ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಳ- ಅಗಲ: ಹೆದ್ದಾರಿಗಳಲ್ಲಿ ಶೌಚಾಲಯವಿಲ್ಲದ ದುಃಸ್ಥಿತಿ- ಮಹಿಳೆಯರ ಪ್ರಯಾಣದ ಪ್ರಯಾಸ

ಇಂದು ವಿಶ್ವ ಶೌಚಾಲಯ ದಿನ
Last Updated 18 ನವೆಂಬರ್ 2021, 21:30 IST
ಅಕ್ಷರ ಗಾತ್ರ

ಭಾರತವು ‘ಸ್ವಚ್ಛ ಭಾರತ ಅಭಿಯಾನ’ದ ಅಡಿಯಲ್ಲಿ ಬಯಲು ಬಹಿರ್ದೆಸೆ ಮುಕ್ತವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ವರ್ಷಗಳ ಹಿಂದೆಯೇ ಘೋಷಿಸಿದ್ದಾರೆ. ಆದರೆ, ಹಾಗೆ ಆಗಿಲ್ಲ ಎಂದು ಪ್ರತಿಪಾದಿಸುವ ಹಲವು ವರದಿಗಳು ಪ್ರಕಟವಾಗಿವೆ. ಸ್ವಚ್ಛತಾ ಅಭಿಯಾನದ ಅಡಿಯಲ್ಲಿ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಶೌಚಾಲಯಗಳನ್ನು ನಿರ್ಮಿಸಲಾಗಿದೆ. ಹೀಗೆ ನಿರ್ಮಾಣವಾಗಿರುವ ಹಲವು ಶೌಚಾಲಯಗಳ ಸ್ಥಿತಿಯು ಶೋಚನೀಯವಾಗಿದೆ. ಸ್ವಚ್ಛ ಇಲ್ಲದ, ಶೌಚಾಲಯವೇ ಇಲ್ಲದ ದುಃಸ್ಥಿತಿಯು ವೃದ್ಧರು, ಮಕ್ಕಳು ಪ್ರಮುಖವಾಗಿ ಮಹಿಳೆಯರ ಪ್ರಯಾಣಕ್ಕೆ ದುಃಸ್ವಪ್ನವಾಗಿದೆ.

ಹೆದ್ದಾರಿಗಳ ಹೆಚ್ಚಿನೆಡೆಗಳಲ್ಲಿ ಸಾರ್ವಜನಿಕ ಶೌಚಾಲಯಗಳು ಸಿಗುವುದಿಲ್ಲ. ಒಂದುವೇಳೆ ಸಿಕ್ಕರೂ ಅವುಗಳು ಬಳಕೆಗೆ ಅಸಾಧ್ಯವೆಂಬಂತೆ ಇವೆ. ಸ್ವಚ್ಛತೆಯನ್ನಂತೂ ಕೇಳುವಂತೆಯೇ ಇಲ್ಲ. ಶೌಚಾಲಯ ಇದೆಯಲ್ಲಾ ಎನ್ನುವುದೇ ಅದೃಷ್ಟ! ನಿಯಮಿತವಾಗಿ ಇಲ್ಲದ ನೀರು ಸರಬರಾಜು, ಸರಿಯಾದ ಬೆಳಕಿನ ವ್ಯವಸ್ಥೆ ಇಲ್ಲದಿರುವಿಕೆ, ಬಾಗಿಲು ಇಲ್ಲ, ಬಾಗಿಲಿದ್ದರೆ ಚಿಲಕ ಇಲ್ಲ, ಭದ್ರತಾ ವ್ಯವಸ್ಥೆ ಇಲ್ಲ– ಇದು ಹೆದ್ದಾರಿ ಬದಿಗಳಲ್ಲಿರುವ ಶೌಚಾಲಯಗಳ ಸ್ಥಿತಿ. ಟೋಲ್‌ಗಳ ಬಳಿ ಸಿಗುವ ಸಾರ್ವಜನಿಕ ಶೌಚಾಲಯಗಳ ಬಳಿ ಗಂಡಸರದೇ ಸಾಲು. ಮದ್ಯ ಕುಡಿಯುವುದು, ಸಿಗರೇಟು ಸೇದುವುದು ಮುಂತಾದವುಗಳ ಕಾರಣ ಮಹಿಳೆಯರು ಆ ಕಡೆಯೂ ಹೋಗದಂಥ ವಾತಾವರಣ ಇದೆ.

‘ಹೈದರಾಬಾದ್‌ನಿಂದ ಶಿವಮೊ‌ಗ್ಗಕ್ಕೆ ಐರಾವತ ಬಸ್‌ನಲ್ಲಿನಾನು ಇತ್ತೀಚೆಗೆ ಪ್ರಯಾಣಿಸಿದ್ದೆ. ಸಂಜೆ 6 ಗಂಟೆಗೆ ಹೈದರಾಬಾದ್‌ನಿಂದ ಬಸ್‌ ಹೊರಟಿತ್ತು. 8.30ರ ಹೊತ್ತಿಗೆ ಒಂದು ಹೋಟೆಲ್‌ ಮುಂದೆ ಬಸ್‌ ನಿಂತಿತು. ಮೂಗು ಮುಚ್ಚಿಕೊಂಡುಶೌಚಾಲಯಕ್ಕೆ ಹೋಗಿಬಂದಾಯಿತು. ನಂತರ, ಬೆಳಿಗ್ಗಿನ ಜಾವದವರೆಗೆ ಎಲ್ಲೂ ನಿಲುಗಡೆ ಇರಲಿಲ್ಲ. ಬೆಳಿಗ್ಗಿನ ಜಾವದ ಹೊತ್ತಿಗೆ ರಾಯಚೂರು ಕೆಎಸ್‌ಆರ್‌ಟಿಸಿಬಸ್‌ ನಿಲ್ದಾಣದಲ್ಲಿ ಬಸ್ಸು ನಿಂತಿತು. ಶೌಚಾಲಯಕ್ಕೆ ಹೋಗಿ ಬರುತ್ತೇನೆ ಎಂದರೆ, ‘ಬೇಗ ಬರಬೇಕು’ ಎಂದರು ಕಂಡಕ್ಟರ್‌. ಶೌಚಾಲಯ ಎಲ್ಲಿದೆ ಎಂದು ಹುಡುಕುವುದೇ ಸಾಹಸ. ಅಂತೂ ಸಿಕ್ಕಿತು ಎಂದು ಸಮಾಧಾನ ಪಡುವಹೊತ್ತಿಗೆ ಶೌಚಾಲಯಗಳಿಗೆ ಹಾಕಿದ ಬೀಗ ಕಂಡಿತು. ವಾಪಾಸು ಬಂದು ಬಸ್‌ನಲ್ಲಿ ಕೂತಿದ್ದಾಯಿತು. ಮಾರ್ಗಮಧ್ಯೆ ಕೆಎಸ್‌ಆರ್‌ಟಿಸಿಯ ಬೇರೆ ಯಾವಬಸ್‌ ನಿಲ್ದಾಣದಲ್ಲಿಯೂ ಶೌಚಾಲಯಕ್ಕೆ ಹೋಗುವ ಧೈರ್ಯ ಸಾಲಲಿಲ್ಲ. ಬೆಳಿಗ್ಗೆ 6ರ ಸುಮಾರಿಗೆ ಶಿವಮೊಗ್ಗ ತಲುಪಿದಾಗ ಬೇರೆ ದಾರಿಯೇ ಕಾಣದೆ ಬಸ್‌ನಿಲ್ದಾಣದಲ್ಲಿದ್ದ ಶೌಚಾಲಯವನ್ನೇ ಬಳಸಬೇಕಾಯಿತು’ ಎಂದು ತಮ್ಮ ಪ್ರಯಾಣದ ಯಾತನೆಯನ್ನು ಶಿವಮೊಗ್ಗದ ಸಂತೃಪ್ತಿ ಹಂಚಿಕೊಂಡರು.

‘ಪುರುಷ ಪ್ರಯಾಣಿಕರಿಗೆ ಈ ಸಮಸ್ಯೆ ಬಾಧಿಸದು. ಮರದ ಹಿಂದೆಯೋ, ರಸ್ತೆ ಬದಿಯಲ್ಲಿಯೋ ಅವರು ಕೆಲಸ ಮುಗಿಸಿಬಿಡುತ್ತಾರೆ. ಅದೇ ಮಹಿಳೆಯರಿಗೆ ಹೀಗಾಗದು. ಖಾಸಗಿ ಬಸ್‌ ಪ್ರಯಾಣದಲ್ಲೂ ಪರಿಸ್ಥಿತಿ ಬೇರೆಯದಿಲ್ಲ. ಮಾರ್ಗಮಧ್ಯೆ ಬಸ್‌ ನಿಲ್ಲಿಸಲು ವಿನಂತಿಸಿದರೂ ಮರೆಯನ್ನು ಎಲ್ಲಿ ಹುಡುಕುವುದು. ಗಂಡಸರು ಕಿಟಕಿ ಕಡೆಯಿಂದ ನೋಡುತ್ತಾರೆನ್ನುವ ಮುಜುಗರ. ಇನ್ನು ರಾತ್ರಿ ವೇಳೆಯಲ್ಲಿ ಪ್ರಾಣಿ, ಕೀಟಗಳ ಭಯ. ಜೊತೆ ಯಾರಾದರೂ ಇದ್ದರೆ ಮರೆ ಆಗುತ್ತಾರೆ ನಿಜ. ಹಾಗಂತ ಪ್ರತಿಬಾರಿಯೂ ಯಾರನ್ನು ಕರೆದುಕೊಂಡು ಹೋಗುವುದು. ಈ ಕಾರಣಕ್ಕೆ ಒಂಟಿಯಾಗಿ ಬಸ್‌ ಪ್ರಯಾಣವು ಪ್ರಯಾಸ ಪಡುವಂತಾಗುತ್ತದೆ’ ಎನ್ನುತ್ತಾರೆ ಸಂತೃಪ್ತಿ.

ಸಹಿ ಸಂಗ್ರಹ ಅಭಿಯಾನ

ರಾಜ್ಯದ ಪ್ರಮುಖ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಬೆಂಗಳೂರು-ಮಂಗಳೂರು ಹೆದ್ದಾರಿಯೂ ಒಂದು. ಅಂದಾಜು 350 ಕಿ.ಮೀ. ಉದ್ದದ ಈ ಹೆದ್ದಾರಿಯಲ್ಲಿ ಮಹಿಳೆಯರು ಆತ್ಮವಿಶ್ವಾಸದಿಂದ ಮತ್ತು ಯಾವುದೇ ಮುಜುಗರವಿಲ್ಲದೆ ಬಳಸಬಹುದಾದ ಸಾರ್ವಜನಿಕ ಶೌಚಾಲಯಗಳು ಇಲ್ಲವೇ ಇಲ್ಲ. ಈ ಶೌಚಾಲಯಗಳನ್ನು ಬಳಸಿದ ಅನುಭವವಿರುವ ಸಕಲೇಶಪುರದ ಅರ್ಚನಾ ಕೆ.ಆರ್. ಅವರು, ‘ಈ ಹೆದ್ದಾರಿಯ ಉದ್ದಕ್ಕೂ ನಿಗದಿತ ಅಂತರದಲ್ಲಿ ಸ್ವಚ್ಛ, ಸುರಕ್ಷಿತ ಮತ್ತು ಬಳಕೆಗೆ ಯೋಗ್ಯವಿರುವಂತಹ ಶೌಚಾಲಯಗಳ ಅವಶ್ಯಕತೆ ಇದೆ. ಅಂತಹ ಶೌಚಾಲಯಗಳನ್ನು ನಿರ್ಮಿಸಿ, ನಿರ್ವಹಣೆ ಮಾಡಿ’ ಎಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವರನ್ನು ಒತ್ತಾಯಿಸಲು ಆನ್‌ಲೈನ್‌ನಲ್ಲಿ ಸಹಿ ಸಂಗ್ರಹ ಅಭಿಯಾನ ಆರಂಭಿಸಿದ್ದಾರೆ.

ಸ್ವಚ್ಚತಾ ಪ್ರಚಾರಕಿಯೂ ಆಗಿರುವ ಅರ್ಚನಾ ಅವರು 2018ರ ಅಕ್ಟೋಬರ್ 2ರಂದು ಸಹಿ ಸಂಗ್ರಹ ಅಭಿಯಾನವನ್ನು ಆರಂಭಿಸಿದ್ದಾರೆ. ಈ ಆಗ್ರಹವನ್ನು ಹೆದ್ದಾರಿ ಸಚಿವರಿಗೆ ತಲುಪಿಸಲು 1.50 ಲಕ್ಷ ಸಹಿಗಳ ಅವಶ್ಯಕತೆ ಇದೆ. ಈವರೆಗೆ 1.29 ಲಕ್ಷ ಜನರು ಸಹಿ ಮಾಡಿದ್ದಾರೆ.

‘ಸಕಲೇಶಪುರದಿಂದ ಬೆಂಗಳೂರು ತಲುಪುವ ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಸಿಗುವ ಹೆಚ್ಚಿನ ಶೌಚಾಲಯಗಳು ಬಳಕೆಗೆ ಯೋಗ್ಯವಿಲ್ಲ. ಮಧುಮೇಹ ಇರುವ ನನ್ನ ತಾಯಿ ಬಹಳ ಕಷ್ಟಪಟ್ಟರು. ಅವರಿಗೆ ಮೂತ್ರ ಕಟ್ಟಲು ಆಗುವುದಿಲ್ಲ ಮತ್ತು ಪದೇ ಪದೇ ಶೌಚಾಲಯಕ್ಕೆ ಹೋಗುತ್ತಾರೆ. ಈ ಎಲ್ಲದನ್ನು ನೋಡಿ ಆನ್‌ಲೈನ್‌ನಲ್ಲಿ ಸಹಿ ಸಂಗ್ರಹಣೆ ಮಾಡಲು ಶುರು ಮಾಡಿದೆ’ ಎನ್ನುತ್ತಾರೆ ಅರ್ಚನಾ.

‘ನಾನು ಸಕಲೇಶಪುರ – ಬೆಂಗಳೂರು ಹೆದ್ದಾರಿಯಲ್ಲಿ ಓಡಾಡುತ್ತಲೇ ಇರುತ್ತೇನೆ. ಸ್ವಚ್ಛತಾ ಪ್ರಚಾರಕಿಯೂ ಆಗಿರುವುದರಿಂದ ಈ ಹೆದ್ದಾರಿಯಲ್ಲಿ ಸಿಗುವ ಶೌಚಾಲಯಗಳ ಬಗ್ಗೆ ಒಂದು ಸಮೀಕ್ಷೆ ಮಾಡಿದ್ದೇನೆ.ಎನ್‌ಎಚ್‌ 75ರಲ್ಲಿ ಒಟ್ಟು 30 ಪೆಟ್ರೋಲ್‌ ಬಂಕ್‌ಗಳಿವೆ. 7 ಟೋಲ್‌ಗಳು ಸಿಗುತ್ತವೆ. ಮೂರು ಕೆಎಸ್‌ಆರ್‌ಟಿಸಿ ಬಸ್‌ ಸ್ಟ್ಯಾಂಡ್‌ಗಳಿವೆ. ಆದರೆ ಇಲ್ಲಿರುವ ಶೌಚಾಲಯಗಳ ಕುರಿತು ಯಾವುದೇ ನಾಮಫಲಕಗಳಿಲ್ಲ.ಹಲವು ಕಡೆ ಪುರುಷರಿಗೆ ಮತ್ತು ಮಹಿಳೆಯರಿಗೆ ಪ್ರತ್ಯೇಕ ಶೌಚಾಲಯ ವ್ಯವಸ್ಥೆ ಇಲ್ಲ.ಬಳಸಿದ ಸ್ಯಾನಿಟರಿನ್ಯಾಪ್‌ಕಿನ್‌ಗಳನ್ನು ಹಾಕಲು ಎಲ್ಲೂ ಕಸದಬುಟ್ಟಿಗಳಿಲ್ಲ. ಟೋಲ್‌ ಘಟಕಗಳ ಬಳಿ ಇರುವ ಶೌಚಾಲಯಗಳಲ್ಲಿ ನೀರಿನ ಸರಬರಾಜು, ವಿದ್ಯುತ್ ವ್ಯವಸ್ಥೆ ಮತ್ತು ಭದ್ರತಾ ಸಿಬ್ಬಂದಿಯೂ ಇಲ್ಲ. ಟೋಲ್‌ ಬಳಿ ಇರುವ ಕೆಲವು ಶೌಚಾಲಯಗಳು ಸ್ಟೋರ್‌ ರೂಮ್‌ಗಳಾಗಿವೆ. ಟೋಲ್‌ಬಳಿ ನಂದಿನಿ ಬೂತ್‌ಗಳು ಇರುತ್ತವೆ. ನಂದಿನ ಬೂತಿನ ವಸ್ತುಗಳನ್ನು ಇಲ್ಲಿ ಇಡಲಾಗುತ್ತದೆ. ಯಾಕೆ ಹೀಗೆ ಎಂದು ಪ್ರಶ್ನೆ ಮಾಡಿದರೆ, ‘ನಿಮಗೇನು ಸಂಬಂಧ?’ ಎನ್ನುವಪ್ರತಿ ಪ್ರಶ್ನೆ ಬರುತ್ತದೆ’ ಎನ್ನುತ್ತಾರೆ ಅರ್ಚನಾ.

‘ಈ ಶೌಚಾಲಯಗಳ ಅವ್ಯವಸ್ಥೆ ಕುರಿತುರಾಷ್ಟ್ರೀಯ ಹೆದ್ದಾರಿಪ್ರಾಧಿಕಾರದ (ಎನ್‌ಎಚ್‌ಎಐ) ಸಹಾಯವಾಣಿಗೆ ಕರೆ ಮಾಡಿ ದೂರನ್ನೂ ನೀಡಿದ್ದೇನೆ. ಆದರೆ, ಕರೆ ಸ್ವೀಕರಿಸಿದ ಅಧಿಕಾರಿಗಳು ಮದ್ಯ ಸೇವಿಸಿದ್ದರು ಮತ್ತು ಶೌಚಾಲಯಗಳ ಬಗ್ಗೆ ದೂರು ನೀಡಿದ್ದಕ್ಕಾಗಿ ರೇಗಾಡಿದರು. ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್‌ ಗಡ್ಕರಿ ಅವರನ್ನು ಸಂಪರ್ಕಿಸಲೂ ಪ್ರಯತ್ನಿಸಿದೆ. ಆದರೆ ಅದು ಸಾಧ್ಯವಾಗಲಿಲ್ಲ. ಎನ್‌ಎಚ್‌ಎಐನ ಹಾಸನದ ಅಧಿಕಾರಿಯೊಬ್ಬರು ತಕ್ಕಮಟ್ಟಿಗೆ ಸ್ಪಂದಿಸಿದರಷ್ಟೆ’ ಎಂದರು ಅರ್ಚನಾ.

‘ವರ್ಷದ ಹಿಂದೆ ವಿಡಿಯೊ ಕಾನ್ಫರೆನ್ಸ್‌ವೊಂದರಲ್ಲಿ ಸಚಿವ ನಿತಿನ್‌ ಗಡ್ಕರಿ ಅವರು ಹೆದ್ದಾರಿ ಬದಿ ಸ್ವಚ್ಛ ಶೌಚಾಲಯ ನಿರ್ಮಾಣದ ಕುರಿತುಪ್ರಸ್ತಾಪಿಸಿದ್ದರು. ಪ್ರತಿ 50 ಕಿ.ಮೀ.ಗೆ ಒಂದು ಸ್ವಚ್ಛ ಶೌಚಾಲಯ ನಿರ್ಮಿಸಲಾಗುವುದು ಎಂದೂ ಎನ್‌ಎಚ್‌ಎಐ ಹೇಳಿತ್ತು. ಆದರೆ ಇದು ಕಾರ್ಯರೂಪಕ್ಕೆ ಬಂದಂತಿಲ್ಲ’ ಎನ್ನುತ್ತಾರೆ ಅರ್ಚನಾ.

***

ಶೌಚಾಲಯಗಳನ್ನು ಮಾತ್ರ ಕಟ್ಟಿಸಿ ಭಾರತವು ಬಯಲು ಬಹಿರ್ದೆಸೆ ಮುಕ್ತವಾಗಿದೆ ಎಂದರೆ ಅರ್ಥವಿಲ್ಲ. ಕಟ್ಟಿಸಿದ ಶೌಚಾಲಯದ ನಿರ್ವಹಣೆಯೂ ಆಗಬೇಕಿದೆ

-ಅರ್ಚನಾ. ಕೆ.ಆರ್‌., ಸ್ವಚ್ಛತಾ ಪ್ರಚಾರಕಿ

***

ಗಂಭೀರ ಸಮಸ್ಯೆ

‘ದೇಶದಾದ್ಯಂತ ನಾನು ಬೈಕ್‌ ಸವಾರಿ ಮಾಡಿದ್ದೇನೆ. ಎಲ್ಲಾ ಕಡೆಯೂ ಶೌಚಾಲಯದ ಸಮಸ್ಯೆ ಇದೆ. ರಾಜ್ಯದಲ್ಲೂ ಸಮಸ್ಯೆ ಗಂಭೀರವಾಗಿಯೇ ಇದೆ. ಹೆದ್ದಾರಿಗಳಲ್ಲಿ ಸಿಗುವ ಬಹುತೇಕ ಸಾರ್ವಜನಿಕ ಶೌಚಾಲಯಗಳು ಬೀಗ ಹಾಕಿರುತ್ತವೆ. ಆ ಸಮಯದಲ್ಲಿ ನಾವು ಹತ್ತಿರದ ಹಳ್ಳಿಗಳಿಗೆ ಹೋಗಿ ಸಮಸ್ಯೆ ಹೇಳಿಕೊಂಡು, ಯಾರದ್ದಾದರೂ ಮನೆಯ ಶೌಚಾಲಯ ಬಳಸುತ್ತೇವೆ. ತಂಡವಾಗಿ ಹೋದರೆ ಹೇಗೋ ಮರೆಯಲ್ಲಿಯೇ ನಡೆದು ಹೋಗುತ್ತದೆ. ಕೊಳಕು ಸ್ಥಿತಿಯಲ್ಲಿರುವ ಶೌಚಾಲಯವನ್ನು ಬಳಸುವ ಬದಲು ಬಯಲೇ ಹೆಚ್ಚು ಆರೋಗ್ಯಕರ ಎನಿಸುತ್ತದೆ’ ಎನ್ನುತ್ತಾರೆ ಬೈಕರ್‌ ದಶ್ಮಿ.

ಪಾಲನೆಯಾಗದ ಆದೇಶ

ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯವು 2018ರ ಜನವರಿಯಲ್ಲಿ ಎಲ್ಲಾ ರಾಜ್ಯ ಸರ್ಕಾರಗಳ ಮುಖ್ಯ ಕಾರ್ಯದರ್ಶಿಗಳಿಗೆ ಮತ್ತು ಸಂಬಂಧಿತ ಅಧಿಕಾರಿಗಳಿಗೆ ಆದೇಶ ಪತ್ರವೊಂದನ್ನು ರವಾನಿಸಿತ್ತು.

ಆ ಆದೇಶದಲ್ಲಿ ಹೀಗೆ ಹೇಳಲಾಗಿತ್ತು: ‘2013ರಲ್ಲಿ ಹೊರಡಿಸಿದ್ದ ಆದೇಶವೊಂದರ ಅನ್ವಯಎಲ್ಲಾ ಹೆದ್ದಾರಿಗಳಲ್ಲಿರುವ ವಾಣಿಜ್ಯ ಸಂಕೀರ್ಣಗಳ ಆವರಣದಲ್ಲಿ ವಿದ್ಯುತ್‌ ವ್ಯವಸ್ಥೆ, ನೀರಿನ ಸರಬರಾಜು ಮತ್ತು ಅವಶ್ಯವಾಗಿರುವ ಸ್ವಚ್ಛತಾ ಪರಿಕರಗಳನ್ನು ಒಳಗೊಂಡ ಶೌಚಾಲಯಗಳನ್ನು ನಿರ್ಮಾಣ ಮಾಡಬೇಕು. ಜೊತೆಗೆ ಎಲ್ಲಾ ಪೆಟ್ರೋಲ್‌ ಬಂಕ್‌ಗಳಲ್ಲೂ ಶೌಚಾಲಯ ವ್ಯವಸ್ಥೆ ಇರಬೇಕು ಎಂದು ಸೂಚಿಸಲಾಗಿತ್ತು. ಅದು ಪಾಲನೆಯಾಗಿಲ್ಲ. ಈ ಆದೇಶ ತಲುಪಿದ ಮೂರು ತಿಂಗಳ ಒಳಗೆ, ಇವನ್ನು ಅನುಷ್ಠಾನಕ್ಕೆ ತರಬೇಕು’ ಎಂದು ಆದೇಶಿಸಿತ್ತು.

ಆದರೆ ಈ ಆದೇಶ ಬಂದು ಮೂರು ವರ್ಷ ಕಳೆದರೂ, ಆದೇಶದಲ್ಲಿ ತಿಳಿಸಿದಂತೆ ಏನೂ ಆಗಿಲ್ಲ. ಶೌಚಾಲಯ ನಿರ್ಮಾಣವಾಗಿಲ್ಲ. ಜೊತೆಗೆ ಪೆಟ್ರೋಲ್‌ ಬಂಕ್‌ಗಳಲ್ಲಿ ಬಸ್‌ ನಿಲುಗಡೆ ಇಲ್ಲ. ಹೆಚ್ಚಿನ ಸಂದರ್ಭಗಳಲ್ಲಿ ಬಂಕ್‌ನ ಸಿಬ್ಬಂದಿ ಮತ್ತು ಗ್ರಾಹಕರಿಗೆ ಮಾತ್ರ ಶೌಚಾಲಯ ಪ್ರವೇಶ ಎನ್ನುವ ‘ಬಂಕ್‌ ನಿಯಮ’ ಇದೆ!

ಆರೋಗ್ಯದ ಮೇಲೆ ಪರಿಣಾಮ

‘ಮೂತ್ರ ಕಟ್ಟುವುದು, ಸ್ವಚ್ಛ ಇಲ್ಲದ ಶೌಚಾಲಯ ಬಳಸುವುದು ಆರೋಗ್ಯದ ಮೇಲೆ ಕೆಟ್ಟ ಪರಿಣಾಮವನ್ನು ಬೀರುತ್ತದೆ. ಪುರುಷ– ಮಹಿಳೆ ಬೇಧ ಇಲ್ಲದೆ, ಆರೋಗ್ಯ ಸಮಸ್ಯೆಗಳು ಕಾಡುತ್ತವೆ. ತುಂಬಾ ಹೊತ್ತು ಮೂತ್ರ ಕಟ್ಟುವುದರಿಂದ, ಸ್ವಚ್ಛ ಇಲ್ಲದ ಶೌಚಾಲಯ ಬಳಸುವುದರಿಂದ ಮೂತ್ರನಾಳದ ಸೋಂಕು ಉಂಟಾಗುತ್ತದೆ’ ಎನ್ನುತ್ತಾರೆ ಸಾಗರದ ಸ್ತ್ರೀರೋಗ ತಜ್ಞೆ ಡಾ. ಶ್ರೀಯಾ ಆರ್‌. ಭಾಗವತ್‌.

‘ಮಹಿಳೆಯರಿಗೆ ಬಿಳಿ ಮುಟ್ಟಿನ ಸಮಸ್ಯೆ ಉಂಟಾಗಬಹುದು. ಗರ್ಭವತಿಯರಿಗೆ ಹೆಚ್ಚು ಹೊತ್ತು ಮೂತ್ರಕಟ್ಟಲು ಸಾಧ್ಯವಾಗುವುದಿಲ್ಲ. ಮಧುಮೇಹದಂಥ ರೋಗದಿಂದ ಬಳಲುತ್ತಿರುವವರಿಗೂ ಮೂತ್ರ ಕಟ್ಟುವುದು ಅಸಾಧ್ಯ’ ಎಂದು ವಿವರಿಸುತ್ತಾರೆ ಶ್ರೀಯಾ.

‘ಶೌಚಾಲಯಗಳಲ್ಲಿ ಹೆಚ್ಚಾಗಿ ಪಾಶ್ಚಿಮಾತ್ಯ ಮಾದರಿಯ ಕಮೋಡ್‌ ಇರುತ್ತದೆ. ಸ್ವಚ್ಛ ಮಾಡದ ಇಂತಹ ಕಮೋಡ್‌ ಅನ್ನು ಬಳಸುವುದರಿಂದ ಸೋಂಕು ಬಹುಬೇಗ ತಗುಲುತ್ತದೆ.ಆದ್ದರಿಂದ ಭಾರತೀಯ ಶೈಲಿಯಲ್ಲಿರುವ ಶೌಚಾಲಯದ ಬಳಕೆಯೇ ಹೆಚ್ಚು ಸೂಕ್ತ’ ಎಂದು ಅವರು ಹೇಳುತ್ತಾರೆ.

‘ಮೂತ್ರನಾಳದ ಸೋಂಕಿಗೆ ಒಳಗಾದರೆ, ಜ್ವರ ಬರುವುದು, ಮೂತ್ರ ಮಾಡುವಾಗ ಉರಿ ಆಗುತ್ತದೆ. ಈ ರೀತಿಯ ಲಕ್ಷಣಗಳು ಕಂಡುಬಂದರೆ, ಒಂದೆರಡು ದಿನ ಚೆನ್ನಾಗಿ ನೀರು ಕುಡಿದು ಪದೇ ಪದೇ ಮೂತ್ರ ವಿಸರ್ಜಿಸಿದರೆ ಉರಿಯುವುದು ಕಡಿಮೆ ಆಗುತ್ತದೆ. ಸೋಂಕು ಉಲ್ಬಣಗೊಂಡರೆ ವೈದ್ಯರನ್ನು ಸಂಪರ್ಕಿಸಬೇಕು’ ಎನ್ನುವುದು ಶ್ರೀಯಾ ಅವರ ಸಲಹೆ.

ಸ್ವಾಗತಾರ್ಹ ಕ್ರಮ

*ಹೆದ್ದಾರಿಗಳ ಬದಿಗಳಲ್ಲಿ ಶೌಚಾಲಯಗಳನ್ನು ನಿರ್ಮಿಸುವ ಕುರಿತು ಕೇರಳ ಸರ್ಕಾರವು ಕೆಲವು ನಿರ್ಧಾರಗಳನ್ನು ತೆಗೆದುಕೊಂಡಿದೆ.ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಿ ರಾಜ್ಯ ಮತ್ತು ರಾಷ್ಟ್ರೀಯ ಹೆದ್ದಾರಿಗಳಲ್ಲಿ ಒಟ್ಟು 12,000 ಶೌಚಾಲಯಗಳನ್ನು ನಿರ್ಮಿಸಬೇಕು ಎಂದು ತೀರ್ಮಾನಿಸಿದೆ

* ಮಹಾರಾಷ್ಟ್ರ ಸರ್ಕಾರವು 2018ರಲ್ಲಿ ರಾಜ್ಯ ಮತ್ತು ರಾಷ್ಟ್ರೀಯ ಹೆದ್ದಾರಿಗಳಲ್ಲಿ ಪ್ರತಿ ನೂರು ಕಿ.ಮೀ ದೂರಕ್ಕೆ ಶೌಚಾಲಯ ನಿರ್ಮಿಸಲಾಗುವುದು ಎಂದು ಹೇಳಿತ್ತು

* ತಮಿಳುನಾಡಿನ ಕೃಷ್ಣಗಿರಿಯಲ್ಲಿ ಭಾರತದಲ್ಲೇ ಮೊದಲ ಬಾರಿಗೆ ಹೆದ್ದಾರಿ 44ರಲ್ಲಿ ಲ್ಯಾವೆಟೊ ಶೌಚಾಲಯ ಸಂಕೀರ್ಣವನ್ನು ನಿರ್ಮಾಣ ಮಾಡಲಾಗಿದೆ. ಇದು ಲಾಂಜ್‌ ರೀತಿಯಲ್ಲಿರುತ್ತದೆ ಮತ್ತು ಸ್ವಚ್ಛ ಇರುವ ಮತ್ತು ಉತ್ತಮ ನಿರ್ವಹಣೆಇದೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT