ಗುರುವಾರ , ಸೆಪ್ಟೆಂಬರ್ 23, 2021
28 °C

ಮುಂಬೈ ಪ್ರತಿಭಟನೆಯಲ್ಲಿ 'ಹಿಂದೂಗಳಿಂದ ಆಜಾದಿ' ಎಂಬ ಘೋಷಣೆ ಕೂಗಲಾಗಿತ್ತೇ?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

 ಮುಂಬೈ: ಜೆಎನ್‌ಯುನಲ್ಲಿ ಮುಸುಕುಧಾರಿಗಳು ದಾಂದಲೆ ನಡೆಸಿದ ಘಟನೆ ಖಂಡಿಸಿ ಭಾನುವಾರ ರಾತ್ರಿ ಮುಂಬೈನ ಗೇಟ್ ವೇ ಆಫ್ ಇಂಡಿಯಾದಲ್ಲಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದ್ದರು. ಜೆಎನ್‌ಯುನ ಹಳೆ ವಿದ್ಯಾರ್ಥಿ ಉಮರ್ ಖಾಲಿದ್ ನೇತೃತ್ವದಲ್ಲಿ ಮುಂಬೈನಲ್ಲಿ ಈ ಪ್ರತಿಭಟನೆ ನಡೆದಿತ್ತು. 

ಪ್ರತಿಭಟನೆಯಲ್ಲಿ ಘೋಷಣೆ ಕೂಗುವಾಗ ಉಮರ್ ಖಾಲಿದ್ ಹಿಂದೂವೋಂಸೇ ಆಜಾದಿ  (ಹಿಂದೂಗಳಿಂದ ಆಜಾದಿ) ಎಂದು ಕೂಗಿದ್ದಾರೆ ಎಂದು ಬಿಜೆಪಿ ದೆಹಲಿ ವಕ್ತಾರ ತಾಜಿಂದರ್ ಪಾಲ್ ಸಿಂಗ್ ಬಗ್ಗಾ ವಿಡಿಯೊ ತುಣುಕೊಂದನ್ನು ಟ್ವೀಟಿಸಿದ್ದಾರೆ.

ಜನವರಿ 6ರಂದು ಬೆಳಗ್ಗೆ 09.04ಕ್ಕೆ ಬಗ್ಗಾ ವಿಡಿಯೊ ಟ್ವೀಟಿಸಿದ್ದು ಈವರೆಗೆ 16 ಸಾವಿರಕ್ಕಿಂತಲೂ ಹೆಚ್ಚು ಮಂದಿ ಟ್ವೀಟ್‌ನ್ನು ಲೈಕ್ ಮಾಡಿದ್ದಾರೆ. ಸುಮಾರು 10 ಸಾವಿರಕ್ಕಿಂತ ಹೆಚ್ಚು ಮಂದಿ ರೀಟ್ವೀಟ್ ಮಾಡಿದ್ದಾರೆ.

ಈ ಟ್ವೀಟ್‌ಗೆ ಪ್ರತಿಕ್ರಿಯಿಸಿದ ಬಾಲಿವುಡ್ ನಟಿ ಕೊಂಕಣ್ ಸೇನ್ ಶರ್ಮಾ, ಸುಳ್ಳು ಹಬ್ಬಿಸಬೇಡಿ, ಇದು ತಿರುಚಿದ ವಿಡಿಯೊ. ನಾವು ಅಲ್ಲಿ ಇದ್ದೆವು. ಅದು ಶಾಂತಿಯುತವಾಗಿ ನಡೆದ ಪ್ರತಿಭಟನೆಯಾಗಿತ್ತು, ದ್ವೇಷದಿಂದ ಕೂಡಿದ್ದಾಗಿರಲಿಲ್ಲ ಎಂದಿದ್ದಾರೆ.

ಬಗ್ಗಾ ಟ್ವೀಟ್ ಮಾಡಿದ ಅದೇ ವಿಡಿಯೊ ತುಣುಕನ್ನು ಕೆಲವರು ಟ್ವಿಟರ್ ಮತ್ತು ಫೇಸ್‌ಬುಕ್‌ನಲ್ಲಿ ಶೇರ್ ಮಾಡಿದ್ದಾರೆ.

ಆದರೆ ಬಗ್ಗಾ ಆರೋಪದಂತೆ ಮುಂಬೈ ಪ್ರತಿಭಟನೆ ವೇಳೆ ಖಾಲಿದ್, ಹಿಂದೂವೋಂಸೇ ಆಜಾದಿ ಎಂಬ ಘೋಷಣೆ ಕೂಗಿಲ್ಲ ಎಂದು ಆಲ್ಟ್ ನ್ಯೂಸ್ ಫ್ಯಾಕ್ಟ್‌ಚೆಕ್ ಮಾಡಿದೆ.

ಫ್ಯಾಕ್ಟ್‌ಚೆಕ್
ಮುಂಬೈನಲ್ಲಿ ನಡೆದ ಪ್ರತಿಭಟನೆ ಫೇಸ್‌ಬುಕ್‌ನಲ್ಲಿ ಲೈವ್ ಆಗಿತ್ತು. ಈ ಲೈವ್ ವಿಡಿಯೊದ ತುಣುಕನ್ನು ಬಗ್ಗಾ ಅವರು ಟ್ವೀಟಿಸಿದ್ದಾರೆ. ಲೈವ್ ವಿಡಿಯೊದಲ್ಲಿ 17.53ನೇ ನಿಮಿಷದ ನಂತರವಿರುವ  ಘೋಷಣೆಗಳನ್ನು ಬಗ್ಗಾ ಟ್ವೀಟಿಸಿದ್ದಾರೆ.

Umar Khalid's slogans in Mumbai protest from Alt News on Vimeo.

ಖಾಲಿದ್ ಕೂಗಿದ ಘೋಷಣೆ ಏನು? 
ವಿಡಿಯೊವನ್ನು ಗಮನವಿಟ್ಟು ಕೇಳಿದರೆ ಖಾಲಿದ್ ಹಿಂದಿಯಲ್ಲಿ ಕೂಗಿದ ಘೋಷಣೆ ಹೀಗಿದೆ.
 ತೋ ಎನ್‌ಪಿಆರ್‌ ಸೇ ಆಜಾದಿ, ಔರ್ ಸಿಎಎ ಸೇ ಆಜಾದಿ, ಔರ್ ಸಿಎಎ ಸೇ ಆಜಾದಿ. ತೋ ಜಾತಿವಾದ್ ಸೇ ಆಜಾದಿ,  ಔರ್ ಮನುವಾದ್ ಸೇ ಆಜಾದಿ, ಔರ್  ಸಂಘವಾದ್ ಸೇ ಆಜಾದಿ, ಔರ್  ಆರ್‌ಎಸ್‌ಎಸ್ ಸೇ ಆಜಾದಿ. ಔರ್ ಆರ್‌ಎಸ್‌ಎಸ್ ಸೇ ಆಜಾದಿ.  ತೋ ಭಾಗವತ್ ಸೇ ಭೀ ಆಜಾದಿ, ತೋ ಉಸ್ ಮೋದಿ ಸೇ ಆಜಾದಿ.

ಮುಂಬೈ ಪ್ರತಿಭಟನೆಯ ದೃಶ್ಯ ಯುಟ್ಯೂಬ್‌ನಲ್ಲಿಯೂ ಇದೆ. ಯುಟ್ಯೂಬ್ ವಿಡಿಯೊದ 52:42 ನಂತರ ಖಾಲಿದ್ ಘೋಷಣೆ ಕೂಗುವುದು ಕೇಳಿಸುತ್ತದೆ. ಇಲ್ಲಿ ಖಾಲಿದ್  ಹಿಂದೂವೋಂಸೇ ಆಜಾದಿ ಎಂಬ ಘೋಷಣೆ ಕೂಗಿದ್ದಾರೆ ಎಂಬುದಕ್ಕೆ ಸಾಕ್ಷ್ಯಗಳೇನೂ ಇಲ್ಲ.

ಏತನ್ಮಧ್ಯೆ, ತಾಜಿಂದರ್ ಪಾಲ್ ಸಿಂಗ್ ಬಗ್ಗಾ ಅವರು ತನ್ನ ಮೇಲೆ ವ್ಯಥಾರೋಪ ಮಾಡುತ್ತಿದ್ದಾರೆ ಎಂದು ಖಾಲಿದ್ ಟ್ವೀಟಿಸಿದ್ದಾರೆ.
 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು