ಭಾನುವಾರ, ಸೆಪ್ಟೆಂಬರ್ 15, 2019
30 °C

ನಟ ಚಿರಂಜೀವಿ ಜತೆ ಸುಮಲತಾ ಡಾನ್ಸ್‌: ವೈರಲ್ ಆಗಿರುವ ವಿಡಿಯೊ 3 ವರ್ಷ ಹಳೇದು!

Published:
Updated:

ಬೆಂಗಳೂರು:  ತೆಲುಗು ನಟ ಚಿರಂಜೀವಿ ಜೊತೆ ಸಂಸದೆ ಎ.ಸುಮಲತಾ ಡಾನ್ಸ್‌ ಮಾಡಿರುವ ವಿಡಿಯೊ ಗುರುವಾರ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದೆ. ಚಿರಂಜೀವಿ ಅವರ ಜನ್ಮದಿನದ ಪಾರ್ಟಿಯಲ್ಲಿ ಭಾಗವಹಿಸಿದ್ದ ಸುಮಲತಾ ಡಾನ್ಸ್‌ ಮಾಡಿದ್ದಾರೆ ಎಂಬ ಸಂದೇಶದೊಂದಿಗೆ ಹರಿದಾಡಿರುವ ಈ ವಿಡಿಯೊ ಸುಮಲತಾ ಅಂಬರೀಶ್ ಎಂಬ ಹೆಸರಿನ ಫೇಸ್‌ಬುಕ್ ಖಾತೆಯಲ್ಲಿ ಅಪ್‌ಲೋಡ್ ಆಗಿತ್ತು.  

ರಾಜ್ಯದಲ್ಲಿ ಪ್ರವಾಹ ಸ್ಥಿತಿಯಿಂದ ಜನರು ಪರಿತಪಿಸುವಾಗ ಸುಮಲತಾ ಡಾನ್ಸ್‌ ಮಾಡಿದ್ದಾರೆ ಎಂದು ಹಲವಾರು ನೆಟ್ಟಿಗರು ಈ  ವಿಡಿಯೊ ಬಗ್ಗೆ ಆಕ್ಷೇಪ ವ್ಯಕ್ತ ಪಡಿಸಿದ್ದರು.

ಆದಾಗ್ಯೂ,  ವಿಡಿಯೊ ಅಪ್‌ಲೋಡ್ ಆಗಿರುವ ಫೇಸ್‌ಬುಕ್ ಖಾತೆ ಸಂಸದೆ ಸುಮಲತಾ ಅವರ ಅಧಿಕೃತ ಖಾತೆ ಅಲ್ಲ. ಈ ಬಗ್ಗೆ ಸುಮಲತಾ ಅಂಬರೀಶ್ ಅವರೇ ತಮ್ಮ ಫೇಸ್‌ಬುಕ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

ವೈರಲ್ ಆದ ವಿಡಿಯೊ
 ಸುಮಲತಾ  ಹೆಸರಿನ  ಫೇಸ್‌ಬುಕ್ ಖಾತೆಯಲ್ಲಿ ಅಪ್‌ಲೋಡ್ ಆಗಿರುವ ವಿಡಿಯೊ ಶೀರ್ಷಿಕೆ ಮೆಗಾಸ್ಟಾರ್  ಚಿರಂಜೀವಿಗೆ ಹುಟ್ಟುಹಬ್ಬದ ಶುಭಾಶಯಗಳು  (-పుట్టినరోజు శుభాకాంక్షలు మెగాస్టార్ చిరంజీవి) ಎಂದಿದೆ. ವಿಡಿಯೊ  ಕೃಪೆ ತೆಲುಗು ಟಾನಿಕ್ ಯುಟ್ಯೂಬ್ ಚಾನೆಲ್‌ನದ್ದು. ಈ ಯುಟ್ಯೂಬ್ ಲಿಂಕ್ ಕ್ಲಿಕ್ ಮಾಡಿದಾಗ ತೆಲುಗು ಟಾನಿಕ್ ಯುಟ್ಯೂಬ್ ಚಾನೆಲ್‌ನಲ್ಲಿ ವಿಡಿಯೂ ಅಪ್‌ಲೋಡ್ ಆಗಿದ್ದು ಆಗಸ್ಟ್ 21, 2019.  

ಈ ವಿಡಿಯೊಗೆ ಚಿರಂಜೀವಿ ಮಸ್ತ್ ಡಾನ್ಸ್‌  (చిరంజీవి డాన్స్ చూస్తే దిమ్మ తిరిగిపోద్ది ) ಎಂಬ ಶೀರ್ಷಿಕೆ ಇದೆ. ಆಗಸ್ಟ್ 22 ರಂದು ಚಿರಂಜೀವಿ ಹುಟ್ಟುಹಬ್ಬವಾಗಿದ್ದು ಈ  ವೇಳೆ ಹಳೇ ವಿಡಿಯೊ ವೈರಲ್ ಆಗಿದೆ.

ಫ್ಯಾಕ್ಟ್‌ಚೆಕ್

ವೈರಲ್ ವಿಡಿಯೊ ಬಗ್ಗೆ ಪ್ರಜಾವಾಣಿ ಫ್ಯಾಕ್ಟ್‌ಚೆಕ್ ಮಾಡಿದಾಗ ತಿಳಿದು ಬಂದ ಸಂಗತಿ ಏನೆಂದರೆ ಚಿರಂಜೀವಿ  ಜತೆ ಸುಮಲತಾ ಡಾನ್ಸ್‌ ಮಾಡಿರುವ ವಿಡಿಯೊ, ನಟನ ಹುಟ್ಟುಹಬ್ಬ ಆಚರಣೆಯದ್ದು ಅಲ್ಲ. ಈ ವಿಡಿಯೊ 2016ರದ್ದು. ಮಾರ್ಚ್  28, 2016ರಂದು ಚಿರಂಜೀವಿ ಪುತ್ರಿ ಶ್ರೀಜಾ ಅವರ ಮದುವೆ ಸಮಾರಂಭ ನಡೆದಿತ್ತು.  Avinash avi- Epics By Avinash ಎಂಬ ಯುಟ್ಯೂಬ್ ಚಾನೆಲ್‌ನಲ್ಲಿ 2016 ಏಪ್ರಿಲ್ 1ರಂದು ಶ್ರೀಜಾ ಕಲ್ಯಾಣಂ ಚಿರಂಜೀವಿ ಪುತ್ರಿಯ ಮದುವೆ ಟ್ರೇಲರ್ ಎಂಬ ಶೀರ್ಷಿಕೆಯಲ್ಲಿ ವಿಡಿಯೊ ಅಪ್‌ಲೋಡ್ ಆಗಿದೆ.

14.54 ನಿಮಿಷ ಅವಧಿಯ ಈ ವಿಡಿಯೊದಲ್ಲಿ 10.40ನೇ  ನಿಮಿಷದಲ್ಲಿ ಚಿರಂಜೀವಿ ತಮ್ಮಮಗ ರಾಮ್ ಚರಣ್ ತೇಜ ಜತೆ ಡಾನ್ಸ್‌ ಮಾಡುತ್ತಿರುವ ದೃಶ್ಯಗಳಿವೆ.  11.11ನೇ ನಿಮಿಷದಲ್ಲಿ ಸುಮಲತಾ ಅವರು ಚಿರಂಜೀವಿ ಜತೆ ನೃತ್ಯ  ಮಾಡುತ್ತಿರುವುದು ಕಾಣಿಸುತ್ತದೆ.

2017 ಫೆಬ್ರುವರಿ 8ರಂದು sahithi media ಯುಟ್ಯೂಬ್ ಚಾನೆಲ್‌ನಲ್ಲಿ ಅಪ್‌ಲೋಡ್ ಆಗಿರುವ ವಿಡಿಯೊದಲ್ಲಿಯೂ ಚಿರಂಜೀವಿ ಜತೆ ಸುಮಲತಾ ಡಾನ್ಸ್‌ ಮಾಡುವ ದೃಶ್ಯವಿದೆ.

ಅಂದ ಹಾಗೆ ಸುಮಲತಾ ಹೆಸರಿನ ಅನಧಿಕೃತ ಫೇಸ್‌ಬುಕ್ ಪೇಜ್‌ನಲ್ಲಿ ಶೇರ್ ಆಗಿರುವ ವಿಡಿಯೊದಲ್ಲಿ ರಾಮ್ ಚರಣ್ ತೇಜ ಜತೆ ಚಿರಂಜೀವಿ ಹೆಜ್ಜೆ ಹಾಕುತ್ತಿರುವ ದೃಶ್ಯದ ನಂತರದ ವಿಡಿಯೊ ಕ್ಲಿಪ್‌ಗಳಿದ್ದು, ಈ ವಿಡಿಯೊ ಚಿರಂಜೀವಿ ಹುಟ್ಟುಹಬ್ಬದ್ದು ಎಂದು ತಪ್ಪಾದ ಶೀರ್ಷಿಕೆ ನೀಡಲಾಗಿದೆ.

ಫೇಸ್‌ಬುಕ್‌ನಲ್ಲಿ Sreeja wedding ಎಂದು ಹುಡುಕಿದಾಗ ಚಿರಂಜೀವಿ ಡಾನ್ಸ್‌ ಮಾಡುತ್ತಿರುವ ವಿಡಿಯೊ ಸಿಕ್ಕಿದೆ.  

Megastar Chiranjeevi ಎಂಬ ಫೇಸ್‌ಬುಕ್‌ ಪುಟದಲ್ಲಿ ಅಂಬರೀಶ್ ಮತ್ತು ಸುಮಲತಾ ಚಿರಂಜೀವಿ ಜತೆ ಕುಳಿತಿರುವ ಫೋಟೊ ಇದೆ.

ಇಲ್ಲಿ ಸುಮಲತಾ ಸಲ್ವಾರ್ ಸೂಟ್ ಧರಿಸಿದ್ದಾರೆ. ಚಿರಂಜೀವಿ ಜತೆ  ಹೆಜ್ಜೆ ಹಾಕುತ್ತಿರುವ ವಿಡಿಯೊದಲ್ಲಿ ಸುಮಲತಾ ಧರಿಸಿರುವ ಡ್ರೆಸ್ ಇದೇ ಆಗಿದೆ.  ಹಾಗಾಗಿ ಸುಮಲತಾ ಚಿರಂಜೀವಿ ಜತೆ ಹೆಜ್ಜೆ ಹಾಕಿದ್ದು ಶ್ರೀಜಾಳ ಆರತಕ್ಷತೆ ಸಮಾರಂಭದಲ್ಲಿ ಎಂಬುದು ಸ್ಪಷ್ಟ.

 ಡಾನ್ಸ್‌ ವಿಡಿಯೊ ವೈರಲ್ ಆಗುತ್ತಿದ್ದಂತೆ ಸುಮಲತಾ ಅವರು ತಮ್ಮ ಅಧಿಕೃತ ಫೇಸ್‌ಬುಕ್ ಪುಟದಲ್ಲಿ 3 ವರ್ಷಗಳ ಹಿಂದೆ ಎಂಬ ಶೀರ್ಷಿಕೆಯೊಂದಿಗೆ  ಪತಿ ಅಂಬರೀಶ್ ಮತ್ತು ಮಗ ಅಭಿಷೇಕ್ ಜತೆಗಿರುವ ಫೋಟೊ ಶೇರ್ ಮಾಡಿದ್ದಾರೆ.

 
3 ವರ್ಷಗಳ ಹಿಂದೆ ಅಂದರೆ 2016ರಲ್ಲಿ ಕ್ಲಿಕ್ ಮಾಡಿದ ಫೋಟೊ ಇದಾಗಿದೆ. 

2016 ಮಾರ್ಚ್  29ರಂದು ಟ್ವಿಟರ್‌ನಲ್ಲಿ #SreejaWedding ಎಂಬ ಹ್ಯಾಶ್‌ಟ್ಯಾಗ್ ಟ್ರೆಂಡ್ ಆಗಿತ್ತು. ಈ ಹ್ಯಾಶ್‌ಟ್ಯಾಗ್‌ನಡಿಯಲ್ಲಿರುವ ಟ್ವೀಟ್‌ಗಳನ್ನು ಹುಡುಕಿದಾಗ ಅಂಬರೀಶ್  ಮತ್ತು ಸುಮಲತಾ ಅವರು ಚಿರಂಜೀವಿ ಕುಟುಂಬದ ಜತೆಗಿರುವ ಫೋಟೊ ಸಿಕ್ಕಿದೆ.  ಅಲ್ಲಿ ಸುಮಲತಾ ಅವರು ಧರಿಸಿರುವುದು ಅದೇ ಕ್ರೀಮ್ ಬಣ್ಣದ ಡ್ರೆಸ್.  ಹಾಗಾಗಿ ಇದು ಶ್ರೀಜಾ ಆರತಕ್ಷತೆ ವೇಳೆ ತೆಗೆದ ಫೋಟೊ ಎಂಬುದರಲ್ಲಿ ಸಂದೇಹವಿಲ್ಲ.

ಚಿರಂಜೀವಿ ಮಗಳ ಮದುವೆಯಲ್ಲಿಯೂ ಸುಮಲತಾ ಭಾಗಿಯಾಗಿದ್ದರು.

 
ಮದುವೆಯ ವಿಡಿಯೊದಲ್ಲಿಯೂ ಸುಮಲತಾ ಅವರನ್ನು ಕಾಣಬಹುದು.  ಸುಮಲತಾ ಅವರು ಶ್ರೀಜಾ ಮದುವೆಯಲ್ಲಿ ಚಿನ್ನದ ಬಣ್ಣದ ಕಾಂಜೀವರಂ ಸೀರೆ ಉಟ್ಟಿದ್ದರು.   
ಒಟ್ಟಿನಲ್ಲಿ ವೈರಲ್ ಆಗಿರುವ ಡಾನ್ಸ್‌ ವಿಡಿಯೊ ಚಿರಂಜೀವಿ ಹುಟ್ಟುಹಬ್ಬದ್ದುಅಲ್ಲ. ಈ ವಿಡಿಯೊ  2016ರಲ್ಲಿ ನಡೆದ ಶ್ರೀಜಾ ಮದುವೆ ಸಮಾರಂಭದ್ದು. ಸುಮಲತಾ ಅವರು ಚಿರಂಜೀವಿ ಜತೆ ಹೆಜ್ಜೆ ಹಾಕಿದ್ದು ಇದೇ ಸಮಾರಂಭದಲ್ಲಿ ಎಂಬುದು ಇಲ್ಲಿ  ಸ್ಪಷ್ಟವಾಗುತ್ತದೆ.

 ಇದನ್ನೂ ಓದಿ:  ನಟ ಚಿರಂಜೀವಿ ಜೊತೆ ಸಂಸದೆ ಸುಮಲತಾ ಡಾನ್ಸ್‌: ವಿಡಿಯೊ ವೈರಲ್

Post Comments (+)