ಸೋಮವಾರ, ಆಗಸ್ಟ್ 2, 2021
26 °C

ಅಯೋಧ್ಯೆಯ ರೈಲು ನಿಲ್ದಾಣದ ಕುರಿತು ವೈರಲ್ ಆಗಿರುವ ವಿಡಿಯೊ ನಿಜವೇ?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

‘ಅಯೋಧ್ಯೆಯ ರೈಲು ನಿಲ್ದಾಣವನ್ನು ವಿಶ್ವದರ್ಜೆಗೆ ಏರಿಸಲಾಗಿದೆ. ನಿಲ್ದಾಣದಲ್ಲಿ ಜನರಿಗಾಗಿ ಅಂತರರಾಷ್ಟ್ರೀಯ ಗುಣಮಟ್ಟದ ಸೌಲಭ್ಯಗಳನ್ನು ಕಲ್ಪಿಸಲಾಗಿದೆ. ಜನರ ಸೇವೆಗೆ ಈ ರೈಲು ನಿಲ್ದಾಣ ಸಿದ್ಧವಾಗಿದೆ. ಯೋಗಿ ಆದಿತ್ಯನಾಥ ಅವರ ಬಿಜೆಪಿ ಸರ್ಕಾರವು ರೈಲು ನಿಲ್ದಾಣವನ್ನು ಈ ಗುಣಮಟ್ಟದಲ್ಲಿ ಅಭಿವೃದ್ಧಿಪಡಿಸಿದೆ’ ಎಂಬ ವಿವರ ಇರುವ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ರೈಲು ನಿಲ್ದಾಣ, ಪ್ಲಾಟ್‌ಫಾರಂ, ಟಿಕೆಟ್ ಕೌಂಟರ್, ಶೌಚಾಲಯ ಮತ್ತು ವೈಫೈ ವ್ಯವಸ್ಥೆಯ ದೃಶ್ಯಗಳು ವಿಡಿಯೊದಲ್ಲಿ ಇವೆ. ಟ್ವಿಟರ್‌ನಲ್ಲಿ ಈ ವಿಡಿಯೊವನ್ನು 30,000ಕ್ಕೂ ಹೆಚ್ಚು ಬಾರಿ ಹಂಚಿಕೊಳ್ಳಲಾಗಿದೆ. ಫೇಸ್‌ಬುಕ್‌ನಲ್ಲಿ 20,000ಕ್ಕೂ ಹೆಚ್ಚು ಬಾರಿ ಹಂಚಿಕೊಳ್ಳಲಾಗಿದೆ. ವಾಟ್ಸ್‌ಆ್ಯಪ್‌ನಲ್ಲಿಯೂ ವಿಡಿಯೊ ವೈರಲ್ ಆಗಿದೆ.

ಆದರೆ ಇದು ಸುಳ್ಳು ಸುದ್ದಿ ಎಂದು ಆಲ್ಟ್‌ನ್ಯೂಸ್ ಫ್ಯಾಕ್ಟ್‌ಚೆಕ್ ಪ್ರಕಟಿಸಿದೆ. ‘ವೈರಲ್ ಆಗಿರುವ ವಿಡಿಯೊ ಅಯೋಧ್ಯೆ ರೈಲು ನಿಲ್ದಾಣಕ್ಕೆ ಸಂಬಂಧಿಸಿದ್ದು ಅಲ್ಲ. ಅದು ಗುಜರಾತ್‌ನ ಗಾಂಧಿನಗರ ರೈಲುನಿಲ್ದಾಣದ್ದು. ವೈರಲ್ ಆಗಿರುವ ವಿಡಿಯೊವನ್ನು ಪ್ರಯಾಣಿಕರೊಬ್ಬರು ಜುಲೈ 4ರಂದು ಮೊದಲ ಬಾರಿ ಯೂಟ್ಯೂಬ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಅದು ಗಾಂಧಿನಗರದ ರೈಲು ನಿಲ್ದಾಣ ಎಂಬುದನ್ನು ಅವರು ಸ್ಪಷ್ಟವಾಗಿ ಹೇಳಿದ್ದಾರೆ. ಜತೆಗೆ ವಿಡಿಯೊದಲ್ಲಿನ ಒಂದು ದೃಶ್ಯದಲ್ಲಿ ‘ಗುಜರಾತ್ ಟೂರಿಸಂ’ ಎಂಬ ಲಾಂಛನ ಕಾಣಿಸುತ್ತದೆ. ನಮ್ಮ ಸಿಬ್ಬಂದಿ ಸ್ವತಃ ಗಾಂಧಿನಗರ ರೈಲು ನಿಲ್ದಾಣಕ್ಕೆ ಭೇಟಿ ನೀಡಿ, ವಿಡಿಯೊದಲ್ಲಿ ಇರುವ ರೈಲು ನಿಲ್ದಾಣ ಅಲ್ಲಿನದ್ದೇ ಎಂಬುದನ್ನು ಖಚಿತಪಡಿಸಿಕೊಂಡಿದ್ದಾರೆ. ಗಾಂಧಿನಗರ ರೈಲು ನಿಲ್ದಾಣದ ವಿಡಿಯೊವನ್ನು, ಅಯೋಧ್ಯೆ ರೈಲು ನಿಲ್ದಾಣ ಎಂದು ತಪ್ಪಾಗಿ ಹಂಚಿಕೊಳ್ಳಲಾಗಿದೆ’ ಎಂದು ಆಲ್ಟ್‌ನ್ಯೂಸ್ ವಿವರಿಸಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು