ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬದುಕು ಬರೆಯುವ ಉಪಾಹಾರ

Last Updated 15 ಜುಲೈ 2019, 19:30 IST
ಅಕ್ಷರ ಗಾತ್ರ

ಬೆಳಗಿನ ಉಪಾಹಾರ ನಮ್ಮ ದಿನವನ್ನು ನಿರ್ಧರಿಸುತ್ತದೆ. ರಾತ್ರಿಯಿಡೀ ಹಸಿದಿರುವ ಹೊಟ್ಟೆಗೆ ಬೆಳಗ್ಗೆ ತುತ್ತು ಬೀಳದಿದ್ದರೆ ಜೀವಕ್ಕೆ ಆಪತ್ತು. ಮುಂದೊಂದು ದಿನ ದೇಹವೆಂಬ ಯಂತ್ರ ರಿಪೇರಿ ಮಾಡದಷ್ಟು ಕೆಡುತ್ತದೆ. ನಿತ್ಯ ಕೆಲಸವನ್ನು ಪಟ್ಟಾಗಿ ಮಾಡಲು ಫಿಟ್ ಆಗಿ ಇರಬೇಕು. ಇದಕ್ಕೆ ಬೇಕಾದ ಬಲವನ್ನು ಬೆಳಗಿನ ತಿಂಡಿ ಕೊಡುತ್ತದೆ.

‘ಉಪಾಹಾರವನ್ನು ರಾಜನಂತೆ ಮಾಡು. ಊಟವನ್ನು ಭಿಕ್ಷುಕನಂತೆ ತಿನ್ನು’ ಎಂಬುದು ನಾಣ್ಣುಡಿ. ಅಂತೆಯೇ ವಿವಿಧ ಬಗೆಯ ತಿಂಡಿಯನ್ನು ಸ್ವಲ್ಪ ತೆಗೆದುಕೊಳ್ಳುವುದು ಒಳಿತು. ಮಿತಿಯಾಗಿ ಹಿತವಾದ, ಪೌಷ್ಟಿಕ ಆಹಾರ ಸೇವಿಸುವುದು; ಅಂದರೆ ಒಂದೆರಡು ಇಡ್ಲಿ, ರಾಗಿ ಗಂಜಿ, ಒಂದಿಷ್ಟು ಹಸಿ ತರಕಾರಿ, ಒಂದೆರಡು ಹಣ್ಣು ಇವಿಷ್ಟು ಬೆಳಗಿನ ರಾಜ ಭೋಜನ ಆಗಿರುತ್ತದೆ.

ಉಪಾಹಾರದಲ್ಲಿ ವಿವಿಧತೆ, ಉತ್ಕೃಷ್ಟತೆ ಇರಬೇಕು. ತರಕಾರಿ, ಸಿರಿಧಾನ್ಯ (ಮಿಲೆಟ್ಸ್), ನಾರಿನಂಶ (ಫೈಬರ್) ಇರಬೇಕಾಗುತ್ತದೆ. ಕರ್ನಾಟಕದವರಿಗೆ ಇಡ್ಲಿ, ಉಪ್ಪಿಟ್ಟು, ರಾಗಿಗಂಜಿಗಿಂತ ಉತ್ತಮ ತಿಂಡಿ ಇನ್ನೊಂದಿಲ್ಲ. ಮೊಟ್ಟೆ, ತರಕಾರಿ, ಒಣ ಹಣ್ಣು, ನಟ್ಸ್, ಬಾಳೆಹಣ್ಣು, ಬ್ಲೂಬೆರಿ, ಸೇಬಿನ ಒಂದೆರಡು ತೊಳೆಗಳಿದ್ದರೆ ಅದು ಪರಿಪೂರ್ಣ ಆಹಾರ. ಪೂರಿ, ದೋಸೆ, ಅಕ್ಕಿ ರೊಟ್ಟಿ, ಪೊಂಗಲ್, ಬೇಳೆ ಬಾತ್ ಯಾವುದೇ ತಿಂಡಿಯಾಗಿದ್ದರೂ ಅದರ ಜೊತೆಗೆ ಬೇಳೆ ತೊವ್ವೆ, ಸಾಗೂ, ಸರಿಹೊಂದುವ ಗೊಜ್ಜು, ಹಸಿ ತರಕಾರಿ ಸೇವಿಸಬೇಕು.

ಬ್ರೇಕ್ ಫಾಸ್ಟ್ ಎಂಬುದನ್ನು ಉಪವಾಸಕ್ಕೊಂದು ಅಂತ್ಯ (ಬ್ರೇಕಿಂಗ್ ದ ಫಾಸ್ಟ್) ಎಂದು ಹೇಳಬಹುದು. ಬೆಳಗ್ಗೆ ಎದ್ದ 45 ನಿಮಿಷಗಳ ಒಳಗಾಗಿ ತಿಂಡಿ ಮಾಡಬೇಕು. 7.30ರಿಂದ 8.30 ತಿಂಡಿಗೆ ಯೋಗ್ಯ ಸಮಯ. ತಿಂಡಿ ಮತ್ತು ಊಟಕ್ಕೆ ಕನಿಷ್ಟ ನಾಲ್ಕು ಗಂಟೆ ಅಂತರ ಇರಬೇಕು. ಮಧ್ಯದಲ್ಲಿ ಹಸಿವಾದರೆ ಎಳನೀರು, ಹಣ್ಣಿನ ರಸ ಕುಡಿಯಬೇಕು ಎಂಬುದು ವೈದ್ಯರ ಸಲಹೆ.ಹೆಚ್ಚು ಕಾರ್ಬೊಹೈಡ್ರೇಟ್ ಇರುವ ಆಹಾರ ಸೇವಿಸಬಾರದು. ಎಣ್ಣೆಯ ಅಂಶ ಹೆಚ್ಚಿದ್ದರೆ, ಆಹಾರ ಸೇವನೆ ಮಿತಿ ಜಾಸ್ತಿಯಾದರೆ ನಿದ್ದೆ ತರಿಸುತ್ತದೆ. ಸ್ವಾದಿಷ್ಟಪೂರ್ಣ ಮಿತವಾದ ಆಹಾರ ನಮ್ಮ ಮಿದುಳನ್ನು ಚುರುಕಾಗಿಸುತ್ತದೆ.

ವಿವಿಧ ಪಾಳಿಗಳಲ್ಲಿ ಕೆಲಸ ಮಾಡುವವರು ಕನಿಷ್ಟ ಒಂದು ಹೊತ್ತು ಗೊತ್ತೊಗೊತ್ತಿಲ್ಲದೆಯೋ ಊಟ ತಪ್ಪಿಸುತ್ತಾರೆ. ಇಲ್ಲವೇ ಸಮಯವಲ್ಲದ ಸಮಯದಲ್ಲಿ ಮಾಡುತ್ತಾರೆ. ಇದು ಹೈಪೊಗ್ಲೇಸಿಮಿಯಾ ತೊಂದರೆಗೆ ಕಾರಣವಾಗಬಹುದು. ರಕ್ತದಲ್ಲಿ ಗ್ಲೂಕೋಸ್ ಮಟ್ಟ ಕಡಿಮೆಯಾಗುವುದು ಖಿನ್ನತೆಗೂ ಎಡೆಮಾಡಿಕೊಡುತ್ತದೆ. ನಿದ್ರೆಗೆ ಇದ್ದಕ್ಕಿದ್ದಂತೆ ಜಾರುವುದು, ಆಯಾಸ, ಆಲಸ್ಯ, ತಲೆ ನೋವು ಇವೆಲ್ಲ ತಿಂಡಿ ತಿನ್ನದವರಿಗೆ ಉಚಿತವಾಗಿ ಸಿಗುತ್ತವೆ. ಮುಂದೊಂದು ದಿನ ಸಕ್ಕರೆ ಕಾಯಿಲೆ ಬರುವುದೂ ಕೂಡ ನಿಶ್ಚಿತ. ಆದ್ದರಿಂದ ತಿಂಡಿಯನ್ನು ‘ಸ್ಕಿಪ್’ ಮಾಡುವ ಮುಂಚೆ ಯೋಚಿಸಬೇಕಿದೆ.‌‌

***

ಸೂರ್ಯ ಹುಟ್ಟಿರುತ್ತಾನೋ ಇಲ್ಲವೋ ಬೇಗನೆ ಏಳುವ ಅಮ್ಮ ನಮ್ಮ ದಿನದ ಹಣೆಬರಹ ಬರೆಯುತ್ತಾಳೆ. ಹುಷಾರಿಲ್ಲದಿದ್ದಾಗಲೂ ತಿಂಡಿ ಮಾಡುವುದನ್ನು ಅವಳು ತಪ್ಪಿಸುವುದಿಲ್ಲ. ತಿಂಡಿ ಬೆಲೆ ಗೊತ್ತಿದೆ ಅವಳಿಗೆ. ಈಗಲೂ ಫೋನ್ ಮಾಡಿ ವಿಚಾರಿಸುತ್ತಾಳೆ. ಪಾಳಿಗಳಲ್ಲಿ ಕೆಲಸ ಮಾಡುವ ನಮಗೆ ಬೆಳಗಿನ ತಿಂಡಿ ಎಂದರೆ ಅಮೃತವಿದ್ದಂತೆ

– ರೋಹಿತ್, ಐಟಿ ಕಂಪನಿ ಉದ್ಯೋಗಿ

***

ಬೆಳಗ್ಗೆ ಎದ್ದ 45 ನಿಮಿಷಗಳ ಒಳಗಾಗಿ ‘ಬ್ರೇಕ್ ಫಾಸ್ಟ್’ ಮುಗಿಸಬೇಕು. ರಾತ್ರಿ ಊಟವನ್ನು ಸಾಧ್ಯವಾದಷ್ಟು 7.30ರ ಒಳಗೆ ಮುಗಿಸಬೇಕು. ಅಂದರೆ ನಿದ್ರೆಗೆ ಹೋಗುವ ಎರಡು ತಾಸು ಹಿಂದೆ. ಹೀಗೆ ಮಾಡಿದರೆ ಬೆಳಗಿನ ಉಪಾಹಾರವನ್ನು ತಪ್ಪಿಸುವುದಿಲ್ಲ

ಆನಂದಿ ಅಯ್ಯರ್, ನ್ಯೂಟ್ರಿಷನಿಸ್ಟ್, ಸ್ಪೋರ್ಥೋ ಆಸ್ಪತ್ರೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT