ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗ್ರಾಹಕರನ್ನು ತೃಪ್ತಿ ಪಡಿಸುವುದೇ ಸವಾಲು

Last Updated 12 ಡಿಸೆಂಬರ್ 2018, 19:45 IST
ಅಕ್ಷರ ಗಾತ್ರ

ಹೋಟೆಲ್ ಉದ್ಯಮದೆಡೆ ಒಲವು ತೋರಿದ್ದು ಹೇಗೆ?

ಮಾನವ ಸಂಘ ಜೀವಿ. ಆತ ಒಂದೇ ಕಡೆ ನೆಲೆ ನಿಲ್ಲುವುದಿಲ್ಲ. ಕೆಲಸ ಕಾರ್ಯ ಹಾಗೂ ಪ್ರವಾಸದ ನಿಮಿತ್ತ ಹೊರಗಡೆ ಹೋಗಬೇಕಾಗುತ್ತದೆ. ಹಾಗೇ ಹೋದಲ್ಲೆಲ್ಲ ವಾಸ್ತವ್ಯಕ್ಕೆ ಹೋಟೆಲ್‌ಗಳು ಅಗತ್ಯ. ಹೋಟೆಲ್ ಉದ್ಯಮ ಮನುಷ್ಯನ ಮೂಲ ಅಗತ್ಯಗಳನ್ನು ಪೂರೈಸುತ್ತದೆ. ಬೇಡಿಕೆ ಇದ್ದೇ ಇರುತ್ತದೆ ಎಂಬ ಕಾರಣಕ್ಕೆ ಈ ಕಡೆ ಒಲವು ತೋರಿದೆ.

ಈ ಉದ್ಯಮ ಎದುರಿಸುತ್ತಿರುವ ಸವಾಲುಗಳೇನು?

ತಂತ್ರಜ್ಞಾನ ಕ್ಷೇತ್ರದಲ್ಲಾದ ಬದಲಾವಣೆ ಹೋಟೆಲ್ ಉದ್ಯಮಕ್ಕೆ ವರದಾನ. ಉದ್ಯಮದ ಪ್ರತಿ ಹಂತದಲ್ಲೂ ತಂತ್ರಜ್ಞಾನದ ನೆರವಿದೆ. ಕೆಲವರು ತಂತ್ರಜ್ಞಾನ ದುರ್ಬಳಕೆ ಮಾಡಿ ಗ್ರಾಹಕರನ್ನು ದಾರಿ ತಪ್ಪಿಸುತ್ತಿದ್ದಾರೆ. ನಾನು ಕಂಡಂತೆ ಇದು ಈ ಉದ್ಯಮಕ್ಕೆ ಸವಾಲಾಗಿ ಪರಿಣಮಿಸಿದೆ.

ಗ್ರಾಹಕ ಈ ಉದ್ಯಮದಿಂದ ಏನು ಬಯಸುತ್ತಾನೆ?

ಗ್ರಾಹಕರ ಬಯಕೆ ಹಿಂದೆಂದಿಗಿಂತಲೂ ಈಗ ಭಿನ್ನವಾಗಿದೆ. ಯಾವ ಹೋಟೆಲ್‌ನಲ್ಲಿ ಯಾವೆಲ್ಲ ಸೌಲಭ್ಯಗಳು ಸಿಗುತ್ತವೆ, ಎಷ್ಟು ಕಡಿಮೆ ಬೆಲೆಯಿದೆ, ಯಾವೆಲ್ಲಾ ರಿಯಾಯಿತಿ ಇವೆ ಎಂಬುದನ್ನು ನೋಡಿಯೇ ಗ್ರಾಹಕರು ಮುಂದುವರೆಯುತ್ತಾರೆ. ಎಷ್ಟು ಕೊಡುಗೆ ಕೊಟ್ಟರೂ ಸಂತೃಪ್ತರಾಗದ ಭಾವನೆ ಗ್ರಾಹಕರದ್ದು. ಗ್ರಾಹಕರನ್ನು ತೃಪ್ತಿ ಪಡಿಸುವುದೇ ಉದ್ಯಮಿಗಳಿಗಿರುವ ದೊಡ್ಡ ಸವಾಲು.

ಇದಕ್ಕೆ ಪರಿಹಾರವಿದೆಯೇ?

ವೈವಿಧ್ಯಮಯ ಸೇವೆ ನೀಡುವುದೇ ಪರಿಹಾರ. ಈ ಉದ್ಯಮದಲ್ಲಿ ಎಲ್ಲ ಕಾಲಕ್ಕೂ ಒಂದೇ ರೀತಿಯ ಸೇವೆ ನೀಡಲು ಸಾಧ್ಯವಿಲ್ಲ. ಕಾಲಕ್ಕೆ ತಕ್ಕಂತೆ ಬದಲಾವಣೆಗಳು ಆಗುತ್ತಲೇ ಇವೆ. ಉದ್ಯಮದಲ್ಲಿ ಬದಲಾವಣೆಯ ಗಾಳಿ ಬೀಸುತ್ತಿದ್ದಂತೆ ನಾವು ಅದಕ್ಕೆ ಒಗ್ಗಿಕೊಳ್ಳಬೇಕು. ನಮ್ಮ ಸಂಸ್ಥೆಯೂ ಒಗ್ಗಿಕೊಂಡಿದೆ. ಸೌಲಭ್ಯ, ಸಂಸ್ಕೃತಿ ಹಾಗೂ ತಂತ್ರಜ್ಞಾನ ಸೇರಿದಂತೆ ಯಾವುದೇ ವಿಚಾರದಲ್ಲಾಗಲಿ ಹೊಸತನವನ್ನು ಅಳವಡಿಸಿಕೊಳ್ಳಬೇಕು. ಅದನ್ನು ಬಿಟ್ಟು ನಾವು ಒಂದೇ ರೀತಿಯ ಶೈಲಿಗೆ ಗಂಟು ಬೀಳುವುದು ಈ ಕ್ಷೇತ್ರಕ್ಕೆ ಅಷ್ಟಾಗಿ ಒಗ್ಗುವುದಿಲ್ಲ.

ಜಿಎಸ್‌ಟಿಯ (ಸರಕು ಮತ್ತು ಸೇವಾ ತೆರಿಗೆ) ಈ ಉದ್ಯಮಕ್ಕೆ ಮಾರಕ ಅಂತಾರಲ್ಲ?

ನನ್ನ ಪ್ರಕಾರ ಈ ಕ್ಷೇತ್ರಕ್ಕೆ ಜಿಎಸ್‌ಟಿ ಅನುಕೂಲ. ಜಿಎಸ್‌ಟಿಯ ಎಲ್ಲ ಪ್ರಯೋಜನವೂ ಗ್ರಾಹಕರಿಗೆ ತಲುಪುತ್ತಿದೆ. ನಿರ್ವಹಣೆಯ ವೆಚ್ಚ ಕಡಿಮೆಯಾಗಿದೆ. ಜಿಎಸ್‌ಟಿ ಪ್ರಾರಂಭವಾದ ನಾಲ್ಕೈದು ತಿಂಗಳ ವರೆಗೆ ತೊಡಕಾಗಿತ್ತು. ನಮ್ಮ ಸಂಸ್ಥೆಯಲ್ಲಿ ಇದುವರೆಗೆ ಜಿಎಸ್‌ಟಿ ಸಂಬಂಧ ಗ್ರಾಹಕರು ಆಕ್ಷೇಪ ವ್ಯಕ್ತಪಡಿಸಿಲ್ಲ.

ಹೋಮ್‌ ಡೆಲಿವರಿಗಳು ಗ್ರಾಹಕರಿಗೆ ಸೇವಾ ಅನುಭೂತಿಯನ್ನು ತಪ್ಪಿಸುತ್ತಿವೆ ಅನಿಸಲ್ಲವೇ?

ಹೋಮ್ ಡೆಲಿವೆರಿ ಪದ್ಧತಿ ಒಂದು ಸೀಮಿತ ವರ್ಗಕ್ಕೆ ಅನುಕೂಲ. ಮನೆಗಳಲ್ಲಿ ಅಡುಗೆ ತಯಾರಿಸಲು ಹಾಗೂ ಹೋಟೆಲ್‌ಗಳಿಗೆ ಹೋಗಿ ಊಟ ಮಾಡಲು ಬಿಡುವಿಲ್ಲದವರಿಗೆ ಈ ಪದ್ಧತಿ ಅನುಕೂಲ. ಅದು ಕೊಂಚ ದುಬಾರಿಯೂ ಆಗುತ್ತದೆ. ಒಂದು ಹೋಟೆಲ್‌ ಅಥವಾ ರೆಸ್ಟೋರಂಟ್‌ಗೆ ಹೋಗಿ, ಅಲ್ಲಿನ ವಾತಾವರಣದಲ್ಲಿ ಊಟ ಆಸ್ವಾದಿಸುವುದು ಒಳ್ಳೆಯದು. ಅದರಿಂದ ಗ್ರಾಹಕನಿಗೆ ಊಟ ಮಾಡಿದ ಸಂತೃಪ್ತ ಭಾವನೆ
ಮೂಡುತ್ತದೆ.

ಸೇವೆ ಹಾಗೂ ವ್ಯಾಪಾರ ಯಾವುದು ಮುಖ್ಯ?

ಎರಡೂ ಮುಖ್ಯ. ಸೇವಾಮನೋಭಾವಕ್ಕೆ ತಕ್ಕ ಪ್ರತಿಫಲ ಸಿಗದಿದ್ದರೆ ಆ ಮನೋಭಾವ ಕ್ರಮೇಣ ಕಳೆದುಹೋಗುತ್ತದೆ. ಅನಾರೋಗ್ಯಕರ ಸ್ಪರ್ಧೆಯಿಂದಾಗಿ ಸೇವಾ ಮನೋಭಾವಕ್ಕೆ ಇಂದು ಹೊಡೆತ ಬೀಳುತ್ತಿರುವುದು ನಿಜ. ಹಾಗಂತ ಆ ಮನೋಭಾವ ಬಿಟ್ಟು ವ್ಯಾಪಾರವನ್ನೇ ನೆಚ್ಚಿಕೊಳ್ಳುವುದು ತಪ್ಪು. ಸೇವೆ ಹಾಗೂ ವ್ಯಾಪಾರದ ಜೊತೆಗೆ ಗುಣಮಟ್ಟದ ಸೇವೆ ಮುಖ್ಯವಾಗುತ್ತದೆ.

ಮುಂದಿನ ಯೋಜನೆಗಳೇನು?

ಪ್ರಶಾಂತ್ ಹೋಟೆಲ್ಸ್‌ ಅಡಿ ನಾನಾ ಸಂಸ್ಥೆಗಳು ಕಾರ್ಯನಿರ್ವಹಿಸುತ್ತಿವೆ. 1974ರಿಂದ ಈ ಸಂಸ್ಥೆಯನ್ನು ಮುನ್ನಡೆಸುತ್ತಿದ್ದೇವೆ. ರೆಸ್ಟೊರಂಟ್, ರೆಸಾರ್ಟ್, ಸ್ಪಾ, ಸಭೆ–ಸಮಾರಂಭಗಳಿಗೆ ಸಭಾಂಗಣ, ವಾಸ್ತವ್ಯಕ್ಕೆ ಸುಸಜ್ಜಿತ ಕೊಠಡಿಗಳು ನಮ್ಮಲ್ಲಿವೆ. ಗ್ರಾಹಕನ ಅನುಕೂಲಕ್ಕೆ ವಾಹನ ವ್ಯವಸ್ಥೆಯೂ ಇದೆ. ಈ ಎಲ್ಲ ಸೌಲಭ್ಯಗಳನ್ನೂ ವ್ಯವಸ್ಥಿತವಾಗಿ, ಇನ್ನಷ್ಟು ಗ್ರಾಹಕ ಸ್ನೇಹಿಯಾಗಿಸಲು ಪ್ರಯತ್ನಿಸುತ್ತೇವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT