣದ ಜೀವ ಮತ್ತು ಆಸ್ತಿ ನಷ್ಟ ಉಂಟುಮಾಡಿತು. ಬಾಂಗ್ಲಾದೇಶ, ಭೂತಾನ್ ಮತ್ತು ಶ್ರೀಲಂಕಾಗೂ ಅಪ್ಪಳಿಸಿತ್ತು.

* ‘ನಿವಾರ್’ ಚಂಡಮಾರುತವು 2020ರಲ್ಲಿ ತಮಿಳುನಾಡು, ಪುದುಚೇರಿಗೆ ಅಪ್ಪಳಿಸಿ ರೌದ್ರಾವತಾರ ತೋರಿತ್ತು. ಮುಂಜಾಗ್ರತಾ ಕ್ರಮ ತೆಗೆದುಕೊಂಡಿದ್ದರಿಂದ ಹೆಚ್ಚಿನ ಸಾವುನೋವು ಉಂಟಾಗದಿದ್ದರೂ, ರೈತಾಪಿ ವರ್ಗ ಕಷ್ಟ ಅನುಭವಿಸಿತು.

* 2019ರಲ್ಲಿ ‘ಬುಲ್‌ಬುಲ್’ ಚಂಡಮಾರುತವು ಭಾರತದ ಪಶ್ಚಿಮ ಬಂಗಾಳವನ್ನು ಅಪ್ಪಳಿಸಿದ ತೀವ್ರ ಸ್ವರೂಪದ ಚಂಡಮಾರುತವಾಗಿತ್ತು. ಇದು ಭಾರಿ ಮಳೆ, ಪ್ರವಾಹ ಇತ್ಯಾದಿಗಳಿಗೆ ಕಾರಣವಾಯಿತು. ಇದರಿಂದಾಗಿ ಜೀವ ಮತ್ತು ಆಸ್ತಿ ನಾಶವಾಯಿತು. ಭಾರತದ ಹೊರಗೆ ಅದು ಬಾಂಗ್ಲಾದೇಶಕ್ಕೂ ತೊಂದರೆ ಕೊಟ್ಟಿತ್ತು.

* ‘ವಾಯು’ ಚಂಡಮಾರುತವು ಅರಬ್ಬೀ ಸಮುದ್ರದ ಮೂಲಕ ಅಪ್ಪಳಿಸಿ ಗುಜರಾತ್ ರಾಜ್ಯದಲ್ಲಿ ಜೀವ ಮತ್ತು ಆಸ್ತಿಗೆ ಒಂದಿಷ್ಟು ಹಾನಿಯನ್ನುಂಟುಮಾಡಿತು. ಇದು 1998ರ ಗುಜರಾತ್ ಚಂಡಮಾರುತದ ನಂತರ ರಾಜ್ಯಕ್ಕೆ ಅಪ್ಪಳಿಸಿದ ಪ್ರಬಲ ಚಂಡಮಾರುತವಾಗಿತ್ತು. ಇದು ಮಾಲ್ಡೀವ್ಸ್, ಪಾಕಿಸ್ತಾನ ಮತ್ತು ಒಮಾನ್‌ಗಳ ಮೇಲೂ ಪರಿಣಾಮ ಬೀರಿತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು