ಗುರುವಾರ , ಮಾರ್ಚ್ 4, 2021
29 °C

370ನೇ ವಿಧಿ ರದ್ದತಿಗೆ ಮಕ್ಕಳ ಸಂಭ್ರಮಾಚರಣೆ ಎಂಬ ವಿಡಿಯೊ ಬಿಜೆಪಿ ರ‍್ಯಾಲಿಯದ್ದು!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ: 370ನೇ ವಿಧಿ ರದ್ದು ಮಾಡಿದ್ದಕ್ಕೆ ಕಾಶ್ಮೀರದ ಮಕ್ಕಳು ಹಿಂದೂಸ್ತಾನ್ ಹಮಾರಾ ಹೈ ಎಂದು ಹಾಡಿ ಸಂಭ್ರಮಿಸುತ್ತಿದ್ದಾರೆ.  ಜಾತ್ಯಾತೀತರು 370ನೇ ವಿಧಿ ರದ್ದು ಮಾಡಿದ್ದಕ್ಕೆ ಮುನಿಸಿಕೊಂಡಿರುವಾಗ ಸಾಮಾನ್ಯ ಕಾಶ್ಮೀರಿಗಳು ಅಖಂಡ ಭಾರತವಾಗಿದ್ದಕ್ಕೆ ಸಂಭ್ರಮಾಚರಣೆ ಮಾಡುತ್ತಿದ್ದಾರೆ ಎಂಬ ಬರಹದೊಂದಿಗೆ ಟ್ವೀಟಿಗರಾದ ಗೀತಿಕಾ ಸ್ವಾಮಿ ವಿಡಿಯೊವೊಂದನ್ನು ಟ್ವೀಟ್ ಮಾಡಿದ್ದಾರೆ.

 ರೈಲ್ವೆ ಸಚಿವ ಪೀಯೂಷ್ ಗೋಯಲ್ ಅವರ ಕಚೇರಿಯೂ ಈ ಟ್ವಿಟರ್‌ ಖಾತೆಯನ್ನು ಫಾಲೊ ಮಾಡುತ್ತಿದೆ.

ಇದೇ ಬರಹದೊಂದಿಗೆ ಇದೇ ವಿಡಿಯೊ ಫೇಸ್‌ಬುಕ್‌ನಲ್ಲಿಯೂ ಹರಿದಾಡುತ್ತಿದೆ.

ವೈರಲ್ ಆಗಿರುವ ಈ ವಿಡಿಯೊ ಬಗ್ಗೆ ಫ್ಯಾಕ್ಟ್‌ಚೆಕ್ ಮಾಡಿದ ಆಲ್ಟ್ ನ್ಯೂಸ್ ಇದು ಬಿಜೆಪಿ ರ‍್ಯಾಲಿಯ ಹಳೇ ವಿಡಿಯೊ ಎಂದಿದೆ.

ಫ್ಯಾಕ್ಟ್‌ಚೆಕ್
ಗೀತಿಕಾ ಸ್ವಾಮಿ ಶೇರ್ ಮಾಡಿರುವ ವಿಡಿಯೊವನ್ನು ಗಮನಿಸಿದರೆ ಅದರಲ್ಲಿ  ‘Voice of J&K’. ಲೋಗೊ ಕಾಣಬಹುದು. ‘Voice of J&K’ ಎಂಬ ಫೇಸ್‌ಬುಕ್ ಪುಟದಲ್ಲಿ ಇದೇ ರೀತಿಯ ವಿಡಿಯೊ 2019 ಏಪ್ರಿಲ್ 15ರಂದು ಶೇರ್ ಆಗಿದೆ. ಈ ವಿಡಿಯೊ 4 ತಿಂಗಳು ಹಿಂದಿನದ್ದು ಆಗಿರುವುದರಿಂದ ಆಗಸ್ಟ್ 5ರಂದು ವಿಶೇಷಾಧಿಕಾರ ರದ್ದು ಮಾಡಿದ ನಂತರ ಸಂಭ್ರಮಾಚರಣೆಯ ವಿಡಿಯೊ ಇದಲ್ಲ ಎಂಬುದು ಸ್ಪಷ್ಟ.

ಯುಟ್ಯೂಬ್‌ನಲ್ಲಿ ಇದೇ ಕೀವರ್ಡ್ ಕೊಟ್ಟು ಹುಡುಕಿದರೆ ಬಿಜೆಪಿ ಜಮ್ಮು ಮತ್ತು ಕಾಶ್ಮೀರ ಯುಟ್ಯೂಬ್ ಚಾನೆಲ್‌ನಲ್ಲಿ ಏಪ್ರಿಲ್ 15ರಂದು ಈ ವಿಡಿಯೊ ಅಪ್‌ಲೋಡ್ ಆಗಿದೆ.ಈ ವಿಡಿಯೊದ ಶೀರ್ಷಿಕೆ ಕಿಶ್ತ್‌ವಾರ್ ಇಂದೇರ್‌ವಲ್‌ನಲ್ಲಿ ನಡೆದ ಬಿಜೆಪಿ ರ‍್ಯಾಲಿಯಲ್ಲಿ 'ಯೇ ಹಿಂದೂಸ್ತಾನ್ ಹಮಾರಾ ಹೈ' ಹಾಡು ಹಾಡುತ್ತಿರುವ ಮಕ್ಕಳು ಎಂದು ಇದೆ.

ಹಾಗಾಗಿ ಕೇಂದ್ರ ಸರ್ಕಾರ 370ನೇ ವಿಧಿ ರದ್ದು ಮಾಡಿದ್ದಕ್ಕೆ ಕಾಶ್ಮೀರದ ಮಕ್ಕಳು ಸಂಭ್ರಮಾಚರಣೆ ಮಾಡುವ ವಿಡಿಯೊ ಇದಲ್ಲ ಎಂಬುದು ಮತ್ತೊಮ್ಮೆ ಸಾಬೀತಾಗುತ್ತದೆ. ಬೂಮ್ ಲೈವ್ ಕೂಡಾ ಇದೇ ವಿಡಿಯೊವನ್ನು ಫ್ಯಾಕ್ಟ್‌ಚೆಕ್ ಮಾಡಿ, ಇದು ಕಾಶ್ಮೀರ ವಿಶೇಷಾಧಿಕಾರ ರದ್ದು ಮಾಡಿರುವುದಕ್ಕೆ ನಡೆದ ಸಂಭ್ರಮಾಚರಣೆಯ ವಿಡಿಯೊ ಅಲ್ಲ ಎಂದು ಹೇಳಿತ್ತು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು