ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಡಗದ್ದೆಯ ಮೀನೂಟದ ಮುಂದೆ ಎಲ್ಲರೂ ಸೋಲಬೇಕಾದ್ದೇ..!

Last Updated 19 ಅಕ್ಟೋಬರ್ 2019, 11:17 IST
ಅಕ್ಷರ ಗಾತ್ರ

ಸಾಂಪ್ರಾದಾಯಿಕ ಹಳ್ಳಿ ಕೈಗಳ ಮೀನು ಸಾರು, ಮೀನಿನ ಪ್ರೈ ಇತ್ತೀಚಿಗೆ ಹೆಚ್ಚು ಜನರಿಗೆ ಇಷ್ಟವಾಗುತ್ತಿದೆ. ರಾಸಾಯನಿಕತೆಯ ಸೋಂಕಿಲ್ಲದ ಆರೋಗ್ಯಕರ ಮೀನಿನ ಆಹಾರ ಸಸ್ಯಹಾರವೋ ಮಾಂಸಹಾರವೋ? ಎಂಬುದು ಇಂದಿಗೂ ಇತ್ಯರ್ಥ ಆಗದ ವಿಚಾರ. ನೀರೊಳಗೆ ಬೆಳೆವ ತರಕಾರಿ ಎಂದು ಒಪ್ಪಿ ಮೀನಿನ ಅಡುಗೆ ಬಾರಿಸುವ ಜನ ನಮ್ಮ ನಡುವೆ ಇತ್ತೀಚೆಗೆ ತುಸು ಜಾಸ್ತಿಯೇ ಆಗುತ್ತಿದ್ದಾರೆ. ಈ ಮಾತು ಮೀನಿಗೆ ಹೆಚ್ಚುತ್ತಿರುವ ಅಧಿಕ ಬೆಲೆ ಗಮನಿಸಿ ಹೇಳಬಹುದು.

ಸಮುದ್ರವನ್ನೇ ಬಾಚಿ ಹಿಡಿದ ಕರಾವಳಿಯ ಜನ ತಯಾರಿಸುವ ಮೀನು ಸ್ವಾದ, ಮತ್ತು ಮೀನಿನ ವೈವಿಧ್ಯಗಳ ಬಗ್ಗೆ ಎಷ್ಟು ಹೇಳಿದರೂ ಸಾಲದು. ಈ ಮಟ್ಟಿಗೆ ಅವರೆಲ್ಲಾ ಬಲು ಅದೃಷ್ಟವಂತರು. ಅದೇ ಕೊಂಚ ಘಟ್ಟ ಹತ್ತಿ ಮೇಲೆ ಬರುವ ನಮಗೆ ಸಮುದ್ರದ ಮೀನೆಂದರೆ ಐಸ್ ಮೀನೆಂದೇ ಲೆಕ್ಕ. ಕರಾವಳಿಯ ಜನರಷ್ಟು ತಾಜಾ ಮಾಲು ನಮಗೆ ಸಿಗುವುದೇ ಇಲ್ಲ. ಒಂದೆರಡು ದಿನ ಕಳೆದ, ಮಂಜಿನಲ್ಲಿ ಕಾಪಿಟ್ಟ ಮೀನನ್ನು ನಾವೆಲ್ಲಾ ಹುರಿದು ಮುಕ್ಕುತ್ತೇವೆ. ನಮ್ಮ ಈ ತಾಜಾ ಮೀನೆಂಬ ಹಪಹಪಿಯನ್ನು ಪೂರೈಸುವ ಶಕ್ತಿ ಇರುವುದು ನಮ್ಮ ನದಿ ಮತ್ತು ಕೆರೆಯ ಮೂಲಗಳಿಗೆ ಮಾತ್ರ.

ತುಂಗಾ ನದಿ ತೀರದಲ್ಲೇ ಸಾಗಿ ಬರುವ ತೀರ್ಥಹಳ್ಳಿ ಮತ್ತು ಶಿವಮೊಗ್ಗ ನಡುವಿನ ರಸ್ತೆಯಲ್ಲಿ ಮೀನಿನ ಖಾದ್ಯದ ಅನೇಕ ಹೊಟೆಲ್ಲುಗಳಿವೆ. ಇತ್ತೀಚಿನ ದಿನಗಳಲ್ಲಿ ಈ ರಸ್ತೆ ನಾಟಿ ಮೀನಿನ ಊಟ ತುಂಬಾ ಪ್ರಸಿದ್ಧವಾಗುತ್ತಿದೆ. ಕಳೆದ ಹದಿನೆಂಟು ವರುಷಗಳಿಂದ ನಾನೂ ಗಮನಿಸಿ ಮೆಚ್ಚಿದ ಮಂಡಗದ್ದೆ ಬಳಿಯ ರಮೇಶ್ ಅವರ ಭವಾನಿ ಹೊಟೆಲ್ಲಿನ ಬಗ್ಗೆ ಇಲ್ಲಿ ಮುಖ್ಯವಾಗಿ ಹೇಳಬೇಕಾಗಿದೆ.

ಜರ್ಮನಿ, ದಕ್ಷಿಣ ಆಫ್ರಿಕಾ, ಶ್ರೀಲಂಕಾದ ಕಡೆಯ ಜನರೆಲ್ಲಾ ಈ ಹಳ್ಳಿ ಕೊಂಪೆಯ ಮಾಮೂಲಿ ಹೋಟೆಲ್ಲಿಗೆ ಬಂದು ಉಂಡು ಹೋಗಿದ್ದಾರೆ. ಊಟ ಮಾಡಲೆಂದೇ ನೂರಾರು ಕಿ.ಮೀ.ಗಳಿಂದ ಜನ ದಮ್ಮು ಕಟ್ಟಿಕೊಂಡು ಇಲ್ಲಿಗೆ ಬರುವುದು ಸೋಜಿಗ. ಚಲನಚಿತ್ರ ನಟರಾದ ದರ್ಶನ್, ಕರಿಬಸವಯ್ಯ, ಯಶ್ ತರದ ಪ್ರಸಿದ್ಧರೂ ಇಲ್ಲಿನ ರುಚಿ ಸವಿದು ಹೋಗಿದ್ದಾರೆ. ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಇದೇ ದಾರಿಯಲ್ಲಿ ಓಡಾಡುವಾಗ ಇಲ್ಲಿನ ಸವಿಗೆ ನಾಲಿಗೆ ಕೊಟ್ಟ ಕಾರಣ ಅವರನ್ನೂ ಸ್ವಾದಕ ಗಿರಾಕಿಗಳ ಸಾಲಿಗೆ ಸೇರಿಸಿಕೊಳ್ಳಲಾಗಿದೆ.

ಇಪ್ಪತ್ತೆರಡು ವರುಷದ ಹಿಂದೆ ಮನೆ ಮುಂದಿನ ರೈಸ್ ಮಿಲ್‌ಗೆ ಎತ್ತಿನ ಗಾಡಿಗಳ ಜತೆಗೂಡಿ ಹಳ್ಳಿಜನ ‘ಭತ್ತ ಹಲ್ಲಿಂಗ್’ ಮಾಡಿಸಲು ಬರುತ್ತಿದ್ದರು. ಬಂದವರು ಎರಡು ಮೂರು ದಿನ ಉಳಿಯಬೇಕಾಗುತ್ತಿತ್ತು. ಅವರಿಗಾಗಿ ರಮೇಶ್, ಮೂರು ರೂಪಾಯಿಯ ಮೀನೂಟವನ್ನು ಮನೆಯಲ್ಲಿ ಶುರು ಮಾಡಿದರು. ತಂಗಿ ಸಾರು ತಯಾರಿಸುವ, ತವಾ ಫ್ರೈ ಮಾಡುವ ಹಳ್ಳಿಯ ವಿಧಾನ ಕಲಿಸಿಕೊಟ್ಟರು. ಮುಂದೆ ದಕ್ಷಿಣ ಕನ್ನಡದಿಂದ ಮಡದಿಯಾಗಿ ಬಂದ ರಮೇಶ್ ಪತ್ನಿ ಶಕುಂತಲ ಮೀನಿನ ಖಾದ್ಯಗಳಿಗೆ ಮತ್ತೊಂದಿಷ್ಟು ಸೊಗಡು, ರುಚಿಯನ್ನು ಹೆಚ್ಚಿಸಿದರು. ಶಿವಮೊಗ್ಗದ ಪಿಯರ್ ಲೈಟ್ ಫ್ಯಾಕ್ಟ್ರಿಯಲ್ಲಿ ದಿನಗೂಲಿ ನೌಕರರಾಗಿದ್ದ ರಮೇಶ್ ಆ ಕೆಲಸವನ್ನು ಬಿಟ್ಟು ಹೋಟೆಲನ್ನೇ ತಮ್ಮ ಬದುಕಿನ ಹಾದಿ ಮಾಡಿಕೊಂಡರು. ಅವತ್ತು ಕಲಿತ ಆ ಸ್ವಾದವೇ ಇವತ್ತಿಗೂ ಕೈ ಹಿಡಿದು ಕಾಪಾಡುತ್ತಿದೆ.

ಉಡುಪಿ–ಕುಂದಾಪುರದ ತೆಂಗಿನ ಕಾಯಿ, ಬ್ಯಾಡಗಿಯ ಕೆಂಪು ಮೆಣಸಿನಕಾಯಿ, ತುಂಗಾನದಿಯ ತಾಜಾಮೀನು, ಸ್ಥಳೀಯ ಕಾಡಿನ ವಾಟೆ ಹುಳಿ, ಮುರುಗನ ಹುಳಿ, ಮತ್ತು ಹುಣಸೆ ಹಣ್ಣುಗಳ ರಸ, ಮನೆಯವರೆಲ್ಲಾ ಸೇರಿ ತಯಾರಿಸುವ ಶುದ್ಧ ಮಸಾಲೆ ಪದಾರ್ಥಗಳು ಹೋಟೆಲ್ಲಿನ ಗೌರವ ಮತ್ತು ರುಚಿಯನ್ನು ಹೆಚ್ಚಿಸಿವೆ.

‘ಬೆಳಿಗ್ಗೆ ಎದ್ದ ತಕ್ಷಣ ಎಲ್ಲರೂ ದೇವರ ಮುಖ ನೋಡಿದರೆ ನಾನು ನೋಡುವುದೇ ಮೀನುಗಳ ಮುಖ’ ಎನ್ನುತ್ತಾರೆ ರಮೇಶ್. ತಮಗೆ ಬೇಕಾದ ಒಳ್ಳೆಯ ಮೀನುಗಳನ್ನಷ್ಟೇ ಆಯ್ಕೆ ಮಾಡಿಕೊಳ್ಳುವ ಅವರು, ಮೀನು ಚೆನ್ನಾಗಿಲ್ಲದ ದಿನ ಹೋಟೆಲ್‌ಗೆ ರಜಾ ಮಾಡುತ್ತಾರೆ. ಸ್ಥಳೀಯ ಮಾರುಕಟ್ಟೆಯಲ್ಲಿ ಅವುಲು, (ಕುಚ್ಚು) ಸುರಗಿ, ಗೊಜಳೆ, ಗೌರಿ, ಕಾಟ್ಲ, ರಹೂ, ಮಿರಗಲ್ ಮೀನುಗಳನ್ನು ಮಾತ್ರ ಹೆಕ್ಕಿ ತರುತ್ತಾರೆ. ಜನ ಹೆಚ್ಚಾಗಿ ಬಯಸುವುದು ಅವುಲು ಮತ್ತು ಗೊಜಳೆ ಮೀನುಗಳನ್ನೇ. ಅಪರೂಪಕ್ಕೆ ಆರು ತಿಂಗಳಿಗೆ ಒಂದೆರಡು ಸಲ ಸಿಗುವ ಕೊಯಿರಾ ಮೀನು ವಜ್ರ ಸಿಕ್ಕಿದಂತೆ. ಮುಳ್ಳಿಲ್ಲದ ಹೂವಿನಷ್ಟು ಮೃದುವಾದ ಈ ಮೀನು ಅದೃಷ್ಟವಂತರಿಗೆ ಮಾತ್ರ ಚಪ್ಪರಿಸಲು ಸಿಕ್ಕಿದೆ. ಕಲ್ಮಶವಿಲ್ಲದ ತುಂಗಾನದಿಯಲ್ಲಿ, ನೈಸರ್ಗಿಕ ಕಳೆ ತಿಂದು ಬೆಳೆಯುವ ಮೀನುಗಳು ಈ ನಾಟಿ ಕಾರಣಕ್ಕೆ ರುಚಿ ರುಚಿಯಾಗಿರುತ್ತವೆ.

ಶಾಲೆ ಬೆಲ್ಲು ಹೊಡೆದಂಗೆ ಜನ ಇಲ್ಲಿ ಬಂದು ಮೊದಲೇ ಊಟಕ್ಕೆ ಕಾಯುತ್ತಾರೆ. ಕಲ್ಲಿನಲ್ಲಿ ರುಬ್ಬಿದ ಖಾರದಿಂದ ಮಾಡುವ ಸಾರಿನ ರುಚಿ ಹೆಚ್ಚು ಎಂಬುದಿಲ್ಲಿ ಸಾಬೀತಾಗಿದೆ. ಭಾನುವಾರ 100 ಕಿಲೋಗಿಂತ ಹೆಚ್ಚು ವ್ಯಾಪಾರವಾಗುತ್ತೆ. ಮನೇಲಿ ಪಕ್ಕಾ ಸಸ್ಯಹಾರಿಗಳೆಂದು ಬಿಂಬಿತರಾಗುವ ಜನರೆಲ್ಲ ಇಲ್ಲಿ ಬಂದು ಸೇಡು ತೀರಿಸಿಕೊಳ್ಳುತ್ತಾರೆ. ಅಕ್ಕಿ ರೊಟ್ಟಿ, ಮೀನಿನ ಸಾರು, ಫಿಶ್ ಫ್ರೈ ಇಲ್ಲಿ ತಿಂದವರು ಮತ್ತೆ ಹುಡುಕಾಡಿಕೊಂಡು ಬರುತ್ತಾರೆ. ಅನ್ನ ನೆಂಚಿಕೊಂಡು ಮೀನನ್ನೇ ಮೂಲ ಆಹಾರವೆಂಬಂತೆ ತಿನ್ನುತ್ತಾರೆ. ಶಿವಮೊಗ್ಗದಿಂದ ತೀರ್ಥಹಳ್ಳಿ ಕಡೆಗೆ ಬರುವವರಿಗೆ ಮಂಡಗದ್ದೆಗಿಂತ ಮೊದಲು 17ನೇ ಮೈಲಿಕಲ್ಲಿನ ಬಳಿ ಹೊಟೆಲ್ ಭವಾನಿ ಸಿಗುತ್ತದೆ. ಭಾನುವಾರ ಮೀನಿನ ಜೊತೆ ನಾಟಿ ಕೋಳಿ, ಮಟನ್ ಡ್ರೈ ಕೂಡ ರಮೇಶ್ ತಯಾರಿಸುತ್ತಿದ್ದಾರೆ.

(2019ರ ಸುಧಾ ಯುಗಾದಿ ವಿಶೇಷಾಂಕದಲ್ಲಿ ಪ್ರಕಟವಾಗಿದ್ದ ಲೇಖನ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT