ಸೋಮವಾರ, ಮಾರ್ಚ್ 27, 2023
32 °C

ಹೋಟೆಲ್‌ ಮಾಲೀಕರಿಗೆ ಎಲ್‌ಪಿಜಿ ಹೊರೆ: ಗ್ರಾಹಕರಿಗೆ ಇಂದಿನಿಂದ ಬೆಲೆ ಏರಿಕೆ ಬರೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ವಾಣಿಜ್ಯ ಬಳಕೆಯ ಎಲ್‌ಪಿಜಿ ಬೆಲೆಯಲ್ಲಿನ ನಿರಂತರ ಏರಿಕೆಯ ಪರಿಣಾಮವಾಗಿ ಬೆಂಗಳೂರಿನ ಹೋಟೆಲ್‌ಗಳು ಆಹಾರ ಪದಾರ್ಥಗಳ ಬೆಲೆ ಏರಿಕೆಗೆ ನಿರ್ಧರಿಸಿವೆ. ಹೀಗಾಗಿ ಬೆಂಗಳೂರಿಗರು ಸೋಮವಾರದಿಂದ ತಮ್ಮ ನೆಚ್ಚಿನ ತಿಂಡಿ–ತಿನಿಸು ಸವಿಯಲು ಹೆಚ್ಚು ಖರ್ಚು ಮಾಡಬೇಕಾಗಿದೆ.

2020ರ ಜನವರಿಯಲ್ಲಿ ₹1,100 ಇದ್ದ 19 ಕೆಜಿಯ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ನ ಬೆಲೆ ಈಗ ₹2,060ಗೆ ಏರಿದೆ. ಹೀಗಾಗಿ ಆಹಾರ ಪದಾರ್ಥಗಳ ಬೆಲೆ ಏರಿಕೆ ಮಾಡದೇ ವಿಧಿಯಿಲ್ಲ ಎಂದು ಬೃಹತ್‌ ಬೆಂಗಳೂರು ಹೋಟೆಲ್‌ ಮಾಲೀಕರ ಸಂಘ (ಬಿಬಿಎಚ್‌ಎ) ಹೇಳಿದೆ.

ಆಹಾರ ಪದಾರ್ಥಗಳ ಬೆಲೆಯನ್ನು ಕನಿಷ್ಠ ಶೇ. 10ರಷ್ಟು ಹೆಚ್ಚು ಮಾಡಲು ಹೋಟೆಲ್‌ ಮಾಲೀಕರು ನಿರ್ಧರಿಸಿದ್ದಾರೆ. ಖರ್ಚು–ವೆಚ್ಚಕ್ಕೆ ಅನುಗುಣವಾಗಿ ಬೆಲೆಯನ್ನು ಶೇ. ಶೇಕಡಾ 20 ರವರೆಗೆ ಹೆಚ್ಚಳ ಮಾಡುವ ಸಾಧ್ಯತೆಗಳೂ ಇವೆ.

‘ದೊಡ್ಡ ಹೋಟೆಲ್‌ಗಳು ಕನಿಷ್ಠ ಏರಿಕೆ ಮಾಡಿದರೂ ಅವುಗಳ ಉದ್ಯಮ ನಡೆಯುತ್ತದೆ. ಆದರೆ, ಸಣ್ಣ–ಪುಟ್ಟ ಹೋಟೆಲ್‌ಗಳು, ವಿಶೇಷವಾಗಿ ದರ್ಶಿನಿಗಳಲ್ಲಿನ ಆಹಾರ ಪದಾರ್ಥಗಳ ಬೆಲೆ ಕಡಿಮೆ. ಹೀಗಾಗಿ ಅವುಗಳು ಬೆಲೆಯನ್ನು ಶೇ 15 ರಿಂದ 20ರ ವರೆಗೆ ಹೆಚ್ಚಳ ಮಾಡಿದರಷ್ಟೇ ಪ್ರಯೋಜನ,’ ಎಂದು ಬಿಬಿಎಚ್‌ಎ ಅಧ್ಯಕ್ಷ ಪಿ. ಸಿ. ರಾವ್ ಹೇಳಿದರು.

‘ಕಳೆದ ಎರಡು ವರ್ಷಗಳಲ್ಲಿ ಆಹಾರ ಧಾನ್ಯಗಳು, ತರಕಾರಿಗಳು ಮತ್ತು ಅಡುಗೆ ಎಣ್ಣೆಯ ಬೆಲೆ ಹೆಚ್ಚಾಗಿದೆ. ಆದರೆ, ಹೋಟೆಲ್‌ ಆಹಾರ ಪದಾರ್ಥಗಳ ಬೆಲೆ ಏರಿಕೆಯಾಗಿದ್ದು ಮಾತ್ರ 2019ರಲ್ಲಿ. ವಿದ್ಯುತ್, ಕಟ್ಟಡ ಬಾಡಿಗೆ, ಸಂಬಳ ಸೇರಿದಂತೆ ಹೋಟೆಲ್‌ ನಿರ್ವಹಣೆ ವೆಚ್ಚವೂ ಶೇ 15ರಷ್ಟು ಹೆಚ್ಚಾಗಿದೆ. ಹೀಗಾಗಿ, ಹೋಟೆಲ್ ಮಾಲೀಕರು ಈಗ ಆಹಾರ ಪದಾರ್ಥಗಳ ಬೆಲೆ ಏರಿಕೆ ಮಾಡಲೇಬೇಕಾಗಿದೆ. ಸರಾಸರಿ ಹೆಚ್ಚಳವು ಪ್ರತಿ ಪದಾರ್ಥಕ್ಕೆ ₹2-5 ಆಗಿರಲಿದೆ,’ ಎಂದು ಅವರು ವಿವರಿಸಿದರು.

ಬೆಲೆ ಏರಿಕೆಯ ಪರಿಣಾಮವಾಗಿ ರೆಸ್ಟೋರೆಂಟ್‌ಗಳಲ್ಲಿ ಮಸಾಲೆ ದೋಸೆಯ ಬೆಲೆ ₹70ರಿಂದ ₹75ಕ್ಕೆ ಜಿಗಿಯಬಹುದು. ಇಡ್ಲಿ ಪ್ರಿಯರು ತಮ್ಮ ನೆಚ್ಚಿನ ಉಪಹಾರಕ್ಕಾಗಿ ₹55-60 ನೀಡಬೇಕಾಗಿ ಬರಬಹುದು.

ದರ್ಶಿನಿಗಳು ಸೇರಿದಂತೆ ಎಲ್ಲಾ ರೆಸ್ಟೋರೆಂಟ್‌ಗಳಲ್ಲೂ ಕಾಫಿ, ಟೀ ಬೆಲೆ ₹3-5 ಏರಬಹುದು. ಗ್ರಾಹಕರು ಒಂದು ಕಪ್ ಕಾಫಿಗೆ ₹20 ವರೆಗೆ ಪಾವತಿಸಬೇಕಾಗಬಹುದು. ಚಹಾಕ್ಕೆ ₹12-15 ನೀಡಬೇಕಾಗಬಹುದು.
ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ಗಳ ಮೇಲಿನ ಜಿಎಸ್‌ಟಿಯನ್ನು ಈಗಿರುವ ಶೇ. 18 ರಿಂದ ಶೇ. 5 ಕ್ಕೆ ಇಳಿಸುವಂತೆ ಮನವಿ ಮಾಡಲು ದಕ್ಷಿಣ ಭಾರತದ ಹೋಟೆಲ್ ಅಸೋಸಿಯೇಷನ್‌ಗಳ ಪ್ರತಿನಿಧಿಗಳು ಕೇಂದ್ರ ಸಚಿವರನ್ನು ಭೇಟಿ ಮಾಡಲು ನಿರ್ಧರಿಸಿದ್ದೇವೆ ಎಂದೂ ರಾವ್ ತಿಳಿಸಿದ್ದಾರೆ. ಅವರು ‘ಪ್ರಜಾವಾಣಿ’ಯ ಸೋದರ ಸಂಸ್ಥೆ ‘ಡೆಕ್ಕನ್‌ ಹೆರಾಲ್ಡ್‌’ನೊಂದಿಗೆ ಮಾತನಾಡಿದ್ದಾರೆ.

ರಾಜ್ಯಾದಾದ್ಯಂತ ಹೆಚ್ಚಳ

ರಾಜ್ಯದ ಇತರ ಭಾಗಗಳ ಹೋಟೆಲ್‌ಗಳು ಮತ್ತು ರೆಸ್ಟೋರೆಂಟ್‌ಗಳಲ್ಲಿನ ಆಹಾರ ಪದಾರ್ಥಗಳೂ ಶೇ 5 ರಿಂದ 10 ರಷ್ಟು ಏರಿಕೆಯಾಗಲಿವೆ ಎಂದು ಕರ್ನಾಟಕ ಪ್ರದೇಶ ಹೋಟೆಲ್ ಮತ್ತು ರೆಸ್ಟೋರೆಂಟ್‌ಗಳ ಸಂಘದ (ಕೆಪಿಎಚ್‌ಆರ್‌ಎ) ಅಧ್ಯಕ್ಷ ಚಂದ್ರಶೇಖರ ಹೆಬ್ಬಾರ್ ಹೇಳಿದ್ದಾರೆ.

‘ನಾವು ಗ್ರಾಹಕರ ಮೇಲೆ ಹೊರೆ ಹೊರಿಸಲು ಬಯಸುವುದಿಲ್ಲ. ಹೀಗಾಗಿ ಭಾರಿ ಪ್ರಮಾಣದ ಬೆಲೆ ಏರಿಕೆ ಮಾಡುವುದಿಲ್ಲ. ಸದ್ಯಕ್ಕೆ ₹50 ಇರುವ ದೋಸೆಯ ಬೆಲೆ ₹55ಕ್ಕೆ ಏರಿಕೆಯಾಗುವ ಸಾಧ್ಯತೆಯಿದೆ. ವಾರದೊಳಗೆ ಹೊಸ ದರ ಜಾರಿಗೆ ಬರಲಿದೆ,’ ಎಂದು ಅವರು ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು