ಭಾನುವಾರ, 25 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೆಸಿಪಿ: ಸಿಹಿ ತಿನಿಸುಗಳ ರಸದೌತಣ

Published 23 ಡಿಸೆಂಬರ್ 2023, 0:30 IST
Last Updated 23 ಡಿಸೆಂಬರ್ 2023, 0:30 IST
ಅಕ್ಷರ ಗಾತ್ರ

ಕ್ರಿಸ್ಮಸ್‌ ಹೊಸಿಲಲ್ಲಿರುವಾಗ ಗುಜರಾತಿನ ಸಿಹಿಸವಿತಿನಿಸು ತಯಾರಿಸುವ ಬಗೆಯನ್ನು ಬೆಂಗಳೂರಿನಲ್ಲಿರುವ ಇಂದಿರಾನಗರದ ಕೇಸರಿಯಾ ಹೊಟೆಲ್‌ನ ಶೆಫ್‌ ಮಾಹಿತಿ ಹಂಚಿಕೊಂಡಿದ್ದಾರೆ. ಬಾಯಿ ಸಿಹಿಯಾಗಿಸುವುದಷ್ಟೆ ಅಲ್ಲ, ಸವಿನೆನಪುಗಳ ಬುತ್ತಿಯನ್ನೂ ಕಟ್ಟಿಕೊಡುತ್ತವೆ, ಈ ಸಿಹಿತಿನಿಸುಗಳು ಎನ್ನುತ್ತಾರೆ ಶೆಫ್‌ ವಿಶಾಖ ಗೋಯೆಂಕಾ. ಅಡುಗೆ ಮನೆಯಲ್ಲಿರುವ ಸಾಮಗ್ರಿಗಳನ್ನೇ ಬಳಸಿಕೊಂಡು ರುಚಿಕರ ಸಿಹಿತಿನಿಸುಗಳ ತಯಾರಿ ಕುರಿತು ಸುಷ್ಮಾ ಸವಸುದ್ದಿ ಪದಗಳಲ್ಲಿ ಹಿಡಿದಿಟ್ಟಿದ್ದಾರೆ.

ಘೇವರ್

ಬೇಕಾಗುವ ಸಾಮಗ್ರಿಗಳು (6 ಘೇವರ್ ಗಳನ್ನು ಮಾಡಲು):

300 ಗ್ರಾಂ ಮೈದಾ, 100 ಗ್ರಾಂ ತುಪ್ಪ, 100 ಗ್ರಾಂ ಹಾಲು, 3 ರಿಂದ 4 ಐಸ್ ಕ್ಯೂಬ್, ಹುರಿಯಲು ತುಪ್ಪ

ಪಾನಕ ತಯಾರಿಸಲು ಹಾಗೂ ಅಲಂಕರಿಸಲು ಬೇಕಾಗುವ ಸಾಮಗ್ರಿಗಳು:

300 ಗ್ರಾಂ ಸಕ್ಕರೆ, 1 ಕಪ್ ನೀರು, ಹಾಲಿನ ಕೆನೆ, ಏಲಕ್ಕಿ ಪುಡಿ, ಕೇಸರಿ

ಒಂದು ಪಾತ್ರೆಯಲ್ಲಿ ಅರ್ಧ ಕಪ್ ತುಪ್ಪ ಹಾಕಿ ಅದಕ್ಕೆ 3ರಿಂದ 4 ಐಸ್ ಕ್ಯೂಬ್ ಹಾಕಿ 3ರಿಂದ 5 ನಿಮಿಷ ಚೆನ್ನಾಗಿ ಕಲಕಬೇಕು. ನಂತರ ಅದಕ್ಕೆ ಮೈದಾ ಹಿಟ್ಟನ್ನು ಮಿಶ್ರಣ ಮಾಡಬೇಕು. ಕ್ರಮೇಣ ಹಿಟ್ಟಿಗೆ ಹಾಲು, ನೀರು ಹಾಕುತ್ತಾ ಕಲಿಸಬೇಕು. ಯಾವುದೇ ಗಂಟು ಉಂಡೆಗಳು ಉಳಿಯದಂತೆ, ಪೂರ್ಣ ದ್ರಾವಣ ರೂಪಕ್ಕೆ ಬರುವಂತೆ ಮಾಡಿಕೊಳ್ಳಬೇಕು. ಮಿಕ್ಸರ್ ಸಹಾಯದಿಂದಲೂ ಮಿಶ್ರಣ ಮಾಡಬಹುದು.

ಬಳಿಕ ಒಂದು ವೃತ್ತಾಕಾರದ ಪಾತ್ರೆಯಲ್ಲಿ ತುಪ್ಪವನ್ನು ಬಿಸಿ ಮಾಡಿಕೊಂಡು ಅದರಲ್ಲಿ ಈಗಾಗಲೇ ಮಾಡಿಟ್ಟುಕೊಂಡ ಹಿಟ್ಟಿನ ಮಿಶ್ರಣವನ್ನು ಪಾತ್ರೆಯ ಮಧ್ಯ ಭಾಗದಲ್ಲಿ ಹಾಕುತ್ತ ಹೋಗಬೇಕು. ಹಿಟ್ಟು ಹಾಕಿದಂತೆ ಅದು ಕುದಿಯುತ್ತಾ ಪಾತ್ರೆಯ ಆಕಾರಕ್ಕೆ ಹರಡುತ್ತದೆ. ಮಧ್ಯ ಭಾಗ ಕುಡದಂತೆ ಚಮಚದ ಸಹಾಯದಿಂದ ಮಧ್ಯ ಭಾಗವನ್ನು ಬಿಡಿಸುತ್ತಿದ್ದರೆ, ಉಂಗುರ ಆಕೃತಿಯ ಘೇಹರ್ ಲಭ್ಯವಾಗುತ್ತದೆ. ಕಂದು ಬಣ್ಣಕ್ಕೆ ತಿರುಗಿದ ನಂತರ ತೆಗೆಯಬೇಕು.

ಸಕ್ಕರೆ ಪಾಕ ತಯಾರಿಸುವ ವಿಧಾನ:

ಒಂದು ಬಾಣಲೆಯಲ್ಲಿ ಸಕ್ಕರೆ ಮತ್ತು ನೀರನ್ನು ಸೇರಿಸಿ ಚೆನ್ನಾಗಿ ಕುದಿಸಬೇಕು. ರುಚಿ ಹೆಚ್ಚಿಸಲು ಅದಕ್ಕೆ ಏಲಕ್ಕಿ ಪುಡಿ, ಕೇಸರಿ ಎಳೆಗಳನ್ನು ಸೇರಿಸಬೇಕು.

ಕೆನೆ ತಯಾರಿ:

ಒಂದು ಬಾಣಲೆಯಲ್ಲಿ ಒಂದು ಲೀಟರ್ ಹಾಲನ್ನು, ಕಡಿಮೆ ಉರಿಯಲ್ಲಿ ಕುದಿಸಿ ಕೆನೆಯನ್ನು ತೆಗೆಯಬೇಕು. ಕೆನೆಯಾಗುವ ಹೊತ್ತಿಗೆ ಒಂದೆರಡು ಚಮಚ ಸಕ್ಕರೆ ಹಾಕಿ ಕುದಿಸಬೇಕು. ಹಾಲು ಕ್ರಮೇಣ ಕೆನೆಯಾಗಿ ಪರಿವರ್ತನೆ ಹೊಂದಿದಂತೆ ಅದನ್ನು ಪ್ರತ್ಯೇಕಗೊಳಿಸಿ, ಆರಲು ಬಿಡಬೇಕು.

ಈಗಾಗಲೇ ತಯಾರಾದ ಘೇವರ್‌ನ ಮೇಲ್ಭಾಗಕ್ಕೆ ಪಾನಕ ಸವರಬೇಕು. ಅದರ ಮೇಲೆ ಕೆನೆ ಹಾಕಿ, ಅದರ ಮೇಲೊಂದಿಷ್ಟು ಕತ್ತರಿಸಿದ ಬಾದಾಮಿ, ಕೇಸರಿಯನ್ನು ಸೇರಿಸಿದರೆ ಕಣ್ಮನದ ಜೊತೆಗೆ ನಾಲಿಗೆಯನ್ನು ಸೆಳೆಯುವ ಅಲಂಕೃತಗೊಂಡ ಘೇವರ್ ರೆಡಿ.

ಬಾಟಿ

ಬೇಕಾಗುವ ಪದಾರ್ಥಗಳು:

2 ಕಪ್ ಗೋಧಿ ಹಿಟ್ಟು, ಕಾಲು ಕಪ್ ರವೆ, ಅರ್ಧ ಕಪ್ ತುಪ್ಪ, ಅರ್ಧ ಕಪ್ ಹಾಲು, ಸ್ವಲ್ಪ ಅಜ್ವಾನ, ರುಚಿಗೆ ತಕ್ಕಷ್ಟು ಉಪ್ಪು, ನೀರು

ತಯಾರಿಸುವ ವಿಧಾನ:

ಎಲ್ಲ ಸಾಮಗ್ರಿಗಳನ್ನು ಒಂದು ಪಾತ್ರೆಯಲ್ಲಿ ಹಾಕಿ, ಬೇಕಾದಷ್ಟು ನೀರು ಸೇರಿಸುತ್ತ ಚೆನ್ನಾಗಿ ನಾದಬೇಕು. ಹಿಟ್ಟು ಪೂರ್ಣ ಗಟ್ಟಿಯಾಗಿಯೂ, ಮೆದುವಾಗಿಯು ಆಗದಂತೆ ನಾದಬೇಕು. ನಾದಿದ ಸ್ವಲ್ಪ ಹೊತ್ತು ಬಿಟ್ಟು, ವೃತ್ತಾಕಾರದ ಉಂಡೆಗಳನ್ನು ಮಾಡಿಕೊಳ್ಳಬೇಕು. ನಂತರ ಅವುಗಳನ್ನು ಕಡಿಮೆ ಉರಿಯಲ್ಲಿ ರೋಸ್ಟ್ ಮಾಡಬೇಕು. ರೋಸ್ಟ್ ಮಾಡಲು ಪಡ್ಡು ಮಾಡುವ ತವೆಯನ್ನು ಬಳಸಬಹುದು. ತವೆಗೆ ತುಪ್ಪ ಸವರಿ ಅದರಲ್ಲಿ ಉಂಡೆಗಳನ್ನು ಹಾಕಿ ಮುಚ್ಚಿಡಬೇಕು. ಆಗಾಗ ತುಪ್ಪ ಸವರುತ್ತ, ತಿರುವಿ ಹಾಕುತ್ತಿರಬೇಕು. ಪೂರ್ಣ ಕಂದು ಬಣ್ಣಕ್ಕೆ ತಿರುಗಿದ ನಂತರ ತಯಾರಾದ ಬಿಸಿ ಬಿಸಿ ಬಾಟಿಗಳನ್ನು ತುಪ್ಪದಲ್ಲಿ ಎದ್ದಿ ತೆಗೆದಿಟ್ಟರೆ, ರುಚಿ ರುಚಿ ಬಾಟಿ ರೆಡಿ.

ಬಾಟಿ
ಬಾಟಿ
ಜಿಲೇಬಿ ರಸಮಲಾಯಿ ಸ್ಯಾಂಡ್‌ವಿಚ್
ಜಿಲೇಬಿ

ಬೇಕಾಗುವ ಪದಾರ್ಥಗಳು:

1 ಕಪ್ ಮೈದಾ, ಸ್ವಲ್ಪ ಏಲಕ್ಕಿ ಪುಡಿ, 3ರಿಂದ 4 ಚಮಚ ಮೊಸರು, ಕೇಸರಿ, ತುಪ್ಪ, ಎಣ್ಣೆ

ತಯಾರಿಸುವ ವಿಧಾನ:

ಒಂದು ಪಾತ್ರೆಯಲ್ಲಿ ಎಲ್ಲ ಪದಾರ್ಥಗಳನ್ನು ಸೇರಿಸಿ ಮಿಶ್ರಣ ಮಾಡಿಕೊಳ್ಳಬೇಕು. ನೀರು ಸೇರಿಸುತ್ತ, ಹಿಟ್ಟು ಗಟ್ಟಿಯಾಗದಂತೆ, ಪೂರ್ಣ ದ್ರಾವಣ ರೂಪವೂ ಆಗದಂತೆ ಮಿಶ್ರಣ ಮಾಡಿಕೊಂಡು, 10ರಿಂದ 12 ಗಂಟೆ ಹಾಗೆ ಇಡಬೇಕು. 10ರಿಂದ 12 ಗಂಟೆ ನಂತರ ಹಿಟ್ಟನ್ನು ಸಣ್ಣ ರಂಧ್ರಯಿರುವ ಬಾಟಲಿಗೆ ಹಾಕಿ, ಕಾಯಿಸಿದ ಎಣ್ಣೆಯಲ್ಲಿ ವೃತ್ತದಾಕಾರದಲ್ಲಿ ಬಿಡಬೇಕು. ಎಣ್ಣೆಯಲ್ಲಿ ಚೆನ್ನಾಗಿ ಕರಿದ ನಂತರ ಸಕ್ಕರೆ ಪಾನಕದಲ್ಲಿ ಅ‌ದ್ದಿ ತೆಗೆದರೆ ಗರಿ ಗರಿ ಜಿಲೇಜಿ ತಯಾರಾಗುವುದು.

ರಸಮಲಾಯಿ

ಬೇಕಾಗುವ ಪದಾರ್ಥಗಳು:

1 ಲೀಟರ್ ಹಾಲು, 4 ಚಮಚ ನಿಂಬೆ ರಸ, ನೀರು, 1 ಕಪ್ ಸಕ್ಕರೆ, ಎಲಕ್ಕಿ ಕಾಳು ಸಿಪ್ಪೆ, ಕೇಸರಿ, ಸಣ್ಣದಾಗಿ ಹೆಂಚಿದ ಪಿಸ್ತಾ

ತಯಾರಿಸುವ ವಿಧಾನ:

ಒಂದು ಪಾತ್ರಗೆ ಹಾಲು ಹಾಕಿ ಕುದಿಸಬೇಕು. ಹಾಲು ಸ್ವಲ್ಪ ಬಿಸಿಯಾದ ನಂತರ ಅದಕ್ಕೆ ನಿಂಬೆ ರಸ ಹಿಂಡಬೇಕು. ಹಾಲಿಗೆ ನಿಂಬೆ ಸೇರಿದ ಬಳಿಕ ಹಾಲು ಒಡೆದು ಮೊಸರಾಗಿ ಪರಿವರ್ತನೆಯಾಗುತ್ತದೆ. ಪೂರ್ಣ ಹಾಲು ಒಡೆದು ಮೊಸರಾಗುವವರೆಗೂ ಹಾಲನ್ನು ಕುದಿಸುತ್ತ, ಚಮಚದ ಸಹಾಯದಿಂದ ಕಲಕುತ್ತ ಹಾಲನ್ನು ಕುದಿಸಬೇಕು. ಮೊಸರಿನ ರೂಪಕ್ಕೆ ತಿರುಗಿದ ಮೇಲೆ ಅದನ್ನು ಒಂದು ಬಟ್ಟೆಯಲ್ಲಿ ಹಾಕಿ, ಮೆದುವಾಗಿ ಹಿಂಡಿ ಅದರಲ್ಲಿರುವ ನೀರಿನ ಪ್ರಮಾಣವನ್ನೆಲ್ಲ ಹೊರ ತೆಗೆಯಬೇಕು. ನಂತರ ಅರ್ಧ ಗಂಟೆ ಅದೇ ಬಟ್ಟೆಯಲ್ಲಿಡಬೇಕು. ಬಳಿಕ ಪದಾರ್ಥ ಕೊಂಚ ಗಟ್ಟಿಯಾದ ಬಳಿಕ ಅದನ್ನು ಹಿಟ್ಟಿನಂತೆ ನಾದಿಕೊಂಡು, ವೃತ್ತಾಕಾರದ ಉಂಡೆಗಳನ್ನು ಮಾಡಬೇಕು.

ಜಿಲೇಬಿ ರಸಮಲಾಯಿ ಸ್ಯಾಂಡವಿಚ್
ಜಿಲೇಬಿ ರಸಮಲಾಯಿ ಸ್ಯಾಂಡವಿಚ್

ಸಕ್ಕರೆ ಪಾನಕ ಮಾಡಿಕೊಂಡು ಅದರಲ್ಲಿ ಈಗಾಗಲೇ ಮಾಡಿಟ್ಟ ಉಂಡೆಗಳನ್ನು ಹಾಕಿ 15 ನಿಮಿಷ ಕುದಿಸಬೇಕು.

ಇನ್ನೊಂದು ಪಾತ್ರೆಯಲ್ಲಿ ಹಾಲು ಹಾಕಿ ಕಡಿಮೆ ಉರಿಯಲ್ಲಿ ಕುದಿಸುತ್ತ ತಯಾರಾಗುವ ಕೆನೆಯನ್ನು ಪಾತ್ರೆಯ ಅಂಚಿಗೆ ಸರಿಸುತ್ತ ಹೋಗಬೇಕು. ಕುದಿಯುವ ಹಾಲಿಗೆ ಸಕ್ಕರೆ, ಕೇಸರಿ, ಎಲಕ್ಕಿ ಕಾಳು ಸಿಪ್ಪೆ ಹಾಕಬೇಕು. ಹಾಲಿನ ಅರ್ಧಕ್ಕೂ ಜಾಸ್ತಿ ಭಾಗ ಕೆನೆಯಾಗಿ ಪರಿವರ್ತನೆಗೊಂಡ ನಂತರ ಅದನ್ನು ಒಂದು ಪಾತ್ರೆಗೆ ಹಾಕಬೇಕು.

ಪಾನಕದಲ್ಲಿ ಕುದಿಸಿದ ಉಂಡೆಗಳನ್ನು ಕುದಿಸಿಟ್ಟ ಕೆನೆಯ ಹಾಲಿಗೆ ಹಾಕಿ, ಅದರ ಮೇಲೆ ಅಲಂಕಾರಕ್ಕೆ ಹೆಂಚಿಟ್ಟ ಪಿಸ್ತಾ, ಕೇಸರಿ ಹಾಕಿದರೆ ರುಚಿ ರುಚಿಯಾದ ರಸಮಲಾಯಿ ರೆಡಿ.

ತಯಾರಾದ ಎರಡು ಜಿಲೇಜಿ ಮಧ್ಯೆ ಒಂದು ರಸಮಲಾಯಿ ಇಟ್ಟು ಸವಿದರೆ, ಅದೇ ಜಿಲೇಬಿ ರಸಮಲಾಯಿ ಸ್ಯಾಂಡವೀಚ್.

ಮಾಹಿತಿ: ಶೆಫ್‌ ವಿಶಾಖ ಗೋಯೆಂಕಾ ಕೇಸರಿಯಾ, ಇಂದಿರಾನಗರ ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT