ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊರೊನಾ ವೈರಸ್‌ಗೆ ಟೀ ಮದ್ದೇ? 

Last Updated 29 ಮಾರ್ಚ್ 2020, 4:48 IST
ಅಕ್ಷರ ಗಾತ್ರ
ADVERTISEMENT
""

ದೇಶವನ್ನು ಮೆಲ್ಲನೆ ಆವರಿಸುತ್ತಿರುವ ಕೊರೊನಾ ವೈರಸ್‌ ಸೋಂಕನ್ನು ಆರಂಭದಲ್ಲೇ ತಡೆಯಬೇಕು ಎಂಬ ಉದ್ದೇಶದೊಂದಿಗೆ ಇಡೀ ದೇಶವೇ 21 ದಿನಗಳ ಸ್ತಬ್ಧತೆಯ ಹಾದಿ ಹಿಡಿದಿದೆ. ಹೀಗಿರುವಾಗಲೇ ಕೊರೊನಾ ವೈರಸ್‌ಗೆ ಸಾಮಾಜಿಕ ಜಾಲತಾಣಗಳಲ್ಲಿ ಹಲವು ಔಷಧಿಗಳು ತಯಾರಾಗಿವೆ. ಅವುಗಳಲ್ಲೊಂದು 'ಒಂದು ಕಪ್‌ ಟೀ’

ಟೀ ಕುಡಿಯುವುದರಿಂದ ಕೊರೊನಾ ವೈರಸ್‌ ಸೋಂಕು ವಾಸಿಯಾಗುತ್ತದೆ ಎಂಬ ಸಂದೇಶವೊಂದು ಸಾಮಾಜಿಕ ತಾಣಗಳಲ್ಲಿ ಹರಿದಾಡುತ್ತಿದೆ. ಅಷ್ಟೇ ಅಲ್ಲ, ಅದು ಜನರನ್ನು ಮನವೊಲಿಸುವ ಮಟ್ಟಕ್ಕೆ ತಲುಪಿದೆ.

ಚೀನಾದಲ್ಲಿ ಕೊರೊನಾ ವೈರಸ್‌ ಎಂಬ ಮಾರಕ ಕಾಯಿಲೆಯನ್ನು ಮೊದಲ ಬಾರಿಗೆ ಪತ್ತೆ ಹಚ್ಚಿದ್ದ ಡಾ. ಲೀ ವೆನ್‌ಲಿಯಾಂಗ್‌ ಅವರೇ ಕೊರೊನಾ ವೈರಸ್‌ಗೆ ಟೀ ಮದ್ದು ಎಂದು ಹೇಳಿದ್ದಾಗಿ ವೈರಲ್‌ ಸಂದೇಶದಲ್ಲಿ ವಿವರಿಸಲಾಗಿದೆ.

ಕೊರೊನಾ ವೈರಸ್‌ ಮೊದಲ ಬಾರಿಗೆ ಪತ್ತೆಯಾಗುತ್ತಲೇ ವೈದ್ಯ ಲೀ ತಾವೇ ಅದರ ಬಗ್ಗೆ ಸಂಶೋಧನೆ ಕೈಗೊಂಡಿದ್ದರು. ಮದ್ದನ್ನೂ ಕಂಡು ಹಿಡಿದಿದ್ದರು. ಮೀಥೈಲ್ಕ್ಸಾಂಥೈನ್, ಥಿಯೋಬ್ರೊಮಿನ್ ಮತ್ತು ಥಿಯೋಫಿಲಿನ್ ಎಂಬ ಔಷಧ ಸಂಯೋಜನೆಗಳು ಕಾಯಿಲೆಗೆ ಮದ್ದು ಎಂದು ಅವರು ಕಂಡುಕೊಂಡಿದ್ದರು. ಆಶ್ಚರ್ಯವೆಂದರೆ ಈ ಮೂರು ಸಂಯುಕ್ತಗಳು ಭಾರತೀಯರು ಹೆಚ್ಚಾಗಿ ಸೇವಿಸುವ ಟೀನಲ್ಲಿ ಇವೆ ಎಂದು ಸಂದೇಶದಲ್ಲಿ ವಿವರಿಸಲಾಗಿದೆ.

ಇದನ್ನು ಕಂಡುಕೊಂಡಿರುವ ಚೀನಿಯರು ವುಹಾನ್‌ನಲ್ಲಿ ಕೊರೊನಾ ವೈರಸ್‌ ರೋಗಿಗಳಿಗೆ ದಿನಕ್ಕೆ ಮೂರು ಬಾರಿ ಟೀ ವಿತರಿಸುತ್ತಿದ್ದಾರೆ. ರೋಗಿಗಳು ಗುಣಮುಖರಾಗುತ್ತಿದ್ದಾರೆ. ವುಹಾನ್‌ನಲ್ಲಿ ವೈರಸ್‌ ನಿಯಂತ್ರಣಕ್ಕೆ ಬಂದಿದೆ ಎಂದು ಸಿಎನ್‌ಎನ್‌ ವರದಿ ಮಾಡಿದೆ ಎಂದು ಸಂದೇಶದಲ್ಲಿ ಉಲ್ಲೇಖಿಸಲಾಗಿತ್ತು.

ಹಾಗಿದ್ದರೆ ಟೀ ಮದ್ದೇ?

ಮೊದಲಿಗೆ ಸಿಎನ್‌ಎನ್‌ ವೆಬ್‌ಸೈಟ್‌ ಇಂಥ ಸುದ್ದಿಯನ್ನು ಪ್ರಸಾರ ಮಾಡಿತ್ತೆ ಎಂಬುದಕ್ಕೆ ಇಲ್ಲಿ ಉತ್ತರಗಳಿಲ್ಲ. ಸಿಎನ್‌ಎನ್‌ ಅಂಥ ಯಾವುದೇ ಸುದ್ದಿಗಳನ್ನು ಹಂಚಿಕೊಂಡಿಲ್ಲ. ಇನ್ನು ಚೀನಾದ ವೈದ್ಯ ಲೀ ಬಗ್ಗೆ ಸಿಎನ್‌ಎನ್‌ ಯಾವುದೇ ವರದಿಗಳನ್ನು ಪ್ರಕಟಿಸಿಯೂ ಇರಲಿಲ್ಲ.

ಒಂದು ಕಪ್‌ ಬಿಸಿ ಬಿಸಿಯಾದ ಟೀ ಕುಡಿದರೆ ನೆಗಡಿ ಒಂದು ಕ್ಷಣ ಮಾಯವಾಗಬಹುದು. ಆದರೆ, ಅದು ಮಾರಕ ವೈರಸ್‌ಗಳಿಗೆ ಮದ್ದಲ್ಲವೇ ಅಲ್ಲ ಎಂದು ಸಂಶೋಧಕರು ವಿವರಿಸಿದ್ದಾರೆ.

ಇನ್ನೊಂದು ಗಮನಿಸಬೇಕಾದ ವಿಷಯವೇನೆಂದರೆ, ವೈದ್ಯ ಲೀ ಕಣ್ಣಿನ ಚಿಕಿತ್ಸಕ. ಅವರು ಕೊರೊನಾ ವೈರಸ್‌ ಮೇಲೆ ಅಧ್ಯಯನ ಮಾಡಿದ್ದರ ಬಗ್ಗೆ ಯಾವುದೇ ಉಲ್ಲೇಖಗಳಿಲ್ಲ.

ಆದರೆ ಟೀನಲ್ಲಿ ಕೊರೊನಾ ವೈರಸ್‌ಗೆ ಮದ್ದಾಗಬಲ್ಲ ರಾಸಾಯನಿಕಗಳಿವೆ ಎಂಬುದಾಗಿ ಚೀನಾದ ‘ಜಿಜಿಯಾಂಗ್‌ ಪ್ರೊವಿನಿಕಲ್‌ ಸೆಂಟರ್‌ ಫಾರ್‌ ಡಿಸೀಸ್‌’ ತನ್ನ ವೆಬ್‌ಸೈಟ್‌ನಲ್ಲಿ ಬರೆದುಕೊಂಡಿದ್ದಾಗಿಯೂ, ನಂತರ ಫೆ. 26ರಂದು ಅದನ್ನು ಡಿಲಿಟ್‌ ಮಾಡಿರುವುದಾಗಿಯೂ ಚೀನಾ ಡೈಲಿ ವರದಿ ಮಾಡಿದೆ.

ಹೀಗಾಗಿ, ಟೀ ಕೊರೊನಾ ವೈರಸ್‌ಗೆ ಮದ್ದಾಗಬಲ್ಲದು ಎಂಬುದಕ್ಕೆ ಯಾವುದೇ ಪುರಾವೆಗಳು ಇಲ್ಲವಾಗಿವೆ. ಅಷ್ಟರ ಮಟ್ಟಿಗೆ ಅದು ಸುಳ್ಳು ಸುದ್ದಿ ಎಂಬುದು ಸಾಬೀತಾಗಿದೆ.

ಸದ್ಯ ಕೊರೊನಾ ವೈರಸ್‌ಗೆ ಮದ್ದು ಕಂಡುಕೊಳ್ಳಲು ತಜ್ಞರು, ವಿಜ್ಙಾನಿಗಳು, ಸಂಶೋಧಕರು ಪ್ರಯೋಗ ನಿರತರಾಗಿದ್ದಾರೆ. ಈ ಮಧ್ಯೆ ಕೊರೊನಾ ವೈರಸ್‌ಗೆ ತಾತ್ಕಾಲಿಕವಾಗಿ ಹಲವು ಔಷಧೋಪಚಾರಗಳನ್ನು ನೀಡಲಾಗುತ್ತಿದೆ. ಅದರಿಂದ ಹಲವರು ಗುಣಮುಖರೂ ಆಗಿದ್ದಾರೆ. ಅದು ಮನುಷ್ಯನ ರೋಗ ನಿರೋಧಕ ಶಕ್ತಿಯ ಮೇಲೂ ನಿರ್ಧರಿತವಾಗಿದೆ. ಆದರೆ, ಇಂಥದ್ದೇ ಮದ್ದು ಎಂದು ಇವರೆಗೆ ಸಿಕ್ಕಿಲ್ಲ.

ವಿಶ್ವ ಆರೋಗ್ಯ ಸಂಸ್ಥೆಯೂ ಕೊರೊನಾ ವೈರಸ್‌ಗೆ ಮದ್ದು ಸಿಕ್ಕಿದೆ ಎಂದೂ ಎಲ್ಲಿಯೂ ಯಾವಾಗಲೂ ಹೇಳಿಲ್ಲ ಎಂಬುದು ಇಲ್ಲಿ ಗಮನಿಸಬೇಕಾದ ವಿಷಯ.

ಇದೆಲ್ಲದರ ಹಿನ್ನೆಲೆಯಲ್ಲಿ ಕೊರೊನಾ ವೈರಸ್‌ಗೆ ಟೀ ಮದ್ದು ಎಂಬುದು ಸಾಮಾಜಿಕ ಮಾಧ್ಯಮಗಳಲ್ಲಿ ಸೃಷ್ಟಿಯಾದ ಸುಳ್ಳು ಸುದ್ದಿ ಎನ್ನಲಡ್ಡಿ ಇಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT